Realtime blog statisticsweb statistics
udupibits.in
Breaking News
ಉಡುಪಿ: ಕನಿಷ್ಠ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ನಗರಸಭೆ, ಜಿಲ್ಲಾಡಳಿತ, ರಾಜ್ಯ-ಕೇಂದ್ರ ಸರಕಾರ ಸಂಪೂರ್ಣ ವಿಫಲ !

ಕುಕ್ಕೆ ಕ್ಷೇತ್ರದ ಚಾರಿತ್ರಿಕ ಹಿನ್ನೆಲೆ- ಭಾಗ 5

* ಡಾ.ಮ.ಸು.ಅಚ್ಚುತ ಶರ್ಮಾ

# ಶ್ರೀ ಕುಕ್ಕೆ ಲಿಂಗವ ಕಂಡೆವು
ಕುಮಾರಧಾರೆ ಮಿಂದೆವು
ಕೊಪ್ಪರಿಗನ್ನ ಉಂಡೆವು
ಶ್ರೀ ಅನ್ನದಾತ ಸುಬ್ಬಪ್ಪನ ಪಾದಕ್ಕೆ ನಮೋ ನಮಃ

ಶ್ರೀ ಕ್ಷೇತ್ರವು ಅತಿ ಪುರಾತನದ್ದಾಗಿ ಮಹಾ ಮಹಿಮೆ ಉಳ್ಳದ್ದಾಗಿದೆ. ಈ ಸುಬ್ರಹ್ಮಣ್ಯ ಕ್ಷೇತ್ರದ ಮಹಿಮೆಯು ಇಲ್ಲಿಯ ಪ್ರಧಾನ ದೇವರಾದ ಶ್ರೀ ಸುಬ್ರಹ್ಮಣ್ಯೇಶ್ವರನೆಂಬ ದೇವರ ಹೆಸರಿನ ಶಬ್ದಾರ್ಥದಿಂದಲೇ ವ್ಯಕ್ತವಾಗುತ್ತದೆ. ಅರ್ಥ: ಸುಷ್ಟು+ಬ್ರಹ್ಮ=ಸುಬ್ರಹ್ಮ, ”ಯಸ್ಮಿನ್ ಕ್ಷೇತ್ರೇ ಸುಬ್ರಹ್ಮ ಜ್ಞಾನಂ ಸಂವರ್ಧತೇ ತತ್ ಕ್ಷೇತ್ರಂ ಸುಬ್ರಹ್ಮಣ್ಯ ಕ್ಷೇತ್ರಂ ಇತಿ” ಯಾವ ಕ್ಷೇತ್ರದಲ್ಲಿ ನಿತ್ಯ ಶುದ್ಧ ಬುದ್ದ ಮುಕ್ತ ಸ್ವಭಾವದ ಬ್ರಹ್ಮ ಜ್ಞಾನವು ಅಲ್ಲಿಯ ವಾಸದಿಂದಲೂ ಮತ್ತು ಅಲ್ಲಿಯ ದೇವರ ದರ್ಶನದಿಮದಲೂ ವೃದ್ಧಿಯಾಗುತ್ತದೋ ಆ ಕ್ಷೇತ್ರಕ್ಕೆ ಅದರಿಂದಾಗಿ ಸುಬ್ರಹ್ಮಣ್ಯ ಕ್ಷೇತ್ರವೆಂದೂ, ಅಲ್ಲಿಯ ದೇವರಿಗೆ ಶ್ರೀ ಸುಬ್ರಹ್ಮಣ್ಯೇಶ್ವರನೆಂದೂ ಹೆಸರು ಬಂದದ್ದಾಗಿದೆ. ಅಲ್ಲದೆ ಆ ಕ್ಷೇತ್ರದಲ್ಲಿ ಮೇಲೆ ವಿವರಿಸಲ್ಪಟ್ಟ ಭೇದ ಭಾವವಿಲ್ಲದ ಶುದ್ಧ ಬ್ರಹ್ಮಜ್ಞಾನಿಗಳಾದ ಬ್ರಾಹ್ಮಣರೂ ಋಷಿಗಳೂ ವಾಸವಾಗಿದ್ದರೆಂತಲೂ ತಿಳಿಯಬಹುದಾಗಿದೆ. ಅಂತಹ ಅನ್ವರ್ಥನಾಮವನ್ನು ಹೊಮದಿಂದ ಈ ಸುಬ್ರಹ್ಮಣ್ಯ ಕ್ಷೇತ್ರದ ಮಹಿಮೆಯನ್ನು ಎಷ್ಟು ಹೊಗಳಿದರೂ ಅತಿಶಯೋಕ್ತಿಯಾಗಲಾರದು.

ಇಲ್ಲಿ ವಾಸುಕಿಯು ಗರುಡನ ಭಯಕ್ಕೆ ಹೆಸರಿ ಶ್ರೀ ಕುಮಾರ ಸ್ವಾಮಿಯ ಸಹಾಯವನ್ನು ಪಡೆದು ಅವನ ರಕ್ಷಣೆಯಲ್ಲಿ ನೆಲೆಸಿರುವುದರಿಂದ ಈ ಕ್ಷೇತ್ರವನ್ನು ವಾಸುಕಿ ಕ್ಷೇತ್ರವೆಂದೂ ಕರೆಯುತ್ತಿದ್ದರು. ಶ್ರೀ ಕುಮಾರ ಸ್ವಾಮಿಯು ತಾರಕಾಸುರನನ್ನು ಸಂಹಾರ ಮಾಡಿದ ಪ್ರಾಯಶ್ಚಿತ್ತಕ್ಕಾಗಿ ಇಲ್ಲಿ ಮೂರು ಲಿಂಗಗಳನ್ನು ಪ್ರತಿಷ್ಠಿಸಿ ತಾನು ವಾಸುಕಿಯಲ್ಲೇ ಸನ್ನಿಹಿತನಾಗಿರುವೆನೆಂದು ಇತಿಹಾಸವಿದೆ. ಈ ಕುಮಾರ ಸ್ವಾಮಿಯು ತನ್ನನ್ನು ನಂಬಿದ ಭಕ್ತಾದಿಗಳ ಸರ್ವರೋಗಗಳನ್ನೂ ನಿವೃತ್ತಿಪಡಿಸಿ ಅವರಿಗೆ ಆರೋಗ್ಯದಾತನಾಗಿಯೂ, ಸರ್ವ ಸಂಕಷ್ಟಗಳನ್ನು ಪರಿಹರಿಸುವವನಾಗಿಯೂ, ನಿರ್ಗತಿಕರಿಗೆ ಅನ್ನದಾನವನ್ನು ಮಾಡಿ ಅದರಿಂದ ಸಂತೋಷಪಡುವವನಾಗಿಯೂ ಇರುವನೆಂದು ತಿಳಿಯಬೇಕು.

ಇಲ್ಲಿ ಸಂತರ್ಪಣೆ ನಡೆಯುತ್ತಿರುವಾಗ ನಾಗ ರೂಪದಿಂದ ಜನರಿಗೆ ದರ್ಶನವಿತ್ತು ಸಂತರ್ಪಣೆಯು ಸಾಂಗವಾಗಿ ನಡೆಯುತ್ತದೋ ಎಂಬ ವಿಚಾರಣೆಯನ್ನು ಕೂಡಾ ಮಾಡುತ್ತಿದ್ದನೆಂತಲೂ, ಭಕ್ತರು ನಾಗ ದರ್ಶನದಿಂದ ಹೆದರದೆ ”ಅನ್ನದಾತ ಸುಬ್ಬಪ್ಪಾ” ಎಂದು ಹೇಳುತ್ತಾ ಸರ್ಪದ ಬೆನ್ನನ್ನು ಸವರುತ್ತಿದ್ದರೆಂದೂ ಪ್ರತೀತಿ ಇದೆ.

ಈ ಕ್ಷೇತ್ರವನ್ನು ಒಂದು ಕಾಲದಲ್ಲಿ ಆದಿತ್ಯ ಕ್ಷೇತ್ರವೆಂದು ಕರೆಯುತ್ತಿದ್ದ ಕರೆಯುತ್ತಿದ್ದರೆಂದೂ ತಿಳಿದುಬರುತ್ತದೆ. ಏಕೆಂದರೆ ಪಾಂಡವರು ಕಾಮ್ಯಕಾ ವನದಲ್ಲಿರುವಾಗ ಸೂರ್ಯ ದೇವರು ಕೊಟ್ಟ ಅಕ್ಷಯ ಪಾತ್ರವನ್ನು ಇಲ್ಲಿ ಬಿಟ್ಟಿರುವರೆಂದೂ ಆದಕಾರಣ ಆ ಸೂರ್ಯ ದೇವರ ಮಹಿಮೆಯಿಂದ ಇಲ್ಲಿ ಸಂತರ್ಪಣೆಯ ಸಮಯದಲ್ಲಿ ಅನ್ನ ಬೇಯಿಸಿ ರಾಶಿ ಹಾಕಿದ ಪಲ್ಲದಲ್ಲಿ ಅನ್ನವು ಅಕ್ಷಯವಾಗುತ್ತಿತ್ತು ಎಂದೂ ಪ್ರತೀತಿ ಇದೆ. ಆದಿ ಶಂಕರರು ಈ ಕ್ಷೇತ್ರವನ್ನು ಸಂದರ್ಶಿಸುವಾಗ ಇಲ್ಲಿ ದಿವಾಕರವಾದಿಗಳೂ ಹಿರಣ್ಯಗರ್ಭವಾದಿಗಳೂ ಆದ ಬ್ರಾಹ್ಮಣರು ಇದ್ದರೆಂದು ಶ್ರೀ ಶಂಕರ ವಿಜಯದಿಂದ ತಿಳಿದು ಬರುವುದರಿಂದ ಇದನ್ನು ಆಗ ಆದಿತ್ಯ ಕ್ಷೇತ್ರವೆಂದೂ ಕರೆಯುತ್ತಿದ್ದರೆಂಬುದು ಸ್ಪಷ್ಟವಾಗುತ್ತದೆ.

ಮುಂದುವರಿಯುವುದು

Leave a Reply

Your email address will not be published. Required fields are marked *