Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಬಿ.ಆರ್.ಲೈಫ್ ಖಾಸಗಿ ಆಸ್ಪತ್ರೆಯಲ್ಲಿ ಸರಕಾರಿ ವೈದ್ಯರ ಸೇವೆ !

# ಉಡುಪಿಯ ‘ಕರ್ನಾಟಕ ಸರಕಾರ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮಕ್ಕಳ ಆಸ್ಪತ್ರೆ’ಯಲ್ಲಿ ಸುಮಾರು ಆರು ತಿಂಗಳುಗಳಿಂದ ಹೆಣ್ಣು ಮಕ್ಕಳ ಮತ್ತು ಮಕ್ಕಳ ಆಸ್ಪತ್ರೆ ಚಾಲ್ತಿಯಲ್ಲಿದೆ. ಇದು ಹಾಜಿ ಅಬ್ದುಲ್ಲಾ ಸಾಹೇಬ್ ಅವರು ಸರಕಾರಕ್ಕೆ ದಾನವಾಗಿ ನೀಡಿದ ಜಾಗದಲ್ಲಿ ತಲೆ ಎತ್ತಿದ ಆಸ್ಪತ್ರೆಯಾಗಿದೆ.

ಇಲ್ಲಿ, ಹಿಂದೆ ಇದ್ದ ಎಪ್ಪತ್ತು ಹಾಸಿಗೆಗಳ ಆಸ್ಪತ್ರೆ ಮೇಲ್ದರ್ಜೆಗೇರಿಸಿ ಸಂಪೂರ್ಣವಾಗಿ ಖಾಸಗಿಯವರಿಗೆ ನಡೆಸಲು ಕೊಟ್ಟು ಇನ್ನೂರು ಹಾಸಿಗೆಗಳ ಉಚಿತ ಮಕ್ಕಳ ಮತ್ತು ಹೆಂಗಸರ ಆಸ್ಪತ್ರೆಯನ್ನು ಬಿ ಆರ್ ಎಸ್ ರಿಸರ್ಜ್ ಸೆಂಟರ್ ನಡೆಸಿಕೊಂಡು ಬರುತ್ತಿದೆ. ಈ ಇನ್ನೂರು ಬೆಡ್ ನ ಆಸ್ಪತ್ರೆ ಆರು ತಿಂಗಳಿನಿಂದ ನಡೆಯುತ್ತಿದ್ದು, ಜನರಿಗೆ ಉಚಿತ ಸೇವೆಯನ್ನು ನೀಡುತ್ತಿದೆ. ಈ ಆಸ್ಪತ್ರೆಯ ಕೆಲಸ ಕಾರ್ಯದ ಬಗ್ಗೆ ಜನಸಾಮಾನ್ಯರಿಗೆ ಯಾವುದೇ ಸಂಶಯಗಳು ಇಲ್ಲದಿದ್ದರೂ ಕೂಡ, ಇದರ ಪಕ್ಕದಲ್ಲೆ ತಲೆ ಎತ್ತುವ ನಾನೂರು ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅದು ಖಾಸಗಿ ಆಸ್ಪತ್ರೆ ಆಗಿರುತ್ತದೆ, ಅಂದರೆ ಹಾಜಿ ಅಬ್ದುಲ್ಲಾ ಅವರು ನೀಡಿದ ದಾನವನ್ನು ಬಡ ಮತ್ತು ಮಧ್ಯಮ ವರ್ಗದವರಿಂದ ಕಿತ್ತುಕೊಂಡು ಒಂದು ಭಾಗವನ್ನು ಬಡವರಿಗೆ ಇನ್ನೂರು ಆಸ್ಪತ್ರೆ ಇನ್ನೂರು ಹಾಸಿಗೆಗಳು ಇನ್ನೊಂದು ಭಾಗವನ್ನು ಹಣ ಇರುವವರಿಗೆ ಮಾಡುತ್ತಾ ಇರುವುದರ ಬಗ್ಗೆ ಉಡುಪಿಯ ನಾಗರಿಕ ವಲಯದಲ್ಲಿ ಕಳೆದ ಮೂರು ವರ್ಷಗಳಿಂದ ಸಾಕಷ್ಟು ಅಸಮಾಧಾನವಿದೆ.

ಅದೇ ಸಂದರ್ಭದಲ್ಲಿ ಈಗ ನಡೆಯುತ್ತಿರುವ ಈ ಇನ್ನೂರು ಹಾಸಿಗೆಗಳ ಆಸ್ಪತ್ರೆಯ ಕೆಲಸ ಕಾರ್ಯಗಳ ಬಗ್ಗೆ ಗಮನಿಸುತ್ತಿರುವಾಗ ಗಮನಕ್ಕೆ ಬಂದ ಕೆಲವು ವಿಷಯಗಳೆಂದರೆ

ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದವರಿಗೆ ಬೆಳಗ್ಗೆ 10.30ಕ್ಕೇ ಟೋಕನ್ ಕೊಡುವುದನ್ನು ನಿಲ್ಲಿಸಿ ಬಿಡುತ್ತಾರೆ. ದೂರದ ಊರಿನಿಂದ ಬಂದ ಗರ್ಭಿಣಿ ಹೆಂಗಸರು ವೃದ್ಧ ಮಹಿಳೆಯರು ಇವರು ಹೋಗುವುದು ಎಲ್ಲಿಗೆ ?

ಆಸ್ಪತ್ರೆಯಲ್ಲಿ ಹೆರಿಗೆಗಳ ಸಂಖ್ಯೆ ಮೊದಲಿನ ಸರ್ಕಾರಿ ಆಸ್ಪತ್ರೆಗಿಂತ ಗಣನೀಯವಾಗಿ ಹೆಚ್ಚಾಗಿದ್ದರೂ ಕೂಡ ಇಲ್ಲಿ ನಡೆಯುತ್ತಿದ್ದ ಇತರ ಚಿಕಿತ್ಸೆಗಳು ಅಂದರೆ ಸಂತಾನ ಹರಣ ಚಿಕಿತ್ಸೆ, ಗರ್ಭಕೋಶ ತೆಗೆಯುವ ಚಿಕಿತ್ಸೆ ಮುಂತಾದವುಗಳು ಗಣನೀಯವಾಗಿ ಕಡಿಮೆಯಾಗಿದೆ.

ಸಂತಾನ ಹರಣ ಚಿಕಿತ್ಸೆ ಎನ್ನುವುದು ಒಂದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಭಾರತದ ಜನಸಂಖ್ಯೆ ನಿಯಂತ್ರಣಕ್ಕೆ ಬಹಳ ಮುಖ್ಯವಾದ ಚಿಕಿತ್ಸೆಯಾಗಿದೆ. ಇಲ್ಲಿ ಯಾವುದೇ ಕಾರಣಕ್ಕೂ ಲೋಪದೋಷಗಳು ಉಂಟಾಗಬಾರದು.

ಹಿಂದೆ ಸರ್ಕಾರ ನಡೆಸುತ್ತಿದ್ದ ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ಸಂತಾನಹರಣ ಚಿಕಿತ್ಸೆಗಳು ಮತ್ತು ಈಗ ನಡೆಯುತ್ತಿರುವ ಚಿಕಿತ್ಸೆಗಳ ಸಂಖ್ಯೆಯಲ್ಲಿ ಗಣನೀಯವಾದ ಇಳಿಕೆ ಇದೆ ಎಂಬುದನ್ನು ಖಾಸಗಿಯಾಗಿ ಮಾತನಾಡುತ್ತಾ ವೈದ್ಯಾಧಿಕಾರಿಗಳು ತಿಳಿಸುತ್ತಾರೆ. ಈ ಬಗ್ಗೆ ಈಗಾಗಲೇ ಮಾಹಿತಿ ಹಕ್ಕು ಅರ್ಜಿಗಳನ್ನು ಹಾಕಿದ್ದು, ನಿಗದಿತ ಅವಧಿ ಮುಗಿದರೂ ಇನ್ನೂ ಸಹ ಅಗತ್ಯ ಮಾಹಿತಿ ನೀಡದೇ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ.  ಪ್ರಾರಂಭವಾಗಿ ಒಂದು ವರ್ಷದ ಒಳಗೆ ಈಗಾಗಲೇ ಮುಖ್ಯ ವೈದ್ಯಾಧಿಕಾರಿಗಳನ್ನು ಕಾನೂನು ವಿರುದ್ಧವಾಗಿ ಹೊರಗೆ ಕಳಿಸಲಾಗಿದೆ. ವೃದ್ಧಾಪ್ಯ ದಲ್ಲಿದ್ದ ವೈದ್ಯಾಧಿಕಾರಿಗಳು ಅವರ ಅವಧಿ ಮುಗಿಯುವ ನಾಲ್ಕು ತಿಂಗಳ ಮುಂಚೆಯೇ ಅವರನ್ನು ಹೊರಗೆ ಕಳಿಸಲಾಗಿದೆ.

ಈಗಾಗಲೇ ಆಸ್ಪತ್ರೆ ಶುರುವಾದಾಗ ಇಲ್ಲಿಂದ ನಾಲ್ಕು ಜನ ಪ್ರಸೂತಿ ರೋಗ ತಜ್ಞರು ರಾಜೀನಾಮೆ ನೀಡಿ ಬೇರೆಡೆಗೆ ಹೋಗಿದ್ದಾರೆ. ಕಾರಣವೆಂದರೆ, ಅವರಿಗೆ ಸರಿಯಾದ ಸೌಲಭ್ಯಗಳು ಇಲ್ಲ ಹಾಗೂ ಹೆಚ್ಚುತ್ತಿರುವ ರೋಗಿಗಳ ಸಂಖ್ಯೆಯಿಂದಾಗಿ ಕೆಲಸ ಮಾಡಲು ಒತ್ತಡ ಆಗುತ್ತಾ ಇದೆ ಎಂದು ಹೆಚ್ಚಾಗಿ ಬಿಟ್ಟು ಹೋದ ವೈದ್ಯರುಗಳು ತಿಳಿಸುತ್ತಿದ್ದಾರೆ.

ಇದೇ ಆಸ್ಪತ್ರೆಯಲ್ಲಿ ಮಕ್ಕಳ ಚಿಕಿತ್ಸೆಯನ್ನು ಮಾಡುವ ಪೂರ್ಣಾವಧಿ ವೈದ್ಯರುಗಳು ಖಾಸಗಿಯವರಿಗೆ ಸಿಗದೆ ಸರ್ಕಾರವನ್ನು ಒತ್ತಾಯಿಸಿ ಜಿಲ್ಲೆಯ ಹಲವು ಬಡ ರೋಗಿಗಳ ಆಸ್ಪತ್ರೆಗಳಲ್ಲಿ ಕೆಲಸ ಮಾಡಬೇಕಾಗಿದ್ದ ಸರ್ಕಾರದ ಮಕ್ಕಳ ವೈದ್ಯರುಗಳನ್ನು ಈ ಆಸ್ಪತ್ರೆಯಲ್ಲಿ ನಿಯೋಜನೇ ಮಾಡಿಕೊಂಡು ಕಾನೂನು ಬಾಹಿರವಾಗಿ ಅವರ ಎಂಒಯುಗೆ ವಿರುದ್ಧವಾಗಿ ಈ ರೀತಿಯ ಸರ್ಕಾರಿ ವೈದ್ಯರುಗಳನ್ನು ಉಪಯೋಗಿಸುತ್ತಾ ಇರುವುದು ಖಂಡನಾರ್ಹ.

ಖಾಸಗಿಯವರಿಗೆ ಆಸ್ಪತ್ರೆ ನಡೆಸಲೇಬೇಕು ಅನ್ನುವ ಚಟವಿದ್ದಲ್ಲಿ ವೈದ್ಯರುಗಳಿಗೆ ಸರಿಯಾದ ಸಂಬಳವನ್ನು ಕೊಟ್ಟರೆ ಖಂಡಿತವಾಗಿ ವೈದ್ಯರುಗಳು ಸಿಗುತ್ತಾರೆ. ಅದರ ಬದಲಿಗೆ ಸರ್ಕಾರಿ ವೈದ್ಯರುಗಳನ್ನು ಕಡಿಮೆ ಸಂಬಳದಲ್ಲಿ ಇಲ್ಲಿ ದುಡಿಸಿಕೊಳ್ಳುವ ಒಂದು ಷಡ್ಯಂತ್ರವನ್ನು ಖಾಸಗಿಯವರು ಮಾಡಿರುತ್ತಾರೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಬಹುಶಃ ಇಲ್ಲಿ ಆರೋಗ್ಯ ಇಲಾಖೆಯ ಮಂತ್ರಿಗಳು, ಕಾರ್ಯದರ್ಶಿಗಳು ಎಲ್ಲ ಸರ್ಕಾರಿ ವ್ಯವಸ್ಥೆಯನ್ನು ಆದಷ್ಟು ಕ್ಷೀಣಿಸಿ ಉಡುಪಿ ಜಿಲ್ಲೆಯ ಬೇರೆ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯರು ಸರಿಯಾಗಿ ಲಭ್ಯವಾಗದೆ ಜನರು ಪರದಾಡುವಂತ ಪರಿಸ್ಥಿತಿಯನ್ನು ಉಂಟು ಮಾಡುವ ಹಾಗೆ ತೋರುತ್ತಿದೆ.

ಎಲ್ಲದಕ್ಕಿಂತಲೂ ಮುಖ್ಯವಾಗಿ ಯೋಚನೆ ಮಾಡಬೇಕಾದ ವಿಷಯವೆಂದರೆ, ಮಕ್ಕಳ ವೈದ್ಯರನ್ನು, ಅರವಳಿಕೆ ತಜ್ಞರನ್ನು ಇವತ್ತಿನವರೆಗೆ ಖಾಸಗಿ ಯಿಂದಲೇ ಬರ ಮಾಡಿಸಿಕೊಂಡು ಪೂರ್ಣಾವಧಿ ವೈದ್ಯರು ಇಲ್ಲದೆ ನಡೆಯುತ್ತಿರುವ ಈ ಆಸ್ಪತ್ರೆ ಮುಂದೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ತೆರೆದಾಗ ಇವರುಗಳಿಗೆ ಈ ಅಗ್ಗದ ರೇಟಿನಲ್ಲಿ ವೈದ್ಯರುಗಳು ಎಲ್ಲಿ ಸಿಗುತ್ತಾರೆ ಎಂಬುದು.

ಹೀಗೆಯೇ ರಾಜಕಾರಣಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಅಜ್ಜರಕಾಡು ಆಸ್ಪತ್ರೆಯಲ್ಲಿರುವ ವೈದ್ಯರುಗಳಿಗೆ ಇಲ್ಲಿಯೂ ಕೆಲಸ ಮಾಡುವಂತಹ ಒಂದು ಸುಯೋಗವನ್ನು ಒದಗಿಸಿಕೊಡುತ್ತಾರೆ ನಮ್ಮ ಮಂತ್ರಿಗಳು ಎಂದು ಕಾಣುತ್ತದೆ.

ಮಕ್ಕಳ ವೈದ್ಯರನ್ನು ಎರಡು ತಿಂಗಳುಗಳ ಕಾಲ ಮಾತ್ರ ಕೊಡಿ ಎಂದು ಮೊದಲು ಬಿ.ಆರ್. ಲೈಫ್ ಕೇಳಿಕೊಂಡಿತ್ತು. ಈಗ ಪುನಃ ಬೆಂಗಳೂರಿಗೆ ಹೋಗಿ ಇನ್ನೂ ಮೂರು ತಿಂಗಳ ಮಟ್ಟಿಗೆ ನಿಯೋಜನೆಯನ್ನು ಮುಂದುವರಿಸಲು ಯಶಸ್ವಿಯಾಗಿದ್ದಾರೆ. ಹಿಂದೆ ಸರ್ಕಾರಿ ವೈದ್ಯರು ಸರಕಾರಿ ನೌಕರರು ಯಾರೂ ತಮ್ಮ ಆಸ್ಪತ್ರೆಗೆ ಬೇಡ ಎಂದು ಜರೆದ ಅಬುಧಾಬಿಯ ದನಿ ಈಗ ಸರ್ಕಾರಿ ವೈದ್ಯರುಗಳಿಗೆ ಮೊರೆ ಹೋಗಿರುವುದು ನಿಜವಾಗಲೂ ನಾಚಿಕೆಗೇಡು.

Leave a Reply

Your email address will not be published. Required fields are marked *