Realtime blog statisticsweb statistics
udupibits.in
Breaking News
ಉಡುಪಿ: ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ಬೆಂಬಲಿಸಿ ವರದಿ ಪ್ರಕಟಿಸಿದ ಉದಯವಾಣಿ ವಿರುದ್ಧ ಶ್ರೀರಾಮ ದಿವಾಣರಿಂದ ಚುನಾವಣಾ ಆಯೋಗಕ್ಕೆ ದೂರು

ಬಹುಮುಖ ಪ್ರತಿಭೆಯ ಡಾ.ಕಾಸರಗೋಡು ಅಶೋಕ್ ಕುಮಾರ್

# ಗಡಿನಾಡು ಕಾಸರಗೋಡಿನಲ್ಲಿ ಹುಟ್ಟಿ, ಶಾಲೆ-ಕಾಲೇಜು ಕಲಿತು, ವಿದ್ಯಾರ್ಥಿ ನಾಯಕನಾಗಿ ಮಿಂಚಿ, ಕಾಸರಗೋಡಿನ ಕನ್ನಡಪರ ಹೋರಾಟಗಳಲ್ಲಿ ಮುಂಚೂಣಿ ಪಾತ್ರವಹಿಸಿ, ಕರ್ನಾಟಕದಲ್ಲಿ ವೃತ್ತಿ ನಿರತರಾಗಿ ನಿವೃತ್ತರಾಗಿ; ಸಾಹಿತ್ಯ, ಚಲನಚಿತ್ರ, ಕಿರುತೆರೆ, ರಂಗಭೂಮಿ ಕ್ಷೇತ್ರಗಳಲ್ಲಿ ನಟರಾಗಿ ಮೆರೆದು ಹತ್ತು ಹಲವಾರು ಪ್ರಶಸ್ತಿಗಳನ್ನು ಪಡೆದು ಪ್ರಸಿದ್ದಿ ಪಡೆದ ಬಹುಮುಖ ವ್ಯಕ್ತಿತ್ವವೇ ಡಾ// ಕಾಸರಗೋಡು ಅಶೋಕಕುಮಾರ್.

ಕೆ. ಕೃಷ್ಣ ಕಾಮತ್ ಹಾಗೂ ಚಂದ್ರಾವತಿ ಕಾಮತ್ ದಂಪತಿಗಳ ಮಗನಾಗಿ 1953ರ ಡಿಸೆಂಬರ್ ಒಂದರಂದು ಹುಟ್ಟಿದ ಅಶೋಕ್ ಕುಮಾರ್ ಅವರು, ಸಿಂಡಿಕೇಟ್ ಬ್ಯಾಂಕಿನ ಹಿರಿಯ ಪ್ರಬಂಧಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು.

ವಿದ್ಯಾರ್ಥಿ ಜೀವನದಲ್ಲಿಯೇ ಸಾಹಿತ್ಯಾಸಕ್ತಿ ಬೆಳೆಸಿಕೊಂಡಿದ್ದ ಅಶೋಕ್ ಕುಮಾರ್ ಅವರು ಕವಿಯಾಗಿ, ಪತ್ತೆದಾರಿ ಕಾದಂಬರಿಕಾರರಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ನಟರಾಗಿ ಸಾಧಿಸಿದ ಸಾಧನೆಗೆ ಈಗಾಗಲೇ ಹತ್ತು ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ, ಸನ್ಮಾನಗಳಿಗೆಹ ಭಾಜನರಾಗಿದ್ದಾರೆ.

‘ಹೆಡೆ ಎತ್ತಿದ ನಾಗ’ ಇವರ ಪ್ರಕಟಿತ ಪತ್ತೆದಾರಿ ಕಾದಂಬರಿಯಾದರೆ, ‘ಸ್ಪಂದನ’ ಕವನಗಳ ಸಂಕಲನ, ‘ಅಳುವಳು ನೇತ್ರಾವತಿ’ ಮತ್ತು ‘ನೇತ್ರಾವತಿ ಉಳಿಸಿ’ ಇವುಗಳು ಜನ ವಿರೋಧಿ ಹಾಗೂ ಪರಿಸರ ವಿರೋಧಿಯಾದ ನೇತ್ರಾವತಿ ನದಿ ತಿರುವು ಯೋಜನೆಯ ವಿರುದ್ದ ಬರೆದ ಹನಿಕವನಗಳ ಸಂಕಲನ. ‘ಕಪ್ಪು ಬಿಳಿ’ ಮತ್ತು ‘ಉರಿ’ ಇವರ ಮತ್ತೆರಡು ಹನಿಕವನಗಳ ಸಂಕಲನ. ‘ಚಿಲಿಪಿಲಿ’ ಮಕ್ಕಳಿಗಾಗಿ ಇವರು ರಚಿಸಿ ಪ್ರಕಟಿಸಿದ ಚುಟುಕುಗಳ ಸಂಕಲನ. ಮಕ್ಕಳೇ ರಚಿಸಿದ ಚುಟುಕು ಸಂಕಲನಗಳನ್ನು ಪ್ರಕಟಿಸಿದ ಹೆಚ್ಚುಗಾರಿಕೆ ಇವರದು.

ದ. ಕ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕಾಸರಗೋಡು ಅಶೋಕ್ ಕುಮಾರ್ ಅವರು ಅನೇಕ ಕವಿಗೋಷ್ಟಿಗಳಲ್ಲಿ ಭಾಗವಹಿಸಿ ಕವನ ವಾಚಿಸಿದವರು, ಮಕ್ಕಳಿಗಾಗಿಯೇ ಸಾಹಿತ್ಯ ರಚನಾ ಕಾರ್ಯಾಗಾರಗಳನ್ನು ಆಯೋಜಿಸಿದವರು.

ಅಪಾರ ಸಾಮಾಜಿಕ ಕಾಳಜಿಯ ಡಾ. ಕಾಸರಗೋಡು ಅಶೋಕ್ ಕುಮಾರ್ ಅವರು ಪ್ರಸ್ತುತ ಮಂಗಳೂರು ನಿವಾಸಿ. ವೃತ್ತಿಯಿಂದ ನಿವೃತ್ತರಾದ ಬಳಿಕ ಮನೆವಾಸಿಯಾಗಿಯೇ ಉಳಿಯದೆ, ಸಾಹಿತ್ಯಾಸಕ್ತರ ಮತ್ತು ಕಲಾಸಕ್ತರ ಮನವಾಸಿಯಾದ ಅಶೋಕ್ ಕುಮಾರ್ ಅವರು ಒಬ್ಬರು ಅನನ್ಯ ಕನ್ನಡ ರತ್ನವಾಗಿದ್ದಾರೆ. ಈ ಕನ್ನಡದ ರತ್ನ ಇದೇ ಫೆಬ್ರವರಿ 17ರಂದು ಉಡುಪಿ ಬೀಡಿನಗುಡ್ಡೆಯ ಪ್ರಕಾಶ್ ಪೂಜಾರಿಯವರ ಮನೆಯಂಗಳದ ‘ಬೆನಗಲ್ ನರಸಿಂಗ ರಾವ್ ಸಭಾಂಗಣ’ದಲ್ಲಿ ನಡೆಯುವ ‘ತಿಂಗಳ ಬೆಳಕು- 8’ ರಲ್ಲಿ ವಿಶೇಷ ಉಪನ್ಯಾಸ ನೀಡಲಿದ್ದಾರೆ.

– ಶ್ರೀರಾಮ ದಿವಾಣ

Leave a Reply

Your email address will not be published. Required fields are marked *