Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ನಿಶ್ಮಿತಾ ಪಳ್ಳಿ ಅವರ ಐದು ಕವಿತೆಗಳು

ಬಸವಣ್ಣ

ನೈಜ ಭಕ್ತಿಯ ಅರಸಿದ್ದನವನು
ಢಾಂಭಿಕತೆ ಕಣ್ಣ ಮುಂದೆಯೇ ಕುಣಿಯುತ್ತಲಿತ್ತು
ನುಡಿದಂತೆ ನಡೆದನವನು
ಅವರಿಗೆ ನುಡಿಯನ್ನು ಅರ್ಥೈಸಿಕೊಳ್ಳುವಲ್ಲೇ ಗೊಂದಲವಿತ್ತು
ನೊಣವನ್ನೂ‌ ನೋಯಿಸಿದವನಲ್ಲ
ಕಣ್ಣ ಮುಂದೆ ರಕ್ತದ ಹೊಳೆಯೇ ಹರಿದಿತ್ತು
ಜಾತಿ ಪದ್ದತಿಯ ಮೀರಿ ಬದುಕಬೇಕೆಂದನವನು
ಅವನನ್ನೇ ಜಾತಿಯ ಮುಖಂಡನಾಗಿಸಲು ತಯಾರಿ ನಡೆದಿತ್ತು
ಕೂಡಲಸಂಗಮನ ಸೇರುವಲ್ಲಿಗೆ ಬದುಕು ಮುಗಿದಿತ್ತು
ಬದುಕಿದ್ದಾಗಲೇ ಅರ್ಥವಾಗಲಿಲ್ಲ ಅವನು
ಕಳೆದುಹೋಗಿ ಒಂಭತ್ತು ಶತಮಾನಗಳೇ ಕಳೆದಿವೆ
ಅರ್ಥೈಸುವುದಾದರೂ ಹೇಗೆ ಅವನ…?

ಅರ್ಧ ಬದುಕು…ಅನರ್ಥ ಬದುಕು

ಹೇಗೆ ಮರೆಯಲಿ ಗೆಳತಿ ಕಾಡುವ ನೆನಪುಗಳ
ಮೊನ್ನೆಯವರೆಗೆ ಅವನು ಬರುತ್ತಾನೆ ಎನ್ನುವ ಭರವಸೆ ಇತ್ತು
ನಿನ್ನೆಯವರೆಗೆ ಬರಬಹುದು ಎನ್ನುವ ಆಸೆ ಇತ್ತು
ಆಸೆ, ಭರವಸೆಗಳೆರಡೂ ಅವನ ಗೋರಿಯಲಿ ಮಣ್ಣಾಗಿ ಕುಳಿತಿವೆ ಗೆಳತೀ..
ಬದುಕು ಚೆಲ್ಲಾಡಿ ಹೋಗಿದೆ
ಹೇಗೆ ಬದುಕಲಿ ಹೇಳು….
ಅವನಿಟ್ಟ ಮುತ್ತುಗಳ ನೆನಪಿದೆ
ಅವನಿಟ್ಟ ಆಣೆಗಳ ಕನಸಿದೆ
ಸಾವಿರ ಆಸೆ ಹೊತ್ತು ಬರೆದ
ಕಾಗದಗಳ ರಾಶಿಯೇ ಮುಂದಿದೆ
ಬದುಕು ಮುರಿದು ಬಿದ್ದಿದೆ ಗೆಳತೀ…
ಹೇಗೆ ಮರೆಯಲಿ ಹೇಳು
ನಿನ್ನೆ ಮೊನ್ನೆಯ ದಿನಗಳ
ನಿನ್ನೆ ಕಂಡ ನಾಳೆಯ ಕನಸುಗಳ
ಕನಸುಗಳೇ ಬದುಕಾಗಿತ್ತಲ್ಲ ನಿನ್ನೆಯವರೆಗೆ
ನಾಳೆ ಬರಬಹುದಾಗಿದ್ದ ಅವನ ಪತ್ರ
ನಾಳೆ ಹುಟ್ಟಬಹುದಾಗಿದ್ದ ಅವನ ಮಗ
ಅವನಂತೆಯೇ ಧೈರ್ಯ, ಪ್ರೀತಿ, ತ್ಯಾಗ..
ಬರೇ ಪಾಪ ಪುಣ್ಯಗಳ ಲೆಕ್ಕವಿಟ್ಟರೆ ಸಾಕೇ..
ಕಂಡ ಕನಸುಗಳ, ಪೂರೈಸಬೇಕಿದ್ದ ಕರ್ತವ್ಯಗಳ ಲೆಕ್ಕ…
ಇದೆಯೇ ನಿನ್ನಲ್ಲಿ ಹೇ ಮುರಾರಿ.

ತತ್ವಮಸಿಯಲ್ಲ ಇದು ಕಪ್ಪು ಮಸಿ..

ಸುಡುತ್ತಿರುವ ಎದೆಯೊಳಗೊಂದು
ಕಪ್ಪು ಹೂವು
ಅರಳಲಾರದು, ಬೆಳೆಯಲಾರದು
ಆದರ್ಶಗಳ ಕಟ್ಟಿಕೊಂಡು ಸಾಧಿಸುವುದೇನಿದೆ ?
ಸೋಲಬೇಕು, ಸೋತು ಗೆಲ್ಲಬೇಕು
ಸ್ವಾಭಿಮಾನ ಮಣ್ಣಾದಾಗಲೇ
ತಿಳಿಯುವುದು ನೀನಾರೆಂದು
ನಿನ್ನವರಾರೆಂದು
ಅವನದ್ದು ಮತ್ತೇನು ಅದೇ ಕಾಯಕ
ಬರುತ್ತಾನೆ, ಉರಿಯುತ್ತಾನೆ, ಹೋಗುತ್ತಾನೆ
ಉರಿದು ಕೆಟ್ಟವನೆನಿಸಿಕೊಂಡರೂ ಬೆಳಕಾಗುತ್ತಾನೆ
ಬೆಳಗಿ ಬದುಕ ಭಾಗವಾಗುತ್ತಾನೆ
ನೀನು ಅವನಲ್ಲ ಬಿಡು
ನಿನ್ನ ಆದರ್ಶಗಳು ಗೋಡೆಯ ಮೇಲಿನ ಬಣ್ಣ
ಮಾಸಬಹುದು, ಬದಲಾಗಬಹುದು
ಬಂಧಗಳು ಗೆಲ್ಲುತ್ತಾವೆಂದರೆ
ಏನಾದರಾಗಲಿ
ಹಾಗಾದರೂ ಉರಿದು ಬೆಳಕಾಗುವ
ಭಾಗ್ಯ ಒದಗಿ ಬರಲಿ.

ಇದೇಕೆ ಹೀಗೆ

ಹೆಣ್ಣಾಗಿ ಹುಟ್ಟಿ
ಒಂದಷ್ಟು ಓದಿ
ಕೈಯಲ್ಲೊಂದಿಷ್ಟು ಸರ್ಟಿಫಿಕೇಟು
ತಲೆಯಲ್ಲೊಂದಿಷ್ಟು ವಿಮರ್ಶೆಗಳಿದ್ದರೆ ಸಾಕೇ..?
ಪಲ್ಯಕ್ಕೆ ಎಷ್ಟು ಉಪ್ಪು ? ಪಾಯಸಕ್ಕೆ ಎಷ್ಟು ?
ಅತ್ತೆಯ ಮಾತ್ರೆಗಳು ಎಂದಿಗೆ ಲಾಸ್ಟು ?
ಮನೆಯ ಕೆಲಸಗಳನ್ನೆಲ್ಲ ಮುಗಿಸಲು ಎಷ್ಟು ಹೊತ್ತು ?
ಮಗನ ಪರೀಕ್ಷೆಗಳು ಎಂದು ಸ್ಟಾರ್ಟು ?
ಕರೆಂಟು ಬಿಲ್ಲು, ಕುಕ್ಕರಿನ ಸೀಟಿ, ಬಿಸಿನೀರು, ನಾಳೆಯ ತಿಂಡಿ…
ಕನಸುಗಳ ಮೂಟೆಕಟ್ಟಬೇಕು ಮಗಳೇ..
ಹೆಣ್ಣಾಗುವುದ ಕಲಿಯಬೇಕು
ಮನದ ಮರೆಯ ಮರುಳನ್ನೆಲ್ಲ ಮಾರಾಟಕ್ಕಿಟ್ಟು
ಸಂಸಾರವೆಂಬ ಯಾತ್ರೆ ಹೊರಡಬೇಕು
ಕುಟುಂಬದ ಕಣ್ಣಾಗಬೇಕು ಮಗಳೇ ಕಣ್ಣಾಗಬೇಕು.

ಅವಳು ಹೊರೆಯಾದವಳು

ಅವಳಿಗೂ ಮನಸ್ಸಿತ್ತು
ನಿನ್ನ ಜೊತೆ ಬದುಕುವ ಕನಸ್ಸಿತ್ತು
ನಿನ್ನ ಆಟಗಳ ನೋಡಿ ಆನಂದಿಸಿದರವರು
ಅವಳು ಅನುಭವಿಸಿದಳು
ಪ್ರೀತಿಯಲ್ಲೂ ಪರಿಪೂರ್ಣತೆ ತೋರಿದವಳವಳು
ನಿನ್ನ ಪ್ರೀತಿಯಲ್ಲಿ ಅವರೂ ಪಡೆದಿರಬಹುದು ಪಾಲು
ಎಂದೆದಿಗೂ ರಾಧೆಯ ಪ್ರೀತಿ ಶ್ಯಾಮನೊಬ್ಬನ ಪಾಲು
ಆದರೂ ನಿನಗೆ ಅವಳೇ ಯಾಕೆ ಹೊರೆಯಾದಳು !

 • ನಿಶ್ಮಿತಾ ಪಳ್ಳಿ

2 Comments

 1. ashaash629@gmail.com'

  Ash

  March 31, 2019 at 12:49 pm

  Superb

 2. divcool98@gmail.com'

  Divya

  April 1, 2019 at 9:02 am

  Super kalavide😍.namma hennu namma hemme…….

Leave a Reply

Your email address will not be published. Required fields are marked *