Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಎಲ್ಲಿಯ ಗ್ರಹಗಳು, ಎಲ್ಲಿಯ ಮನಸ್ಸು, ಎತ್ತಣಿಂದೆತ್ತ ಸಂಬಂಧವಯ್ಯ…

ಗ್ರಹಗಳು ಮತ್ತು ಮಾನಸಿಕ ಆರೋಗ್ಯ 

# ಐನ್ ಸ್ಟೈನ್, “ವೈಜ್ಞಾನಿಕತೆ ಇಲ್ಲದ ಧರ್ಮ ಕುಂಟುತ್ತದೆ ಹಾಗೂ ಧಾರ್ಮಿಕತೆ ಇಲ್ಲದ ವಿಜ್ಞಾನ ಕುರುಡಾಗುತ್ತದೆ, ಇವೆರಡೂ ವ್ಯರ್ಥ” ಎಂಬ ಮಾತನ್ನು ಉಲ್ಲೇಖಿಸುತ್ತಾನೆ. ನಾವು ಆದಿ ವರ್ಷಗಳಿಂದ ನಂಬಿಕೊಂಡು ಬಂದಿರುವ ವೇದಗಳು, ವೇದ ಗಣಿತ, ವೇದ ಜ್ಯೋತಿಷ್ಯ ಇವುಗಳಿಗೆ ಅರ್ಥವಿದೆಯೇ ? ಇಲ್ಲವೇ ? ಹಿಂದೂ ಧರ್ಮದಲ್ಲಿ ಜಾತಕ, ಗ್ರಹದೋಷ ಮುಂತಾದ ವಿಚಾರಗಳನ್ನು ಬಹಳಷ್ಟು ವರ್ಷಗಳಿಂದ ನಂಬಿಕೊಂಡು ಬರಲಾಗಿದೆ. ಆದರೆ ವಿಜ್ಞಾನ ಮುಂದುವರಿದಂತೆಲ್ಲ ಯಾವುದನ್ನು ಎಷ್ಟು ನಂಬಬೇಕು ಎಂಬುದನ್ನು ಜನಸಾಮಾನ್ಯರು ತಿಳಿದಿರಬೇಕು.

ಆಧುನಿಕ ಸೈಕಾಲಜಿ ಪಿತಾಮಹರಲ್ಲಿ ಒಬ್ಬನಾದ ಕಾರ್ಲಯೂಂಗ್ ಹೇಳುವಂತೆ, ”ವೈಜ್ಞಾನಿಕ ತಳಹದಿಯಲ್ಲಿ ಯಾವುದಾದರೂ ಒಂದು ವಿಚಾರ ಬರುವಂತಿದ್ದರೆ ಅದನ್ನು ಅರಿತು ಪರೀಕ್ಷಿಸಿ ನೋಡಬೇಕು, ಆಮೇಲೆ ನಿರ್ಧರಿಸಬೇಕು”. ಆ ಕಾರಣದಿಂದ ಆಧುನಿಕ ವೈದ್ಯಕೀಯ ವಿಜ್ಞಾನಿಗಳು ಹಲವಾರು ವಿಷಯಗಳನ್ನು ವೈಜ್ಞಾನಿಕ ತಳಹದಿಯ ಹಿನ್ನೆಲೆಯಲ್ಲಿ ಪರೀಕ್ಷಿಸಿ ನೋಡಿದ್ದಾರೆ. ಅವುಗಳಲ್ಲಿ ಕೆಲವು ಕೆಳಗಿನಂತಿವೆ.

ಅಮಾವಾಸ್ಯೆ ಮತ್ತು ಹುಣ್ಣಿಮೆಯಂದು ಅಪಘಾತಗಳು, ರೋಗಗಳು ಮತ್ತು ಅಪರಾಧಗಳು ಹೇಗೆ ಸಂಭವಿಸುತ್ತವೆ ಎಂಬುದನ್ನು ಅಧ್ಯಯನ ಮಾಡಲು ಆಧುನಿಕ ವೈಜ್ಞಾನಿಕ ವಿಧಾನಗಳನ್ನು ಬಳಸಿಕೊಳ್ಳಲಾಗಿದೆ. ವಸಂತ ಋತುವಿನಲ್ಲಿ   ಹುಟ್ಟಿದ ಮಕ್ಕಳಲ್ಲಿ ಸ್ಕಿಜೋಫ್ರೇನಿಯಾ, ಮಲ್ಟಿಪಲ್ ಸ್ಕ್ಲೆರೋಸಿಸ್ ಮತ್ತು ಡಯಾಬಿಟಿಸ್ ಮೆಲ್ಲಿಟಸ್ ಈ ಕಾಯಿಲೆಗಳು ಹೆಚ್ಚು ಎಂದು ಕೆಲವು ವೈಜ್ಞಾನಿಕ ಸಂಶೋಧನೆಗಳು ತಿಳಿಸಿವೆ.

ಇಂಗ್ಲಿಷಿನಲ್ಲಿ “ಲೂನೆಸಿ” (lunacy)  ಎಂಬ ಪದವು ಕನ್ನಡದ “ಹುಚ್ಚು” ಎಂಬ ಪದಕ್ಕೆ ಪರ್ಯಾಯವಾಗಿದೆ. ಇದನ್ನು ಗಮನಿಸಿ. ಈ ಲೂನಸಿ ಎಂಬ ಪದವು ಲೂನಾರ್ ಅಂದರೆ ಚಂದ್ರ, ಚಂದ್ರನಿಗೆ ಸಂಬಂಧಪಟ್ಟ ಎಂಬ ಪದದಿಂದ ಬಂದಿದೆ. ಆದ್ದರಿಂದ ಜನಮಾನಸದಲ್ಲಿ ಅಮಾವಾಸ್ಯೆ ಮತ್ತು ಹುಣ್ಣಿಮೆಗೆ ಚಂದ್ರನಲ್ಲಿ ಆಗುವ ಬದಲಾವಣೆಗಳಂತೇ ಮನುಷ್ಯನ ಮನಸ್ಸಿನಲ್ಲೂ ಕೂಡ ಬದಲಾವಣೆಗಳಾಗುತ್ತವೆ.

ಅಮವಾಸ್ಯೆ ಮತ್ತು ಹುಣ್ಣಿಮೆಯ ದಿನದಲ್ಲಿ ಮಾನಸಿಕ ಕಾಯಿಲೆಗಳು ಉಲ್ಬಣಗೊಳ್ಳುತ್ತವೆ ಎಂಬ ನಂಬಿಕೆಗಳು ಇವೆ. ಜಾತಕದಲ್ಲಿ  “ಚಂದ್ರ”ನ ಸ್ಥಾನ ಮಾನಸಿಕ ಅಸ್ವಸ್ಥತೆಗೆ ಕಾರಣ ಎಂಬ ನಂಬಿಕೆ ಬಹಳಷ್ಟು ಜನರಲ್ಲಿದೆ. ಜಾನಪದ ಸಾಹಿತ್ಯ, ಮಾಧ್ಯಮಗಳು ಕೂಡ “ಮನಸ್ಸು ಮತ್ತು ಗ್ರಹ”ಗಳ ಬಗ್ಗೆ ಹಲವು ವಿಷಯಗಳನ್ನು ಜನ ಮಾನಸದಲ್ಲಿ ತುಂಬಿ ಬಿಟ್ಟಿವೆ. ಆದರೆ ವೈಜ್ಞಾನಿಕ  ಅಂಕಿ ಅಂಶಗಳು, ಸಾಕ್ಷ್ಯಾಧಾರಗಳು  “ಗ್ರಹಗಳು ಮತ್ತು ಮಾನಸಿಕ ಅಸ್ವಸ್ಥತೆ”ಗಳ ನಡುವೆ ಯಾವುದೇ ಸಂಬಂಧಗಳಿವೆಯೆಂದು ಬಲಪಡಿಸುವುದಿಲ್ಲ.

ಆದಾಗ್ಯೂ ವೇದ ಜ್ಯೋತಿಷ್ಯವು ಚಂದ್ರ ನಿಯಂತ್ರಿಸುವುದು ಮನಸ್ಸನ್ನು, ಬುಧ ಗ್ರಹವು ಮನುಷ್ಯನ ವಿವೇಚನಾಶೀಲತೆ ಮತ್ತು ಬುದ್ಧಿಶಕ್ತಿಯನ್ನು ನಿಯಂತ್ರಿಸುತ್ತದೆ ಎಂಬ ಮಾತಿನಲ್ಲಿ ನಂಬಿಕೆಯನ್ನು ಇರಿಸಿದೆ. ಗ್ರೀಕ್ ದೇವತೆಗಳಲ್ಲಿ ಚಂದ್ರನ ಅಧಿದೇವತೆಯಾದ ಲೂನಾ, ಮನಸ್ಸಿಗೆ ಸಂಬಂಧಪಟ್ಟದ್ದು ಎಂದು ಹೇಳಲಾಗುತ್ತದೆ. ಹಾಗೆಯೇ ಆಧುನಿಕ ವೈದ್ಯಕೀಯ ವಿಜ್ಞಾನದ ಪಿತಾಮಹಾ ಹಿಪೊಕ್ರೇಟ್ಸ್ ಪ್ರತಿಯೊಬ್ಬ ವೈದ್ಯನು ಜ್ಯೋತಿಷ್ಯ ಶಾಸ್ತ್ರವನ್ನು ತಿಳಿದುಕೊಂಡಿರಬೇಕು ಎಂಬ ಒಂದು ವಿಚಾರವನ್ನು ಹೇಳಿದ್ದರಂತೆ. ಇದನ್ನು ಓದಿ ಹಲವಾರು ಜನರಿಗೆ ಖುಷಿಯಾಗಬಹುದು ಹಾಗೂ ವಿಜ್ಞಾನದ ಮತ್ತು ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಒಂದು ದೊಡ್ಡ ಪುರಾವೆ ಸಿಕ್ಕಂತೆ ಅನ್ನಿಸಬಹುದು.

ಆದರೆ ಆಧುನಿಕ ವೈದ್ಯಕೀಯ ವಿಜ್ಞಾನವೂ ಬೆಳೆದು ಬಂದ ಹಾಗೆ ಹಿಪೊಕ್ರೇಟ್ಸ್ ಮಾತಿಗೆ ಅಷ್ಟು ಸರಿ ಹೊಂದುವ ಯಾವುದೇ ಪುರಾವೆಗಳು ಇಲ್ಲ. ಆದರೂ ಕೂಡ ಬಹಳಷ್ಟು ಜನ ಇವತ್ತಿಗೂ ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಮಾನಸಿಕ ಸಮಸ್ಯೆಗಳಲ್ಲಿ ಏರು ಪೇರು ಕಾಣುತ್ತದೆ ಎಂದು ಹೇಳುತ್ತಾರೆ. ಇದಕ್ಕೆ ಹಲವಾರು ವೈಜ್ಞಾನಿಕ ಪುರಾವೆಗಳನ್ನು ತಿಳಿಸುತ್ತಾರೆ. ಸಮುದ್ರದ ಅಲೆಗಳು ಅಮಾವಾಸ್ಯೆ, ುಣ್ಣಿಮೆಯ ಸಂದರ್ಭದಲ್ಲಿ ಏರು ತಗ್ಗುಗಳನ್ನು ಕಂಡ ಹಾಗೆ. ಮನುಷ್ಯನ ದೇಹದಲ್ಲಿ ದ್ರವ್ಯ ಅಂಶವೇ ಜಾಸ್ತಿ ಇರುವಾಗ ಸಮುದ್ರದ ನೀರಿನಂತೆ ಮನುಷ್ಯನ ದೇಹದಲ್ಲಿ ಕೂಡ ಹಲವಾರು ಬದಲಾವಣೆಗಳು ಆಗುತ್ತವೆ. ಅದರಲ್ಲೂ ಮನುಷ್ಯನ ಮೆದುಳಿನಲ್ಲಿ ನೀರಿನ ಅಂಶ ದ್ರವ್ಯ ಅಂಶ ಬಹಳ ಇರುವುದರಿಂದ ಇದು ಖಂಡಿತವಾಗಿಯೂ ಚಂದ್ರನ ಒಂದು ಆಕರ್ಷಣೆಗೆ ಒಳಗಾಗುತ್ತದೆ.

ಹಲವು ರಕ್ತ ಹೀರುವ ಬಾವಲಿಗಳು, ತೋಳಗಳು ಅಮಾವಾಸ್ಯೆ, ಹುಣ್ಣಿಮೆಯ ದಿನ ವಿಚಿತ್ರವಾಗಿ ವರ್ತಿಸುತ್ತವೆ. ಹಾಗೆಯೇ ಖಂಡಿತವಾಗಿ ಮನುಷ್ಯನ ಮಾನಸಿಕ ಸಮಸ್ಯೆಗಳು ಅಮವಾಸ್ಯೆ ಮತ್ತು ಹುಣ್ಣಿಮೆಗೆ ಉಲ್ಬಣಗೊಳ್ಳುತ್ತವೆ ಎಂಬುದು ಜನಸಾಮಾನ್ಯರ ಮನಸ್ಸಿನಲ್ಲಿ ಇರುವ ವಿಷಯ. ನಿಜವಾಗಿ ನೋಡಿದರೆ ವೈಜ್ಞಾನಿಕ ಸಂಶೋಧನೆಗಳು ಇವ್ಯಾವುದಕ್ಕೂ ಪುರಾವೆಗಳನ್ನು ನೀಡುತ್ತಿಲ್ಲ. ಮನುಷ್ಯನ ನಡವಳಿಕೆಗೂ ಗ್ರಹಗಳಿಗೂ ಅಥವಾ ಚಂದ್ರನಿಗೂ ಯಾವುದೇ ಸಂಬಂಧವನ್ನು ಯಾವುದೇ ವೈಜ್ಞಾನಿಕ ಸಂಶೋಧನೆಯೂ ತಿಳಿಸುತ್ತಿಲ್ಲ. ಆದ್ದರಿಂದ ಮೊದಮೊದಲು ವೈದ್ಯಕೀಯ ವಿಜ್ಞಾನ ಈ ಪುರಾವೆಗಳ ಬಗ್ಗೆ ಸ್ವಲ್ಪ ಮಟ್ಟಿಗೆ ನಂಬಿದ್ದರೂ ಬರಬರುತ್ತಾ ಈ ನಂಬಿಕೆಗಳನ್ನು ಒಪ್ಪುತ್ತಿಲ್ಲ.

ಸಹೋದ್ಯೋಗಿ ಮನೋವೈದ್ಯ ರಾಜೇಶ್ ಕೃಷ್ಣ ಭಂಡಾರಿ ಅವರು, ಜ್ಯೋತಿಷ್ಯ ಮತ್ತು ಮಾನಸಿಕ ಅಸ್ವಸ್ಥತೆಗಳನ್ನು ಅಧ್ಯಯನ ಮಾಡಲು ಪ್ರಯತ್ನಿಸಿದವರು. ಅವರೊಂದಿಗೆ ನನ್ನ ಸಂಭಾಷಣೆಗಳನ್ನು ಗಮನಿಸಿದರೆ ನನಗೆ ತಿಳಿದ ಪ್ರಮುಖ ಅಂಶಗಳೆಂದರೆ, ನವಾಂಶ ಕುಂಡಲಿಗಳು ಕುಟುಂಬ ಸಮಸ್ಯೆಗಳಿಂದ ನಿಯಂತ್ರಿಸಲ್ಪಟ್ಟಿರುವ ಮಾನಸಿಕ ಆರೋಗ್ಯದ ಸಮಸ್ಯೆಗಳ ಬಗ್ಗೆ ನಮಗೆ ತಿಳಿದುಕೊಳ್ಳಲು ಸಹಾಯ ಮಾಡುತ್ತವೆ. ಹಾಗೆಯೇ ಮನುಷ್ಯನ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಪ್ರಾರ್ಥನೆಗಳ ಪ್ರಭಾವ ಹಾಗೂ ಸಾವು, ಸೋಲು, ಹತಾಶೆ, ನೋವುಗಳನ್ನು ಎದುರಿಸಲು ಪೂಜೆ ಪುರಸ್ಕಾರಗಳ ಸಹಾಯ. ಮುಂತಾದವುಗಳನ್ನು ಗಮನಿಸಿದರೆ ಜ್ಯೋತಿಷ್ಯದ ಸಹಾಯವನ್ನು ಉಪಯೋಗಿಸಿ ಮಾನಸಿಕ ಸಮಸ್ಯೆಗಳ ಪರಿಹಾರಕ್ಕೆ ಅವು ಮಾಡುತ್ತಿರುವ ಸಹಾಯವನ್ನು ಗಮನಿಸಬಹುದು. ಆದರೆ ಇವು ಯಾವುದನ್ನೂ ಕೂಡ ಯಾವುದೇ ಮಾನಸಿಕ ಕಾಯಿಲೆಗೆ ಚಿಕಿತ್ಸೆಗಾಗಿ ಬಳಸುವಂತಿಲ್ಲ. ಯಾವುದೇ ಪೂಜೆ ಪುರಸ್ಕಾರಗಳು, ಹೋಮ ಹವನಗಳು ಮಾನಸಿಕ ಕಾಯಿಲೆಗೆ ಚಿಕಿತ್ಸೆ ಅಲ್ಲ. ಯಾವುದೇ ದೈಹಿಕ ಕಾಯಿಲೆಗೆ ಕೂಡ ಚಿಕಿತ್ಸೆ ಅಲ್ಲ.

ಜ್ಯೋತಿಷ್ಯವನ್ನು ವಿಜ್ಞಾನ ಅನ್ನುವುದಕ್ಕೆ ನನಗಂತೂ ಸುತಾರಾಂ ಒಪ್ಪಿಗೆಯಿಲ್ಲ. ಒಂದೇ ಕಾಲದಲ್ಲಿ (ಸಮಯದಲ್ಲಿ) ಒಂದೇ ಸ್ಥಳದಲ್ಲಿ ಜನಿಸಿದ- ಹಲವರ ಭವಿಷ್ಯಗಳೂ ಒಂದೇ ಇರಬೇಕಲ್ಲ ? ಆದರೆ ಹಾಗಿರುವುದು ಕಂಡಿಲ್ಲ. ಒಂದೇ ಆಸ್ಪತ್ರೆ ಆಥವಾ ಊರಿನಲ್ಲಿ ಏಕ ಕಾಲದಲ್ಲಿ ಜನಿಸಿದವರ ಜಾತಕ-ಕುಂಡಲಿ ಒಂದೇ ರೀತಿ ಇರುತ್ತದೆಯಾ ? ಏಕ ಕಾಲದಲ್ಲಿ ಜನಿಸಿದವರ ಜೀವನ ಕ್ರಮದಲ್ಲಿ ವ್ಯತ್ಯಾಸವಿರುವುದು ಕಂಡು ಬಂದಿದೆ. ಈ ಇಬ್ಬರಲ್ಲಿ ಒಬ್ಬ ಬಡವ, ಇನ್ನೊಬ್ಬ ಶ್ರೀಮಂತ. ಒಬ್ಬ ಅನಕ್ಷರಸ್ಥ, ಇನ್ನೊಬ್ಬ ವಿದ್ವಾಂಸ. ಎಂಥ ವಿಚಿತ್ರ.

ಒಬ್ಬರು ಜ್ಯೋತಿಷಿಗಳೇ ಏಕಾಂತದಲ್ಲಿ ತಮ್ಮದೇ ಉದಾಹರಣೆ ಕೊಟ್ಟರು. ಏಕ ಕಾಲದಲ್ಲಿ ಅಕ್ಕ ಪಕ್ಕದ ಮನೆಯಲ್ಲಿ, ತಾವೂ ಇನ್ನೊಬ್ಬರು ಜನನವಾಗಿದ್ದು; ಅವರು ಡಾಕ್ಟರು, ಶ್ರೀಮಂತರು; ತಾವು ಬಡ ಜ್ಯೋತಿಷಿ. ಇದರ ರಹಸ್ಯ ತಮಗೂ ತಿಳಿಯದೆಂದರು. (ಆಧಾರ: ವನಕೃಪ ವಿಶೇಷಾಂಕ-1998, ಲೇಖನ; ಫಲ ಜ್ಯೋತಿಷ್ಯದಲ್ಲಿ ಕೆಲವು ಸಂದಿಗ್ಧತೆ: ಲೇ. ಬಿ.ಎಸ್. ಚಂದ್ರಶೇಖರ: ಕಾಪಿರೈಟ್ ಇಲ್ಲ).

ಆಕಾಶದಲ್ಲಿ ಕೋಟಿ ಕೋಟಿ ನಕ್ಷತ್ರಗಳು ಇದ್ದು, ಈ ಜ್ಯೋತಿಷ್ಯದ 27 ನಕ್ಷತ್ರಗಳು ಮಾತ್ರ ಮಾನವನ ಜೀವಿತದ ಮೇಲೆ ಪರಿಣಾಮ ಬೀರುವವು. ಉಳಿದವು ಈ 27 ನಕ್ಷತ್ರಗಳಿಗಿಂತ ಪ್ರಬಲವಾಗಿದ್ದರೂ ಅವು ಪ್ರಭಾವ ಬೀರುವುದಿಲ್ಲ ಎನ್ನುವುದು ಹೇಗೆ ಸರಿ ? ಈ ನಕ್ಷತ್ರಗಳೆಲ್ಲಾ ಅತಿ ದೂರದಲ್ಲಿದ್ದು ಅವುಗಳಿಂದ ಹೊರಟ ಬೆಳಕು ನಮಗೆ ತಲುಪಲು ಅನೇಕ ಕೋಟಿ ವರ್ಷ ಬೇಕು. ಅವುಗಳ ಪ್ರಭಾವ ಮಾನವನ ಮೇಲೆ ಆಗುವುದು ಹೇಗೆ ? ಈ 27 ನಕ್ಷತ್ರಗಳಿಗೆ ಜಾತಿ, ವರ್ಣ, ಲಿಂಗ, ಪ್ರಾಣಿಗಳ ಗುಣ, ಗಣ (ರಾಕ್ಷಸ, ದೇವ, ಮನುಷ್ಯ), ಅದಕ್ಕೆ ಅಧಿಪತಿಗಳಾಗಿ ಋಷಿಗಳು, ದೇವತೆಗಳು ಯಾವ ಆಧಾರದ ಮೇಲೆ ಬಂದವು ? ನಿರ್ಜೀವವಾದ ಈ ಆಕಾಶ ಕಾಯಗಳು ಮರಗಿಡಗಳ ಗುಣಗಳನ್ನು ಹೊಂದಿವೆ. ಅವುಗಳಿಗೆ ಮೇಲೆ ಕೆಳಗೆ ನೋಡುವ ದೃಷ್ಟಿಯೂ ಇದೆ. ಇವೆಲ್ಲವೂ ಕೇವಲ ಕಲ್ಪನೆಗಳೆಂದು ತೋರುವವು. ಇಲ್ಲದಿದ್ದರೆ ಆಧಾರವೇನು ? ಹಿಂದೆ ನಕ್ಷತ್ರಗಳನ್ನೆಲ್ಲಾ ದೇವತೆಗಳೆಂದು ಭಾವಿಸಿ ಈ ಬಗೆಯ ಕಲ್ಪನೆ ಮಾಡಿದ್ದಾರೆ. ಈಗ ವಿಜ್ಞಾನ ಬೆಳೆದ ಮೇಲೆ, ಸತ್ಯ ತಿಳಿದ ಮೇಲೆ, ಕಲ್ಪನೆಗೆ ಬೆಲೆ ಇದೆಯಾ ? ಅದರಲ್ಲೂ ಈಗ ಮಾಧ್ಯಮಗಳ ಕೃಪಾಪೋಷಣೆಯಲ್ಲಿ ದಿನನಿತ್ಯವೂ ಕಂಡು ಬರುವ ಟಿವಿ ಜ್ಯೋತಿಷ್ಯ ಇದನ್ನು ನಂಬಿಕೊಂಡು ಬದುಕುವವರು ಹಲವರಿದ್ದಾರೆ. ಟಿವಿಯಲ್ಲಿ ಕುಳಿತುಕೊಂಡು ಇವರ ಹಲವು ಜ್ಯೋತಿಷ್ಯರು ಹೇಳುವ ವಿಚಾರಗಳು, ಇದನ್ನು ಹೇಗೆ ನಂಬಬಹುದು ಯೋಚನೆ ಮಾಡಿ. ಆದ್ದರಿಂದ “ಗ್ರಹ”ಚಾರ ದೋಷ ನಿವಾರಣೆ ಚಿಕಿತ್ಸೆ ಅಲ್ಲ.

ಮಾನಸಿಕ ಕಾಯಿಲೆಗಳು ಮಿದುಳಿನ ನರವಾಹಕಗಳಲ್ಲಿ ಬರುವ ಬದಲಾವಣೆಗಳಿಂದ ಉಂಟಾಗುವ ಕಾಯಿಲೆಗಳು. ಜಾತಕ ದೋಷ ಗ್ರಹಚಾರ ದೋಷ ಖಂಡಿತ ಈ ಕಾಯಿಲೆಗೆ ಕಾರಣವಲ್ಲ. ದೇವರು ದೈವ ಭೂತ ಅನ್ನುವುದು ಇದ್ದರೆ ಅವು ನಮಗಿಂತ ಹೆಚ್ಚಿನ ವರ್ಚಸ್ಸು, ನಮಗಿಂತ ಹೆಚ್ಚಿನ ಬುದ್ಧಿಯುಳ್ಳ ಶಕ್ತಿಗಳು. ಅವು ನಾವು ಮನುಷ್ಯರು ಒಬ್ಬರಿಗೊಬ್ಬರು ಶಾಪ ಕೊಡುವ ಹಾಗೆ ಶಾಪ ಕೊಡಲು ಸಾಧ್ಯವಿಲ್ಲ. ಆದ್ದರಿಂದ ಇಂತಹ ವಿಷಯಗಳಿಗೆ ಹೆಚ್ಚು ಬೆಲೆ ಕೊಟ್ಟು ಜೀವನವನ್ನು ವ್ಯರ್ಥ ಮಾಡಿಕೊಳ್ಳಬಾರದು.

Leave a Reply

Your email address will not be published. Required fields are marked *