Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ನಮ್ಮನ್ನೇ ಮರೆಸಿಬಿಡುವ ಮರೆಗುಳಿತನ… (ಡಿಮೆನ್ಶಿಯಾ)

# ಒಂದು ವರ್ಷದಲ್ಲಿ ನಮ್ಮ ದೇಶವನ್ನು ಕಾಡಿದ ಎರಡು ಸಾವುಗಳನ್ನು ಗಮನಿಸಿ…

ನಮ್ಮ ದೇಶದ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಹಾಗೂ ದೇಶದ ರಕ್ಷಾ ಮಂತ್ರಿಗಳಾಗಿದ್ದ ಜಾರ್ಜ್ ಫರ್ನಾಂಡೀಸ್. ಇವರು ಈಗಲೂ ನಮ್ಮ ಸಾರ್ವಜನಿಕ ಜೀವನದ ನೆನಪಿನಲ್ಲಿ ಇದ್ದಾರಲ್ಲವೇ ? ಆದರೆ ಅವರು ಇಬ್ಬರು ಸತ್ತು ಹೋದದ್ದು “ಡಿಮೆನ್ಷಿಯಾ” ಎಂಬ ಕಾಯಿಲೆಯಿಂದ.

ಡಿಮೆನ್ಷಿಯಾ ಅಥವಾ ಮರೆಗುಳಿತನ…

ನಳಿನಿ ಎಪ್ಪತ್ತಾರು ವರ್ಷದ ವಯೋವೃದ್ಧೆ. ತನ್ನ ಮಗ, ಸೊಸೆ ಮತ್ತು ಇಬ್ಬರು ಮೊಮ್ಮಕ್ಕಳೊಂದಿಗೆ ಒಂದು ಮಧ್ಯಮ ವರ್ಗದ ಕುಟುಂಬದಾಕೆ. ಕಳೆದ ಒಂದು ವರ್ಷದಿಂದ ಮೊಮ್ಮಕ್ಕಳು ಗಮನಿಸುತ್ತಿರುವುದು ಎನೆಂದರೆ, ಇತ್ತೀಚೆಗೆ ಆಕೆ  ಮಕ್ಕಳನ್ನು ಮಲಗಿಸುವಾಗ, ಕಥೆಗಳನ್ನು ಹೇಳುವಾಗ ಅರ್ಧದಲ್ಲಿಯೇ ನಿಲ್ಲಿಸಿ ಬಿಡುತ್ತಾಳೆ. ಹೇಳಿದ ಭಾಗವನ್ನೇ ಮತ್ತೆ ಮತ್ತೆ ಹೇಳುತ್ತಾಳೆ ಮತ್ತು ಅರ್ಥವಾಯಿತಾ ? ಅರ್ಥವಾಯಿತಾ ? ಎಂದು ಮತ್ತೆ ಮತ್ತೆ ಮಕ್ಕಳನ್ನು ಕೇಳುತ್ತಾ ಇರುತ್ತಾಳೆ. ಇದನ್ನು ಮಕ್ಕಳು, ತಾಯಿ ತಂದೆಯರ ಗಮನಕ್ಕೆ ತಂದಿರುತ್ತಾರೆ.

ನಳಿನಿಯ ಮಗ ಮತ್ತು ಸೊಸೆ ಗಮನಿಸಿದಂತೆ, ಇತ್ತೀಚೆಗೆ ನಳಿನಿಗೆ ಸಿಡುಕು, ಸಿಟ್ಟು ಜಾಸ್ತಿ. ಮನೆಯಲ್ಲಿ ಬಹಳಷ್ಟು ಕೆಲಸದವರು, ನೆಟ್ಟಿ ವ್ಯವಸಾಯ ಕೆಲಸ ಮಾಡಿಕೊಂಡು ಓಡಾಡುತ್ತಿರುತ್ತಾರೆ. ನಳಿನಿ ಈ ಮನೆಗೆ ಬಂದು ನಲವತ್ತು ವರ್ಷಗಳಾಗಿವೆ. ಆದರೆ ಇತ್ತೀಚೆಗೆ ಎಲ್ಲ ಕೆಲಸಗಾರರ ಮೇಲೆ ಸಂಶಯ. “ನನ್ನ ವಾಚು ಕದ್ದಿದ್ದಾರೆ”, “ನನ್ನ ಮೂಗುತಿ ಕದ್ದಿದ್ದಾರೆ”, “ಪೊಲೀಸರಿಗೆ ಹೇಳುತ್ತೇನೆ” ಹೀಗೆ ಯಾವಾಗಲೂ ನಳಿನಿ ಗೋಣಗಾಡುತ್ತಿರುತ್ತಾರೆ.

ಪಕ್ಕದ ಮನೆಯ ದೇವಮ್ಮ ನಳಿನಿಯ ಪ್ರಾಣ ಸ್ನೇಹಿತೆ. ದೇವಮ್ಮ ಒಂದು ವರ್ಷದ ಮಟ್ಟಿಗೆ ಅಂತ ಬೆಂಗಳೂರಿಗೆ ಹೋದವರು ವಾಪಸ್ಸು ಬಂದಿದ್ದಾರೆ. ನಳಿನಿ ಅವರನ್ನು ಗುರುತೇ ಹಿಡಿಯಲಿಲ್ಲ. ಒಂದೆರಡು ಬಾರಿ ಮನೆಯಿಂದ ಹೊರಗೆ ಹೊಲಗಳಿಗೆ ಹೋದಾಗಲೂ ಮನೆಗೆ ವಾಪಸ್ ಬರಲು ನಳಿನಿಗೆ ತಿಳಿಯಲೇ ಇಲ್ಲ. ಇವೆಲ್ಲ ಪ್ರಾರಂಭವಾಗಿ ಸುಮಾರು ಒಂದು ಒಂದೂವರೆ ವರ್ಷವಾಯಿತು.

ಮಗ ರಾಜು ಮತ್ತು ಸೊಸೆ ಸುಮಾ ಇಬ್ಬರು ಸರ್ಕಾರಿ ಶಾಲೆಯ ಟೀಚರ್ ಗಳು. ಒಬ್ಬರು ಕನ್ನಡದಲ್ಲಿ, ಇನ್ನೊಬ್ಬರು ಗಣಿತದಲ್ಲಿ ಸ್ನಾತಕೋತ್ತರ ಪದವಿಯನ್ನು ಮಾಡಿದ್ದಾರೆ. ಇವರು ತಾಯಿಯ ಈ ನಡವಳಿಕೆಗಳನ್ನು ನೋಡಿ ಗಾಬರಿಗೊಂಡರು. ಆ ಕೂಡಲೇ ಮನೆಯ ಎಲ್ಲ ಜಾತಕಗಳನ್ನು ನೋಡುವ ಜ್ಯೋತಿಷಿ ಗುರುನಾಥ್ ಜೋಯಿಸರ ಬಳಿ ಹೋದರು. ಗುರುನಾಥ್ ರವರಿಗೆ ಊರಿನಲ್ಲಿ ಬಹಳ ಒಳ್ಳೆಯ ಹೆಸರಿತ್ತು. ಜ್ಯೋತಿಷ್ಯವನ್ನು ಅವರು ಎಂದು ಹೊಟ್ಟೆಪಾಡಿಗೆ ಅಂತ ಮಾಡಿದವರಲ್ಲ. ಕುಟುಂಬದ ಆಸ್ತಿಯಾಗಿ ಬಂದದ್ದು ಅವರಿಗೆ ಜ್ಯೋತಿಷ್ಯ ವಿದ್ಯೆ. ನಳಿಣಿಯ ವೃತ್ತಾಂತವನ್ನು ಕೇಳಿದ ಜ್ಯೋತಿಷ್ಯರು ಬಂದಿದ್ದ ಗಂಡ ಹೆಂಡತಿಯರಿಗೆ ಸ್ವಲ್ಪ ಖಾರವಾಗಿ ಬುದ್ಧಿ ಹೇಳಿದರು. “ನೀವು ಹೋಗಬೇಕಾಗಿರುವುದು ಮನೋವೈದ್ಯರಲ್ಲಿಗೆ, ನಿಮ್ಮ ಅಮ್ಮನಿಗೆ ಏನೋ ಮಾನಸಿಕ ಸಮಸ್ಯೆ ಇದೆ ಅಂತ ಅನಿಸುತ್ತೆ”.

ಇದರಿಂದ ಇಬ್ಬರು ಮಾಸ್ಟರುಗಳು ಬಹಳ ಸಿಟ್ಟಾದರು. ಮಾನಸಿಕ ಕಾಯಿಲೆ ಬರಲು ನಮ್ಮ ಮನೆಯಲ್ಲಿ ಅಂತಹ ಯಾವುದೇ ಸಮಸ್ಯೆಗಳಿಲ್ಲ. ನನ್ನ ಹೆಂಡತಿ ಅಮ್ಮನನ್ನು ತನ್ನ ತಾಯಿಗಿಂತ ಹೆಚ್ಚು ಚೆನ್ನಾಗಿ ನೋಡಿಕೊಳ್ಳುತ್ತಾಳೆ. ರಾಜು ಮಾಸ್ಟರ್ ಹೆಂಡತಿ ಸುಮಾಳ ಬಗ್ಗೆ ಮೆಚ್ಚುಗೆಯಿಂದ ಜೋಯಿಸರಿಗೆ ತಿಳಿಸಿದ ಮಾತುಗಳಿವು.

ಒಟ್ಟು ಪುನಃ ಮನೆಗೆ ಬಂದ ದಂಪತಿಗಳು ತಾಯಿಯನ್ನು ಇನ್ನು ಹೇಗೆ ಚೆನ್ನಾಗಿ ನೋಡಿಕೊಳ್ಳಬಹುದು ಎಂಬುದರ ಬಗ್ಗೆ ತಮ್ಮ ಗಮನ ಹರಿಸಲಾರಂಭಿಸಿದರು. ಬರುಬರುತ್ತಾ ಸೊಸೆ ಸುಮಾಳ ಮನೋಸ್ಥಿತಿ ಹದಗೆಡಲಾರಂಭಿಸಿತು. ಕಾರಣ, ಅತ್ತೆ ನಳಿನಿ ರಾತ್ರಿ ಸರಿಯಾಗಿ ಮಲಗುತ್ತಿರಲಿಲ್ಲ. ಬಚ್ಚಲು ಮನೆಯಲ್ಲಿ ಹೋಗಿ ಮೂತ್ರ, ಪಾಯಿಖಾಣೆ ಮಾಡಿಬಿಡುತ್ತಿದ್ದರು. ಮಕ್ಕಳ ಮುಂದೆ ಬಟ್ಟೆ ಬಿಚ್ಚಿ ಕುಳಿತು ಕೊಳ್ಳತೊಡಗಿದರು. ಮುಚ್ಚಿದ ಕಿಟಕಿಗಳತ್ತ ತೋರಿಸಿ ಅಲ್ಲಿ ಎಲ್ಲಾ “ಯಕ್ಷಿ”ಯರು ಇದ್ದಾರೆ, ಅವರು ನಡೆದಾಡುವುದು ತನಗೆ ಕಾಣುತ್ತಿದೆ, ತನ್ನನ್ನು ಕರೆಯುತ್ತಿದ್ದಾರೆ ಎಂದು ಕಿಟಕಿ ಬಾಗಿಲುಗಳನ್ನು ಬಡಬಡನೆ ಹೊಡೆಯಲಾರಂಭಿಸಿದರು. ಇದ್ದಕ್ಕಿದ್ದಂತೆ ಎರಡು ಮೂರು ಬಾರಿ ನಳಿನಿಗೆ ಫಿಡ್ಸ್  ಬಂದಿತು. ಕುಟುಂಬ ವೈದ್ಯರ ಸಲಹೆಯ ಮೇರೆಗೆ ರಾಜು ಮತ್ತು ಸುಮಾ ನಳಿನಿ ಅವರನ್ನು ಮನೋವೈದ್ಯರಲ್ಲಿ ಕರೆದುಕೊಂಡು ಬಂದರು.

ಮನೋವೈದ್ಯರು ನಳಿನಿಯೊಂದಿಗೆ ಸುಮಾರು ಇಪ್ಪತ್ತು ನಿಮಿಷ ಮಾತನಾಡಿದರು. ರಾಜು ಮತ್ತು ಸುಮಾರೊಂದಿಗೂ ಕೂಡ ಆಪ್ತ ಸಮಾಲೋಚನೆ ನಡೆಸಿದರು.

ನಳಿನಿಗೆ ಸುಮಾರು ಮೂವತ್ತು ವರ್ಷಗಳಿಂದ ಸಕ್ಕರೆ ಕಾಯಿಲೆ ಇತ್ತು. ಅದನ್ನು ನಿಯಂತ್ರಿಸುವುದರ ಬಗ್ಗೆ ನಳಿನಿ ಹೆಚ್ಚು ಗಮನಿಸುತ್ತಿರಲಿಲ್ಲ. ಇತ್ತೀಚೆಗೆ ಹತ್ತು ವರ್ಷಗಳಿಂದ ಬಿಪಿ ಕಾಯಿಲೆ ಕೂಡ ಇತ್ತು. ಕುಟುಂಬ ವೈದ್ಯರು ಎಷ್ಟೇ ಹೇಳಿದರೂ ಕೂಡ ನಳಿನಿ ತನ್ನ ಆಹಾರದ ಬಗ್ಗೆ ಗಮನ ಕೊಡುತ್ತಿರಲಿಲ್ಲ. ದಿನ ನಿತ್ಯ ಕನಿಷ್ಠ ಹತ್ತು ನಿಮಿಷ ಕೂಡ ಯಾವುದೇ ವ್ಯಾಯಾಮ ಮಾಡುತ್ತಿರಲಿಲ್ಲ. ನಶ್ಯ ಸೇದುವ ಅಭ್ಯಾಸ ಕೂಡ ಕಳೆದ ಐದಾರು ವರ್ಷಗಳಿಂದ ವಿಪರೀತವಾಗಿತ್ತು. ಈ ಒಂದು ಜೀವನಶೈಲಿಯ ಸಂಘಟಿತ ಫಲಿತಾಂಶವೇ ಈ “ಡಿಮೆನ್ಶಿಯಾ” ಕಾಯಿಲೆ.

ಭಾರತ ದೇಶದಲ್ಲಿ ನಲವತ್ತ ಒಂದು ಲಕ್ಷ ಡಿಮೆನ್ಶಿಯಾ ಕಾಯಿಲೆಯಿಂದ ಬಳಲುತ್ತಿರುವವರು ಇದ್ದಾರೆ ಎಂದು ತಿಳಿದು ಬಂದಿದೆ. 60  ವರ್ಷ ಮೇಲ್ಪಟ್ಟವರಲ್ಲಿ 3.7 % ಜನರಲ್ಲಿ ಡಿಮೆನ್ಶಿಯಾ ಕಾಯಿಲೆ ಇದೆ ಎಂದು 2015ರ ಸಂಶೋಧನೆಯೊಂದು ತಿಳಿಸುತ್ತದೆ. 16 ಮನೆಗಳಲ್ಲಿ ಒಂದು ಮನೆಯಲ್ಲಿ ಈ ಡಿಮೆನ್ಶಿಯಾ ಕಾಯಿಲೆ ಇರುವ ವೃದ್ಧರು ಇರುತ್ತಾರೆ ಎಂದು ಅಂದಾಜು ಮಾಡಲಾಗಿದೆ.

ಹೆಚ್ಚುತ್ತಿರುವ ಡಿಮೆನ್ಷಿಯಾ ಕಾಯಿಲೆಗೆ ಕಾರಣಗಳೇನು ?

ವೈದ್ಯರುಗಳ ಪ್ರಕಾರ, ಹೆಚ್ಚುತ್ತಿರುವ ಡಿಮೆನ್ಷಿಯಾ ಕಾಯಿಲೆಗೆ ಮೊದಲನೆಯ ಪ್ರಮುಖ ಕಾರಣ ನಮ್ಮ ಆಹಾರ ಪದ್ಧತಿ. ನಾವು ತಿನ್ನುವ ಆಹಾರ ಮತ್ತು ನಮ್ಮ ನೆನಪು ಶಕ್ತಿ ಹದಗೆಡುವುದಕ್ಕೆ ವಿಜ್ಞಾನಿಗಳು ಸಂಪರ್ಕ ಕೊಂಡಿಯನ್ನು ಕಂಡು ಹಿಡಿದಿದ್ದಾರೆ. ವಿಜ್ಞಾನಿಗಳ ಪ್ರಕಾರ, ಭಾರತ ದೇಶದಲ್ಲಿ ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ಸೇರಿ ಹೆಚ್ಚಾಗಿ ಎಲ್ಲ ಸಾಮಾಜಿಕ ಆರ್ಥಿಕ ಸ್ಥಿತಿಗಳಲ್ಲಿರುವ ಜನರು ಹೆಚ್ಚಾಗಿ ಅಕ್ಕಿ, ಗೋಧಿ, ಜೋಳ ಇವುಗಳನ್ನು ಪ್ರಮುಖ ಆಹಾರವಾಗಿ ಬಳಸುತ್ತಾರೆ. ಇದನ್ನು ನಮ್ಮ staple diet  ಎಂದು ಕೂಡ ಕರೆಯುತ್ತೇವೆ. ಇದನ್ನು ಗಮನಿಸಿ. ಹಾಗೆಯೇ ಸಕ್ಕರೆ ಕೂಡ ನಮ್ಮ ಆಹಾರ ಪದ್ಧತಿಯಲ್ಲಿ ಒಂದು ಪ್ರಮುಖವಾದ ಅಂಶ. ಬಡ ಮಧ್ಯಮ ಕುಟುಂಬಗಳಲ್ಲಿ ಮಾಂಸ, ಅದರಲ್ಲಿಯೂ ಚಿಕನ್, ಮಟನ್, ಬೀಫ್ ಬಳಕೆ ಜಾಸ್ತಿ.

ಮೀನು ಬಳಸುತ್ತಾರೆ, ಆದರೆ ಅದರ ಬೆಲೆ ಜಾಸ್ತಿ. ಹೊಸ ಸಂಶೋಧನೆ ಪ್ರಕಾರ, ಇವತ್ತು ಭೂಲೋಕದಲ್ಲಿ ಆಗುತ್ತಿರುವ ಸಾವುಗಳಲ್ಲಿ ಸಿಗರೇಟ್, ತಂಬಾಕು ಬಳಕೆಯಿಂದ ಆಗುವ ಸಾವುಗಳಿಗಿಂತಲೂ ಹೆಚ್ಚು ಅನಿಯಂತ್ರಿತ ಆಹಾರ ಪದ್ಧತಿ ಹೆಚ್ಚು ಸಾವುಗಳನ್ನು ಮಾತ್ರವಲ್ಲ ಹೃದ್ರೋಗವನ್ನು, ನೆನಪಿನ ಶಕ್ತಿಯ ಕೊರತೆಯನ್ನು ಉಂಟು ಮಾಡುತ್ತದೆಯಂತೆ. ಯಾವ ದೇಶಗಳಲ್ಲಿ ಹೆಚ್ಚು ಹಣ್ಣು, ಹಸಿರು ತರಕಾರಿ, ಒಣ ಹಣ್ಣುಗಳು, ಬೇಳೆ ಕಾಳುಗಳನ್ನು ತಿನ್ನುತ್ತಾರೋ, ಅಂತಹ ದೇಶಗಳಲ್ಲಿ ಈ ನೆನಪಿನ ಶಕ್ತಿಯ ಕೊರತೆ, ಹೃದಯದ ತೊಂದರೆಗಳು ಕಡಿಮೆಯಂತೆ.

ನಾವು ತಿನ್ನುವ ಆಹಾರ ನಮ್ಮ ಬಿಪಿ ಕಾಯಿಲೆ, ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುತ್ತದೆ. ಕೇವಲ ಮಾತ್ರೆಗಳಿಂದ ಈ ಕಾಯಿಲೆಗಳ ನಿಯಂತ್ರಣ ಸಾಧ್ಯವಿಲ್ಲ. ಆದ್ದರಿಂದ, ಈ ಮರೆಗುಳಿತನ ಬಾರದೇ ಇರಲು ನಾವು ತಿನ್ನುವ ಆಹಾರದತ್ತ ಗಮನ ಹರಿಸಲೇಬೇಕು.

ನಳಿನಿ ಅಮ್ಮನ ಕಥೆ ನೋಡಿದರೆ ನಿಮಗೇ ಗೊತ್ತಾಗುತ್ತದೆ. “ಆಹಾರ ನಿಮ್ಮ ಔಷಧಿಯಾಗದಿದ್ದರೆ, ಔಷಧಿಯೇ ನಿಮ್ಮ ಆಹಾರವಾಗುತ್ತದೆ” ಎಂದು ಆಧುನಿಕ ವೈದ್ಯಕೀಯ ಪದ್ಧತಿಯ ಪಿತಾಮಹ ಹಿಪೋಕ್ರೇಟಸ್ ಹೇಳಿದ್ದು ಏಕೆ ಎನ್ನುವುದನ್ನು.

ಡಿಮೆನ್ಶಿಯಾ ಕಾಯಿಲೆ ತಡೆಗಟ್ಟಲು ನಾವು ಏನು ಮಾಡಬಹುದು ?

ಡಿಮೆನ್ಶಿಯಾ ಕಾಯಿಲೆಯ ಬೀಜ ನಲವತ್ತನೇ ವರ್ಷದಲ್ಲಿ ನಮ್ಮ ಮೆದುಳಿನಲ್ಲಿ  ಬಿತ್ತಲಾಗುತ್ತದಂತೇ. ಆದ್ದರಿಂದ ಇನ್ನು ಮುಂದೆ ಬರೆದಿರುವುದು ರಾಜೀವ್ ಮತ್ತು ಸುಮಾ ಅವರ ವಯಸ್ಸಿನ ಜನಸಾಮಾನ್ಯರಿಗೆ. ನಲವತ್ತನೇ ವಯಸ್ಸಿನಿಂದ ಈ ಕೆಳಗಿನ ಸುಧಾರಣೆಗಳನ್ನು ನಮ್ಮ ಆರೋಗ್ಯದಲ್ಲಿ ಮಾಡಲೇಬೇಕು.

೧) ದಿನದ ಒಂದು ಗಂಟೆಯಾದರೂ ನಡಿಗೆ, ಸೈಕ್ಲಿಂಗ್, ಈಜು, ಶಟಲ್ ಬ್ಯಾಡ್ಮಿಂಟನ್, ಅಥವಾ ದೈಹಿಕ ವ್ಯಾಯಾಮವನ್ನು ತಪ್ಪದೇ ಮಾಡಲೇಬೇಕು.

೨) ಮೂರು ಜನರು ವಾಸಿಸುವ ಮನೆಯಾದರೆ ದಿನಕ್ಕೆ ಒಂದು ಕೆಜಿ ತರಕಾರಿ ಊಟ ಮಾಡಲೇಬೇಕು.

೩) ಎಣ್ಣೆ ಮಸಾಲೆ ಪದಾರ್ಥಗಳು, ಅತಿಯಾದ ಸಿಹಿ, ಕರಿದ ಮೀನು, ಕೆಂಪು ಮಾಂಸಗಳಾದ ಮಟನ್, ಚರ್ಮ ತೆಗೆಯದೇ ಇರುವ ಚಿಕನ್, ಬೀಫ್ , ಪೋರ್ಕ್ ಇವುಗಳನ್ನು ಆದಷ್ಟು ಕಡಿಮೆ ತಿನ್ನಬೇಕು. ಮೀನಿನ ಸಾರು ಖಂಡಿತ ಒಳ್ಳೆಯದು. ಸಾಲ್ಮನ್, ಸಾರ್ಡಿನ್, ಬಂಗುಡೆ, ಟ್ಯೂನಾ ಮೀನುಗಳಲ್ಲಿ ಒಮೆಗಾ “ತ್ರಿ” ಫ್ಯಾಟಿ ಆಸಿಡ್ಸ್ ಗಳು ಹೇರಳವಾಗಿರುತ್ತದೆ.

೩) ಸಿಹಿ ತಿನಿಸು, ಮೈದಾ, ಬಿಳಿ ಅಕ್ಕಿ, ಸಂಸ್ಕರಿಸಿದ ಪದಾರ್ಥಗಳು ಸಕ್ಕರೆ ಕಾಯಿಲೆಗೆ ಸಮಸ್ಯೆಯನ್ನುಂಟು ಮಾಡುತ್ತವೆ. ಸಕ್ಕರೆ ಕಾಯಿಲೆ ಅನಿಯಂತ್ರಿತವಾಗಿದ್ದರೆ ಡಿಮೆನ್ಶಿಯಾ ಕಾಯಿಲೆ ಬರುವ ಸಾಧ್ಯತೆ ಹೆಚ್ಚು.

೪) ಬಿಪಿ ಕಾಯಿಲೆ ಇರುವವರು ಉಪ್ಪಿನ ಅಂಶವನ್ನು ಪ್ರತಿದಿನ ಐದು ಗ್ರಾಮ್ ಗಳಷ್ಟು ಮಾತ್ರ ಉಪಯೋಗಿಸಬೇಕು ಎಂದು ವೈದ್ಯರು ಹೇಳುತ್ತಾರೆ. ಆದರೆ ಭಾರತೀಯರು ಇಪ್ಪತ್ತು ಗ್ರಾಂಗಳಷ್ಟು ಉಪ್ಪು ಸೇವಿಸುತ್ತಾರೆ ಎಂಬುದು ನಿಜವಾದ ಸತ್ಯ. ಬಿಪಿ ಕಾಯಿಲೆಯಿಂದ ಅನಿಯಂತ್ರಿತವಾದ ಡಿಮೆನ್ಷಿಯಾ ಬರುವ ಸಾಧ್ಯತೆ ಹೆಚ್ಚು.

೫) ಜಂಕ್ ಫುಡ್ ಗ ಳಾದ ಏರೇಟೆಡ್, ಪಾನೀಯಗಳು  (ಕೋಲಾ ಇತ್ಯಾದಿ) ಪಾನಿಪುರಿ ,ಅತಿ ಸಂಸ್ಕರಿತ ಆಹಾರಗಳು, ಅತಿ ಬೇಯಿಸಿದ ಆಹಾರಗಳು, ಶಕ್ತಿ ಕೊಡದ ಆಹಾರಗಳ ಸೇವನೆ ಬಿಡುವುದು ಒಳ್ಳೆಯದು.

೬) ಮೊಳಕೆ ಬರಿಸಿದ ಧಾನ್ಯಗಳು, ನಾರಿನಂಶವಿರುವ ತರಕಾರಿಗಳನ್ನು ಹೆಚ್ಚು ಹೆಚ್ಚು ತಿನ್ನಬೇಕು.

೭) ಒಣಗಿದ ಕುಂಬಳಕಾಯಿಯ ಬೀಜ, ಸೂರ್ಯಕಾಂತಿ ಬೀಜ ಇವುಗಳಲ್ಲಿ ಒಮೆಗಾ “ತ್ರಿ” ಕೊಬ್ಬಿನ ಆಮ್ಲಗಳು ಉತ್ತಮವಾಗಿರುತ್ತವೆ. ಅಕ್ರೂಟ್ ಅಥವಾ ವಾಲ್ನಟ್, ಗೋಡಂಬಿ, ಆಲಿವಾಯಿಲ್, ಕಡಲೆಗಳಲ್ಲಿ ಕೂಡ ಒಮೆಗಾ “ತ್ರಿ” ಫ್ಯಾಟ್ಸ್ ಇರುತ್ತದೆ. ಇದರ ಉಪಯೋಗ ಹೆಚ್ಚು ಮಾಡಬೇಕು.

೮) ಸಿಗರೇಟ್ ನಶ್ಯ, ಗುಟ್ಕಾ ಸಂಪೂರ್ಣ  ವರ್ಜಿಸಬೇಕು. ಒಂದೇ ಒಂದು ಹನಿ ಮದ್ಯಪಾನ ಕೂಡ ಹೃದ್ರೋಗಕ್ಕಾಗಲಿ, ಡಿಮೆನ್ಷಿಯಾ ರೋಗಕ್ಕಾಗಲಿ ಒಳ್ಳೆಯದಲ್ಲ, ಇದನ್ನು ನೆನಪಿನಲ್ಲಿಡಿ.

ಸಾಂದರ್ಭಿಕ ಚಿತ್ರಗಳ ಕೃಪೆ: ಅಂತರ್ಜಾಲ

Leave a Reply

Your email address will not be published. Required fields are marked *