Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಜಾರ್ಜ್ ಫೆರ್ನಾಂಡಿಸ್: ಬದುಕು ಮತ್ತು ಹೋರಾಟ- ಒಂದು ಕಾಲದ ಒಡನಾಡಿ ಅಮ್ಮೆಂಬಳ ಆನಂದರ ಲೇಖನಿಯಲ್ಲಿ

  • ಅಮ್ಮೆಂಬಳ ಆನಂದ

# 1975-76-77 ಈ ಅವಧಿಯ ಇಪ್ಪತ್ತೊಂದು ತಿಂಗಳು ನಮ್ಮ ದೇಶದಲ್ಲಿ ಜಾರಿಯಲ್ಲಿದ್ದ ತುರ್ತುಪರಿಸ್ಥಿತಿಯಲ್ಲಿ ಮಿಂದು ಬೆಂದು ಬಳಲಿದ ಸಾವಿರಾರು ರಾಜಕೀಯ ಧುರೀಣರಲ್ಲಿ ಈ ಜಾರ್ಜ್ ಒಬ್ಬಾತ. ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿ 1975 ಜೂನ್ 25ರ ಮಧ್ಯರಾತ್ರಿಯಿಂದ ಹೇರಿದ ಆಪತ್ಕಾಲೀನ ತುರ್ತುಪರಿಸ್ಥಿತಿ 1977 ಮಾರ್ಚ್ 27ರ ವರೆಗೂ ಮುಂದುವರಿದಿತ್ತು. ಜನರ ಬದುಕಿನ ಎಲ್ಲಾ ಮೂಲಭೂತ ಹಕ್ಕುಗಳನ್ನು ಆಡಳಿತಶಾಹಿ ಮೊಟಕುಗೊಳಿಸಿದ್ದ ಅಂದಿನ ದುರಂತಕ್ಕೆ ಬಲಿಯಾದವರೆಂದರೆ ಇಂದಿರಾ ಕಾಂಗ್ರೆಸ್ಸನ್ನು ವಿರೋಧಿಸುತ್ತಿದ್ದವರು.

ನೆನಪಾದಂತೆ, ೧೯೪೨ ಆಗಸ್ಟ್೮ರ ಮಧ್ಯರಾತ್ರಿ ಅಂದಿನ ಬ್ರಿಟಿಷ್ ಸತ್ತೆ ಭಾರತದ ಪ್ರಮುಖ ರಾಜಕೀಯ ನಾಯಕರನ್ನು ಸಾವಿರ ಸಾವಿರ ಸಂಖ್ಯೆಯಲ್ಲಿ ಬಂಧಿಸಿ ತುರಂಗಕ್ಕೆ ಅಟ್ಟಿದಂಥ ದುರಂತವು ಅಕ್ಷರಶಃ 1975 ಜೂನ್ 24ರ ಮಧ್ಯರಾತ್ರಿ ನಮ್ಮ ಸ್ವತಂತ್ರ ಭಾರತದಲ್ಲಿ ಮರುಕಳಿಸಿತ್ತು. ಭಾರತವು 21 ತಿಂಗಳ ಕಾಲ ಸ್ವತಂತ್ರವಾಗಿದ್ದಿಲ್ಲ. ಅಂದಿನ ಭಯಂಕರ ಅತಂತ್ರ ಸ್ಥಿತಿಯನ್ನು ತಮ್ಮ ಹೋರಾಟಗಳ ಮೂಲಕ ಎದುರಿಸಿದವರಲ್ಲಿ ಮಂಗಳೂರಿನವರಾದ ಜಾರ್ಜ್‌ಫೆರ್ನಾಂಡಿಸರ ಹೆಸರು ಮುಂಚೂಣಿಯಾಗಿ ನಿಲ್ಲುತ್ತದೆ. ಅಂಥ ಶಕಪುರುಷ ಜಾರ್ಜ್ ಇದೇ 2018ರ ಜೂನ್ 3ರಂದು ತಮ್ಮ 88ರ ಹರೆಯವನ್ನು ದಾಟಿದರು.

ಮಂಗಳೂರಿನ ಬಿಜೈ ನಿವಾಸಿಗಳಾಗಿದ್ದ ಜಾನ್ ಮತ್ತು ಎಲಿಸ್ ದಂಪತಿಯ ಜ್ಯೇಷ್ಠ ಪುತ್ರ ಈ ಜಾರ್ಜ್. ಅವರ ತಂದೆ ಜಾನ್ 1983ರಲ್ಲಿ, ತಾಯಿ ಎಲಿಸ್ಸಾ 1993ರಲ್ಲಿ ಬೆಂಗಳೂರಿನಲ್ಲಿ ನಿಧನ ಹೊಂದಿದರು; ಅವರದು ವಯೋವೃದ್ಧಾಪ್ಯ ಸಹಜ ಸಾವು. ಈ ದಂಪತಿಗೆ ಜಾರ್ಜ್ ಸೇರಿದಂತೆ 6 ಮಂದಿ ಪುತ್ರರು; ಪುತ್ರಿಯರಿಲ್ಲ.

ಎಮರ್ಜೆನ್ಸಿ ಕಾಲದಲ್ಲಿ ಜಾರ್ಜರ ತಮ್ಮಂದಿರಾದ ಲಾರೆನ್ಸ್ ಮತ್ತು ಮೈಕಲ್ ಇವರ ಬಂಧನವೂ ಆಗಿತ್ತು. ಒಂದರ್ಥದಲ್ಲಿ ಈ ಕುಟುಂಬವು ತುರ್ತುಪರಿಸ್ಥಿತಿಯ ಅಗ್ನಿಕುಂಡದಲ್ಲಿ ಸಿಲುಕಿ ಮರುಹುಟ್ಟು ಪಡೆದವರೆಂದರೆ ತಪ್ಪಾಗದು. ಮೊದಲನೆಯ ತಮ್ಮ ಲಾರೆನ್ಸ್ ತುರ್ತು ಪರಿಸ್ಥಿತಿಯ ತರತರಹದ ಹಿಂಸೆಯನ್ನು ಅನುಭವಿಸಿ ತಮ್ಮ ಆರೋಗ್ಯವನ್ನು ಕಳೆದುಕೊಂಡರು.

ಬೆಂಗಳೂರಿನ ಸಾರ್ವಜನಿಕ ಬದುಕಿನಲ್ಲಿ ಅವರದು ದೊಡ್ಡ ಹೆಸರು. ಅಣ್ಣನಂತೆ ಸಮಾಜವಾದಿಯಾಗಿ ಶ್ರಮಜೀವಿಗಳ ಬದುಕಿನ ಉದ್ಧಾರಕ್ಕಾಗಿ ಬೇರೆ ಬೇರೆ ಸಂಘಟನೆಗಳಲ್ಲಿ ತೊಡಗಿಕೊಂಡಿದ್ದವರು. ಇವರಂತೆ ಅವರ ಅಮಾಯಕ ತಾಯಿ ಎಲಿಸ್ ಕೂಡ ಭೂಗತನಾಗಿದ್ದ ಜಾರ್ಜ್‌ರ ಸುಳಿವು ತಿಳಿಸದೆ ಇದ್ದ ಕಾರಣಕ್ಕಾಗಿ ಪೋಲಿಸರ ಚಿತ್ರಹಿಂಸೆಗೆ ಒಳಗಾದುದು ಇತಿಹಾಸ. ಚಲನಚಿತ್ರದ ಖ್ಯಾತನಾಮರುಗಳಲ್ಲಿ ಒಬ್ಬರಾದ ಪಟ್ಟಾಭಿರಾಮರೆಡ್ಡಿ-ಸ್ನೇಹಲತಾ ದಂಪತಿ ಹಾಗೂ ಅವರ ಮಗಳು ನಂದನಾ ಜಾರ್ಜ್ ಅವರ ಅಭಿಮಾನಿಗಳ ಗಣದಲ್ಲಿ ಅಗ್ರಗಣ್ಯರು. ಅದರಲ್ಲೂ ನಂದನ ತುರ್ತುಪರಿಸ್ಥಿತಿಯನ್ನು ಧಿಕ್ಕರಿಸದ್ದಲ್ಲದೇ ಜಾರ್ಜ್ ಅವರ ಎಲ್ಲಾ ತರದ ಚಟುವಟಿಕೆಗಳಿಗೆ ಆಸರೆಯಾಗಿ ನಿಂತವರು. ಆ ಕಾರಣದಿಂದ ಅವರೂ ಪೋಲಿಸರ ಕಾಟಕ್ಕೆ ಒಳಗಾಗಿದ್ದರು. ತಾಯಿ ಸ್ನೇಹಲತಾ ಜೈಲುವಾಸ ಅನುಭವಿಸಿದ್ದರಿಂದ ಮೊದಲೇ ಅನಾರೋಗ್ಯದಿಂದ ಇದ್ದ ಅವರಅಕಾಲ ಸಾವಿಗೂ ತುರ್ತುಪರಿಸ್ಥಿತಿಯೇ ಕಾರಣವೆಂದು ಬಗೆಯಲಾಗಿದೆ. ಮಗಳು ನಂದನ ಜಾರ್ಜರ ಅಂದಿನ ಬಳಗದಲ್ಲಿದ್ದ ಒಬ್ಬ ಧೀಮಂತ ಮಹಿಳೆ. ಅವರು ಬೆಂಗಳೂರಿನಲ್ಲಿ ಈಗ ಒಬ್ಬ ಪತ್ರಕರ್ತೆಯಾಗಿ ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಜನಪ್ರಿಯರಾಗಿದ್ದಾರೆ.

ಜಾರ್ಜರ ತಮ್ಮಂದಿರುಗಳಲ್ಲಿ ಹಿರಿಯ ಲಾರೆನ್ಸ್ ಫೆರ್ನಾಂಡಿಸ್ ಅವಿವಾಹಿತ. ಬೆಂಗಳೂರು ನಗರ ಪಾಲಿಕೆಗೆ ಸದಸ್ಯರಾಗಿಯೂ ಸೇವೆಸಲ್ಲಿಸಿ ಒಂದಾವರ್ತಿ ಮೇಯರ್ ಕೂಡ ಆಗಿದ್ದರು. ೨೦೦೫ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಅವರು ನಿಧನರಾದರು. ಸಹೋದರರೆಲ್ಲ ಸೇರಿ ‘ಲಾರೆನ್ಸ್ ಫೆರ್ನಾಂಡಿಸ್ ಪ್ರತಿಷ್ಠಾನ’ವನ್ನು ಹುಟ್ಟು ಹಾಕಿದ್ದಾರೆ. ಶಿಕ್ಷಣ ಆರೋಗ್ಯ ವಂಚಿತರ ಸೇವೆಗಾಗಿ ಈ ದತ್ತಿನಿಧಿಯ ಬಳಕೆ ಮುಂದುವರಿದಿದೆ.
‘ಮಿಸಾ’ ಎಮರ್ಜೆನ್ಸಿ ಕಾಲದ ಒಂದು ಅಗ್ನಿಕುಂಡದಂತೆ ಇತ್ತು. ಭಾರತದ ಆಂತರಿಕ ಭದ್ರತೆಯನ್ನು ಕಾದುಕೊಳ್ಳುವ ಈ ಕಾಯ್ದೆಯನ್ನು ಅಂದಿನ ಆಡಳಿತಶಾಹಿ ಮನಸ್ಸಿಗೆ ಬಂದಂತೆ ಉಪಯೋಗಿಸಿ ಸಹಸ್ರಾರು ನಿರಪರಾಧಿಗಳನ್ನು ಬಂಧಿಸಿ ಜೈಲಿಗೆ ಅಟ್ಟಿತ್ತು. ಜಾರ್ಜರ ಎರಡನೆಯ ತಮ್ಮ ಮೈಕಲ್ ಈ ಕಾಯ್ದೆಯಂತೆ ಬಂಧನಕ್ಕೆ ಒಳಗಾಗಿ 1975 ಡಿಸೆಂಬರ್‌ದಿಂದ 1977 ಮಾರ್ಚ್‌ವರೆಗೆ ಜೈಲುಶಿಕ್ಷೆ ಅನುಭವಿಸಿದರು. ಅವರು ಮಾಜಿ ಶಾಸಕ-ಒಂದು ಸಲ ಎಂ.ಎಲ್.ಎ. ಮತ್ತೊಂದು ಸಲ ಎಂ.ಎಲ್.ಸಿ. ಬೆಂಗಳೂರು ಕಾರ್ಮಿಕ ಸಂಘಟನೆಗಳಲ್ಲಿ ಅವರು ಕ್ರಿಯಾಶೀಲ. ೨೦೦೮ರಲ್ಲಿ ಬೆಂಗಳೂರಿನ ‘ಭಾರತ ಯಾತ್ರಾ ಕೇಂದ್ರ’ವು ಲೋಕನಾಯಕ ಜಯಪ್ರಕಾಶ ನಾರಾಯಣರ ಜನ್ಮದಿನ ಸಮಾರಂಭ ಆಚರಿಸಿ ಮೈಕಲ್ ಅವರಿಗೆ ‘ಜೆ.ಪಿ.ಪ್ರಶಸ್ತಿ’ ನೀಡಿ ಗೌರವಿಸಿದೆ.

ಮೂರನೆಯ ತಮ್ಮ ಪೌಲ್‌ಫೆರ್ನಾಂಡಿಸ್ ಉದ್ಯೋಗಾರ್ಥಿಯಾಗಿ ಕೆನಡಾದ ಟೊರಂಟೋದಲ್ಲಿ ಇದ್ದಾರೆ.ಅವರೂ ಟೊರಂಟೋ ನಗರದ ಸಾರ್ವಜನಿಕ ಬದುಕಿನಲ್ಲಿ ಕ್ರಿಯಾಶೀಲರಾಗಿದ್ದಾರೆ. ಅಣ್ಣನಿಗೆ ತಜ್ಞ ವೈದ್ಯಕೀಯ ಚಿಕಿತ್ಸೆಗಾಗಿ 2007 ಅಕ್ಟೋಬರ್-ನವೆಂಬರ್ ತಿಂಗಳು 24 ದಿನ ಟೊರಂಟೋದಲ್ಲಿ ತಮ್ಮ ಜೊತೆಗಿರಿಸಿ ಶುಶ್ರೂಷೆಗೆ ಒಳಪಡಿಸಿದ್ದ ವಿನಮ್ರ ಸಹೋದರನೀತ. ದಿಲ್ಲಿಯಲ್ಲಿರುವ ಅಣ್ಣನನ್ನು ಕಾಣುವುದಕ್ಕೆ ಟೊರಂಟೋ ದಿಲ್ಲಿ ಮಧ್ಯೆ ವಿಮಾನವೇರಿ ಬಂದುಹೋಗುತ್ತಿದ್ದ.

ನಾಲ್ಕನೆಯ ತಮ್ಮ ಅಲೋಶಿಯಸ್ ಫೆರ್ನಾಂಡಿಸ್ ಮುಂಬೈಯಲ್ಲಿದ್ದಾರೆ. ಐದನೆಯವ ರಿಚಾರ್ಡ್ ಫೆರ್ನಾಂಡಿಸ್ ಬೆಂಗಳೂರು ವಾಸಿ. ಇವರೆಲ್ಲರೂ ಅನ್ಯೋನ್ಯದಿಂದಿದ್ದು, ಅಣ್ಣ ಜಾರ್ಜ್ ಅವರ ಆರೋಗ್ಯ ಮತ್ತು ಅವರ ಕೌಟುಂಬಿಕ ತೊಂದರೆ ತಾಪತ್ರಯಗಳನ್ನು ನೀಗಿಸಲು ಪಡುವ ಪರಿಪಾಟಲು ಅವರ್ಣನೀಯ.

ಅಣ್ಣ ಜಾರ್ಜ್ ಅವರ ಆರೋಗ್ಯಸ್ಥಿತಿಯ ಬಗ್ಗೆ ನಾಲ್ವರು ಸಹೋದರರು ಜಂಟಿಯಾಗಿ 25-10-2010 ರಂದು ಹೊರಡಿಸಿದ ಒಂದು ಪತ್ರಿಕಾ ಪ್ರಕಟಣೆಯ ಸಾರಾಂಶ ಇಂತಿದೆ: –

2006-07 ರಲ್ಲಿ ಜಾರ್ಜ್ ಅವರಿಗೆ ಮರೆಗುಳಿ ತಟ್ಟಿದ್ದು ಬೆಳಕಿಗೆ ಬಂದಿತು. ದಿಲ್ಲಿಯಲ್ಲಿ ಅವರು ಅಕ್ಷರಶಃ ಏಕಾಕಿಯಾಗಿ ಅಸಹಾಯಕ ಸ್ಥಿತಿಯಲ್ಲಿರುವಾಗ ಅವರನ್ನು ಅವರ ಮತ್ತು ನಮ್ಮ ಅಭಿಮಾನಿಗಳೂ ಅವರ ವೈದ್ಯಕೀಯ ಉಪಚಾರವೂ ಸೇರಿದಂತೆ ಎಲ್ಲಾ ಅನುಕೂಲ ಕಲ್ಪಿಸಿ ನೋಡಿಕೊಳ್ಳುತ್ತಿದ್ದಾರೆ; ಅವರಲ್ಲಿ ಒಬ್ಬರು ಶ್ರೀಮತಿ ಜಯಾ ಜೇಟ್ಲಿ. ಸುಮಾರು ಎರಡು ದಶಕಗಳ ಪರ್ಯಂತ ಶ್ರೀಮತಿ ಜೇಟ್ಲಿ ನಮ್ಮ ಅಣ್ಣನ ಆಯ್ಕೆಯಂತೆ ರಾಜಕೀಯ ಮತ್ತು ವೈಯಕ್ತಿಕ ಜೀವನದ ಭಾಗವಾಗಿ ಅವರ ಜೊತೆಯಲ್ಲಿದ್ದವರು.

ಜಾರ್ಜ್ ಅವರಿಂದ ಪರಿತ್ಯಕ್ತರಾಗಿ ಇಪ್ಪತ್ತೈದು ವರ್ಷ ದೂರವೇ ಉಳಿದಿದ್ದ ಅಣ್ಣನ ಮಡದಿ ಲೈಲಾ ನಾಟಕೀಯವೆಂಬಂತೆ 2010 ಜನವರಿ 2ರ ರಾತ್ರಿ ಅಣ್ಣನವರ ಬಂಗಲೆಗೆ ಬಲವಂತವಾಗಿ ಪ್ರವೇಶಿಸಿ, ಅಣ್ಣನವರ ಅದುವರೆಗಿನ ಸಹಾಯಕರ, ಗೆಳೆಯರ ಸಂಪರ್ಕ ತಪ್ಪುವಂತೆ ಮಾಡಿದರು. ಆ ಘಟನೆಯು ಒಂದು ದಂಗೆಯಂತಿದ್ದು ಅದನ್ನು ಕಾನೂನುಬದ್ಧವಾಗಿಸಲೆಂಬಂತೆ ಮರುಮಧ್ಯಾಹ್ನ ತಮ್ಮ ಸ್ನೇಹಿತರನ್ನು ಆ ಬಂಗಲೆಯಲ್ಲಿ ಏರ್ಪಡಿಸಿದ್ದ ಪಾರ್ಟಿಗೆ ಆಮಂತ್ರಿಸಿ ಜಾರ್ಜ್ ಅವರೊಂದಿಗೆ ಫೊಟೋ ಸೆಷನ್ ಕೂಡ ನಡೆಸಿ ಸಂಭ್ರಮಿಸಿದರು.

ತಮ್ಮ ಅಣ್ಣನನ್ನು ಅವರ ವಿಶ್ವಾಸದ ಸಹಚರರಿಂದ ದೂರವಿರಿಸುವ ಲೈಲಾ ಅವರ ಈ ಹುನ್ನಾರು ಮೊದಲೇ ರೋಗಗ್ರಸ್ಥರಾಗಿದ್ದ ಅವರ ಪ್ರಕೃತಿಯಲ್ಲಿ ಪ್ರತಿಕೂಲ ಪರಿಣಾಮವನ್ನುಂಟು ಮಾಡಬಹುದೆನ್ನುವ ಭೀತಿಯನ್ನು ಈ ಪ್ರಕಟಣೆಯಲ್ಲಿ ವ್ಯಕ್ತಪಡಿಸಿದರು; ಆದರೆ ಇದಕ್ಕೆ ಹೆಚ್ಚಿನ ಪ್ರಚಾರ ಸಿಕ್ಕಿದಂತಿಲ್ಲ. ಮುಂದಿನ ದಿನಗಳಲ್ಲಿ ಜಾರ್ಜರ ಆರೋಗ್ಯದ ಬಗ್ಗೆ ಯಾರಿಗೂ ಏನೂ ತಿಳಿಯದಂತಾಯಿತು.

ಇತ್ತೀಚೆಗೆ ದಿಲ್ಲಿಯಲ್ಲಿ ಜಾರ್ಜ್ ಅವರ ಬಗ್ಗೆ ಒಂದು ರೋಚಕ ಸುದ್ದಿ ಪ್ರಕಟವಾಯಿತು (ವಿಜಯ ಕರ್ನಾಟಕ 2013 ಜುಲೈ 1ರ ಸಂಚಿಕೆಯ ಪುಟ 8) ಅದರ ಸಾರಾಂಶ ಹೀಗಿತ್ತು;ಫೆರ್ನಾಂಡಿಸ್ ಸಹೋದರರಾದ ರಿಚರ್ಡ್ ಮತ್ತು ಮೈಕಲ್ ಅವರು ಜಾರ್ಜ್ ನಿಕಟವರ್ತಿ ಜಯಾ ಜೇಟ್ಲಿ ಜತೆ ತಮಗೆ ಸೇರಿದ ಪುಸ್ತಕ, ಕಲಾಕೃತಿ ಹಾಗೂ ಪೀಠೋಪಕರಣಗಳನ್ನು ತರಲು ಕೃಷ್ಣ ಮೆನನ್ ಮಾರ್ಗದಲ್ಲಿರುವ ನಿವಾಸಕ್ಕೆ ತೆರಳಿದರು. ಆದರೆ ಮನೆ ಉಸ್ತುವಾರಿ ಹೊತ್ತಿರುವ ಎಸ್.ಡಿ.ಸಿಂಗ್ ಪ್ರವೇಶ ನೀಡಲು ನಿರಾಕರಿಸಿದ್ದರಿಂದ ಪೊಲೀಸರು ಅವರ ಪ್ರವೇಶಕ್ಕೆ ತಡೆ ಒಡ್ಡಿದರು.
ಪೊಲೀಸರ ಈ ಕ್ರಮ ಸದಾ ಬಾಗಿಲು ತೆರೆದಿರುತ್ತಿದ್ದ ಜನ ನಾಯಕನ ವ್ಯಕ್ತಿತ್ವಕ್ಕೆ ಮಸಿ ಬಳಿಯುವಂತಿದೆ ಎಂದು ಜಯಾ ಪ್ರತಿಕ್ರಿಯಿಸಿದರು. ‘ಜಯಾ ಒಳಗೆ ಬರಲು ನಮ್ಮದೇನೂ ಆಕ್ಷೇಪವಿಲ್ಲ, ಆದರೆ ಅವರು ಫೆರ್ನಾಂಡಿಸ್ ಸಹೋದರರ ಜೊತೆ ಬಂದರೆ ಪ್ರವೇಶ ನೀಡಲಾಗದು’ ಎಂದು ಸಿಂಗ್ ತಿಳಿಸಿದರು. ಸದ್ಯ ಪಂಚಶೀಲ ಪಾರ್ಕಿನಲ್ಲಿರುವ ತಮ್ಮ ಅಣ್ಣನನ್ನು ಸಹೋದರರಿಗೆ ಕಾಣುವುದಕ್ಕೆ ಕೋರ್ಟು ಶರತ್ತುಬದ್ಧ ಅನುಮತಿ ನೀಡಿದೆಯಂತೆ.

ಈ ಸುದ್ದಿಯ ಬಳಿಕ ಜಾರ್ಜ್ ಅವರ ದೇಹಾರೋಗ್ಯದ ಬಗ್ಗೆ ಸಾರ್ವಜನಿಕರಿಗೆ ಏನೂ ತಿಳಿಯದಾಗಿದೆ. ಇವು ಜಾರ್ಜ್ ಫೆರ್ನಾಂಡಿಸ್ ಕುಟುಂಬದ ಪ್ರಸ್ತುತ ಇಹಪರ.

ಮೇಲೆ ವಿವರಿಸಿದ ಹಿನ್ನೆಲೆಯನ್ನು ಇಟ್ಟುಕೊಂಡು ಜಾರ್ಜ್ ಅವರ ಸಹಪಾಠಿಯೂ ಸಮಾಜವಾದಿ ಗೆಳೆಯನೂ ಆದ ಈ ಲೇಖಕ ಅವರ ೮೪ನೆಯ ಹುಟ್ಟುದಿನದ ಸಂದರ್ಭದಲ್ಲಿ ಅವರ ಬದುಕಿನತ್ತ ಹೊರಳುನೋಟ ಬೀರಲು ಯತ್ನಿಸಿದ್ದಾನೆ.

ಈ ಫೆರ್ನಾಂಡಿಸ್ ಕುಟುಂಬ ಮೂಲತಃ ಮಂಗಳೂರಿನದು. ಬಿಜೈಯಲ್ಲಿ ಜಾನ್‌ಫೆರ್ನಾಂಡಿಸ್ ಕುಟುಂಬ ಸಹಿತ ವಾಸವಾಗಿದ್ದು ಸಣ್ಣಪುಟ್ಟ ವ್ಯವಹಾರ ಹಾಗೂ ವಿವಿಧ ಏಜೆನ್ಸಿಗಳನ್ನು ಪಡೆದು ಬಂದ ಪ್ರಾಪ್ತಿಯಿಂದ ದೊಡ್ಡದೇ ಎನ್ನಬಹುದಾದ ತಮ್ಮ ಸಂಸಾರವನ್ನು ನಿಯತ್ತಿನಿಂದ ನಡೆಸುತ್ತಿದ್ದರು. ಮಡದಿ-ಮಕ್ಕಳು ತಮ್ಮ ಮನೆಯ ದೊಡ್ಡ ಆವರಣದಲ್ಲಿ ತರಕಾರಿ ಮತ್ತು ಮಲ್ಲಿಗೆ ಗಿಡ ಬೆಳೆಸಿ ಅವುಗಳನ್ನು ಮಾರಿ ಬಂದ ಹಣದಿಂದ ಕುಟುಂಬ ನಿರ್ವಹಣೆಗೆ ಪೂರಕ ಬೆಂಬಲ ನೀಡುತ್ತಿದ್ದರು. ಮಕ್ಕಳು ತಮ್ಮ ಓದಿನ ಜೊತೆಗೆ ಶ್ರಮಸಂಸ್ಕೃತಿಯನ್ನು ತಮ್ಮ ಜೀವನಶೈಲಿಯನ್ನಾಗಿ ಮಾಡಿಕೊಂಡಿದ್ದರು. (ಆ ಕಾಲದಲ್ಲಿ ‘ಮಂಗಳೂರು ಮಲ್ಲಿಗೆ’ಯ ಕಂಪು ಜಗತ್ತಿಗೆಲ್ಲಾ ಬಿತ್ತರವಾಗುವಂತೆ ಮಾಡಿದವರೇ ರೋಮನ್ ಕ್ಯಾಥೋಲಿಕರು. ತಮ್ಮ ತಮ್ಮ ತೋಟಗಳಲ್ಲಿ ಮಲ್ಲಿಗೆ ಗಿಡಗಳು ಆಗ ನಳನಳಿಸುವಂತೆ ಮಾಡಿದ್ದರೆಂಬುದು ಉಲ್ಲೇಖನೀಯ).
ಜಾನ್ ಫೆರ್ನಾಂಡಿಸ್ ಅವರ ಕುಟುಂಬವು ಸುಮಾರು ೬೦ರ ದಶಕದಲ್ಲಿ ಬೆಂಗಳೂರಿಗೆ ವರ್ಗಾಯಿಸಿಕೊಂಡಿತ್ತು.
* * *
ಮಂಗಳೂರಿನಲ್ಲಿರುವಾಗ ಜಾನ್‌ಫೆರ್ನಾಂಡಿಸ್ ಅವರ ಹಿರಿಯ ಮಗ ಜಾರ್ಜ್ ತನ್ನ ಶಿಕ್ಷಣವನ್ನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಎಸ್.ಎಸ್.ಎಲ್.ಸಿ ವರೆಗೆ ಮಾಡಿದರು. ಆತನನ್ನು ಒಬ್ಬ ಪಾದ್ರಿಯನ್ನಾಗಿ ಮಾಡಿ ಧರ್ಮದ ಸೇವೆಗೆ ಮೀಸಲಿಡಬೇಕೆಂದು ತಂದೆ ಬಯಸಿದರು; ಮತ್ತು ಬೆಂಗಳೂರಿಗೆ ಕಳಿಸಿ ಸೆಮಿನರಿಯೊಂದರಲ್ಲಿ ಸೇರಿಸಿದರು. ಜಾರ್ಜ್ ಧರ್ಮದೀಕ್ಷೆ ಹೊಂದಲು ಸೆಮಿನರಿಯಲ್ಲಿ ಇದ್ದರೂ ಕೂಡ ಅದು ಆತನ ಮನೋವೃತ್ತಿಗೆ ಒಗ್ಗದಾಯಿತು. ತಲೆಚಿಟ್ಟು ಹಿಡಿದ ಜಾರ್ಜ್ 1948ರಲ್ಲಿ ಬೆಂಗಳೂರು ಬಿಟ್ಟು ಮಂಗಳೂರಿಗೆ ಮರಳಿದರು. ಆದರೆ ಮಗನ ಮೇಲೆ ಕುಪಿತರಾದ ತಂದೆ ಜಾನ್ ಮಗನು ಧರ್ಮದ್ರೋಹ ಬಗೆದನೆಂದು ತಮ್ಮ ಮನೆಗೆ ಸೇರಿಸಿಕೊಳ್ಳಲು ಒಪ್ಪದಾದರು.
ತಾನಿನ್ನು ಏನು ಮಾಡಲಿ ಎಂದು ತಿಳಿಯದಾದ ಈ 18ರ ತರುಣ ಮಂಗಳೂರು ಪೇಟೆಯಲ್ಲಿ ಒಬ್ಬ ಅನಾಥನಂತೆ ಅಲೆದಾಡುವ ಪರಿಸ್ಥಿತಿ. ರಾತ್ರಿ ಕಳೆಯಲು ಆಶ್ರಯವಿಲ್ಲ, ಹಸಿದ ಹೊಟ್ಟೆಯಲ್ಲೇ ಸೆಂಟ್ರಲ್ ಮೈದಾನದ ರೇಡಿಯೋಸಜ್ಜಿತ ಉದ್ಯಾನವನದಲ್ಲಿನ ಒಂದು ಸಿಮೆಂಟು ಬೆಂಚಿನ ಮೇಲೆ ನಿದ್ದೆಗೆ ಶರಣಾದನು.

ಫೆಲಿಕ್ಸ್‌ಪೈ ಬಜಾರಿನ ಮಾಳಿಗೆಯಲ್ಲಿದ್ದ ಸಮಾಜವಾದಿ ಪಕ್ಷದ ಕಾರ್ಯಾಲಯದಲ್ಲಿ ತಮ್ಮ ನಿತ್ಯದ ಕೆಲಸ ತೀರಿಸಿ ಅಮ್ಮೆಂಬಳ ಬಾಳಪ್ಪ ಆ ರಾತ್ರಿ ಸೆಂಟ್ರಲ್ ಮೈದಾನ ಹಾದು ಪೋಲಿಸ್ ಲೈನ್‌ನ ಪಕ್ಕ ಇರುವ ದುರ್ಗಾದೇವಿ ದೇವಸ್ಥಾನಕ್ಕೆ ತಮಗಾಗಿ ಏರ್ಪಡಿಸಿಕೊಂಡಿದ್ದ ವಾಸ್ತವ್ಯದ ಕೋಣೆಗೆ ಹೋಗುತ್ತಿದ್ದರು. ತಮ್ಮ ಜೊತೆಗಿದ್ದ ಯುವಕನೊಬ್ಬ ಸಿಮೆಂಟ್ ಬೆಂಚಿನಲ್ಲಿ ಮಲಗಿದ್ದ ತರುಣನತ್ತ ಬಾಳಪ್ಪ ಅವರ ಗಮನಸೆಳೆದ.
ಇಬ್ಬರೂ ಮಲಗಿದ್ದ ತರುಣ ಯಾರಿರಬಹುದೆಂದು ತಿಳಿಯಲು ಆತನನ್ನು ಎಬ್ಬಿಸಿದರು. ಬಾಳಪ್ಪ, ಈತ ಜಾರ್ಜ್‌ಫೆರ್ನಾಂಡಿಸ್ ಎಂದು ಗೊತ್ತಾದೊಡನೆ ಅವನ ಪರಿಸ್ಥಿತಿಯ ಬಗ್ಗೆ ಅರಿತುಕೊಂಡು ತಮ್ಮ ಜೊತೆಗೆ ಅವರ ಬ್ರಹ್ಮಚಾರಿ ಕೋಣೆಗೆ ಕರೆದೊಯ್ದರು. ಬಾಳಪ್ಪ ಅವರಿಗೆ ಜಾರ್ಜ್ ಅವರ ತಂದೆ ಜಾನ್ ಅವರ ಪರಿಚಯ ಚೆನ್ನಾಗಿತ್ತು.

ಬಾಳಪ್ಪ ಅವರು 1942ರ ಚಲೇಜಾವ್ ಆಂದೋಲನದಲ್ಲಿ ನಿರತರಿದ್ದಾಗ ಅವರ ವಾಸ್ತವ್ಯ ಬಿಜೈಯಲ್ಲೇ.ಈ ಲೇಖಕನ ಮನೆಯಲ್ಲಿ. ಅವರು ತಮ್ಮ ರಾತ್ರಿ ವಾಸ್ತವ್ಯಕ್ಕಾಗಿ ನಮ್ಮಲ್ಲಿಗೆ ಬರುತ್ತಿದ್ದರು. ಆ ಅವಧಿಯಲ್ಲಿ ಬಾಳಪ್ಪ ಅವರಿಗೆ ಜಾನ್‌ಫೆರ್ನಾಂಡಿಸ್ ಅವರ ಗೆಳೆತನವೂ ಕುದುರಿತ್ತು.
ಮರುಬೆಳಿಗ್ಗೆ ಬಾಳಪ್ಪ ಜಾರ್ಜ್ ಅವರನ್ನು ತನ್ನ ಜೊತೆಗಿಟ್ಟುಕೊಂಡು ಬಿಜೈಗೆ ಹೋಗಿ ತಂದೆ ಮತ್ತು ಮಗನ ಮಧ್ಯೆ ಹೊಂದಾಣಿಕೆ ಮಾಡಲು ಪ್ರಯತ್ನಿಸಿದರು. ಧರ್ಮಬೀರು ಜಾನ್‌ಫೆರ್ನಾಂಡಿಸ್ ಮಗನನ್ನು ಮನೆಗೆ ಸೇರಿಸಲು ಒಪ್ಪದಾದರು. ಬಾಳಪ್ಪ, ‘ಜಾರ್ಜ್ ನೀನು ನನ್ನ ಜೊತೆಗೇ ಇರು ಮುಂದೇನಾಗುತ್ತದೋ ನೋಡೋಣ’ ಎಂದು ಮರಳಿ ಕರೆದುಕೊಂಡು ಬಂದರು. ಸಂಜೆಯಾಗುತ್ತಲೇ ತಮ್ಮ ನಿತ್ಯದ ಪರಿಪಾಠದಂತೆ ಜಾರ್ಜ್ ಅವರನ್ನು ತಮ್ಮ ಜೊತೆಗೆ ಇಟ್ಟುಕೊಂಡೇ ಹಂಪನಕಟ್ಟೆಯಲ್ಲಿದ್ದ ಡಾ| ಕೆ. ನಾಗಪ್ಪ ಆಳ್ವರ ದವಾಖಾನೆಗೆ ಹೋದರು. ಅಂದಿನ ದಿನಗಳಲ್ಲಿ ನಾಗಪ್ಪ ಆಳ್ವರ ಡಿಸ್ಪೆನ್ಸರಿ ಎಂದರೆ ಸಂಜೆಯಾಗುತ್ತಲೇ ರಾಜಕೀಯ ಕಾರ್ಯಕರ್ತರು ಉಭಯಕುಶಲೋಪರಿಗಾಗಿ ಒಂದೆಡೆ ಸೇರುವ ತಾಣವಾಗಿತ್ತು.
(ದಿವಂಗತ ಡಾ| ನಾಗಪ್ಪ ಆಳ್ವ ದಶಕಗಳ ಹಿಂದೆ ಬೆಂಗಳೂರಿಗೆ ಹೋಗಿ ಅಲ್ಲಿ ಸ್ಥಾಯಿಕರಾದುದಲ್ಲದೆ, ರಾಜಕೀಯವಾಗಿ ಉತ್ತುಂಗಕ್ಕೆ ಏರಿದರು. ನಿಜಲಿಂಗಪ್ಪ ಮಂತ್ರಿಮಂಡಲದಲ್ಲಿ ಆರೋಗ್ಯ ಇಲಾಖೆಯ ಮಂತ್ರಿಯೂ ಆಗಿದ್ದರು. ಮೇಲಾಗಿ, ಲೋಕ ನಾಯಕ ಜಯಪ್ರಕಾಶ ನಾರಾಯಣ ಅವರ ಸಾವಿನ ಕುರಿತು ತನಿಖೆ ನಡೆಸಲು ನೇಮಿಸಲಾಗಿದ್ದ ಆಯೋಗದ ಅಧ್ಯಕ್ಷರೂ ಆಗಿದ್ದರು.) ಆಗ ಅವರು ರಾಜ್ಯಸಭೆಯ ಸದಸ್ಯರೂ ಆಗಿದ್ದರು.

ಬಾಳಪ್ಪ ಜಾರ್ಜ್‌ರ ಜೊತೆಗೆ ಆಳ್ವ ಅವರ ಬಿಡುವಿನಲ್ಲಿ ಭೇಟಿಯಾದರು ಮತ್ತು ತಮ್ಮ ಸಂಗಡ ಇರುವ ಜಾರ್ಜ್ ಫೆರ್ನಾಂಡಿಸ್ ಅವರ ಬಗ್ಗೆ ಎಲ್ಲ ವಿವರ ಕೊಟ್ಟರು. ತಾಳ್ಮೆಯಿಂದ ಕೇಳಿದ ಡಾ|| ಆಳ್ವ ಜಾರ್ಜ್ ಏನೂ ಹೆದರಬೇಡ, ನಾವಿದ್ದೇವೆ ಎಂದರು. ಹಾಗೆಯೇ ತಮ್ಮ ಫೋನಿನಿಂದ ದರ್ಜಿ ಒಬ್ಬನನ್ನು ಸಂಪರ್ಕಿಸಿ ಕರೆಸಿಕೊಂಡರು. ಜಾರ್ಜ್ ಅವರಿಗೆ ಎರಡು ಜೋಡಿ ಶರ್ಟು, ಪ್ಯಾಂಟು ಹೊಲಿಸಿಕೊಡಿ ಎಂದು ಹೇಳಿದರು. ಅಷ್ಟು ಮಾತ್ರವಲ್ಲ, ತಮ್ಮ ಪರಿಚಯದ ಹೊಟೇಲೊಂದಕ್ಕೆ ದೂರವಾಣಿಯಲ್ಲಿ ಮಾತನಾಡಿ, ಜಾರ್ಜ್ ಎಂಬಾತ ನಿಮ್ಮಲ್ಲಿಗೆ ಬರುತ್ತಾರೆ; ಅವರು ಬಂದಾಗಲೆಲ್ಲ ಅವರಿಗೆ ಊಟ-ಉಪಹಾರ ನೀಡಿ ಅದರ ಬಿಲ್ಲನ್ನು ತಿಂಗಳಾಂತ್ಯಕ್ಕೆ ಬಂದು ನನ್ನಿಂದ ಪಡೆಯಿರಿ ಎಂದರು. (ಈ ವಿವರವನ್ನು ನನ್ನ ಬಂಧುಗಳಾದ ದಿವಂಗತ ಬಾಳಪ್ಪ ನನಗೆ ಆ ಕಾಲದಲ್ಲೇ ಕೊಟ್ಟದ್ದಿದೆ).

ಸಮಾಜವಾದಿ ಧುರೀಣ ಅಮ್ಮೆಂಬಳ ಬಾಳಪ್ಪ ಅವರ ಸಹವಾಸ ಜಾರ್ಜ್ ಅವರಿಗೆ ನಿರಾಯಾಸವಾಗಿ ದೊರಕಿತ್ತು. ಫೆಲಿಕ್ಸ್‌ಪೈ ಬಜಾರಿನಲ್ಲಿದ್ದ ವಿವಿಧ ಕಾರ್ಮಿಕ ಸಂಘಗಳಲ್ಲಿ ಜಾರ್ಜ್ ಕೂಡ ತೊಡಗಿಸಿಕೊಂಡರು ಮತ್ತು ಪಕ್ಷದ ಕಾರ್ಯಚಟುವಟಿಕೆಗೆ ಪ್ರಚಾರವೂ ಬೇಕು ಎಂದು ತಾನೇ ಒಂದು ಇಂಗ್ಲಿಷ್ ಸಾಪ್ತಾಹಿಕವನ್ನೂ ಹುಟ್ಟುಹಾಕಿದರು. ಪತ್ರಿಕೋದ್ಯಮದ ಗೀಳು ಜಾರ್ಜ್ ಅವರನ್ನು ತಾವು ಹಿಂದೆ ಕೊಂಕಣಿಯಲ್ಲಿ ‘ಕೊಂಕಣಿಯುವಕ್’ ಎಂಬ ಒಂದು ನಿಯತಕಾಲಿಕವನ್ನು ಹೊರಡಿಸಿದಾಗಲೇ ಅಂಟಿಕೊಂಡಿತ್ತು.

ಕಾರ್ಮಿಕ ಹೋರಾಟಗಾರ ‘ಓಂ ನಾಮ’ವನ್ನು ಜಾರ್ಜ್ ಕಲಿತದ್ದೇ ಬಾಳಪ್ಪ ಅವರ ಒಡನಾಟದಲ್ಲಿ. ಬಾಳಪ್ಪರ ನೇತೃತ್ವದಲ್ಲಿದ್ದ ಹೊಟೇಲ್ ಕಾರ್ಮಿಕರ ಸಂಘವು ದೊಡ್ಡ ಹೊಟೇಲುಗಳ ಮುಂದೆ ಕೆಲಸಗಾರರ ಬೇಡಿಕೆ ಈಡೇರುವ ಸಲುವಾಗಿ ಧರಣಿ ಕುಳಿತುಕೊಳ್ಳುವ ಘಟನೆಗಳು ಆಗಾಗ ಸಂಭವಿಸುತ್ತಿದ್ದವು. ಇವುಗಳಲ್ಲಿ ಬಾಳಪ್ಪ ಅವರ ಜೊತೆಗೆ ಜಾರ್ಜ್ ಸೇರುವುದೂ ಇತ್ತು. ದೊಡ್ಡ ದೊಡ್ಡ ಹೊಟೇಲ್‌ಗಳ ಮಾಲಕರನ್ನು ಎದುರು ಹಾಕಿಕೊಂಡು ಹೋರಾಡಿದ ಇವರು ಆಗಾಗ ಧರಣಿಗಳನ್ನು ನಡೆಸಿ ಗುಂಡಾಗಳಿಂದ ಹಲ್ಲೆಗೂ ಕೂಡಾ ಒಳಗಾದದ್ದುಂಟು.

ಅತ್ತ ಮುಂಬೈಯಲ್ಲಿ ಕಾರ್ಮಿಕರ ಹೋರಾಟಗಳು ಉಲ್ಬಣಿಸುತ್ತಿದ್ದವು (1948-51). ಮುಷ್ಕರ, ರಸ್ತೆ ತಡೆ, ಹರತಾಳ ಮುಂತಾದವು ಅನುದಿನದ ಕಥೆಯಾದವು. ಸರಕಾರಕ್ಕೆ ಇದು ದೊಡ್ಡ ತಲೆಬೇನೆಯಾಗಿ, ಅಂದಿನ ಗೃಹಮಂತ್ರಿ ಮುರಾರ್ಜಿ ದೇಸಾಯಿ ನಾಲ್ವರು ಕಾರ್ಮಿಕ ಧುರೀಣರನ್ನು ಮುಂಬೈಯಿಂದ ಗಡಿಪಾರು ಮಾಡಿಸಿದರು. ಅವರಲ್ಲಿ ಒಬ್ಬಾತ ಮಂಗಳೂರಿನ ಪಿ.ಡಿ’ಮೆಲ್ಲೋ. ಅವರು ಗಡಿಪಾರಿನ ಶಿಕ್ಷೆಯಿಂದಾಗಿ ತಮ್ಮ ಸ್ವ ಊರಿಗೆ ಬಂದು ಉಳಿದರು. ಮತ್ತು ಮಂಗಳೂರಿನ ಸಮಾಜವದೀ ಧುರೀಣರೊಂದಿಗೆ ತಾವೂ ಸೇರಿಕೊಂಡು ಕಾರ್ಮಿಕ ಚಳುವಳಿಗೆ ಇನ್ನಷ್ಟು ಶಕ್ತಿ ನೀಡಿದರು. ಏಕಾಕಿಯಾಗಿದ್ದ ಡಿ’ಮೆಲ್ಲೋ ಜಾರ್ಜ್ ಫೆರ್ನಾಂಡಿಸ್ ಅವರನ್ನು ತಮ್ಮ ಜೊತೆಗಾರನನ್ನಾಗಿ ಇಟ್ಟುಕೊಂಡರು.

ಒಂದರ್ಥದಲ್ಲಿ ಮುಂಬೈಯಿಂದ ಗಡಿಪಾರು ಹೊಂದಿದ ಡಿ’ಮೆಲ್ಲೊ, ಎಸ್.ಆರ್.ಕುಲಕರ್ಣಿ ಮುಂತಾದವರನ್ನು ಕರ್ನಾಟಕವು ಅವರ ಹದ್ದುಪಾರು ರದ್ದಾಗುವವರೆಗೂ ತನ್ನೊಂದಿಗೆ ಆಗ ಇಟ್ಟುಕೊಂಡದ್ದು ವಿಶೇಷ. ಕರ್ನಾಟಕಕ್ಕೆ ಪ್ರವಾಸಾರ್ಥ ಬಂದಿದ್ದ ಮುಂಬೈಯ ಕಾರ್ಮಿಕ ಮುಖಂಡ ಹಾಗೂ ಸಮಾಜವಾದಿ ಪಕ್ಷದ ಧುರೀಣ ಅಶೋಕ ಮೆಹತಾ ಈ ನಾಲ್ವರು ‘ಗಡಿಪಾರು-ಸಂತ್ರಸ್ತರು’ಗಳನ್ನು ಸಂಗಡ ಇಟ್ಟುಕೊಂಡು ತಾವು ಹೋದಲ್ಲೆಲ್ಲಾ ಸಾರ್ವಜನಿಕ ಸಭೆಗಳಲ್ಲಿ ಅವರನ್ನು ಜನತೆಗೆ ತೋರಿಸುತ್ತ ‘ಕಾಂಗ್ರೆಸ್ ಸರಕಾರ ಕಾರ್ಮಿಕ ವಿರೋಧಿ’ ಎಂದು ಬಿಂಬಿಸುತ್ತಿದ್ದರು. ಆ ಕಾಲದಲ್ಲಿ ಅಶೋಕ ಮೆಹತಾ ಮುಂಬಯಿಯಲ್ಲಿಕಾರ್ಮಿಕ ವರ್ಗದ ಕಣ್ಮಣಿಯಾಗಿ ಒಬ್ಬ ಅನಭಿಷಕ್ತ ದೊರೆಯಂತೆ ಮೆರೆದದ್ದುಂಟು. ಈ ಪರಂಪರೆಗೆ ಒಂದು ಇತಿಹಾಸವಿದೆ. ಒಂದು ಕಾಲದಲ್ಲಿ ಕಮ್ಯೂನಿಸ್ಟ್ ಧುರೀಣ ಎಸ್.ಎ. ಡಾಂಗೆಯವರಿಗೆ ಆ ಕೀರ್ತಿ ಇತ್ತು. ನಂತರದ ಸ್ಥಾನ ಅಶೋಕ ಮೆಹತಾ ಅವರದ್ದು. ಆ ನಂತರ ಇಲ್ಲಿಯ ಕಥಾನಾಯಕ ಜಾರ್ಜ್ ಫೆರ್ನಾಂಡಿಸ್ ಅವರದ್ದಾಗಿತ್ತು.

ಅದು ಹೇಗಾಯಿತು ಎಂಬ ಬಗ್ಗೆ ತಿಳಿಯೋಣ. ಮೇಲೆ ಹೇಳಿದಂತೆ ಪಿ.ಡಿ’ಮೆಲ್ಲೊ ಮಂಗಳೂರಿನಲ್ಲಿದ್ದಾಗ ಸಮಾಜವಾದಿ ಪಕ್ಷದ ನೇತೃತ್ವದ ಕಾರ್ಮಿಕ ಸಂಘಟನೆಗಳು ಚುರುಕುಗೊಂಡವು. ಅವುಗಳಲ್ಲಿ ಒಂದು ಮೋಟಾರು ಸಾರಿಗೆ ನೌಕರರ ಸಂಘ. ವಾಹನಗಳ ಚಾಲಕರು ನಿರ್ವಾಹಕರು ಮುಂತಾದ ನೌಕರರು ಮೂಲಭೂತ ಸವಲತ್ತುಗಳಿಲ್ಲದೆ ವಾಹನಗಳನ್ನು ಓಡಾಡಿಸುತ್ತಿದ್ದ ಕಾಲವದು. ಅವರ ಕೊರಗನ್ನು ನೀಗಿಸಲು ಸಂಘವು ಮೋಟಾರು ವಾಹನಗಳ ಮಾಲಕ ಸಂಸ್ಥೆಗಳಿಗೆ ತಮ್ಮ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದವು. ಸಿ.ಪಿ.ಸಿ, ಹನುಮಾನ್ ಟ್ರಾನ್ಸ್‌ಪೋರ್ಟ್, ಶಂಕರ್ ವಿಠ್ಠಲ್, ಗಜಾನನ ಮೋಟಾರ್‍ಸ್ ಮುಂತಾದವುಗಳು ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ತಮ್ಮ ವಾಹನಗಳನ್ನು ಓಡಾಡಿಸುತ್ತಿದ್ದುವು. ಇವುಗಳ ಒಕ್ಕೂಟವು ಕಾರ್ಮಿಕರ ಬೇಡಿಕೆಗಳಿಗೆ ಒಪ್ಪದಿದ್ದಾಗ ಕಾರ್ಮಿಕರು ಸಂಘರ್ಷದ ದಾರಿಹಿಡಿದರು; ಮತ್ತು ಸಂಘದ ಕರೆಯಂತೆ ಎಲ್ಲಾ ವರ್ಗದ ನೌಕರರೂ ಮುಷ್ಕರನಿರತರಾದರು. ಪರಿಣಾಮ, ದ.ಕ.ಜಿಲ್ಲೆ ಮತ್ತು ಶಿವಮೊಗ್ಗದಲ್ಲಿ ಓಡಾಡುತ್ತಿದ್ದ ವಾಹನಗಳು ತಮ್ಮ ಗ್ಯಾರೇಜು ಬಿಟ್ಟು ಹೊರಡದಾದವು. ಜಿಲ್ಲೆಯ ನರನಾಡಿಯೇ ನಿಂತ ಅನುಭವ ಅಂದಿನದು. ಆಗ ಸರಕಾರವು ತನ್ನ ಲೇಬರ್ ಕನ್ಸಿಲಿಯೇಟ್ ಸಂಸ್ಥೆಯ ಮೂಲಕ ಕಾರ್ಮಿಕ ಮತ್ತು ಸಾಹುಕಾರರ ನಡುವೆ ಸಂಧಾನ ನಡೆಸಲು ಮುಂದಾಯಿತು. ಕಾರ್ಮಿಕರ ಮುಖ್ಯವಾದ ಬೇಡಿಕೆಗಳಿಗೆ ಮೋಟಾರು ಮಾಲಿಕರು ಒಪ್ಪಿದ್ದರಿಂದ ಸ್ತಬ್ಧಗೊಂಡಿದ್ದ ಜಿಲ್ಲೆಯ ನರನಾಡಿ ಮರುಜೀವ ಪಡೆಯಿತು. ಈ ಮುಷ್ಕರಕ್ಕೆ ಮುಂದಾಳುತನ ನೀಡಿದವರಲ್ಲಿ ಪಿ.ಡಿ’ಮೆಲ್ಲೊ, ಅಮ್ಮೆಂಬಳ ಬಾಳಪ್ಪ, ಡಾ|| ಸಂಜೀವನಾಥ ಐಕಳ, ಸಿ. ಗೋವಿಂದನ್, ಮತ್ತು ಜಾರ್ಜ್‌ ಫೆರ್ನಾಂಡಿಸ್ ಮುಂತಾದವರು.

ಅಷ್ಟರಲ್ಲೇ ಹೈಕೋರ್ಟಿಗೆ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ದಾವೆ ಯಶಸ್ವಿಯಾಗಿ ಮುಂಬೈಯ ನಾಲ್ವರೂ ಕಾರ್ಮಿಕ ಮುಂದಾಳುಗಳ ಗಡೀಪಾರು ರದ್ದಾಯಿತು. ಆದ್ದರಿಂದ ಪಿ.ಡಿ’ಮೆಲ್ಲೊ ತಮ್ಮ ಕರ್ಮಭೂಮಿಯಾದ ಮುಂಬೈಗೆ ಮರಳಿ ಹೋದರು ಮತ್ತು ಬಂದರು ಕಾರ್ಮಿಕರ ಸಂಘದ ತಮ್ಮ ಹೊಣೆಗಾರಿಕೆಯನ್ನು ವಹಿಸಿಕೊಂಡರು.

ಡಿ’ಮೆಲ್ಲೊ ನಿರ್ಗಮನದ ನಂತರ ಜಾರ್ಜ್‌ಫೆನಾಂಡಿಸ್ ಒಂದು ತರಹದ ಅತಂತ್ರ ಸ್ಥಿತಿಗೆ ಒಳಗಾದರು. ತಾವು ಪ್ರಾರಂಭಿಸಿದ ಇಂಗ್ಲಿಷ್ ಪತ್ರಿಕೆಯನ್ನು ನಡೆಸುವುದು ಅವರಿಗೆ ಕಷ್ಟಸಾಧ್ಯವಾಯಿತು. ತಂದೆ ಜಾನ್‌ಫೆನಾಂಡಿಸ್ ಕೂಡ ಮಗನ ಬಗ್ಗೆ ಕರುಣೆ ತೋರದಾದರು. ಈ ಅವಸ್ಥೆಯನ್ನು ನಿಭಾಯಿಸುವುದು ಹೇಗೆ ಎಂಬ ಬಗ್ಗೆ ಒಂದು ದಿನ ನಾನು ಮತ್ತು ಬಾಳಪ್ಪ ಸೇರಿ ಒಂದು ಪರ್ಯಾಯ ಉಪಾಯವನ್ನು ನಮ್ಮೊಳಗೇ ಕಂಡುಕೊಂಡೆವು. ಜಾರ್ಜ್‌ಗೆ ಮಂಗಳೂರು ತಕ್ಕ ಕ್ಷೇತ್ರವಲ್ಲ, ತುಂಬ ಕಾರ್ಯಚಟುವಟಿಕೆಯ ಮತ್ತು ಮೇಧಾವಿ ತರುಣನಾದ ಈತನಿಗೆ ಮುಂಬೈಯೇ ತಕ್ಕ ಕಾರ್ಯಕ್ಷೇತ್ರ ಎಂಬ ನಿಲುವಿನೊಂದಿಗೆ ನಾವು ಜಾರ್ಜ್ ಅವರನ್ನು ಮಾತಾಡಿಸಿದೆವು. ‘ಮುಂಬೈಯಲ್ಲಿ ಹೇಗೂ ಗೆಳೆಯ ಡಿ’ಮೆಲ್ಲೊ ಇದ್ದಾರೆ, ಅಲ್ಲಿಗೆ ಹೋಗಿ ಅವರನ್ನೇ ನೀವು ಸೇರಿಕೊಳ್ಳುವುದು ಉತ್ತಮ’ ಎಂಬ ಸಲಹೆಗೆ ಜಾರ್ಜ್ ಒಪ್ಪಿದರು. ಆದರೆ ಪ್ರಯಾಣವೆಚ್ಚಕ್ಕೆ ಹಣ ಎಲ್ಲಿಂದ ತರೋಣ ಎಂಬ ಪ್ರಶ್ನೆ ಎದುರಾದಾಗ ಬಾಳಪ್ಪ ಅದರ ವ್ಯವಸ್ಥೆ ತಾನು ಮಾಡುವುದಾಗಿ ಅಭಯವಿತ್ತರು; ಮತ್ತು ಒಂದು ರಾತ್ರಿ ತಮ್ಮ ನೇತೃತ್ವದ ಹೋಟೆಲು ಕೆಲಸಗಾರರ ಸಂಘದ ಸಭೆ ಕರೆದು ಸದಸ್ಯರೆಲ್ಲರೂ ತಮ್ಮ ಶಕ್ತಿಯನುಸಾರ ಹಣ ಜಾರ್ಜ್ ಪ್ರಯಾಣಕ್ಕೆ ಧನಸಹಾಯ ನೀಡುವಂತೆ ಕೋರಿದರು, ಸಾಕಷ್ಟು ಹಣವೂ ಕೂಡಿತು.

ಬಾಳಪ್ಪ ಡಿ’ಮೆಲ್ಲೊ ಅವರಿಗೊಂದು ಪತ್ರ ಬರೆದು ಜಾರ್ಜ್ ಕೈಯಲ್ಲಿ ಕೊಟ್ಟು, ಮುಂಬೈಗೆ ಹೋಗಿ ಅವರನ್ನು ಕಾಣುವಂತೆ ಹೇಳಿದರು. ಹೀಗೆ ಜಾರ್ಜರ ಪಾದಾರ್ಪಣ ಮುಂಬೈಗೆ ಅಂದು ಆಗಿತ್ತು. ಮುಂಬೈ ತಲುಪಿದ ಜಾರ್ಜ್ ಡಿ’ಮೆಲ್ಲೊ ಅವರ ಸರಿದೊರೆಯಾಗಿ ಬಂದರು ಕಾರ್ಮಿಕರ ಸಂಘದಲ್ಲಿ ಒಬ್ಬ ಹೋರಾಟಗಾರನಾಗಿ ದುಡಿಯುತ್ತಿದ್ದರು. ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪನ್ನು ಮೂಡಿಸಿದರು.

ವಿಧಿಲಿಖಿತ ಎಂಬಂತೆ ಪಿ.ಡಿ’ಮೆಲ್ಲೊ ಕೆಲವೇ ಕಾಲಾನಂತರ ಹೃದಯಸ್ತಂಭನದಿಂದ ನಿಧನಹೊಂದಿದರು. ಅದರಿಂದ ತೆರವಾದ ಬಂದರು ಕಾರ್ಮಿಕ ಸಂಘದ ಕರ್ಣಧಾರತ್ವವು ಜಾರ್ಜ್ ಅವರದ್ದಾದದ್ದು ಮುಂಬೈಕಾರ್ಮಿಕ ಸಂಘಟನೆಗಳ ವಲಯದಲ್ಲಿ ಮಿಂಚಿನ ಸಂಚಾರವಾದಂತಾಯಿತು ಎಂದರೆ ಅತ್ಯುಕ್ತಿಯಾಗದು.

ಬಂದರು ಕೆಲಸಗಾರರ ಸಂಘಟನೆಯಲ್ಲಿ ನಿರತರಾಗಿದ್ದಾಗ ಜಾರ್ಜ್‌ರವರ ಪ್ರತಿಕೋದ್ಯಮದ ತುಡಿತ ಮತ್ತೆ ಗರಿಗೆದರಿದ್ದು, ಅವರು ಪ್ರಾರಂಭಿಸಿದ ಆoಛಿಞ Woಡಿಞeಡಿ ಎಂಬ ನಿಯತಕಾಲಿಕದ ಮೂಲಕ ಎಂಬುವುದು ಸ್ಮರಣೀಯ.

1963ರಲ್ಲಿ ಜಾರ್ಜ್ ಕಾರ್ಮಿಕರ ಎಲ್ಲ ಸಂಘಟನೆಗಳನ್ನು ಒಟ್ಟುಗೂಡಿಸಿ ಕೆಲಸಗಾರರ ತುಟ್ಟಿಭತ್ತೆ ಹೆಚ್ಚಳಕ್ಕಾಗಿ ಹೋರಾಡಿ ಒಂದು ಬಾರಿ ಬೊಂಬೆ-ಬಂದ್ ಮಾಡಿಸಿದರು. ಕಾರ್ಮಿಕರ ಬೇಡಿಕೆಯ ಇತ್ಯರ್ಥಕ್ಕಾಗಿ ಸರಕಾರವು ಲಕಡವಾಲ ಕಮಿಟಿಯನ್ನು ನೇಮಿಸಿತ್ತು. ಆ ಸಮಿತಿಯು ನೀಡಿದ 27 ಶಿಪಾರಸುಗಳನ್ನು ಸರಕಾರ ಒಪ್ಪಲೇ ಬೇಕಾಯಿತು. ಹೀಗೆ ಜಾರ್ಜ್ ‘ಬಂದ್ ಚಳುವಳಿಗಳ ಜನಕರೂ’ ಆದರು.

ರೈಲ್ವೆ, ವಿದ್ಯುತ್ತ್, ಸಾರಿಗೆ, ಬಟ್ಟೆಗಿರಣಿ, ಹೊಟೇಲು, ಟ್ಯಾಕ್ಸಿ ಮುಂತಾದ ಕ್ಷೇತ್ರಗಳ ಕಾರ್ಮಿಕರ ಸಂಯುಕ್ತ ಸಂಘಟನೆಯ (ಹಿಂದ್ ಮಜ್ದೂರ್ ಸಭಾ) ನೇತೃತ್ವವನ್ನು ಜಾರ್ಜ್ ವಹಿಸಿಕೊಂಡು ಮುಂದಿನ ದಿನಗಳಲ್ಲಿ ತಿಂಗಳಾನುಗಟ್ಟಲೆ ಹೋರಾಟನಿರತರಾದರು. ರೈಲ್ವೆ ಕಾರ್ಮಿಕರ ಸಂಪು ನಡೆಯುತ್ತಿದ್ದಾಗ ಜಾರ್ಜ್ ಸ್ವತಃ ಹಳಿಯ ಮೇಲೆ ಮಲಗಿ ರೈಲು ಓಡಾಟವನ್ನು ಸ್ಥಗಿತಗೊಳಿಸಿದರು. ಹಳಿಯಿಂದ ಅವರನ್ನು ಉಚ್ಛಾಟಿಸಲು ಪೋಲಿಸರು ಲಾಠಿ ಪ್ರಯೋಗವೆಸಗಿದಾಗ ಜಾರ್ಜ್‌ರ ತಲೆಗೆ ಲಾಠಿ ಏಟು ಬಿದ್ದು ರಕ್ತ ಚಿಮ್ಮಿದ್ದು ಉಂಟು.

1966ರ ಆಗಸ್ಟ್‌ದಲ್ಲಿ ಮುಂಬೈ ನಗರಿಯ ಎಲ್ಲಾ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಜನರಲ್ ಸ್ಟ್ರೈಕಿಗೆ ಕರೆಕೊಟ್ಟ ಸಂದರ್ಭ ಇಡೀ ನಗರ ಜನರ ಓಡಾಟಕ್ಕೆ ವಾಹನ ಸಿಗದೆ ಎರಡು ದಿನಗಳ ಪರ್ಯಂತ ಸ್ಥಬ್ಧವಾಗಿತ್ತು. ಈ ಘಟನೆಯಿಂದ ಅವಮಾನಿತರಾದ ಮಹಾರಾಷ್ಟ್ರ ಸರಕಾರದ ಮೂವರು ಸಚಿವರೂ ಹದಿನೆಂಟು ಜನ ಶಾಸಕರೂ ತಮ್ಮ ಪದವಿಗಳಿಗೆ ರಾಜೀನಾಮೆ ಸಲ್ಲಿಸಿದರು. ಈ ಚೇತೋಹಾರಿ ಘಟನೆಗಳ ಕುರಿತಾಗಿ ರಾಜ್‌ಮೋಹನ್ ಗಾಂಧಿ (ಮಹಾತ್ಮ ಗಾಂಧಿ ಮೊಮ್ಮಗ) ತಮ್ಮ ಇಂಗ್ಲಿಷ್ ನಿಯತಕಾಲಿಕ ‘ಹಿಮ್ಮತ್’ದ 1966 ಸೆಪ್ಟೆಂಬರ್ 2ರ ಸಂಚಿಕೆಯಲ್ಲಿ ಬರೆದಿದ್ದಾರೆ.

ರಾಜ್‌ಮೋಹನ್‌ಗಾಂಧಿ ಮತ್ತುಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅಣ್ಣ ತಮ್ಮಂದಿರು. ಇವರು ರಾಷ್ಟ್ರಪಿತ ಮಹಾತ್ಮಗಾಂಧಿ ಮೊಮ್ಮಕ್ಕಳು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಮೇಲೆ ವಿವರಿಸಲಾದ ತಮ್ಮ ಮುಂಬೈಯ ಕಾರ್ಮಿಕ ಹೋರಾಟಗಳ ಮೂಲಕ, 50ರ ದಶಕದಲ್ಲಿ ರೈಲ್ವೆ ಕೆಲಸಗಾರರ ಅಖಿಲ ಭಾರತ ಒಕ್ಕೂಟಕ್ಕೆಜಯಪ್ರಕಾಶ ನಾರಾಯಣಅಧ್ಯಕ್ಷರಾಗಿದ್ದಂತೆ ೭೦ರ ದಶಕದಲ್ಲಿ ಜಾರ್ಜ್ ರೈಲ್ವೆ ಕೆಲಸಗಾರರ ಒಕ್ಕೂಟದ ಅಧ್ಯಕ್ಷರೂ ಆದರು.
ಮುಂಬಯಿಯಿಂದ ಮಹಾರಾಷ್ಟ್ರ ವಿಧಾನ ಸಭೆಗೆ ಒಮ್ಮೆ ಸ್ಪರ್ಧಿಸಿದ್ದುಂಟು. ಮಹಾರಾಷ್ಟ್ರ ಎಕೀಕರಣ ಸಮಿತಿಯು ಅವರಿಗೆ ಬೆಂಬಲ ನೀಡಿತ್ತಾದರೂ ಮುಂಬಯಿ ನಗರವನ್ನು ಗುಜರಾತಕ್ಕೆ ಸೇರಿಸಬೇಕೆಂಬ ಗುಜರಾತಿ ಹಾಗೂ ಮರಾಠಿಗರ ತಿಕ್ಕಾಟದಲ್ಲಿ ಜಾರ್ಜ್ ಅವರು ಸೋಲು ಉಣ್ಣಬೇಕಾಯಿತು.

1967ರಲ್ಲಿ ಈ ತರುಣ ಸಂಯುಕ್ತ ಸಮಾಜವಾದೀ ಪಕ್ಷದ ಅಭ್ಯರ್ಥಿಯಾಗಿ ನಾಲ್ಕನೆಯ ಲೋಕಸಭಾ ಚುನಾವಣೆಗೂ ಮುಂಬೈಯಿಂದ ಸ್ಪರ್ಧಿಸಿದರು; ತಮ್ಮ ಎದುರಾಳಿ ಕಾಂಗ್ರೆಸ್ಸಿನ ಸದೋಬಾ ಕಾನೋಜಿ ಪಾಟೀಲರನ್ನು ಸೋಲಿಸಿದರು.

ಸಂಸದರಾಗಿ ಮುಂದೆ ಅವರು 2008ರವರೆಗೂ ದಿಲ್ಲಿಯಲ್ಲಿ ಇದ್ದಾಗ ಸದಸ್ಯರಾಗಿ ಅಥವಾ ಮಂತ್ರಿಯಾಗಿ ಅವರು ಎಲ್ಲೇ ವಾಸವಾಗಿದ್ದರೂ ಅವರ ಬಂಗಲೆಗೆ ದೇಶದ ಎಲ್ಲಾ ಕಡೆಯಿಂದ ಬರುವ ಅತಿ ಸಾಮಾನ್ಯನಿಗೂ ಪ್ರವೇಶವಿತ್ತು. ಯಾರೇ ಬಂದರೂ ಅವರನ್ನು ಆತ್ಮೀಯವಾಗಿ ಮಾತನಾಡಿಸಿ ಬೀಳುಕೊಡುವುದು ಅವರದ್ದು ಸ್ವಭಾವ.

2009ರಲ್ಲಿ ಹದಿನೈದನೆಯ ಲೋಕಸಭಾ ಚುನಾವಣೆಗೂ ಸ್ಪರ್ಧಿಸುವ ಉತ್ಸುಕತೆ ಅವರಲ್ಲಿತ್ತು. ಆದರೆ ದೈಹಿಕ ಮತ್ತು ಮಾನಸಿಕ ಸ್ಥಿತಿ ಅದಕ್ಕೆ ಅನುಕೂಲವಾಗಿರಲಿಲ್ಲ. ಆದ್ದರಿಂದ ಬಿಹಾರದ ಸಂಯುಕ್ತ ಜನತಾದಳವು ಅವರಿಗೆ ಟಿಕೆಟನ್ನು ಕೊಡಲು ಒಪ್ಪಲಿಲ್ಲ. ಆಗ ಇವರ ಮನಸ್ಸು ವ್ಯಗ್ರಗೊಂಡದ್ದು ನಿಜ. ತನ್ನ ಬದುಕಿನ ಕಥೆಯನ್ನು ಬರೆಯುವ ತಯಾರಿಯಲ್ಲಿಯೂ ಅವರು ಆಗ ಇದ್ದುದು ಅದು ಅಲ್ಲಿಗೇ ನಿಂತುಹೋಯಿತು.

ಲೋಕಸಭೆಯಲ್ಲಿ ಸದಸ್ಯರಾಗಿ ಮಿಂಚಿದ ಜಾರ್ಜರನ್ನು ಮೆಚ್ಚಿ ಮದುವೆಯಾಗಿದ್ದ ಶ್ರೀಮತಿ ಲೈಲಾ ಕಬೀರ್ ಅವರ ತಂದೆ ನೆಹರು ಮಂತ್ರಿಮಂಡಲದಲ್ಲಿ ಶಿಕ್ಷಣ ಇಲಾಖೆಯ ಕ್ಯಾಬಿನೆಟ್ ಸದಸ್ಯರಾಗಿದ್ದ ಹುಮಾಯುನ್ ಕಬೀರ್ ಅವರು.ಜಾರ್ಜ್ ದಂಪತಿಗೆ ಒಬ್ಬ ಮಗನೂ ಇದ್ದಾನೆ. ಹೆಸರು ಶಾನ್, ಪ್ರಾಯಪ್ರಬುದ್ಧನಾದ ಈತ ಅಮೆರಿಕಾದ ನ್ಯೂಯಾರ್ಕಿನಲ್ಲಿ ಉದ್ಯೋಗಾರ್ಥಿ. ಆತನದು ಅಪ್ಪನಂತೆ ಅಂತರ್ಮತೀಯ ಸಂಬಂಧವಲ್ಲ; ತಂದೆಯನ್ನೇ ಮೀರುವಂತೆ ಅದು ಅಂತರರಾಷ್ಟ್ರೀಯ ಸಂಬಂಧ. ದಶಕದಷ್ಟು ಹಿಂದೆ ಆತ ಅಮೇರಿಕದಲ್ಲಿ ತನ್ನ ಒಡನಾಡಿಯಾಗಿದ್ದ ಒಬ್ಬ ಜಪಾನಿ ಹುಡುಗಿಯನ್ನು ಮದುವೆ ಮಾಡಿಕೊಂಡ. ಜಾರ್ಜ್ ಮತ್ತು ಲೈಲಾ ಈ ಮದುವೆಗೆ ಜಪಾನಿಗೆ ಹೋಗಿದ್ದರು.

ಕೊಲ್ಕತ್ತಾ ಮೂಲದ ಕಬೀರ್ ಮನೆತನದ ಎರಡು ಕವಲುಗಳು ದಕ್ಷಿಣ ಕನ್ನಡದ ರೋಮನ್ ಕ್ಯಾಥೊಲಿಕರಲ್ಲಿ ವೈವಾಹಿಕ ಸಂಬಂಧ ಬೆಸೆದುದನ್ನು ಇಲ್ಲಿ ಉಲ್ಲೇಖಿಸಬಹುದೇನೋ. ಕ್ಯಾಥೋಲಿಕರದ್ದಷ್ಟೇ ಅಲ್ಲ, ಕಬೀರರ ಕುಟುಂಬಗಳು ತಲೆತಲಾಂತರವಾಗಿ ಬೌದ್ಧರಲ್ಲೂ ವೈವಾಹಿಕ ಸಂಬಂಧ ಕುದುರಿಸಿದ್ದುಂಟು. ಜಾರ್ಜ್ ಅವರ ಅತ್ತೆ ಶಾಂತಿ ಹಿಂದೂ, ಸ್ವಾತಂತ್ರ್ಯ ಹೋರಾಟಗಾರ್ತಿ. ಜಾತಿವ್ಯವಸ್ಥೆಯ ವಿರುದ್ಧ ಸಮರ ಸಾರಿದ್ದ ಪ್ರಗತಿಪರ ಬ್ರಹ್ಮಸಮಾಜದ ಓರ್ವ ಕಾರ್ಯಕರ್ತೆ. ಅವರ ಮಕ್ಕಳಾದ ಲೈಲಾ ಮತ್ತು ಪ್ರವಾಹನ್ ಇಬ್ಬರೂ ಕ್ರೈಸ್ತರನ್ನೇ ವರಿಸಿದ್ದರು. ಲೈಲಾ ಅವರ ಚಿಕ್ಕಪ್ಪನ ಮಗ ಅಲ್ತಮಸ್ ಕಬೀರ್ ದಿಲ್ಲಿಯ ಸುಪ್ರೀಂ ಕೋರ್ಟಿನಿಂದ ತಮ್ಮ ಮುಖ್ಯನ್ಯಾಯಾಧೀಶ ಪದವಿಯಿಂದ ಇತ್ತೀಚೆಗಷ್ಟೇ ನಿವೃತ್ತರಾಗಿದ್ದಾರೆ.

ಅಲ್ತಮಸ್ ಕಬೀರ್ ಕಲ್ಕತ್ತೆಯಲ್ಲಿ ತಮ್ಮ ವಕೀಲಿ ವೃತ್ತಿಯನ್ನು ಪ್ರಾರಂಭಿಸಿದಾಗ ತಾವು ಬಾಡಿಗೆಗಿದ್ದ ಬಿಡಾರದ ಮಾಳಿಗೆ ಮನೆಯ ಕೆಳಗೆ ವಾಸವಾಗಿದ್ದ ಕ್ರಿಸ್ತ ಕುಟುಂಬದ ಒಬ್ಬ ಯುವತಿಯನ್ನು ಮೆಚ್ಚಿ ಮದುವೆಯಾದರು. ಅವರೇ ಮಂಗಳೂರಿನ ಕ್ರೈಸ್ತ ಮಹಿಳೆ ಮೆರೀನಾ.ಮುಂದೆ ಅವರ ಹೆಸರು ಮಿನ್ನಾ ಎಂದು ಪರಿವರ್ತನೆಗೊಂಡಿತು.

ಈ ಅಲ್ತಮಸ್ ದಂಪತಿ ಜಾರ್ಖಂಡದಲ್ಲಿ ‘ನಾರಿನಿಕೇತನ’ ಎಂಬ ಸಂಸ್ಥೆಯನ್ನು ನಡೆಸುತ್ತಾ ೪೦ಕ್ಕೂ ಹೆಚ್ಚು ನತದೃಷ್ಟ ಹೆಣ್ಣುಮಕ್ಕಳ ಪಾಲಿಗೆ ‘ಅಪ್ಪ-ಅಮ್ಮ’ ಎನಿಸಿಕೊಂಡಿದ್ದಾರೆ. ಜಗವೊಂದು, ಜಗದ ನೆಲವೊಂದು, ನೆಲದ ಮನುಜ ಕುಲವೊಂದು ಎಂಬ ನುಡಿಗೆ ಈ ಕುಟುಂಬಗಳು ಪ್ರತೀಕದಂತಿವೆ.
* * *
ಮತ್ತೆ ಜಾರ್ಜ್‌ರ ಬವಣೆಗಳತ್ತ ಕಣ್ಣು ಹಾಯಿಸೋಣ. ಲೋಕಸಭೆಯಲ್ಲಿ ಒಂಭತ್ತು ಸಲ (4, 6, 7, 9, 10, 11, 12, 13, 14ನೆಯ ಲೋಕಸಭೆಗಳು) ಬಿಹಾರದಿಂದ ಪ್ರಾತಿನಿಧ್ಯವನ್ನು ಹೊಂದಿದ್ದರು. ಇಂಥ ಶಕಪುರುಷನಿಗೆ ಲೇಖನದ ಪ್ರಾರಂಭದಲ್ಲಿಯೇ ಉಲ್ಲೇಖಿಸಲಾದ ಆಪತ್ಕಾಲೀನ ಪರಿಸ್ಥಿತಿ ಎರಡು ಮೂರು ವರ್ಷ ಜೀವನ್ಮರಣ ಹೋರಾಟದ ಸ್ಥಿತಿಯನ್ನು ತಂದೊಡ್ಡಿತ್ತು. ಬರೋಡಾದಲ್ಲಿ ತಮ್ಮ ಗೆಳೆಯರೊಂದಿಗೆ ಡೈನಮೈಟ್ ಸ್ಪೋಟಿಸುವ ಹೊಂಚುಗಾರಿಕೆಯಿಂದಾಗಿ ಭಾರತ ಸರಕಾರದ ಅಪದೃಷ್ಠಿಗೂ ಒಳಗಾದರು.

1974 ಜೂನ್ 24ರಂದು ದೇಶದಲ್ಲಿ ಅಪತ್‌ಸ್ಥಿತಿ ಸಾರುವ ಯೋಜನೆಯನ್ನು ದಿಲ್ಲಿಯಲ್ಲಿ ಇಂಧಿರಾಗಾಂಧಿ ರೂಪಿಸಿದಾಗ ಜಾರ್ಜ್ ಒರಿಸ್ಸಾದ ಗೋಪಾಲಪುರದಲ್ಲಿ ರೈಲ್ವೇ ಕಾರ್ಮಿಕರ ಸಮಾವೇಶದಲ್ಲಿ ನಿರತರಿದ್ದರು. ಇಂದಿರಾಗಾಂಧಿಯವರ ಈ ‘ದೂರ್ತ ನಿಲವು’ ಜಾರ್ಜ್ ಅವರಿಗೆ ಅವರ ಗೆಳೆಯರ ಮೂಲಕ ತಿಳಿಯುತ್ತಲ್ಲೇ ಅವರು ಮೀನುಗಾರರ ವೇಶತೊಟ್ಟು ದೋಣಿ ಮೂಲಕ ಅಲ್ಲಿಂದ ತಲೆಮರೆಸಿಕೊಂಡರು. ಒಂದು ವರ್ಷಕಾಲ ದೇಶದ ತುಂಬಾ ತಿರುಗಾಡಿದ್ದಲ್ಲದೇ ವಿದೇಶಕ್ಕೂ ಹೋಗಿ ಎಮರ್ಜೆನ್ಸಿಯ ವಿರುದ್ಧ ಜನಾಭಿಪ್ರಾಯ ಉಂಟು ಮಾಡಿದರು.
ಭಾರತದ ಎಮರ್ಜೆನ್ಸಿಯ ವಿರುದ್ಧ ಜನಾಭಿಪ್ರಾಯ ರೂಪಿಸಲು ಲಂಡನ್ನಿನಿಂದ sತಿಚಿಡಿಚಿರಿ -ಜಿoಡಿ ಜemoಛಿಡಿಚಿಣiಛಿ seಟಜಿ goveಡಿಟಿmeಟಿಣ iಟಿ Iಟಿಜiಚಿ ಎಂಬ ನಿಯತಕಾಲಿಕವೂಆಗ ಲಂಡನ್ನಿನಿಂದ ಪ್ರಕಟವಾಗುತ್ತಿತ್ತು. ಜಾರ್ಜ್ ಜೈಲಿನಲ್ಲಿರುವಾಗಲೇ ಅವರ ಸಮಾಜವಾದಿ ಪಕ್ಷವನ್ನು ‘ಸೋಶಿಯಲಿಸ್ಟ್ ಇಂಟರ್‌ನ್ಯಾಷನಲ್’ಈ ಅಂತರರಾಷ್ಟ್ರೀಯ ಸಂಸ್ಥೆ ಜಿನೇವಾದಲ್ಲಿ ೧೯೭೬ ನವೆಂಬರ್‌ನಲ್ಲಿ ನಡೆಸಿದ ತನ್ನ ಹದಿಮೂರನೆಯ ಅಧಿವೇಶನದಲ್ಲಿ ತನ್ನ ತೆಕ್ಕೆಯಲ್ಲಿ ಸೇರಿಸಿಕೊಂಡಿತು. ಈ ಅಧಿವೇಶನದಲ್ಲಿ ಇಂಟರ್‌ನ್ಯಾಷನಲ್‌ಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಹೆರ್ ವಿಲ್ಲೀ ಬ್ರಾಂಟ್ ತಮ್ಮ ಉದ್ಬೋಧಕ ಅಧ್ಯಕ್ಷೀಯ ಭಾಷಣದಲ್ಲಿ ಭಾರತದ ದುರ್ದೈವಿ ತುರ್ತುಪರಿಸ್ಥಿತಿಯನ್ನು ಗಮನದಲ್ಲಿಟ್ಟು ಅಂದಿದ್ದರು; ಪ್ರಜಾಸತ್ತೆ ಎಲ್ಲಿ ಇಲ್ಲವೋ ಅಲ್ಲಿ ಸಮಾಜವಾದವು ಇರಲಾರದು ಎಂದು. ಅಂದಿನ ಪ್ರಧಾನಿ ಇಂದಿರಾಗಾಂಧಿ ತಾನೂ ಸಮಾಜವಾದಿ ಎಂದು ಹೇಳಿಕೊಳ್ಳುತ್ತ ಈ ಸೋಶಿಯಲಿಸ್ಟ್ ಇಂಟರ್‌ನ್ಯಾಷನಲ್ ಸಂಸ್ಥೆಯಲ್ಲಿ ತಮ್ಮ ಕಾಂಗ್ರೆಸ್ ಪಕ್ಷವನ್ನು ಸೇರಿಸುವ ಪ್ರಯತ್ನದಲ್ಲಿದ್ದದ್ದಂತು ನಿಜ. ಅದಕ್ಕೆ ಸೊಪ್ಪು ಹಾಕದಂತೆ ಇಂಟರ್‌ನ್ಯಾಷನಲ್ ಮೇಲಿನಂತೆ ನಿರ್ಣಯ ಕೈಗೊಂಡದ್ದು ಒಂದು ಐತಿಹಾಸಿಕ ಘಟನೆ.

ತಲೆಮರೆಸಿಕೊಂಡಿದ್ದ ಜಾರ್ಜರನ್ನು ಕೊನೆಗೂ 1976 ಅಗಸ್ಟ್‌ನಲ್ಲಿ ಪೋಲಿಸರು ಕೊಲ್ಕತ್ತಾದಲ್ಲಿ ಬಂಧಿಸಿ ದಿಲ್ಲಿ ಜೈಲೊಂದರಲ್ಲಿ ತಂದಿಟ್ಟರು. ಅವರು ಜೈಲಿನಲ್ಲಿದ್ದಾಗಲೇ 1977ರ ಮಹಾಚುನಾವಣೆಯನ್ನು ಅಭ್ಯರ್ಥಿಯಾಗಿ ಸ್ಪರ್ಧಿಸಿದರು, ಕ್ಷೇತ್ರ ಮುಜಾಫರಪುರ. ಜಾರ್ಜ್ ಅವರನ್ನು ಸಂಕೋಲೆಗಳಲ್ಲಿ ಬಿಗಿದಿಟ್ಟಿದ್ದ ಆಳೆತ್ತರದ ಕಟೌಟುಗಳು ಕ್ಷೇತ್ರವಿಡೀ ಸಂಚರಿಸಿ ಅವರ ಪರವಾಗಿ ಮತಗಳಿಸಿದವು. ತಾಯಿ ಎಲಿಸ್ ಮಗನನ್ನು ಆರಿಸಿಕೊಡಿ ಎಂದು ಕೈಜೋಡಿಸಿ ಪ್ರಾರ್ಥಿಸುತ್ತಾ ಕ್ಷೇತ್ರದ ಉದ್ದಗಲಕ್ಕೂ ಓಡಾಡಿದರು. ಪರಿಣಾಮ ಜಾರ್ಜ್ ಚುನಾವಣೆಯಲ್ಲಿ ಗೆದ್ದರು-ದಾಖಲೆ ಮೀರಿದ ಲಕ್ಷ ಲಕ್ಷಗಳಷ್ಟು ಮತಗಳ ಅಂತರದಿಂದ.

ಅವರನ್ನು ಆರೋಪಮುಕ್ತ ಮಾಡಲು ನ್ಯಾಯಾಲಯದಲ್ಲಿ ಅವರ ಪರವಾಗಿ ವಾದ ಮಾಡಿದವರು ಸುಷ್ಮಾ ಸ್ವರಾಜ್ ಅವರ ಪತಿ. ಈ ಕರಾಳ ದಿನಗಳಲ್ಲಿ ಜಾರ್ಜರ ಜೊತೆಗಿದ್ದವರು ಕರ್ನಾಟಕದ ಸಿ.ಜಿ.ಕೆ.ರೆಡ್ಡಿ. ಇವರು ಆ ದಿನಗಳ ಕುರಿತು ಇಂಗ್ಲಿಷಿನಲ್ಲಿ ಖighಣ ಣo ಖevoಟಣ ಎಂಬ ಗ್ರಂಥ ಬರೆದು 1977ರಲ್ಲಿ ಪ್ರಕಟಿಸಿದರು. ದಿವಂಗತ ಖಾದ್ರಿ ಶಾಮಣ್ಣ ಈ ಪುಸ್ತಕವನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.
* * *
ಜಾರ್ಜ್‌ ಫೆರ್ನಾಂಡಿಸ್ ಒಬ್ಬ ಸಮಾಜವಾದಿಯಾಗಿ ಕಟ್ಟಿ ಬೆಳೆಸಿದ್ದ ಸಮತಾಪಕ್ಷ ಎನ್.ಡಿ.ಎ.ಯಲ್ಲಿ ಸೇರಿಸಿದ್ದು ಒಂದು ರಾಜಕೀಯ ಆಭಾಸವೆಂದು ಬಗೆಯಲಾಗಿತ್ತು. ಈ ಹೊಂದಾಣಿಕೆಯ ಪೂರ್ವದಲ್ಲಿ ಅವರು ರಾಜಕಾರಣವನ್ನು ಪರಿಶುದ್ಧದ್ದೆಂದು ಭಾವಿಸಲಾಗುತ್ತದೆ. ಅವರು ವಿ.ಪಿ. ಸಿಂಗ್ ಮಂತ್ರಿಮಂಡಲದಲ್ಲಿ ರೈಲ್ವೆ ಇಲಾಖೆಯನ್ನು ನಡೆಸಿದ ರೀತಿ ಇಂದು ಕರಾವಳಿಯುದ್ದಕ್ಕೂ ಓಡಾಡುವ ಕೊಂಕಣ ರೈಲ್ವೆಯಿಂದ ಸ್ಪಷ್ಟವಾಗಿ ಗೋಚರವಾಗುತ್ತದೆ. ಕೇಂದ್ರದಲ್ಲಿ ಅವರು ಕ್ಯಾಬಿನೆಟ್ ಮಂತ್ರಿಯಾಗಿ ನಾಲ್ಕು ಮಂತ್ರಿಮಂಡಲಗಳಲ್ಲಿ (1977ರಲ್ಲಿ 3 ತಿಂಗಳು ಸಂಪರ್ಕ ಇಲಾಖೆ, ನಂತರ 1977-79ರಲ್ಲಿ ಉದ್ಯಮ ಮಂತ್ರಿ, 1989-90 ರೈಲ್ವೆ ಇಲಾಖೆ, 1998ರಿಂದ ಸುಮಾರು 6 ವರ್ಷ ರಕ್ಷಣಾ ಸಚಿವ) ಕೆಲಸ ಮಾಡಿದ ದಾಖಲೆ ರೋಚಕವೂ ಉದ್ಬೋಧಕವೂ ಆಗಿದೆ.

ಉದ್ಯಮ ಇಲಾಖೆಯನ್ನು ಅವರು ನೋಡಿಕೊಳ್ಳುತ್ತಿದ್ದಾಗ ಅವರ ದೂರದೃಷ್ಟಿಯ ಫಲವೆಂಬಂತೆ ಬೆಂಗಳೂರಿನ ಎಚ್.ಎಂ.ಟಿ. (ಹಿಂದುಸ್ಥಾನ್ ಮೆಷಿನ್ ಟೂಲ್ಸ್) ಇದರ ಎರಡು ಹೊಸ ಘಟಕಗಳು ತುಮಕೂರು ಮತ್ತು ಕಾಶ್ಮೀರದಲ್ಲಿ ನೆಲೆಯೂರಿದವು. ಮಾತ್ರವಲ್ಲ, ವಿದೇಶೀ ಮೂಲದ ಕೋಕೋ ಕೋಲಾಕ್ಕೆ ದೇಶದಲ್ಲಿ ಪ್ರತಿಬಂಧ ಹೇರಿ, ದೇಶೀ ಮೂಲದ 77ಪೇಯಕ್ಕೆ ಅನುವು ಮಾಡಿಕೊಟ್ಟರು.

ಚುನಾವಣೆಯ ಸೋಲು ಅಥವಾ ಸುಳ್ಳು ಆರೋಪಗಳಿಂದ ಮಂತ್ರಿಮಂಡಲಗಳಿಂದ ಹೊರಗೆ ಇದ್ದಾಗ ಅವರು ಜನತಾದಳದ ಧುರೀಣನಾಗಿ ಕರ್ನಾಟಕದ ಕರಾವಳಿಯುದ್ದಕ್ಕೂ ಪ್ರವಾಸಗೈದು ತಾನು ಯೋಜಿಸಿದ್ದ ಕೊಂಕಣ ರೈಲು ಯೋಜನೆಗೆ ಎಲ್ಲಿ ತಡೆಬಂದೀತೋ ಎಂಬ ಕಾತುರದಿಂದ ತಮ್ಮ ಪ್ರವಾಸದುದ್ದಕ್ಕೂ ಅಲ್ಲಲ್ಲಿ ಸಭೆ ನಡೆಸಿ ಯೋಜನೆಯ ಪರವಾಗಿ ಜನಾಭಿಪ್ರಾಯವನ್ನು ಉಂಟುಮಾಡಿದರು.
ಅಟಲ್ ಬಿಹಾರಿ ವಾಜಪೇಯಿ ಅವರ ಸರಕಾರದಲ್ಲಿ ರಕ್ಷಣಾ ಇಲಾಖೆಯನ್ನು ಮಂತ್ರಿಗಳಾಗಿದ್ದಾಗ ಪಾಕಿಸ್ತಾನದ ವಿರುದ್ಧ ನಡೆದ ಕಾರ್ಗಿಲ್ ಯುದ್ಧವನ್ನು ಅವರು ಎದುರಿಸಿದ್ದು ಚರಿತ್ರೆಯ ಪುಟಗಳಲ್ಲಿ ಅನನ್ಯವಾಗಿ ನಿಲ್ಲುವಂಥದ್ದು. ಸೈನಿಕರ ಸುಖ ದುಃಖ ತಿಳಿಯಲು ಸ್ವತಃ ಯುದ್ಧಭೂಮಿಗೆ ಹಲವು ಬಾರಿ ಹೋಗಿದ್ದರು ಜಾರ್ಜ್.

ರಕ್ಷಣಾ ಇಲಾಖೆಗೆ ಸಂಬಂಧಪಡುವ ನೌಕಾನೆಲೆಯನ್ನು ಕಾರವಾರದಲ್ಲಿ ನೆಲೆಯೂರಿಸುವ ಪ್ರಸ್ತಾವನೆ ಹಿಂದಿನ ಮಂತ್ರಿಮಂಡಲಗಳ ಅವಧಿಯಲ್ಲಿ ನೆನೆಗುದಿಗೆ ಬಿದ್ದಿರುವುದನ್ನು ಅವರು ಸ್ವತಃ ಮುತುವರ್ಜಿ ವಹಿಸಿ ಅದಕ್ಕೆ ಜೀವತುಂಬುವಂತೆ ಮಾಡಿದರು. ಕಾರವಾರದಲ್ಲಿ ರೆಕ್ಕೆ ಬಿಚ್ಚಿರುವ ಈ ‘ಕಡಲ ಹಕ್ಕಿ’ ಬೃಹತ್ತಾಗಿ ಬೆಳೆಯುತ್ತಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಅದ್ವಿತೀಯದ್ದೆಂದು ಬಗೆಯಲಾಗುತ್ತದೆ. ಯೋಜನೆಯ ಕಾಮಗಿರಿಯ ಪ್ರಗತಿ ತಿಳಿಯಲು ಕಾರವಾರಕ್ಕೆ ಹಲವು ಬಾರಿ ಬಂದಿದ್ದರು. ವಿಶೇಷವೆಂದರೆ, ಅವರು ಅಧಿಕಾರವಿರಲಿ, ಇಲ್ಲದಿರಲಿ ಅವರು ಅತಿ ಸಾಮಾನ್ಯನಂತೆ ಜನರೊಡನೆ ಬೆರೆಯುತ್ತಿದ್ದುದು.

ನಾಲ್ಕೈದು ವರ್ಷಗಳ ಹಿಂದೆ ತನ್ನ ಪತಿ ಜಾರ್ಜ್ ಅವರನ್ನು ನಾಟಕೀಯವೆಂಬಂತೆ ಸೇರಿಕೊಂಡ ಘಟನೆಯ ಕುರಿತು ಜಾರ್ಜ್ ಅವರ ಸಹೋದರರು 25-01-2010ರಂದು ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ಜಾರ್ಜರ ಪರಿತ್ಯಕ್ತ ಪತ್ನಿ ಹಾಗೂ ಅವರ ಮಗ 2009ರ ಡಿಸೆಂಬರ್ 18ರಂದು ಬಲವಂತವಾಗಿ ಅವರ ಎಡಗೈ ಹೆಬ್ಬೆಟ್ಟಿನ ಗುರುತು ಪಡೆಯುವ ಮೂಲಕ ಅವರ ಜೀವನದಲ್ಲಿ ಬಿರುಗಾಳಿಯನ್ನೆಬ್ಬಿಸಿದರು ಎಂದು ಹೇಳಿದ್ದಾರೆ. ಬಂಗಲೆಯಲ್ಲಿ ಜಾರ್ಜರ ದೈನಂದಿನ ಆರೋಗ್ಯ ಪರಿಚಾರಕರು ಹಾಗೂ ಮನೆ ಕೆಲಸದವರ ಕಣ್ಣು ತಪ್ಪಿಸಿ ಹೆಬ್ಬೆಟ್ಟು ಗುರುತು ಪಡೆದರು. ಎಂದು ಆರೋಪಿಸಿದ್ದಾರೆ. ಈ ಆರೋಪಗಳು ಈಗ ನ್ಯಾಯಾಲದಲ್ಲಿ ವಿಚಾರಣೆಯಲ್ಲಿ ಇವೆ.
ಶ್ರೀಮತಿ ಲೈಲಾ ಕಬೀರ್ ಜಾರ್ಜರನ್ನು ಪುನಃ ಸೇರುವುದಕ್ಕೆ ಪತಿಯ ಅನಾರೋಗ್ಯವು ಕಾರಣವೆಂದು ತಿಳಿಯುವಂತೆ ಮಾಡಿದ್ದರಾದರೂ ಅಂತರ್ಯದಲ್ಲಿ ಪತಿಯ ಸಾಂಪತ್ತಿಕ ಸ್ಥಿತಿ ಧಿಢೀರನೆ ವೃದ್ಧಿಯಾದುದು ಎಂದು ತರ್ಕಿಸಲಾಗುತ್ತಿದೆ. ಪತಿಯ ಸಂಪತ್ತು ಯಾರ್‍ಯಾರದೋ ಅದರಲ್ಲೂ ಅವರ ಸಹೋದರರ ಪಾಲಾದೀತೆಂಬ ಭೀತಿಯಿಂದ ಅವರು ಹಾಗೆ ಮಾಡಿದರೆಂಬ ಅಖ್ಯಾಯಿಕೆಯೂ ಪ್ರಚಲಿತದಲ್ಲಿದೆ. ನ್ಯಾಯಾಲಯದಲ್ಲಿರುವ ಈ ಘಟನೆಗಳ ಕುರಿತು ಇಲ್ಲಿ ವಿವರಿಸುವುದು ಅಪ್ರಸ್ತುತ ಮತ್ತು ಅಪ್ರಾಸಂಗಿಕ.

ಆದರೆ ಒಬ್ಬ ಪಕ್ಕಾ ಸಮಾಜವಾದಿಯ ಸಂಪತ್ತು ಹೇಗೆ ವೃದ್ಧಿಯಾಯಿತು? ಇದು ತಾತ್ವಿಕವಾಗಿ ಸರಿಯೇ? ಎಂಬ ರಾಜಕೀಯ ಚರ್ಚೆ ಪತ್ರಿಕೆಗಳ ಮೂಲಕ ನಡೆಯುತ್ತಿದ್ದಾಗ ಅದಕ್ಕೆ ವಿವರಣೆಯನ್ನು ನೀಡುವ ಸ್ಥಿತಿಯಲ್ಲಿ ಅಣ್ಣ ಜಾರ್ಜ್ ಇಲ್ಲವಾದ್ದರಿಂದ ಸಹೋದರರಾದ ಮೈಕಲ್, ಪೌಲ್, ಅಲೋಶಿಯಸ್ ಮತ್ತು ರಿಚರ್ಡ್ ಜಂಟಿಯಾಗಿ 23-01-2010ರಂದು ಅಣ್ಣನ ಸಂಪತ್ತು ಹೇಗೆ ಹೆಚ್ಚಿತು ಮತ್ತು ಅದರ ವಿನಿಯೋಗ ಸಾರ್ವಜನಿಕ ಸೇವೆಗಾಗಿ ಹೇಗೆ ಬಳಕೆಯಾಗಲಿದೆ ಎಂಬ ವಿವರವುಳ್ಳ ಪ್ರಕಟಣೆಯೊಂದನ್ನು ಪತ್ರಿಕೆಗಳಿಗೆ ನೀಡಿದ್ದರು.

ಅಣ್ಣ ಜಾರ್ಜ್ 2004ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದಾಗ ಚುನಾವಣಾ ಆಯೋಗಕ್ಕೆ ತಮ್ಮ ಆಸ್ತಿ ಬ್ಯಾಂಕುಗಳಲ್ಲಿರುವ ವಿವಿಧ ಠೇವು ಹಾಗೂ ಬೆಂಗಳೂರು ನೆಲಮಂಗಲದಲ್ಲಿರುವ ೨೨ ಎಕರೆ ಕೃಷಿಭೂಮಿಯ ಕಿಮ್ಮತ್ತು ಸೇರಿದಂತೆ ಸುಮಾರು 11 ಲಕ್ಷ ಎಂದು ತೋರಿಸಿದ್ದಾರೆ. ಈ ಭೂಮಿ ಮತ್ತು ಬೆಂಗಳೂರಿನ ಮನೆ ತಮ್ಮ ತಾಯಿಯ ಹೆಸರಿನಲ್ಲಿದ್ದುದರಿಂದ ಅವುಗಳಿಗೆ ಜಾರ್ಜ್ ಒಬ್ಬರೇ ಅಲ್ಲ; ಕುಟುಂಬದ ಸರ್ವ ಸದಸ್ಯರಿಗೂ ಅದರ ಮೇಲೆ ಹಕ್ಕು ಇತ್ತು (ನೆಲಮಂಗಲದ ಭೂಮಿಯನ್ನು 1960ರಲ್ಲಿ ಕೊಳ್ಳಲಾಗಿತ್ತು ಆ ಖರೀದಿಗೂ ಸಾಲ ಪಡೆದಿದ್ದರಿಂದ ಅದನ್ನು ತೀರಿಸಲು ಭೂಮಿಯ ೩ ಎಕರೆ ಭಾಗವನ್ನು 1992ರಲ್ಲಿ ಮಾರಲಾಗಿತ್ತು).

2009ರಲ್ಲಿ ತಮ್ಮ ಅಣ್ಣ ಹದಿನೈದನೆಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದಾಗ ತಮ್ಮ ಒಟ್ಟು ಸಂಪತ್ತು ತಾಯಿಯಿಂದ ಬಳುವಳಿಯಾಗಿ ಬಂದ ಭೂಮಿಯೂ ಒಳಗೊಂಡಂತೆ ಏಳುಕೋಟಿ ಎಂದು ಘೋಷಿಸಿದ್ದರು (ಅನಾರೋಗ್ಯ ಉಲ್ಭಣವಾದುದ್ದರಿಂದ ಅವರು ಚುನಾವಣಾ ಕಣಕ್ಕೆ ಪ್ರವೇಶಿಸಲಾಗಲಿಲ್ಲ; ಆ ಮಾತು ಬೇರೆ).

ಇಂಥ ಅಮಾಯಕ ಸಹೋದರನ ಸಂಪತ್ತು 2004ರಲ್ಲಿ ಹನ್ನೊಂದು ಲಕ್ಷವಿದ್ದದ್ದು ಏಳು ಕೋಟಿಗೆ ಹೇಗೆ ಏರಿತು ? ಈ ಏರಿಕೆ ಅವರು ಜೀವನದುದ್ದಕ್ಕೂ ಕಾದುಕೊಂಡು ಬಂದಿದ್ದ ಸಮಾಜವಾದೀ ಬದ್ಧತೆಯ ಅವಹೇಳನವಾಗುವುದಿಲ್ಲವೇ ? ಎಂಬ ಚರ್ಚೆ ವ್ಯಾಪಕವಾಗಿ ನಡೆಯುತ್ತಿದ್ದುದನ್ನು ಗಮನಿಸಿ ನಾಲ್ವರು ಸಹೋದರರು ಜಂಟಿಯಾಗಿ ಒಂದು ವಿವರಣಾ ಹೇಳಿಕೆ ನೀಡುವಂತಾಗಿತ್ತು.

ಈ ದೀರ್ಘಾವಧಿಯಲ್ಲಿ ಬೆಂಗಳೂರು ಸುತ್ತಮುತ್ತ ಭೂಮಿಯ ಬೆಲೆ ವಿಪರೀತ ಏರಿಬಿಟ್ಟಿದ್ದರಿಂದ ಈ ಏರಿಕೆಯಾಗಿತ್ತು. ಬೆಂಗಳೂರಿನ ಮನೆ ಮತ್ತು ನೆಲಮಂಗಲದ ಭೂಮಿ ಎಲ್ಲವನ್ನು ಅದಾಗಲೇ ಮಾರಿದ್ದರಿಂದ ಬಂದ ಪ್ರಾಪ್ತಿಯಲ್ಲಿ ಅಣ್ಣನ ಪಾಲು ಹದಿಮೂರು ಕೋಟಿಗೆ ಬಂದು ನಿಂತಿತ್ತು ಎಂಬ ಅಂಶವನ್ನು ಕೂಡ ಅವರು ವಿವರಿಸಿದ್ದಾರೆ. ಇದರಲ್ಲಿ ಮೂರುಕೋಟಿಯಷ್ಟನ್ನು ಅವರ ವೈಯಕ್ತಿಕ ಸುಖಸೌಕರ್ಯ ನೋಡುವುದಕ್ಕಾಗಿ ಮೀಸಲಿಟ್ಟು ಉಳಿದುದನ್ನು ಅವರ ಸ್ಮರಣಾರ್ಥ ಒಂದು ಪ್ರತಿಷ್ಠಾನವನ್ನು ಸ್ಥಾಪಿಸಿ ಪ್ರತಿಷ್ಠಾನದಿಂದ ಬರುವ ಬಡ್ಡಿಹಣದಿಂದ ಪ್ರತಿವರ್ಷ ತಾಂತ್ರಿಕಶಿಕ್ಷಣ, ವೈದ್ಯಕೀಯ ಶಿಕ್ಷಣ ಪಡೆಯುವ ಬಡವಿದ್ಯಾರ್ಥಿಗಳಿಗೆ ಮತ್ತು ದೇಶವ್ಯಾಪಿಯಾಗಿ ಹರಡಿರುವ ಬೇರೆ ಬೇರೆ ಸೇವಾಸಂಸ್ಥೆಗಳಿಗೆ ದಾನ ನೀಡುವಂತಹ ಒಂದು ಯೋಜನೆ ಲೈಲಾ ಮತ್ತು ಶಾನ್ ಅವರ ಸಹಮತದೊಂದಿಗೆ ರೂಪಿಸಲಾಗಿತ್ತು. ಜಾರ್ಜ್ ಅವರ ದಿಲ್ಲಿಯ ಆತ್ಮೀಯ ಗೆಳೆಯ ಫ್ರೆಡ್ಡಿ ಅವರನ್ನು ಸಂಚಾಲಕರನ್ನಾಗಿಯೂ ಮಾಡಲಾಗಿತ್ತು. ಸಂಪತ್ತಿನ ಪಾಲುದಾರಿಕೆಯೇ ಕಲಹದ ಬಿಂದುವಾಗಿ ನ್ಯಾಯಾಲಯದಲ್ಲಿರುವುದರಿಂದ ಬಹುಶಃ ಅದೂ ಸ್ತಂಭನಕ್ಕೆ ಗುರಿಯಾಯಿತೆಂದು ಭಾವಿಸಲಾಗಿದೆ.

ಹದಿನಾರನೆಯ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮೇಲೆ ಹೇಳಿದ ವಿವರಣೆಯಿಂದ ಜನಸಾಮಾನ್ಯರು ಒಂದು ವಿಶೇಷಾರ್ಥವನ್ನು ಮಾಡಿಕೊಳ್ಳಬಹುದಾಗಿದೆ. ಸಮಾಜವಾದಿಯಾಗಿ ಬದ್ಧತೆಯಿಂದ ದೀನದಲಿತರ ಪರವಾಗಿ ಕಳೆದ ಐದು ದಶಕಗಳಿಂದ ಹೋರಾಡುತ್ತ ಬಂದಿರುವ ತಮ್ಮ ಅಣ್ಣನ ಈ ಸಹೋದರರು ತಳೆದ ಧೋರಣವು ಅನ್ಯಾದರ್ಶವಾದುದು ಎಂದು ಧಾರಾಳವಾಗಿ ಹೇಳಬಹುದು.

ಅಮ್ಮೆಂಬಳ ಆನಂದ

(ಸಮಾಜವಾದಿಯಾಗಿದ್ದ ಕಾರ್ಮೀಕ ಹೋರಾಟಗಾರ, ಮಾಜಿ ಕೇಂದ್ರ ರಕ್ಷಣಾ ಮಂತ್ರಿ ಜಾರ್ಜ್ ಫೆರ್ನಾಂಡಿಸ್ ಅಮ್ಮೆಂಬಳ ಆನಂದ ಅವರ ಒಂದು ಕಾಲದ ಒಡನಾಡಿ. ಒಡನಾಡಿ ಜಾರ್ಜ್ ಬಗ್ಗೆ ದಿನಾಂಕ ೦೯-೧೧-೨೦೧೮ರಂದು ಅಮ್ಮೆಂಬಳ ಆನಂದರು ಬರೆದು ಕಿರು ಹೊತ್ತಗೆಯಾಗಿ ಪ್ರಕಟಿಸಿ ಬಿಡುಗಡೆಗೊಳಿಸಿದ ಪುಸ್ತಕದಲ್ಲಿ ಜಾರ್ಜ್ ಅವರ ಬದುಕು ಮತ್ತು ಹೋರಾಟದ ಬಗ್ಗೆ ಬರೆದ ಸುಧೀರ್ಘ ಲೇಖನವನ್ನು ಜಾರ್ಜ್ ಫೆರ್ನಾಂಡಿಸ್ ಅವರ ನಿರ್ಗಮನದ ಹಿನ್ನೆಲೆಯಲ್ಲಿ ಇಲ್ಲಿ ಕೊಡಲಾಗಿದೆ. – ಶ್ರೀರಾಮ ದಿವಾಣ (ಸಂಪಾದಕ)

 

Leave a Reply

Your email address will not be published. Required fields are marked *