Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ವಿಘಟಿತ ಅಸ್ವಸ್ಥತೆಗಳು…dissociative disorder

# ಇದು ಮಾನಸಿಕ ಕಾಯಿಲೆಗಳಲ್ಲಿ ಒಂದು ವಿಚಿತ್ರವಾದ ಸಮಸ್ಯೆ. ಸಮುದಾಯದಲ್ಲಿ ಇದನ್ನು ಬಹಳಷ್ಟು ನೀವೆಲ್ಲ ನೋಡಿರುತ್ತೀರಿ. ಮೂರು  ಬೇರೆ ಬೇರೆ ತರದ ಕೇಸ್ ಗಳನ್ನು ಇಲ್ಲಿ ಪ್ರಸ್ತಾಪ ಮಾಡಿದ್ದೇನೆ.

1. ರಮಾ ಹದಿನೇಳು ವರ್ಷದ ಹುಡುಗಿ. ಶಾಲೆಗೆ ಹೋಗುವಾಗ ದಾರಿಯಲ್ಲಿ ತಲೆ ತಿರುಗಿ ಬಿದ್ದು ಬಿಡುತ್ತಾಳೆ. ಯಾರಾದರೂ ಎಬ್ಬಿಸಲು ಹೋದರೆ ಕೂಡಲೇ ಮೈಮೇಲೆ ದೇವಿ ಬಂದ ಹಾಗೆ ಮಾಡುತ್ತಾಳೆ. ”ನಾನು ಕಟೀಲೇಶ್ವರಿ, ನನ್ನ ಸುದ್ದಿಗೆ ಬಂದರೆ ಜಾಗ್ರತೆ” ಎಂದು ಬೊಬ್ಬೆ ಹಾಕುತ್ತಲೇ ತನ್ನ ಕೈ ಕಾಲುಗಳನ್ನು ಅಲ್ಲಾಡಿಸುತ್ತಾ ಏನೇನೋ ಮಾತನಾಡಲು ಆರಂಭಿಸುತ್ತಾಳೆ. ಇದು ಸುಮಾರು ಒಂದು ಹತ್ತು ಹದಿನೈದು ನಿಮಿಷ ನಡೆಯುತ್ತದೆ. ನಂತರ ತಾನು ಎದ್ದು ಏನೂ ಆಗದೇ ಇರುವಂತೆ ಇರುತ್ತಾಳೆ. ಅವಳನ್ನು ಕೇಳಿದರೆ ಅವಳಿಗೆ ಆ ಘಟನೆಯ ಬಗ್ಗೆ ನೆನಪೇ ಇರುವುದಿಲ್ಲ.

2. ನಲವತ್ತೆಂಟು ವರ್ಷದ ಹನುಮಂತ ಮೇಷ್ಟ್ರು ಅವರಿಗೆ ಇದ್ದಕ್ಕಿದ್ದಂತೆ ಈಗ ಬರೆಯಲು ಆಗುತ್ತಿಲ್ಲ. ಬರೆಯಲು ಹೋದರೆ ಹಿಂದಿನ ಹಾಗೆ ಅವರ ಅಕ್ಷರಗಳು ಇಲ್ಲ. ಪೆನ್ನು ಪೆನ್ಸಿಲ್ ನಲ್ಲಿ ಎಷ್ಟು ಬೇಕು ಬರೆಯುತ್ತಾರೆ. ಆದರೆ ಬೋರ್ಡ್ ಮೇಲೆ ಬರೆಯಲು ಆಗುವುದಿಲ್ಲ. ಬೋರ್ಡ್ ಮೇಲೆ ಬರೆಯಲು ಹೋದ ಕೂಡಲೇ ಕೈಯಲ್ಲಿ ಒಂದು ನಮೂನೆಯ ದೌರ್ಬಲ್ಯವಾಗಿ, ಕೈ ಮಾತ್ರ ಅಲ್ಲಾಡಲು ಪ್ರಾರಂಭವಾಗುತ್ತದೆ. ಆರು ತಿಂಗಳಿನಿಂದ ಅವರು ಏನೂ ಬರೆಯುತ್ತಿಲ್ಲ. ಹಲವಾರು ವೈದ್ಯರುಗಳನ್ನು ಕಂಡಿದ್ದಾರೆ. ದರ್ಶನದಲ್ಲಿ ಪ್ರಶ್ನೆ ಕೇಳಿದ್ದಾರೆ. ಎಲ್ಲಿಯೂ ಯಾವುದೇ ಪರಿಹಾರವಿಲ್ಲ.

3. ಇದು ನನ್ನ ಜೀವನದಲ್ಲಿ ನಾನು ಒಂದೇ ಒಂದು ಸಾರಿ ನೋಡಿರುವ ಒಂದು ಕಾಯಿಲೆ. ಉಮಾ ಅನ್ನುವ ಇಂಜಿನಿಯರಿಂಗ್ ಹುಡುಗಿ ಬಹಳ ಚೆನ್ನಾಗಿ ಓದುತ್ತಾಳೆ. ಇದ್ದಕ್ಕಿದ್ದಂತೆ ಇತ್ತೀಚೆಗೆ ಸ್ವಲ್ಪ ವಿಚಿತ್ರವಾಗಿ ಆಡುತ್ತಿದ್ದಾಳೆ. ಅವಳ ವರ್ತನೆಗಳಲ್ಲಿ ಬಹಳಷ್ಟು ಬದಲಾವಣೆ ಬಂದಿದೆ ಎಂದು ಕಾಲೇಜಿನ ವಾರ್ಡನ್ ಅವಳನ್ನು ಕರೆದುಕೊಂಡು ಬಂದಿದ್ದರು. ಸಿನಿಮಾ ನೋಡುವುದು, ಪುಸ್ತಕಗಳನ್ನು ಓದುವುದು ಅವಳ ಹವ್ಯಾಸಗಳಂತೆ. ಇಷ್ಟು ಹೇಳಿ ವಾರ್ಡನ್ ಕೆಲವು ವಿಚಿತ್ರ ವಿಷಯಗಳನ್ನು ತಿಳಿಸಿದರು.

ಉಮಾ ಬಹಳ ಸಂಪ್ರದಾಯ ಕುಟುಂಬದಿಂದ ಬಂದವಳು. ಬಹಳ ಕಷ್ಟಪಟ್ಟು ತನ್ನ ಇಂಜಿನಿಯರಿಂಗ್ ಶಿಕ್ಷಣ ಮಾಡುತ್ತಿದ್ದಾಳೆ. ಇಂಜಿನಿಯರಿಂಗ್ ಓದುತ್ತ ಇರುವಾಗ, ಸುಮಾರು ಐದು ಲಕ್ಷ ಬ್ಯಾಂಕ್ ಲೋನ್ ಆಗಿದೆ. ಈಗ ಕೊನೆಯ ವರ್ಷದಲ್ಲಿ ಇದ್ದಾಳೆ. ಯಾರೊಟ್ಟಿಗೂ ಹೆಚ್ಚು ಬೆರೆಯದ ಹುಡುಗಿ. ಇತ್ತೀಚೆಗೆ ರಾತ್ರಿ ಎರಡು ಸಾರಿ ಲೇಟ್ ಆಗಿ ಬಂದಿದ್ದಾಳೆ. ಈಕೆ ಅಡುಗೆ ಭಟ್ಟರ ಮಗಳು.

ವಿಚಿತ್ರವೆಂದರೆ ಆ ಘಟನೆಯ ಬಗ್ಗೆ ಅವಳಿಗೆ ಬೆಳಿಗ್ಗೆ ಎದ್ದ ಮೇಲೆ ಸ್ವಲ್ಪವೂ ನೆನಪೇ ಇರುವುದಿಲ್ಲ. ವಾರ್ಡನ್ ಕೇಳಿದರೆ, ”ನಾನು ರೂಮ್ ನಲ್ಲೇ ಇದ್ದೆ” ಎಂದು ಹೇಳುತ್ತಾಳೆ. ”ನನ್ನ ಮೇಲೆ ಸುಳ್ಳು ಸುಳ್ಳು ಅಪವಾದಗಳನ್ನು ಹೊರಿಸಿದ್ದಾರೆ” ಎಂದು ಹೇಳುತ್ತಾಳೆ. ರಾತ್ರಿ ಹಾಸ್ಟೆಲ್ ಗೆ ಬಂದಾಗ, ”ನನ್ನ ಹೆಸರು ಸಾಗರಿಕ, ನಾನು ಉಮಾ ಅಲ್ಲವೇ ಅಲ್ಲ” ಎಂದು ಹೇಳಿ ”ಸಾಗರಿಕ” ಎಂದೇ ಸೈನ್ ಮಾಡುತ್ತಾಳೆ. ಬೆಳಿಗ್ಗೆ ಚೆನ್ನಾಗಿ ತಲೆ ಬಾಚಿಕೊಂಡು ಹೋಗುವ ಉಮಾ, ರಾತ್ರಿ ಹೊತ್ತು ಮಾತ್ರ ತಲೆ ಕೂದಲನ್ನು ಬಿಟ್ಟಿರುತ್ತಾಳೆ. ಜೀನ್ಸ್ ಪ್ಯಾಂಟ್ ಹಾಕಿರುತ್ತಾಳೆ, ಟೀ ಶರ್ಟ್ ಹಾಕಿಕೊಂಡು ಹೋಗುತ್ತಾಳೆ. ಬಳಿಕ, ಈ ಘಟನೆಯ ಬಗ್ಗೆ ಸ್ವಲ್ಪವೂ ತನಗೆ ನೆನಪು ಇಲ್ಲ ಎಂದು ವಾದಿಸುತ್ತಾಳೆ. ವಾರ್ಡನ್ ಅವಳಿಗೆ ಸಿಸಿಟಿವಿ ಕೂಡ ತೋರಿಸುತ್ತಾರೆ. ಅವಳು ಅದನ್ನು ನೋಡಿ ದಂಗಾಗಿ ಬಿಡುತ್ತಾಳೆ. ಅವಳೇ ವಾರ್ಡನ್ ನ್ನು ಒತ್ತಾಯಿಸಿ ಮನೋರೋಗ ತಜ್ಞರ ಹತ್ತಿರ ಬರುತ್ತಾಳೆ…

ಈ ಮೂರು ಕತೆಗಳು ವಿಚಿತ್ರವಾಗಿದೆ, ಅಲ್ಲವೇ ? ಇದು ಕಥೆಗಳೆಲ್ಲ, ನಿಜವಾಗಿ ನಾನು ನೋಡಿದ ಮೂರು ಕೇಸ್ ಗಳು. ಹೆಸರು, ವಯಸ್ಸು  ಎಲ್ಲ ಬದಲಾಯಿಸಿದ್ದೇನೆ. ಕಾರಣ ಗೌಪ್ಯತೆ ಕಾಪಾಡಲು.

ಇದನ್ನು ಇಂಗ್ಲಿಷ್ ಭಾಷೆಯಲ್ಲಿ dissociative disorder ಎಂದು ಕರೆಯುತ್ತಾರೆ.

ಕನ್ನಡದಲ್ಲಿ ಸರಿಯಾದ ಶಬ್ದ ಎಲ್ಲಿಯೂ ಸಿಗಲಿಲ್ಲ. ಉನ್ಮಾದ ಸ್ಥಿತಿ ಎಂದು ಕೆಲವೆಡೆ ಕರೆದರೆ, ವಿಘಟಿತ ಅಸ್ವಸ್ಥತೆಗಳು ಅಂತ ಇನ್ನೊಂದೆಡೆ ಕರೆಯುತ್ತಾರೆ. ಈ ಕಾಯಿಲೆಗಳು ಬಹಳ ವಿಚಿತ್ರವಾದ ಕಾಯಿಲೆಗಳು.

ಈ ಕಾಯಿಲೆಗಳ ವಿವರಣೆಗಳನ್ನು ಗಮನಿಸಿ

ತಾನು ಕಟೀಲೇಶ್ವರಿ ಎಂದು ಹೇಳುವ ರಮಾ, dissociative posession disorder  ಎಂಬ ಕಾಯಿಲೆಯಿಂದ ಬಳಲುತ್ತಾಳೆ. ಇವಳಿಗೆ ಈ ಕಾಯಿಲೆ ಪ್ರಾರಂಭವಾಗಿ ಎಂಟು ತಿಂಗಳಾಗಿತ್ತು. ಇವಳ ಮನಸ್ಸಿನಲ್ಲಿ ಹಲವು ದ್ವಂದ್ವಗಳಿತ್ತು. ಸುಪ್ತ ಮನಸ್ಸಿನಲ್ಲಿದ್ದ ಹಲವು ವಿಚಾರಗಳನ್ನು ಹೊರಗೆ ಹಾಕದೆ ಮನಸ್ಸಿನಲ್ಲೇ ಕೊರಗುತ್ತಿದ್ದಳು. ಇವಳೊಡನೆ ದೀರ್ಘವಾದ ಸಮಾಲೋಚನೆಯನ್ನು ಮಾಡಿದ ನಮ್ಮ ಮನಶಾಸ್ತ್ರಜ್ಞರು ಅವಳ ಮನಸ್ಸಿನ ದುಗುಡಗಳನ್ನು ಹೊರಗೆ ತೆಗೆದರು. ಎಂಟು ತಿಂಗಳ ಹಿಂದೆ ಶಾಲೆಯ ಪಿಯೋನ್ ಒಬ್ಬನೊಂದಿಗೆ ಬಹಳಷ್ಟು ಸ್ನೇಹ ಇವಳಿಗೆ ಬೆಳೆದಿತ್ತು. ಆ ಸ್ನೇಹ ಬರುಬರುತ್ತಾ ಸಲಿಗೆಗೆ ತಿರುಗಿತು. ಆ ಸಲುಗೆಯಿಂದಾಗಿ ನಡೆದುಹೋದದ್ದು ದೈಹಿಕ ಸಂಪರ್ಕ. ಇದರಿಂದ ರಮಾ ಬಹಳ ಹೆದರಿಕೊಂಡು ಅವಳಲ್ಲಿ ಒಂದು ಪಾಪ ಪ್ರಜ್ಞೆ ಕಾಡಲು ತೊಡಗಿತು.

ಅವಳು ಶಾಲೆಗೆ ಹೋಗುವ ದಾರಿಯಲ್ಲಿ ಈ ಪಿಯೋನ್ ಮನೆ. ಆ ಮನೆಯ ಮುಂದೆ ಹೋಗುತ್ತಿದ್ದಾಗಲೆಲ್ಲ ರಮಾಗೆ ತನ್ನ ತಪ್ಪು ಕೆಲಸದ  ಅರಿವಾಗುತ್ತಿತ್ತು. ಆ ಸಂದರ್ಭದಲ್ಲಿ ಅವಳು ತನ್ನ ತಪ್ಪಿನ ಅರಿವಿನಿಂದ ಈ ಉನ್ಮಾದ ಸ್ಥಿತಿಗೆ ಒಳಗಾಗುತ್ತಿದ್ದಳು. ಅವಳು ಹೇಳಿದ ಹಾಗೆ, ಈ ದೈಹಿಕ ಸಂಪರ್ಕ ನಡೆದು ಎರಡು ಮೂರು ದಿನದ ನಂತರ ಪಿಯೋನ್ ಮತ್ತೊಮ್ಮೆ ಅವಳನ್ನು  ಉಪಯೋಗಿಸಲು ಪ್ರಯತ್ನ ಮಾಡಿದಾಗ, ಮೊಟ್ಟ ಮೊದಲು ಅವಳಿಗೆ ಈ ಮೈಮೇಲೆ ದೇವರು ಬಂದಿತ್ತಂತೆ. ಆ ನಂತರ ಆತ ಹೆದರಿ ಈ ಕೆಲಸಕ್ಕೆ ಮುಂದೆ ಬರಲಿಲ್ಲ. ಇದರಿಂದಾಗಿ ಅವಳು ದಾರಿಯಲ್ಲಿ ಹೋಗುವಾಗಲೆಲ್ಲಾ ಈ ರೀತಿ ಮೈಮೇಲೆ ಬಂದು ಬಿಡುತ್ತಿತ್ತು. ಇದರ ಅರ್ಥ ಅವಳು ಬೇಕಂತೆ ಮಾಡುತ್ತಿದ್ದದ್ದು ಎಂಬುದು ಅಲ್ಲ. ನೆನಪಿರಲಿ.. ಸುಮಾರು ಒಂದು ವರ್ಷಗಳ ಕಾಲ ಮನೋ ಚಿಕಿತ್ಸೆ (ಸೈಕೊಥೆರಪಿ ) ಎಂದು ಇಂಗ್ಲಿಷಿನಲ್ಲಿ ಕರೆಯುತ್ತಾರೆ. ಇದು ನಡೆದ ಮೇಲೆ ಅವಳ ಮೈಮೇಲೆ ಕಟೀಲೇಶ್ವರಿ ಬರುವುದು ಸಂಪೂರ್ಣವಾಗಿ ನಿಂತು ಹೋಯಿತು.

೨. ಹನುಮಪ್ಪ ಮಾಸ್ಟ್ರಿಗೆ ಇನ್ನೇನು ಹೆಡ್ ಮಾಸ್ಟರ್ ಆಗಿ ಭಡ್ತಿಯಾಗುವ  ಸಮಯ. ಆ ಸಂದರ್ಭದಲ್ಲೇ ಬೋರ್ಡ್ ಮೇಲೆ ಬರೆಯಲು ಕಷ್ಟ ಪ್ರಾರಂಭವಾಗಿದ್ದು. ಇದನ್ನು ಇಂಗ್ಲಿಷಿನಲ್ಲಿ dissociative motor disorder  ಅಂತ ಕರೆಯುತ್ತಾರೆ. ಇವರು ಮಾಸ್ಟರ್ ಆಗಿದ್ದಾಗ ಸುಮಾರು ಆರು ಹೆಡ್ ಮಾಸ್ಟರ್ ಗಳ ಕೆಳಗೆ ಕೆಲಸ ಮಾಡಿದ್ದರು. ಯಾರೊಂದಿಗೂ ಕೂಡ ಇವರಿಗೆ ಅನೋನ್ಯ ಸಂಬಂಧ ಇರಲಿಲ್ಲ. ಇದರಿಂದಾಗಿ ಇವರಿಗೆ ಏನೋ ಒಂದು ಬಗೆಯ ಹೆದರಿಕೆ. ಇವರು ಹಿಂದಿ ಮಾಸ್ಟರ್ ಆಗಿದ್ದು ಸರ್ಕಾರದಿಂದ ಬೇರೆ ಹಿಂದಿ ಮಾಸ್ಟರ್ ನಿಯುಕ್ತಿಯಾಗುವ ಚಾನ್ಸ್ ಇರಲಿಲ್ಲ. ಇವರು ಹಿಂದಿ ಪಾಠವನ್ನು ಮಾಡಿಯೇ  ತೀರಬೇಕಿತ್ತು. ಇದು ಅವರಿಗೆ ಮನಸ್ಸಿಗೆ ಬಹಳ ಕಷ್ಟ ಅಂತ ಅನ್ನಿಸ್ತಾ ಇತ್ತು. ಈ ಕಾರಣದಿಂದಲೋ ಏನೋ, ಮನಸ್ಸಿನಲ್ಲಿ ಒಂದು ಬಗೆಯ ಅಸಂತೋಷ. ಇದನ್ನು ಯಾರಿಗೂ ಹೇಳಿಕೊಳ್ಳಲು ಕೂಡ ಆಗಲಿಲ್ಲ.

ಬರೆಯಲು ಹೋದ ಕೂಡಲೇ ಕೈ ಒಂದೇ ಸಮನೆ ವೀಕ್ ಆಗಿಬಿಡುತ್ತಿತ್ತು. ನರರೋಗ ತಜ್ಞರಿಂದ ಹಿಡಿದು ಜಾತಕ ತಜ್ಞರ ವರೆಗೂ ತೋರಿಸಿ ಆಗಿತ್ತು. ಇವರಿಗೂ ಕೂಡ ಸುಮಾರು ಎರಡು ವರ್ಷಗಳ ಕಾಲ ಮನೋಚಿಕಿತ್ಸೆ ಮುಂದುವರಿಸಬೇಕಾಯಿತು. ಹಾಗೂ ಇತರ ಮೇಷ್ಟ್ರುಗಳಿಗೆ ಹೊಂದಿಕೊಳ್ಳಲು ಯಾವ ರೀತಿ ಇವರ ಮನಸ್ಸು ಬದಲಾಯಿಸಬೇಕು ಎನ್ನುವುದರ ಬಗ್ಗೆ ಸುದೀರ್ಘ ಚರ್ಚೆಗಳು ನಡೆಯಿತು.

೩. ಉಮಾ ಕತೆಯೇ ಬಹಳ ವಿಚಿತ್ರವಾದದ್ದು. ಅವಳು “ಆಪ್ತಮಿತ್ರ” ಮತ್ತು “ಅನಿಯನ್” ಎಂಬ ಕನ್ನಡ ಮತ್ತು ಹಿಂದಿ ಸಿನಿಮಾಗಳನ್ನು ಬಹಳ ಮನಸ್ಸಿಗೆ ಹಚ್ಚಿಕೊಂಡಿದ್ದಳು. ಅದೇ ಸಮಯದಲ್ಲಿ ಲೋನ್ ನ ಚಿಂತೆ. ಇವೆಲ್ಲವೂ ಸೇರಿ ಅವಳ ಸುಪ್ತ ಮನಸ್ಸಿನ ಮೇಲೆ ಪರಿಣಾಮ ಬಿದ್ದಿತ್ತು.

ಈ ”ಆಪ್ತಮಿತ್ರ” ಸಿನಿಮಾದಲ್ಲಿ ಇದ್ದ ಹಾಗೆ ಉಮಾ ಮತ್ತು ಸಾಗರಿಕ ಎಂಬ ಎರಡು ಬೇರೆ ಬೇರೆ ವ್ಯಕ್ತಿಗಳ ವಿಚಿತ್ರ ಅವಸ್ಥೆಗೆ ಒಳಗಾಗಿದ್ದಳು. ಇದನ್ನು ಇಂಗ್ಲಿಷಿನಲ್ಲಿ dissociative personality disorder ಎಂದು ಹೇಳುತ್ತಾರೆ ಇದರ ಚಿಕಿತ್ಸೆ ಬಹಳ ಕಷ್ಟ. ನಾನು ಎರಡು ಮೂರು ಬಾರಿ ಉಮಾಳನ್ನು ಮಾತನಾಡಿಸಿದೆ. ಆದರೆ ಏನೂ ಗೊತ್ತಾಗುತ್ತಿರಲಿಲ್ಲ. ಅಷ್ಟರೊಳಗೆ ಅವಳ ತಂದೆ ಬಂದು ಅವಳನ್ನು ಬೆಂಗಳೂರಿಗೆ ಕರೆದುಕೊಂಡು ಹೋದರು. ಅಲ್ಲಿ ನಿಮ್ಹಾನ್ಸ್ ಸಂಸ್ಥೆಯಲ್ಲಿ ಸುಮಾರು ಒಂದು ವರ್ಷ ಕಾಲ ಚಿಕಿತ್ಸೆ ನಡೆಸಿದ್ದರಂತೆ. ಹಾಸ್ಟೆಲಿನ ವಾರ್ಡನ್ ನಿಂದ ತಿಳಿದು ಬಂದಿತು.

ಈ ಕಾಯಿಲೆಗೆ ಚಿಕಿತ್ಸೆ ಬಹಳ ಕಷ್ಟ ಎಂದು ಪುಸ್ತಕಗಳು ಹೇಳುತ್ತವೆ. ಬಹಳಷ್ಟು ಬಾರಿ ಇದು ಸಿನಿಮಾಗಳು ಹಾಗೂ ಪುಸ್ತಕಗಳ “ಊಹಾ ಕಲ್ಪಿತ” ಕಾಯಿಲೆ ಎಂದು ಕೂಡ ತಿಳಿದುಬಂದಿದೆ. ಈ ಕಾಯಿಲೆಯ ಬಗ್ಗೆ ಪೇಷೆಂಟ್ ಗಳನ್ನು ನೋಡಿದ್ದಕ್ಕಿಂತ ಹೆಚ್ಚು ಸಿನಿಮಾಗಳನ್ನು ನಾನು ನೋಡಿದ್ದೇನೆ.

ಆದರೆ ಇವೆಲ್ಲವೂ ಕೂಡ ಒತ್ತಡದಿಂದ ಬರುವ ಕಾಯಿಲೆಗಳು. ಇವುಗಳನ್ನು “ವಿಘಟಿತ ಅಸ್ವಸ್ಥತೆಗಳು” ಎಂಬ ಹೆಸರಿನಲ್ಲಿ ವಿಂಗಡಿಸಲಾಗಿದೆ.

ಈ ಕಾಯಿಲೆಗಳಿಗೆ ಪ್ರಮುಖವಾದ ಚಿಕಿತ್ಸೆಯೆಂದರೆ ಮನೋಚಿಕಿತ್ಸೆ. ಬಹಳಷ್ಟು ಸಮಯ ತೆಗೆದುಕೊಳ್ಳುತ್ತದೆ. ಈ ಕಾಯಿಲೆಗಳು ಸರಿಯಾದ ರೀತಿಯಲ್ಲಿ ಚಿಕಿತ್ಸೆಗೆ ಒಳಗಾಗದಿದ್ದರೆ ಆತ್ಮಹತ್ಯೆಗಳು ಸಂಭವಿಸಬಹುದು. ಬಹಳಷ್ಟು ವರ್ಷಗಳು ಈ ಕಾಯಿಲೆ ವಾಸಿ ಆಗುವುದೇ ಇಲ್ಲ. ಮನಸ್ಸಿನ ಒಳಗೆ ಹುದುಗಿ ಹೋಗಿರುವ ಹಲವು ಸಮಸ್ಯೆಗಳು ಸರಿಯಾಗಿ ಹೊರಗೆ ಬರದೇ ಇದ್ದರೆ ಈ ಕಾಯಿಲೆಗೆ ಚಿಕಿತ್ಸೆ ಕಷ್ಟ. ಇಂತಹ ಕಾಯಿಲೆಗಳ ಚಿಕಿತ್ಸೆಗೆ ಬಂದಾಗ ಮನೋವೈದ್ಯರ ಸಂಯಮವನ್ನು ಪರೀಕ್ಷಿಸುವುದರಲ್ಲಿ ಸಂಶಯವೇ ಇಲ್ಲ. ಹಲವೊಮ್ಮೆ ಯಾರೊಂದಿಗೂ ಹೇಳಿಕೊಳ್ಳಲಾಗದಂತಹ ದುಗುಡಗಳು, ಅಂದರೆ ಲೈಂಗಿಕ ಶೋಷಣೆ ಅಥವಾ ತಾನೇ ಮಾಡಿದಂತಹ ಕೆಲವು ತಪ್ಪುಗಳು. ಇಂಥವುಗಳನ್ನು ಹೇಳಲು ಬಹಳ ಕಷ್ಟಪಡುತ್ತಾರೆ. ಈ ಕಾಯಿಲೆಗಳು ಗುಣವಾದ ಮನಸ್ಸಿಗೆ ಒಂದು ರೀತಿಯ ಆತ್ಮ ತೃಪ್ತಿ ಮನೋವೈದ್ಯರಿಗೆ ಸಿಗುತ್ತದೆ. ಈ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಗಳ ಪಾಡು ಕೂಡ ಬಹಳ ವಿಚಿತ್ರವಾದದ್ದು. ಹಲವರು ಇವರು ನಾಟಕ ಮಾಡುತ್ತಿದ್ದಾರೆ, ಬೇಕೆಂತಲೇ ಮಾಡುತ್ತಿದ್ದಾರೆ ಎಂದು ಅಂದುಕೊಳ್ಳುತ್ತಾರೆ. ನಿಜವಾಗಿ ನೋಡಿದರೆ, ಸುಪ್ತ ಮನಸ್ಸಿನಲ್ಲಿ ಅಡಗಿರುವ ವಿಚಾರಗಳನ್ನು ಯಾರೊಂದಿಗೂ ಹೇಳಿಕೊಳ್ಳದೆ ದುಗುಡ ತುಮುಲಗಳಿಂದ ಈ ರೀತಿಯ ಒಂದು ಅವಸ್ಥೆಗಳು ಉಂಟಾಗುತ್ತವೆ.

Leave a Reply

Your email address will not be published. Required fields are marked *