Realtime blog statisticsweb statistics
udupibits.in
Breaking News
ಮಂಗಳೂರು: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣರಿಂದ ಹೇಳಿಕೆ- ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ

ಪುತ್ತೂರು ಕ್ಷೇತ್ರದ ಚಾರಿತ್ರಿಕ ಹತ್ತು ಚೋದ್ಯಗಳು ಮತ್ತು ಪೊಳಲಿ ಕ್ಷೇತ್ರ- ಭಾಗ 5

  • ಡಾ.ಮ.ಸು.ಅಚ್ಚುತ ಶರ್ಮಾ

# ಈ ನಟ್ಟೋಜಿ ಮನೆತನದವರ ಸುತ್ತು ಪೌಳಿಯಿಂದ ಕೂಡಿದ ದೊಡ್ಡ ಮನೆಯು ದೇವಸ್ಥಾನದಿಂದ ಸಾಧಾರಣ ಒಂದೂವರೆ ಮೈಲು ದೂರದಲ್ಲಿ ನೈಋತ್ಯ ದಿಕ್ಕಿನಲ್ಲಿದೆ. ಇವರಿಗೆ ಆ ಮನೆಯಲ್ಲಿ ಆರಾಧ್ಯ ದೇವರು ಇವರ ಪೂರ್ವಿಕರು ನಂಬಿಕೊಂಡು ಬಂದ ಪೊಳಲಿ ರಾಜರಾಜೇಶ್ವರಿ ಅಮ್ಮನವರು. ಈ ಮನೆತನದಲ್ಲಿ ಹೆಚ್ಚಿನ ಗಣ್ಯ ವ್ಯಕ್ತಿಯೆಂದರೆ ದಿವಂಗತ ಶ್ರೀ ಶಿವರಾಯರು. ಇವರ ಕಾಲದ ವರೇಗೂ ಇವರ ಮನೆಯಲ್ಲಿ ಶ್ರೀ ರಾಜರಾಜೇಶ್ವರಿ ಅಮ್ಮನವರಿಗೆ ನವರಾತ್ರಿಯಲ್ಲಿ ಚಂಡಿಕಾ ಹೋಮ, ಒಂಭತ್ತು ದಿವಸಗಳ ಪೂಜೆ ವಗೈರೆ ನಡೆಯುತ್ತಿತ್ತು. ಇವರ ಪೂರ್ವಿಕರು ಪೂಜಿಸುತ್ತಿದ್ದ ಲಿಂಗವು ಮಹಾಲಿಂಗೇಶ್ವರನಾಗಿ ಪುತ್ತೂರಲ್ಲಿ ಮೆರೆದ ನಂತರ ಇವರು ಅದರ ಬದಲಿಗೆ ನಿತ್ಯವೂ ಮೃತ್ತಿಕಾಲಿಂಗ ಮಾಡಿ (ಹುತ್ತದ ಮಣ್ಣಿನಿಂದ ಮಾಡಿದ ಲಿಂಗ) ಅದನ್ನು ಕೈಯಲ್ಲಿಟ್ಟು ಪೂಜಿಸತೊಡಗಿದರು. ಇದು ಪರಂಪರಾಗತವಾಗಿ ಬಂದು ಈಗ ಮರಣಹೊಂದಿದ ಶ್ರೀ ಶಿವರಾಯರು ಸಹ .ಯಾವ ಊರಿಗೆ ಹೋದರೂ ತನ್ನ ಪೂಜಾಕರ್ಮವನ್ನು ಬಿಡದೆ ತನ್ನ ಅಂತ್ಯದ ದಿನವೂ ಬೆಳಿಗ್ಗೆ ಮೃತ್ತಿಕಾ ಲಿಂಗ ಪೂಜೆ ಮಾಡಿಯೇ ತನ್ನ 88ನೇ ವಯಸ್ಸಿನಲ್ಲಿ ತಾ. 1.9.1967ನೇ ದಿನ ಸಂಜೆ ಹೃತ್‌ಕ್ರಿಯೆ ನಿಂತು ಶಿವ ಸಾನ್ನಿಧ್ಯವನ್ನು ಹೊಂದಿದರು. ಇವರ ಮಕ್ಕಳ ಪೈಕಿ ಶ್ರೀ ನಟ್ಟೋಜಿ ಕೃಷ್ಣಯ್ಯನವರು ಈಗ ಆ ಪೂರ್ವಿಕರ ಮನೆಯಲ್ಲಿಯೇ ಇದ್ದಾರೆ.

ಶ್ರೀ ನಟ್ಟೋಜಿ ಶಿವರಾಯರು ಪುತ್ತೂರಲ್ಲಿ ಅದ್ವೈತ ಮಹಾಸಭೆಯಲ್ಲಿ ‘ಸ್ಥಾನಿಕ ಪ್ರಜ್ಞಾನ’ವೆಂಬ ವಿಮರ್ಶಾತ್ಮಕ ಲೇಖನವನ್ನು ಬರೆದು ಚಿನ್ನದ ಪದಕವನ್ನು ಗಳಿಸಿದ್ದರು. ಇವರು ಪ್ರಕಟಿಸಿದ ಪುಸ್ತಕಗಳು:

(1) ಶ್ರೀ ವಾಸುಕಿ ಕ್ಷೇತ್ರ ಮಹಾತ್ಮೆ (ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಮಹಾತ್ಮೆ). ಇದರಲ್ಲಿ ಸ್ಕಾಂದ ಪುರಾಣೋಕ್ತ ಸನತ್ಕುಮಾರ ಸಂಹಿತೆಯ 17 ಅಧ್ಯಾಯಗಳು, ಶ್ರೀ ಬ್ರಹ್ಮಾಂಡ ಪುರಾಣದ ಮೂರು ಅಧ್ಯಾಯಗಳು ಮತ್ತು ಶ್ರೀ ನಾರದ ಪುರಾಣದ ಒಂದು ಅಧ್ಯಾಯವೂ ಅಡಕವಾಗಿದೆ. ಸನತ್ಕುಮಾರ ಸಂಹಿತೆಯ ೬ನೇ ಅಧ್ಯಾಯದಲ್ಲಿ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ವಿವರಣೆಯೂ ಇದೆ.

(2) ಆದ್ಯ ಶ್ರೀ ಜಗದ್ಗುರು ಶ್ರೀ ಶಂಕರ ಭಗವತ್ಪಾದಾಚಾರ್ಯರ ಕಾಲ ನಿರ್ಣಯ- ಇದರಲ್ಲಿ ಆದಿ ಶಂಕರರ ಕಾಲ ೮ನೇ ಶತಮಾನವಲ್ಲವೆಂದು ಹೇಳಿ ಕ್ರಿ.ಪೂ. 34-10ರಲ್ಲಿ ಸಂಭವಿಸಿದ್ದೆಂದು ಅನೇಕ ಅಧಾರಗಳಿಂದ ನಿರ್ಧರಿಸಿ ಬರೆದಿದ್ದಾರೆ. ಆದಿ ಶಂಕರರ ಬಾಗಾಯತು ಶ್ರೀ ಶೃಂಗೇರಿ ಗುರು ಪರಂಪರೆಯನ್ನು ಹೆಸರು, ಇಸವಿ ಶಕಗಳನ್ನು ನಿರ್ದೇಶಿಸಿ ಈಗಿನ 35ನೇ ಪೀಠಸ್ಥರಾದ ಶ್ರೀ ಮದಭಿನವ ವಿದ್ಯಾತೀರ್ಥ ಸ್ವಾಮೀಗಳವರ ವರೇಗಿನ ಯತಿವರ್ಯರ ಪೀಳಿಗೆಯನ್ನು ವಿವರಿಸಿದ್ದಾರೆ. ಅದೂ ಅಲ್ಲದೆ, ಕಾಂಚೀ ಕಾಮಕೋಟಿ ಪೀಠದ ಯತಿವರ್ಯರ ಪೀಳಿಗೆಯನ್ನು ವಿವರಿಸಿದ್ದಾರೆ.

ಮುಂದುವರಿಯುವುದು

Leave a Reply

Your email address will not be published. Required fields are marked *