Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಕುಕ್ಕೆ ಕ್ಷೇತ್ರದ ಚಾರಿತ್ರಿಕ ಹಿನ್ನೆಲೆ- ಭಾಗ 16

* ಡಾ.ಮ.ಸು.ಅಚ್ಚುತ ಶರ್ಮಾ

# ಶ್ರೀ ಉಮಾಮಹೇಶ್ವರ ದೇವರು: ಈ ದೇವರ ಗುಡಿಯು ದೇವಸ್ಥಾನದ ಒಳ ಅಂಗಣದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ಗುಡಿಯ ಎಡ ಪಾರ್ಶ್ವದಲ್ಲಿ ಈಶಾನ್ಯ ದಿಕ್ಕಿನಲ್ಲಿದೆ. ಇಲದಲಿ ಶಿವ ಪಂಚಾಯತನ ಕ್ರಮದಲ್ಲಿ ಆದಿತ್ಯ, ಅಂಬಿಕಾ, ವಿಷ್ಣು, ಗಣನಾಥ, ಮಹೇಶ್ವರರೆಂಬ ಐದು ದೇವತೆಗಳ ವಿಗ್ರಹಗಳಿವೆ. ಮಧ್ಯದಲ್ಲಿ ಉಮಾಮಹೇಶ್ವರ ವಿಗ್ರಹವಿದೆ. ಇವುಗಳೊಂದಿಗೆ ಒಂದು ಶಿವಲಿಂಗವೂ ಇದೆ.

ರುದ್ರಾಭಿಷೇಕ ಹರಿಕೆಯು ಬಂದರೆ ಈ ಲಿಂಗವನ್ನು ಅದೇ ಗುಡಿಯ ಒಳಗಿನ ಆಗ್ನೇಯ ಮೂಲೆಯ ಎಡೆನಾಳಿಗೆ ತಂದು ಅಲ್ಲಿ ಇಟ್ಟು ಅಭಿಷೇಕ ಮಾಡಿ ಅದನ್ನು ಮೊದಲಿನ ಸ್ಥಾನದಲ್ಲಿ ಇರಿಸುತ್ತಾರೆ. ಇದು ಕೃತ್ರಿಕ ಪದ್ಧತಿ. ದೇವಾಲಯಗಳಲ್ಲಿ ಚಲನಗಳಲ್ಲಿರುವ ಲಿಂಗಪೂಜಾ ಕ್ರಮವಿರುವುದಿಲ್ಲ. ಈ ದೇವಳಕ್ಕೆ ಮಾಧ್ವರ ಪ್ರವೇಶ ಆದ ನಂತರವೇ ಇದು ಬಂದುದಾಗಿದೆ ಎಂದು ತಿಳಿಯಬೇಕು.

ಈ ದೇವರಿಗೂ ಬಿಲ್ವ ಮತ್ತು ವಿಭೂತಿಗಳನ್ನು ಉಪಯೋಗಿಸುವುದಿಲ್ಲ. ಶ್ರೀ ನಟ್ಟಬೈಲು ವೆಂಕಪ್ಪ ರೈಗಳೆಂಬವರು ಈ ದೇವಳದ ಟ್ರಸ್ಟಿಗಳಾದ ನಂತರ ಅವರ ವತ್ತಾಯದಿಂದ ಈಗ ಈ ಗುಡಿಯಲ್ಲಿ ವಿಭೂತಿ ಪ್ರಸಾದ ಕೊಡಬೇಕೆಂದು ಕೇಳಿದವರಿಗೆ ಈಗ ವಿಭೂತಿ ಕೊಡುವ ಕ್ರಮ ಇಟ್ಟುಕೊಂಡಿದ್ದಾರೆ. ಈ ಗುಡಿಯಲ್ಲೂ ಮಾಧ್ವ ಶಿವಳ್ಳಿ ಬ್ರಾಹ್ಮಣರೇ ಅರ್ಚಕರು.

ಆದಿ ಶಂಕರಾಚಾರ್ಯರು ಈ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಚಿತ್ತೈಸಿದ ಸಮಯದಲ್ಲಿ ಆಗ ಕ್ಷೇತ್ರದಲ್ಲಿ ಇರುತ್ತಿದ್ದ, ಹಿರಣ್ಯ ಗರ್ಭವಾದಿಗಳೂ, ಮತ್ತು ಗಾಣಪತ್ಯರೆಂಬ ಬ್ರಾಹ್ಮಣ ವರ್ಗದವರನ್ನು ವಾದದಲ್ಲಿ ಜೈಸಿ ದೇವತಾರಾಧಾನೆಯಲ್ಲಿ ಉಚ್ಛ ನೀಚ ಭಾವನೆಯನ್ನು ಇಟ್ಟುಕೊಳ್ಳಬಾರದೆಂತಲೂ ಎಲ್ಲಾ ದೇವರುಗಳು ಒಂದೇ ಪರಬ್ರಹ್ಮದ ಪ್ರಭೇದಗಳೆಂತಲೂ, ತಿಳಿಯಲೋಸುಗ ಭೇದ ಭಾವನೆಗಳಿಂದ ಕೂಡಿದ ಆ ಬ್ರಾಹ್ಮಣ ವರ್ಗದವರನ್ನು ಸರಿಪಡಿಸಲು ಪಂಚ ಪೂಜಾ ವಿಧಾನದಿಂದ “ಏಕಮೇವ ಅದ್ವಿತೀಯ”ನಾದ ಪರಮಾತ್ಮನನ್ನು ಏಕರೂಪದಿಂದ ಅರ್ಚಿಸುವ ಕ್ರಮವನ್ನು ಏರ್ಪಡಿಸಿ ಬ್ರಾಹ್ಮಣರೊಳಗೆ ಐಕಮತ್ಯವನ್ನು ಉಂಟುಮಾಡಿ ಈ ಉಮಾಮಹೇಶ್ವರ ಗುಡಿಯಲ್ಲಿ ಆದಿತ್ಯ, ಅಂಬಿಕಾ, ವಿಷ್ಣು, ಗಣನಾಥ, ಮತ್ತು ಮಹೇಶ್ವರರೆಂಬ ಐದು ವಿಗ್ರಹಗಳ ಪೂಜೆಯನ್ನು ಏರ್ಪಡಿಸಿ ಅದ್ವೈತವನ್ನು ಬೋಧಿಸಿ ಹೋಗಿರುತ್ತಾರೆಂದು ತಿಳಿದುಬರುತ್ತದೆ. ಇವರು ಬಂದು ಹೋದ ಗುರುತಿಗಾಗಿ ಇಲ್ಲಿಯ ಸ್ಥಳೀಯ ಸ್ಮಾರ್ತ ಬ್ರಾಹ್ಮಣರು ಅವರ ಶಿಷ್ಯತ್ವವನ್ನು ಒಪ್ಪಿಕೊಂಡು ಈ ಗುಡಿಯ ಎದುರಿಗೆ ಹೊರ ಅಂಗಣದ ಮೂಡು ಈಶಾನ್ಯ ಮೂಲೆಯಲ್ಲಿ ಶ್ರೀ ಶೃಂಗೇರಿಗೆ ಸಂಬಂಧಪಟ್ಟ ಒಂದು ಶಾಖಾ ಮಠವನ್ನು ಕೂಡ ಕಟ್ಟಿಸಿದ್ದುದನ್ನು ನಾವು ಈಗಲೂ ಕಾಣಬಹುದು. ಶ್ರೀ ಆದಿ ಶಂಕರರು ಈ ಕ್ಷೇತ್ರಕ್ಕೆ ಚಿತ್ತೈಸಿದ ವಿವರಣೆಯ ಸ್ವಲ್ಪ ಅಂಶವನ್ನು ಮುಂದಕ್ಕೆ ಶ್ರೀ ಶೃಂಗೇರಿ ಶಾಖಾ ಮಠದ ವಿವರಣೆಯಲ್ಲಿ ಓದಬಹುದು.

ಮುಂದುವರಿಯುವುದು

Leave a Reply

Your email address will not be published. Required fields are marked *