Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ರಾಜಕೀಯ ಪ್ರಜ್ಞೆಯೊಂದಿಗೆ ಪಕ್ಷರಹಿತ ರಾಜಕೀಯ ಹೋರಾಟ ನಡೆಯಲಿ: ಬಾರುಕೋಲು ರಂಗಸ್ವಾಮಿ

ಉಡುಪಿ: ದಲಿತರ ಶತ್ರುಗಳು ಯಾರು ಎಂಬುದನ್ನು ದಲಿತರು ತಿಳಿದುಕೊಳ್ಳುವುದು ಇಂದಿನ ತುರ್ತು ಅಗತ್ಯ. ಇದಕ್ಕೆ ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಸ್ಪಷ್ಟವಾದ ರಾಜಕೀಯ ಪ್ರಜ್ಞೆಯೊಂದಿಗೆ ರಾಜಕೀಯ ಮಾಡುವ ಕೆಲಸ ದಲಿತರಿಂದಾಗಬೇಕು. ರಾಜಕೀಯ ಮಾಡುವುದೆಂದರೆ ಪಕ್ಷ ರಾಜಕಾರಣ ಮಾಡುವುದಲ್ಲ, ಪಕ್ಷಗಳ ಹಿಂದೆ ಹೋಗದೆ ರಾಜಕೀಯ ಹೋರಾಟ ನಡೆಸುವಂತಾಗಬೇಕು ಎಂದು ಮೈಸೂರಿನ ‘ಬಾರುಕೋಲು’ ಪತ್ರಿಕೆಯ ಸಂಪಾದಕರೂ, ಜನಪರ ಹೋರಾಟಗಾರರೂ, ಚಿಂತಕರೂ ಆದ ಬಿ.ಆರ್.ರಂಗಸ್ವಾಮಿ ಅವರು ಹೇಳಿದರು.

ಉಡುಪಿಯ ಅಂಬೇಡ್ಕರ್ ಯುವಸೇನೆಯು ಡಿಸೆಂಬರ್ 23ರಂದು ಉಡುಪಿ ಬನ್ನಂಜೆಯಲ್ಲಿ ಆಯೋಜಿಸಿದ ಅಂಬೇಡ್ಕರ್ ಯುವಜನೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡುತ್ತಿದ್ದರು.

ದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯ, ಅತ್ಯಾಚಾರ, ಅವಮಾನ ಹಿಂದಿಗಿಂತ ಇಂದು ಹೆಚ್ಚಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದ ಬಾರುಕೋಲು ರಂಗಸ್ವಾಮಿಯವರು, ಇದನ್ನೆಲ್ಲ ತಡೆಗಟ್ಟಬೇಕಾದರೆ, ಸಾವಿನ ಹಾದಿ ದಲಿತರಾಗಬಾರದು ಎಂದಾದರೆ ದಲಿತರು ನರಿ, ತೋಳಗಳಾಗದೆ ಹುಲಿ, ಸಿಂಹಗಳಂತಾಗಬೇಕು. ಪ್ರತೀ ಗ್ರಾಮದಲ್ಲಿ ಅಂಬೇಡ್ಕರ್ ಯುವಸೇನೆಗಳು ಸ್ಥಾಪನೆಯಾಗಬೇಕು, ಅಂಬೇಡ್ಕರ್ ಅವರು ಸಾಗಿದ ದಾರಿಯಲ್ಲಿ ಸಾಗಬೇಕು ಎಂದು ಕರೆಕೊಟ್ಟರು.

ಮನುವಾದಿಗಳ ಸಂತಾನ ಅಪಶಕುನವಲ್ಲದೆ ಮತ್ತೇನೂ ಅಲ್ಲ. ಈ ಸಂತಾನ ಇದೀಗ ಅಲ್ಲಲ್ಲಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ಉಪಯೋಗಿಸುವ ಮೂಲಕ, ಅಂಬೇಡ್ಕರ್ ಅವರನ್ನು ದೈವತ್ವಕ್ಕೇರಿಸುವ ಮೂಲಕ ದಲಿತರ ವಿರುದ್ಧ ಷಡ್ಯಂತ್ರವನ್ನು ಹೆಣೆದಿದೆ. ಕೇಲವ ಭಾವಚಿತ್ರವನ್ನು ಮುನ್ನಲೆಗೆ ತರುವ ಮೂಲಕ, ದೈವತ್ವಕ್ಕೇರಿಸುವ ಮೂಲಕ ಅಂಬೇಡ್ಕರ್ ಅವರ ಸಿದ್ಧಾಂತವನ್ನು ನೀತಿಯನ್ನು ನಾಶಪಡಿಸುವ ಹುನ್ನಾರವನ್ನು ಮನುವಾದಿಗಳು ಅತ್ಯಂತ ವ್ಯವಸ್ಥಿತವಾಗಿ ನಡೆಸುತ್ತಿದ್ದಾರೆ ಎಂದು ಬಾರುಕೋಲು ರಂಗಸ್ವಾಮಿ ತಿಳಿಸಿದರು.

ಡಿಗ್ರಿಯಷ್ಟೇ ಮುಖ್ಯವಲ್ಲ. ಡಿಗ್ರಿಯ ಜೊತೆಗೆ ಅಂಬೇಡ್ಕರ್ ಯಾರು, ಅವರು ಯಾಕಾಗಿ ಹೋರಾಟ ನಡೆಸಿದರು, ಯಾರ ವಿರುದ್ಧ ಹೋರಾಟ ನಡೆಸಿದರು ಎಂಬಿತ್ಯಾದಿ ವಿಷಯಗಳನ್ನು ತಿಳಿದುಕೊಳ್ಳಬೇಕು. ದಲಿತರಿಂದ ಭೂಮಿ ಕಸಿದುಕೊಳ್ಳುವ ಹುನ್ನಾರವೂ ನಡೆಯುತ್ತಿದೆ. ಈ ಹುನ್ನಾರ ಬಲಿ ಚಕ್ರವರ್ತಿಯ ಕಾಲದಿಂದಲೇ ನಡೆದುಕೊಂಡುಬಂದಿದೆ. ಇದನ್ನೆಲ್ಲಾ ಮುಖ್ಯವಾಗಿ ದಲಿತ ಯುವಕ ಯುವತಿಯರು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ರಂಗಸ್ವಾಮಿ ಹೇಳಿದರು.

ಖ್ಯಾತ ಚಿಂತಕರಾದ ದಿನೇಶ್ ಅಮೀನ್ ಮಟ್ಟು ಅವರು ಅಂಬೇಡ್ಕರ್ ಯುವಸೇನೆಯ ನೂತನ ಲಾಂಛನವನ್ನು ಅನಾವರಣಗೊಳಿಸಿ ಮಾತನಾಡಿದರು. ದಲಿತ ಚಿಂತಕ ಜಯನ್ ಮಲ್ಪೆ ಪ್ರಸ್ತಾವನೆಗೈದರು. ಅಂಬೇಡ್ಕರ್ ಯುವಸೇನೆಯ ಅಧ್ಯಕ್ಷರಾದ ಹರೀಶ್ ಸಾಲ್ಯಾನ್ ಮಲ್ಪೆ ಅವರು ಅಧ್ಯಕ್ಷತೆ ವಹಿಸಿದ್ದರು.

ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಸಮುದಾಯದ ಆರು ಮಂದಿ ಸಾಧಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪ್ರಣಾಮ್ ಚಿಟ್ಪಾಡಿ (ಭಗವತೀ ನಾಸಿಕ್ ತಂಡ, ಚಿಟ್ಪಾಡಿ), ಮಂಜುನಾಥ ಕಿನ್ನಿಮೂಲ್ಕಿ (ರಕ್ತದಾನಿ), ಶ್ರೀಮತಿ ಬೇಬಿ ಟೀಚರ್ (ಮುಖ್ಯೋಪಾಧ್ಯಾಯಿನಿ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಸರಳೇಬೆಟ್ಟು, ಮಣಿಪಾಲ), ಶ್ರೀಮತಿ ಲಾವಣ್ಯ ನೇಜಾರು (ಕ್ರೀಡೆ), ಮಂಜುನಾಥ ಮೂಡುಬೆಟ್ಟು (ರಂಗಸಜ್ಜಿಕೆ) ಹಾಗೂ ಕು. ರಕ್ಷಿತಾ ಕೊರಂಗ್ರಪಾಡಿ (ಕರಾಟೆ) ಸನ್ಮಾನಿತರು. ಅಂಬೇಡ್ಕರ್ ಬ್ಲಡ್ ಬ್ಯಾಂಕ್ ಗೆ ಸಮಾರಂಭದಲ್ಲಿ ಚಾಲನೆ ನೀಡಲಾಯಿತು.

ಸಮಾವೇಶಕ್ಕೂ ಮೊದಲು ಕಪ್ಪೆಟ್ಟುವಿನಿಂದ ಹೊರಟು ಬ್ರಹ್ಮಗಿರಿ, ಅಜ್ಜರಕಾಡು, ಜೋಡುರಸ್ತೆ, ಕವಿ ಮುದ್ದಣ ಮಾರ್ಗ, ಸರ್ವಿಸ್ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ, ಶಿರಿಬೀಡು ಮಾರ್ಗವಾಗಿ ಸಮಾವೇಶದ ಸ್ಥಳವಾದ ಬನ್ನಂಜೆ ನಾರಾಯಣ ಗುರು ಸಭಾಂಗಣದ ವರೆಗೆ ಅಂಬೇಡ್ಕರ್ ರ್ಯಾಲಿ ನಡೆಯಿತು. ಸಮಾವೇಶದ ಬಳಿಕ ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

 

 

Leave a Reply

Your email address will not be published. Required fields are marked *