Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಪರೀಕ್ಷೆಯ ಸೋಲು, ಬದುಕಿನ ಸೋಲಾಗದಿರಲಿ…

# ಈ ಬಾರಿ ‘ಮನೋದರ್ಪಣ’ದಲ್ಲಿ ಈ ಬಗ್ಗೆ ಬರೆಯಬೇಕು ಅಂತ ಅನ್ನಿಸಿದ್ದು, ತಾಯಿಯೊಬ್ಬಳು ತನ್ನ ಮಗ ಅರುವತ್ತು ಶೇ ಮಾರ್ಕ್ಸ್ ತೆಗೆದ ಬಗ್ಗೆ ಖುಷಿ ವ್ಯಕ್ತಪಡಿಸಿ ಬರೆದ ಫೇಸ್ ಬುಕ್ ಪೋಸ್ಟ್ ಒಂದು ಎರಡು ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಯಿತು ಅನ್ನುವುದನ್ನು ಓದಿದಾಗ. ಮುಖ್ಯವಾಗಿ, ಅಂದುಕೊಂಡದ್ದಕ್ಕಿಂತ ಕಡಿಮೆ ಮಾರ್ಕ್ಸ್ ತೆಗೆದ ಮಕ್ಕಳು ಹಾಗೂ ಫೇಲಾದ ಮಕ್ಕಳನ್ನು ಉದ್ದೇಶಿಸಿ ನನ್ನ ಈ ಬರವಣಿಗೆ.

ನಾನು, ಹತ್ತನೇ ತರಗತಿಯಲ್ಲಿ ಶೇಕಡಾ ಎಪ್ಪತ್ತೇಳು ಮಾರ್ಕ್ ತೆಗೆದಿದ್ದೆ. ಅಂದುಕೊಂಡದ್ದಕ್ಕಿಂತ ಹತ್ತು ಶೇ. ಕಡಿಮೆ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾಗಿದ್ದ ನನ್ನ ತಂದೆ, ಆ ಸಂದರ್ಭದಲ್ಲಿ ನನಗೆ ನೀಡಿದ ಕೆಲವು ಸಲಹೆಗಳು ಇವತ್ತಿಗೂ ನಾನು ಮರೆಯುವುದಿಲ್ಲ.

ಹತ್ತನೆಯ ತರಗತಿ ಮಾರ್ಕ್ ಶೀಟ್ ಕೇವಲ “ಡೇಟ್ ಆಫ್ ಬರ್ತ್” ಗಾಗಿ. ನೀನು ಎಂಟು, ಒಂಬತ್ತು, ಹತ್ತನೇ ತರಗತಿಯಲ್ಲಿ ತೆಗೆದ ಪ್ರೈಸ್ ಗಳು ಎಷ್ಟು ?, ಹತ್ತನೇ ತರಗತಿಯಲ್ಲಿ ಮಾರ್ಕ್ ಬರಲಿಲ್ಲ ಅಂದರೆ ಅದೇನು ಕೊನೆಯಲ್ಲ, ಎಷ್ಟು ಪರೀಕ್ಷೆಗಳು ಇನ್ನೂ ಇದೆ, ನೀನು ನಿನ್ನ ಪಾಡಿಗೆ ಓದಿಕೊಂಡು ಹೋಗು, ಅಂಕಗಳ ಬಗ್ಗೆ ಯೋಚಿಸಬೇಡ” ಅಪ್ಪ ಹೇಳಿದ ಮಾತುಗಳು ಕಿವಿಯಲ್ಲಿ ಮತ್ತೆ ಮತ್ತೆ ಕೇಳಿಸುತ್ತಾ ಇದೇ…

ಅಂಕಗಳು ಕಡಿಮೆ ಬಂದಾಗ ಅಥವಾ ಫೇಲ್ ಆದಾಗ ಮಕ್ಕಳು ಬಹಳಷ್ಟು ನೊಂದುಕೊಂಡು ಬಿಡುತ್ತವೆ. ತಾನು ಜೀವನದಲ್ಲಿ ಏನು ಸಾಧಿಸುವುದಿಲ್ಲ, ತಾನು ನತದೃಷ್ಟ, ಎಲ್ಲ ಮುಗಿದೇ ಹೋಯಿತು…, ನಾನೇಗೆ ಇತರರಿಗೆ ಮುಖ ತೋರಿಸಲಿ ?, ಅಪ್ಪ ಅಮ್ಮ ನನಗೋಸ್ಕರ ಎಷ್ಟು ಕಷ್ಟಪಟ್ಟರೂ ನಾನು ಏನು ಮಾಡಲಿಲ್ಲವಲ್ಲ…, ನನಗಿಂತ ಕಡಿಮೆ ಬುದ್ಧಿವಂತ ಆತ, ಅವನ ಮಾರ್ಕ್ ನೋಡಿ, ನನ್ನ ಮಾರ್ಕ್ ನೋಡಿ … ಹೀಗೆ ಹಲವಾರು ಯೋಚನೆಗಳು ಮಕ್ಕಳಲ್ಲಿ ಬಂದುಬಿಡುತ್ತವೆ.

ಸಂಬಂಧಿಕರನ್ನು, ಅಣ್ಣ ತಮ್ಮಂದಿರನ್ನು, ಅಪ್ಪ ಅಮ್ಮನನ್ನು ದೂರಮಾಡಿ ಹಲವರು ಒಬ್ಬರೇ ಕುಳಿತುಕೊಂಡು ಬಿಡುತ್ತಾರೆ. ಕೆಲವರು ಆತ್ಮಹತ್ಯೆ ಯೋಚನೆಗಳನ್ನು ಕೂಡ ಮಾಡಿಬಿಡುತ್ತಾರೆ. ಕೆಲವು ಮಕ್ಕಳು ಸಿಟ್ಟಿನ ಭರದಲ್ಲಿ ಬೇರೆಯವರನ್ನು ಬೈಯುತ್ತಾ ಮನೆಯವರೊಂದಿಗೆ ಸಣ್ಣ ಪುಟ್ಟ ವಿಷಯಗಳಿಗೆ ಜಗಳ ಮಾಡುತ್ತಾರೆ.

ಮನೆಯವರ ಕಷ್ಟ ಅಂತೂ ಹೇಳತೀರದು. ತಮ್ಮ ಮಗ ತಮ್ಮ ಬಾಳನ್ನು ಬೆಳಗಿಸುತ್ತಾನೆ, ಉತ್ತಮ ಅಂಕಗಳನ್ನು ತೆಗೆಯುತ್ತಾನೆ ಅನ್ನುವ ನಿರೀಕ್ಷೆ ಇದ್ದರೆ, ಆ ನಿರೀಕ್ಷೆ ತಲೆಕೆಳಗಾದ ಇವರು ನೊಂದುಕೊಳ್ಳುತ್ತಾರೆ ಹಾಗೂ ಈ ಮಕ್ಕಳನ್ನು ಬಯ್ಯ ತೊಡಗುತ್ತಾರೆ. ಆ ಮಗುವಿಗಾಗಿ ತಾವು ಮಾಡಿರುವ ತ್ಯಾಗಗಳ ಬಗ್ಗೆ  ಹೇಳತೊಡಗುತ್ತಾರೆ. ಆ ಸಂದರ್ಭದಲ್ಲಿ ಹೆಚ್ಚು ಮಾರ್ಕ್ ತೆಗೆದ ಮಗುವಿನ ಸ್ನೇಹಿತ ಅಥವಾ ಸಂಬಂಧಿ ಅವನನ್ನು  ಉಲ್ಲೇಖಿಸಿ, “ಅವನನ್ನು ನೋಡು, ಅವನ ತಾಯಿಯನ್ನು ನೋಡು ಎಷ್ಟು ಖುಷಿಯಾಗಿದ್ದಾರೆ… ನಮ್ಮ ಪಾಲಿಗೆ ಆ ಅದೃಷ್ಟ ಇಲ್ಲವಲ್ಲ” ಇಂತಹ ಮಾತುಗಳು ಮನಸ್ಸಿಗೆ ಬರುವುದು ಸಹಜ.

ಮಾರ್ಕ್ ಕಡಿಮೆ ತೆಗೆದ ಮಕ್ಕಳೇ, ಮನೆಯವರೇ, ವಾಸ್ತವ ಅಂಶವನ್ನು ಅರಿತುಕೊಳ್ಳಿ…

1. ಸಾಧಕರನ್ನು ಗಮನಿಸಿದರೆ; ಹತ್ತನೆಯ ತರಗತಿಯ ಮಾರ್ಕ್ಸಿಗೂ, ಜೀವನದಲ್ಲಿ ಮಾಡುವ ಸಾಧನೆಗಳಿಗೂ ಯಾವುದೇ ಸಂಬಂಧವಿಲ್ಲ.

2. ವಿಶ್ವದ ಬ್ಯಾಟಿಂಗ್ ದಿಗ್ಗಜರಲ್ಲಿ ಒಬ್ಬರಾದ ಸಚಿನ್ ತೆಂಡೂಲ್ಕರ್ “ಗೋಲ್ಡನ್ ಡಕ್” ಅಂದರೆ ಪ್ರಥಮ ಬಾಲ್ ನಲ್ಲಿ ಔಟ್ ಆಗುವುದು. ಇದಕ್ಕೆ ಕೂಡ ರೆಕಾರ್ಡ್ ಇಟ್ಟುಕೊಂಡಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ದಿಗ್ಗಜರನ್ನು ಗಮನಿಸಿದರೆ ಪೂರ್ಣಚಂದ್ರ ತೇಜಸ್ವಿ, ಶಿವರಾಮ ಕಾರಂತ ಇವರೆಲ್ಲ ಹತ್ತನೇ ತರಗತಿಯಲ್ಲಿ ಕಡಿಮೆ ಮಾರ್ಕ್ಸ್ ತೆಗೆದವರೆ.

3. ಹತ್ತನೇ ತರಗತಿಯ ಮಾರ್ಕ್ ಗಳು ಚೆನ್ನಾಗಿದ್ದರೆ ಮನಸ್ಸಿಗೆ ಸ್ವಲ್ಪ ಮಟ್ಟಿಗೆ ಧೈರ್ಯವನ್ನು ಕೊಡಬಹುದೇ ಹೊರತು, ನಮ್ಮ ಹಣೆಬರಹವನ್ನು ನಿರ್ಧರಿಸುತ್ತದೆ ಎಂಬುದು ಸುಳ್ಳು.

4. ತಾಯಿ ತಂದೆಯರು, ಹಿರಿಯರು ಗಮನಿಸಬೇಕಾದ ಅಂಶವೆಂದರೆ, ಈ ಸಂದರ್ಭದಲ್ಲಿ ಮಕ್ಕಳ ಮನೋಸ್ಥೈರ್ಯ ಕುಗ್ಗಿ ಹೋಗಿರುತ್ತದೆ, ನೀವು ಅವರ ಮನಸ್ಸಿಗೆ ಧೈರ್ಯ ತುಂಬುವ ಪ್ರಯತ್ನವನ್ನು ಮಾಡಲೇಬೇಕು. ಮಕ್ಕಳಲ್ಲಿ ಇರುವ ಒಳ್ಳೆಯ ಗುಣಗಳನ್ನು ಹೆಕ್ಕಿ ಹೆಕ್ಕಿ ಅವರಿಗೆ ತಿಳಿಸಿ.

ಇಷ್ಟೆಲ್ಲಾ ಬರೆಯುವಾಗ ನಿಜ ಜೀವನದಲ್ಲಿ ನೋಡಿದ ಒಂದು ವಿಷಯ ನೆನಪಾಗುತ್ತದೆ.

ಸುಮಾರು ಹದಿನೈದು ವರ್ಷಗಳ ಹಿಂದೆ ತಾಯಿಯೊಬ್ಬಳು ತನ್ನ ಎರಡನೇ ಮಗನನ್ನು ಕರೆದುಕೊಂಡು ನನ್ನ ಹತ್ತಿರ ಬಂದಿದ್ದರು. ಆತ ಓದುವುದರಲ್ಲಿ ಸ್ವಲ್ಪ ಹಿಂದೆ ಇದ್ದ. ಹೇಗಾದರೂ ಮಾಡಿ ಅವನ ಬುದ್ಧಿವಂತಿಕೆಯನ್ನು ಹೆಚ್ಚಿಸಬೇಕು ಎಂಬುದು ತಾಯಿಯ ಕೋರಿಕೆ. ಆ ಹುಡುಗನ ಹತ್ತಿರ  ಮಾತನಾಡಿದಾಗ ನನಗೆ ತಿಳಿದ ವಿಷಯವೆಂದರೆ…

ಅವನಿಗೆ ಗಣಿತ ಮತ್ತು ಸಮಾಜ ಬಹಳ ಕಷ್ಟದ ಸಬ್ಜೆಕ್ಟ್ ಗಳಾಗಿದ್ದವು. ಇಂಗ್ಲಿಷ್ ನಲ್ಲಿ ಚೆನ್ನಾಗಿ ಬರೆಯುತ್ತಿದ್ದ. ತಾಯಿ, ತಂದೆ, ಶಾಲೆಯವರು ಎಲ್ಲ ಈತನ ಮೇಲೆ ಎಷ್ಟು ಒತ್ತಡ ಹಾಕಿದ್ದರೆಂದರೆ; ಅವನ ಮನೋಸ್ಥೈರ್ಯ ಕುಸಿದು ಹೋಗಿತ್ತು. ಆ ಮನೋಸ್ಥೈರ್ಯವನ್ನು ಉತ್ತಮಗೊಳಿಸುವ ಪ್ರಯತ್ನವನ್ನೇನೊ ಮಾಡಿದೆ. ಒಮ್ಮೆ ಆತ ಬರುವಾಗ ತನ್ನ ಅಣ್ಣನನ್ನು ಕರೆದುಕೊಂಡು ಬಂದ. ಅಣ್ಣಾ ಕೆಆರ್ಇಸಿ ಸುರತ್ಕಲ್ (ಈಗ ಎನ್ಐಟಿಕೆ) ಇಲ್ಲಿ ಕಂಪ್ಯೂಟರ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಮಾಡುತ್ತಿದ್ದ. ಮೊದಲ ಬಾರಿ ಬಂದಾಗ ಈತನ ತಾಯಿ ಹೇಳಿದ್ದು ನೆನಪಿಗೆ ಬಂತು. “ನನ್ನ ಮೊದಲನೇ ಮಗ ರ್ಯಾಂಕ್ ತೆಗೆದಿದ್ದಾನೆ, ಕೆ.ಆರ್.ಇ.ಸಿ ಯಲ್ಲಿ ಇದ್ದಾನೆ, ಇದೇ ಮನೆಯಲ್ಲಿ ಇವನು ಹೇಗೆ ಹುಟ್ಟಿದ ಸಾರ್ ?”. ಈ ಅಣ್ಣನೇ ತಮ್ಮನ ಮನೋಸ್ಥಿತಿಗೆ ಮುಖ್ಯ ಕಾರಣಿಕರ್ತನಾಗಿದ್ದ. ಅಂದರೆ, ಎಲ್ಲರೂ ಈತನನ್ನು ಅಣ್ಣನೊಂದಿಗೆ ತುಲನೆ ಮಾಡುತ್ತಾ ಇದ್ದರು. ಈಗ ಮುಖ್ಯವಾದ ವಿಷಯಕ್ಕೆ ಬರುತ್ತೇನೆ…

ಹದಿನೈದು ವರ್ಷಗಳ ನಂತರ ಒಂದು ದಿನ ಅರವತ್ತೈದು ವರ್ಷದ ವೃದ್ಧೆಯೊಬ್ಬರನ್ನು ಒಬ್ಬ ಹುಡುಗ ನನ್ನಲ್ಲಿ ಕರೆದುಕೊಂಡು ಬಂದ. ವೃದ್ಧೆ ಹಾಗೂ ಅವಳ ಮಗ ಪರಿಚಯಸ್ಥರ ಹಾಗೆ ಕಂಡರು. ಹುಡುಗ ನನ್ನನ್ನು ನೋಡಿದ ಕೂಡಲೇ ಕೇಳಿದ, “ನೆನಪಾಯಿತಾ ಸರ್, ನಾನು ನಿಮ್ಮ ಹತ್ತಿರ ಹತ್ತನೇ ತರಗತಿಯಲ್ಲಿ ಕೌನ್ಸಿಲಿಂಗ್ ಗೆ ಬಂದಿದ್ದೆ”. ಆ ಕೂಡಲೇ ಹೇಳಿದೆ, “ನೆನಪಾಯಿತು, ನಿನ್ನ ಅಣ್ಣ ಕೆಆರ್ ಇಸಿ ಯಲ್ಲಿದ್ದರೂ ಅಲ್ವಾ ?”. ಹೌದು ಸಾರ್, ಈಗ ಅಮೆರಿಕದಲ್ಲಿ ಇದ್ದಾನೆ. ಈಗ ನಾನು ಬಂದದ್ದು ನನಗೋಸ್ಕರ ಅಲ್ಲ. ಅಮ್ಮನಿಗೆ ಇತ್ತೀಚೆಗೆ ಮರೆವು ಜಾಸ್ತಿಯಾಗಿದೆ. ಅವಳೇ ಹೇಳಿದಳು, ನಿಮ್ಮ ಹತ್ತಿರ ತೋರಿಸುವ ಅಂತ, ಅದಕ್ಕೆ ಕರೆದುಕೊಂಡು ಬಂದೆ.

ಈ ಅಮ್ಮನ ಹತ್ತಿರ ಮಾತನಾಡಿದಾಗ, ನನಗೆ ಬಹಳಷ್ಟು ವಿಚಾರಗಳ ಬಗ್ಗೆ ಜ್ಞಾನೋದಯವಾಯಿತು. ಸ್ವಲ್ಪ ಕೇಳಿಕೊಳ್ಳಿ. ಎಲ್ಲರಿಗೂ ಅತೀ ಅಗತ್ಯದ ವಿಷಯಗಳು…

“ಸರ್, ಹತ್ತನೇ ತರಗತಿಯಲ್ಲಿದ್ದ ನನ್ನ ಮಗನ ಬಗ್ಗೆ ನೀವು ಹದಿನೈದು ವರ್ಷಗಳ ಹಿಂದೆ ಹೇಳಿದ್ದ ಮಾತುಗಳೆಲ್ಲ ನಿಜವಾಯಿತು. ಈತ ಮಾರ್ಕ್ ತೆಗೆದು ಅಣ್ಣನ ಹಾಗೆ ಬಹಳಷ್ಟು ಯಶಸ್ಸನ್ನು ಗಳಿಸಲಿಲ್ಲ. ಈಗ ಶಾಲೆಯೊಂದರಲ್ಲಿ ಇಂಗ್ಲಿಷ್ ಮಾಸ್ಟರ್ ಆಗಿದ್ದಾನೆ. ಈತನಿಗೂ ಈಗ ಎರಡು ವರ್ಷದ ಮಗು ಇದೆ. ಈತ ನನ್ನನ್ನು ನೋಡಿಕೊಳ್ಳುತ್ತಿರುವ ರೀತಿ ನೋಡಿದರೆ ನನಗೆ ಬಹಳ ಖುಷಿಯಾಗುತ್ತದೆ. ದೊಡ್ಡ ಮಗ ಅಮೆರಿಕಾದಲ್ಲಿ ಇದ್ದಾನೆ. ಆತ ರಿಸರ್ಚ್ ನಲ್ಲಿ ಬಹಳ ಬಿಝಿಯಾಗಿದ್ದಾನೆ. ವಾರಕ್ಕೊಮ್ಮೆ ತಪ್ಪದೆ ಫೋನ್ ಮಾಡುತ್ತಾನೆ. ಆತನ ಹೆಂಡತಿ ಮಕ್ಕಳು ಕೂಡ ಫೋನ್ ನಲ್ಲಿ ಬಹಳಷ್ಟು ಹೊತ್ತು ಮಾತನಾಡುತ್ತಾರೆ. ಏನೇ ತೊಂದರೆ ಇದ್ದರೂ ಬೇಕಾದಷ್ಟು ಹಣ ಕಳಿಸುತ್ತಾರೆ. ಆದರೆ ನಿಜ ಹೇಳುತ್ತೇನೆ, ವೃದ್ಧಾಪ್ಯದಲ್ಲಿ ನನಗೆ ಆಸರೆಯಾಗಿ ಮೂಡಿ ಬಂದಿರುವವನು ನನ್ನ ಎರಡನೇ ಮಗ. ಯಾವಾಗಲೂ ನನ್ನ ಬಗ್ಗೆ ಬಹಳಷ್ಟು ಕಾಳಜಿ ವಹಿಸುತ್ತಾನೆ. ನನ್ನ ಗಂಡ ತೀರಿ ಹೋದ ಮೇಲೆ ನನ್ನ ಬಗ್ಗೆ ಇನ್ನೂ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾನೆ. ಎಲ್ಲಿ ಬೇಕಿದ್ದರೂ ಕರೆದುಕೊಂಡು ಹೋಗುತ್ತಾನೆ. ಅವನ ಹೆಂಡತಿ ಮತ್ತು ಮಗು ಕೂಡ ಹಾಗೇ. ಇತ್ತೀಚೆಗೆ ಮರೆವು ಜಾಸ್ತಿಯಾಗುತ್ತಿದೆ. ನಿಮ್ಮ ಹತ್ತಿರ ಹೋಗಬೇಕು ಎಂದು ಹೇಳಿದೆ. ಶಾಲೆಗೆ ರಜೆ ಮಾಡಿ ಕರೆದುಕೊಂಡು ಬಂದಿದ್ದಾನೆ. ನೀವು ಹೇಳಿದ ಮಾತುಗಳು ಅಕ್ಷರ ಅಕ್ಷರ ಸತ್ಯ. ಐದು ಬೆರಳುಗಳೂ ಒಂದೇ ರೀತಿ ಇರುವುದಿಲ್ಲ. ಒಂದೊಂದು ಬೆರಳಿಗು ತನ್ನದೇ ಆದ ಮಹತ್ವ ಇದೆ. ನಾನು ಯೋಚನೆ ಮಾಡುತ್ತಾ ಇದ್ದೆ, ನನ್ನ ಮೊದಲನೆ ಮಗನ ಹಾಗೆ ಇವನೂ ಕೂಡ ಬಹಳಷ್ಟು ಬುದ್ಧಿವಂತನಾಗಿ ಅಮೆರಿಕದಲ್ಲೊ ಇಂಗ್ಲೆಂಡ್ ನಲ್ಲೊ ಇದ್ದಿದ್ದರೆ, ನನ್ನ ಕತೆ ಏನಾಗುತ್ತಿತ್ತು ? ನಾನು ಮನೆಯಲ್ಲಿ ಒಬ್ಬಳೇ ಕೂತು ದಿನ ಎಣಿಸ ಬೇಕಾಗುತ್ತಿತ್ತು. ಈತ ಹತ್ತನೇ ತರಗತಿಯಲ್ಲಿ ಗಣಿತದಲ್ಲಿ ಫೈಲ್ ಆಗಿದ್ದಾಗ, “ಈತ ನನ್ನ ಹೊಟ್ಟೆಯಲ್ಲಿ ಏಕೆ ಹುಟ್ಟಿದ್ದು” ಎಂದು ದು:ಖ ಪಟ್ಟು ಅಳುತ್ತಾ ಇದ್ದೆ. ಆದರೆ ಇವತ್ತು ನನಗೆ ಎಲ್ಲ ಅರ್ಥವಾಗುತ್ತಾ ಇದೇ”.

ಇಂದು ಆ ತಾಯಿ ಆಡಿದ ಮಾತುಗಳು ಪುನಃ ನನ್ನ ಮನಸ್ಸಿಗೆ ಬಂದವು. ಇದಕ್ಕೆ ಕಾರಣ ಶೇಕಡಾ ಅರುವತ್ತು ಮಾರ್ಕ್ಸ್ ತೆಗೆದ ತನ್ನ ಮಗನ ಬಗ್ಗೆ ಹೆಮ್ಮೆಯಿಂದ ಎಫ್ಬಿ ಪೋಸ್ಟ್ ಹಾಕಿದ ಇನ್ನೊಂದು ತಾಯಿ. ನಿಜ ಹೇಳುತ್ತೇನೆ, ನಮ್ಮ ಮಕ್ಕಳನ್ನು ಮಾರ್ಕ್ ತೆಗೆಯುವ ಯಂತ್ರಗಳನ್ನಾಗಿ ಮಾಡುವುದು ಬೇಡ. ಪ್ರತಿಯೊಂದು ಮಗುವಿನಲ್ಲಿ ತನ್ನದೇ ಆದ ಹಲವಾರು ಹಿರಿಮಗಳಿವೆ. ಆ ಹಿರಿಮೆಗಳನ್ನು ಬೆಳೆಸುವ ಕೆಲಸ ತಾಯಿ ತಂದೆಯರು ಮಾಡುವುದು ಅತಿ ಅಗತ್ಯವಾಗಿದೆ.

ಹಾಗೆಯೇ ಮಕ್ಕಳು ಕೂಡ ಗಮನಿಸಿ. ಮಾರ್ಕ್ ಕಡಿಮೆ ಬಂದರೆ ಜೀವನವೇ ಮುಗಿದು ಹೋಯಿತು ಅನ್ನುವುದು ಏನೂ ಇಲ್ಲ. ಜೀವನದಲ್ಲಿ ಮುಂದೆ ಹೋಗಲು ತಯಾರು ಮಾಡಿ. ನಿಮ್ಮ ಇಷ್ಟದ ಸಬ್ಜೆಕ್ಟ್ ಗಳು ಯಾವುದು ಎಂದು ನೋಡಿ. ಆ ಸಬ್ಜೆಕ್ಟ್ ಗಳಲ್ಲಿ ಮುಂದೆ ಹೋಗಲು ಕುಳಿತು ಯೋಚನೆ ಮಾಡಿ. ಫೇಲಾಗಿದ್ದರೆ ಪಾಸಾಗಲು ಯಾವ ಯಾವ ವಿಷಯಗಳನ್ನು ಓದಬೇಕು ? ನಿಮ್ಮ ಮಿತ್ರರೊಂದಿಗೆ ಟೀಚರ್ ಗಳೊಂದಿಗೆ ಚರ್ಚಿಸಿ, ಪುನಃ ಪ್ರಯತ್ನ ಮಾಡಿ. ಬೇಸರ ಮಾಡಿಕೊಂಡು, ನೊಂದುಕೊಂಡು ಕುಳಿತುಕೊಂಡು ಪ್ರಯೋಜನವಿಲ್ಲ. ಕಷ್ಟದ ಸಬ್ಜೆಕ್ಟ್ ಗಳನ್ನು ಪ್ರಯತ್ನಪಟ್ಟು ಪಾಸಾಗಿ ಬಿಟ್ಟರೆ ಮುಂದೆ ಇಷ್ಟದ ಸಬ್ಜೆಕ್ಟ್ ಗಳನ್ನು ಆಯ್ದುಕೊಂಡು ಮುಂದೆ ಹೋಗಬಹುದು.

Leave a Reply

Your email address will not be published. Required fields are marked *