Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಉಡುಪಿಯಲ್ಲಿ ‘ಕೃಷ್ಣ’ನ ಹೆಸರಲ್ಲಿ ಐತಿಹಾಸಿಕ ಗೋಲ್‌ಮಾಲ್ ! ನಿರಂತರ ಸಾಕ್ಷ್ಯ ನಾಶ !!

* ಶ್ರೀರಾಮ ದಿವಾಣ

# ಉಡುಪಿ ಬಳಿಯ ಆದಿವುಡುಪಿ ಸಮೀಪದ ಕಂಗಣಬೆಟ್ಟು ಎಂಬಲ್ಲಿರುವ ಕಂಗೂರು ಮಠ ಶ್ರೀ ಗೋಪಿನಾಥ ದೇವರ ನೂತನ ಶಿಲಾಮಯ ಗರ್ಭಗೃಹ, ಸುತ್ತು ಪೌಳಿ ಸಮರ್ಪಣೆ, ಬಿಂಬ ಪುನಃ ಪ್ರತಿಷ್ಠಾಪನೆ, ಬ್ರಹ್ಮಕಲಶ ಇತ್ಯಾದಿ ಕಾರ್ಯಕ್ರಮಗಳು 2018ರ ಮೇ 22ರಿಂದ 27ರ ವರೆಗೆ ನಡೆಯಿತು.

ಈ ಸಂದರ್ಭದಲ್ಲಿ ವಿವಿಧ ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಈ ಕೆಳಗಿನಂತೆ ವರದಿಗಳು ಪ್ರಕಟವಾದವು: ”ಆಚಾರ್ಯ ಶಂಕರರ ಶಿಷ್ಯರಾಗಿದ್ದ ಹಸ್ತಮಲಕರು ಕೊಡವೂರಿನವರು. ಭಾರದ್ವಜ ಗೋತ್ರದ ಶಿವಳ್ಳಿಯವರು. ಅವರು 8ನೇ ಶತಮಾನದಲ್ಲಿ ಈ ಗೋಪಿನಾಥನನ್ನು ಕಂಗೂರು ಮಠದಲ್ಲಿ ಸ್ಥಾಪಿಸಿದ್ದರು. ಬಳಿಕ ಅವರ ವಂಶದವರು ಈ ಮೂರ್ತಿಯನ್ನು ಪೂಜಿಸುತ್ತಾ ಬಂದಿದ್ದು, ಭಾರದ್ವಜ ಗೋತ್ರದ ಶಿವಳ್ಳಿಯವರಿಗೆಲ್ಲ ಗೋಪಿನಾಥ ಕುಲದೇವರು. ಕಂಗೂರು ಮಠದಲ್ಲಿ ಕ್ರಿ. ಶ. 8 – 9 ನೇ ಶತಮಾನದಿಂದ ಪೂಜೆಗೊಳ್ಳುತ್ತಿದ್ದ ಈ ಗೋಪಿನಾಥ ಕೃಷ್ಣ ಪ್ರತಿಮೆ ಕಾರಣಾಂತರದಿಂದ ಉಡುಪಿಯ ಶ್ರೀಕೃಷ್ಣ ಮಠವನ್ನು ಸೇರುತ್ತದೆ. ಸುಮಾರು 250 – 300 ವರ್ಷ ಕಾಲ ಗೋಪಿನಾಥ ಎಣ್ಣೆ ಕೃಷ್ಣನಾಗಿ ಅಷ್ಟ ಮಠಾಧೀಶರಿಂದ ಪೂಜೆಗೊಳ್ಳುತ್ತಿದ್ದ. ಬಳಿಕ ಗೋಪಿನಾಥ ಮತ್ತೆ ಮೂಲಸ್ಥಾನಕ್ಕೆ ಬಂದು ನೆಲೆಸಿದ. ಇದೀಗ ಕಂಗೂರು ಮಠದಲ್ಲಿ ಪುನಃ ಪ್ರತಿಷ್ಠೆಗೊಳ್ಳುತ್ತಿದ್ದಾನೆ”.

ಪ್ರಸ್ತುತ ಕಂಗಣಬೆಟ್ಟು ಕಂಗೂರು ಮಠದಲ್ಲಿ ಪ್ರತಿಷ್ಠಾಪಿಸಲಾಗಿರುವ ಕೃಷ್ಣನ ವಿಗ್ರಹಕ್ಕೆ ”ಗೋಪಿನಾಥ” ಎಂಬುದು ಹೊಸ ಹೆಸರು. ಮಾಧ್ವ ಸ್ವಾಮೀಜಿಗಳೋ, ಪುರೋಹಿತರೋ, ತಂತ್ರಿಗಳೋ, ವಿದ್ವಾಂಸರೋ ಈ ಹೆಸರನ್ನು ನೂತನವಾಗಿ ಇರಿಸಿರಬಹುದು. ಆದರೆ ವಾಸ್ತವವಾಗಿ ಈ ವಿಗ್ರಹದ ಮೂಲ ಹೆಸರು ”ವೇಣುಗೋಪಾಲಕೃಷ್ಣ” ಎಂದಾಗಿದೆ.

ಮಧ್ವಾಚಾರ್ಯರು ಮಾಧ್ವ ಮತ ಸ್ಥಾಪಿಸುವ ಮೊದಲೇ ಮತ್ತು ಮಧ್ವಾಚಾರ್ಯರು ”ಕಡೆಗೋಲು ಕೃಷ್ಣ”ನ ವಿಗ್ರಹವೆಂದು ಹೇಳಲಾಗುವ ವಿಗ್ರಹವನ್ನು ಶಿವಹಳ್ಳಿ ಅಥವಾ ಶಿವಳ್ಳಿ ಅಥವಾ ರಜತಪೀಠಪುರದ ಶ್ರೀ ಅನಂತೇಶ್ವರ ಚಂದ್ರಮೌಳೀಶ್ವರ ದೇವಸ್ಥಾನಗಳ ಬಳಿಯ ಗರ್ಭಗುಡಿಯಲ್ಲಿ ತಂದಿರಿಸುವ ಮೊದಲೇ, ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲ್ಪಟ್ಟು ಪೂಜೆಗೊಳ್ಳುತ್ತಿದ್ದ ವಿಗ್ರಹವಾಗಿದೆ ಈ ”ವೇಣುಗೋಪಾಲಕೃಷ್ಣ”. ಪ್ರತಿಷ್ಠಾಪಿಸಿದವರು ಆದಿ ಶಂಕರಾಚಾರ್ಯರ ನೇರ ಶಿಷ್ಯರಾದ ಹಸ್ತಾಮಲಕಾಚಾರ್ಯರು. ಇವರು ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪೀಠಗಳಲ್ಲಿ ಒಂದಾದ ಪೂರ್ವ ಆಮ್ನಾಯ ಗೋವರ್ಧನ ಮಠದ ಪ್ರಥಮ ಮಠಾಧೀಶರು. ಋಗ್ ವೇದದ ಆಚಾರ್ಯರಾಗಿದ್ದರು ಹಸ್ತಾಮಲಕಾಚಾರ್ಯರು.

ಕೃಷ್ಣ ?

ಶ್ರೀ ಆನಂದ ಗಿರಿ ಅವರು ರಚಿಸಿದ ”ಶಂಕರ ವಿಜಯ”ದಲ್ಲಿ ಹಸ್ತಾಮಲಕಾಚಾರ್ಯರು ಉಡುಪಿಯಲ್ಲಿ ವೇಣುಗೋಪಾಲಕೃಷ್ಣ ವಿಗ್ರಹ ಪ್ರತಿಷ್ಠಾಪನೆ ಮಾಡಿದ ವಿಚಾರ ಸ್ಪಷ್ಟವಾಗಿ ಪ್ರಸ್ತಾಪವಾಗಿದೆ.

”ಹಸ್ತಾಮಲಕಸ್ತು ಭೂಮಧ್ಯಾತ್ ಪಶ್ಚಿಮ ಖಂಡ ದಿಗ್ವಿಜಯಂ ಕೃತ್ವಾ /
ಪಂಚ ಮುದ್ರಾಂಕ ವಿರಾಜಿತಾನ್ /
ಭಗವದಷ್ಟಾಕ್ಷರ ಮಂತ್ರ ಜಪಾಸಕ್ತಾನ್ /
ಕಾಂಶ್ಚಿತ್ ಬ್ರಾಹ್ಮಣಾದೀನ್ ಕೃತ್ವಾ /
ರಜತಪೀಠಾದಿಸ್ಥಲೇಷು ಕೃಷ್ಣಾದಿ ದೇವತಾ ಪ್ರತಿಮಾಂ ಕೃತ್ವಾ /
ಮತಂ ವಿಜ್ಞಾಪಯಿತುಂ ಪುನಃ ಪರಮಗುರುಂ ಪ್ರಾಪ /
ದೃಷ್ಟ್ವಾ ತದಾ ನೀಂಕಾಂಚ್ಯಾಂ ಪರಮಗುರುಂ ಶಂಕರಾಚಾರ್ಯಂ ನತ್ವಾ /
ತತ್ ಪದಯುಗಳೆ ಸ್ವಕೃತಂ ವಿಜ್ಙಾಪಯಾಮಾಸ //

ಆದಿ ಶಂಕರಾಚಾರ್ಯರ ಶಿಷ್ಯರಾದ ಹಸ್ತಾಮಲಕಾಚಾರ್ಯರು ಸ್ಮಾರ್ತ ತತ್ವಕ್ಕನುಗುಣವಾಗಿ ವೈಷ್ಣವ ಧರ್ಮವನ್ನು ಪ್ರಚಾರ ಮಾಡಿದ ಉಲ್ಲೇಖವಿದೆ. ಅವರು ಪಶ್ಚಿಮ ಕರಾವಳಿಯಲ್ಲಿ ಸಂಚರಿಸಿ ಉಡುಪಿಗೆ ಬಂದಿರುವರೆಂದೂ, ಇಲ್ಲಿ ಶ್ರೀ ಕೃಷ್ಣ ವಿಗ್ರಹವನ್ನು ಪ್ರತಿಷ್ಠಾಪಿಸಿದರೆಂದೂ, ಪಂಚ ಮುದ್ರಾಂಕಿತ ಅಷ್ಟಾಕ್ಷರಿಃ ಜಪಾಸಕ್ತರಾದ ಕೆಲವು ಬ್ರಾಹ್ಮಣರನ್ನು ಅಲ್ಲಿ ಮಾಡಿದರೆಂದೂ, ಆಮೇಲೆ ಕಾಂಚಿಯಲ್ಲಿ ಆಗ ಇದ್ದ ತನ್ನ ಗುರುಗಳಲ್ಲಿ ತಾನು ಮಾಡಿದ ವಿಚಾರವನ್ನು ತಿಳಿಸಿದರೆಂದೂ ಹೇಳಲ್ಪಟ್ಟಿದೆ. ಇದರಲ್ಲಿ ಎರಡು ಶಬ್ದಗಳನ್ನು ಗಮನಿಸಿದರೆ, ಎರಡು ವಿಷಯಗಳು ಸ್ಪಷ್ಟವಾಗುತ್ತದೆ. ಒಂದು, ”ರಜತಪೀಠ” ಎಂಬುದು, ಇನ್ನೊಂದು ”ಕೃಷ್ಣಾದಿ” ಎಂಬುದು.

ರಜತಪೀಠ

”ರಜತಪೀಠ” ಎಂದರೆ ”ಈಗಿನ ಉಡುಪಿ”. ಎಲ್ಲರೂ ಒಪ್ಪುವ ಮತ್ತು ಒಪ್ಪಿದ ವಿಷಯ ಇದು. ರಜತಪೀಠ ಅಥವಾ ರಜತಪೀಠಪುರವೇ ”ಉಡುಪು”, ”ಉಡುಪಿ”, ”ಶಿವನಹಳ್ಳಿ” ಮತ್ತು ”ಶಿವಳ್ಳಿ” ಆಗಿದೆ. ಶ್ರೀ ಮದನಂತೇಶ್ವರ ಅನಂತೇಶ್ವರ ಮತ್ತು ಶ್ರೀ ಚಂದ್ರಮೌಳೀಶ್ವರಗಳೆಂಬ ಶಿವಾಲಯಗಳಿರುವ ಸ್ಥಳವೇ ”ಶಿವನ ಹಳ್ಳಿ, ಶಿವಳ್ಳಿಯಾಗಿದೆ.

ಶಿವಳ್ಳಿ, ಮೊದಲು ಒಂದು ಹಳ್ಳಿಯೇ ಆಗಿತ್ತು. ಗದ್ದೆಗಳು, ತೋಟಗಳು ಮತ್ತು ಗದ್ದೆ, ತೋಟಗಳ ನಡುವೆ ಅಲ್ಲಲ್ಲಿ ಮನೆಗಳಿರುವ ಹಳ್ಳಿಯಾಗಿತ್ತು ಶಿವಳ್ಳಿ. ಶ್ರೀ ಮದನಂತೇಶ್ವರ ಅನಂತೇಶ್ವರ ದೇವಸ್ಥಾನವು ಎಲ್ಲಾ ದೇವಸ್ಥಾನಗಳಂತೆಯೇ ಪೂರ್ವಾಭಿಮುಖವಾಗಿದೆ. ಈ ದೇವಸ್ಥಾನದ ಪೂರ್ವಕ್ಕೆ, ಅಂದರೆ ಮುಂಭಾಗದಲ್ಲಿ ವಿಶಾಲವಾದ ಸರೋವರ ಇತ್ತು. ಈ ಸರೋವರದಲ್ಲಿಯೇ ಬಳಿಕ ಚಂದ್ರಮೌಳೀಶ್ವರ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ಸರೋವರವನ್ನು ದೇವಸ್ಥಾನದ ಉತ್ತರದಲ್ಲಿ ಹೊಸದಾಗಿ ನಿರ್ಮಿಸಲಾಯಿತು. ಇದಕ್ಕೆ ಮೊತ್ತಮೊದಲು ”ಅನಂತ ಸರೋವರ” (”ಈ ಕೆರೆಯನ್ನು ಹಿಂದೆ ‘ಅನಂತ ತೀರ್ಥ’ ಎಂದು ಕರೆಯುತ್ತಿದ್ದರು ಎಂದು ಐತಿಹ್ಯ”, ‘ಕೃಷ್ಣನ ಉಡುಪಿ’, ಬನ್ನಂಜೆ ಗೋವಿಂದಾಚಾರ್ಯ, ಪುಟ ೩೧) ಎಂದು ಕರೆಯಲಾಗುತ್ತಿತ್ತು. ಈಗ ”ಮಧ್ವ ಸರೋವರ” ಎಂದು ಕರೆಯಲಾಗುತ್ತಿದೆ.

ಅನಂತ ಸರೋವರ/ಮಧ್ವ ಸರೋವರ

ಗ್ರಾಮಸ್ಥರು ಹಾಗೂ ದೂರದ ಯಾತ್ರಾರ್ಥಿಗಳೆಲ್ಲರೂ ಪೂರ್ವ ಭಾಗದಿಂದಲೇ ಸರೋವರಕ್ಕಿಳಿದು ತೀರ್ಥ ಸಂಪ್ರೋಕ್ಷಣೆ ಮಾಡಿ ಹಾಗೆಯೇ ಶ್ರೀ ಮದನಂತೇಶ್ವರ ಅನಂತೇಶ್ವರ ದೇವಸ್ಥಾನದ ಒಳ ಅಂಗಣಕ್ಕೆ ಪ್ರವೇಶಿಸುತ್ತಿದ್ದರು. ಸರೋವರವನ್ನೂ ಒಳಗೊಂಡಂತೆ ಇದ್ದ ಜಾಗ, ಶ್ರೀ ಮದನಂತೇಶ್ವರ ಅನಂತೇಶ್ವರ ದೇವಸ್ಥಾನಕ್ಕೆ ಸುತ್ತು ಬರುವ ಹೊರ ಸುತ್ತು ಅಥವಾ ಹೊರ ಅಂಗಣವಾಗಿತ್ತು. ಈ ಹೊರ ಅಂಗಣವನ್ನು ಈಗ ”ರಥಬೀದಿ” ಎಂದು ಕರೆಯಲಾಗುತ್ತಿದೆ.

ಈ ಹೊರ ಸುತ್ತು ಅಥವಾ ಹೊರ ಅಂಗಣವನ್ನು ಸುತ್ತುವರಿಯುವಂತೆ ದೊಡ್ಡದಾದ ಆವರಣ ಗೋಡೆ (ಕೋಟೆ) ಇತ್ತು. ಮಧ್ವಾಚಾರ್ಯರು ಮಾಧ್ವ ಮತ ಸ್ಥಾಪಿಸಿದ ಬಳಿಕ, ಶ್ರೀ ಮದನಂತೇಶ್ವರ ಅನಂತೇಶ್ವರ ಮತ್ತು ಶ್ರೀ ಚಂದ್ರಮೌಳೀಶ್ವರ ದೇವಸ್ಥಾನ ಹಾಗೂ ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನವನ್ನು ಶೈವರು – ಸ್ಥಾನೀಕ ಬ್ರಾಹ್ಮಣರಿಂದ ಬಲಾತ್ಕಾರವಾಗಿ ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಆವರಣ ಗೋಡೆ (ಕೋಟೆ)ಯನ್ನು ಕೆಡವಿ, ಇಲ್ಲಿ ಸುತ್ತಲೂ ಕೋಟೆಯಂತೆ ಮಠಗಳನ್ನು ನಿರ್ಮಿಸಲಾಯಿತು.

ಕೃಷ್ಣಾದಿ

ಇಲ್ಲಿ ಮತ್ತೆ ಎರಡು ಮುಖ್ಯ ವಿಷಯಗಳು ಸ್ಪಷ್ಟವಾಗುತ್ತವೆ. ಒಂದು, ಹಸ್ತಾಮಲಕಾಚಾರ್ಯರು ರಜತಪೀಠದಲ್ಲಿ ಕೃಷ್ಣ ವಿಗ್ರಹ ಮತ್ತು ಇದರ ಜೊತೆಗೆ, ಹತ್ತಿರದಲ್ಲಿಯೇ ಇನ್ನೊಂದು ವಿಗ್ರಹವನ್ನು ಪ್ರತಿಷ್ಠಾಪಿಸಿದ್ದರು ಎಂಬುದೇ ಆ ಎರಡು ವಿಷಯಗಳು. ಈಗ ಇರುವ ”ಕಡೆಗೋಲು ಕೃಷ್ಣ” ಎಂದು ಹೇಳಲಾಗುವ ವಿಗ್ರಹವನ್ನು, ಮಧ್ವಾಚಾರ್ಯರ ಅನುಯಾಯಿಗಳು ಹೇಳುವ ಹಾಗೆ, ಬರೆದ ಹಾಗೆ ಮಧ್ವಾಚಾರ್ಯರು ಸ್ಥಾಪಿಸಿದ್ದಾಗಿದೆ/ ಆಗಿರಬಹುದು. ಆದಿ ಶಂಕರಾಚಾರ್ಯರ ನೇರ ಶಿಷ್ಯರಾದ ಹಸ್ತಾಮಲಕಾಚಾರ್ಯರ ನಂತರ ಪೂರ್ಣ ಅರ್ಧ ಶತಮಾನದ ಬಳಿಕ ಜನಿಸಿದವರು ಮಧ್ವಾಚಾರ್ಯರು. ಆದುದರಿಂದ, ಮಧ್ವಾಚಾರ್ಯರಿಗಿಂತ ಮೊದಲೇ ರಜತಪೀಠದಲ್ಲಿ ಹಸ್ತಾಮಲಕಾಚಾರ್ಯರು ಕೃಷ್ಣ ವಿಗ್ರಹವವನ್ನು ಮತ್ತು ಈ ಕೃಷ್ಣ ವಿಗ್ರಹವನ್ನು ಪ್ರತಿಷ್ಠಾಪಿಸಿದ ದೇವಸ್ಥಾನದ/ ಗರ್ಭಗುಡಿಯ ಪಕ್ಕದಲ್ಲಿಯೇ ಇನ್ನೊಂದು ವಿಗ್ರಹವನ್ನೂ ಹಸ್ತಾಮಲಕಾಚಾರ್ಯರು ಪ್ರತಿಷ್ಠಾಪಿಸಿದ್ದರು ಎನ್ನುವುದನ್ನು ಇಲ್ಲಿ ತಿಳಿದುಕೊಳ್ಳಬಹುದು. ಈ ವಿಗ್ರಹವನ್ನು ಶ್ರೀ ಸುಬ್ರಹ್ಮಣ್ಯ ವಿಗ್ರಹ ಎಂದು ಅಂದಾಜಿಸಬಹುದಾಗಿದೆ. ಕೃಷ್ಣ ದೇವಸ್ಥಾನದ ಪಕ್ಕದಲ್ಲಿಯೇ ಇರುವ ಇನ್ನೊಂದು ಗರ್ಭಗುಡಿ ಶ್ರೀ ಸುಬ್ರಹ್ಮಣ್ಯನದ್ದಾಗಿದೆ.

ಈಗಿನ ”ಕಡೆಗೋಲು ಕೃಷ್ಣ” ವಿಗ್ರಹ ಇರುವ ದೇವಸ್ಥಾನದಲ್ಲಿ ಈ ಹಿಂದೆ, ಕೆಲವು ಶತಮಾನಗಳ ಮೊದಲು ಹಸ್ತಾಮಲಕಾಚಾರ್ಯರು ವೇಣುಗೋಪಾಲಕೃಷ್ಣ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದರು. ಈ ವಿಗ್ರಹವನ್ನು ದೇಶಾದ್ಯಂತ ಇರುವ ಎಲ್ಲಾ ದೇವಸ್ಥಾನಗಳಲ್ಲಿನ ವಿಗ್ರಹಗಳು ಇರುವಂತೆ ಹಸ್ತಾಮಲಕಾಚಾರ್ಯರು ಸಹ ಪೂರ್ವಾಭಿಮುಖವಾಗಿಯೇ ಪ್ರತಿಷಾಪಿಸಿದ್ದರು.

ಶ್ರೀ ಮದನಂತೇಶ್ವರ ಅನಂತೇಶ್ವರ ದೇವಸ್ಥಾನಕ್ಕೆ ಸೇರಿದ ಭೂಮಿಯನ್ನು ಗೇಣಿಗೆ ಪಡೆದುಕೊಂಡು ಈ ದೇವಸ್ಥಾನದ ಉತ್ತರ ಭಾಗದಲ್ಲಿ ”ಅನಂತ ಸರೋವರ”ದ ಪಶ್ಚಿಮದಲ್ಲಿ ಚಿಕ್ಕದಾದ ಗರ್ಭಗುಡಿಯನ್ನು ಸ್ಥಾಪಿಸಿ, ಇಲ್ಲಿ ವೇಣುಗೋಪಾಲಕೃಷ್ಣ ವಿಗ್ರಹವನ್ನು ಹಸ್ತಾಮಲಕಾಚಾರ್ಯರು ಪ್ರತಿಷ್ಠಾಪನೆ ಮಾಡಿದ್ದರು. ಭಕ್ತರು, ಯಾತ್ರಾರ್ಥಿಗಳು ಅನಂತ ಸರೋವರದಲ್ಲಿಳಿದು ತೀರ್ಥ ಸಂಪ್ರೋಕ್ಷಣೆ ಮಾಡಿಕೊಂಡು ಪೂರ್ವಾಭಿಮುಖದಿಂದಲೇ ವೇಣುಗೋಪಾಲಕೃಷ್ಣ ದೇವಸ್ಥಾನವನ್ನು ಪ್ರವೇಶಿಸುತ್ತಿದ್ದರು.

ದೇಶಾದ್ಯಂತ ಇರುವ ಎಲ್ಲಾ ಹಿಂದೂ ದೇವಸ್ಥಾನಗಳೂ ಪೂರ್ವಾಭಿಮುಖವಾಗಿರುವಂತೆಯೇ ವೇಣುಗೋಪಾಲಕೃಷ್ಣ ವಿಗ್ರಹ ಕೂಡಾ ಪೂರ್ವಾಭಿಮುಖವಾಗಿಯೇ ಇತ್ತು ಮತ್ತು ಗರ್ಭಗುಡಿಯ ಧ್ವಾರ ಕೂಡಾ ಪೂರ್ವಾಭಿಮುಖದಿಂದಲೇ ಇತ್ತು. ಈಗಲೂ ಇದೆ. ಆದರೆ ಇದೀಗ ಮುಚ್ಚಲಾಗಿದೆ. ”ಒಳಕ್ಕೆ ಪ್ರವೇಶಿಸುತ್ತಿದ್ದಂತೆಯೇ ಎದುರುಗಡೆ ಚೆನ್ನಕೇಶವನ ಮೂರ್ತಿ. ವಾಸ್ತವವಾಗಿ ಇದು ಗರ್ಭಗುಡಿಯ ಒಳಕ್ಕೆ ಹೋಗುವ ಪೂರ್ವಧ್ವಾರ, ಅಂದರೆ ಮುಖ್ಯ ಧ್ವಾರ. ಗೃಹಸ್ಥರಾಗಿದ್ದ ಅರ್ಚಕರು ಈ ಧ್ವಾರದ ಮೂಲಕವೇ ಗರ್ಭಗುಡಿ ಪ್ರವೇಶಿ ವೇಣುಗೋಪಾಲಕೃಷ್ಣನಿಗೆ ಪೂಜೆ ಮಾಡುತ್ತಿದ್ದರು. ಭಕ್ತರು ಇದೇ ಧ್ವಾರದಲ್ಲಿ ವೇಣುಗೋಪಾಲಕೃಷ್ಣನನ್ನು ನೋಡಿ ಕೃತಾರ್ಥರಾಗುತ್ತಿದ್ದರು. ಆದರೆ ಬಳಿಕ ಎಲ್ಲವನ್ನೂ ಸ್ವಾರ್ಥೋದ್ಧೇಶದಿಂದ ಬದಲಾಯಿಸಲಾಯಿತು. ಪ್ರತೀ ಬದಲಾವಣೆಗಳಿಗೂ ಕಟ್ಟುಕಥೆ ಕಟ್ಟುವಂತೆಯೂ ಇದಕ್ಕೂ ಕಟ್ಟು ಕಥೆ ಕಟ್ಟಲಾಯಿತು ಮತ್ತು ಕೆಲವು ನೆಪಗಳನ್ನು ಹೇಳಲಾಯಿತು. ಕಟ್ಟು ಕಥೆಯನ್ನು ಮುಂದಿಟ್ಟುಕೊಂಡು ವಿವಿಧ ಮಾಧ್ಯಮಗಳ ಮೂಲಕ ಪ್ರಚಾರ ನಡೆಸಲಾಯಿತು. ಮುಗ್ದ ಆಸ್ತಿಕರು ನಂಬಿದರು.

”ಸ್ವಾಮಿಗಳು ಸರೋವರದಲ್ಲಿ ಸ್ನಾನ ಮಾಡಿ ಪೂಜೆಗೆಂದು ಗರ್ಭಗುಡಿಗೆ ಹೋಗುತ್ತಿದ್ದ ಮಡಿಯ ಧ್ವಾರ. ಜನಸಮ್ಮರ್ಧ ಹೆಚ್ಚಾದಾಗ 19ನೆಯ ಶತಮಾನದ ಉತ್ತರಾರ್ಧದಲ್ಲಿ ಈ ಬಾಗಿಲನ್ನು ಮುಚ್ಚಿ ಚೆನ್ನಕೇಶವನ ವಿಗ್ರಹವನ್ನು ಇರಿಸಲಾಯಿತು ಎಂದು ತಿಳಿದುಬರುತ್ತದೆ. ಹಿಂದಿನ ನೆನಪಿಗಾಗಿ ಈಗ ವಿಜಯ ದಶಮಿಯಂದು ಒಂದು ದಿನ ಮಾತ್ರ ಈ ಬಾಗಿಲನ್ನು ತೆರೆಯುತ್ತಾರೆ. ಅಂದು ಸ್ವಾಮಿಗಳು ಈ ಬಾಗಿಲಿನ ಮೂಲಕವೆ ಗರ್ಭಗೃಹವನ್ನು ಪ್ರವೇಶಿಸುತ್ತಾರೆ. ವಿಜಯ ದಶಮಿಯ ದಿನದಂದೆ ನಡೆಯುವ ‘ಹೊಸತೂಟ’ದ ನವಧಾನ್ಯ ಪ್ರವೇಶವೂ ಈ ಬಾಗಿಲಿನ ಮೂಲಕವೆ ಆಗುತ್ತದೆ. ವರ್ಷದ ಉಳಿದ ದಿನಗಳಲ್ಲಿ ಚೆನ್ನಕೇಶವ ಈ ಬಾಗಿಲನ್ನು ಮುಚ್ಚಿ ಇಲ್ಲಿ ನಿಂತಿರುತ್ತಾನೆ”. (‘ಕೃಷ್ಣನ ಉಡುಪಿ’, ಬನ್ನಂಜೆ ಗೋವಿಂದಾಚಾರ್ಯ, ಪುಟ ೨೩).

ಉಡುಪಿ ಅಥವಾ ಶಿವಳ್ಳಿ ಅಥವಾ ರಜತಪೀಠಪುರದಲ್ಲಿ ಮೂಲತಹಾ ಇದ್ದುದು ವೇಣುಗೋಪಾಲಕೃಷ್ಣನೇ ವಿನಹಾ ಕಡೆಗೋಲು ಕೃಷ್ಣನಲ್ಲ ಎನ್ನುವುದಕ್ಕೆ ವ್ಯಾಸರಾಯರು ಉಡುಪಿ ಕೃಷ್ಣನ ಮೇಲೆ ರಚಿಸಿದ ಈ ಕೆಳಗಿನ ಭಕ್ತಿಗೀತೆಯನ್ನು ಗಮನಿಸಬಹುದಾಗಿದೆ:

‘ಕೃಷ್ಣಾ ನೀ ಬೇಗನೇ ಬಾರೋ’

ರಾಗ: ಯಮನ್ ಕಲ್ಯಾಣ್, ತಾಳ: ಮಿಶ್ರ ಛಾಪು.

ಕೃಷ್ಣಾ ನೀ ಬೇಗನೇ ಬಾರೋ
ಬೇಗನೇ ಬಾರೋ, ಮುಖವನ್ನೆ ತೋರೋ
ಕಾಲಲಂದುಗೆ ಗೆಜ್ಜೆ, ನೀಲದ ಬಾವುಲಿ
ನೀಲವರ್ಣನೆ ನಾಟ್ಯವಾಡುತ ಬಾರೋ
ಉಡಿಯಲ್ಲಿ ಉಡಿಗೆಜ್ಜೆ, ಬೆರಳಲ್ಲಿ ಉಂಗುರ
ಕೊರಳಲ್ಲಿ ಹಾಕಿದ ವೈಜಯಂತಿ ಮಾಲೆ
ಕಾಶಿ ಪೀತಾಂಬರ, ಕೈಯಲ್ಲಿ ಕೊಳಲು
ಮೈಯ್ಯೊಳು ಪೂಸಿದ ಶ್ರೀಗಂಧ ಘಮಘಮ
ತಾಯಿಗೆ ಬಾಯಲ್ಲಿ ಜಗವನ್ನೇ ತೋರಿದ
ಜಗದೋದ್ಧಾರಕ ನಮ್ಮ ಉಡುಪಿ ಶ್ರೀಕೃಷ್ಣ.

ವೇಣುಗೋಪಾಲಕೃಷ್ಣ/ ತೈಲಕೃಷ್ಣ/ಎಣ್ಣೆಕೃಷ್ಣ/ಗೋಪಿನಾಥ

ವ್ಯಾಸರಾಯರ ಕಾಲ, ಕ್ರಿ. ಶ. 1447-1548. ಮೈಸೂರಿನ ಬನ್ನೂರಿನಲ್ಲಿ ಹುಟ್ಟಿದ ವ್ಯಾಸರಾಯರು ಸನ್ಯಾಸಿಯಾಗಿದ್ದು, ವಿಜಯನಗರ ಸಾಮ್ರಾಜ್ಯದ ರಾಜಗುರುಗಳಾಗಿದ್ದವರು. ವಿಜಯನಗರದ ಅರಸರು ಬಹಳಷ್ಟು ಉಂಬಳಿಗಳನ್ನು ಶ್ರೀಕೃಷ್ಣ ದೇವರಿಗೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಕಡೆಗೋಲು ಕೃಷ್ಣನ ಮೇಲೆ ವ್ಯಾಸರಾಯರು ಈ ಭಕ್ತಿಗೀತೆಯನ್ನು ರಚಿಸಿದ್ದಲ್ಲ, ಬದಲಾಗಿ; ತನ್ನ ಕಾಲದಲ್ಲಿ ಉಡುಪಿಯ ಗರ್ಭಗುಡಿಯಲ್ಲಿ ಪೂರ್ವಾಭಿಮುಖವಾಗಿ ಪ್ರತಿಷ್ಟಿತನಾಗಿ ನಿತ್ಯ ಸಂಸಾರಿಗಳಿಂದ ಪೂಜೆಗೊಳ್ಳುತ್ತಿದ್ದ ಕೊಳಲು ಹಿಡಿದ ‘ವೇಣುಗೋಪಾಲಕೃಷ್ಣ’ನ ಮೇಲೆಯೇ ಅವರು ಭಕ್ತಿಗೀತೆಯನ್ನು ರಚಿಸಿದ್ದರು ಎನ್ನುವುದು ಸ್ಪಷ್ಟವಾಗುತ್ತದೆ.

ವೇಣುಗೋಪಾಲಕೃಷ್ಣನಿಗೆ ಅಪಚಾರ

ಮಧ್ವಾಚಾರ್ಯರ ನಂತರ ಬಂದ ಅವರ ಅನುಯಾಯಿಗಳಿಂದ, ಗರ್ಭಗುಡಿಯಲ್ಲಿದ್ದ ಆದಿ ಶಂಕರಾಚಾರ್ಯರ ಅಂತರಂಗದ ಶಿಷ್ಯರಾದ ಹಸ್ತಾಮಲಕಾಚಾರ್ಯರಿಂದ ಪ್ರತಿಷ್ಟಾಪಿಸಲಾದ ಮೂಲ ವೇಣುಗೋಪಾಲಕೃಷ್ಣ ವಿಗ್ರಹಕ್ಕೆ ನಿರಂತರ ಅಪಚಾರವಾಗುತ್ತಾ ಬಂದಿರುವುದು ಕಂಡುಬರುತ್ತದೆ. ಗರ್ಭಗುಡಿಯಲ್ಲಿ ಮೊತ್ತಮೊದಲು ಮತ್ತು ಪ್ರಥಮತಃ ವೇಣುಗೋಪಾಲಕೃಷ್ಣ ವಿಗ್ರಹವ್ನನೇ ಪ್ರತಿಷ್ಟಾಪಿಸಲಾಗಿತ್ತು, ಮಾತ್ರವಲ್ಲ ಇದು ಆ ಕಾಲದಲ್ಲಿ ಸಾರ್ವಜನಿಕ ವೇಣುಗೋಪಾಲಕೃಷ್ಣ ದೇವಸ್ಥಾನವೂ ಆಗಿತ್ತು.

ದೇವಸ್ಥಾನದ ಪ್ರಧಾನ ದೇವರಾಗಿದ್ದು, ಪೂರ್ವಾಭಿಮುಖವಾಗಿ ಪೂಜೆ ಸ್ವೀಕರಿಸುತ್ತಿದ್ದ ವೇಣುಗೋಪಾಲಕೃಷ್ಣ ವಿಗ್ರಹವನ್ನು ಬಳಿಕ ಗರ್ಭಗುಡಿಯ ಒಳಗಡೆಯೇ ಸ್ಥಾನ ಪಲ್ಲಟ ಮಾಡಲಾಯಿತು. ಇದರಿಂದಾಗಿಯೇ ವೇಣುಗೋಪಾಲಕೃಷ್ಣನಿಗೆ ಕ್ರಮೇಣ ತೈಲ ಕೃಷ್ಣನೆಂದೂ, ಎಣ್ಣೆ ಕೃಷ್ಣನೆಂದೂ ಹೆಸರಾಯಿತು. ಕೆಲ ವರ್ಷಗಳ ಹಿಂದೆಯಷ್ಟೇ ಈ ವಿಗ್ರಹವನ್ನು ಉಡುಪಿಯ ಗರ್ಭಗುಡಿಯಿಂದಲೇ ತೆಗೆದು ಕಂಗೂರು ಮಠಕ್ಕೆ ಒಪ್ಪಿಸಲಾಯಿತು. ಮೊನ್ನೆ ಮೊನ್ನೆಯಷ್ಟೇ ಇಲ್ಲಿ ಪುನಃ ಪ್ರತಿಷ್ಠಾಪನೆ, ಬ್ರಹ್ಮಕಲಶ ಇತ್ಯಾದಿಗಳು ನಡೆದವು.

ಪ್ರಥಮತಃ ಪೂರ್ವಾಭಿಮುಖವಾಗಿದ್ದ ವೇಣುಗೋಪಾಲಕೃಷ್ಣ ವಿಗ್ರಹದ ಹಿಂಬದಿಯಲ್ಲಿ ಪಶ್ಚಿಮಾಭಿಮುಖವಾಗಿ ‘ಕಡೆಗೋಲು ಕೃಷ್ಣ’ ಎಂದು ಹೇಳಲಾಗುವ ವಿಗ್ರಹವನ್ನು ತಂದಿರಿಸಲಾಯಿತು. ಬಳಿಕ ನಿಧಾನವಾಗಿ ಕಡೆಗೋಲು ಕೃಷ್ಣ ವಿಗ್ರಹವೇ ಈ ದೇವಸ್ಥಾನದ ಪ್ರಧಾನ ದೇವರಾಗುವಂತೆ ಅತ್ಯಂತ ವ್ಯವಸ್ಥಿತವಾಗಿ ”ವ್ಯವಸ್ಥೆ” ಮಾಡಲಾಯಿತು. ‘ಒಳಗಿನ ಸತ್ಯಗಳು’ ಭಕ್ತಾಧಿಗಳ ಕಣ್ಣಿಗೆ ಸ್ಪಷ್ಟವಾಗಿ ಗೋಚರ ಆಗದೇ ಇರಲೆಂದು ‘ನವಗ್ರಹ ಕಿಂಡಿ’ ಮತ್ತು ‘ಕನಕನ ಕಿಂಡಿ’ಗಳೆಂಬ ‘ಕಿಂಡಿ’ಗಳ ವ್ಯವಸ್ಥೆಯನ್ನೂ ಮಾಡಲಾಯಿತು. ಪೂರ್ವದಲ್ಲಿದ್ದ ಧ್ವಾರವನ್ನು ಮುಚ್ಚಲಾಯಿತು.

ಕನಕನ ಕಿಂಡಿ ಮತ್ತು ನವಗ್ರಹ ಕಿಂಡಿ

Leave a Reply

Your email address will not be published. Required fields are marked *