Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಬಡವರಿಗೆ ಪ್ರಾಧಿಕಾರದ ಉಚಿತ ವಕೀಲರ ಸೇವೆ: ಸದ್ಬಳಕೆಗೆ ನ್ಯಾಯವಾದಿ ಸಂತೋಷ್ ಮೂಡುಬೆಳ್ಳೆ ಕರೆ

ಉಡುಪಿ: ಬಡತನ ರೇಖೆಯ ವ್ಯಾಪ್ತಿಯಲ್ಲಿರುವ ನಾಗರೀಕರು ಅನ್ಯಾಯಕ್ಕೆ ಒಳಗಾದಾಗ ಅಗತ್ಯವಿದ್ದಲ್ಲಿ ನ್ಯಾಯಾಲಯದಲ್ಲಿರುವ ಉಚಿತ ಕಾನೂನು ಸೇವಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದಲ್ಲಿ ನ್ಯಾಯಾಲಯವೇ ಉಚಿತವಾಗಿ ವಕೀಲರನ್ನು ನಿಯುಕ್ತಿಗೊಳಿಸುತ್ತದೆ. ಈ ಸೌಲಭ್ಯವನ್ನು ನೊಂದ ಬಡವರು ಸದುಪಯೋಗಪಡಿಸಿಕೊಳ್ಳಬಹುದು ಎಂದು ಉಡುಪಿಯ ಯುವ ನ್ಯಾಯವಾದಿ ಸಂತೋಷ್ ಕುಮಾರ್ ಮೂಡುಬೆಳ್ಳೆ ತಿಳಿಸಿದರು.
ಮೇ 12ರಂದು ಬೀಡಿನಗುಡ್ಡೆಯ ‘ಶ್ರೀ ಮುಖ್ಯಪ್ರಾಣ’ದಲ್ಲಿ ನಡೆದ ಜನಪರ ಚಿಂತನ ವೇದಿಕೆಯ ‘ತಿಂಗಳ ಬೆಳಕು’ ಕಾರ್ಯಕ್ರಮದಲ್ಲಿ ‘ನ್ಯಾಯಾಲಯ ಮತ್ತು ಜನಸಾಮಾನ್ಯರು’ ವಿಷಯದಲ್ಲಿ ಅವರು ಉಪನ್ಯಾಸ ನೀಡಿದರು.
ಸುಧೀರ್ಘ ಕಾಲದಿಂದ ಪರಿಹಾರ ಕಾಣದ ವ್ಯಾಜ್ಯಗಳನ್ನು ಲೋಕ ಅದಾಲತ್ ಮೂಲಕ ಪರಿಹರಿಸಿಕೊಳ್ಳುವಂತೆ ಸಲಹೆ ನೀಡಿದ ಸಂತೋಷ್ ಕುಮಾರ್ ಮೂಡುಬೆಳ್ಳೆ ಅವರು, ಇದೀಗ ವಿವಿಧ ಕಾಯ್ದೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಹೆಚ್ಚುತ್ತಿದ್ದು, ಇದರಿಂದಾಗಿ ನ್ಯಾಯಯುತ ಪ್ರಕರಣಗಳನ್ನೂ ಅನುಮಾನದಿಂದ ನೋಡುವಂತಾಗಿದೆ. ಕಾಯ್ದೆಗಳನ್ನು ಸ್ವಾರ್ಥಕ್ಕೆ ಮತ್ತು ಧ್ವೇಷ ಸಾಧನೆಗಾಗಿ ದುರ್ಬಳಕೆ ಮಾಡಿಕೊಳ್ಳಬಾರದೆಂದು ಹೇಳಿದರು.
ಜನಪರ ಚಿಂತನ ವೇದಿಕೆಯ ಗೌರವಾಧ್ಯಕ್ಷ, ಪತ್ರಕರ್ತ ಶ್ರೀರಾಮ ದಿವಾಣ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವೆಯ ಜೊತೆಗೆ ಬದುಕು ಕಟ್ಟಿಕೊಳ್ಳಬಯಸುವ ವಿದ್ಯಾರ್ಥಿಗಳು ಎಲ್‌ಎಲ್‌ಬಿ ಮತ್ತು ನ್ಯಾಷನಲ್ ಲಾ ಸ್ಕೂಲ್ ಮೂಲಕ ಕಾನೂನು ವ್ಯಾಸಂಗ ಪಡೆದುಕೊಳ್ಳುವ ಕಡೆಗೆ ಆಸಕ್ತಿ ವಹಿಸಬೇಕು ಹಾಗೂ ಪರೀಕ್ಷೆ ಪಾಸು ಮಾಡಿಕೊಳ್ಳುವ ಮೂಲಕ ನ್ಯಾಯಾಧೀಶರಾಗುವತ್ತ ಗಮನಹರಿಸಬೇಕು ಎಂದು ಶ್ರೀರಾಮ ದಿವಾಣ ತಿಳಿಸಿದರು.
ಜನಪರ ಚಿಂತನ ವೇದಿಕೆಯ ಅಧ್ಯಕ್ಷರಾದ ಪ್ರಕಾಶ ಪೂಜಾರಿ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರ್ವಹಿಸಿದರು. ಸುಮಾ ಜಿ. ಶೆಟ್ಟಿ, ಭಾರತಿ, ಅಕ್ಷತಾ ಮೊದಲಾದವರು ಸಂವಾದದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *