Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಕುಕ್ಕೆ ಕ್ಷೇತ್ರದ ಚಾರಿತ್ರಿಕ ಹಿನ್ನೆಲೆ- ಭಾಗ 9

* ಡಾ.ಮ.ಸು.ಅಚ್ಚುತ ಶರ್ಮಾ

# ಪರಮಾತ್ಮನು ಅವಿಕಾರಿಯೂ, ಅವಿನಾಶಿಯೂ ಮತ್ತು ವ್ಯಾಪಕನಾಗಿರುವುದರಿಂದ ರೂಪನಾಮಗಳು ಅವನಿಗೆ ಕಲ್ಪಿತಗಳಾಗಿವೆ. ಆದರೂ ನಾವು ವ್ಯಾವಹಾರಿಕ ಪ್ರಾಪಂಚಿಕಸತ್ತೆಯಲ್ಲಿರುವಾಗ ಆಯಾಯ ಅಭಿಮಾನಿ ದೇವತೆಗಳನ್ನು ಆಯಾಯ ಆಗಮೋಕ್ತ ಪ್ರಕಾರ ಆಯಾಯ ದೇವತಾ ಅಭಿಮಾನಿಗಳು ಅರ್ಚಿಸುವುದು ಧರ್ಮಸಮ್ಮತ.

ಸರಕಾರವು ಒಂದೇ ಆಗಿದ್ದರೂ, ನ್ಯಾಯಾಂಗದವರು ಆಡಳಿತ ವರ್ಗದಲ್ಲೂ ಆಡಳಿತ ವರ್ಗದವರು ನ್ಯಾಯಾಂಗದಲ್ಲೂ ಕೆಲಸ ಮಾಡಿದರೇ ಸರಿಯಾದೀತೇ ಅದು ಸಾಧ್ಯವಿಲ್ಲ. ಆಯಾಯ ವಿಭಾಗಗಳು ತಮ್ಮ ತಮ್ಮ ತತ್ವಗಳನ್ನು ಅನುಸರಿಸಿ ಕರ್ತವ್ಯ ನಡೆಸಿದರೇನೇ ರಾಜಡಳಿತವು ಉತ್ತಮ ರೀತಿಯಲ್ಲಿ ನಡೆದೀತು. ಅದರಂತೆ ಸರ್ವವ್ಯಾಪಿ ಪರಮಾತ್ಮನು ಒಬ್ಬನೇ ಆದರೂ ಅವನ ಅಂಶವಾದ ಶಿವ, ವಿಷ್ಣು, ದುರ್ಗಾ, ಗಣಪತಿ, ಇತ್ಯಾದಿ ದೇವತೆಗಳಿಗೆ ಆಯಾಯ ಆಗಮೋಕ್ತ ಪ್ರಕಾರ ಸಮಯವರಿತು ವಿನಿಯೋಗಗಳನ್ನು ಭಕ್ತಿಯಿಂದ ಸಲ್ಲಿಸಿದರೇನೇ ಅಲ್ಲಿಯ ಮಹಿಮೆಯು ಹೆಚ್ಚುವುದಲ್ಲದೆ ಬರೆ ಹಣದ ಆಶೆಗಾಗಿ ತಮ್ಮ ತತ್ವಕ್ಕೆ ಸಂಬಂಧಪಡದ ದೇವಳಗಳಲ್ಲಿ ಅರಿವಿದಲ್ಲದ ಜನರಿಗೆ ತಾವು ಅರ್ಚಕರೆಂದು ತೋರಿಸಿಕೊಂಡು ವಿಧಿ ತಪ್ಪಿ ಯದ್ವಾ ತದ್ವಾ ಮಾಡಿ ಜನರನ್ನು ವಂಚಿಸಿ ಕರ್ತವ್ಯ ಮಾಡುವುದು ದೇವಳದ ವ, ಕ್ಷೇತ್ರದ ಮಹಿಮೆಗೇನೇ ಕುಂದು ತಂದಂತ್ತಾಗುತ್ತದೆ.

ಆದುದರಿಂದ ಸರಕಾರದಿಂದ ನೇಮಿಸಲ್ಪಟ್ಟ ಧರ್ಮದರ್ಶಿಗಳು ಆಯಾಯ ದೇವಳಗಳ ಈ ರೀತಿಯ ಕುಂದು ಕೊರತೆಗಳನ್ನು ಸರಕಾರದ ಗಮನಕ್ಕೆ ತಂದು ಸರಿಪಡಿಸುವುದು ಅತ್ಯವಶ್ಯವಾಗಿದೆ. ಅಲ್ಲದೆ ಸರಕಾರದವರು ಕೂಡಾ ಧರ್ಮದರ್ಶಿಗಳನ್ನು ನೇಮಿಸುವಾಗ ಆಯಾಯ ದೇವಳದ ಹಿತಚಿಂತಕರಾದ ಅವುಗಳ ಭಜಕರನ್ನೇ ನೇಮಿಸುವುದು ದೇವಳಗಳ ಹಿತದೃಷ್ಟಿಯಿಂದ ಅತ್ಯಗತ್ಯವಾಗಿದೆ.

ಹಾಗೆ ದೇವಳದ ಹಿತಚಿಂತಕರನ್ನು ನೇಮಕ ಮಾಡದೇ ಇದ್ದುದರಿಂದ ಮತ್ತು 1953ರ ವರೇಗೆ ಮಾಧ್ವರಲ್ಲೇ ಹೆಚ್ಚಿನ ಅಧಿಕಾರವು ಇದ್ದುದರಿಂದಲೇ ಈ ದೇವಳದಲ್ಲಿ ನಡೆದ ಶ್ರೀ ಸಿದ್ಧಿವಿನಾಯಕ ದೇವರ ವಿಗ್ರಹದ ಸ್ಥಾನಚ್ಯುತಿಯ ವಿಷಯವನ್ನು ಯಾರೂ ಈವರೇಗೆ ಹೊರಹಾಕದೆ ಇರಲು ಕಾರಣವಾಗಿದೆ.

ಅದೂ ಅಲ್ಲದೆ ಶಾರೀರಿಕ ವೇದನೆಗಳನ್ನು ಸಹಿಸಿಕೊಂಡು ಅಂತರ್ಭಕ್ತಿಯಿಂದ ಮಾಡಲ್ಪಡುವ ಮೇಲೆ ಹೇಳಲ್ಪಟ್ಟ ರೀತಿಯ ಬೀದಿ ಮಡೆ ಸ್ನಾನ ಹರಕೆಗಳು ಭಕ್ತಿ ಶ್ರದ್ಧೆಗಳಿಂದ ಮಾಡಲ್ಪಡಬೇಕಾದ ಆಗಮೋಕ್ತ ಪೂಜೆಗಳ ನ್ಯೂನತೆಯಿಂದ ಈಗ ಪೂರ್ಣ ವಿರಾಮವನ್ನು ಹೊಂದಿವೆ ಎಂದು ಹೇಳಿದರೆ ತಪ್ಪಾಗಲಾರದು.

ಮುಂದುವರಿಯುವುದು

Leave a Reply

Your email address will not be published. Required fields are marked *