Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಋತುಸ್ರಾವ ಮತ್ತು ಮನೋದೈಹಿಕ ಸಮಸ್ಯೆಗಳು

# ಪರಿಚಯದ ದೇವಸ್ಥಾನದ ಅರ್ಚಕರೊಬ್ಬರು ಸಣ್ಣ ಮುಖ ಮಾಡಿ ಒಂದು ದಿನ ಬೆಳಿಗ್ಗೆ ಮನೆಗೆ ಬಂದರು. ದುಗುಡವನ್ನು ಯಾರೊಂದಿಗೆ ಹೇಳುವುದು ಗೊತ್ತಾಗುತ್ತಿಲ್ಲ ಎಂದು ಹೇಳುತ್ತಾ, ತಮಗೆ ಮದುವೆಯಾಗಿ ಮೂರು ವರ್ಷಗಳಾಯಿತು; ತಮ್ಮ ಹೆಂಡತಿ ತಿಂಗಳಲ್ಲಿ ಒಂದು ಬಾರಿ ಬಹಳ ಸಿಡುಕುವುದು, ಜಗಳ ಮಾಡುವುದು, ಮನೆಯವರಿಗೆ ಬೈಯುವುದು ಮಾಡುತ್ತಾರೆ. ಎರಡು ದಿನಗಳ ಹಿಂದೆ ಕೋಪ ಬಂದು ತನ್ನೊಂದಿಗೆ ಜಗಳವಾಡಿ ತನ್ನ ಕಿವಿಯನ್ನು ಕಚ್ಚಿ ಬಿಟ್ಟಿದ್ದಾರೆ. ಯಾವಾಗಲೂ ತಾನು ಹೇಳಿದ್ದನ್ನು ಕೇಳಿಕೊಂಡು ನಗು ಮುಖದಿಂದ ಇರುವ ಈಕೆ ತಿಂಗಳಿಗೆ ಒಂದು ಬಾರಿ ಈ ರೀತಿ ಮಾಡುತ್ತಾಳೆ, ಯಾಕೆ ಎಂದು ಗೊತ್ತಾಗುತ್ತಿಲ್ಲ ಎಂದು ತಿಳಿಸಿದರು.

ಇದು ಹೆಚ್ಚಾಗಿ ಅವರ ಋತುಚಕ್ರ ಪ್ರಾರಂಭವಾಗುವ ಒಂದು ವಾರದ ಮೊದಲು ಈ ರೀತಿಯ ಸಮಸ್ಯೆಯಾಗುತ್ತದೆ ಎಂಬುದನ್ನು ಕೂಡ ತಿಳಿಸಿದರು. ಈ ವಿಷಯವನ್ನು ತಮ್ಮ ಕುಟುಂಬ ವೈದ್ಯರೊಂದಿಗೆ ಪ್ರಸ್ತಾಪ ಮಾಡಿದರಂತೆ. ಆಗ ಕುಟುಂಬ ವೈದ್ಯರು ಮನೋರೋಗ ತಜ್ಞರನ್ನು ಭೇಟಿಯಾಗಲು ತಿಳಿಸಿದ್ದರಂತೆ. ಆದರೆ ಇವರ ಹೆಂಡತಿ ಸುತಾರಾಂ ಬರಲು ಒಪ್ಪುತ್ತಿಲ್ಲವಂತೆ…

ಹೌದು ಇಪ್ಪತ್ತನೇ ವಯಸ್ಸಿನಿಂದ ನಲವತ್ತನೇ ವಯಸ್ಸಿನವರೆಗಿನ ಕೆಲವು ಮಹಿಳೆಯರಿಗೆ ಋತುಸ್ರಾವದ ಪೂರ್ವದಲ್ಲಿ ಕೆಲವು ಸಮಸ್ಯೆಗಳು ಆಗುವುದು ಕಂಡು ಬರುತ್ತದೆ .  ಈ ಸಮಸ್ಯೆಗಳು ಋತುಸ್ರಾವ ಪ್ರಾರಂಭವಾಗುವ ಮುಂಚೆ ದೇಹದಲ್ಲಿ ಆಗುವ ರಸದೂತಗಳ ಬದಲಾವಣೆಇಂ ದಾಗುತ್ತದೆ ಎಂದು ತಿಳಿದು ಬಂದಿದೆ. ಇದನ್ನು ನಾವು ಮನೋವೈದ್ಯರು ಎರಡು ಬಗೆಯಲ್ಲಿ  ವಿಂಗಡಿಸುತ್ತೇವೆ.

ಅಲ್ಪ ಮಟ್ಟದ ಸಮಸ್ಯೆಗಳನ್ನು pre menstrual syndrome ಎಂದು ಕರೆಯುತ್ತೇವೆ.

ತೀವ್ರ ಮಟ್ಟದ ಸಮಸ್ಯೆಯನ್ನು pre menstrual dysphoric disorder  ಎಂದು ಕರೆಯುತ್ತೇವೆ.

ಋತುಸ್ರಾವದ ಒಂದು ವಾರದ ಮುಂಚೆ ಹಲವು ಮಹಿಳೆಯರಲ್ಲಿ ದೇಹದಲ್ಲಿ ಹಾಗೂ ಅವರ “ಮೂಡ್” ಅಂದರೆ ಭಾವನೆಗಳಲ್ಲಿ ಬಹಳಷ್ಟು ಬದಲಾವಣೆಗಳು ಕಂಡು ಬರುತ್ತವೆ.

Pre Menstrual Syndrome. ಈ ಅಲ್ಪ ಮಟ್ಟದ ತೊಂದರೆಗಳಲ್ಲಿ ಆ ಮಹಿಳೆಗೆ ಸ್ತನಗಳಲ್ಲಿ ನೋವು, ಹೊಟ್ಟೆ ಉಬ್ಬರಿಸಿದ ಹಾಗೆ ಆಗುವುದು. ಸ್ವಲ್ಪ ಮಟ್ಟಿಗೆ ಸಿಡುಕು, ನಿದ್ರಾ ಹೀನತೆ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಆ ಮಹಿಳೆಗೆ ಆಯಾಸವಾಗುವುದು, ಸ್ವಲ್ಪ ಇರುಸು ಮುರುವಾಗಿ ಅಳು ಬಂದ ಹಾಗೆ ಆಗುವುದು ಉಂಟಾಗಬಹುದು. ಆದರೆ ಇದು ತನ್ನಷ್ಟಕ್ಕೇ ಋತುಸ್ರಾವ ಪ್ರಾರಂಭವಾಗುವಾಗ ನಿಂತು ಹೋಗುತ್ತದೆ. ಇದರಿಂದ ಬಳಲುತ್ತಿರುವ ಆ  ಮಹಿಳೆಗೆ ಸಮಸ್ಯೆಯಾಗುತ್ತದೆ. ಬೇರೆಯವರು ಇದನ್ನು ಗಮನಿಸಬಹುದು.

PreMenstrual Dysphoric Disorder. ಇದು ಒಂದು ಮನೋದೈಹಿಕ ಸಮಸ್ಯೆ ಎಂದು ಹಲವು ತಜ್ಞರ ಅಭಿಮತ. ಈ ಸಂದರ್ಭದಲ್ಲಿ PMS ನ ಹಲವು ಚಿಹ್ನೆಗಳು ಇದ್ದರೂ ಇದರೊಂದಿಗೆ ವಿಪರೀತವಾದ ಸಿಟ್ಟು, ಸಿಡಿಮಿಡಿ. ಈ ಸಿಟ್ಟಿನಿಂದಾಗಿ ಮನೆಯವರೊಂದಿಗೆ ಜಗಳವಾಡುವುದು, ಕೆಲಸದಲ್ಲಿ ಕಿರಿಕಿರಿಯಾಗುವುದು, ಆ ಒಂದು ವಾರ ಪ್ರೀತಿ ಪಾತ್ರರೊಂದಿಗೆ ಹಲವು ಸಾರಿ ಮನಸ್ತಾಪಗಳಾಗುವುದು ಕಂಡುಬರುತ್ತದೆ.

PMDD ಬಗ್ಗೆ ಜನಸಾಮಾನ್ಯರಲ್ಲಿ ಇರುವ ಅಪನಂಬಿಕೆಗಳು

೧) ಇದು  ದುರ್ಬಲ ವ್ಯಕ್ತಿತ್ವ ಬರುವ ಮಹಿಳೆಯರಲ್ಲಿ ಉಂಟಾಗುತ್ತದೆ.

೨) ಸಿಡುಕು, ಸಿಟ್ಟು ಇದನ್ನೆಲ್ಲ ಮಹಿಳೆ ತಾನೇ ನಿಯಂತ್ರಣದಲ್ಲಿ ಇಟ್ಟು ಕೊಂಡಿರಲು ಕಲಿಯಬೇಕು, ಅವಳು ಬೇಕಂತಲೇ ಮಾಡುತ್ತಾಳೆ.

೩) ಇದು ಒಂದು ಬಗೆಯ ಹುಚ್ಚು.

ಮೇಲೆ ತಿಳಿಸಿದ ಮೂರು ಅನಿಸಿಕೆಗಳು ಅವೈಜ್ಞಾನಿಕ. ಇದು ಯಾವುದೇ ಮಹಿಳೆಯಲ್ಲಿ ಆಗಬಹುದು. ದುರ್ಬಲ ವ್ಯಕ್ತಿತ್ವ ಅಥವಾ ಬಲಿಷ್ಠ ವ್ಯಕ್ತಿತ್ವ ಈ ರೀತಿ ಯಾವುದೇ ವಿಂಗಡಣೆಗಳಲ್ಲಿ ಮಾತ್ರ ಅಲ್ಲ. ಇದು ಮಹಿಳೆಯ ತಲೆಯಲ್ಲಿ ಇರುವುದಲ್ಲ. ಮಹಿಳೆಯ ರಸದೂತಗಳಲ್ಲಿ ಏರಿಳಿತದಿಂದ ಉಂಟಾಗುವ ಒಂದು ವೈಜ್ಞಾನಿಕ ಸಮಸ್ಯೆ. ಇದು ಹುಚ್ಚು ಖಂಡಿತಾ ಅಲ್ಲ. ಇದು ಒಂದು ಮನೋದೈಹಿಕ ಕಾಯಿಲೆ ಎಂಬುದು ತಜ್ಞರ ಅಂಬೋಣ.

PMDD ಇದರ ಚಿಹ್ನೆಗಳನ್ನು ಗಮನಿಸಿ .

ಕೆಳಗೆ ತಿಳಿಸುವ ಹನ್ನೆರಡು ಚಿಹ್ನೆಗಳಲ್ಲಿ ಯಾದಾದರೂ ಐದು  ಋತುಸ್ರಾವದ ಒಂದು ವಾರದ ಮುಂಚಿನ ದಿನಗಳಲ್ಲಿ ಆ ಮಹಿಳೆಗೆ ಉಂಟಾಗುತ್ತದೆ  .

೧) ತೀವ್ರವಾದ ದುಃಖದ ಭಾವನೆ.

೨) ನಾನು ನಿರುಪಯೋಗಿ ಎಂಬ ಭಾವನೆ.

೩) ತೀವ್ರವಾದ ಆತಂಕ, ಏನೋ ಆಗಬಾರದ್ದು ಆಗುತ್ತದೆ ಎಂಬ ಅನಿಸಿಕೆ.

೪) ಪದೇ ಪದೇ ಇತರರ ಮೇಲೆ ಸಿಟ್ಟು, ಅತಿಕ್ರಮಣಕಾರಿ ಭಾವನೆಗಳು, ಎಲ್ಲರೊಂದಿಗೆ ಜಗಳ.

೫) ಯಾವಾಗಲೂ ಇಷ್ಟಪಡುವಂತಹ ಚಟುವಟಿಕೆಗಳು, ತಮ್ಮ ಕೆಲಸ ತಮ್ಮ ಹವ್ಯಾಸ ಇದರ ಬಗ್ಗೆ ನಿರಾಸಕ್ತಿ.

೬) ಕೆಲಸದ ಮೇಲೆ ಏಕಾಗ್ರತೆ ಕಷ್ಟವಾಗುವುದು.

೭) ತ್ರಾಣವೇ ಇಲ್ಲ, ಶಕ್ತಿಯೇ ಇಲ್ಲ ಎನಿಸಲು ತೋರಿ ಬಹಳ ಬೇಗ ಸುಸ್ತಾಗುವುದು.

೮) ಹಸಿವೆಯಲ್ಲಿ ತೀವ್ರ ಬದಲಾವಣೆ, ಅತಿಯಾಗಿ ತಿನ್ನುವುದು, ಕೆಲವು ಬಗೆಯ ತಿಂಡಿ ತಿನಿಸುಗಳಿಗಾಗಿ ಹಾತೊರಿಕೆ.

೯) ಅತಿಯಾದ ನಿದ್ರೆ, ಇಲ್ಲವೇ ನಿದ್ರೆಯೇ ಬಾರದೆ ಚಡಪಡಿಸುವಿಕೆ.

೧೦) ತಾನು ನಿಯಂತ್ರಣವನ್ನು ಕಳೆದುಕೊಳ್ಳುತ್ತಿದ್ದೇನೆ, ತನ್ನಿಂದ ಸಿಟ್ಟು ತಡೆಯಲು ಆಗುತ್ತಿಲ್ಲ ಎಂಬ ಅನಿಸಿಕೆ.

೧೧) ಭಾವನೆಗಳಲ್ಲಿ ಬಹುಬೇಗನೆ ಬದಲಾವಣೆಗಳು, ಮಾತನಾಡುತ್ತಾ ಅಳು ಬರಲು ಶುರುವಾಗುವುದು, ಸಣ್ಣ ಸಣ್ಣ ವಿಷಯಗಳನ್ನು ಮನಸ್ಸಿಗೆ ಹಚ್ಚಿಕೊಳ್ಳುವುದು.

೧೨) ದೈಹಿಕ ಬದಲಾವಣೆಗಳು: ಸ್ತನಗಳಲ್ಲಿ ನೋವು, ತಲೆ ನೋವು, ಹೊಟ್ಟೆ ಉಬ್ಬರಿಸಿದ ಹಾಗೆ ಆಗುವುದು, ಗಂಟುನೋವು, ಸ್ನಾಯುಗಳ ಸೆಳೆತ, ತೂಕ ಹೆಚ್ಚಾಗುವುದು.

PMDD ಇದರಲ್ಲಿ ಅನುವಂಶಿಕತೆಯನ್ನು ಗಮನಿಸಲಾಗಿದೆ. ಯಾವುದಾದರೂ ಮಹಿಳೆಗೆ PMDD ಇದ್ದರೆ ಅವಳ ತಾಯಿಯಲ್ಲಿಯೂ ಇದು ಇರುವ ಸಂಭವ ಜಾಸ್ತಿ.

ರಸದೂತಗಳ ಸಮಸ್ಯೆ:

ಋತುಸ್ರಾವದ ಮುಂಚೆ ಈಸ್ಟ್ರೋಜನ್ ಹಾಗೂ ಪ್ರೊಜೆಸ್ಟರಾನ್ ಗಳಲ್ಲಿ ಆಗುವ ಏರಿಳಿತ, ಅಂಡವು ಅಂಡಾಶಯದಿಂದ ಬಿಡುಗಡೆಯಾದ ನಂತರ ಇತರರ ರಸದೂತಗಳಾದ ಫಾಲಿಕ್ಯುಲಾರ್ ಸ್ಟಿಮ್ಯುಲೇಟಿಂಗ್ ಹಾರ್ಮೋನ್, ಲೂಟಿ ನಸಿಂಗ್ ಹಾರ್ಮೋನ್ಗಳ ಏರಿಳಿತ… ಹೀಗೆ ಹಲವಾರು ಕಾರಣಗಳನ್ನು ವೈದ್ಯರುಗಳು ತಿಳಿಸುತ್ತಾರೆ. ಈಸ್ಟ್ರೋಜನ್ ಹಾರ್ಮೋನ್ ಪ್ರಭಾವದಿಂದ ದೇಹದಲ್ಲಿ ಹೆಚ್ಚು ನೀರು ಸೇರಿಕೊಳ್ಳುವುದರಿಂದ ದೈಹಿಕ ನೋವು ಉಂಟಾಗುತ್ತದೆ.

PMDD ಚಿಕಿತ್ಸೆ

ಮೊದಲೇ ಚರ್ಚಿಸಿದಂತೆ ಇದು ಒಂದು ಮನೋದೈಹಿಕ ಕಾಯಿಲೆ. ತೀವ್ರತೆಯ ಅನುಸಾರವಾಗಿ ಚಿಕಿತ್ಸೆಯನ್ನು ವೈದ್ಯರು ನಿರ್ಧರಿಸುತ್ತಾರೆ. ಈ ಸಮಸ್ಯೆ ಇರುವವರು ತಮ್ಮ ಪ್ರಸೂತಿ ತಜ್ಞರನ್ನು ಮೊದಲು ಸಂಪರ್ಕಿಸಬೇಕು. ಅಗತ್ಯ ಬಿದ್ದರೆ ಅವರು ಮನೋವೈದ್ಯರ ಹತ್ತಿರ ಕಳಿಸುತ್ತಾರೆ. ಹೆಚ್ಚಿನ ಮನೋದೈಹಿಕ ಕಾಯಿಲೆಗಳ ಚಿಕಿತ್ಸೆಗೆ DEED ಎಂಬ ಪದವನ್ನು ಗಮನಿಸಿ..

DIET. ನಾವು ತಿನ್ನುವ ಆಹಾರದ ಬಗ್ಗೆ ಗಮನ ಇರಲಿ. ಕಾಫಿ, ಟೀ ಮುಂತಾದ ದ್ರವ್ಯ ಪದಾರ್ಥಗಳನ್ನು ಋತುಸ್ರಾವದ ಒಂದು ವಾರದ ಮುಂಚೆ ತ್ಯಜಿಸಬೇಕು. ಉಪ್ಪನ್ನು ಬಹಳ ಕಡಿಮೆ ತಿನ್ನಬೇಕು. ಸಕ್ಕರೆ ಅಂಶ ಈ ದಿನಗಳ ಮಟ್ಟಿಗೆ ಕಡಿಮೆ ತಿನ್ನಬೇಕು. ಮೂತ್ರವರ್ಧಕ ಆಹಾರಗಳು, ಬಾಳೆದಿಂಡಿನ ರಸ, ಬೂದುಗುಂಬಳ ರಸ, ಬಾರ್ಲಿ ನೀರು, ಸೌತೆಕಾಯಿ ರಸ, ಕಿತ್ತಳೆ, ಎಳನೀರು ಇಂಥವುಗಳನ್ನು ಸೇವಿಸಬೇಕು . ಬೇಕರಿ ಪದಾರ್ಥ, ಉಪ್ಪು ಮಿಶ್ರಿತ ಸಂಸ್ಕರಿತ ಆಹಾರವನ್ನು ತ್ಯಜಿಸಬೇಕು.

E ..exercise.. ಈ ದಿನಗಳಲ್ಲಿ ಬೆವರು ಬರುವಂತೆ ಪ್ರತಿದಿನ ಒಂದು ಗಂಟೆಯಾದರೂ ಲಘು ವ್ಯಾಯಾಮ ಮಾಡಬೇಕು. ಆತಂಕ ಹೆಚ್ಚು ಇರುವಾಗ ಕೆಲವು ಮನಸ್ಸಿಗೆ ಆರಾಮ ನೀಡುವ ಎಕ್ಸರ್ಸೈಸ್ ಗಳನ್ನು ಮಾಡಬೇಕಾಗಬಹುದು.

E education: ಈ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆ ಮತ್ತು ಅವರ ಮನೆಯವರಿಗೆ ಈ ಕಾಯಿಲೆಯ ಬಗ್ಗೆ ಸರಿಯಾದ ಮಾಹಿತಿ ಅತಿ ಅಗತ್ಯ. ಮನಸ್ಸಿಗೆ ಸಿಡುಕುತನ, ನಿದ್ರಾಹೀನತೆ ಪ್ರಾರಂಭವಾದ ಕೂಡಲೇ ಯಾವ ಯಾವ ದಿನಗಳು ಬರುತ್ತದೆ ಎಂಬುದನ್ನು ಒಂದು ಸಣ್ಣ ಡೈರಿಯಲ್ಲಿ ಬರೆದಿಟ್ಟು ಅದನ್ನು ನಿಮ್ಮ ವೈದ್ಯರಿಗೆ ತಿಳಿಸುವುದು ಸೂಕ್ತ. ಈ ಬಗ್ಗೆ ಸರಿಯಾದ ಅರಿವು ಬಳಲುತ್ತಿರುವ ಮಹಿಳೆಗೆ ಇರಬೇಕು. ಈ ಸಂದರ್ಭದಲ್ಲಿ ಏನೇನು ಮಾಡಬೇಕು ಮತ್ತು ಏನೇನು ಮಾಡಬಾರದು ಎಂಬುದರ ಬಗ್ಗೆ ಕೂಡ ಸರಿಯಾದ ಮಾಹಿತಿ ಇರಬೇಕು. ಈ ದಿನಗಳಲ್ಲಿ ಮಧ್ಯಾಹ್ನ ಒಂದು ಗಂಟೆ ಮಲಗುವುದು ಬಹಳ ಒಳ್ಳೆಯದು. ಈ ದಿನಗಳಲ್ಲಿ ಮನೆಯವರು ಮನೆಯಲ್ಲಿ ಬಹಳ ಜೋರಾಗಿ ಟಿವಿ ಹಾಕುವುದು ಮತ್ತು ಜೋರಾಗಿ ಕಿರುಚುವುದು ಮುಂತಾದವು ಮಾಡಿದರೆ ಆ ಮಹಿಳೆಗೆ ಸಮಸ್ಯೆಗಳಾಗಬಹುದು. ಇದರಿಂದಾಗಿ ಮನೆಯವರಿಗೂ ಸಮಸ್ಯೆಗಳು ಉಂಟಾಗಬಹುದು.

D..Drugs…PMDD ಕಾಯಿಲೆ ಇರುವ ಮಹಿಳೆಯರು ತೀವ್ರವಾಗಿ ಬೇರೆಯವರಿಗೆ ಬೈಯುವುದು, ಜಗಳವಾಡುವುದು, ಹೊಡೆಯುವುದು ಅಥವಾ ತಾನೇ ಆತ್ಮಹತ್ಯೆಯ ಪ್ರಯತ್ನ ಮಾಡುವುದು, ಕೆಲಸಕ್ಕೆ ಹೋಗದಿರುವುದು, ಇಂತಹ ಸಂದರ್ಭಗಳಲ್ಲಿ ಮನೋವೈದ್ಯರು ಖಿನ್ನತೆ ನಿವಾರಕ ಮಾತ್ರೆಗಳನ್ನು ಉಪಯೋಗಿಸುತ್ತಾರೆ. ತೀವ್ರವಾದ ಸ್ನಾಯು ಸೆಳೆತ, ಸ್ತನಗಳಲ್ಲಿ ನೋವು ಮುಂತಾದವು ಇರುವಾಗ ಸ್ನಾಯುಗಳಿಗೆ ಆರಾಮ ಒದಗಿಸುವ ಮಾತ್ರೆಗಳು ನೋವು ನಿವಾರಕ ಮಾತ್ರೆಗಳನ್ನು ಉಪಯೋಗಿಸುತ್ತಾರೆ. ಈ ಬಗ್ಗೆ ತಮ್ಮ ಕುಟುಂಬದ ವೈದ್ಯರು ಅಥವಾ ಪ್ರಸೂತಿ ತಜ್ಞರು ಇವರನ್ನು ಸಂಪರ್ಕಿಸಿ, ಅವರ ಮುಖಾಂತರ ಮನೋವೈದ್ಯರನ್ನು ಅಗತ್ಯ ಬಿದ್ದಲ್ಲಿ ಸಂಪರ್ಕಿಸಬೇಕು.

Leave a Reply

Your email address will not be published. Required fields are marked *