Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಕುಕ್ಕೆ ಕ್ಷೇತ್ರದ ಚಾರಿತ್ರಿಕ ಹಿನ್ನೆಲೆ- ಭಾಗ 35

* ಡಾ. ಮ. ಸು. ಅಚ್ಚುತ ಶರ್ಮಾ

# ಒ.ಪಿ.ನಂ. 105ರ 1949ರ ಜಡ್ಜ್‌ಮೆಂಟಿನ ಮೇಲೆ ಹಿಂದೂ ರಿಲೀಜಿಯಸ್ ಎಂಡೋಮೆಂಟ್ ಕಮಿಷನರು ಧರ್ಮಸ್ಥಳ ಹೆಗ್ಗಡೆಯ ಮೇಲೆ ಧರ್ಮಸ್ಥಳ ಮಂಜುನಾಥೇಶ್ವರ ದೇವಾಲಯದ ವಿಚಾರದಲ್ಲಿ ಬೆಂಗಳೂರು ಹೈಕೋರ್ಟಿನಲ್ಲಿ ಮಾಡಿದ ಅಪೀಲ್ ಆರ್. ಎ. ನಂ. 165-1957ರ ಮೇಲೆ ತಾರೀಕು 30.08.1968ರಲ್ಲಿ ಕೊಟ್ಟ ಜಡ್ಜ್ ಮೆಂಟಿನಲ್ಲಿ ಆರ್. ಡಬ್ಲು. ಹನ್ನೊಂದನೇ ಸಾಕ್ಷಿದಾರ ಉಡುಪಿ ಸೋದೆ ಮಠದ ವಿಶ್ವೋತ್ತಮ ತೀರ್ಥ ಸ್ವಾಮಿಗಳು ಕೊಟ್ಟ ಹೇಳಿಕೆಯಲ್ಲಿ:

”ಶಿವನನ್ನು ವಿಷ್ಣುವಿನಿಂದ ಕೆಳಗೆ 7ನೇ ಮತ್ತು ೮ನೇ ಸ್ಥಾನಗಳನ್ನು ಹೊಂದಿದ ಗರುಡ ಮತ್ತು ಶೇಷರಿಗೆ ಸಮಾನವಾದ 8ನೇ ಸ್ಥಾನವನ್ನು ಹೊಂದಿದ ವಿಷ್ಣುವಿನ ದಾಸ ವ ಕೆಲಸದವನ ಸ್ಥಾನದಲ್ಲಿ ಇಟ್ಟು ವೈಷ್ಣವರು ಪೂಜಿಸುತ್ತಾರೆ”.

ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಈ ಶಾಖಾ ಮಠದಲ್ಲಿ 1845ರ ವರೇಗೆ ಶೃಂಗೇರಿ ಮಠದವರಿಂದಲೇ ನೇಮಿಸಲ್ಪಟ್ಟ ಅರ್ಚಕರಿಂದಲೇ ಪೂಜಾದಿಗಳು ನಡೆದುಬರುತ್ತಿತ್ತೆಂದೂ ಆಗಿನ ಅರ್ಚಕರೇ ಕನ್ನಡ ಜಿಲ್ಲೆಯ ಧರ್ಮಾಧಿಕಾರವನ್ನು ನಡೆಸುತ್ತಿದ್ದರೆಂದೂ ಅವರ ಮುಖಾಂತರವೇ ಜಿಲ್ಲೆಯ ಶಿಷ್ಯ ವರ್ಗದವರ ದೀಪಾರಾಧನೆ ಕಾಣಿಕೆ, ತಪ್ಪು ಒಪ್ಪು ಕಾಣಿಕೆ, ಗುರು ಚರಣ ಕಾಣಿಕೆ ಇತ್ಯಾದಿಗಳು ವಸೂಲು ಆಗುತ್ತಿದ್ದು ಶಿಷ್ಯ ವರ್ಗದವರಿಗೆ ಸದಾಚಾರ ಸದ್ಧರ್ಮ ಭೋಧನೆ ಕೂಡಾ ನಡೆಯುತ್ತಿತ್ತೆಂದೂ ಹಳೇ ದಾಕ್ಲೆಗಳಿಂದ ವ್ಯಕ್ತವಾಗುತ್ತದೆ. ಒ. ಎಸ್. ನಂ. 279-1875 ಪ್ರತಿವಾದಿ ಕಡೆ 6ನೇ ಸಾಕ್ಷಿದಾರ 48 ವರ್ಷ ಪ್ರಾಯದ ವೆಂಕಟ್ರಮಣ ಶಾಸ್ತ್ರಿಯ ವಿಚಾರಣೆ. ಇದನ್ನು ಈ ಪುಸ್ತಕದ ಅಂತ್ಯದಲ್ಲಿ ಪ್ರಕಟಿಸಿದ ದಾಕ್ಲೆಗಳಲ್ಲಿ ಓದಬಹುದು.

ಕನ್ನಡ ಜಿಲ್ಲೆಯ ಹೆಚ್ಚಿನ ಬ್ರಾಹ್ಮಣರು ಮತ್ತು ಬ್ರಾಹ್ಮಣೇತರರು ಒಂದು ಕಾಲದಲ್ಲಿ ಸ್ಮಾರ್ತ ಸಂಪ್ರದಾಯದ ಅಂದರೆ ಶಿವ, ವಿಷ್ಣುಗಳೆಂಬ ದೇವರುಗಳೊಳಗೆ ಅಭೇದವನ್ನು ಸಾರುವ ವಿಭೂತಿಧಾರಿಗಳೇ ಆಗಿದ್ದರು. ಬ್ರಾಹ್ಮಣರೊಳಗೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರವನ್ನೇ ತಮ್ಮ ಮೂಲ ಸ್ಥಳವಾಗಿ ಇಟ್ಟುಕೊಂಡು ಸುಬ್ರಹ್ಮಣ್ಯ ಬ್ರಾಹ್ಮಣರೆಂದು ಹೇಳಲ್ಪಡುವ ಸ್ಥಳೀಯ ಸ್ಮಾರ್ತರಾದ ಸ್ಥಾನಿಕ ಶಿವ ಬ್ರಾಹ್ಮಣರೂ, ಹೊರಗಿನಿಂದ ಬಂದು ನೆಲೆಸಿದ ಹವೀಕ, ಕೋಟ, ಶಿವಳ್ಳಿ, ದೇಶಸ್ಥ, ಕರಾಡ, ಚಿತ್ ಪಾವನ ಮೊದಲಾದ ಬ್ರಾಹ್ಮಣ ವರ್ಗದವರೂ ಉತ್ತರ ದೇಶದಿಂದ ಬಂದ ಸಾರಸ್ವತ, ಗೌಡ, ಸಾರಸ್ವತ ಬ್ರಾಹ್ಮಣರೂ, ವಿಶ್ವಕರ್ಮ ಬ್ರಾಹ್ಮಣರೂ, ಬ್ರಾಹ್ಮಣೇತರರಾದ ರಾಮ ಕ್ಷತ್ರಿಯರೂ, ಓಜಿಯವರೂ, ಬಂಟರೂ, ಬಿಲ್ಲವರೂ, ಮೊಗವೀರರೂ, ಗೌಡರೂ, ಗಾಣಿಗರೂ, ಮರಾಠಿಯವರೂ, ಸಮಗಾರರೂ, ಮತ್ತು ಪ. ಜಾತಿ, ಪ. ಪಂಗಡ ಇತ್ಯಾದಿ ವರ್ಗದವರೂ ಅಲ್ಲದೆ ಇನ್ನೂ ಉಳಿದ ಅನೇಕ ವರ್ಗದವರೂ ಕೂಡಾ ಶ್ರೀ ಮಧ್ವಾಚಾರ್ಯರ ನೂತನ ಮಾಧ್ವ ಮತವು ಕನ್ನಡ ಜಿಲ್ಲೆಯ ಉಡುಪಿಯಲ್ಲಿ ಉದ್ಭವವಾಗುವ ಮುಂಚೆ ಎಲ್ಲರೂ ಭಸ್ಮಧಾರಿಗಳಾದ ಸ್ಮಾರ್ತರಾಗಿಯೇ ಇದ್ದು ಶ್ರೀ ಶೃಂಗೇರಿ ಮಠದ ಶಿಷ್ಯರಾಗಿಯೇ ಇದ್ದರು. ಶ್ರೀ ಮಧ್ವಾಚಾರ್ಯರ ನಂತರ ಬ್ರಾಹ್ಮಣರಲ್ಲಿ ಹೊರಗಿನಿಂದ ಬಂದ ಶಿವಳ್ಳಿ ಪಂಗಡವರಲ್ಲಿ ಮಾತ್ರ ಹೆಚ್ಚಿನವರು ನೂತನ ದ್ವೈತ ಸಂಪ್ರದಾಯದ ತಪ್ತ ಮುದ್ರಾಧಾರಿಗಳಾದರು.

ಮುಂದುವರಿಯುವುದು

Leave a Reply

Your email address will not be published. Required fields are marked *