Realtime blog statisticsweb statistics
udupibits.in
Breaking News
ಮಂಗಳೂರು: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣರಿಂದ ಹೇಳಿಕೆ- ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ

ಕುಕ್ಕೆ ಕ್ಷೇತ್ರದ ಚಾರಿತ್ರಿಕ ಹಿನ್ನೆಲೆ- ಭಾಗ 4

  • ಡಾ. ಮ. ಸು. ಅಚ್ಚುತ ಶರ್ಮಾ

# ಈ ಕ್ಷೇತ್ರವು ನಾಲ್ಕು ಸುತ್ತಲು ಈಗ ದರ್ಪಣ ತೀರ್ಥ, ವ, ಕನ್ನಡಿ ಹೊಳೆಯೆಂದು ಕರೆಯಲ್ಪಡುವ ಹೊಳೆ ಮತ್ತು ಕುಮಾರಾಧಾರಾ ನದಿಯಿಂದ ಆವೃತವಾಗಿರುವುದರಿಂದ ದ್ವೀಪದಂತಿದೆ. ಈ ಕನ್ನಡಿ ಹೊಳೆಗೆ ಮೊತ್ತಮೊದಲು ಭೀಮನ ಹೊಳೆಯೆಂತಲೂ ಹೆಸರಿತ್ತಂತೆ. ಇದು ಕುಮಾರಾಧಾರಾ ನದಿಗೆ ಸಂಗಮವಾಗುವ ಸ್ಥಳಕ್ಕೆ ಮತ್ಸ್ಯ ತೀರ್ಥವೆಂಬ ಹೆಸರಿದೆ. ಶ್ರೀ ಸುಬ್ರಹ್ಮಣ್ಯ ದೇವರ ಶ್ರೀ ಚಂಪಾ ಷಷ್ಠಿ ಮಹೋತ್ಸವದ ಅವಭೃತ ಸ್ನಾನವು ಈ ಸಂಗಮ ಸ್ಥಾನದಲ್ಲಿಯೇ ನಡೆಯುತ್ತದೆ. ಕುಮಾರಧಾರೆಯ ಈ ಸ್ಥಳದ ಹೊಳೆಯಲ್ಲಿ ನಿಬಿಡವಾಗಿ ಮೀನುಗಳು ತುಂಬಿರುವುದರಿಂದ ಇಲ್ಲಿಗೆ ಮತ್ಸ್ಯ ತೀರ್ಥವೆಂದು ಕರೆಯುತ್ತಾರೆ. ಇಲ್ಲಿಗೆ ದೇವಸ್ಥಾನದಿಂದ ಸಾಧಾರಣ ಎರಡು ಮೈಲು ದೂರವಿದೆ.

ಈ ಕನ್ನಡಿ ಹೊಳೆಯು ಕುಮಾರ ಪರ್ವತಕ್ಕೆ ಹತ್ತಿ ಹೋಗುವ ದಾರಿಯಲ್ಲಿ ಗಿರಿ ಮಠದ ಹತ್ತಿರ ಇರುವ ಒಂದು ಹಳ್ಳದಿಂದ ಹರಿದು ಬರುತ್ತದೆ. ಕುಮಾರಾಧಾರಾ ನದಿಯು ಮೈಸೂರು ಪ್ರಾಂತದ ಬಿಸಿಲೇ ಘಾಟಿಯ ತೆಂಕು ದಿಕ್ಕಿನಲ್ಲಿರುವ ಕುಮಾರ ಪರ್ವತದಿಂದ ಹರಿದು ಬರುತ್ತದೆ. ಈ ಕುಮಾರ ಪರ್ವತದ ಶಿಖರದಲ್ಲೇ ತಾರಾಕಾಸುರನ ಸಂಹಾರಕ್ಕೋಸ್ಕರ ಶ್ರೀ ಕುಮಾರ ಸ್ವಾಮಿಗೆ ದೇವಸೇನಾಧಿಪತಿ ಪಟ್ಟವಾಯಿತೆಂದೂ ಆ ಪಟ್ಟಾಭಿಷೇಕದ ತೀರ್ಥವೇ ಧಾರೆಯಾಗಿ ಕೆಳಗೆ ಇಳಿದು ಬಂದುದರಿಂದ ಈ ನದಿಗೆ ಕುಮಾರಾಧಾರಾ ನದಿಯೆಂಬ ಹೆಸರು ಬಂತೆಂದೂ ಐತಿಹ್ಯವಿದೆ. ಈ ಕುಮಾರ ಪರ್ವತವು ದೇವಸ್ಥಾನದ ಮೂಡು ದಿಕ್ಕಿನಲ್ಲಿದೆ.

ಈ ಕುಮಾರ ಪರ್ವತದ ದೃಶ್ಯವು ನೋಟಕರಿಗೆ ಪ್ರಕೃತಿ ಸೌಂದರ್ಯದ ನೆಲೆವೀಡಂತಿದ್ದು ಬಹಳ ಅಂದವಾಗಿ ಕಾಣುತ್ತದೆ. ಮೇಲೆ ಹೋಗಲು ದಾರಿ ಇದ್ದರೂ ಹತ್ತಿಕೊಂಡು ಹೋಗಲಿಕ್ಕೆ ಕಷ್ಟಸಾಧ್ಯವಾಗಿದೆ. ಕೆಲವರು ಇಲ್ಲಿಯ ಮಲೆಕುಡಿಯರವರ ಸಹಾಯದಿಂದ ಪರ್ವತದ ತುದಿಗೆ ಹತ್ತಿ ಬರುತ್ತಾರೆ. ಮೇಲೆ ಹತ್ತಿದರೆ ಸಿದ್ಧ, ಶೇಷ ಮತ್ತು ಕುಮಾರಗಳೆಂಬ ಮೂರು ಶಿಖರಗಳು ಕಾಣಸಿಕ್ಕುತ್ತವೆ. ಈ ಸುಬ್ರಹ್ಮಣ್ಯ ಕ್ಷೇತ್ರದಿಂದ ಪುತ್ತೂರಿಗೆ 35 ಮೈಲು, ಮಂಗಳೂರಿಗೆ 65 ಮೈಲುಗಳ ಅಂತರವಿದೆ.

ಮುಂದುವರಿಯುವುದು

Leave a Reply

Your email address will not be published. Required fields are marked *