Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಕುಕ್ಕೆ ಕ್ಷೇತ್ರದ ಚಾರಿತ್ರಿಕ ಹಿನ್ನೆಲೆ- ಭಾಗ 26

* ಡಾ. ಮ. ಸು. ಅಚ್ಚುತ ಶರ್ಮಾ

# ಆಚಿನೋತಿ ಚ ಶಾಸ್ತ್ರಾರ್ಥಮಾಚಾರೇ ಸ್ಥಾಪಯತ್ಯಪಿ
ಸ್ವಯಮಪ್ಯಾಚರೇದ್ಯಸ್ತು ಸ ಆಚಾರ್ಯ ಇತಿಸ್ಮೃತಃ
ಕೃತೇತು ಭಗವಾನ್ ಸತ್ಯಸ್ತ್ರೇತಾಯಾಂ ದತ್ತ ಏವಚ
ದ್ವಾಪರೇ ಭಗವಾನ್ ವ್ಯಾಸಃ ಕಲೌ ಶ್ರೀ ಶಂಕರ ಸ್ವಯಂ//

ವೈದಿಕ ಧರ್ಮ ಶಾಸ್ತ್ರರ್ಥ ಪ್ರಕಾರ ಕೃತ, ತ್ರೇತಾ, ದ್ವಾಪರದಲ್ಲಿ ಸತ್ಯ, ದತ್ತಾತ್ರೇಯ, ವ್ಯಾಸರು ವೈದಿಕ ಧರ್ಮಾಚರಣೆಯನ್ನು ಅನುಷ್ಟಾನದಲ್ಲಿಟ್ಟುಕೊಂಡಿದ್ದಂತೆ, ಕಲಿಯುಗದಲ್ಲಿ ಶ್ರೀ ಶಂಕರರು ತನ್ನ ಸನ್ಯಾಸ ಧರ್ಮದ ಆಚರಣೆಯನ್ನು ಶಾಸ್ತ್ರೀಯವಾಗಿ ಅಕ್ಷರಶಃ ತ್ರಿಕರಣ ಶುದ್ಧದಿಂದ ಪರಿಪಾಲಿಸಿಕೊಂಡು ಬಂದದ್ದರಿಂದ ಅವರಿಗೆ ಆಚಾರ್ಯರೆಂಬ ಬಿರುದು ಬಂದದ್ದಾಗಿದೆ. ಅದೂ ಅಲ್ಲದೆ ”ಶಂಕರೋತೀತಿ ಶಂಕರಃ” ಎಂಬ ಪದದ ಅರ್ಥದಂತೆ ಅವರ ಅಲ್ಪ ಜೀವಮಾನವನ್ನು ಜನತೆಯ ಕಲ್ಯಾಣಕ್ಕಾಗಿಯೇ ವ್ಯಯಿಸಿದವರಾಗಿರುತ್ತಾರೆ.

ಜ್ಯೋತಿಷ್ಯ ಶಾಸ್ತ್ರ ಪ್ರಕಾರವೂ ಶಂಕರ ಎಂಬ ಅವರ ಹೆಸರು, ರ = ೨, ಕ = ೧, ಶ = ೫, ಅಂದರೆ ಎರಡನೇ ಮಾಸವಾದ ವೈಶಾಖದಲ್ಲಿ ಮೊದಲನೇ ಶುಕ್ಲ ಪಕ್ಷದ ಐದನೇ ಪಂಚಮೀ ತಿಥಿಯಲ್ಲಿ ಅವರ ಜನನವು ಆಗಿರುತ್ತದೆ ಎಂಬುದನ್ನು ಸೂಚಿಸುತ್ತದೆ. ಈ ಎಲ್ಲಾ ಕಾರಣಗಳಿಂದ ಅವರ ‘ಶ್ರೀ ಶಂಕರಾಚಾರ್ಯ’ ಎಂಬ ಹೆಸರು ಅನ್ವರ್ಥವಾಗಿಯೇ ಇದೆ ಎಂಬುದನ್ನು ನಾವು ತಿಳಿದುಕೊಳ್ಳಬಹುದು.

ಈ ರೀತಿ ಅಭೇದವನ್ನು ಸಾರುವ ಅದ್ವೈತ ಪ್ರತಿಪಾದಕ ತತ್ವವನ್ನು ಭಾರತದ ಅಧ್ಯಂತ ಜನತೆಗೆ ಬೋಧಿಸಿ ಭಾರತದಲ್ಲಿ ಶಾಂತಿಯನ್ನು ನೆಲೆಗೊಳಿಸಿದ ಆದಿ ಶಂಕರ ಭಗವತ್ಪಾದರಿಗೆ ಆಗಿನ ಸರ್ವ ಮತದವರೂ ಅವರನ್ನು ಜಗದ್ಗುರು ಎಂಬ ಬಿರುದನ್ನು ಕೊಟ್ಟು ಅಭಿನಂದಿಸಿದ್ದರು. ಈ ಜಗದ್ಗುರು ಎಂಬ ಬಿರುದು ಇವರು ಸಾರುವ ತತ್ವಕ್ಕೆ ಅನ್ವರ್ಥವಾಗಿರುತ್ತದೆ. ಹೇಗೆಂದರೆ, ‘ಜಗತಾಂ ಗುರುಃ ಜಗದ್ಗರುಃ’ ಅಂದರೆ ‘ಜಗತ್ (ಜ+ಗತ್)= ‘ಜ’ ಅಂದರೆ ಹುಟ್ಟುವುದು. ”ಗತ್” ಅಂದರೆ ಹೋಗುವುದು ಅಂದರೆ ನೀರಿನಲ್ಲಿ ಹುಟ್ಟುವ ನೀರ್‍ಗುಳ್ಳೆಗಳಂತೆಯೂ, ಸಮುದ್ರದಲ್ಲಿ ಬಂದು ಹೋಗುವ ಅಲೆಗಳಂತೆಯೂ ಕಂಡು, ಒಡನೆ ಕಾಣದೆ ಹೋಗುವುದು ಎಂದರ್ಥ.

ಈ ಬ್ರಹ್ಮಾಂಡದಲ್ಲಿ ಕಾಣುವ ನಾಮ ರೂಪಕವಾದ ಸರ್ವ ಚರಾಚರ ವಸ್ತುಗಳೂ ಕಂಡ ಕಾಣದೇ ಹೋಗುವುವುಗಳೂ, ಅಂದರೆ ನಿರ್ವಿಕಲ್ಪ ಬ್ರಹ್ಮದಲ್ಲಿ ಈ ವಿಶ್ವದ ಚರಾಚರ ವಸ್ತುಗಳು ರೂಪ ನಾಮಗಳಿಂದ ಭ್ರಮಿಸಲ್ಪಡುವ ಮಿಥ್ಯೆಯು. ಈ ಮಿಥ್ಯೆಯೇ ಜಗತ್ ರೂಪವಾಗಿ ನಾಮ ರೂಪವನ್ನು ಹೊಂದಿದ ಮನುಷ್ಯರಿಂದ ಭ್ರಮಿಸಲ್ಪಡುತ್ತದೆ.

ಯತಾರ್ಥವಾಗಿ ಪರ್ಯಾಲೋಚಿಸಿದರೆ ಬ್ರಹ್ಮದಲ್ಲಿ ಜಗತ್ ಎಂಬ ಭ್ರಮೆಯೇ ಹೊರತು ಬ್ರಹ್ಮ ಒಂದಲ್ಲದೆ ಬೇರೆ ವಸ್ತುವು ಇಲ್ಲ ಎಂಬ ಅರ್ಥವನ್ನೇ ”ಜಗತ್” ಎಂಬ ಪದವು ತೋರಿಸಿಕೊಡುತ್ತದೆ. ಇಂತಹ ಭ್ರಮೆಯನ್ನು ”ತತ್ವಮಸಿ” ”ಆಯಮಾತ್ಮಾಬ್ರಹ್ಮ” ”ಪ್ರಜ್ಞಾನಂಬ್ರಹ್ಮ” ”ಅಹಂಬ್ರಹ್ಮಾಸ್ಮಿ” ಎಂಬ ನಾಲ್ಕು ಮಹಾ ವಾಕ್ಯಗಳ ತಾತ್ವೀಕವಾದ ಅರ್ಥ ಬೋಧನೆಯಿಂದ ನಿರಸನ ಮಾಡಿ ಮಾನವನ ಮನಸ್ಸಿಗೆ ಶಾಂತಿ ತರುವವನೇ ”ಜಗದ್ಗುರುವು”.

ಮುಂದುವರಿಯುವುದು

Leave a Reply

Your email address will not be published. Required fields are marked *