Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.
ಕಾರವಾರ, ಅಂಕೋಲಾದಲ್ಲಿ ನೋಂದಾಣಾಧಿಕಾರಿಗಳ ಎಡವಟ್ಟು: ಋಣಭಾರ ಪತ್ರಕ್ಕಾಗಿ ಜನರ ಅಲೆದಾಟ !
- Updated: November 21, 2018

ಅಂಕೋಲಾ: ಕಾರವಾರದ ಜಿಲ್ಲಾ ನೋಂದಣಾಧಿಕಾರಿಗಳ ಬೇಜವಾಬ್ದಾರಿತನ ಮತ್ತು ಅವರು ಮಾಡಿದ ಎಡವಟ್ಟಿನಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ಋಣಭಾರ ಪತ್ರ (ಎನ್ಕ್ಯುಂಬರೇನ್ಸ್)ದ ಅಗತ್ಯವಿರುವ ಜನರು ಈ ಪ್ರಮಾಣಪತ್ರ ಲಭಿಸದೆ ಪರಿತಪಿಸುವಂತ ಪರಿಸ್ಥಿತಿ ಸೃಷ್ಟಿಯಾಗಿದೆ.
ಅಂಕೋಲಾದಲ್ಲಿರುವ ತಾಲೂಕು ಉಪ ನೋಂದಣಿ ಕಚೇರಿಯಲ್ಲೂ ಇನ್ನು ಮುಂದೆ ಋಣಭಾರ ಪತ್ರವನ್ನು ವಿತರಿಸಲಾಗುವುದು ಎಂದು ಜಿಲ್ಲಾ ನೋಂದಣಾಧಿಕಾರಿಗಳು ಪ್ರಕಟಿಸಿದ್ದರು. ಆದರೆ, ಅಂಕೋಲಾ ತಾಲೂಕು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಬಿಡಿ, ಕಾರವಾರದಲ್ಲಿರುವ ಜಿಲ್ಲಾ ನೋಂದಣಾಧಿಕಾರಿ ಕಚೇರಿಯಲ್ಲೂ ವಿತರನೆಯಾಗುತ್ತಿಲ್ಲ.
ಋಣಭಾರ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ನೂರಕ್ಕೂ ಅಧಿಕ ಜನರು ಇದೀಗ ತೊಂದರೆಗೆ ಸಿಲುಕಿಕೊಂಡಿದ್ದಾರೆ. ಬ್ಯಾಂಕುಗಳಿಂದ ಸಾಲವೇ ಮುಂತಾದ ಅಗತ್ಯ ಕೆಲಸ ಕಾರ್ಯಗಳಿಗೆ ಋಣಭಾರ ಪತ್ರದ ಅಗತ್ಯವಿದ್ದು, ಋಣಭಾರ ಪತ್ರವನ್ನು ಸಂಬಂಧಿಸಿದ ಕಚೇರಿಗಳಿಗೆ ಹಾಜರುಪಡಿಸಲು ಸಾಧ್ಯವಾಗದ ಕಾರಣಕ್ಕೆ ಸಾರ್ವಜನಿಕರ ಅನೇಕ ಅಗತ್ಯ ಕೆಲಸ ಕಾರ್ಯಗಳು ಅರ್ಧದಲ್ಲಿಯೇ ನಿಂತುಹೋಗಿದೆ.
ನೋಂದಣಾಧಿಕಾರಿಗಳ ಕಚೇರಿಗೆ ಪ್ರತಿದಿನ ಎಂಬಂತೆ ಅಲೆದಾಡುತ್ತಿರುವ ಜನರಿಗೆ ಅಧಿಕಾರಿಗಳು ನಾಳೆ ಬನ್ನ, ವಾರ ಬಿಟ್ಟು ಬನ್ನಿ ಎಂಬಿತ್ಯಾದಿಯಾಗಿ ಏನಾದರೊಂದು ಸಬೂಬು ಹೇಳಿ ಸಾಗ ಹಾಕುತ್ತಿದ್ದಾರೆ. ಆದರೆ, ಋಣಭಾರದ ಅಲಭ್ಯತೆಗೆ ಜಿಲ್ಲಾ ನೋಂದಣಾಧಿಕಾರಿಗಳು ಮಾಡಿರುವ ಎಡವಟ್ಟೇ ಕಾರಣವಾಗಿರುವುದರಿಂದ, ಈ ಎಡವಟ್ಟನ್ನು ಹೇಗೆ ಸರಿಪಡಿಸುತ್ತಾರೆ ಎಂಬ ಪ್ರಶ್ನೆ ಈಗ ಸೃಷ್ಟಿಯಾಗಿದೆ.
ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಇದ್ದ ಋಣಭಾರ ಪತ್ರಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಅಂಕೋಲಾದ ಉಪ ನೋಂದಣಾಧಿಕಾರಿಗಳ ಕಚೇರಿಗೆ ವರ್ಗಾಯಿಸುವ ಮೊದಲೇ ಜಿಲ್ಲಾ ನೋಮದಣಾಧಿಕಾರಿಗಳ ಕಚೇರಿಯ ಕಂಪ್ಯೂಟರಿನಲ್ಲಿದ್ದ ದಾಖಲಾತಿಗಳನ್ನು ಡಿಲಿಟ್ ಮಾಡಿದ್ದೇ ಪ್ರಸ್ತುತ ಉದ್ಭವಿಸಿರುವ ಸಮಸ್ಯೆಗೆ ಕಾರಣವೆಂದು ಹೇಳಲಾಗಿದೆ.
ಅಧಿಕಾರಿಗಳ ಎಡವಟ್ಟಿನಿಂದಾಗಿ ನಾಗರಿಕರಿಗೆ ಇದೀಗ ತೊಂದೆಯಾಗಿದ್ದು, ಈಗ ಇದಕ್ಕೆ ಯಾಣೆಯಾದರೂ ಯಾರು, ಸಮಸ್ಯೆ ಪರಿಹಾರಕ್ಕೆ ಇನ್ನೆಷ್ಟು ದಿನ ಬೇಕು ಎಂಬಿತ್ಯಾದಿ ಪ್ರಶ್ನೆಗಳಿಗೆ ಪ್ರಸ್ತುತ ಉತ್ತರ ಇಲ್ಲದಂತಾಗಿದೆ. ಇಲಾಖೆಯ ಉನ್ನತ ಅಧಿಕಾರಿಗಳು ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿದೆ.
ವರದಿ: ಸುಭಾಶ ಬಿ. ನಾಯಕ, ಅಂಕೋಲಾ