Realtime blog statisticsweb statistics
udupibits.in
Breaking News
ಉಡುಪಿ: ಕನಿಷ್ಠ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ನಗರಸಭೆ, ಜಿಲ್ಲಾಡಳಿತ, ರಾಜ್ಯ-ಕೇಂದ್ರ ಸರಕಾರ ಸಂಪೂರ್ಣ ವಿಫಲ !

ಕುಕ್ಕೆ ಕ್ಷೇತ್ರದ ಚಾರಿತ್ರಿಕ ಹಿನ್ನೆಲೆ- ಭಾಗ 18

* ಡಾ.ಮ.ಸು.ಅಚ್ಚುತ ಶರ್ಮಾ

# ಈ ಗುಡಿಯ ದ್ವಾರದಲ್ಲಿ ಆನೆಕಲ್ಲುಗಳು ಇವೆ. ಇದರಿಂದ ಇದು ಶಿವ ಸಂಬಂಧವಾದ ಗುಡಿಯೆಂದು ಸ್ಪಷ್ಟವಾಗುತ್ತದೆ. ಆ ಆನೆಕಲ್ಲುಗಳ ಸೊಂಡಿಲುಗಳ ರೂಪವನ್ನು ಮರೆಮಾಚಲು ಪ್ರಯತ್ನಪಟ್ಟದ್ದು ಕಾಣುತ್ತದೆ. ಈ ಗುಡಿಯು ಶ್ರೀ ಸುಬ್ರಹ್ಮಣ್ಯ ದೇವರ ಎಡ ಭಾಗದಲ್ಲಿರುವ ಉಮಾ ಮಹೇಶ್ವರ ಗುಡಿಯ ಸಾದೃಶ್ಯದಲ್ಲಿ ಇದ್ದು ಸಾಧಾರಣ ಸಮಾನಂತರ ದೂರದಲ್ಲಿದೆ.

ಈ ಗುಡಿಗೆ ಸೇರಿಸಿದ ಕೋಣೆಗೆ ತಾಗಿ ಒಂದು ಕುರುಬಾಗಿಲು ತೆಂಕು ಭಾಗದಲ್ಲಿದೆ. ಯಾವ ದೇವಾಲಯಗಳಲ್ಲೂ ಗರ್ಭಗುಡಿಗಳಿಗೆ ತೆಂಕು ಭಾಗದಲ್ಲಿ ಬಾಗಿಲು ಇರುವ ಕ್ರಮವಿಲ್ಲ. ಅಲ್ಲದೆ ಎರಡು ದ್ವಾರಗಳಿರುವುದು ವಿಚಿತ್ರವಾಗಿದೆ. ಈ ಗುಡಿಗೆ ಹೆಚ್ಚಿನ ಕೋಣೆಯನ್ನು ಗುಡಿಯ ಹಿಂಬದಿಗೆ ಸೇರಿಸಿದ್ದನ್ನು ನೋಡುವಾಗ ಎದುರಿನ ಭಾಗದ ಕಟ್ಟೋಣಕ್ಕೂ ಹಿಂಬದಿಯ ಕಟ್ಟೋಣಕ್ಕೂ ಕಟ್ಟುವಿಕೆಯಲ್ಲಿ ಹೆಚ್ಚಿನ ತಾರತಮ್ಯಗಳು ಕಾಣುವುದರಿಂದ ಇದು ಆ ಮೇಲೆ ಸೇರಿಸಿದ್ದೆಂದು ಸ್ಪಷ್ಟವಾಗುತ್ತದೆ.

1882ನೇ ಇಸವಿ ವರೇಗೆ ದೇವಳದ ಊಳಿಗ ಪುಸ್ತಕದಲ್ಲಿ ”ವಿನಾಯಕ ದೇವರ ಅಮಾನತು” ಎಂಬ ಲೆಖ್ಖ ಇದ್ದುದರಿಂದ ಅಷ್ಟರವರೇಗೆ ವಿನಾಯಕ ದೇವರ ವಿಗ್ರಹವು ಅದರ ಪೂರ್ವ ಸ್ಥಳದಲ್ಲಿದ್ದಿರಬೇಕು. ಹೊಸತಾಗಿ ಹಿಂಬದಿಯಲ್ಲಿ ಸೇರಿಸಿದ ಕೋಣೆಯಲ್ಲಿ ಇವರ ಸಂಪುಟ ನರಸಿಂಹನನ್ನು ಇಟ್ಟು ತೆಂಕು ದ್ವಾರದಿಂದ ಹೊರ ಹೋಗುತ್ತಾ ಇದ್ದಿರಬೇಕು. ದೇವಳದ ಅಧಿಕಾರವು ಪೂರ್ಣ ಸ್ವಾಮಿಗಳಿಗೆ ಬಂದ ನಂತರ ಅವರ ಮತದವರೇ ಆದ ಮಾಧ್ವ ಅರ್ಚಕ ಮತ್ತು ತಂತ್ರಿಗಳನ್ನು ಒಳಕೈ ಮಾಡಿಕೊಂಡು ವಿನಾಯಕ ವಿಗ್ರಹವನ್ನು ಆ ಗುಡಿಯಿಂದ ತಪ್ಪಿಸಿ ಶ್ರೀ ಸುಬ್ರಹ್ಮಣ್ಯೇಶ್ವರನ ಮೂಲ ಸ್ಥಾನದಲ್ಲಿ ಇರಿಸಿರಬೇಕೆಂದು ತಿಳಿಯಬೇಕಾಗುತ್ತದೆ.

ಈ ಗುಡಿಯ ಎದುರಿನಲ್ಲಿ ಹೊರ ಅಂಗಣಕ್ಕೆ ಬರಲು ಒಂದು ಧ್ವಾರವು ಮೊತ್ತ ಮೊದಲು ಇರಲಿಲ್ಲ. ಈ ಮಾಧ್ವ ಮಠವು ತನ್ನ ದೇವರನ್ನು ಆ ಗುಡಿಯಲ್ಲಿ ಪ್ರತಿಷ್ಟಿಸಿದ ನಂತರ ದೇವಳದ ಒಂದು ಮೂಲೆಯನ್ನೇ ತಮ್ಮದನ್ನಾಗಿ ಮಾಡಿಕೊಳ್ಳಲೂ ತಮ್ಮ ಹೊರಗಿನ ವಸತಿ ಮಠಕ್ಕೆ ಹೋಗಲೂ ಅನುಕೂಲವಾಗುವಂತೆಯೂ ಬಾಗಿಲನ್ನು ತೆಗೆಸಿ ಗುಡಿಯ ಎದುರಿನ ಅಂಬಲವನ್ನು ತಮ್ಮ ನರಸಿಂಹ ಅಂಬಲವನ್ನಾಗಿ ಮಾಡಿಕೊಂಡದ್ದಾಗಿದೆ.

ದೇವಳದ ಅರ್ಚಕ, ತಂತ್ರಿಗಳು ರಾತ್ರಿ ಕಾಲದ ಭೋಜನವನ್ನು ಆ ಅಂಬಲದಲ್ಲಿ ಮಾಡುವುದು ಮತ್ತು ದೇವಳಕ್ಕೆ ಬೇಕಾದ ಎಣ್ಣೆ ವಗೈರೆ ಶೇಖರಿಸಿಡುವ ಪದ್ದತಿಯು ಮೊದಲು ಇರುತ್ತಿತ್ತು.

ಮುಂದುವರಿಯುವುದು

Leave a Reply

Your email address will not be published. Required fields are marked *