Realtime blog statisticsweb statistics
udupibits.in
Breaking News
ಉಡುಪಿ: ಕನಿಷ್ಠ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ನಗರಸಭೆ, ಜಿಲ್ಲಾಡಳಿತ, ರಾಜ್ಯ-ಕೇಂದ್ರ ಸರಕಾರ ಸಂಪೂರ್ಣ ವಿಫಲ !

ಪುತ್ತೂರು ಕ್ಷೇತ್ರದ ಚಾರಿತ್ರಿಕ ಹತ್ತು ಚೋದ್ಯಗಳು ಮತ್ತು ಪೊಳಲಿ ಕ್ಷೇತ್ರ- ಭಾಗ 6

* ಡಾ.ಮ.ಸು.ಅಚ್ಚುತ ಶರ್ಮಾ

# ಈ ಪುತ್ತೂರು ಅತಿ ಪುರಾತನ ಕಾಲದಲ್ಲಿ ಶ್ರೀ ಶೃಂಗೇರಿ ಶ್ರೀ ಜಗದ್ಗುರು ಪೀಠದ ವಿದ್ಯಾರಣ್ಯರಿಂದ ಸ್ಥಾಪಿತವಾದ ವಿಜಯನಗರ ಸಾಮ್ರಾಜ್ಯದ ಅಧಿಕಾರಿಗಳ ಆಳ್ವಿಕೆಯಲ್ಲೂ, ತದನಂತರ ಇಕ್ಕೇರಿ ಸಂಸ್ಥಾನವೆಂಬ (ಬೆಡ್ನೂರು ಗವರ್ನ್‌ಮೆಂಟಿನ)ವರ ಅಳುವಿಕೆಯಲ್ಲಿಯೂ ಇರುತ್ತಿತ್ತು. ಈ ಇಕ್ಕೇರಿ ಸಂಸ್ಥಾನದವರು ಸುಮಾರು ಮೂರು ಶತಮಾನಗಳ ತನಕ ಆಳಿಕೊಂಡಿದ್ದರು. ಇವರು ಸ್ವತಂತ್ರರಾಗಿದ್ದವರು. ಅಲ್ಲದೆ ವಿಖ್ಯಾತರಾಗಿದ್ದರು.

ಇವರ ಕಾಲದಲ್ಲಿ ಇಕ್ಕೇರಿ ಸಂಸ್ಥಾನವು ಇಬ್ಭಾಗವಾಗಿ ಇದೆ ಪುತ್ತೂರು ಇರುವ ಸ್ಥಳದ ಪಶ್ಚಿಮ ದಿಕ್ಕಿನಲ್ಲಿರುವ ಕಲ್ಯ (ಕಲ್ಲೆಗ), ಊರು ಸಹ ಕೂಡಿ ಇಕ್ಕೇರಿ ಯಾನೆ ನಗರ ಸಂಸ್ಥಾನದ ಆಳ್ವಿಕೆಯಲ್ಲಿ ಇತ್ತು. ಆ ಮೇಲೆ ಈ ಪುತ್ತೂರು ಮೊದಲ್ಗೊಂಡು ಪೂರ್ವ ದಿಕ್ಕಿನ ಪ್ರದೇಶವೆಲ್ಲವೂ ಕೊಡಗು ರಾಜನ ಆಳ್ವಿಕೆಗೆ ಬಂತು. ಆಗ ಪಶ್ಚಿಮ ಪ್ರದೇಶದ ಆಳ್ವಿಕೆಯವರು ಕಲ್ಯ (ಈಗಿನ ಕಲ್ಲೆಗ) ಎಂಬಲ್ಲಿಯೂ ಪೂರ್ವ ದಿಕ್ಕಿನ ಕೊಡಗು ರಾಜರು ಸಾಲ್ಮರ ಎಂಬಲ್ಲಿ ತಮ್ಮ ತಮ್ಮ ಅಡಳಿತೆಗೆ ಒಪ್ಪಿಕೊಂಡು ಕೋರ್ಟು ಕಛೇರಿಗಳನ್ನು ಪೇಟೆಗಳನ್ನು ಸ್ಥಾಪಿಸಿಕೊಂಡಿದ್ದರು.

ಕಡೆಗೆ ಪಶ್ಚಿಮ ಕಡೆಯ ಆಳ್ವಿಕೆಯರಾದ ಇಕ್ಕೇರಿ ಸಂಸ್ಥಾನದವರು ಟಿಪ್ಪು ಸುಲ್ತಾನನಿಂದ ಪರಾಜಿತರಾಗಿ ಕಲ್ಯ ವರೇಗಿನ ಸ್ಥಳವು ಟಿಪ್ಪು ಸುಲ್ತಾನಿನ ಅಧೀನವಾಯಿತು. ಆಮೇಲೆ 1799ರಲ್ಲಿ ಟಿಪ್ಪು ಸುಲ್ತಾನಿನ ಮರಣನಂತರ ಕಲ್ಯ ವರೇಗಿನ ಭಾಗವು ಬ್ರಿಟಿಷರ ವಶವಾಯಿತು. ಕಲ್ಯ ವರೇಗಿನ ಪೂರ್ವ ಭಾಗವು ಪುತ್ತೂರು ಗ್ರಾಮವಾಗಿತ್ತು. ಈ ಪುತ್ತೂರು ಗ್ರಾಮಕ್ಕೆ ಮೂಡು ಬದಿಯಲ್ಲಿ ಕರಯಾಲ ಗ್ರಾಮ ಅಂದರೆ ಈಗಿನ ಕೆಮ್ಮುಂಜೆ ಗ್ರಾಮವು ಇದೆ.

ಅದೇ ಕಾಲದಲ್ಲಿ ಇಂಗ್ಲೀಷರು ಪುತ್ತೂರು ಎಂಬ ಗ್ರಾಮವನ್ನು ತಮಗೆ ಕೊಡಗು ಸಂಸ್ಥಾನದವರು ಬಿಟ್ಟುಕೊಟ್ಟರೆ ಅದಕ್ಕೆ ಸಮಾನವಾದ ಸ್ವಲ್ಪ ಸ್ಥಳವನ್ನು ಕೊಡಗರಿಗೆ ಬಿಟ್ಟುಕೊಡುವುದಾಗಿ ಕೇಳಿಕೊಂಡದಕ್ಕೆ ಕೊಡಗು ರಾಜರು ”ಹತ್ತೂರು ಕೊಟ್ಟರೂ ಪುತ್ತೂರು ಬಿಡೆ” ಎಂಬುದಾಗಿ ನಿರಾಕರಣೆ ಉತ್ತರವನ್ನು ಕೊಟ್ಟರೆಂದು ತಿಳಿದುಬರುತ್ತದೆ. ಸಾಧಾರಣ 1834ರಿಂದ ಕೊಡಗರ ಸಂಸ್ಥಾನವು ಇಂಗ್ಲೀಷರಿಗೆ ಸೇರಿತು.

ಮುಂದುವರಿಯುವುದು

Leave a Reply

Your email address will not be published. Required fields are marked *