Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕುಷ್ಠ-ತೊನ್ನು: ಮೌಢ್ಯ ಮತ್ತು ಆರೋಗ್ಯ

# ಮಾನಸಿಕ ಆರೋಗ್ಯದ ಬಗ್ಗೆ ಇರುವಷ್ಟು ಮೂಢ ನಂಬಿಕೆಗಳು ಬಹುಶಃ ಯಾವುದೇ ಕಾಯಿಲೆಗಳ ಬಗ್ಗೆ ಇರಲಿಕ್ಕಿಲ್ಲ. ಮಾನಸಿಕ ಕಾಯಿಲೆ ಎಂದರೆ ಪೂರ್ವ ಜನ್ಮದ ಪಾಪದ ಫಲ, ದೇವರ ಶಾಪ, ಭೂತದ ಉಪದ್ರ, ನಾಗದೋಷ, ಜಾತಕದಲ್ಲಿ ಸಾಡೇಸಾಥ್ ಇದೆ, ಏನೇ ಮಾಡಿದರೂ  ಸರಿಯಾಗುವುದಿಲ್ಲ, ದರ್ಶನದಲ್ಲಿ ಹೇಳಿದ್ದಾರೆ, ಖಿನ್ನತೆ ಅಲ್ಲವಂತೆ, ದೇವರು ಸಿಟ್ಟು ಮಾಡಿಕೊಂಡಿದ್ದಾರೆ ಅಷ್ಟೇ, ಯಾವುದೇ ಮಾತ್ರೆ ಬೇಡ, ದೇವರ ಭಜನೆ ಮಾಡಿ… ಇವು ಜನಮಾನಸದಲ್ಲಿ ನಿತ್ಯವೂ ನಾನು ನೋಡುತ್ತಾ ಇರುವ ನಂಬಿಕೆಗಳು.

ಮಾನಸಿಕ ಕಾಯಿಲೆಗಳನ್ನು ಗುಣಪಡಿಸುವ ದೈವಿಕ ಸ್ಥಳಗಳು ಇವೆ ಎಂದು ಎಲ್ಲ ಧರ್ಮದವರು ನಂಬುತ್ತಾರೆ. ಹಿಂದೂಗಳು ಚೋಟಾನಿಕರ ಎಂಬ ಜಾಗದ ಬಗ್ಗೆ ಮಾತನಾಡಿದರೆ, ಕ್ರೈಸ್ತರು ಪೆಟ್ಟದಲ್ಲಿ ರಿಟ್ರೀಟ್‍ಗಳ ಬಗ್ಗೆ ಮಾತನಾಡುತ್ತಾರೆ. ಮೊದಲು ದುವಾ ನಂತರ ದವಾ ಮತ್ತೊಮ್ಮೆ ದುವಾ ಎಂದು ಹೇಳುವ ಏರವಾಡಿ ದರ್ಗಾವನ್ನು ಮುಸಲ್ಮಾನರು ನಂಬುತ್ತಾರೆ. ಒಟ್ಟಿನಲ್ಲಿ ಎಲ್ಲ ಜಾತಿಯವರಲ್ಲಿ ಕೂಡ ಮಾನಸಿಕ ಕಾಯಿಲೆಗಳನ್ನು ಗುಣಪಡಿಸುವ ದೇವರುಗಳು ಇದ್ದಾರೆ ಎಂಬ ನಂಬಿಕೆ ಇದೆ.

ಮೈಮೇಲೆ ದೇವರು ಬಂದಿದ್ದಾರೆ ಅಥವಾ ದೆವ್ವ ಬರುತ್ತದೆ. ಹೊಟ್ಟೆಗೆ ಯಾರೋ ಮದ್ದು ಹಾಕಿದ್ದಾರೆ, ಅದರಿಂದ ಅವನು ಊಟವೇ ಮಾಡುತ್ತಿಲ್ಲ. ಹಿಂದೂಗಳು “ಜಕಣಿ” ಎಂದು ಹೇಳಿದರೆ, ಮುಸಲ್ಮಾನರು “ಜಿನ್” ಎಂದು ಕರೆಯುತ್ತಾರೆ. ಕ್ರೈಸ್ತರು “ಈವಿಲ್ ಸ್ಪಿರಿಟ್ಸ್” ಗಳನ್ನು ನಂಬುತ್ತಾರೆ. ಒಟ್ಟಾರೆಯಾಗಿ ಅದೃಶ್ಯ ಶಕ್ತಿಗಳು ಮಾನಸಿಕ ಕಾಯಿಲೆಯನ್ನು ಉಂಟು ಮಾಡುತ್ತವೆ ಎಂದು ನಂಬುವವರೇ ಬಹಳ.

ಹಾಗೆಯೇ ಅಮಾವಾಸ್ಯೆ, ಹುಣ್ಣಿಮೆ ಬಂದಾಗ ಮಾನಸಿಕ ಅಸಮತೋಲನ ಉಂಟಾಗುತ್ತದೆ, ಹಾಗೆಯೇ ಗ್ರಹಣದ ಸಮಯದಲ್ಲಿ ಮನಸ್ಸಿನ ಮೇಲೆ ಪರಿಣಾಮಗಳು ಬೀರುತ್ತವೆ, ಗ್ರಹಗಳಿಗೆ ಮನಸ್ಸನ್ನು ನಿಗ್ರಹಿಸುವ ಶಕ್ತಿ ಉಂಟು, ಮುಂತಾದ ಅವೈಜ್ಞಾನಿಕ ವಿಷಯಗಳು ಸಮಾಜದಲ್ಲಿ ಆಗಾಗ ಬಿತ್ತರಿಸಲ್ಪಡುತ್ತವೆ. ಒಟ್ಟಾರೆಯಾಗಿ ಮಾನಸಿಕ ಕಾಯಿಲೆಗಳು ಉಂಟಾಗುವ ಬಗ್ಗೆ ಹಲವು ಊಹಾತ್ಮಕ ಕಾರಣಗಳು ನಮ್ಮ ಜನಮಾನಸದಲ್ಲಿ ಇದೆ. ಇದಕ್ಕೆ ಪ್ರಮುಖವಾದ ಕಾರಣ ಏನು ? ಈ ನಂಬಿಕೆಗಳು ಜನಮಾನಸದಲ್ಲಿ ನೆಲೆ ಊರಲು ಕಾರಣಕರ್ತರು ಯಾರು ? ದೈಹಿಕ ಕಾಯಿಲೆಗಳ ಬಗ್ಗೆಯೂ ಕೂಡ ಇಂತಹದೇ ಹಲವು ಅಪನಂಬಿಕೆಗಳು ಇದೆಯಲ್ಲವೇ ? ಜನರಲ್ಲಿ ಇರುವ ಮೂಢನಂಬಿಕೆಗಳು, ಪೂರ್ವಾಗ್ರಹ ಪೀಡಿತ ವಿಚಾರಗಳು, ಸೀಮಿತವಾದ ತಿಳುವಳಿಕೆ, ರೋಗಗಳ ಉಂಟಾಗುವಿಕೆಯ ಬಗೆಗಿನ ಗೊಂದಲ ಮುಂತಾದ ಕಾರಣಗಳಿಂದ, ಹೆಚ್ಚಾಗಿ ದೈಹಿಕ ಅಥವಾ ಮಾನಸಿಕ ರೋಗಗಳಿಂದ ಬಳಲುತ್ತಿರುವವರು ಸಾಮಾಜಿಕವಾಗಿ ಹೆಚ್ಚು ಮುಜುಗರಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅನಕ್ಷರತೆ, ಅಜ್ಞಾನ ಮತ್ತು ಸಾಮಾನ್ಯ ಜ್ಞಾನದ ಕೊರತೆಯಿಂದಾಗಿ ರೋಗದ ಬಗ್ಗೆ ಅನಗತ್ಯ ಗೊಂದಲವನ್ನು ಜನರಲ್ಲಿ ಉಂಟು ಮಾಡಲಾಗುತ್ತದೆ.

ದೈಹಿಕ ಕಾಯಿಲೆ ಮತ್ತು ಮೂಢನಂಬಿಕೆಗಳು

ದೈಹಿಕ ಕಾಯಿಲೆಗಳ ಬಗ್ಗೆ ಮೂಢನಂಬಿಕೆಗಳು ಇರುವುದನ್ನು ನಾನು ಮೊಟ್ಟ ಮೊದಲು ನೋಡಿದ್ದು ಕೇಳಿದ್ದು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ. ಫಾದರ್ ಮುಲ್ಲರ್ ಆಸ್ಪತ್ರೆ ಒಂದು ಕಾಲದಲ್ಲಿ ಮಾನಸಿಕ ಕಾಯಿಲೆ ಮತ್ತು ಚರ್ಮರೋಗ ಅದರಲ್ಲಿಯೂ ಕುಷ್ಠರೋಗದ ಬಗ್ಗೆ ಚಿಕಿತ್ಸೆಗೆ ಹೆಸರಾಗಿತ್ತು ಅನ್ನುವುದನ್ನು ಮಂಗಳೂರಿನ ಜನತೆ ಒಪ್ಪುತ್ತದೆ. ಅಲ್ಲಿಯ ಕುಷ್ಠರೋಗ ವಿಭಾಗಕ್ಕೆ ನಾನು ಹೋದಾಗ ಆಗಿನ ಚರ್ಮರೋಗ ವಿಭಾಗ ಮುಖ್ಯಸ್ಥರಾದ ಡಾ ಜೆ.ಎನ್. ಶೆಟ್ಟಿ ಅವರೊಂದಿಗೆ ಮಾತನಾಡಿದ್ದನ್ನು ನೆನಪಿಸಿಕೊಳ್ಳುತ್ತೇನೆ.

ಆ ಸಂದರ್ಭದಲ್ಲಿ ಅವರು ಮಾತನಾಡುತ್ತಾ ಲೆಪ್ರಸಿ ಅಥವಾ ಕುಷ್ಠರೋಗ ಇದರ ಬಗ್ಗೆ ಹೇಳುತ್ತಿದ್ದರು. ಕುಷ್ಠರೋಗದ ಬಗ್ಗೆ ಸಾಕಷ್ಟು ಮೂಢನಂಬಿಕೆಗಳು ಜನಸಾಮಾನ್ಯರಲ್ಲಿ ಇತ್ತು, ಈಗಲೂ ಇದೆ. ಕುಷ್ಠರೋಗ ಮತ್ತು ತೊನ್ನು ಈ ಎರಡರ ಬಗ್ಗೆ ಬಹಳಷ್ಟು ಜನ  ಪರ್ಯಾಯ ಶಬ್ದಗಳಂತೆ ಬಳಸುತ್ತಾರೆ. ಇವೆರಡೂ ಬೇರೆ ಬೇರೆ ಕಾಯಿಲೆಗಳು. ಈ ಎರಡು ಕಾಯಿಲೆಗಳು ಒಂದೇ ಎಂಬಂತೆ ಹಲವಾರು ಜನ ಬಳಸುತ್ತಾರೆ, ಅದೇ ಮೊದಲನೆಯ ಅಪನಂಬಿಕೆ.

ಎರಡನೆಯದಾಗಿ ಕುಷ್ಠರೋಗ ಇದರ ಬಗ್ಗೆ ಇದು ಗುಣವಾಗದ ಕಾಯಿಲೆ ಎಂಬಂತೆ ಪ್ರಚಲಿತವಾಗಿದೆ. ಇದರ ಬಗ್ಗೆಯೂ ಸಾಕಷ್ಟು ತಪ್ಪು ನಂಬಿಕೆಗಳು ಜನಮಾನಸದಲ್ಲಿ ಇವೆ. ಕುಷ್ಠರೋಗವನ್ನು ಪ್ರಾಥಮಿಕ ಹಂತದಲ್ಲೇ ಪತ್ತೆಹಚ್ಚಿ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ ಎಂಬ ಮಾತನ್ನು ಮಹಾತ್ಮ ಗಾಂಧಿಯವರು, ಮದರ್ ತೆರೇಸಾ, ಬಾಬಾ ಆಮ್ಟೆ ಮುಂತಾದ ಮಹನೀಯರು ಬಹಳಷ್ಟು ಮನದಟ್ಟು ಮಾಡಿಕೊಟ್ಟಿದ್ದರು.

ಕುಷ್ಠ ರೋಗ ಪೂರ್ವ ಜನ್ಮದ ಪಾಪದ ಫಲ ಎಂದು ನಂಬುವ ಅನೇಕರಿದ್ದಾರೆ. ಇದು ಇನ್ನೊಂದು ಮೂಢನಂಬಿಕೆ. ಜನಸಾಮಾನ್ಯರು ತಿಳಿದುಕೊಳ್ಳಬೇಕಾದ ವಿಷಯವೇನೆಂದರೆ,  ಕುಷ್ಠರೋಗ ಒಂದು ದೀರ್ಘಾವಧಿಯ ಸಾಂಕ್ರಾಮಿಕ ರೋಗ. ಮುಖ್ಯವಾಗಿ ಚರ್ಮ ಮತ್ತು ನರಗಳ ಮೇಲೆ ಪ್ರಭಾವ ಬೀರುತ್ತದೆ. ಸೋಂಕು ತಗುಲಿ ರೋಗದ ಲಕ್ಷಣಗಳು ಕಾಣಿಸಿಕೊಳ್ಳಬೇಕಾದರೆ ಎರಡು ಅಥವಾ ಮೂರು ವರ್ಷಗಳಾಗುತ್ತವೆ. ಕುಷ್ಠರೋಗಕ್ಕೆ ವಯಸ್ಸು, ಸಾಮಾಜಿಕ ಅಂತಸ್ತು ಪರಿಗಣನೆ ಇಲ್ಲದಿದ್ದರೂ ಶುಚಿತ್ವ ಇಲ್ಲದೇ ಇರುವ ಕಡೆ ಇದು ಜಾಸ್ತಿ. ಈ ರೋಗ ಗಂಡಸರಲ್ಲಿ ಹೆಚ್ಚು. ಏಕೆಂದರೆ ಅವರು ಹೊರಗಡೆ ಇರುವುದು ಜಾಸ್ತಿ.

ಇದು ಕ್ಷಯ ರೋಗವು ಹೇಗೆ ಮೈಕೋಬ್ಯಾಕ್ಟೀರಿಯ ಎಂಬ ಒಂದು ಜಾತಿಯ ಬ್ಯಾಕ್ಟೀರಿಯಾಗಳಿಂದ ಬರುತ್ತದೆಯೋ ಹಾಗೆಯೇ ಅದೇ ಜಾತಿಯ ಮೈಕೋ ಬ್ಯಾಕ್ಟೀರಿಯ ಲೆಪ್ರೆ ಎಂಬ ಬ್ಯಾಕ್ಟೀರಿಯಾಗಳಿಂದ ಬರುತ್ತದೆ. ಲೆಪ್ರಸಿ ಕಾಯಿಲೆಯು ಜಗತ್ತಿನ ಇತಿಹಾಸವನ್ನು ಗಮನಿಸಿದಾಗ ಭಾರತ ಹಾಗೂ ಯುರೋಪ್ ದೇಶಗಳ ಇತಿಹಾಸದ ಪುಟಗಳಲ್ಲಿ ಹಲವಾರು ರಾಜರುಗಳು ಜನ ಸಾಮಾನ್ಯರು ಈ ಕಾಯಿಲೆಯಿಂದ ಬಳಲುತ್ತಿರುವುದರ ಬಗ್ಗೆ ಸಾಕಷ್ಟು ಲೇಖನಗಳನ್ನು ಉಲ್ಲೇಖ ಮಾಡುತ್ತಾರೆ. ಆದರೆ ಅದು ನಿಜವಾಗಲೂ ಲೆಪ್ರಸಿ ಕಾಯಿಲೆಯೋ ಅಥವಾ ಬೇರೆ ಯಾವುದಾದರೂ ಕಾಯಿಲೆಯೋ ಅನ್ನುವುದಕ್ಕೆ ಪುರಾವೆಗಳು ಇಲ್ಲ. ಚರ್ಮ ರೋಗಗಳಲ್ಲಿ ಹಲವು ತರಹದ ರೋಗಗಳು ಇರುತ್ತವೆ. ಕೆಲವು ಸಾಂಕ್ರಾಮಿಕ ಆದರೆ ಲೆಪ್ರಸಿ ಅಥವಾ ಕುಷ್ಠರೋಗವು ಈ ರೋಗ ಇರುವವರನ್ನು ಮುಟ್ಟಿದ ಕೂಡಲೇ ನಮಗೆ ಬರಲು ಸಾಧ್ಯವೇ ಇಲ್ಲ. ಕೈಕುಲುಕಿದ ಕೂಡಲೇ ಅಥವಾ ಅವರನ್ನು ಮುಟ್ಟಿದ ಕೂಡಲೇ ಕಾಯಿಲೆ ಬರುತ್ತದೆ ಎಂಬುದು ಒಂದು ಮೂಢನಂಬಿಕೆ. ಹಾಗೆಯೇ ಈ ಕಾಯಿಲೆ ಇರುವವರಿಗೆ ಬೆರಳುಗಳು ತನ್ನಷ್ಟಕ್ಕೆ ಬಿದ್ದು ಹೋಗುತ್ತದೆ ಅನ್ನುವುದು ಒಂದು ಅಪನಂಬಿಕೆ. ಈ ಕಾಯಿಲೆಯ ಸೋಂಕು ಕೆಲವೊಮ್ಮೆ ಕೈ ಕಾಲುಗಳಲ್ಲಿ ಗಾಯಗಳಾದಾಗ ಅಲ್ಲಿ ಹೋಗಿ ಆವರಿಸಿಕೊಂಡು ಬಿಡುತ್ತದೆ.

ಕೈ ಕಾಲುಗಳ ಬೆರಳುಗಳು ಮೊಟಕು ಗೊಳ್ಳುವುದು ಈ ಕಾಯಿಲೆಯ ಲಕ್ಷಣ. ಇದನ್ನು ಜನಸಾಮಾನ್ಯರು ಈ ಕಾಯಿಲೆಯಲ್ಲಿ ಕೈ ಕಾಲುಗಳ ಬೆರಳುಗಳು ಬಿದ್ದು ಹೋಗುತ್ತವೆ ಎಂದು ತಪ್ಪಾಗಿ ನಂಬುತ್ತಾರೆ. ಈ ಕಾಯಿಲೆಯನ್ನು ಆನುವಂಶಿಕ ಕಾಯಿಲೆ ಅಥವಾ ದೇವರ ಶಾಪದಿಂದ ಬರುವ ಕಾಯಿಲೆ ಎಂದು ಹಲವಾರು ಜನ ಭಾರತ ದೇಶದಲ್ಲಿ ನಂಬುತ್ತಾರೆ. ಈ ಕಾಯಿಲೆ ಇರುವವರ ಕುಟುಂಬದಲ್ಲಿ ಗಂಡು ಕೊಡುವುದು ಹೆಣ್ಣು ತೆಗೆದುಕೊಳ್ಳುವುದು ಮಾಡಲು ಹೆದರುತ್ತಾರೆ. ನಿಜ ಹೇಳಬೇಕೆಂದರೆ ಮದರ್ ತೆರೇಸಾ, ಬಾಬಾ ಆಮ್ಟೆ ಮುಂತಾದವರು ಈ ಕಾಯಿಲೆ ಇರುವ ರೋಗಿಗಳ ಮಧ್ಯದಲ್ಲೇ ಇದ್ದರೂ ಅವರ ರೋಗ ನಿರೋಧಕ ಶಕ್ತಿ ಉತ್ತಮವಾಗಿರುವುದರಿಂದ ಇವರಿಗೆ ಎಷ್ಟೋ ವರ್ಷಗಳ ಕಾಲ ಆ ರೋಗಿಗಳ ಜೊತೆಗೆ ಇದ್ದರೂ ಈ ಕಾಯಿಲೆ ಬರಲಿಲ್ಲ. ಇದನ್ನು ಜನಸಾಮಾನ್ಯರು ಗಮನಿಸಬೇಕು.

ಇದು ಅಷ್ಟು ಸುಲಭವಾಗಿ ಹರಡುವ ಅಂಟು ರೋಗವಲ್ಲ. ಈ ಕಾಯಿಲೆಯಿಂದ ಬಳಲುತ್ತಿರುವವರು ಕೆಲವೊಮ್ಮೆ ಎರಡು ವರ್ಷಗಳ ಕಾಲದವರೆಗೆ ಮದ್ದು ತೆಗೆದುಕೊಳ್ಳಬೇಕಾಗುತ್ತದೆ ಇದನ್ನು ಮಾತ್ರ ಗಮನದಲ್ಲಿ ಇಟ್ಟುಕೊಳ್ಳಬೇಕು. ಮಾತ್ರೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಇವರು ಕಾಯಿಲೆಯನ್ನು ಬೇರೆಯವರಿಗೆ ಹರಡುತ್ತಾರೆ ಎಂಬುದು ಇನ್ನೊಂದು ಮೂಢನಂಬಿಕೆ ಇದು ಕೂಡ ತಪ್ಪು. ಇನ್ನು ಪ್ರಮುಖವಾಗಿ ಕುಷ್ಠರೋಗ ಎಂದು ಜನ ಅಂದುಕೊಳ್ಳುವ ತೊನ್ನು ರೋಗ. ಇದರ ಬಗ್ಗೆ ಕೂಡ ಸ್ವಲ್ಪ ತಿಳಿದುಕೊಳ್ಳುವ.

  • ಇದು ಕುಷ್ಠ ರೋಗ ಮೂಗು ಕೈ ಕಾಲಿನ ಬೆರಳುಗಳು ಮೊಟಕುಗೊಂಡಿದೆ

ತೊನ್ನು ಮತ್ತು ಮೂಢನಂಬಿಕೆಗಳು

1. ತೊನ್ನು ರೋಗ ಸ್ಪರ್ಶದಿಂದ ಹರಡುತ್ತದೆ ಎನ್ನುವುದು ಮೂಢನಂಬಿಕೆಯ ಪರಮಾವಧಿ. ತೊನ್ನು ರೋಗ ಸಾಂಕ್ರಾಮಿಕ ರೋಗವಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಸ್ಪರ್ಶದಿಂದ ಹರಡುವುದೇ ಇಲ್ಲ.

2. ತೊನ್ನು ರೋಗಕ್ಕೂ ಮತ್ತು ಕುಷ್ಠ ರೋಗಕ್ಕೂ ಯಾವುದೇ ಸಂಬಂಧವಿಲ್ಲ. ಕುಷ್ಠರೋಗ ಸಾಂಕ್ರಾಮಿಕ ರೋಗವಾಗಿದ್ದು, ಕೀಟಾಣುಗಳಿಂದ ಹರಡುತ್ತದೆ. ಆದರೆ, ತೊನ್ನು ರೋಗ ಆಂತರಿಕವಾದ ತೊಂದರೆಯಿಂದ ಉಂಟಾಗುತ್ತದೆ. ನಮ್ಮ ದೇಹದ ಚರ್ಮದಲ್ಲಿ ಬಣ್ಣ ಉತ್ಪತ್ತಿ ಮಾಡುವ ಮೆಲನೋಸೈಟ್ಸ್ ಎಂಬ ಜೀವಕಣಗಳು ಇರುತ್ತದೆ. ಇವು ಚರ್ಮಕ್ಕೆ ಬಗೆ ಬಗೆಯ ಬಣ್ಣವನ್ನು ನೀಡುತ್ತದೆ. ಈ ಜೀವಕಣಗಳು ಚರ್ಮ, ಕೂದಲು, ತುಟಿ, ಜನನಾಂಗ, ಕಣ್ಣು, ಗುಪ್ತಾಂಗ, ಬಾಯಿಯ ಒಳಭಾಗ, ಕಿವಿಯ ಒಳಭಾಗ, ಮೂಗಿನ ಹೊಳ್ಳೆಗಳು, ಗುದದ್ವಾರ ಮುಂತಾದ ಕಡೆ ಹೇರಳವಾಗಿ ಇರುತ್ತದೆ. ಕಾರಣಾಂತರಗಳಿಂದ ಹೆಚ್ಚಾಗಿ ಆಟೋ ಇಮ್ಯುನಿಟಿ ಅಂದರೆ ದೇಹದ ರಕ್ಷಣಾ ವ್ಯವಸ್ಥೆಯ ವಿರುದ್ಧ ದೇಹದ ಜೀವಕಣಗಳು ಸಿಡಿದು ನಿಂತಾಗ ಈ ರೀತಿ ಸಮಸ್ಯೆಗಳು ಉದ್ಭವವಾಗುತ್ತದೆ. ಮೆಲನೋಸೈಟ್ಸ್ ಜೀವಕಣಗಳ ಮೇಲೆ ಪ್ರತಿಕಾಯಗಳು ಉತ್ಪತ್ತಿಯಾಗಿ ಈ ಜೀವ ಕಣಗಳು ತಮ್ಮ ಜೀವಸತ್ವವನ್ನು ಕಳೆದುಕೊಳ್ಳುತ್ತದೆ. ಮತ್ತು 95 ಶೇಕಡಾ ಮಂದಿಯಲ್ಲಿ ಇದೇ ಕಾರಣದಿಂದ ತೊನ್ನು ರೋಗ ಬರುತ್ತದೆ. ಕೆಲವೊಂದು ಸಂಶೋಧನೆಗಳು ವೈರಾಣು ಕೂಡಾ ಈ ತೊನ್ನು ರೋಗಕ್ಕೆ ಕಾರಣವಾಗುತ್ತದೆ. ಎಂದು ಹೇಳಿದ್ದರೂ, ಸಂಪೂರ್ಣವಾದ, ಪರಿಪೂರ್ಣವಾದ ಖಚಿತ ಮಾಹಿತಿ ಇರುವುದಿಲ್ಲ.

3. ದೈವಿಕ ತೊಂದರೆಯಿಂದ ದೇವರು ಮುನಿಸಿಕೊಂಡಾಗ ತೊನ್ನು ರೋಗ ಹರಡುತ್ತದೆ ಎಂಬುವುದು ಖಂಡಿತವಾಗಿಯೂ ಸತ್ಯಕ್ಕೆ ದೂರವಾದ ವಿಚಾರ.

4. ಹಾಲು ಮತ್ತು ಇತರ ಬಿಳಿಬಣ್ಣದ ಆಹಾರ ಪದಾರ್ಥ, ಹುಳಿ ಆಹಾರ ಸೇವನೆ ಮತ್ತು ಮೀನು ತಿಂದ ಬಳಿಕ ಹಾಲು ಕುಡಿಯುವುದರಿಂದ ತೊನ್ನು ರೋಗ ಬರುತ್ತದೆ ಮತ್ತು ಉಲ್ಭಣವಾಗುತ್ತದೆ ಎಂಬುವುದು ಕೂಡ ಸತ್ಯಕ್ಕೆ ದೂರವಾದ ವಿಚಾರ.

5. ಹಾವನ್ನು ಕೊಂದರೆ  ತೊನ್ನು ರೋಗ ಬರುತ್ತದೆ ಎಂಬ ಮೂಢನಂಬಿಕೆ ಕೂಡ ತಪ್ಪು ಗ್ರಹಿಕೆ.

ಚಿತ್ರ ಕೃಪೆ: ಅಂತರ್ಜಾಲ

Leave a Reply

Your email address will not be published. Required fields are marked *