Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಕುಕ್ಕೆ ಕ್ಷೇತ್ರದ ಚಾರಿತ್ರಿಕ ಹಿನ್ನೆಲೆ- ಭಾಗ 19

* ಡಾ.ಮ.ಸು.ಅಚ್ಚುತ ಶರ್ಮಾ

# ಶ್ರೀ ಸುಬ್ರಹ್ಮಣ್ಯ ದೇವರ ಮೂಲ ಸ್ಥಾನದ ಹಿಂಬದಿಯ ಎಡೆನಾಳಿಯ ಪಡುಗೋಡೆ ಮಧ್ಯದಲ್ಲಿ ಪಡುಮುಖ ಮಾಡಿ ಒಂದು ಲಿಂಗವನ್ನು ಇಟ್ಟು ಅದನ್ನು ಕುಕ್ಕೆ ಲಿಂಗನೆಂದು ಪೂಜಿಸುತ್ತಾರೆ. ಈ ಸ್ಥಳದಲ್ಲಿ ಲಿಂಗ ಇಟ್ಟು ಪೂಜಿಸುವ ಕ್ರಮವು ಇತ್ತೀಚೆಗೆ ಆರಂಭಿಸಿದ್ದೆಂದು ತಿಳಿದುಬರುತ್ತದೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕುಕ್ಕೆ ಲಿಂಗ ಎಲ್ಲಿದೆ ? ಎಂದು ಯಾರಾದರು ಹೊರಗಿನ ಭಕ್ತಾಧಿಗಳು ಬಂದು ಕೇಳಿದರೆ ಈ ಲಿಂಗವನ್ನು ತೋರಿಸಿ ಅವರಿಂದ ಕಾಣಿಕೆ ದಕ್ಷಿಣೆಗಳನ್ನು ಸ್ವೀಕರಿಸುತ್ತಾರೆ. ಮೂಲ ಸ್ಥಾನದಲ್ಲಿದ್ದ ಅನುಗ್ರಹ ಮೂರ್ತಿಯಾದ ಕುಕ್ಕೇ ಲಿಂಗವು ಇದಲ್ಲವೆಂದು ಲಿಂಗವನ್ನು ನೋಡುವಾಗಲೇ ನಿಶ್ಚಯಿಸಬಹುದು. ಇದರ ಹತ್ತಿರ ಎಡೆನಾಳಿಯಲ್ಲಿ ಭಿನ್ನ ಬಂದ ಬಸವನ ವಿಗ್ರಹವೂ ಬಿದ್ದಿದೆ.

ಕುಕ್ಕೆ ಲಿಂಗನ ಕಂಡೆವು, ಕುಮಾರಧಾರೆ ಮಿಂದೆವು, ಕೊಪ್ಪರಿಗನ್ನ ಉಂಡೆವು, ಶ್ರೀ ಸುಬ್ಬಪ್ಪನ ಪಾದಕ್ಕೆ ನಮೋ ನಮಃ ಎಂಬ ಜನರ ಅಂಬೋಣದಿಂದಲೂ, ಶ್ರೀ ಸುಬ್ರಹ್ಮಣ್ಯನು ತಾರಕಾಸುರ ಸಂಹಾರ ಪ್ರಾಯಶ್ಚಿತ್ತಕ್ಕಾಗಿ ಸ್ಥಾಪಿಸಿದ ಮೂರು ಲಿಂಗಗಳಲ್ಲಿ ಪ್ರಥಮ ಲಿಂಗವೇ ಕುಕ್ಕೆ ಲಿಂಗನೆಂದು ತಿಳಿಯಬೇಕಾಗುತ್ತದೆ.

ಈ ಲಿಂಗವು, ಪುರಾಣೋಕ್ತ ಪ್ರಕಾರ ಗರುಡನ ಭಯದಿಂದ ವಾಸುಕಿಯ ರಕ್ಷಣೆಗಾಗಿ ಅವನ ಹೆಡೆಯಲ್ಲೂ ಲಿಂಗದಲ್ಲೂ ಶ್ರೀ ಷಣುಖನು ತಾನೇ ವಾಸವಾಗಿರುತ್ತೇನೆಂದು ಕೊಟ್ಟ ವಾಗ್ದಾನವು ಇಲ್ಲಿ ಗ್ರಾಹ್ಯವಾಗಿದೆ. ಆದುದರಿಂದಲೇ ಈ ಕ್ಷೇತ್ರವು ”ತತ್ವನಿಧಿ” ಎಂಬ ಪುಸ್ತಕದಲ್ಲಿ ವರ್ಣಿಸಲ್ಪಟ್ಟ ಪ್ರಕಾರ 108 ದಿವ್ಯ ಶಿವ ಸ್ಥಳಗಳಲ್ಲಿ ಒಂದಾಗಿದ್ದು ಇಲ್ಲಿ ಅಹಿಪೇಶ್ವರ ಲಿಂಗ (ವಾಸುಕಿಯ ಲಿಂಗವು) ಇರಬೇಕಾಗಿತ್ತು. ಈಗ ಮೂಲ ಸ್ಥಾನದಲ್ಲಿ ಲಿಂಗವಿಲ್ಲ.

ಮೇಲೆ ಹೇಳಿದಂತೆ ಹೊರ ಬದಿಯಲ್ಲಿ ಕುಕ್ಕೆ ಲಿಂಗನೆಂದು ಪೂಜಿಸುವುದು ವಿಚಿತ್ರವಾಗಿದೆ. ಅದು ಅಲ್ಲದೆ ಒಳ ಅಂಗಣದ ಬಡಗು ದಿಕ್ಕಿನಲ್ಲಿ ಸೋಮ ಸೂತ್ರದ ಹತ್ತಿರ ಭಿನ್ನವಾಗಿ ಬಿದ್ದ ಲಿಂಗ ಒಂದನ್ನು ಹೊರಗಿನಿಂದ ಬಂದ ಭಕ್ತಾಧಿಗಳು ”ಕುಕ್ಕೇಲಿಂಗ” ಎಂದು ಸಂಬೋಧಿಸುವುದರಿಮದ ಮೂಲ ಸ್ಥಾನದಲ್ಲಿದ್ದ ಲಿಂಗವು ಯಾವದೆಂದು ನಿಶ್ಚಯಿಸುವುದು ಕಷ್ಟವಾಗಿದೆ.

ಆದರೂ ಲಿಂಗಗಳ ತಾರತಮ್ಯವನ್ನು ಪರೀಕ್ಷಿಸುವಾಗ ಸೋಮ ಸೂತ್ರದ ಹತ್ತಿರದ ಲಿಂಗವೇ ಅನುಗ್ರಹ ಲಿಂಗವಾಗಿರಬಹುದೆಂದು ನಿರ್ಣಯಿಸಬಹುದಾಗಿದೆ.

ಮುಂದುವರಿಯುವುದು

Leave a Reply

Your email address will not be published. Required fields are marked *