Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಗುರುತಿಸಲಾಗದೆ ಮನಸ್ಸನ್ನು ಕಿತ್ತು ತಿನ್ನುವ ಕಾಯಿಲೆ ‘ಖಿನ್ನತೆ’

# ಮನೋ ದರ್ಪಣ ಎಂಬ ಸರಣಿ ಇವತ್ತಿನಿಂದ ಪ್ರಾರಂಭ ಮಾಡಿದ್ದೇನೆ. ಬಹಳ ದೊಡ್ಡ ಹಿತೈಷಿಯಾಗಿರುವ ಶ್ರೀರಾಮ ದಿವಾಣ ಅವರ “ಉಡುಪಿ ಬಿಟ್ಸ್.ಇನ್” (www.udupibits.in)  ಎಂಬ ಅಂತರ್ಜಾಲ ತಾಣಕ್ಕೆ ನಾನು ಬರೆಯುತ್ತಿರುವುದು ಇದು ಎರಡನೇ ಸರಣಿ.

ಮನುಷ್ಯನ ಮನಸ್ಸು ಬಹಳ ವಿಚಿತ್ರ. ಅದರಲ್ಲಿಯೂ ಖಿನ್ನತೆಯಿಂದ ಬಳಲುತ್ತಿರುವ ಮನಸ್ಸು ಏನು ಹೇಳಲು ಬರುವುದಿಲ್ಲ. “I am ending my life sir, by the time this message reaches you, I will be dead and gone”.  ಹದಿನೈದು ವರ್ಷಗಳ ಹಿಂದೆ ನನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿಯೊಬ್ಬ ನನಗೆ ಕಳಿಸಿದ ಮೆಸೇಜ್. ಮೆಸೆಜ್ ನೋಡುವ ಮೊದಲೇ ಹಿರಿಯ ವೈದ್ಯ ಮಿತ್ರರೊಬ್ಬರು ನನಗೆ ಪೋನು  ಮಾಡಿ ತಿಳಿಸಿದರು. ಆ ಹುಡುಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು.

ಎರಡನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದ ಈ ಹುಡುಗ, ಮೆರಿಟ್ ಮೇಲೆ ಎಂ.ಬಿ.ಬಿ.ಎಸ್ ಸೀಟು ಗಳಿಸಿದ್ದ. ಬಹಳ ಚೆನ್ನಾಗಿ ಓದುತ್ತಿದ್ದ. ಹುಬ್ಬಳ್ಳಿಯಲ್ಲಿ ಹಾಸ್ಟೆಲ್ ಒಂದರಲ್ಲಿ ಇದ್ದು ಓದುತ್ತಿದ್ದ ಈತ ಎರಡನೇ ವರ್ಷಕ್ಕೆ ಬಂದಾಗ ಇದ್ದಕ್ಕಿದ್ದಂತೆ ಓದುವುದನ್ನು ಬಿಟ್ಟ. ತಾನು ಎಂಬಿಬಿಎಸ್ ಬಿಟ್ಟು ಬಿಡುತ್ತೇನೆ ಎಂದು ಮನೆಯವರಿಗೆ ಒಂದೇ ಸಮನೆ ಮೆಸೇಜ್ ಮಾಡುತ್ತಾ ಇದ್ದ. ಮೆಸೇಜ್ ನೋಡಿದ ತಾಯಿ ತಂದೆಯರು ಅವನ ಅಚ್ಚುಮೆಚ್ಚಿನ ಮಾವನನ್ನು ಹುಬ್ಬಳ್ಳಿಗೆ ಕಳಿಸಿದರು. ಮಾವ ಆತನಿಗೆ ಸಾಕಷ್ಟು ಬುದ್ಧಿವಾದ ಹೇಳಿ ಆತನೊಂದಿಗೆ ಎರಡು ಮೂರು ದಿನ ಕಳೆದು ವಾಪಸ್ ಬಂದಿದ್ದರು. ಆತ ಖಂಡಿತವಾಗಿಯೂ ವೈದ್ಯಕೀಯ ಪದವಿಯನ್ನು ಗಳಿಸುತ್ತಾನೆ, ಏನು ಯೋಚನೆ ಮಾಡುವುದು ಬೇಡ ಎಂದು ತಾಯಿ ತಂದೆಯರಿಗೆ ಸಮಾಧಾನ ಹೇಳಿದ್ದರು. ಮಾವ ಹೋಗಿ ಎರಡೇ ದಿನದಲ್ಲಿ ಪುನಃ ಅದೇ ಮೆಸೇಜುಗಳು ಮನೆಗೆ ಬರಲು ಪ್ರಾರಂಭಿಸಿದವು. ಗೊಂದಲ ತಡೆಯಲಾರದೆ ತಂದೆ ಹುಬ್ಬಳ್ಳಿಗೆ ಹೋಗಿ ಆತನನ್ನು ಉಡುಪಿಗೆ ವಾಪಸ್ ಕರೆದುಕೊಂಡು ಬಂದರು. ಶಾಲೆಯ ಟೀಚರ್ ಆಗಿದ್ದ ತಂದೆಗೆ ಏನು ಮಾಡಬೇಕೆಂದು ತೋಚಲಿಲ್ಲ.

ತಂದೆಗೂ ಮಗನಿಗೂ ಓದಿನ ಗೀಳು ಬಹಳಷ್ಟು ಇತ್ತು. dale carnegie   ಬರೆದಂತಹ how to stop worrying and start living  ಪುಸ್ತಕ ಹಿಡಿದುಕೊಂಡು ಅಪ್ಪ ಮಗ ಜೋರಾಗಿ ಓದಿಕೊಳ್ಳುತ್ತಿದ್ದರು. ಪುಸ್ತಕ ಓದುವಾಗ ಮಗನಿಗೆ ಸ್ವಲ್ಪ ಸಮಾಧಾನ ಎನಿಸುತ್ತಿತ್ತು. ನಾಳೆ ಬೆಳಿಗ್ಗೆ ಖಂಡಿತ ಹುಬ್ಬಳ್ಳಿಗೆ ವಾಪಸ್ ಹೋಗುವೆ ಎಂದು ಸಂಜೆ ಹೇಳುತ್ತಿದ್ದ. ಬೆಳಿಗ್ಗೆ ಬಂದ ಹಾಗೆ ಅದೇ ಚಂಚಲತೆ, ಹೆದರಿಕೆ, ವೈದ್ಯಕೀಯ ವಿದ್ಯಾಭ್ಯಾಸ ತನ್ನಿಂದ ಆಗುವುದಿಲ್ಲ ಎಂಬ ಅನಿಸಿಕೆ. ದೈವ ಭಕ್ತನಾಗಿದ್ದ ತಂದೆ ಭಗವದ್ಗೀತೆಯನ್ನು ಓದಿ ಹೇಳಿದರು. ಸಂಜೆ ಅನ್ನುವಾಗ ಎಲ್ಲದಕ್ಕೂ ತಲೆ ಅಲ್ಲಾಡಿಸುತ್ತಿದ್ದ, ಧೈರ್ಯ ಬರುತ್ತಿತ್ತು. ಹೀಗೆ ಒಂದು ವಾರ ಕಳೆದು ಹೋಯಿತು. ಇಡೀ ದಿನ ರೂಂನಲ್ಲಿ ಒಬ್ಬನೇ ಕುಳಿತುಕೊಂಡು ಏನೋ ಯೋಚನೆ ಮಾಡುತ್ತಾ ಇರುತ್ತಿದ್ದ. ಸ್ನೇಹಿತರನೇಕರ ಪೋನುಗಳು ಬರುತ್ತಿದ್ದವು, ಆದರೆ ಈತ ಪೋನುಗಳನ್ನು  ಎತ್ತುತ್ತಲೇ ಇರಲಿಲ್ಲ. ಒಬ್ಬನೇ ಕುಳಿತುಕೊಂಡು ಅಳುತ್ತಾ ಇದ್ದ. ತಾನು ಒಬ್ಬ ವ್ಯರ್ಥ ಜೀವಿ, ಎಂ.ಬಿ.ಬಿ.ಎಸ್ ಮಾಡಲಾಗದೆ ಮನೆಯವರ ಮೇಲೆ ಭಾರ ಆಗುತ್ತೇನೆ ಎಂದು ಬರೆಯುತ್ತಿದ್ದ. ಪೇಪರ್ ನಲ್ಲಿ ಏನೇನೋ ಗೀಚಿ ಅದನ್ನು ಮುದುಡಿ ಬಿಸಾಡಿ ಬಿಡುತ್ತಿದ್ದ. ಕೆಲವೊಮ್ಮೆ ಒಬ್ಬನೇ ನಗುತ್ತಿದ್ದ. ಮನೆಗೆ ಯಾರಾದರೂ ಬಂದರೆ ಅವರೊಡನೆ ಏನೂ ಆಗದವರಂತೆ ಮಾತನಾಡುತ್ತಿದ್ದ. ಮಾತನಾಡಿದವರೆಲ್ಲ ಈತ ಸರಿಯಾಗಿದ್ದಾನೆ ಎಂದುಕೊಂಡು ವಾಪಸ್ಸು ಹೋಗುತ್ತಿದ್ದರು.

ಆತ ಬಿಸಾಡಿದ ಕಾಗದದ ಚೂರುಗಳಲ್ಲಿ ತಂದೆಗೆ ಒಂದೆರಡು ವಿಷಯ ಗೊತ್ತಾಯಿತು. ಈತ ಆತ್ಮಹತ್ಯೆ ಯೋಚನೆಯನ್ನು ಮಾಡುತ್ತಾ ಇದ್ದ ಎಂದು. ಇದರ ಕುರಿತು ಆಗಾಗ ಬರೆಯುತ್ತಾ ಇದ್ದ. ತಂದೆ, ತಮ್ಮ ಮನೆಯ ಜೋಯಿಸರ ಬಳಿ ಹೋಗಿ ಮಾತನಾಡಿದರು. ದೇವರ ಪೂಜೆಯೊಂದಿಗೆ ಅಲ್ಪಸ್ವಲ್ಪ ಜಾತಕವನ್ನು ಓದಲು ತಿಳಿದ ಜೋಯಿಸರು ಆತನಿಗೆ ಈಗ ಕಾಲ ಸರಿಯಿಲ್ಲ. ಜಾತಕದಲ್ಲಿ ಚಂದ್ರನ ಸ್ಥಾನ ಸರಿಯಾಗಿಲ್ಲವಾಗಿದ್ದರಿಂದ ಆತನ ಮನಸ್ಸು ಸ್ವಲ್ಪ ಚಂಚಲವಾಗಿದೆ. ಬೆಳಿಗ್ಗೆ ಹಾಗೂ ರಾತ್ರಿ ಗಾಯತ್ರಿ ಮಂತ್ರ ಮತ್ತು ಲಲಿತಾ ಸಹಸ್ರನಾಮವನ್ನು ಹೇಳಬೇಕು ಎಂದು ತಿಳಿಸಿದರು. ಪೂರ್ಣಿಮೆಯ ದಿನದಂದು ಉಪವಾಸ ಮಾಡಬೇಕು, ಚಂದ್ರನಿಗೆ ಅರ್ಘ್ಯವನ್ನು ನೀಡಬೇಕು ಎಂದು ಕೂಡ ತಿಳಿಸಿದರು. ಆತನನ್ನು ಕರೆದುಕೊಂಡು ಬರಲು ತಿಳಿಸಿದರು. ಆತನ ಒಟ್ಟಿಗೆ ಸುಮಾರು ಹೊತ್ತು ಮಾತನಾಡಿದರು. ಹುಡುಗನಿಗೆ ಬಹಳಷ್ಟು ಧೈರ್ಯ ಹೇಳಿದರು. ಜೋಯಿಸರ ಮಾತು ಕೇಳಿ ತನಗೆ ಮನಸ್ಸು ಸಮಾಧಾನವಾಯಿತೆಂದು ಹುಡುಗ ಮನೆಗೆ ಮರಳಿದ. ಬೆಳಿಗ್ಗೆ ಎದ್ದ ಕೂಡಲೇ ಮತ್ತೆ ಅದೇ ಕಥೆ. ಬರುಬರುತ್ತಾ ಈತನ ಮನಸ್ಸು ಇನ್ನೂ ಹೆಚ್ಚು ಚಂಚಲವಾಗತೊಡಗಿತ್ತು. ಮನೆಯಿಂದ ಹೊರಗೆ ಬರುವುದೇ ಕಡಿಮೆಯಾಯಿತು. ತಂದೆ ತಾಯಿಗೆ ತಲೆಬಿಸಿ ಜಾಸ್ತಿಯಾಯಿತು. ಮನೆಗೆ ಬಂದ ಸಂಬಂಧಿಕರಿಂದ ನಾನಾ ರೀತಿಯ ಸಲಹೆಗಳು ಬರತೊಡಗಿದವು. ಹುಡುಗಿಯೊಬ್ಬಳನ್ನು ಪ್ರೀತಿಸಿರಬೇಕು, ಕುಡಿತ, ಗಾಂಜಾದ ಅಭ್ಯಾಸವಿರಬೇಕು ಅಥವಾ ಎಂ.ಬಿ.ಬಿ.ಎಸ್ ಶಿಕ್ಷಣ ಬಹಳ ಕಷ್ಟವಾಗುತ್ತಿರಬೇಕು. ಬಹುಶಃ ಆತನಿಗೆ ಅದರಲ್ಲಿ ಆಸಕ್ತಿ ಇರಲಿಲ್ಲವೋ ಏನೋ. ಇದನ್ನು ಕೇಳಿ ಹುಡುಗ ಇನ್ನೂ ಹೆಚ್ಚು ತಳಮಳ ಗೊಳ್ಳುತ್ತಿದ್ದ.

ಆತನಿಗೆ ಬೇಕಾಗಿದ್ದು ಆಪ್ತ ಸಲಹೆ. ವೈದ್ಯಕೀಯ ವಿದ್ಯಾರ್ಥಿಯಾಗಿದ್ದರೂ ಆತನಿಗೆ ಇದು ಒಂದು ಮನೋರೋಗ ಎನ್ನುವುದು ಗೊತ್ತಾಗಿರಲಿಲ್ಲ. ಮನೆಗೆ ಬಂದಿದ್ದ ಹಿತೈಷಿಗಳಲ್ಲಿ ಆತನ ಹೈಸ್ಕೂಲಿನ ಶಾಲಾ ಮಾಸ್ಟರ್ ಒಬ್ಬರು ಇದ್ದರು. ಬಹಳಷ್ಟು ಓದಿ ತಿಳಿದುಕೊಂಡಿದ್ದ ಮಾಸ್ಟರ್ ಡಾ. ಸಿ.ಆರ್ ಚಂದ್ರಶೇಖರ್ ಅವರ ಒಂದು ಪುಸ್ತಕದಲ್ಲಿ ಖಿನ್ನತೆಯ ಲಕ್ಷಣಗಳನ್ನು ಓದಿದ್ದರು. ಈತನ ಹತ್ತಿರ ಸುಮಾರು ಒಂದು ಗಂಟೆ ಮಾತನಾಡಿದ ಮಾಸ್ಟರಿಗೆ ಇದು ಖಂಡಿತವಾಗಿಯೂ ಖಿನ್ನತೆ ಎಂಬುದು ಮನವರಿಕೆಯಾಯಿತು. ಹುಡುಗನಿಗೂ ತಾಯಿ ತಂದೆಗೂ ಕೂರಿಸಿ ಮಾತನಾಡಿದರು. ಮನೋವೈದ್ಯರ ಸಲಹೆ ಅತಿ ಅಗತ್ಯ ಎಂಬುದನ್ನು ತಿಳಿಸಿದ್ದರು. ಕೊನೆಗೂ ಮಾಸ್ಟ್ರ ಮೂಲಕ ನನ್ನಲ್ಲಿ ಬಂದಿದ್ದರು.

ಖಿನ್ನತೆ ಎಂಬ ಈ ಮನೋರೋಗ ಮೆದುಳಿನ ನರವಾಹಕಗಳಲ್ಲಿ ಬದಲಾವಣೆಯಾಗಿ ಬರುವಂಥ ಒಂದು ಕಾಯಿಲೆ. ಬಿ.ಪಿ. ಕಾಯಿಲೆ, ಸಕ್ಕರೆ ಕಾಯಿಲೆ ಹೇಗೆ ದೇಹದ ಹಲವಾರು ರಾಸಾಯನಿಕಗಳಲ್ಲಿ ಏರುಪೇರಾಗಿ ಸಂಭವಿಸುತ್ತದೆಯೋ ಹಾಗೆ, ಮಿದುಳಿನ ನರವಾಹಕಗಳಲ್ಲಿ ಸಮಸ್ಯೆಯಾಗಿ ಖಿನ್ನತೆ ಸಂಭವಿಸುತ್ತದೆ. ಇದು ಜನಸಾಮಾನ್ಯರು ತಿಳಿದುಕೊಳ್ಳಬೇಕಾದ ಒಂದು ಸತ್ಯ.

ಮನಸ್ಸಿಲ್ಲದ ಮನಸ್ಸಿನಲ್ಲಿ ಬಂದ ಈ ವೈದ್ಯ ವಿದ್ಯಾರ್ಥಿ ಮತ್ತು ಆತನ ತಾಯಿ ತಂದೆ ನನ್ನ ಮಾತುಗಳನ್ನು ಅಷ್ಟು ಗಮನ ಕೊಟ್ಟು ಕೇಳುತ್ತಿರಲಿಲ್ಲ. ಇದು ಖಂಡಿತವಾಗಿಯೂ ಜಾತಕ ದೋಷ ಎಂದು ತಂದೆ ವಾದಿಸುತ್ತಾ ಇದ್ದರು. ಹುಡುಗನು ಕೂಡ ನೀವು ಸೈಕ್ಯಾಟ್ರಿಸ್ಟ್ ಅಲ್ಲವೇ, ನನಗೇನು ಹುಚ್ಚು ಹಿಡಿದಿಲ್ಲ ಎಂಬ ಮಾತನ್ನು ಪದೇ ಪದೇ ಹೇಳುತ್ತಿದ್ದ. ಎರಡು ಮೂರು ಬಾರಿ ಕ್ಲಿನಿಕ್‍ಗೆ ಬಂದು ಹೋಗಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವಂತಹ ಎಲ್ಲ ಚಿಹ್ನೆಗಳು ಕಾಣುತ್ತಿದ್ದುದರಿಂದ ನನ್ನ ಪೋನ್ ನಂಬರ್ ಕೂಡ ಕೊಟ್ಟಿದ್ದೆ. ಯಾವುದೇ ಸಮಯದಲ್ಲಿ ಆಸ್ಪತ್ರೆಗೆ ಬಂದು ಒಳರೋಗಿಯಾಗಿ ದಾಖಲಾಗು ಎಂದು ಕೂಡ ತಿಳಿಸಿದ್ದೆ. ನಾನು ಹೇಳಿದಂತೆ ಮಾತ್ರೆಗಳನ್ನು ತೆಗೆದುಕೊಂಡನೋ ಗೊತ್ತಿಲ್ಲ. ಈ ಮೆಸೇಜ್ ಅಂತೂ ಬಹಳಷ್ಟು ಬೇಸರ ತಂದಿತ್ತು. ಆತನ ಪೋಸ್ಟ್ ಮಾರ್ಟಮ್ ಆದ ಕೂಡಲೇ ಹಿರಿಯ ವೈದ್ಯರೊಬ್ಬರು ಪೋನಿನಲ್ಲಿ ಆತನ ಸಾವಿನ ಬಗ್ಗೆ ತಿಳಿಸಿದ್ದರು.

ಮನೋ ವೈದ್ಯನಾಗಿ ಜನಸಾಮಾನ್ಯರಿಗೆ ನಾನು ಹೇಳಬಯಸುವುದೇನೆಂದರೆ ಖಿನ್ನತೆ ಎಂಬುದು ಒಂದು ಮನೋರೋಗ. ಅದನ್ನು ಗುರುತಿಸಿಕೊಳ್ಳುವುದನ್ನು ಹಲವು ಸಾರಿ ನಾವು ಮರೆಯುತ್ತೇವೆ. ಈ ಕೆಳಗಿನ ಖಿನ್ನತೆಯ ಗುಣಲಕ್ಷಣಗಳನ್ನು ಗಮನಿಸಿ.

ಬೆಂಗಳೂರಿನ ವೈಟ್ ಸ್ವಾನ್ ಫೌಂಡೇಷನ್ ಇವರು ಪ್ರಕಟಿಸಿರುವ ಒಂದು ಲೇಖನದ ಪ್ರಕಾರ ಖಿನ್ನತೆಯ ಕೆಲವು ಲಕ್ಷಣಗಳು ಹೀಗಿವೆ:

Ø ಹೆಚ್ಚಿನ ಸಮಯದಲ್ಲಿ ದುಃಖ ಅಥವಾ ಬೇಸರದಲ್ಲಿರುವುದು.

Ø ದೈನಂದಿನ ಚಟುವಟಿಕೆಗಳನ್ನು ನಿಭಾಯಿಸಲು ಕಷ್ಟ ಪಡುವುದು ಮತ್ತು ಅವುಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು. ದಿನವಿಡೀ ಸುಸ್ತಾದಂತೆ ಅನಿಸುವುದು. ಮುಂಚೆ ಇಷ್ಟ ಪಟ್ಟು ಮಾಡುತ್ತಿದ್ದ ಕೆಲಸಗಳಲ್ಲಿ ಈಗ ನಿರಾಸಕ್ತಿಯ ಭಾವ.

Ø ಏಕಾಗ್ರತೆಯ ಕೊರತೆ, ಯೋಚಿಸಲು ಅಥವಾ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗುವುದು (ಉದಾ: ಹವ್ಯಾಸ, ಅಧ್ಯಯನದ ಮೇಲೆ ಗಮನ ನೀಡಲು ಕಷ್ಟ, ಇತ್ಯಾದಿ).

Ø ಆತ್ಮವಿಶ್ವಾಸ ಮತ್ತು ಆತ್ಮಗೌರವ ಕಡಿಮೆಯಾಗುವುದು.

Ø ತನ್ನ ಬಗ್ಗೆ, ಜೀವನದ ಬಗ್ಗೆ ಹಾಗೂ ಭವಿಷ್ಯದ ಬಗ್ಗೆ ಋಣಾತ್ಮಕ ಭಾವನೆ.

Ø ಹಸಿವಾಗದಿರುವುದು ಅಥವಾ ಅತಿಯಾಗಿ ತಿನ್ನುವುದು.

Ø ಹಿಂದಿನ ಸೋಲುಗಳಿಗೆ ತನ್ನನ್ನೇ ದೂಷಿಸಿಕೊಳ್ಳುವುದು, ಅಪರಾಧಿ ಭಾವ; ತಾನು ಅನುಪಯುಕ್ತ ಎಂಬ ಭಾವನೆ.

Ø ಓದು, ಕೆಲಸ, ಮತ್ತು ಇತರ ಕಾರ್ಯಗಳಲ್ಲಿ ನಿರಾಸಕ್ತಿ.

Ø ಸರಿಯಾಗಿ ನಿದ್ರೆ ಬಾರದಿರುವುದು ಅಥವಾ ನಿದ್ರೆ ಮಾಡಲು ಸಾಧ್ಯವೇ ಆಗದಿರುವುದು.

Ø ಲೈಂಗಿಕ ವಿಚಾರ/ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಳೆದುಕೊಳ್ಳುವುದು.

Ø ತಲೆ ನೋವು, ಕತ್ತು ನೋವು, ಸೆಳೆತ ಹೀಗೆ ದೇಹದ ವಿವಿಧ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುವುದು.

Ø ಆತ್ಮಹತ್ಯೆ ಅಥವಾ ಸ್ವಯಂ ಹಾನಿಯ ಬಗ್ಗೆ ಯೋಚಿಸುವುದು.

ಎರಡು ವಾರಗಳ ಅವಧಿಯಲ್ಲಿ ಐದಕ್ಕಿಂತ ಹೆಚ್ಚು ಖಿನ್ನತೆಯ ಲಕ್ಷಣಗಳು ವ್ಯಕ್ತಿಯಲ್ಲಿ ಇದ್ದು, ಇದರಿಂದ ವ್ಯಕ್ತಿಯ ನಿತ್ಯದ ಚಟುವಟಿಕೆಗೆ ತೊಂದರೆಯಾಗುತ್ತಿದ್ದರೆ ಆಗ ಮಾತ್ರ ಅದು ಖಿನ್ನತೆ ಎಂದು ವೈದ್ಯರು ದೃಢಪಡಿಸುತ್ತಾರೆ. ಈ ವೈದ್ಯಕೀಯ ವಿದ್ಯಾರ್ಥಿಗೆ ಖಿನ್ನತೆಯ ಹಲವು ಗುಣಲಕ್ಷಣಗಳು ಇದ್ದವು. ಆತ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುವುದರ ಬದಲು ಪುಸ್ತಕಗಳನ್ನು ಓದಿ ಖಿನ್ನತೆ ಸರಿ ಮಾಡಿಕೊಳ್ಳುವುದು ಅಥವಾ ಬೇರೆಯವರಿಂದ ಧೈರ್ಯ ಪಡೆದು ಖಿನ್ನತೆ ಸರಿ ಮಾಡಿಕೊಳ್ಳಲು ಹೋದ. ಆರೈಕೆ ಮಾಡುವವರು ಗಮನಿಸಬೇಕಾದ್ದೇನೆಂದರೆ, ಖಿನ್ನತೆಯ ಮನೋಸ್ಥಿತಿಯಲ್ಲಿ ಎಷ್ಟೇ ಧೈರ್ಯ ಹೇಳಿದರೂ ಆ ಸಮಯದಲ್ಲಿ ಅವರು ಸರಿಯಾಗುತ್ತಾರೆ. ಮತ್ತೆ ಪುನಃ ಖಿನ್ನತೆ ಮರುಕಳಿಸುತ್ತದೆ. ಧೈರ್ಯ ಹೆಚ್ಚಿಸುವಂತಹ PEP TALK ಖಿನ್ನತೆಯನ್ನು ನಿವಾರಿಸುವುದಿಲ್ಲ. ಇದನ್ನು ತಿಳಿದುಕೊಳ್ಳಿ. ನಿಮ್ಮ ಕುಟುಂಬದ ವೈದ್ಯರು ಅಥವಾ ಮನೋವೈದ್ಯರನ್ನು ಒಮ್ಮೆ ಕಾಣಿ. ಅವರಿಂದ ಸರಿಯಾದ ಸಲಹೆಯನ್ನು ಪಡೆಯಿರಿ. ಅಗತ್ಯವಾದ ಮಾತ್ರೆಗಳನ್ನು ಸೇವಿಸಿ. ಅಲ್ಪ ಮಟ್ಟದ ಮಾನಸಿಕ ಕಾಯಿಲೆಯಾಗಿದ್ದಲ್ಲಿ ನಿಮ್ಮ ವೈದ್ಯರು ಮಾತು ಚಿಕಿತ್ಸೆ ಅಥವಾ ಸೈಕೋ ಥೆರಪಿಗೆ ನಿಮ್ಮನ್ನು ಕಳಿಸಬಹುದು. ನಿಮ್ಮ ಮನಸ್ಸನ್ನು ಕಾಡುವ ನಕಾರಾತ್ಮಕ ಚಿಂತನೆಗಳನ್ನು ಗಮನಿಸಿ ಬದಲಾವಣೆ ಮಾಡುವಂತಹ ಕೆಲವು ವಿಚಾರಗಳನ್ನು ನಿಮ್ಮ ಮನಃಶಾಸ್ತ್ರಜ್ಞರು ಸೈಕೋ ಥೆರಪಿಯಲ್ಲಿ ತಿಳಿಸಬಹುದು. ಆತ್ಮಹತ್ಯೆ ಯೋಚನೆ ಅತಿಯಾಗಿದ್ದಲ್ಲಿ ವಿದ್ಯುತ್ ಕಂಪನ ಚಿಕಿತ್ಸೆ ಮಾಡಲು ನಿಮ್ಮ ವೈದ್ಯರು ಹೇಳಬಹುದು.

ಮಾನಸಿಕ ಸಮಸ್ಯೆಗಳು ಬಂದಾಗ ವೈಜ್ಞಾನಿಕವಾಗಿ ಯೋಚಿಸಿ. ಮೂಢನಂಬಿಕೆಗಳನ್ನು ತ್ಯಜಿಸಿ.

ಚಿತ್ರ ಕೃಪೆ: ಅಂತರ್ಜಾಲ

Leave a Reply

Your email address will not be published. Required fields are marked *