Realtime blog statisticsweb statistics
udupibits.in
Breaking News
ಉಡುಪಿ: ಕನಿಷ್ಠ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ನಗರಸಭೆ, ಜಿಲ್ಲಾಡಳಿತ, ರಾಜ್ಯ-ಕೇಂದ್ರ ಸರಕಾರ ಸಂಪೂರ್ಣ ವಿಫಲ !

ಕುಕ್ಕೆ ಕ್ಷೇತ್ರದ ಚಾರಿತ್ರಿಕ ಹಿನ್ನೆಲೆ- ಭಾಗ 22

* ಡಾ.ಮ.ಸು.ಅಚ್ಚುತ ಶರ್ಮಾ

# ಮಹಾ ಅನ್ನಸಂತರ್ಪಣೆ ವೇಳೆ ಅನ್ನವನ್ನು ಪಲ್ಲವಾಗಿ ರಾಶಿ ಹಾಕಿ ಭಕ್ಷ್ಯ ಭೋಜ್ಯಗಳಿಂದ ಅಲಂಕರಿಸಿ ದೇವಳದ ಊರ ಮುಕ್ತೇಸರ ಸ್ಮಾರ್ತ ಬ್ರಾಹ್ಮಣ ಹೆಬ್ಬಾರನು ಇತರ ಊರ ಮಹಾಜನರನ್ನು ಸೇರಿಸಿಕೊಂಡು ಅನ್ನವು ತೆಗೆದಂತೆ ಅಕ್ಷಯವಾಗಲೆಂದು ಪ್ರಾರ್ಥನೆ ಮಾಡಿ ಪಲ್ಲಪೂಜೆ ಮಾಡಿ ಮೇಲೆ ಹೇಳಿದ ಅಕ್ಷಯ ಪಾತ್ರವೆಂಬ ಚಿನ್ನದ ಹೆಡೆಯುಳ್ಳ ಸಟ್ಟುಗವನ್ನು ಅನ್ನದ ಪಲ್ಲದ ಮೇಲೆ ಕುತ್ತಬೇಕು. ಹಾಗೆ ಪ್ರಾರ್ಥನೆ ಮಾಡಿ ಪಲ್ಲಪೂಜೆ ಮಾಡಿದ ನಂತರ ಆ ಅನ್ನದ ಪಲ್ಲದಿ೦ದ ತೆಗೆದಷ್ಟು ಅನ್ನವು ಕಮ್ಮಿಯಾಗದೆ ಅಕ್ಷಯವಾಗುತ್ತಿತ್ತೆಂಬ ನಂಬಿಕೆ ರೂಢಿಯಲ್ಲಿತ್ತು. ಈ ಪದ್ಧತಿಯು ಈಗಲೂ ನಡೆಯುತ್ತಿದೆ. ಆದರೆ ಈ ದೇವಳವು ಮಾಧ್ವ ವೈಷ್ಣವರ ಆಡಳಿತೆಗೆ ಬಂದ ನಂತರ ಸ್ಥಾನಿಕ ಹೆಬ್ಬಾರರ ಬದಲಿಗೆ ಹೆಬ್ಬಾರ ಉದ್ಯೋಗವೆಂದು ಮಾಡಿಕೊಂಡು ಈ ಮಾಧ್ವರೇ ಮೇಲಿನ ಕರ್ತವ್ಯಗಳನ್ನು ಮಾಡಿಕೊಂಡು ಬರುತ್ತಾರೆ.

ಮೇಲಿನ ಈ ವಿಷಯಗಳಲ್ಲದೆ ಇಲ್ಲಿಯ ಅನ್ನದಾನದ ವೈಶಿಷ್ಟ್ಯವನ್ನು ಕಂಡು 1802ರಲ್ಲು ಮೈಸೂರು ಮಹಾರಾಜರು ‘ಬಾರಾಹಜಾರ್ ಸಂತರ್ಪಣೆ’ ಎಂಬ ಹೆಸರಿನಿಂದ 12,000 ಜನರಿಗೆ ಚಂಪಾಷಷ್ಟಿ ಮಹೋತ್ಸವದ ಕಾಲದಲ್ಲಿ ದೇವರ ಸನ್ನಿಧಿಯಲ್ಲಿ ಸಂತರ್ಪಣೆಯನ್ನು ನಡೆಸಲು ಪ್ರತಿ ವರ್ಷವೂ ಹಾಸನ ಜಿಲ್ಲೆಯ ಮಂಜಿರಾಬಾದು ತಾಲೂಕಿನಿಂದ ಮಹಾರಾಜರ ಕಡೆಯಿಂದ ಪಾರು ಪತ್ಯಗಾರರು ಸಂತರ್ಪಣೆಗೆ ಬೇಕಾದ ಅಕ್ಕಿ ವಗೈರೆ ಎಲ್ಲಾ ಸಾಮಾನುಗಳನ್ನು ಸಾಗಿಸಿಕೊಂಡು ಈ ಕ್ಷೇತ್ರಕ್ಕೆ ಬಂದು ಉತ್ಸವ ಮುಗಿಯುವ ವರೇಗೆ ಇದ್ದು ಕ್ರಮ ಪ್ರಕಾರ ಸಂತರ್ಪಣೆಯನ್ನು ಜರಗಿಸಿ ಹೋಗುತ್ತಿದ್ದರು.

‘ಕಾಲಾಯ ತಸ್ಮೈ ನಮಃ’ ಎಂಬಂತೆ ಇದೇ ಕಳೆದ 1958ರ ವರೆಗೆ ಸಾಂಗವಾಗಿ ನಡೆಯುತ್ತಿದ್ದ ಮತ್ತು ಈ ಸಂತರ್ಪಣೆಗೆ ಬರುತ್ತಿದ್ದ ಹಣ, ಸಾಮಾನುಗಳನ್ನು ನಮ್ಮ ಈಗಿನ ಕಾಂಗ್ರೆಸು ಸರಕಾರವು ನಿಲ್ಲಿಸಿಬಿಟ್ಟಿತು. ಒಂದು ಕಾಲದಲ್ಲಿ ಅನ್ನದಾನವು ನಡೆಯಬೇಕೆಂಬ ಇಚ್ಛೆಯಿಂದ ದಾನ ಮಾಡಿದ ಮಹಾರಾಜರ ಇಚ್ಛೆಯನ್ನು ನಿಲ್ಲಿಸಿ ಬಿಟ್ಟದ್ದು ದಾತೃವಿನ ಉದ್ಧೇಶವನ್ನೇ ನಾಶಪಡಿಸಿದಂತಾಗಿ ಮುಂಚಿನ ಮಹಾರಾಜರ ಮನೆತನಕ್ಕೆ ಒಂದು ಕುಂದನ್ನು ತಂದದ್ದು ಮಾತ್ರವಲ್ಲದೆ, ಈಗಿನ ಮೈಸೂರು ಸರಕಾರದ ಮುಖಂಡರ ಸಂಕುಚಿತ ಭಾವನೆಯನ್ನು ಜನತೆಗೆ ತೋರಿಸಿಕೊಟ್ಟು ಈಗಿನ ಸರಕಾರವು ತನ್ನ ದೈವಿಕ ಬೆಂಬಲವನ್ನು ಕಳಕೊಂಡಿತು ಎಂದು ಹೇಳಿದರೆ ತಪ್ಪಾಗಲಾರದು.

ಮನುಷ್ಯನನ್ನು ತೃಪ್ತಿಪಡಿಸಲು ಅನ್ನದಾನದಿಂದ ಮೇಲ್ಪಟ್ಟ ದಾನಗಳಿಲ್ಲ. ಶತಮಾನಗಳಿಂದ ನಡೆದುಬಂದ ಸಂತರ್ಪಣೆ ನಿಲ್ಲಿಸಿ ದಾನ ಮಾಡಿದವರ ತತ್ವಕ್ಕೆ ವಿರೋಧಿಸಿ ವರ್ತಿಸುವುದು ಹುಚ್ಚುತನ. ಆ ಮೈಸೂರಿನ ಹಣ ಬಾರದಿದ್ದರೂ ಶ್ರೀ ಸುಬ್ರಹ್ಮಣ್ಯನ ಮಹಿಮೆಯಿಂದ ಮತಭೇದವಿಲ್ಲದೆ ಸಂತರ್ಪಣೆಯು ಮುಂಚಿನಿಂದಲೂ ಈಗ ಇಮ್ಮಡಿಯಾಗಿ ಈಗಿನ ಆಡಳಿತದಾರರಿಂದ ನಡೆಸಲ್ಪಡುವುದು ಸ್ತೋತ್ರಾರ್ಹವಾಗಿದೆ.

ಈ ಎಲ್ಲಾ ಮೇಲಿನ ಕಾರಣಗಳಿಂದ ಕುಕ್ಕೇ ಲಿಂಗನೆಂದರೆ ಹೊಟ್ಟೆ ತುಂಬಿಸುವ ದೇವರು ಎಂಬ ಅರ್ಥವು ಸಮಂಜಸವಾಗಿಯೂ ಅನ್ವರ್ಥವಾಗಿಯೂ ಇದೆ.

ಮುಂದುವರಿಯುವುದು

Leave a Reply

Your email address will not be published. Required fields are marked *