Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಗಾಂಧೀಜಿ ಧ್ಯಾನದಲ್ಲಿ ಕನ್ನಯ್ಯ !

* ಶ್ರೀರಾಮ ದಿವಾಣ

# ಗಾಂಧೀಜಿ ಯಾರಿಗೆ ಬೇಡ ಹೇಳಿ ? ಬೇಕು, ಎಲ್ಲರಿಗೂ ಬೇಕು ! ವಿರೋಧ ಪಕ್ಷದಲ್ಲಿದ್ದಾಗ ಗಾಂಧೀಜಿಯವರನ್ನು ವಿರೋಧಿಸುತ್ತಿದ್ದವರೂ ಸಹ ಆಡಳಿತಕ್ಕೆ ಬಂದಾಗ ಗಾಂಧೀಜಿಯನ್ನು ಅಪ್ಪಿಕೊಳ್ಳುತ್ತಾರೆ, ಒಪ್ಪಿಕೊಳ್ಳುತ್ತಾರೆ, ಫೋಟೋಗಾಗಿಯಾದರೂ ಗಾಂಧೀಜಿಯಂತೆ ವೇಷ ಹಾಕುತ್ತಾರೆ.

ಕನಿಷ್ಟ ವರ್ಷಕ್ಕೆರಡು ಬಾರಿಯಾದರೂ ಗಾಂಧಿ ಜಯಂತಿ ಮತ್ತು ಗಾಂಧಿ ಪುಣ್ಯ ತಿಥಿಯಂದು ಗಾಂಧೀಜಿಯವರ ಬಗ್ಗೆ ಉದ್ದುದ್ದ ಭಾಷಣ ಮಾಡದ ರಾಜಕಾರಣಿಗಳು ಇರಲಾರರು. ತಾವು ಸ್ವತಹಾ ಗಾಂಧೀಜಿಯವರು ನಡೆದಂತೆ ನಡೆಯದಿದ್ದರೂ ಗಾಂಧೀಜಿ ನಡೆದಂತೆ ನಡೆಯೋಣವೆಂದೋ, ಗಾಂಧೀಜಿ ನಮಗೆಲ್ಲಾ ಆದರ್ಶವೆಂದೋ, ಮಾದರಿ ಎಂದೋ ಕೊರೆಯುವುದನ್ನು ಕೇಳದವರು ಇಲ್ಲವೇ ಇಲ್ಲ.

ಗಾಂಧೀಜಿಯವರ ಬಗ್ಗೆ ಕೊರೆಯುವವರಿಗಿಂತ, ಗಾಂಧೀಜಿಯವರ ಬಗ್ಗೆ ಏನೇನೂ ಕೊರೆಯದೆಯೇ ಗಾಂಧೀಜಿಯವರನ್ನು ತನ್ನ ಮೈ ಮನಗಳಲ್ಲಿ ಆವಾಹಿಸಿಕೊಂಡವರು ಒಬ್ಬರಿದ್ದಾರೆ ಎಂದರೆ ಆಶ್ಚರ್ಯವಾಗಬಹುದು. ಹೌದು, ಎಸ್. ಕನ್ನಯ್ಯ ಇಂಥವರಲ್ಲಿ ಒಬ್ಬರು. ಇವರು ಗಾಂಧೀಜಿ ವೇಷಧಾರಿ.

ಎಸ್. ಕನ್ನಯ್ಯ ಅವರು ಆಂಧ್ರಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯ ಜಿ.ಕೋಟೂರಿನವರು. ಕಳೆದ ಮೂವತ್ತು ವರ್ಷಗಳಿಂದ ಹೀಗೆ ಗಾಂಧೀಜಿ ವೇಷಧಾರಿಯಾಗಿ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರದ ಆಯ್ದ ದೇವಸ್ಥಾನಗಳ ಜಾತ್ರೆಗಳಲ್ಲಿ 12 ಗಂಟೆಯಿಂದ 24 ಗಂಟೆಯವರೆಗೂ ನಿಂತುಕೊಂಡು ಜನರ ಆಕರ್ಷಣೆ ಕೇಂದ್ರ ಬಿಂದುವಾಗುವುದು ಇವರ ಉದ್ಯೋಗ.

ಕಣ್ಣಿಗೆ ಕನ್ನಡಕ, ಸೊಂಟದಲ್ಲೊಂದು ಗಡಿಯಾರ, ಕುತ್ತಿಗೆಗೆ ಹಾರ, ಕಚ್ಚೆ, ಬಲಕೈಲಿ ಊರುಗೋಲು, ಎಡಕೈಲಿ ಫೈಲೊಂದನ್ನು ಹಿಡಿದುಕೊಂಡು ಏಕದೃಷ್ಟಿಯೊಂದಿಗೆ ಒಂದು ಭಂಗಿಯಲ್ಲಿ ನಿಂತರೆಂದರೆ ಅದು ತಪಸ್ಸೇ ಸರಿ. ಧ್ಯಾನವೂ ಹೌದು. ಬೆಳಗ್ಗೆ ಗಂಟೆ ಏಳಕ್ಕೆ ಸಿಲ್ವರ್ ಪೈಂಟ್ ದೇಹವಿಡೀ ಬಳಿದುಕೊಂಡು ನಿಂತರೆ ಸಂಜೆ ಆರರ ವರೆಗೂ ನಿಲ್ಲಲು ಶಕ್ತರು ಎಸ್. ಕನ್ನಯ್ಯ.

ಒಂದು ಹಗಲು ಮತ್ತು ಒಂದು ರಾತ್ರಿ ಹೀಗೆ ಗಾಂಧೀಜಿ ವೇಷಧಾರಿಯಾಗಿ ನಿಂತವರು ಇವರು. ಈಗ ಹೆಚ್ಚಾಗಿ ಹಗಲು ಮಾತ್ರ ವೇಷಧಾರಿಯಾಗಿ ನಿಂತು ರಾತ್ರಿ ಸ್ನಾನ, ಊಟ ಮಾಡಿ ಮಲಗಿ ವಿಶ್ರಾಂತಿ ಪಡೆಯುತ್ತಾರೆ. ಕಾರಣ, ಎರಡು. ಒಂದನೆಯದು ರಾತ್ರಿ ಹೆಚ್ಚು ಜನರಿರುವುದಿಲ್ಲ, ಎರಡನೆಯದು ಈಗ ಇವರ ಪ್ರಾಯ 55 ಆಗಿರುವುದು. ಪ್ರತೀ ಸಲ ಹೀಗೆ ವೇಷ ಹಾಕಿದ ಬಳಿಕ ರಕ್ತ ಸಂಚಾರವನ್ನು ಮತ್ತೆ ಸುಸ್ಥಿತಿಗೆ ತರಲು ವೈದ್ಯರಲ್ಲಿಗೆ ಹೋಗಿ ಔಷಧ ಪಡೆದುಕೊಳ್ಳುವುದು ಅನಿವಾರ್ಯವಾಗಿದೆ. ಕಾರಣ, ಹಗಲಿಡೀ ಹೀಗೆ ನಿಲ್ಲುವುದರ ಪರಿಣಾಮವಾಗಿ ಕೈ ಕಾಲುಗಳಲ್ಲಿನ ರಕ್ತ ಸಂಚಾರದಲ್ಲಿ ಸಮಸ್ಯೆಯಾಗಿರುತ್ತದೆ.

ಚಿಕ್ಕಂದಿನಲ್ಲಿ ಬಡತನವಿತ್ತು. ಆಗ ಬದುಕಲೊಂದು ಗಾಂಧೀಜಿ ವೇಷದ ದಾರಿ ತೋರಿಸಿದವರು ಮಾವ, ಗುರು ಮುರುಗಯ್ಯ. ”ಇದು ಮೋಸವೂ ಅಲ್ಲ, ಕಳ್ಳತನವೂ ಅಲ್ಲ. ದೇವರಲ್ಲಿ ಪ್ರಾರ್ಥನೆ ಮಾಡು, ಗಾಂಧೀಜಿಯವರನ್ನು ಎಣಿಸುತ್ತಾ ಇರು, ಬೇರೇನನ್ನೂ ನೆನಪು ಮಾಡಿಕೊಳ್ಳದಿರು” ಎಂಬಿತ್ಯಾದಿಯಾಗಿ ನೀಡಿದ ಉಪದೇಶವನ್ನು ಚಾಚೂ ತಪ್ಪದೆ ನಿರಂತರವಾಗಿ ಶಿಸ್ತಿನಿಂತ, ಪ್ರಾಮಾಣಿಕತೆಯಿಂದ ಪಾಲಿಸಿಕೊಂಡು ಬಂದಿರುವ ಎಸ್. ಕನ್ನಯ್ಯ ಗಾಂಧಿಜಿಯವರ ವೇಷಧರಿಸಿ ಅವರನ್ನು ಮೈ ಮನಗಳಲ್ಲಿ ಆವಾಹಿಸಿಕೊಂಡಾಗ ಚಪ್ಪಲಿಯನ್ನೂ ಧರಿಸದೆ ಹಾಗೆಯೇ ನಿಲ್ಲುತ್ತಾರೆ.

ನನ್ನಲ್ಲಿ ಗಾಂಧೀಜಿಯವರನ್ನು ಕಂಡು, ಅವರ ಮೇಲಿನ ಪ್ರೀತಿ, ಅಭಿಮಾನ, ಗೌರವದಿಂದ ಕಾಲಿಗೆರಗುವವರೂ ಇದ್ದಾರೆ. ಆಗ ತಾನು ಚಪ್ಪಲಿ ಧರಿಸಿದ್ದರೆ ಚೆನ್ನಾಗಿರುವುದಿಲ್ಲ, ಹಾಗಾಗಿ ಚಪ್ಪಲಿ ಧರಿಸದೆ ಬರಿಗಾಲಲ್ಲಿ ನಿಂತುಕೊಳ್ಳುತ್ತೇನೆ ಎನ್ನುತ್ತಾರೆ ಮುಗ್ದತೆಯ ಸಾಕಾರಮೂರ್ತಿ ಎಸ್.ಕನ್ನಯ್ಯ.

ಆದಿಚುಂಚನಗಿರಿ ಸ್ವಾಮೀಜಿ ಹಾಗೂ ಸುತ್ತೂರು ಸ್ವಾಮೀಜಿಯವರು ಇವರನ್ನು ಸನ್ಮಾನಿಸಿದ್ದಾರೆ. ಪತ್ನಿ ಹಾಗೂ ಮೂವರು ಮಕ್ಕಳಿರುವ ಎಸ್. ಕನ್ನಯ್ಯರ ಗಾಂಧೀಜಿ ವೇಷ ಮತ್ತು ವೇಷಧರಿಸಿ ಒಂದು ನಿರ್ಧಿಷ್ಟ ಭಂಗಿಯಲ್ಲಿ ಗಂಟೆಗಟ್ಟಲೆ ಸಮಯ ನಿಲ್ಲುವ ಅವರ ಸಾಧನೆ ನಿಜಕ್ಕೂ ಯಾವ ಧ್ಯಾನಕ್ಕೂ ಕಡಿಮೆಯದಲ್ಲ. ತಪಸ್ಸು ಅಲ್ಲದೆ ಹೋದರೆ ಹೀಗೆ ನಿಲ್ಲಲು ಸಾಧ್ಯವೇ ಇಲ್ಲ.

ಸ್ವಾಮೀಜಿಗಳೂ ಸಹ ಇವರಿಂದ ಕಲಿಯಬೇಕು. ಕೇವಲ ಹತ್ತು ನಿಮಿಷ ಕೈ ಕಾಲು ಅಲ್ಲಾಡಿಸದೆ, ಕಣ್ಣು ಒರೆಸದೆ, ಕಿವಿ ತುರಿಸದೆ, ಅತ್ತ ಇತ್ತ ನೋಡದೆ ಶ್ಲೋಕವನ್ನೋ, ಮಂತ್ರವನ್ನೋ ಹೇಳಲೂ ಸಾಧ್ಯವಿಲ್ಲದ ಅಧ್ಯಾತ್ಮಿಕ ಹಂತಕ್ಕೆ ಬಂದು ತಲುಪಿರುವ ಸ್ವಾಮೀಜಿಗಳು, ಎಸ್. ಕನ್ನಯ್ಯರನ್ನು ನೋಡಿಯಾದರೂ ಧ್ಯಾನವೆಂದರೆ ಏನು, ತಪಸ್ಸೆಂದರೆ ಹೇಗೆ ಎಂದು ಕಲಿತುಕೊಳ್ಳಲು ಇಲ್ಲಿ ಅವಕಾಶವಿದೆ.

ಎಸ್. ಕನ್ನಯ್ಯ ನಿಜಕ್ಕೂ ಸರಕಾರದ ಪ್ರಶಸ್ತಿಗೆ ಪಾತ್ರರಾಗಬೇಕಾದವರು. ಸಂಘ ಸಂಸ್ಥೆಗಳ ಸನ್ಮಾನಕ್ಕೆ ಅರ್ಹರಾದವರು. ಆದರೆ, ಯಾಕೋ, ಏನೋ ಇದವರನ್ನು ಗುರುತಿಸಿದ್ದು ಕಡಿಮೆಯೇ. ವರ್ಷಪೂರ್ತಿ ಅಲ್ಲಲ್ಲಿ ಜಾತ್ರೆಗಳಲ್ಲಿ ಸಾವಿರಾರು, ಲಕ್ಷಾಂತರ ಜನರಿಗೆ ಗಾಂಧೀಜಿಯವರನ್ನು ನೆನಪು ಮಾಡಿಸುತ್ತಿರುವ ಎಸ್. ಕನ್ನಯ್ಯರನ್ನು ಅಭಿನಂದಿಸೋಣ.

ಗಾಂಧೀಜಿ ವೇಷಧಾರಿ ಕನ್ನಯ್ಯರೊಂದಿಗೆ ಶ್ರೀರಾಮ ದಿವಾಣ.

Leave a Reply

Your email address will not be published. Required fields are marked *