Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕುಕ್ಕೆ ಕ್ಷೇತ್ರದ ಚಾರಿತ್ರಿಕ ಹಿನ್ನೆಲೆ- ಭಾಗ 25

* ಡಾ. ಮ. ಸು. ಅಚ್ಯುತ ಶರ್ಮಾ

# ಅಭೇದವನ್ನು ಸಾರುವ ಈ ಸನಾತನ ಹಿಂದೂ ಧರ್ಮವು ಶ್ರೀ ಶಂಕರ ಭಗವತ್ಪಾದರಿಂದ ಉದ್ಧರಿಸಲ್ಪಟ್ಟು ಅದು ಸ್ಥಾಯಿಯಾಗಿ ನಿಲ್ಲುವಂತೆಯೂ ಅಜ್ಙಾನದಿಂದ ಜನರು ಅದನ್ನು ಮರೆತು ಪುನಃ ಭೇದವಾದಿಗಳಾದಾಗ ಅಂಥವರಿಗೆ ಅಭೇದವನ್ನು ಸಾರುವ ಅದ್ವೈತ ತತ್ವವನ್ನು ಪುನಃ ಬೋಧಿಸಿ ಆಸ್ತಿಕತೆಯನ್ನು ಜನತೆಯಲ್ಲಿ ಜಾಗೃತಿಗೊಳಿಸುವಂತೆ ಮಾಡಿ ದೇಶದಲ್ಲಿ ಐಕಮತ್ಯವನ್ನು ಉಂಟುಮಾಡುವುದಕ್ಕಾಗಿ ಆದಿ ಶಂಕರರು ನಮ್ಮ ಭಾರತದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ವೇದಗಳನ್ನೂ, ನಾಲ್ಕು ಮಹಾ ವಾಕ್ಯಗಳನ್ನೂ ಅನುಸರಿಸಿ ನಾಲ್ಕು ತೀರ್ಥ ಸ್ಥಳಗಳಲ್ಲಿ ನಾಲ್ಕು ಮಠಗಳನ್ನೂ ಸ್ಥಾಪಿಸಿ ತನ್ನ ಮುಖ್ಯ ನಾಲ್ಕು ಶಿಷ್ಯರುಗಳನ್ನು ಅವುಗಳಲ್ಲಿ ಇರಿಸಿ ತಮ್ಮ ಉದ್ಧೇಶಗಳು ವ್ಯವಸ್ಥಿತ ರೀತಿಯಲ್ಲಿ ನೆರವೇರುವಂತೆ ಮಾಡಿದರು.

ಈ ನಾಲ್ಕು ದಿಕ್ಕುಗಳಲ್ಲಿ ಸ್ಥಾಪಿಸಲ್ಪಟ್ಟ ನಾಲ್ಕು ಪೀಠಗಳಲ್ಲಿ ಮೊದಲನೇಯದಾದ, ತೆಂಕು ದಿಕ್ಕಿನ ಪೀಠವೇ ವಿಭಾಂಡಕರೂ ಋಷ್ಯ ಷೃಂಗರೂ ತಪಸ್ಸು ಮಾಡಿಕೊಂಡಿದ್ದ ತುಂಗಭದ್ರಾ ದಡದಲ್ಲಿರುವ ಶ್ರೀ ಶೃಂಗೇರಿ ಪೀಠವು. ಇಲ್ಲಿ ಅವರ ಮೊದಲಿನ ಶ್ರೀ ಸುರೇಶ್ವಾರಾಚಾರ್ಯರನ್ನು ಇರಿಸಿ ಶ್ರೀ ಶಾರದಾ ಮಾತೆಯನ್ನು ಮಠಾದಿ ದೇವತೆಯನ್ನಾಗಿ ಮಾಡಿ ದಕ್ಷಿಣ ಭಾರತದ ಶ್ರೀ ಕಾಂಚೀ, ರಾಮೇಶ್ವರ, ತೌಳವ, ಕೇರಳ ಮೊದಲಾದ ಕನ್ಯಾಕುಮಾರಿ ಪರ್ಯಂತದ ಎಲ್ಲಾ ಸ್ಥಳಗಳ ಆಚಾರ ವಿಚಾರ ಮತ್ತು ಧರ್ಮಾಧಿಕಾರವನ್ನು ಅವರಿಗೆ ಬಿಟ್ಟುಕೊಟ್ಟು ಸನಾತನ ಧರ್ಮದ ರಕ್ಷಣೆಯನ್ನು ಕೈಗೊಂಡರು.

ಶ್ರೀ ಆದಿ ಶಂಕರರಿಗೆ ”ಶ್ರೀ ಶಂಕರಾಚಾರ್ಯರು” ಎಂಬ ಹೆಸರು ಅನ್ವರ್ಥವಾಗಿಯೇ ಬಂದಿರುತ್ತದೆ. ಹೇಗೆಂದರೆ ಭಾರತದಲ್ಲಿ ಇವರೇ ಮೊತ್ತಮೊದಲಿನ ಸನ್ಯಾಸಿಗಳಾಗಿ ಮಠಗಳನ್ನು ಸ್ಥಾಪಿಸಿ ವೈದಿಕ ಧರ್ಮ ಪ್ರಚಾರವನ್ನು ಕೈಕೊಂಡವರಾಗಿರುತ್ತಾರೆ. ಇವರು ತನ್ನ ಎಂಟನೇಯ ವರ್ಷದಲ್ಲಿ ಪೂರ್ಣಾ ನದಿಯಲ್ಲಿ ಸ್ನಾನ ಮಾಡುತ್ತಿರುವಾಗ ಇವರ ಕಾಲನ್ನು ಮೊಸಳೆಯು ಹಿಡಿದ ಸಂಕಷ್ಟ ಕಾಲದಲ್ಲಿ ತನ್ನ ತಾಯಿಯ ಒಪ್ಪಿಗೆ ಪ್ರಕಾರ ಅತುರ ಸನ್ಯಾಸವನ್ನು ಕೈಗೊಂಡದ್ದಾಗಿದೆ. ಅತುರ ಸನ್ಯಾಸಕ್ಕೆ ವಿಧಿಗಳಿಲ್ಲ. ಮನಸ್ಸಿನಲ್ಲೇ ಮಂತ್ರೋಚ್ಛಾರಣೆ ಮಾಡಿ ಆ ಮಂತ್ರದ ಪ್ರಕಾರ ತಾನು ಇನ್ನು ತನ್ನ ಜಡ ಶರೀರವು ಬೀಳುವ ವರೇಗೆ ಅನುಷ್ಠಾನದಲ್ಲಿ ಇರುತ್ತೇನೆ ಎಂಬ ಪ್ರಮಾಣ ವಚನ ಮಾಡುವುದಾಗಿದೆ.

”ಆತುರಾಣಾಂ ವಿಶೇಷೋಸ್ತಿನ ವಿಧಿರ್ನೈವಚಾಕ್ರಿಯಾಃ
ಪ್ರೇಷ ಮಾತ್ರಸ್ತು ಸನ್ಯಾಸಃ ಆತುರಾಣಾಂ ವಿಧೀಯತೆ
ಉತ್ಪನ್ನೇ ಸಂಕಟೆಘೋರೆ ಚೋರ ವ್ಯಾಘ್ರಾದಿ ಗೋಚರೇ
ಭಯ ಭೀತಸ್ಯ ಸನ್ಯಾಸಮಂಗಿರಾ ಮುನಿ ರಬ್ರವೀತ್”

ಮೇಲಿನ ಶ್ಲೋಕದಲ್ಲಿ ವಿವರಿಸಿದ ಅಂಗೀರಸ ಮುನಿಗಳ ಮಾತಿನ ಪ್ರಕಾರ ಶ್ರೀ ಶಂಕರರು ತನ್ನ ಕಷ್ಟ ಕಾಲದಲ್ಲಿ ‘ಅಭಯಂ ಸರ್ವ ಭೂತೇಭ್ಯೋಮತ್ತಃ ಸ್ವಾಹಾ’ ಎಂಬ ಮಂತ್ರವನ್ನು ಉಚ್ಛರಿಸಿ (ಮಂತ್ರಾರ್ಥ:- ಪ್ರಪಂಚದಲ್ಲಿರುವ ಸಮಸ್ತ ಭೂತಗಳಿಗೂ ಅಂದರೆ ಜೀವರಾಶಿಗಳಿಗೂ ತನ್ನಿಂದ ಅಭಯವು ಕೊಡಲ್ಪಟ್ಟಿದೆ.)

ಅದರ ಅರ್ಥವನ್ನು ಅನುಷ್ಠಾನದಲ್ಲಿ ಇರಿಸಿ ತನ್ನ ಪ್ರಮಾಣ ವಚನ ಪ್ರಕಾರ ತನ್ನ ಅಂತ್ಯದ ವರೇಗೂ ಆಚರಿಸಿಕೊಂಡು ಬಂದವರಾದುದರಿಂದ ಅವರಿಗೆ ‘ಆಚಾರ್ಯ’ ಎಂಬ ಹೆಸರು ಬಂದದ್ದಾಗಿದೆ.

ಮುಂದುವರಿಯುವುದು

Leave a Reply

Your email address will not be published. Required fields are marked *