Realtime blog statisticsweb statistics
udupibits.in
Breaking News
ಉಡುಪಿ: ನೌಕರರಿಗೆ ಕಿರುಕುಳ ಆರೋಪ- ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮಹೇಶ್ ಐತಾಳ್ ಅಮಾನತಿಗೆ ಶ್ರೀರಾಮ ದಿವಾಣ ಒತ್ತಾಯ

ಅಂಕೋಲಾದಲ್ಲಿ ರಾಜ್ಯ ಮಟ್ಟದ ‘ಡಾ/ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ’ ಪ್ರದಾನ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆ ಅಂಕೋಲಾದ ಡಾ.ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನ (ರಿ)ವು ಪ್ರತೀ ಎರಡು ವರ್ಷಗಳಿಗೊಮ್ಮೆ ಕೊಡಮಾಡುವ ೨೦೧೮ನೇ ಸಾಲಿನ ಪ್ರತಿಷ್ಠಿತ ‘ಡಾ/ ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ’ಯು ಶ್ರೀಮತಿ ಕಾವ್ಯ ಕಡಮೆ ನಾಗರಕಟ್ಟೆ ಅವರ ‘ಜೀನ್ಸ್ ತೊಟ್ಟ ದೇವರು’ ಕವನ ಸಂಕಲನ ಆಯ್ಕೆಯಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ ೧೧ರಂದು ಅಂಕೋಲಾದ ಪಿ.ಎಂ.ಜ್ಯೂನಿಯರ್ ಕಾಲೇಜಿನ ಗಂಗಾದೇವಿ ತೊರ್ಕೆ ಸಭಾಭವನದಲ್ಲಿ ಜರುಗಿತು.

ಪ್ರಶಸ್ತಿಯನ್ನು ಕಾವ್ಯ ಕಡಮೆ ಪರವಾಗಿ ಅವರ ಹೆತ್ತವರಾದ ಸುನಂದಾ ಕಡಮೆ ಹಾಗೂ ಪ್ರಕಾಶ ಕಡಮೆ ದಂಪತಿಗಳು ಸ್ವೀಕರಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಖ್ಯಾತ ಚಿತ್ರನಟ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಹಿರಿಯ ಸಾಹಿತಿ ಶೂದ್ರ ಶ್ರೀನಿವಾಸ, ಮೈಸೂರು ರಂಗಾಯಣದ ನಿರ್ದೇಶಕ, ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ, ಖ್ಯಾತ ರಂಗ ನಿರ್ದೇಶಕ ಡಾ.ಬಿ.ವಿ.ರಾಜಾರಾಮ ಅವರು ಕಡಮೆ ದಂಪತಿಗಳಿಗೆ ನಗದು ಹತ್ತು ಸಾವಿರ, ಪ್ರಶಸ್ತಿ ಫಲಕ ನೀಡಿ ಗೌರವಿಸಿದರು.

ಪ್ರಶಸ್ತಿಯ ನಿರ್ಣಾಯಕರಲ್ಲೊಬ್ಬರಾದ ಸುಬ್ರಾಯ ಮತ್ತಿಹಳ್ಳಿ ಅವರು ಕೃತಿ ಪರಿಚಯ ಮಾಡಿಕೊಟ್ಟರು. ಪ್ರತಿಷ್ಠಾನದ ಅಧ್ಯಕ್ಷ, ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಅಮ್ಮೆಂಬಳ ಆನಂದ ಅವರು ಡಾ/ದಿನಕರ ದೇಸಾಯಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಡಾ.ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದ ಕಾರ್ಯದರ್ಶಿ ವಿಷ್ಣು ನಾಯಕ ಪ್ರಸ್ತಾವನೆಗೈದರು. ಉಪಾಧ್ಯಕ್ಷ ರಾಮಕೃಷ್ಣ ಗುಂದಿ ಸ್ವಾಗತಿಸಿದರು. ಜಗದೀಶ ನಾಯಕ ಹೊಸ್ಕೇರಿ ವಂದಿಸಿದರು. ಸಹ ಕಾರ್ಯದರ್ಶಿ ಹುಳಗೋಳ ನಾಗಪತಿ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಜೆ.ಪ್ರೇಮಾನಂದ ಸಂದೇಶ ವಾಚಿಸಿದರು. ಕು.ಕ್ಷಮಾ ಅನಂತ ನಾಯಕ ಆಶಯ ಗೀತೆ ಹಾಡಿದರು.

ಸುಮತೀಂದ್ರ ನಾಡಿಗ, ಪ್ರೊ. ಚಂದ್ರಶೇಖರ ಪಾಟೀಲ, ಡಾ.ಎಚ್.ಎಸ್. ಶಿವಪ್ರಕಾಶ್, ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ, ಡಾ. ಜಯಂತ ಕಾಯ್ಕಿಣಿ, ಆನಂದ ಝಂಜರವಾಡ, ಜಿ.ಕೆ.ರವೀಂದ್ರ ಕುಮಾರ, ಚ. ಸರ್ವಮಂಗಳ, ಡಾ. ಎಚ್.ಎಲ್. ಪುಷ್ಟ, ಡಿ.ಬಿ. ರಜಿಯಾ, ಎಂ.ಎಸ್. ಶೇಖರ್, ಡಾ. ಎಚ್.ಎಸ್. ವೆಂಕಟೇಶಮೂರ್ತಿ, ಜರಗನಹಳ್ಳಿ ಶಿವಶಂಕರ, ಆರೀಫ್ ರಾಜಾ, ಜಿ.ಎಸ್. ಅವಧಾನಿ, ಕೆ.ಪಿ. ಮೃತ್ಯುಂಜಯ, ಸುಬ್ಬು ಹೊಲೆಯಾರ, ಶ್ರೀನಿವಾಸ ಉಡುಪ ಹಾಗೂ ಡಾ. ನಾ. ಮೊಗಸಾಲೆ ಇವರುಗಳ ಕವನ ಸಂಕಲನಗಳು `ಡಾ/ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ’ಗೆ ಪಾತ್ರವಾಗಿವೆ.

‘ಮುಖ್ಯಮಂತ್ರಿ’ ನಾಟಕ ಪ್ರದರ್ಶನ

ಡಾ/ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ, ರಾತ್ರಿ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನದಲ್ಲಿ ಮುಖ್ಯಮಂತ್ರಿ ಚಂದ್ರು ಅಭಿನಯದ ದಾಖಲೆಯ ೬೮೫ನೇ ಪ್ರಯೋಗವಾಗಿ ‘ಮುಖ್ಯಮಂತ್ರಿ’ ನಾಟಕವನ್ನು ಪ್ರದರ್ಶಿಸಲಾಯಿತು.
ಡಾ/ಬಿ.ವಿ. ರಾಜಾರಾಮ ನಾಟಕ ನಿರ್ದೇಶಿಸಿದರು.

Leave a Reply

Your email address will not be published. Required fields are marked *