Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕುಕ್ಕೆ ಕ್ಷೇತ್ರದ ಚಾರಿತ್ರಿಕ ಹಿನ್ನೆಲೆ – ಭಾಗ 36

  • ಡಾ. ಮ. ಸು. ಅಚ್ಚುತ ಶರ್ಮಾ

# ಶ್ರೀ ವಾದಿರಾಜ ಸ್ವಾಮಿಗಳ ಕಾಲದಲ್ಲಿ ಬ್ರಾಹ್ಮಣೇತರರಲ್ಲಿ ಕೆಲವು ಮೊಗವೀರರು, ಬಂಟರು, ಜೈನರು, ತಪ್ತ ಮುದ್ರಾಧಾರಣ ವಿಧಿಯಿಂದ ಬ್ರಾಹ್ಮಣರಾಗಿ ಪರಿವರ್ತಿಸಲ್ಪಟ್ಟಿದ್ದರಿಂದ ಮಾಧ್ವರ ಸಂಖ್ಯೆಯು ಜಿಲ್ಲೆಯಲ್ಲಿ ಹೆಚ್ಚಾಯಿತು. ಈ ಕಾರಣದಿಂದಲೇ ಮಾಧ್ವ ಬ್ರಾಹ್ಮಣರಲ್ಲಿ ತ್ರಿಕರ್ಮಿಗಳು, ತಂತುಮಾತ್ರ ಬ್ರಾಹ್ಮಣರು, ಭೋಜನ ಪ್ರತಿಭೋಜನ ವರ್ಜ್ಯರುಗಳೆಂಬ ಭೇದಗಳು ಈಗಲೂ ಕಾಣುತ್ತಿವೆ.

ಈ ಶಿವಳ್ಳಿ ಬ್ರಾಹ್ಮಣರು ತಾವು ಐಚ್ಛತ್ರದಿಂದ ಬಂದು ಇಲ್ಲಿ ನೆಲೆಸಿದವರೆಂದೂ, ಮಯೂರ ವರ್ಮನು ಇವರನ್ನು ಕರೆಸಿಕೊಂಡು ಬಂದದ್ದೆಂದೂ, ಇವರು ತುಳುನಾಡಿಗೆ ಬರುವ ಮುಂಚೆ ತುಳುನಾಡು ಅಬ್ರಾಹ್ಮಣ್ಯ ದೇಶವಾಗಿತ್ತೆಂದೂ ಹೇಳಿಕೊಳ್ಳುತ್ತಾರೆ. ಆದಿ ಶಂಕರಾಚಾರ್ಯರು ತುಳುನಾಡಿನಲ್ಲಿ ಸಂಚರಿಸುವಾಗಲೇ ಸುಬ್ರಹ್ಮಣ್ಯ, ಉಡುಪಿ, ಕೊಲ್ಲೂರು, ಪೊಳಲಿ ಇತ್ಯಾದಿ ಅನೇಕ ಪುರಾತನ ದೇವಾಲಯಗಳು ಇತ್ತೆಂದು ಉಲ್ಲೇಖಗಳಿವೆ.

ಕನ್ನಡ ಜಿಲ್ಲೆಯಲ್ಲಿ ಅನೇಕ ಅತಿ ಪುರಾತನ ದೇವಾಲಯಗಳನ್ನು ನಾವು ಕಾಣುವಾಗ ಬ್ರಾಹ್ಮಣರಿಲ್ಲದ ಈ ತುಳುನಾಡಿನಲ್ಲಿ ಈ ಪುರಾತನ ದೇವಳಗಳಲ್ಲಿ ಯಾರು ಅರ್ಚಿಸುತ್ತಿದ್ದರು ? ಮಯೂರ ವರ್ಮನ ಆಳ್ವಿಕೆಗೆ ಮುಂಚೆ ಇಲ್ಲಿ ದೇವಾಲಯಗಳು ಇರಲಿಲ್ಲವೇ ? ನದಿಗಳೂ, ಕ್ಷೇತ್ರಗಳೂ ಇರುವಾಗ ದೇವಾಲಯಗಳು ಇದ್ದಿರಲೇಬೇಕಲ್ಲವೇ ? ಅವುಗಳ ಅರ್ಚಕರಾಗಿ ಅವುಗಳಿಗೆ ಸಂಬಂಧಪಟ್ಟ ಬ್ರಾಹ್ಮಣರೂ ಇದ್ದಿರಲೇಬೇಕು. ಈ ರೀತಿಯ ಪ್ರಚಾರವನ್ನು ಮಾಧ್ವರು ತಮ್ಮ ಶ್ರೇಷ್ಠತೆಯನ್ನು ಶ್ರುತಪಡಿಸಲು ಮತ್ತು ಸ್ಥಳೀಯ ಸ್ಮಾರ್ತ ಬ್ರಾಹ್ಮಣರನ್ನು ಅವಹೇಳನ ಮಾಡಲು ಕಟ್ಟಿದ ಕಟ್ಟುಕಥೆಗಳಾಗಿವೆ ಎಂಬುದನ್ನು ಇದರಿಂದ ನಿಶ್ಚಯಿಸಬಹುದಾಗಿದೆ.

ಗೌಡ ಸಾರಸ್ವತ ಬ್ರಾಹ್ಮಣರಲ್ಲಿ ಕೆಲವರು ಮಾಧ್ವರಾಗಿ ಮತಾಂತರಿಸಲ್ಪಟ್ಟರೂ, ಕಾರಣಾಂತರದಿಂದ ಅವರು ಉಡುಪಿಯವರ ಗುರುತ್ವವನ್ನು ವಹಿಸಿಕೊಳ್ಳದೆ ತಮ್ಮದೇ ಆದ ಯೋಗ್ಯ ಗುರುಗಳನ್ನು ಆರಿಸಿಕೊಂಡು ಕಾಶೀಮಠ ಮತ್ತು ಗೋಕರ್ಣ ಮಠಗಳ ಶಿಷ್ಯರಾದರು. ಆದರೂ ಅವರು ವೇದ ಧರ್ಮವನ್ನು ಬಿಡಲಿಲ್ಲ.

ಗೌಡ ಸಾರಸ್ವತರ ಕೈವಲ್ಯ (ಕೌಳೀ) ಮಠವೂ ಅದರ ಶಿಷ್ಯರೂ ಈಗಲೂ ಸ್ಮಾರ್ತ ಸಂಪ್ರದಾಯದ ಭಸ್ಮಧಾರಿಗಳಾಗಿಯೇ ಉಳಿದಿದ್ದಾರೆ. ಸಾರಸ್ವತರೂ ಈಗಲೂ ಚಿತ್ರಾಪುರ ಮಠದ ಶಿಷ್ಯರಾಗಿ ಸ್ಮಾರ್ತ ಸಂಪ್ರದಾಯದವರಾಗಿಯೇ ಇದ್ದು, ವೇದ ಧರ್ಮವನ್ನು ಅನುಸರಿಸಿಬರುತ್ತಾರೆ.
ಕನ್ನಡ ಜಿಲ್ಲೆಯಲ್ಲಿ ನೂರಕ್ಕೆ ೯೫ರಷ್ಟು ಹಳೇ ದೇವಾಲಯಗಳು ಶಿವ, ದುರ್ಗಾ, ಗಣಪತಿ, ಸುಬ್ರಹ್ಮಣ್ಯ ಇತ್ಯಾದಿ ಶೈವ ಸಂಬಂಧವಾದುವುಗಳೇ ಆಗಿ ಇರುವುದರಿಂದ ಮೇಲಿನ ಹೆಚ್ಚಿನ ಪಂಗಡದವರು ಸ್ಮಾರ್ತರಾಗಿಯೇ ಇರಲು ಕಾರಣವೂ ಆಗಿದೆ.

ಮಾಧ್ವರ ಸಂಖ್ಯೆಯು ಬರೆ ಉಡುಪಿ, ಕಾರ್ಕಳ, ಮಂಗಳೂರು, ಪುತ್ತೂರು ತಾಲೂಕುಗಳಲ್ಲಿ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿದೆ. ಕಾಸರಗೋಡಿನಲ್ಲಿರುವ ಕೆಲವು ಶಿವಳ್ಳಿಯವರೂ ಈಗಲೂ ಸ್ಮಾರ್ತ ಸಂಪ್ರದಾಯದವರಾಗಿದ್ದರೂ ಭಾಗವತ ಸಂಪ್ರದಾಯವಾದಿಗಳೆಂದು ಹೇಳಿಕೊಂಡು ಮಾಧ್ವರ ಬೆಂಬಲಿಗರಾಗಿ ಮುದ್ರೆ ಮತ್ತು ವಿಭೂತಿಧಾರಿಗಳಾಗಿ ಇದ್ದಾರೆ.

ಕಾಸರಗೋಡು ತಾಲೂಕಿನ ಧನವಂತ ಎಡನೀರು ಮಠವು ಶೃಂಗೇರಿ ಮಠದ ಶಿಷ್ಯ ವರ್ಗಕ್ಕೆ ಸೇರಿದ ಶಾಖಾ ಮಠವಾಗಿತ್ತು. ಆದರೆ ಆ ಮಠದಲ್ಲಿ ಈಗ ಶಿವಳ್ಳಿ ಬ್ರಾಹ್ಮಣರೊಬ್ಬರು ಯತಿಗಳಾಗಿದ್ದಾರೆ. ಅವರು ಶೃಂಗೇರಿ ಮಠಕ್ಕೂ, ಉಡುಪಿಯ ಮಾಧ್ವ ಮಠಗಳಿಗೂ ಅವರವರಿಗೆ ಬೇಕಾಗುವಂತೆ ವರ್ತಿಸಿಕೊಳ್ಳುತ್ತಾರೆ. ಹೇಗಿದ್ದರೂ ಆದಿಯಲ್ಲಿ ಇವರ ಮಠವು ಶೃಂಗೇರಿ ಸಂಸ್ಥಾನದ ಶಿಚ್ಯ ವರ್ಗಕ್ಕೆ ಸೇರಿದ್ದೆಂದೂ, ತಮ್ಮದು ತೋಟಕಾಚಾರ್ಯ ಪರಂಪರೆ ಎಂದೂ ಒಪ್ಪಿಕೊಳ್ಳುತ್ತಾರೆ.

ಮುಂದುವರಿಯುವುದು

Leave a Reply

Your email address will not be published. Required fields are marked *