Realtime blog statisticsweb statistics
udupibits.in
Breaking News
ಉಡುಪಿ: ನೌಕರರಿಗೆ ಕಿರುಕುಳ ಆರೋಪ- ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮಹೇಶ್ ಐತಾಳ್ ಅಮಾನತಿಗೆ ಶ್ರೀರಾಮ ದಿವಾಣ ಒತ್ತಾಯ

ಮಂಗಳೂರು RCH ಅಧಿಕಾರಿ ಡಾ. ಅಶೋಕ್ ಅಮಾನತು: ಹತ್ತಾರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ !

ಉಡುಪಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರ ಸೂಚನೆಯಂತೆ ಸರಕಾರದ ಅಧೀನ ಕಾರ್ಯದರ್ಶಿ ಯ. ಶಿವಶಂಕರ್ ಅವರು ಕೊನೆಗೂ ನವೆಂಬರ್ 24ರಂದು ಸರಕಾರಿ ಕರ್ತವ್ಯದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಡಾ. ಅಶೋಕ್ ಅವರು    ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರ್.ಸಿ.ಎಚ್ ಅಧಿಕಾರಿಯಾಗಿದ್ದಾರೆ.

ಡಾ. ಅಶೋಕ್ ಅವರು ಇಲಾಖೆಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹತ್ತಾರು ಮಂದಿ ಮಹಿಳಾ ನೌಕರರಿಗೆ ಲೈಂಗಿಕ ಮತ್ತು ಮಾನಸಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಮೇಲಿನ ಆರೋಪಗಳು ತನಿಖೆಯಲ್ಲಿ ಸಾಬೀತಾಗಿದ್ದು ಆರೋಪಿ ಅಧಿಕಾರಿ ವಿರುದ್ಧ ಕ್ರಮ ಜರುಗಿಸುವಂತೆ ಜಿಲ್ಲಾ ಆಂತರಿಕ ದೂರು ನಿವಾರಣಾ ಸಮಿತಿಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಲಾಖೆಯ ಆಯುಕ್ತರಿಗೆ ತನಿಖಾ ವರದಿ ಸಲ್ಲಿಸಿತ್ತು.

ತನಿಖಾ ವರದಿ ಸಲ್ಲಿಸಿ ತಿಂಗಳುಗಳೇ ಕಳೆದರೂ ಆಯುಕ್ತರು ಆರೋಪಿ ಡಾ. ಅಶೋಕ್ ವಿರುದ್ಧ ಕ್ರಮ ಜರುಗಿಸಲು ಮೀನ ಮೇಷ ಎಣಿಸುತ್ತಿದ್ದರು. ಡಾ. ಅಶೋಕ್ ಮೇಲಿನ ದೂರಿನಲ್ಲಿನ ಅಂಶಗಳು ತನಿಖೆಯಲ್ಲಿ ಸಾಬೀತಾಗಿ ತಿಂಗಳುಗಳು ಕಳೆದರೂ ಆಯುಕ್ತರು ಆರೋಪಿ ಡಾ. ಅಶೋಕ್ ವಿರುದ್ಧ ಕ್ರಮ ಜರುಗಿಸದೆ ವಿಳಂಬ ಧೋರಣೆ ತಾಳುತ್ತಿರುವ ಕುರಿತು ನವೆಂಬರ್ 22ರಂದು www.udupibits.in ಶಂಕೆ ವ್ಯಕ್ತ ವ್ಯಕ್ತಪಡಿಸಿ ವರದಿ ಮಾಡಿತ್ತು.

ಡಾ. ಅಶೋಕ್ ಮಂಗಳೂರಿನಲ್ಲಿ ಆರ್. ಸಿ. ಎಚ್. ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವ ಮೊದಲು ಬೆಂಗಳೂರಿನಲ್ಲೂ, ಇದಕ್ಕೂ ಮೊದಲು ಉಡುಪಿಯಲ್ಲೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರ್.ಸಿ.ಎಚ್. (reproductive child health) ವಿಭಾಗದ ದ.ಕ. ಜಿಲ್ಲಾ ಮಟ್ಟದ ಕಾರ್ಯಕ್ರಮ ಅಧಿಕಾರಿಯಾಗಿರುವ ಡಾ. ಅಶೋಕ್ ಅವರು ತಮ್ಮ ಕೈಕೆಳಗೆ ಕರ್ತವ್ಯ ಸಲ್ಲಿಸುತ್ತಿದ್ದ ಮಹಿಳಾ ನೌಕರರಿಗೆ ಲೈಂಗಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದ ಗಂಭೀರ ಪ್ರಕರಣವೊಂದು ಅಗೋಸ್ತ್ ತಿಂಗಳಲ್ಲಿ ಮಹಿಳಾ ನೌಕರರು ಸಾಮೂಹಿಕವಾಗಿ ತಮ್ಮ ಮೇಲಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸುವ ಮೂಲಕ ಬೆಳಕಿಗೆ ಬಂದಿತ್ತು.

ಡಾ. ಅಶೋಕ್ ಅವರು ಜಿಲ್ಲಾ ಮಟ್ಟದ ಅಧಿಕಾರಿಯಾಗಿರುವುದರಿಂದ ಇಲಾಖೆಯ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ನೌಕರರಿಗೆ ಆದೇಶ, ಸಲಹೆ, ಸೂಚನೆ ಕೊಡುವ, ಮಾರ್ಗದರ್ಶನ ಮಾಡುವ ಹೆಸರಿನಲ್ಲಿ ಲೈಂಗಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಕಿರುಕುಳಕ್ಕೆ ಒಳಗಾದ ಮಹಿಳೆಯರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದರು.

ಡಾ.ಅಶೋಕ್ ಅವರು ಕಳೆದ ಕೆಲವು ತಿಂಗಳುಗಳಿಂದ ಈ ರೀತಿಯ ನೀಚ ಕೃತ್ಯವನ್ನು ನಡೆಸುತ್ತಿದ್ದರೆನ್ನಲಾಗಿದೆ. ಮೊದ ಮೊದಲಿಗೆ ನೌಕರರು ಇದನ್ನು ಸಹಿಸಿಕೊಳ್ಳುತ್ತಿದ್ದರು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಯ ವಿರುದ್ಧ ದೂರು ನೀಡಲು ಹಿಂದೇಟು ಹಾಕುತ್ತಿದ್ದರು. ಆದರೆ, ಡಾ.ಅಶೋಕ್ ಅವರು ತಮ್ಮ ಈ ನೀಚ ಕೃತ್ಯವನ್ನು ದಿನದಿಂದ ದಿನಕ್ಕೆ ಹೆಚ್ಚು ಮಾಡಿದಾಗ ನೊಂದ ಮಹಿಳಾ ನೌಕರರು ಪರಸ್ಪರ ವಿಷಯವನ್ನು ಹಂಚಿಕೊಂಡರು ಮತ್ತು ಅಂತಿಮವಾಗಿ ಮೇಲಾಧಿಕಾರಿಗಳಿಗೆ ಈ ಸಂಬಂಧ ದೂರು ನೀಡಲು ನಿರ್ಧರಿಸಿದ್ದರು.

ಸಂತ್ರಸ್ತ ಮಹಿಳಾ ನೌಕರರು ನೀಡಿದ ದೂರಿನ ಆಧಾರದಲ್ಲಿ ಜುಲೈ 31ರಂದು ಮಂಗಳೂರಿನಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು ಆರೋಪಿ ಡಾ.ಅಶೋಕ್ ಹಾಗೂ ಸಂತ್ರಸ್ತ ಮಹಿಳಾ ನೌಕರರ ವಿಚಾರಣೆ ತನಿಖೆ ನಡೆಸಿದ್ದು, ಮಹಿಳಾ ನೌಕರರು ನೀಡಿದ ದೂರಿನಲ್ಲಿನ ವಿಷಯಗಳು ಮೇಲ್ನೋಟಕ್ಕೆ ಖಚಿತವಾದವು ಹಾಗೂ ಬಳಿಕ ಡಿಎಚ್ಓ ಅವರು ಈ ಬಗ್ಗೆ ಜಿಲ್ಲಾ ಆಂತರಿಕ ದೂರು ನಿವಾರಣಾ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿಯವರಿಗೆ ತಮ್ಮ ತನಿಖಾ ವರದಿಯನ್ನು ಸಲ್ಲಿಸಿದ್ದರು.

ಜಿಲ್ಲಾ ಆಂತರಿಕ ದೂರು ನಿವಾರಣಾ ಸಮಿತಿಯು ಪ್ರತ್ಯೇಕವಾಗಿ ತನಿಖೆ ನಡೆಸಿದ್ದು, ಇಲ್ಲಿಯೂ ಆರೋಪಿ ಅಧಿಕಾರಿ ಡಾ.ಅಶೋಕ್ ಮೇಲಿನ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ, ಈ ಸಂಬಂಧದ ತನಿಖಾ ವರದಿಯನ್ನು ಆರೋಗ್ಯ ಇಲಾಖೆಯ ಆಯುಕ್ತರಿಗೆ ಸಲ್ಲಿಸಿದ್ದರು. ಹೀಗೆ ತನಿಖಾ ವರದಿ ಸಲ್ಲಿಸಿ ಈಗಾಗಲೇ ತಿಂಗಳು ಕಳೆದಿದೆಯಾದರೂ, ಆಯುಕ್ತರು ತನಿಖಾ ವರದಿಯ ಆಧಾರದಲ್ಲಿ ಆರೋಪಿ ಅಧಿಕಾರಿ ಡಾ.ಅಶೋಕ್ ವಿರುದ್ಧ ಶಿಸ್ತು ಮತ್ತು ಕಾನೂನು ಕ್ರಮ ಜರುಗಿಸದೆ ಅವರನ್ನು ರಕ್ಷಣೆ ಮಾಡಿಕೊಂಡು ಬಂದಿದ್ದರು.

Leave a Reply

Your email address will not be published. Required fields are marked *