Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಧೀರ ಸ್ವಾತಂತ್ರ್ಯ ಹೋರಾಟಗಾರ, ಅವಧೂತ ನಿತ್ಯಾನಂದರ ಶಿಷ್ಯ, ಪಂಡಿತ ವೈದ್ಯ ಎಸ್.ಕೆ. ಸುವರ್ಣರು

# ಲೋಕದ ಜನರಲ್ಲಿ ಮೂರು ಬಗೆ. ಕೆಲವರು ಹೇಗೋ ಜೀವಿಸಿ ಕೊನೆಗೆ ಸಾಯುವವರು. ಇನ್ನು ಕೆಲವರು ತಾನು ಮಾತ್ರ ಲಾಭ ಪಡೆದು ದೊಡ್ಡವರಾಗುವರು. ಮತ್ತೆ ಕೆಲವರು ನಿರ್ದಿಷ್ಟ ಗುರಿ ಹಿಡಿದು ಸಾಧನೆ ಮಾಡಿ ತಾನೂ ಏಳಿಗೆ ಹೊಂದಿ ತನ್ನ ಸುತ್ತಲ ಸಮಾಜವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವವರು. ಇಂತಹ ವಿಶಿಷ್ಟರಲ್ಲಿ ಒಬ್ಬರು ಬೆಳ್ಳೆ ಪಂಡಿತ್ ಎಸ್.ಕೆ. ಸುವರ್ಣರು. ಅವರ ಜೀವನ ಸಾಧನೆಯೊಂದು ರೋಚಕ ಯಶೋಗಾಥೆ.

ತೀರಾ ಈಚಿನ ದಶಕದವರೆಗೂ ದ್ವೀಪ ಸದೃಶ ಹಳ್ಳಿಯಾಗಿದ್ದ ಬೆಳ್ಳೆ ಈಗೇನೋ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ರಾಜಕೀಯವಾಗಿ ಬಹಳಷ್ಟು ಮುಂದುವರಿಯುತ್ತಿದೆ. ಆದರೆ ಕಳೆದ ಶತಮಾನದ ಸ್ಥಿತಿಯನ್ನು ನೆನೆದುಕೊಂಡರೆ ? ಆ ಕಾಲದಲ್ಲಿ ಬೆಳ್ಳೆ ನಿಟ್ಟೂಲ್ ಕೋಟಿ ಪೂಜಾರಿಯ ಮಗ ಶೀನನೆಂಬ ಹುಡುಗ. ಹಡಗು ಹತ್ತಿ ಮುಂಬಯಿ ಸೇರಿ ರಾತ್ರಿ ಶಾಲೆಯಲ್ಲಿ ಕಲಿತು ಗಾಂಧೀಜಿಯವರ ನೇತೃತ್ವದ ರಾಷ್ಟ್ರ ಸ್ವಾತಂತ್ರ್ಯ ಚಳುವಳಿ, ಕ್ವಿಟ್ ಇಂಡಿಯಾ ಚಳುವಳಿಗಳಲ್ಲಿ ಭಾಗವಹಿಸಿ, ಕೃಷ್ಣ ಮೆನನ್ನರ ಆಪ್ತ ಸಹಾಯಕರಾಗಿದ್ದು, ಮುಂದೆ ಭೂಗತನಾಗಿ, ಸ್ವಾತಂತ್ರ್ಯಾನಂತರ ಸನ್ಯಾಸಿಯಾಗಿ ವಜ್ರೇಶ್ವರಿಯ ನಿತ್ಯಾನಂದರು, ಕಲ್ಕತ್ತಾದ ಗಂಗಾಪ್ರಸಾದರ ಶಿಷ್ಯತ್ವಹೊಂದಿ, ಧಾರ್ಮಿಕ ರಂಗದ ಪಂಡಿತ ಗುರುವಾಗಿ, ವೈದ್ಯನಾಗಿ, ಮುಂದೆ ಗುರು ನಿರ್ದೇಶನದಂತೆ ಸಂಸಾರಿಯಾಗಿ, ಉದ್ಯಮಿಯೂ ಆಗಿ, ’ಪಂಡಿತ್ ಎಸ್.ಕೆ. ಸುವರ್ಣ’ ಎನ್ನುವ ಮಹಾನ್ ಕರ್ತತ್ವಶಾಲಿ ಸಮಾಜ ಸುಧಾರಕರಾಗಿ, ಮುಂಬಯಿಯಲ್ಲೂ ಬೆಳ್ಳೆಯಲ್ಲೂ ಜನಹಿತ ಕಾರ್ಯ, ಅಭಿವೃದ್ಧಿಗಳ ಸ್ಫೂರ್ತಿ ಚೇತನವಾದುದು, ಮುಖ್ಯವಾಗಿ ಹಿಂದುಳಿದ ಬಡ ಸಮುದಾಯಗಳ ಪ್ರಗತಿಗೆ ಕಾರಣ ಪುರುಷರೆನಿಸಿದ್ದೊಂದು ಇತಿಹಾಸದ ಪುಟ.

ಸುವರ್ಣರು ಜನಿಸಿದ್ದು ೧೯೧೭ರ ಸೆಪ್ಟೆಂಬರ್ ೨ರಂದು. ತಂದೆ ನಿಟ್ಟಿಲ್(ನಿಟ್ಟೂಲ್) ಕೋಟಿ ಪೂಜಾರಿ. ಧೀಮಂತ ಕ್ಷಾತ್ರ ವ್ಯಕ್ತಿತ್ವದ ಕೃಷಿಕರು. ತಾಯಿ ರಂಗಕ್ಕೆ (ರುಕ್ಕು) ಪೂಜಾರ್ತಿ ನಾಟಿವೈದ್ಯೆ. ಪಿತ್ಥ-ಕಾಮಾಲೆ, ಸೋಂಕು ಇತ್ಯಾದಿಗಳಿಗೆ ಸಿದ್ಧೌಷಧಿ ತಿಳಿದವರು. ಪ್ರಸೂತಿ ತಜ್ಞೆಯಾಗಿ ಊರಿಗೆಲ್ಲ ಬೇಕಾದವರು. ಈ ದಂಪತಿಗೆ ಕೂಸು, ಅಚ್ಚು ಇಬ್ಬರು ಹೆಣ್ಣು ಮಕ್ಕಳು, ಮುದ್ದು, ಶೀನ, ಗೋಪ, ಸಂಜೀವ ನಾಲ್ವರು ಗಂಡುಮಕ್ಕಳು. ಬಾಲಕ ಶೀನನಿಗೆ ಮೂಡುಬೆಳ್ಳೆಯ ಶಾಲೆಯಲ್ಲಿ ಐದನೆಯ ತರಗತಿವರೆಗೆ ಶಿಕ್ಷಣದ ವೇಳೆ ಪರಸ, ಲೂವಿಸ್ ಮುಂತಾದವರು ಓರಗೆಯ ಗೆಳೆಯರು. ಬಾಲ್ಯದಲ್ಲಿ ಮಹಾತುಂಟನಾಗಿದ್ದು ಹನ್ನೊಂದನೆಯ ವಯಸ್ಸಿಗೆ ಮುಂಬಯಿ ಸೇರಿದ ಶೀನ, ಹೊಟೇಲಿನಲ್ಲಿ ಕೆಲಸ ಮಾಡಿಕೊಂಡು ರಾತ್ರಿ ಶಾಲೆಯಲ್ಲಿ ಮೆಟ್ರಿಕ್ ವರೆಗೆ ಶಿಕ್ಷಣ ಪಡೆದ. ಜತೆಗೆ ವ್ಯಾಯಾಮ ಶಾಲೆಗೆ ಸೇರಿ ಅಂಗಸಾಧನೆ, ಹಲವಾರು ಭಜನಾ ಸಂಘಗಳೊಂದಿಗೆ ಸಂಪರ್ಕ, ವಜ್ರೇಶ್ವರಿಯ ಶ್ರೀಗುರು ನಿತ್ಯಾನಂದರಿಂದ ಪ್ರಭಾವಿತರಾದುದೂ ಆಗಲೇ. ಅದು ೧೯೩೫-೪೦ರ ಕಾಲ ಗಾಂಧೀಜಿ ನೇತೃತ್ವದ ಸ್ವಾತಂತ್ರ್ಯ ಸತ್ಯಾಗ್ರಹ ಮುಂಬಯಿಯಲ್ಲೂ ತುರೀಯಾವಸ್ಥೆ ತಲಪಿತ್ತು. ಹದಿಹರೆಯದ ಶೀನ ರಾಷ್ಟ್ರೀಯತೆಯತ್ತ ಆಕರ್ಷಿತನಾಗಿ ಚಳುವಳಿಯಲ್ಲಿ ಸೇರಿಕೊಂಡ.

ಭೂಗತ ಚಟುವಟಿಕೆಗಳಲ್ಲಿ ಸಕ್ರಿಯನಾದ. ಖಾದಿ ಧಾರಣೆ ಮಾಡಿದ. ಪರಗಣದ ಕ್ರಿಯಾಶೀಲ ನೇತಾರನಾಗಿ ರೂಪುಗೊಂಡ. ಗಾಂಧೀಜಿಯವರು ಮಗನಿಗೂ ಪ್ರವೇಶವಿಲ್ಲದ ತನ್ನ ಆಪ್ತವಲಯದೊಳಗೆ ಈ ಬಿಸಿರಕ್ತದ ತರುಣನನ್ನು ಸೇರಿಸಿಕೊಂಡರಂತೆ. ೧೯೩೮ರ ವೇಳೆಗೆ ಬ್ರಿಟಿಷರ ಉಗ್ರದೃಷ್ಟಿ ಇವರತ್ತ ಹೊರಳಿದಾಗ ಶೀನ ಸುವರ್ಣರು ಸೆರೆಸಿಕ್ಕದೆ ಮುಂಬಯಿಯಿಂದ ಯಾವುದೋ ಮಾಯದಲ್ಲೆಂಬಂತೆ ಪಲಾಯನ ಮಾಡಿ ಸೇರಿದ್ದು ಕಲ್ಕತ್ತಗೆ. ಅಲ್ಲಿನ ತಪಸ್ವಿ ಗಂಗಾಪ್ರಸಾದ್ ಮುಖರ್ಜಿ ಎಂಬವರ ಸಂಪರ್ಕಕ್ಕೆ ಬಂದು ಅವರ ಶಿಷ್ಯರಾದರು. ದೀಕ್ಷೆ ಸ್ವೀಕರಿಸಿ ಸನ್ಯಾಸಿಯಾಗಿ ಧ್ಯಾನ, ತಪಶ್ಚರ್ಯದಲ್ಲಿ ತೊಡಗಿದರು. ಯೋಗ, ತಂತ್ರ ವಿದ್ಯೆಗಳನ್ನೂ ಅವರಿಂದ ಗಳಿಸಿಕೊಂಡರು. ಅದರ ಬಲದಿಂದ ಮುಂದೆ ಮಾಟ, ಕೃತ್ತಿಮೆದೋಷ ನಿವಾರಣೆಗೂ ಹೆಸರಾದರು. ಗುರುಗಳು ಸಮಾಧಿ ಹೊಂದಿದರು.

ಮುಂದೇನು ಎನ್ನುವ ಸಂಧಿಗ್ಧತೆಯಲ್ಲಿ ಕಲ್ಕತ್ತೆಯಿಂದ ಮುಂಬಯಿಗೆ ಹಿಂದಿರುಗಿದ ಈ ಸನ್ಯಾಸಿ ಗಣೇಶಪುರಿ ನಿತ್ಯಾನಂದ ಸ್ವಾಮಿಗಳ ಬಳಿ ತೆರಳಿದರು. ಅದೇ ವೇಳೆ ಊರಲ್ಲಿ ಜಮೀನು ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅಣ್ಣನ ಅಕಾಲಿಕ ನಿಧನ ವಾರ್ತೆ ತಲಪಿತು. ಸದ್ಗುರು ಆದೇಶಿಸಿದರು, ’ಸನ್ಯಾಸ ನಿನ್ನ ಕರ್ತವ್ಯ ಅಲ್ಲ, ಕಾವಿಶಾಟಿ ಕಳಚು, ಜಟೆ ಬಿಚ್ಚು, ಊರಲ್ಲಿ ತಂದೆತಾಯಿ ಇದ್ದಾರೆ. ಅಲ್ಲಿಗೆ ಹೋಗು, ಸೇವೆ ಮಾಡು, ಸಂಸಾರಿಯಾಗು… ನಡೆ’. ಅದೇ ಸರಿಯೆನಿಸಿ ಊರಿಗೆ-ಬೆಳ್ಳೆ ನಿಟ್ಟೂಲಿಗೆ ಹಿಂತಿರುಗಿದರು. ೧೯೪೧ರ ಸುಮಾರಿಗೆ ಮದುವೆಯಾಯಿತು. ಕಾರ್ಕಳ ಕಲಂಬಾಡಿಯ ಕರ್ಕೇರ ಮನೆತನದ ಹೆಣ್ಣು ಮನೆಯೊಡತಿಯಾಗಿ ಐವರು ಮಕ್ಕಳನ್ನು ಹೆತ್ತು ತೀರಿಕೊಂಡಾಗ ಆಕೆಯ ತಂಗಿ (ಅಂಬ) ಶಾರದೆಯನ್ನು ಮದುವೆಯಾದರು. ಅವರಿಗೂ ಐವರು ಮಕ್ಕಳು. ಹೀಗೆ ಹತ್ತು ಮಂದಿ ಮಕ್ಕಳ ತುಂಬು ಸಂಸಾರ. ಸುವರ್ಣರ ಈ ಎಲ್ಲ ಘಟನಾವಳಿಗಳ ನಡುವೆ ತಾಯಿಯಿಂದ ಬಳುವಳಿಯಾಗಿ ಬಂದ ಸಿದ್ಧೌಷಧಿ ಮಾಹಿತಿ ಇವರಿಗೆ ಕರಗತವಾಯಿತು.

೧೯೩೮ರಲ್ಲೇ ಮೂಡುಬೆಳ್ಳೆಯಲ್ಲಿ ಅವರ ’ಮದ್ದಿನಂಗಡಿ’ ಆರಂಭವಾಗಿತ್ತು. ಮುಂಬಯಿ ಮತ್ತು ಊರಿನ ನಡುವೆ ಓಡಾಟ ನಡೆಯಿತು. ಮುಂದೆ ಭಾರತೀಯ ವೈದ್ಯ ಪದ್ಧತಿಯನ್ನು ಕಲಿತು ’ರಿಜಿಸ್ಟರ್ಡ್ ಮೆಡಿಕಲ್ ಪ್ರಾಕ್ಟೀಶನರ್’ ಆದರು. ತಂದೆಯ ಕಾಲಾನಂತರ ಮುಂಬಯಿಯ ರಾಜಕೀಯ ಚಟುವಟಿಕೆ ಮತ್ತೆ ಕೈಬೀಸಿ ಕರೆದು ಪುನಃ ಮುಂಬಯಿ ಸೇರಿದರು. ಅಂದಿನ ಪ್ರಮುಖ ರಾಜಕೀಯ ಮುಖಂಡ ಎ. ಕೆ. ಕೃಷ್ಣಮೆನನ್ನರಿಗೆ ಹಲವಾರು ವರ್ಷಕಾಲ ಆಪ್ತಸಹಾಯಕರಾಗಿದ್ದ ಹಿರಿಮೆ ಪಂಡಿತ್ ಸುವರ್ಣರದ್ದಾಗಿತ್ತು. ಸ್ಥಳೀಯ ಕಾಂಗ್ರೆಸ್ ಕಮಿಟಿಯ ಕಾರ್ಯದರ್ಶಿಯಾಗಿಯೂ ತನ್ನ ಕೌಶಲ ಮೆರೆದರು. ಅವರು ಬಯಸಿದ್ದರೆ ಸ್ವತಂತ್ರ ಭಾರತದ ಸರಕಾರದಲ್ಲಿ ಅತ್ಯುನ್ನತ ಅವಕಾಶಗಳನ್ನು ಪಡೆಯಬಹುದಿತ್ತು. ಆದರೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದುಡಿದು ಅವಕಾಶಗಳತ್ತ ಕೈಚಾಚುವುದು ಸಣ್ಣತನ ಎಂದು ಅವರಿಗನಿಸಿತು.

ಮುಂದೆ ಸಕ್ರಿಯ ರಾಜಕಾರಣದಿಂದ ಸಂಪೂರ್ಣ ವಿಮುಖರಾದರೂ ಕಟ್ಟಾ ಕಾಂಗ್ರೆಸಿಗರಾಗಿಯೇ ಕೊನೆತನಕ ಉಳಿದರು. ಪಂಡಿತ್ ಸುವರ್ಣರು ವಾಸವಿದ್ದ ಭಾಂಡುಪ್‌ನ ’ಶಾಂತಿಚಾಲ್’ ಜನರ ಮನೆ ಮಾತಾಗಿತ್ತು. ನಿತ್ಯವೂ ಪ್ರವಾಸಿ ಕೇಂದ್ರದಂತೆ, ಚಿಕಿತ್ಸಾ ಕೇಂದ್ರದಂತೆ ಸಂದರ್ಶಕರಿಂದ ತುಂಬಿಕೊಳ್ಳುತ್ತಿದ್ದ ಅವರ ಕೊಠಡಿಯ ನೆರಳಲ್ಲಿ ಹಲವು ವ್ಯಕ್ತಿತ್ವಗಳು ವಿಕಸನ ಹೊಂದಿದವು. ವಾರಕ್ಕೆರಡು ದಿನ ಬೈಠಕ್‌ನ ಸಲಹೆ ಕೇಳಲು, ಮನೋದೈಹಿಕ ಚಿಕಿತ್ಸೆ ಹೊಂದಲು, ಮಾರ್ಗದರ್ಶನ ಪಡೆಯಲು ಹೀಗೆ ಸಂದರ್ಶಿಸುವ ಸಮಾಜದ ವಿಭಿನ್ನ ವರ್ಗಗಳ ನೂರಾರು ಜನ ಪಂಡಿತರನ್ನು ತಮ್ಮ ’ಗುರೂಜಿ’ ಎಂದು ಪರಿಭಾವಿಸಿಕೊಂಡರು. ಹಲವಾರು ಮಂದಿ ಶಿಷ್ಯರು ಬೃಹತ್ ಉದ್ಯಮಪತಿಗಳಾಗಿ ಬೆಳೆದರು. ಯಾವುದೇ ಸಾಧನೆಗೂ ಆರ್ಥಿಕ ಪ್ರಗತಿ ಅವಶ್ಯ ಎಂಬುದು ಅವರ ವಾಸ್ತವಿಕ ನಿಲುವು. ಸ್ವತಃ ಹಲವು ಹೋಟೆಲುಗಳನ್ನು ಪಂಡಿತರು ಕೆಲಕಾಲ ನಡೆಯಿಸಿದ ವ್ಯವಹಾರಕುಶಲಿ. ಸಮಾಜದ ಅಂತರಂಗ ವಿಕಾಸ ಹೊಂದಬೇಕು ಎಂದು ಹಲವು ಹಿತೈಷಿಗಳ ಬೆಂಬಲದಿಂದ ಐವತ್ತರ ದಶಕದಲ್ಲಿ ಭಾಂಡುಪ್‌ನಲ್ಲಿ ’ಶ್ರೀ ನಿತ್ಯಾನಂದ ಆಶ್ರಮ’ ಸ್ಥಾಪಿಸಿದರು.

ಅದೇ ಆಶ್ರಮ ಇಂದು ಮುಂಬೈಯ ಖ್ಯಾತ ಮಂದಿರಗಳಲ್ಲಿ ಒಂದಾದ; ಸ್ವಾಮಿ ನಿತ್ಯಾನಂದ ಮಂದಿರ, ಭಾಂಡುಪ್. ಮುಂದೆ ಹುಟ್ಟೂರಿನಲ್ಲಿ ಕಟ್ಟಿಂಗೇರಿ ಗ್ರಾಮದ ಮೂಡುಬೆಳ್ಳೆ ಕಪ್ಪಂದಕರಿಯದಲ್ಲಿ ಮನುಷ್ಯರು ಹಾದುಹೋಗಲು ಅಂಜುತ್ತಿದ್ದ ’ಎರ್ಮಲ್ಕೆ’ ಎಂಬ ಸ್ಮಶಾನಸದೃಶ ಬೆಂಗಾಡನ್ನು ಖರೀದಿಸಿ ಮನೆ ಮಾಡಿ, ಆ ಬಂಜರು ಜಮೀನನ್ನು ಕೃಷಿಯೋಗ್ಯವಾಗಿಸಿದರು. ಅಲ್ಲೇ ೧೯೬೦ರಲ್ಲಿ ಶ್ರೀ ನಿತ್ಯಾನಂದ ಆಶ್ರಮವನ್ನು ಸ್ಥಾಪಿಸಿ, ಆ ಭಾಗದ ಹಳ್ಳಿಗಾಡಿನ ಜನತೆಯ ಜೀವನಕ್ರಮಕ್ಕೆ ನೂತನ ತಿರುವನ್ನಿತ್ತರು. (ಈ ಲೇಖಕ ಮಂದಿರದ ಟ್ರಸ್ಟಿ ಮತ್ತು ಕಾರ್ಯದರ್ಶಿಯಾಗಿದ್ದ ಸವಿನೆನಪು) ಪಂಡಿತ್ ಸುವರ್ಣರು ಊರಲ್ಲಿ ಇದ್ದಾಗಲೆಲ್ಲ ದೇಶದ ನಾನಾಮೂಲೆಗಳಿಂದ ಆಶ್ರಮಕ್ಕೆ ಬರುತ್ತಿದ್ದ ಸಾಧುಸಂತರು, ಭಜಕರು, ಭಕ್ತರು, ಕಲಾವಿದರು, ಉದ್ಯಮಿಗಳು, ರಾಜಕೀಯ ನೇತಾರರು, ಅಧಿಕಾರಿಗಳು ಇತ್ತೀಚಿನ ವರ್ಷಗಳವರೆಗೂ ವರ್ಷಂಪ್ರತಿ ಬುದ್ಧಪೂರ್ಣಿಮೆ (ಆಶ್ರಮ ವರ್ಧಂತಿ)ಯ ಸಂದರ್ಭದಲ್ಲಿ ಹಲವು ದಿನಗಳ ಪರ್ಯಂತ ನಡೆಯುತ್ತಿದ್ದ ಧಾರ್ಮಿಕ ವಿಧಿಗಳು, ಭಜನೆ, ಯಕ್ಷಗಾನ ತಾಳಮದ್ದಳೆ, ಹರಿಕತೆ, ಪ್ರವಚನ, ಅನ್ನಸಂತರ್ಪಣೆ ಮತ್ತಿತರ ಕಾರ್ಯಕ್ರಮಗಳು. ಆವರೆಗೆ ಕಟ್ಟಾಜಾತೀಯವಾದಿಗಳಾಗಿದ್ದವರೂ ಆತ್ಮವಿಮರ್ಶೆಮಾಡಿಕೊಂಡು ಅವರ ಸರ್ವಧರ್ಮ ಸಾಮರಸ್ಯದ ಕರೆಗೆ ಓಗೊಟ್ಟು, ಸುವರ್ಣ ಸತ್ಕಾರ್ಯಕ್ಕೆ ಕೈಜೋಡಿದರು. (ಮುಂದೆ ಅವರ ಮಕ್ಕಳು ಕಾಲೋಚಿತವಾಗಿ ಪರಂಪರೆ ಮುಂದುವರಿಸಿದ್ದಾರೆ).

೧೯೭೨ರಲ್ಲಿ ಕರ್ನಾಟಕ ಸರಕಾರದಲ್ಲಿ ದಿ| ಕೆ.ಟಿ. ರಾಥೋಡರು ಮೀನುಗಾರಿಕಾ ಇಲಾಖೆ ಸಚಿವರಾಗಿದ್ದಾಗ ಆಶ್ರಮದಲ್ಲಿ ಜರಗಿದ ಬೃಹತ್ ಸಾರ್ವಜನಿಕ ಸಮಾರಂಭಕ್ಕೆ ಸಚಿವರು ಆಗಮಿಸಿದಲ್ಲದೆ, ಪ್ರತಿಭಾ ಸಮ್ಮಾನ ಕಾರ್ಯಕ್ರಮಕ್ಕೆ ವಿಶುಕುಮಾರ್ ಮುಂತಾದ ಪ್ರಖ್ಯಾತರೂ ಆಗಮಿಸಿದರು. (ಅಂದಿನ ಸಮಾರಂಭ ನಿರ್ವಹಿಸುವಾಗ ಈ ಲೇಖಕನಿಗೆ ಹದಿಹರೆಯ) ಊರಜನತೆಗೆ ಅಪೂರ್ವ ಸಂಭ್ರಮದ ಘಳಿಗೆ. ಹಿಂದುಳಿದವರ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣ ಮತ್ತು ಸಂಘಟನೆ ಅಗತ್ಯ ಎಂಬ ಶ್ರೀ ನಾರಾಯಣಗುರುಗಳ ಸಂದೇಶದ ಪ್ರೇರಣೆ ಪಂಡಿತ್ ಸುವರ್ಣರಗಾಗಿತ್ತು. ಪಂಡಿತರು ತನ್ನ ಹೆಸರಿನಲ್ಲಿ ಯಾವುದೇ ಸಂಸ್ಥೆಯನ್ನು ಸ್ಥಾಪಿಸಲಿಲ್ಲ. ಆದರೆ ಅವರ ಪ್ರೋತ್ಸಾಹ, ಪ್ರೇರಣೆ, ಆರ್ಥಿಕ ನೆರವಿನಿಂದ ಹಲವು ಶಿಕ್ಷಣ ಸಂಸ್ಥೆಗಳು, ಸಾಮಾಜಿಕ ಸಂಘಟನೆಗಳು ಉದಿಸಿ ಪ್ರವರ್ಧಮಾನವಾಗಿದೆ. ಕಟಪಾಡಿ ವಿಶ್ವನಾಥ ಕ್ಷೇತ್ರಕ್ಕೆ ಅದರ ಪ್ರತಿಷ್ಠಾಪನಾ ಕಾಲದಿಂದಲೂ ಪಂಡಿತರು ಬಲಗೈಯ್ಯಂತಿದ್ದು ಆ ಕಾಲದಲ್ಲಿ ಗರಿಷ್ಠಧನಸಹಾಯ ಮಾಡಿದ್ದರು. ಅಂದಿನ ಅವಿಭಜಿತ ದ.ಕ. ಜಿಲ್ಲೆಯ ಉತ್ತರ ಭಾಗದ ಬಿಲ್ಲವರ ಪ್ರಮುಖ ಸಂಘಟನೆಯಾದ ಬನ್ನಂಜೆ ಬಿಲ್ಲವರ ಸಂಘದ ಚಟುವಟಿಕೆಗಳೊಂದಿಗೆ ತನ್ನನ್ನು ಬಹುವಾಗಿ ತೊಡಗಿಸಿಕೊಂಡಿದ್ದರು.

ಆರ್.ಜೆ. ಮಟ್ಟಿಯವರು ಅದರ ಅಧ್ಯಕ್ಷರಾದ ಮೇಲಂತೂ ಇಬ್ಬರೂ ಆಪ್ತರಾದರು. ಮೂಡುಬೆಳ್ಳೆಗೆ ವಿದ್ಯುತ್, ಟೆಲಿಫೋನ್ ಸೌಕರ್ಯ ಒದಗುವಲ್ಲಿಯೂ ಪಂಡಿತರದು ಪ್ರಮುಖಪಾತ್ರ. ಬೆಳ್ಳೆ ವ್ಯವಸಾಯ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಅದನ್ನು ಅಭಿವೃದ್ಧಿಪಡಿಸಿದರು. ಮೂಡುಬೆಳ್ಳೆಯು ಶೈಕ್ಷಣಿಕ ಮತ್ತಿತರ ಅನೇಕ ಸೌಲಭ್ಯಗಳನ್ನು ಹೊಂದಿ ಹೆಸರಾಗಿದ್ದರೂ ಹೊಳೆಯ ಪಡುಗಡೆಯ ಪಡುಬೆಳ್ಳೆ ಯಾವ ಆಧುನಿಕ ಸೌಕರ್ಯವೂ ಇಲ್ಲದೆ ಹಿಂದುಳಿದಿತ್ತು. ಮುಖ್ಯವಾಗಿ ಪಡುಬೆಳ್ಳೆಯ ಹಿಂದುಳಿದ ಸಮಾಜದ ಅಭಿವೃದ್ಧಿಯ ಕನಸು ಕಂಡ ಸುವರ್ಣರು ಕಾರ್ಯೋನ್ಮುಖರಾದರು. ಅವರ ಮಾರ್ಗದರ್ಶನದಲ್ಲಿ ಬನ್ನಂಜೆ ಬಿಲ್ಲವರ ಸಂಘವು ತನ್ನ ಶೈಕ್ಷಣಿಕ ಚಟುವಟಿಕೆಗಳನ್ನು ವಿಸ್ತೃತಗೊಳಿಸಲು ಬ್ರಹ್ಮಶ್ರೀ ನಾರಾಯಣ ಗುರು ಟ್ರಸ್ಟ್ ಲಾಂಛನದಲ್ಲಿ ಪಡುಬೆಳ್ಳೆಯಲ್ಲಿ ತಾಂತ್ರಿಕ ವಿದ್ಯಾಲಯ ಆರಂಭಿಸಲು ಯೋಜನೆ ಹಾಕಿತು. ಆಗ ಶಾಸಕರಾಗಿದ್ದು ಮುಂದೆ ಕರ್ನಾಟಕ ಸರಕಾರದ ಸಚಿವರಾದ ಶ್ರೀ ಕೆ. ವಸಂತ ಸಾಲ್ಯಾನರ ಸಹಕಾರದಿಂದ ಪಂಡಿತರು ಪಡುಬೆಳ್ಳೆಯಲ್ಲಿ ಟ್ರಸ್ಟ್‌ಗಾಗಿ ಸುಮಾರು ಇಪ್ಪತ್ತು ಎಕರೆ ಜಮೀನು ಪಡೆಯಲು ಶಕ್ತರಾದರು. ಆರ್.ಜೆ. ಮಟ್ಟಿ, ಕಪ್ಪೆಟ್ಟು ಬೋಳ ಪೂಜಾರಿ, ಕಟಪಾಡಿ ಅಶೋಕ ಸುವರ್ಣ, ಕಟಪಾಡಿಯ ಸಿರಿಲ್ ಕ್ವಾಡ್ರಸ್, ಮೋಹನದಾಸ ಬಂಗೇರ ಮತ್ತಿತರ ಗಣ್ಯರ ಬೆಂಬಲದಿಂದ ಪಡುಬೆಳ್ಳೆಯಲ್ಲಿ ’ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆ’ ಸ್ಥಾಪನೆಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮುಂದೆ ಮುಂಬಯಿಯ ಬಿಲ್ಲವರ ಎಸೋಸಿಯೇಶನ್ ಈ ಸಂಸ್ಥೆಯನ್ನು ವಹಿಸಿಕೊಂಡು ಪ್ರಗತಿಪಥದಲ್ಲಿ ಮುನ್ನಡೆಸುತ್ತಿರುವುದು ಇತಿಹಾಸ. ಬೆಳ್ಳೆಯಲ್ಲಿ ಬಿಲ್ಲವ ಸೇವಾ ಸಂಘ ಸ್ಥಾಪನೆ (೧೯೭೯), ಹಿಂದುಳಿದವರಿಗೆ ದೇವಸ್ಥಾನ ಪ್ರವೇಶಾವಕಾಶ, ಸರಕಾರದಿಂದ ಕಪ್ಪಂದಕರ್ಯ ಹೊಳೆಗೆ ನೂತನ ಸೇತುವೆ ನಿರ್ಮಾಣ ಮುಂತಾದವು ಅವರ ಎಂಬತ್ತರ ದಶಕದ ಇನ್ನಷ್ಟು ಸಾಧನೆಗಳು. ಕಿರಿಯನಾಗಿ ಅವರ ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಬಾಲ್ಯದಿಂದಲೂ ಜತೆಗಿದ್ದ ಬೆರಗು ಈ ಲೇಖಕನದು. ಮುಂಬಯಿ ಬಿಲ್ಲವರ ಎಸೋಸಿಯೇಶನ್ ಜತೆಗೂ ಸಕ್ರಿಯರಾಗಿದ್ದ ಪಂಡಿತರು ಭಾಂಡುಪ್ ಶಾಖಾ ಅಧ್ಯಕ್ಷರಾಗಿ, ಭಾರತ್ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರಾಗಿ ಗಣನೀಯ ಸೇವೆ ಸಲ್ಲಿಸಿದರು. ಅಲ್ಲಿ ಸ್ಥಳೀಯ ಕನ್ನಡ ಕಲಾಕೇಂದ್ರದ ಸ್ಥಾಪಕರೂ ಆವರೇ.

ಆದಿ ಉಡುಪಿಯ ಶ್ರೀ ಬ್ರಹ್ಮಬೈದರ್ಕಳ ಅಧ್ಯಯನ ಪ್ರತಿಷ್ಠಾನ, ಬೆಳ್ಳೆ ಗೀತಾಮಂದಿರ ಮುಂತಾದ ಸಂಸ್ಥೆಗಳ ಸ್ಥಾಪಕ ಸಲಹೆಗಾರರಾಗಿದ್ದರು. ಮುಂಬಯಿ ಹಾಗೂ ದ.ಕ. ಜಿಲ್ಲೆಯ ಬಹಳಷ್ಟು ಶಿಕ್ಷಣ ಸಂಸ್ಥೆಗಳಿಗೆ, ಧಾರ್ಮಿಕ, ಸಾಮಾಜಿಕ ಸಂಘ ಸಂಸ್ಥೆಗಳಿಗೆ ಪಂಡಿತರು ಕೊಡುಗೈದಾನಿಯಾಗಿ ಬೆಂಬಲವಿತ್ತವರು. ಮುಂಬಯಿಯಲ್ಲಿ ಉಡುಪಿ ವಲಯದ ಯಾವುದೇ ಸಂಘಸಂಸ್ಥೆಗಳ ನಿಧಿಸಂಗ್ರಹ ಕಾರ್ಯಗಳಿರಲಿ, ಪ್ರೇರಕಶಕ್ತಿ ಪಂಡಿತರಾಗಿದ್ದರು. ಮುಂಬಯಿಯ ಅವರ ಶಿಷ್ಯವರ್ಗದ ಫೂಲ್‌ಚಂದ್ ಎ. ಮಾಣಿಕ್, ಮಾಣಿಕ್ ಇಂಡಸ್ಟ್ರೀಸ್ ಮಾಲಿಕರಾಗಿದ್ದಾರೆ, ಭೀಮ್‌ಸೇನ್ ಧಿಂಗ್ರಾ ಜೆ.ಕೆ. ಇಂಡಸ್ಟ್ರೀಸ್ ಮಾಲಿಕರು. ಹಾಗೇ ಶಿವದಾಸ್ ಘನಾತ್ರ, ಹೀರಾಚಂದ್ ಪಟೇಲ್ ಮುಂತಾದ ಉದ್ಯಮಪತಿಗಳನೇಕರು ಪಂಡಿತ್ ಅವರ ಶಿಷ್ಯರಾಗಿದ್ದರು, ಅಭಿಮಾನಿಗಳಾಗಿದ್ದರು. ಅವರ ಮೂವರು ಪುತ್ರಿಯರು, ಓರ್ವ ಮಗ ಮುಂಬಯಿಯಲ್ಲಿದ್ದಾರೆ.

ಮೊದಲನೆಯ ಪುತ್ರಿ ಶುಭವತಿ ಶಾಂತ ಕುಮಾರ್ ಕರ್ನಾಟಕ ಸರಕಾರದ ಆರೋಗ್ಯ ಇಲಾಖೆಯಲ್ಲಿ ಆರೋಗ್ಯ ಅಧಿಕಾರಿಯಾಗಿದ್ದು ನಿವೃತ್ತರು. ಇನ್ನೋರ್ವ ಪುತ್ರಿ ಶಕುಂತಳಾ ಕೆ. ಕೋಟ್ಯಾನ್ ಮುಂಬಯಿ ಬಿಲ್ಲವ ಅಸೋಸಿಯೇಶನಿನ ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆ. ಮೂರನೇ ಪುತ್ರಿ ಸುಚೇತಾ ಉದಯ ಅಂಚನ್ ಯೋಗ ವಿದ್ಯಾ ತರಬೇತಿದಾರರು, ಮಾರ್ಗದರ್ಶಕರು. ಪುತ್ರ ಸುರೇಂದ್ರನಾಥ ಎಸ್. ಸುವರ್ಣ ಭಾಂಡುಪ್ ಶ್ರೀ ನಿತ್ಯಾನಂದ ಮಂದಿರದಲ್ಲಿ ಸಕ್ರಿಯರು. ಹಾಗೂ ಪ್ರಧಾನ ಕೋಶಾಧಿಕಾರಿಯಾಗಿದ್ದಾರೆ. ಕಿರಿಯಪುತ್ರ ಶಿವಾಜಿ ಎಸ್. ಸುವರ್ಣರು ಬೆಳ್ಳೆ ಪಂಚಾಯತ್ ಮಾಜಿ ಅಧ್ಯಕ್ಷರು ರಾಜಕೀಯದ ಯುವ ಮುಂದಾಳು. ಮುಂಬಯಿ ಬಿಲ್ಲವ ಎಸೋಶಿಯೇಶನ್ ಪ್ರಾಯೋಜಿತ ಪಡುಬೆಳ್ಳೆ ನಾರಾಯಣ ಗುರು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರೂ ಆಗಿದ್ದಾರೆ.

ಹಲವು ಭಾಷೆಗಳನ್ನು ಅರಿತಿದ್ದ ಪಂಡಿತ್ ಸುವರ್ಣರು ಭಾರತದಾದ್ಯಂತ ಸಂಚರಿಸಿದ್ದಾರೆ. ನೇಪಾಲ, ಹೃಷಿಕೇಶ, ಬದ್ರೀನಾಥ್, ಕೇದಾರನಾಥ್, ಅಮರನಾಥ, ಹರಿದ್ವಾರಗಳಿಗೆ ತನ್ನ ಕೊನೆಯ ದಿನಗಳ ಕಾಲದವರೆಗೂ ವರ್ಷಂಪ್ರತಿ ಯಾತ್ರೆ ಹೋಗುತ್ತಿದ್ದರು. ಇಷ್ಟೆಲ್ಲ ಸಾಮಾಜಿಕ ಕಾರ್ಯಗಳ ನಡುವೆಯೂ ಅವರ ಹಾಸ್ಯಪ್ರವೃತ್ತಿ ಜಾಗೃತವಾಗಿಯೇ ಇರುತ್ತಿತ್ತು. ಯೌವನದಲ್ಲಿ ಸುಂದರ ಮೈಕಟ್ಟು, ಮುಂದೆ ಗಾತ್ರದಲ್ಲೂ ಹಿರಿದಾಯಿತು. ಭಾರತ ಸೇವಾದಳದ ಮುಖಂಡತ್ವದಲ್ಲೂ ಇದ್ದಿದ್ದ ಅವರು ಶಿಸ್ತಿನ ಸಿಪಾಯಿ. ಅವರ ನಿಷ್ಠುರತೆ ಅನೇಕ ಬಾರಿ ಹಲವರ ಪಾಲಿಗೆ ವಿವಾದಾತ್ಮಕವಾಗಿ ಪರಿಣಮಿಸಿದ್ದೂ ಇದೆ. ಆದರೆ ಅವರ ಧೀಮಂತ ವ್ಯಕ್ತಿತ್ವ ಅನೇಕರ ಬಾಳಿಗೆ ಬೆಳಕು ತೋರಿದೆ. ಅವರ ಸ್ನೇಹವಲಯ, ಸೇವಾ ವಲಯ ದೊಡ್ಡದು. ಆಶ್ರಮದ ತಾಳಮದ್ದಳೆ ಕೂಟಗಳ ಕಾಲದಲ್ಲಿ ಸೀತಾನದಿ ಗಣಪಯ್ಯ ಶೆಟ್ಟಿ, ದೇರಾಜೆ, ಪೊಲ್ಯ ದೇಜಪ್ಪ ಶೆಟ್ಟಿ, ಹಿರಿಯಡ್ಕ ಗೋಪಾಲರಾವ್, ಮಟ್ಟಿ ಸುಬ್ಬರಾವ್, ತೋನ್ಸೆ ಜಯಂತ್ ಕುಮಾರ್-ಮುಂತಾದ ಆ ಕಾಲದ ದಿಗ್ಗಜರು ವರ್ಷಂಪ್ರತಿ ಇಲ್ಲಿಗೆ ಭೇಟಿ ಕೊಡುತ್ತಿದ್ದರು.

ಸ್ಥಳೀಯರಾದ ಮಾಜಿ ಶಾನುಭೋಗ್ ದಿ| ಕೆ. ಎಂ. ಮಂಜರು, ಪರಸ ದಲ್ಮೆಡ, ರಾಬರ್ಟ್ ಆಳ್ವ, ಮೊಣ್ಣು ಮಾಸ್ಟರ್, ಕೆ. ವಸಂತ ಸಾಲಿಯಾನ್, ಮಾಜಿ ಶಾಸಕ ದಿ| ಕಾಪು ಭಾಸ್ಕರ ಶೆಟ್ಟಿ, ಮಹಾಬಲ ಶೆಟ್ಟಿ, ನಾರಾಯಣ ಶೆಟ್ಟಿ, ವಿಷ್ಣುಮೂರ್ತಿ ಭಟ್, ಡಾ. ಆರ್.ಆರ್. ಕೊರಡ್ಕಲ್ -ಮುಂತಾದ ನೂರಾರು ಸ್ಥಳೀಯರು ಪಂಡಿತರ ಆತ್ಮೀಯರಾಗಿದ್ದರು. ವಿದ್ಯಾರ್ಥಿಗಳು, ಪುಟ್ಟ ಮಕ್ಕಳ ಮೇಲೆ ಅವರಿಗೆ ತುಂಬ ವಾತ್ಸಲ್ಯ. ಬೆಳ್ಳೆಯಿಂದ ಕಪ್ಪುಂದಕರ್ಯಕ್ಕೆ ಹಿಂದೆ ನಡೆದುಹೋಗುತ್ತಿದ್ದಾಗೆಲ್ಲ ವಿದ್ಯಾರ್ಥಿಗಳೊಂದಿಗೆ ಸಾಮಾನ್ಯ ಜ್ಞಾನಪ್ರಶ್ನೆ, ಹಾಸ್ಯಚಟಾಕಿ ನಗುವಿನೊಂದಿಗೆ ಸಾಗುತ್ತಿದ್ದರು. ತನ್ನ ಬದುಕಿನ ಕೊನೆಯ ವರ್ಷಗಳಲ್ಲಿ ಅನಾರೋಗ್ಯ ನಿಮಿತ್ತ ಪಂಡಿತರು ತಮ್ಮ ಚಟುವಟಿಕೆಗಳನ್ನು ಮೊಟಕುಗೊಳಿಸಿ ಊರಲ್ಲಿಯೇ ನೆಲೆಸಿದ್ದರು. ಒಮ್ಮೆ ಆರೋಗ್ಯ ಸುಧಾರಿಸಿತ್ತು. ಬಂಧುಗಳ ಮದುವೆಗೆಂದು ಮುಂಬಯಿಗೆ ಹೋದವರು ಹೃದಯಾಘಾತದಿಂದ ೧೯೯೩ರ ಡಿಸೆಂಬರ್ ೨೦ರಂದು ಇಹಲೋಕ ತ್ಯಜಿಸಿದರು. ಹಿರಿದಾಗಿ ಬಾಳಿ, ಪ್ರೀತಿ, ಸದ್ಭಾವನೆಯ ಸ್ಫೂರ್ತಿ ಚಿಲುಮೆಯಾಗಿ ಮುಂಬಯಿ ಭಾಂಡುಪ್ ಪರಿಸರ ಮತ್ತು ಹುಟ್ಟೂರು ಬೆಳ್ಳೆಯ ಚರಿತ್ರೆಯ ಒಂದು ಭಾಗವಾಗಿ ಇತಿಹಾಸದಲ್ಲಿ ಸೇರಿಹೋದರು; ಸಾಧಿಸಿದ ಹಲವು ಜನೋಪಯೋಗಿ ಕಾರ್ಯಗಳಿಂದ ಅಮರರಾದರು.

  • ಮುದ್ದು ಮೂಡುಬೆಳ್ಳೆ

 

 

Leave a Reply

Your email address will not be published. Required fields are marked *