Realtime blog statisticsweb statistics
udupibits.in
Breaking News
ಉಡುಪಿ: ಕನಿಷ್ಠ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ನಗರಸಭೆ, ಜಿಲ್ಲಾಡಳಿತ, ರಾಜ್ಯ-ಕೇಂದ್ರ ಸರಕಾರ ಸಂಪೂರ್ಣ ವಿಫಲ !

ಕುಕ್ಕೆ ಕ್ಷೇತ್ರದ ಚಾರಿತ್ರಿಕ ಹಿನ್ನೆಲೆ- ಭಾಗ 17

* ಡಾ. ಮ.ಸು.ಅಚ್ಚುತ ಶರ್ಮಾ

ಈಗಿನ ಸಂಪುಟ ನರಸಿಂಹ ದೇವರ ಗುಡಿ

# ಈ ಗುಡಿಯು ಶ್ರೀ ಸುಬ್ರಹ್ಮಣ್ಯ ದೇವರ ಗುಡಿಯ ಬಲ ಭಾಗದಲ್ಲಿ ದೇವಳದ ಒಳ ಅಂಗಣದ ಆಗ್ನೇಯ ಮೂಲೆಯಲ್ಲಿದೆ. ಈ ಗುಡಿಯು ಕೆಲವು ವರ್ಷಗಳ ಹಿಂದೆ ಶ್ರೀ ಸುಬ್ರಹ್ಮಣ್ಯ ದೇವರ ಪರಿವಾರ ದೇವರಾದ ವಿನಾಯಕ ದೇವರ ಗುಡಿಯಾಗಿತ್ತು. ಈ ವಿನಾಯಕ ದೇವರ ಗುಡಿಯನ್ನು ಈ ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ಮಠವೆಂದು ಕರೆಯಲ್ಪಡುವ ಮಠದ ವೈಷ್ಣವ ಮಾಧ್ವ ಸ್ವಾಮಿಗಳೊಬ್ಬರು 1845ರಿಂದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತೆಯು ತಮಗೆ ಸಿಕ್ಕಿದ ನಂತರ ಗುಡಿಯೊಳಗಿದ್ದ ವಿನಾಯಕ ದೇವರ ವಿಗ್ರಹವನ್ನು ಸ್ಥಾನ ತಪ್ಪಿಸಿ ತಮ್ಮ ಸಂಪುಟ ನರಸಿಂಹ ದೇವರ ಗುಡಿಯನ್ನಾಗಿ ಮಾರ್ಪಡಿಸಿಕೊಂಡಿರುತ್ತಾರೆ ಎಂದು ತಿಳಿದುಬರುತ್ತದೆ.

ಇದರಿಂದಾಗಿ ಈ ಗುಡಿಯ ಹೆಸರು ಈ ಮೊದಲು ವಿನಾಯಕ ಗುಡಿಯೆಂದು ಇದ್ದರೂ ಈಗ ಅದು ಸಂಪುಟ ನರಸಿಂಹ ಗುಡಿಯಾಗಿ ಪರಿಣಮಿಸಿದೆ. ಈ ಗುಡಿಯ ತೆಂಕು ಪೌಳಿಯಲ್ಲಿದ್ದ ಶ್ರೀ ಸುಬ್ರಹ್ಮಣ್ಯೇಶ್ವರ ಅರಿಕ್ಕುಟ್ಟಲನ್ನು (ದೇವರಿಗೆ ನೈವೇದ್ಯ ಬೇಯಿಸುವ ಸ್ಥಳ) ಸ್ವಾಮಿಗಳು ತಮ್ಮ ಸಂಪುಟ ನರಸಿಂಹ ದೇವರ ಅರಿಕುಟ್ಟಲನ್ನಾಗಿ ಮಾಡಿಕೊಂಡು ಅದರಲ್ಲಿ ಸವಲ್ಪ ಅಂಶವನ್ನು ತಮ್ಮ ಪ್ರಾಣದೇವರ (ಹನುಮಂತ ದೇವರ) ಗುಡಿಯನ್ನಾಗಿ ಮಾರ್ಪಡಿಸಿ ದೇವಳದ ಆಗ್ನೇಯ ಮೂಲೆಯ ವಿನಾಯಕ ಗುಡಿಯನ್ನು ಮಾತ್ರವಲ್ಲದೆ ಪೌಳಿಯ ಆಗ್ನೇಯ ಮೂಲೆಯ ವಿನಾಯಕ ಗುಡಿಯನ್ನು ಮಾತ್ರವಲ್ಲದೆ ಪೌಳಿಯ ಆಗ್ನೇಯ ಮೂಲೆಯನ್ನೇ ಆಕ್ರಮಿಸಿ ತಮ್ಮದನ್ನಾಗಿ ಮಾಡಿಕೊಂಡು ಒಂದು ಮೆನೆಯೊಳಗೆ ಎರಡು ಬಿಡಾರಗಳಿದ್ದಂತೆ ದೇವಳಕ್ಕೆ ಹಿಂಸೆ ಕೊಡುವುದು ಪ್ರೇಕ್ಷಕರಿಗೆ ವ್ಯಕ್ತವಾಗುತ್ತದೆ.

ಈ ಗುಡಿಯಲ್ಲಿ ವಿನಾಯಕ ದೇವರ ವಿಗ್ರಹವು ಇರುವಾಗ ಈಶಾನ್ಯ ಮೂಲೆಯ ಉಮಾಮಹೇಶ್ವರ ಗುಡಿಯಲ್ಲಿದ್ದಂತೆ ಮೂಲಸ್ಥಾನ ಮತ್ತು ಅದಕ್ಕೆ ತಾಗಿದ ಹೊರ ಮಂಟಪವೆಂಬ ಎರಡು ಭಾಗಗಳು ಮಾತ್ರ ಇತ್ತು. ಈ ಗುಡಿಯನ್ನು ಮಾಧ್ವ ಸ್ವಾಮಿಗಳು ಆಕ್ರಮಿಸಿದ ನಂತರ ಶ್ರೀ ವಿನಾಯಕ ವಿಗ್ರಹವಿದ್ದ ಭಾಗವನ್ನು ಮಧ್ಯ ಭಾಗವನ್ನಾಗಿ ಮಾರ್ಪಡಿಸಿ ಅದರ ಹಿಂದೆ ತಾಗಿ ಸ್ವಲ್ಪ ಅಂಶದಲ್ಲಿ ಹೊಸತೊಂದು ಕೋಣೆಯನ್ನು ಕಟ್ಟಿಸಿ ಅದರಲ್ಲಿ ಸ್ವಾಮಿಗಳು ತಮ್ಮ ಸಂಪುಟ ನರಸಿಂಹ ದೇವರನ್ನು ಇಟ್ಟು ಈಗ ಪೂಜಿಸುತ್ತಾರೆ. ಮೊದಲು ಈ ಸಂಪುಟ ನರಸಿಂಹ ದೇವರು ಇವರ ಈಗಿನ ವಾಸ್ತವ್ಯ ಮಠದಲ್ಲೇ ಇದ್ದಿರಬೇಕು.

ಮೊದಲಿನ ಸ್ವಾಮಿಗಳು ದೇವಸ್ಥಾನದ ಆಡಳಿತೆ ತಮ್ಮ ಸ್ವಾಧೀನವಿದ್ದಾಗ ತಾವು ಸರ್ವ ತಂತ್ರ ಸ್ವತಂತ್ರರಾಗಿ ನಿರಂಕುಶ ಪ್ರಭುತನದಿಂದ ತಮ್ಮ ಮಠದಲ್ಲಿದ್ದ ತಮ್ಮ ದೇವರನ್ನು ದೇವಸ್ಥಾನದ ಒಳಗಿದ್ದ ವಿನಾಯಕ ದೇವರ ಗುಡಿಯಲ್ಲಿಟ್ಟು ದೇವಸ್ಥಾನಕ್ಕೆ ಬರುತ್ತಿದ್ದ ಭಕ್ತಾಧಿಗಳಿಂದ ತನ್ನ ಮಠಕ್ಕೂ ಶ್ರೀ ಸುಬ್ರಹ್ಮಣ್ಯನಿಗೆ ಸೇವೆ ಸಲ್ಲಿಸಿದಂತೆ ಸೇವೆ ಸಲ್ಲಿಸಬೇಕೆಂದು ಬಲಾತ್ಕರಿಸುತ್ತಿದ್ದರೆಂದು ತಿಳಿದುಬರುತ್ತದೆ.

ಮುಂದುವರಿಯುವುದು

Leave a Reply

Your email address will not be published. Required fields are marked *