Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ವೈದ್ಯೋ ನಾರಾಯಣೋ ಹರಿಃ…

# ವೈದ್ಯೋ ನಾರಾಯಣೋ ಹರಿಃ … ಎಂಬುದು ಬಹಳ ಪ್ರಚಲಿತವಾದ ಒಂದು ಉಕ್ತಿ. ಇವತ್ತು ನಾನು ‘ಮನೋದರ್ಪಣ’ದಲ್ಲಿ ವೈದ್ಯರನ್ನು ಕಾಡುವ ಸಾಮಾನ್ಯ ಮಾನಸಿಕ ಸಮಸ್ಯೆಗಳ ಬಗ್ಗೆ ಬರೆಯುವ ಅಂದುಕೊಂಡೆ. ಕಾರಣ ಏನೆಂದರೆ, ವೈದ್ಯರುಗಳ ಮೇಲೆ ದೇಶಾದ್ಯಂತ ನಡೆಯುತ್ತಾ ಇರುವ ದಾಳಿಗಳನ್ನು ನೋಡಿದಾಗ ವೈದ್ಯರ ಮನಸ್ಸಿನ ತಲ್ಲಣಗಳ ಕುರಿತು ಒಬ್ಬ ವೈದ್ಯನಾಗಿ ಬರೆಯುವುದು ಉಚಿತ ಎಂದು ಎನಿಸಿತು.

ಇಂಗ್ಲೆಂಡ್ ದೇಶದಲ್ಲಿ ನಡೆದಿರುವ ಒಂದು ಸಂಶೋಧನೆಯ ಪ್ರಕಾರ  ಒತ್ತಡಕ್ಕೊಳಗಾದ ಹಲವು ವೈದ್ಯರು ಮದ್ಯಪಾನ, ಅತಿಯಾದ ತಿನ್ನುವಿಕೆ ಮತ್ತು ನೋವು ನಿವಾರಕ ಯಾ ಖಿನ್ನತೆ ನಿವಾರಕ ಯಾ ನಿದ್ರೆ ಕಾರಕ ಮಾತ್ರೆಗಳನ್ನು ತಿನ್ನುವ ಚಟಕ್ಕೆ ಬಲಿಯಾಗಿದ್ದಾರಂತೆ.

ಹಲವರು ನಿದ್ರಾಹೀನತೆ, ಕಾರಣ ಇಲ್ಲದೆ ಸುಸ್ತು, ತಲೆನೋವು…  ಸಮಸ್ಯೆಗಳಿಗೆ ಒಳಗಾಗಿ ತಮ್ಮ ಕೆಲಸಗಳನ್ನು ಬಿಟ್ಟು ಹೋಗುತ್ತಿದ್ದಾರಂತೆ. ಇಲ್ಲವೇ ಕೆಲಸದಲ್ಲಿ ನಿಶ್ಚೇತನಗೊಂಡಿದ್ದಾರಂತೆ. ಇವರ ಸ್ಥಿತಿಯನ್ನು ಇಂಗ್ಲಿಷಿನಲ್ಲಿ burnout ಅಂದರೆ ಕ್ಯಾಂಡಲ್ ಒಂದು ಉರಿದು ಉರಿದು ತನ್ನ ಜೀವನವನ್ನು ಬೇರೆಯವರಿಗೆ ಬೆಳಕು ಕೊಡಲು ಸುಟ್ಟು ಹೋದ ಹಾಗೆ… ಎಂದು ವಿವರಿಸುತ್ತಾರೆ.

55 ಶೇ. ವೈದ್ಯರು ಇಪ್ಪತ್ತು ವರ್ಷಗಳ ಸರ್ವಿಸ್ ಮಾಡುವಾಗ burnout  ಆಗುತ್ತಿದ್ದಾರಂತೆ. ಶೇಕಡಾ ಅರುವತ್ತು ವೈದ್ಯರು ಮುಗಿಯದ ಕೆಲಸಗಳ ಬಗ್ಗೆ ಚಿಂತೆಯಿಂದ ಮಲಗಲು ಹೋದರೆ, ನಲವತ್ತೊಂಭತ್ತು ಶೇಕಡ ವೈದ್ಯರು ಮಾಡದ ಕೆಲಸಗಳ ಬಗ್ಗೆ ಯೋಚನೆ ಮಾಡಿ ನಿದ್ರಾ ಹೀನರಾಗುತ್ತಾರಂತೆ. ಮದ್ಯಪಾನ ಸೇವನೆ, ನಿದ್ರಾ ಮಾತ್ರೆಗಳ ಸೇವನೆ, ನೋವು ನಿವಾರಕಗಳ ಸೇವನೆ, ಅತಿಯಾಗಿ ತಿನ್ನುವುದು, ಅತಿಯಾಗಿ ತಿಂದೆ ಎಂದು ಬೇಸರ ಮಾಡಿಕೊಳ್ಳುವುದು ಇವು ಕೂಡ ವೈದ್ಯರುಗಳಲ್ಲಿ ಹೆಚ್ಚು ಎಂಬುದನ್ನು ಸಂಶೋಧನೆ ತಿಳಿಸುತ್ತದೆ. ಒತ್ತಡದಿಂದ ಬೆನ್ನು ನೋವು, ಕಣ್ಣು ಉರಿ, ಎದೆ ಉರಿ, ವಾಂತಿ ಬಂದ ಹಾಗೆ ಆಗುವುದು ಮುಂತಾದ ಒತ್ತಡದ ಬೆನೆಗಳಿಂದ ವೈದ್ಯರುಗಳು ಕೂಡ ಬಳಲುತ್ತಾರೆ ಎಂದು ಸಂಶೋಧನೆ ತಿಳಿಸುತ್ತದೆ.

ಇವೆಲ್ಲ ಇಂಗ್ಲೆಂಡ್ ದೇಶದ ಕಥೆ. ಇಲ್ಲಿ ನಮ್ಮಲ್ಲಿ ನಾನೂರ ನಲವತ್ತು ಜನರಿಗೆ ಒಬ್ಬ ವೈದ್ಯ ಇದ್ದಾನೆ. ಇಲ್ಲಿ ಕೆಲಸದ ಒತ್ತಡ, ದಾದಿಗಳ ಕೊರತೆ ಮುಂತಾದ ಕಾರಣಗಳಿಂದ ವೈದ್ಯರಲ್ಲಿ ಒತ್ತಡ ಎಂದು ಜನರಿಗೆ ವೈದ್ಯಕೀಯ ಸೇವೆ ನೀಡುವ NHS ಸಂಸ್ಥೆಯ ಸಂಶೋಧನೆಗಳು ತಿಳಿಸುತ್ತವೆ. ಹಾಗಿದ್ದರೆ ಒಂದು ಸಾವಿರದ ಆರುನೂರು ಜನಕ್ಕೆ ಒಬ್ಬ ವೈದ್ಯರಿರುವ ಭಾರತದ ಪರಿಸ್ಥಿತಿ ಹೇಗಿರಬಹುದೆಂದು ಯೋಚನೆ ಮಾಡಿ.

೧) ವೈದ್ಯರುಗಳು ಕಡಿಮೆ ಇರುವಾಗ ಅವರ ನೋಡಲು ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿ ಜಾಸ್ತಿ ಇರುತ್ತದೆ. ೨) ಭಾರತದಲ್ಲಿ ಕುಟುಂಬ ವೈದ್ಯರು, ಹೆಸರಾಂತ ಸ್ಪೆಷಲಿಸ್ಟ್ ವೈದ್ಯರು ಸುಮಾರು ಹನ್ನೆರಡು ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ೩) ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರುಗಳು ರೋಗಿಗಳನ್ನು ನೋಡುವುದಲ್ಲದೇ ಆಡಳಿತಾತ್ಮಕ ವಿಷಯಗಳು, ರೋಗ ಬಾರದ ಹಾಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು, ಸರ್ಕಾರಿ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನದ ಮೀಟಿಂಗ್ ಗಳು, ಮಾಜಿ ಪ್ರಧಾನಿಯಿಂದ ತೊಡಗಿ ನಿವೃತ್ತ ಜಡ್ಜ್ ಗಳನ್ನು ಕೂಡ ರಕ್ಷಣೆ ಮಾಡುವ vip ಡ್ಯೂಟಿ ಮುಂತಾದವುಗಳಲ್ಲಿ ಸರ್ಕಾರದ ನಿಯಮದಂತೆ ಭಾಗವಹಿಸಲೇ ಬೇಕಾಗುತ್ತದೆ. ೪) ವೈದ್ಯಕೀಯ ಕಾಲೇಜುಗಳು ಸರ್ಕಾರಿ ಆಗಲಿ ಖಾಸಗಿಯಾಗಿ ಆಗಲಿ, ಇಲ್ಲಿಯ ವೈದ್ಯರುಗಳು ವೈದ್ಯ ವಿದ್ಯಾರ್ಥಿಗಳಿಗೆ ಕ್ಲಾಸ್ ತೆಗೆದುಕೊಳ್ಳುವುದು, ವೈದ್ಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದು, ತಮ್ಮ ಪದೋನ್ನತಿಗಾಗಿ ಕಾನ್ಫರೆನ್ಸ್ ಗಳಿಗೆ ಪೇಪರ್ ಗಳನ್ನು ಬರೆಯುವುದು, ಸಂಶೋಧನೆ ನಡೆಸುವುದು ಮುಂತಾದವುಗಳನ್ನು ಮಾಡಬೇಕಾಗುತ್ತದೆ. ೫) ಖಾಸಗಿ ಆಸ್ಪತ್ರೆಗಳ ವೈದ್ಯರು ತಾವೇ ಆಸ್ಪತ್ರೆಗಳನ್ನು ತೆಗೆದಿದ್ದರೆ ಮಾಡಿರುವ ಸಾಲ ಸೋಲುಗಳ ಬಗ್ಗೆ ಯೋಚನೆ, ಈ ನಿಮಿತ್ತ ಹೆಚ್ಚು ರೋಗಿಗಳನ್ನು ನೋಡಿ ಆ ಸಾಲ ತೀರಿಸುವ ಯೋಜನೆ, ಹಾಗೆಯೇ ತಮ್ಮ ಕೆಲಸದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು, ರೋಗದ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮಗಳು… ಹೀಗೆ ಹಲವಾರು ಕಾರ್ಯಕ್ರಮಗಳನ್ನು ಮಾಡಬೇಕಾಗುತ್ತದೆ.

ಈ ಒತ್ತಡಗಳ ನಡುವೆ, ಹೆಚ್ಚಾಗುತ್ತಾ ಇರುವುದೆಂದರೆ ವೈದ್ಯ ಹಾಗೂ ರೋಗಿಯ ಸಂಬಂಧದಲ್ಲಿ ಉಂಟಾಗುತ್ತಿರುವ ಬಿರುಕುಗಳು, ಹೆಚ್ಚಾಗುತ್ತಿರುವ ವೈದ್ಯಕೀಯ ನಿರ್ಲಕ್ಷ್ಯದ ಕೇಸುಗಳು, ಪೀತ ಪತ್ರಿಕೆಗಳು ಮತ್ತು ಪೀತ ಟಿವಿ ಮಾಧ್ಯಮಗಳ ದಬ್ಬಾಳಿಕೆ. ಮೊದಲೇ ಏಕತಾನತೆಯಿಂದ ಕೆಲಸದ ಬಗ್ಗೆ ರೋಸಿ ಹೋಗಿರುವ ವೈದ್ಯರುಗಳು ಈಗ ಮಾಧ್ಯಮಗಳ ಬೆದರಿಸುವ ತಂತ್ರಗಳು ಮತ್ತು ರೋಗಿಯ ಆರೈಕೆದಾರರಿಂದ ಪೆಟ್ಟು ತಿನ್ನುವ ಪರಿಸ್ಥಿತಿ ತಲುಪಿ ಇನ್ನಷ್ಟು ಒತ್ತಡಕ್ಕೆ ಒಳಗಾಗಿದ್ದಾರೆ. ಇದರ ಅರ್ಥ ವೈದ್ಯರೆಲ್ಲ ದೈವಾಂಶ ಸಂಭೂತರು, ಯಾವುದೇ ತಪ್ಪುಗಳನ್ನು ಮಾಡುವುದಿಲ್ಲ ಎಂದು ನಾನು ಹೇಳುತ್ತಿಲ್ಲ.

ವೈದ್ಯರುಗಳಿಂದಲೂ ಕೆಲವೊಮ್ಮೆ ನಿರ್ಲಕ್ಷ್ಯಗಳು ಉಂಟಾಗುತ್ತವೆ. ಹಾಗೆಯೇ ಎಲ್ಲ ವೃತ್ತಿಗಳಲ್ಲಿ ಇರುವ ಹಾಗೆ ವೈದ್ಯ ವೃತ್ತಿಯಲ್ಲೂ ಕೆಲವು ಕಪ್ಪು ಕುರಿಗಳು ಇದ್ದಾವೆ. ಆದರೆ ಈ ತಪ್ಪುಗಳಾಗಲಿ, ಕಪ್ಪು ಕುರಿಗಳಾಗಲಿ ಅವುಗಳನ್ನೇ ಇಟ್ಟುಕೊಂಡು “ಎಲ್ಲ ವೈದ್ಯರು ಹಣ ದೋಚುವವರು”, ”ವೈದ್ಯರಿಗೆ ಮನುಷ್ಯತ್ವವೇ ಇಲ್ಲ”, ”ವೈದ್ಯಕೀಯ ವೃತ್ತಿ ತನ್ನ ಉದಾತ್ತತೆಯನ್ನು ಕಳೆದುಕೊಂಡಿದೆ” ಎಂದು ಸಾಮಾನ್ಯೀಕರಿಸಿ ಎಲ್ಲಾ ವೈದ್ಯರುಗಳನ್ನು ತೆಗಳುತ್ತಿರುವ ಜನಸಾಮಾನ್ಯರು (ಕೆಳಗಿನ ಟ್ವೀಟ್ ಗಳನ್ನು ನೋಡಿ ) ವೈದ್ಯರೆಲ್ಲ ಖಳನಾಯಕರು ಎಂಬಂತೆ ಬಿಂಬಿಸುವ ಕೆಲವು ನಾಟಕ ಮಾಡುವ ರಾಜಕಾರಣಿಗಳು, ಸಣ್ಣ ಸಣ್ಣ ವೈದ್ಯಕೀಯ ತಪ್ಪುಗಳನ್ನು ಏನೂ ತಿಳಿಯದ ಜನರು ಸಾಮಾಜಿಕ ಜಾಲತಾಣದಲ್ಲಿ ಏನೇನೋ ಬರೆದು ವೈದ್ಯರ ಮಾನಹಾನಿ ಮಾಡುವುದು. ಇವೆಲ್ಲರ ಪ್ರತಿಫಲವಾಗಿ ಇಂದು ಬಂಗಾಳದಲ್ಲಿ ವೈದ್ಯರ ಮೇಲೆ ಹಲ್ಲೆ ನಡೆದು ವೈದ್ಯರೆಲ್ಲ ರಸ್ತೆಗಿಳಿಯುವ ಒಂದು ಪರಿಸ್ಥಿತಿ ಭಾರತ ದೇಶದಲ್ಲಿ ಬಂದಿದೆ.

ಟ್ವೀಟ್

ಎಪ್ಪತ್ತೈದು ವರ್ಷದ ರೋಗಿಯೊಬ್ಬರು ಸತ್ತುಹೋದರು ಎಂದು ಅವರ ಮನೆಯವರು ಇನ್ನೂರು ಜನ ಬಂದು ಕೆಲಸದಲ್ಲಿ ನಿರತನಾಗಿದ್ದ ವಿದ್ಯಾರ್ಥಿ ವೈದ್ಯನಿಗೆ ಹಿಗ್ಗಾಮುಗ್ಗಾ ಥಳಿಸಿ ಆತ ಮಾರಣಾಂತಿಕ ಪರಿಸ್ಥಿತಿಗೆ ತಲುಪಿದ್ದಾನೆ. ಇದರಿಂದ ರೊಚ್ಚಿಗೆದ್ದ ಅಲ್ಲಿಯ ವೈದ್ಯರು ತಮ್ಮ ಕೆಲಸವನ್ನು ತ್ಯಜಿಸಿದ್ದರೆ ಅವರಿಗೆ ಬೆಂಬಲವಾಗಿ ದೇಶಾದ್ಯಂತ ವೈದ್ಯರುಗಳು ಹದಿನೇಳನೇ ತಾರೀಖಿನಂದು  ರಸ್ತೆಗಿಳಿಯುತ್ತಿದ್ದಾರೆ. ಈಗ ಹಲವಾರು ಖಾಸಗಿ ಆಸ್ಪತ್ರೆಗಳಲ್ಲಿ ಇಂತಹ ಪರಿಸ್ಥಿತಿಗಳನ್ನು ನಿಭಾಯಿಸಲು ಬಾಕ್ಸರ್ ಗಳು, ಬೌನ್ಸರ್ ಗಳು ಇದ್ದಾರಂತೆ. ವೈದ್ಯರುಗಳು ಕೂಡ ತೀವ್ರ ತೊಂದರೆಯಲ್ಲಿರುವ ರೋಗಿಗಳನ್ನು ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಅಟ್ಟುತ್ತಿದ್ದಾರೆ. ಒಟ್ಟಿನಲ್ಲಿ ಸಮಸ್ಯೆಯಾಗುತ್ತಿರುವುದು ಜನಸಾಮಾನ್ಯನಿಗೆ.

 

ಗಾಯಾಳು ಯುವ ವೈದ್ಯರು

ಇದರ ಪರಿಣಾಮವಾಗಿಯೇ ವೈದ್ಯಕೀಯ ಸೇವೆಗಳು ಬಹಳಷ್ಟು  ದುಬಾರಿಯಾಗುತ್ತಿದ್ದರೆ, ಹೊಸ ವೈದ್ಯರುಗಳು ಭಾರತ ದೇಶದಲ್ಲಿ ಪ್ರಾಕ್ಟೀಸ್ ಮಾಡಲು ಹೆದರುವ ಪರಿಸ್ಥಿತಿ ಉಂಟಾಗಿದೆ. ಹಾಗಿದ್ದರೆ ಇದಕ್ಕೆಲ್ಲ ಪರಿಹಾರವೇನು ?

ವೈದ್ಯಕೀಯ ವೃತ್ತಿ ತನ್ನ ಉದಾತ್ತತೆಯನ್ನು ಉಳಿಸಿಕೊಳ್ಳಬೇಕಾದರೆ ವೈದ್ಯಕೀಯ ಶಿಕ್ಷಣ ಅಗ್ಗವಾಗಿ ಬೇಕು. ಇವತ್ತು ಸರ್ಕಾರಿ ಕಾಲೇಜುಗಳಲ್ಲಿ ಇಪ್ಪತ್ತರಿಂದ ಅರುವತ್ತು ಸಾವಿರದವರೆಗೆ ಒಂದು ವರ್ಷಕ್ಕೆ ಎಂಬಿಬಿಎಸ್ ವಿದ್ಯಾರ್ಥಿ ಕಟ್ಟಬೇಕಾದರೆ, ಖಾಸಗಿ ಕಾಲೇಜುಗಳಲ್ಲಿ ಒಂದು ಲಕ್ಷದಿಂದ ನಾಲ್ಕು ಲಕ್ಷದಿಂದ ಹದಿಮೂರು ಲಕ್ಷದವರೆಗೆ ಒಂದು ವರ್ಷದ ಶಿಕ್ಷಣಕ್ಕಾಗಿ ಹಣ ತೆರಬೇಕಾಗುತ್ತದೆ. ಅರುವತ್ತೈದು ಲಕ್ಷ ಖರ್ಚು ಮಾಡಿ ಎಂಬಿಬಿಎಸ್ ಮಾಡಿದ ವಿದ್ಯಾರ್ಥಿ ಜನರ ಸೇವೆಗೆ ಬಂದರೆ ಆತನ ಪಡೆದುಕೊಂಡ ಶಿಕ್ಷಣ ಲೋನನ್ನು ಕಟ್ಟುವವರು ಯಾರು ? ಇದನ್ನು ಯೋಚಿಸಿ. ಇನ್ನು ಸ್ನಾತಕೋತ್ತರ ಪದವಿ ಮಾಡುವಾಗ ಸರ್ಕಾರಿ ಕಾಲೇಜುಗಳಲ್ಲಿ ಅರುವತ್ತು ಸಾವಿರದಿಂದ ಒಂದು ಲಕ್ಷದವರೆಗೆ ಖರ್ಚು ಮಾಡಿದರೆ, ಖಾಸಗಿ ಕಾಲೇಜುಗಳಲ್ಲಿ ಹತ್ತು ಲಕ್ಷದಿಂದ ಮೂವತ್ತು ಲಕ್ಷದವರೆಗೆ ವರ್ಷಕ್ಕೆ ಖರ್ಚು ಮಾಡಬೇಕಾಗುತ್ತದೆ. ಈ ಶಿಕ್ಷಣಕ್ಕೆ ಮಾಡಿದ ಸಾಲವನ್ನು ತೀರಿಸಲು ಅವನೇನು ಮಾಡುತ್ತಾನೆ ? ಸರ್ಕಾರ ಇದನ್ನು ಮೊದಲು ಯೋಚನೆ ಮಾಡಬೇಕು. ವೈದ್ಯಕೀಯ ಶಿಕ್ಷಣವನ್ನು ಅಗ್ಗ ಮಾಡಬೇಕು. ಅಗತ್ಯ ಬಿದ್ದರೆ ದೇಶದ ಖಾಸಗಿ ಕಾಲೇಜುಗಳನ್ನೆಲ್ಲಾ ರಾಷ್ಟ್ರೀಕೃತಗೊಳಿಸಿ ಸರ್ಕಾರವೇ ನಡೆಸಬೇಕು. ಇದು ಸಾಧ್ಯವೇ ?

ಇನ್ನು ಸರ್ಕಾರಿ ಹಣದಿಂದ ಕಲಿತ ವಿದ್ಯಾರ್ಥಿಗಳು ಸರ್ಕಾರಿ ಸೇವೆಗೆ ಬಂದರೆ  ಅಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲ. ವೈದ್ಯರಿದ್ದರೆ ದಾದಿ ಇಲ್ಲ, ದಾದಿ ಇದ್ದರೆ ಫಾರ್ಮಸಿಸ್ಟ್ ಇಲ್ಲ. ಎಷ್ಟೋ ಸರ್ಕಾರಿ ಆಸ್ಪತ್ರೆಗಳಲ್ಲಿ ಗ್ರೂಪ್ “ಡಿ”ಅವರೇ ಮಾತ್ರೆಯನ್ನು ಕೊಡುತ್ತಾರೆ. ಗ್ರೂಪ್ ಡಿ ಇದ್ದರೆ ಮಾತ್ರೆಗಳು ಇಲ್ಲ, ಮಾತ್ರೆ ಇದ್ದರೆ ಇಂಜೆಕ್ಷನ್ ಗಳಿಲ್ಲ. ಸಮಸ್ಯೆಯಾದರೆ ಬೈಗಳು ವೈದ್ಯನಿಗೆ. ಮಾತ್ರೆಗಳನ್ನು ಸಿಗುವ ಹಾಗೆ ನೋಡಿಕೊಳ್ಳದ ಅಧಿಕಾರಿಗಳು, ಮಂತ್ರಿಗಳು ಜ್ವರದಿಂದ ಬಳಲುತ್ತಿರುವವರಿಗೆ ಬೇಕಾದ ಆಂಟಿ ಬಯೋಟಿಕ್ ಬರೆದುಕೊಟ್ಟ ವೈದ್ಯನಿಗೆ ಛೀಮಾರಿ ಹಾಕುತ್ತಾರೆ. ಹೊರಗೆ ಬರೆದು ಕೊಟ್ಟಿದ್ದು ಏಕೆ ಎಂದು ? ಹಾಗಿರುವಾಗ ಸರ್ಕಾರಿ ಖರ್ಚಿನಲ್ಲಿ ಕಲಿತ ವೈದ್ಯನೊಬ್ಬ ಈ ಸರ್ಕಾರಿ ಆಸ್ಪತ್ರೆಯಲ್ಲಿ ಹೇಗೆ ಕೆಲಸ ಮಾಡುತ್ತಾನೆ ? ಈ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರುಗಳ ಪಾಡು ಹನ್ನೊಂದು. ಸಾವಿರ ಜನರಿಗೆ ಒಬ್ಬ ಸರ್ಕಾರಿ ವೈದ್ಯ ಈ ದೇಶದಲ್ಲಿ ಇದ್ದಾನೆ. ಆತನಿಂದ ನೀವು ಏನನ್ನು ನಿರೀಕ್ಷಿಸಬಹುದು ? ಆತ ಸರ್ಕಾರಿ ಆಸ್ಪತ್ರೆಗಳಲ್ಲಿ ದುಡಿಯುವ ಒಬ್ಬ ಕತ್ತೆಯಂತೆ ಆಗಿ ಹೋಗಿದ್ದಾನೆ.

ಇನ್ನು ಕಾರ್ಪೊರೇಟ್ ಆಸ್ಪತ್ರೆಗಳ ಕಥೆ ಬೇರೆಯೇ. ದೊಡ್ಡ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಹೋಟೆಲ್ ಗಳನ್ನು, ಶಿಕ್ಷಣ ಸಂಸ್ಥೆಗಳನ್ನು ನಡೆಸುವ ಹಾಗೆ ಈಗ ಆಸ್ಪತ್ರೆಗಳನ್ನು ನಡೆಸಲು ಶುರು ಮಾಡಿದ್ದಾರೆ. ಹೊಸದಾಗಿ ಬಂದ ವೈದ್ಯರಿಗೆ ಕೈತುಂಬ ಸಂಬಳ ಕೊಡುತ್ತಾರೆ. ಆದರೆ ಅದಕ್ಕೆ ತಕ್ಕಂತೆ ಅವನು ರೋಗಿಗಳನ್ನು ಹುಡುಕಿಕೊಳ್ಳಬೇಕು. ಹಾಗೆಯೇ ರೋಗಿಗಳ ಚಿಕಿತ್ಸೆಯನ್ನು ಕೂಡ ಮಾಡಬೇಕು. ಹಲವಾರು ಕಾರ್ಪೊರೇಟ್ ವೈದ್ಯರುಗಳಿಗೆ ಟಾರ್ಗೆಟ್ ಗಳಿದೆ ಅನ್ನುವುದು ಸುಳ್ಳು ವಿಷಯವಲ್ಲ. ಹಾಗಿದ್ದರೆ ಅವರು ಏನು ಮಾಡಿಯಾರು ನೀವೇ ಯೋಚಿಸಿ ? ಈ ಆಸ್ಪತ್ರೆಗಳನ್ನು ನಡೆಸುತ್ತಾ ಇರುವವರು ಯಾರು ಎಂದು ಗಮನಿಸಿ. ಎಲ್ಲ ದೊಡ್ಡ ದೊಡ್ಡ ಮಂತ್ರಿಗಳ ಅಳಿಯಂದಿರು, ನಿವೃತ್ತ ಜಡ್ಜ್ ಗಳ ಮಕ್ಕಳು, ದೊಡ್ಡ ದೊಡ್ಡ ಕಾರ್ಖಾನೆಗಳನ್ನು ನಡೆಸುವ ಶ್ರೀಮಂತರು. ಅವರಿಗೆ ಆಸ್ಪತ್ರೆ ಕೂಡಾ ಒಂದು ಉದ್ಯಮವೇ. ಈ ಉದ್ಯಮದಲ್ಲಿ ಇವರಿಗೆ ಸಹಾಯ ಮಾಡಲು ಸರ್ಕಾರಿ ಜಾಗವನ್ನು ಬೇಕಾಬಿಟ್ಟಿಯಾಗಿ ಕೊಡುವ ಸಮಾಜವಾದಿ ರಾಜಕಾರಣಿಗಳು ಕೂಡ ಇದ್ದಾರೆ. ಅವರನ್ನು ಹೇಳುವವರಿಲ್ಲ ಕೇಳುವವರಿಲ್ಲ.

ಈ ಪರಿಸ್ಥಿತಿಯಲ್ಲಿ ಕೂಡ ಎದೆಗುಂದದೇ ಕೆಲಸ ಮಾಡುತ್ತಿರುವ ಹಲವು ವೈದ್ಯರುಗಳು ಸರ್ಕಾರಿ ಹಾಗೂ ಖಾಸಗಿ ಸ್ತರದಲ್ಲಿ ಇದ್ದಾರೆ. ಈ ಬಗ್ಗೆ ಯಾವುದೇ ಸಂಶಯ ಬೇಡ. ಜನಸಾಮಾನ್ಯರು ತಿಳಿದುಕೊಳ್ಳಬೇಕಾದ ವಿಷಯವೆಂದರೆ, ನಿಮ್ಮನ್ನು ನೋಡಿಕೊಳ್ಳುವ ಈ ವೈದ್ಯರುಗಳ ಸಾಮಾನ್ಯ ಜೀವಿತಾವಧಿ ನಿಮಗಿಂತಲೂ ಸುಮಾರು ಆರರಿಂದ ಎಂಟು ವರ್ಷ ಕಡಿಮೆ. ವೈದ್ಯೋ ನಾರಾಯಣೋ ಹರಿಃ ಎಂಬ ಉಕ್ತಿ ಎಷ್ಟರ ಮಟ್ಟಿಗೆ ಸರಿ, ನೀವೇ ಯೋಚಿಸಿ ? ನಿಮ್ಮನ್ನು ಹುಷಾರು ಮಾಡಿ ನಿಮ್ಮ ಜೀವಿತಾವಧಿಯನ್ನು ಹೆಚ್ಚು ಮಾಡಲು ಶ್ರಮಿಸುವ ವೈದ್ಯ ಈಗ ಕಷ್ಟದಲ್ಲಿದ್ದಾನೆ. ವೈದ್ಯರುಗಳನ್ನು ಕರೆಸಿ ಉಚಿತ ಕ್ಯಾಂಪುಗಳನ್ನು ಮಾಡುವ ರೋಟರಿ, ಲಯನ್ಸ್ ಸಂಸ್ಥೆಗಳು ಕೂಡ ಇದರ ಬಗ್ಗೆ ಯೋಚನೆ ಮಾಡಬೇಕಾಗಿದೆ. ಕೇವಲ ಕ್ಯಾಂಪ್ ಗಳಿಗಾಗಿ ಮಾತ್ರ ವೈದ್ಯರು ಬೇಕೋ ಅಥವಾ ಅವರ ಸಹಾಯಕ್ಕೆ ನೀವು ಹೋಗಬೇಕೋ ಬೇಡವೋ ಯೋಚಿಸಿ…

ಗಾಯಾಳು ವೈದ್ಯರು ಮತ್ತು ಧ್ವಂಸಗೊಂಡ ಪರೀಕ್ಷಾ ಕೊಠಡಿ

Leave a Reply

Your email address will not be published. Required fields are marked *