Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕುಕ್ಕೆ ಕ್ಷೇತ್ರದ ಚಾರಿತ್ರಿಕ ಹಿನ್ನೆಲೆ- ಭಾಗ 37

* ಡಾ. ಮ. ಸು. ಅಚ್ಚುತ ಶರ್ಮಾ, ಮಂಗಳೂರು.

# ಕಲ್ಯಾಣಪುರದಿಂದ ಉತ್ತರಕ್ಕೆ ಇರುವ ಹೆಚ್ಚಿನ ಶಿವಳ್ಳಿ ಬ್ರಾಹ್ಮಣರು ಈಗಲೂ ಸ್ಮಾರ್ತರಾಗಿಯೆ ಉಳಿದು ಹಂಗಾರಕಟ್ಟೆ ಹತ್ತಿರ ಇರುವ ಬಾಳಕುದುರು ಎಂಬ ಸ್ಮಾರ್ತ ಮಠದ ಶಿಷ್ಯ ವರ್ಗದವರಾಗಿ ಶ್ರೀ ಶೃಂಗೇರಿ ಮಠದ ಗುರುತ್ವವನ್ನು ಒಪ್ಪಿಕೊಂಡು ವೈದಿಕ ಧರ್ಮಾನುಯಾಯಿಗಳಾಗಿರುತ್ತಾರೆ. ಇದನ್ನೆಲ್ಲಾ ವಿಮರ್ಶಿಸುವಾಗ ಈ ಮಾಧ್ವರ ವ್ಯಾಪಕತೆಯು ಈ ಜಿಲ್ಲೆಯ ದೃಷ್ಟಿಯಿಂದ ಹೆಚ್ಚಿನ ಮಟ್ಟಿಗೆ ಇಲ್ಲವೆಂದೇ ಹೇಳಬಹುದು.

ಆದರೆ ಈ ಕನ್ನಡ ಜಿಲ್ಲೆಯ ಮಾಧ್ವರು ಪಾಕ ಕುಶಲರೂ, ವ್ಯಾಪಾರ ಕುಶಲರೂ ಆದುದರಿಂದ ”ಉಡುಪಿ ಶಿವಳ್ಳಿ ಬ್ರಾಹ್ಮಣರ ಹೊಟೇಲು” ಎಂಬ ಹೆಸರಿನಿಂದ ಹೆಚ್ಚಿನ ಪಟ್ಟಣಗಳಲ್ಲಿ ಊಟದ ಮತ್ತು ಕಾಫಿ ಹೊಟೇಲುಗಳನ್ನು ತೆರೆದು ಅವುಗಳ ಸಂಪಾದನೆಯಿಂದ ಧನಿಕರಾಗಿ ಮೆರೆದುಕೊಂಡು ಬಂದುದರಿಂದ ಇವರ ವ್ಯಾಪಕತೆಯು ಜಿಲ್ಲೆಯಲ್ಲೂ ಭಾರತದ ಇತರ ಕಡೆಗಳಲ್ಲೂ ಹೆಚ್ಚಿತು.

ಕನ್ನಡ ಜಿಲ್ಲೆಯ ಮಾಧ್ವರಿಗೂ ಉತ್ತರಾದಿ ಮಠವಾದ ವ್ಯಾಸರಾಯ ಮಠದ ಶಿಷ್ಯ ವರ್ಗದ ಕರ್ನಾಟಕದ ಇತರ ಕಡೆಗಳಲ್ಲಿರುವ ಮಾಧ್ವರಿಗೂ ತುಂಬಾ ವ್ಯಾತ್ಯಾಸವಿದೆ. ಅವರು ಸಾಧಾರಣ ಶ್ರೀ ಮಧ್ವಾಚಾರ್ಯರ ತತ್ವವನ್ನು ಕ್ರಮವರಿತು ಪಾಲಿಸುತ್ತಾರೆ. ಅವರು ಕನ್ನಡ ಜಿಲ್ಲೆಯ ಮಾಧ್ವರಂತೆ ಶಿವಾಲಯಗಳನ್ನು ವೈಷ್ಣವ ದೇವಾಲಯಗಳನ್ನಾಗಿ ಪರಿವರ್ತಿಸಲು ತೊಡಗಿದ್ದು ಹೆಚ್ಚಿನ ಮಟ್ಟಿಗೆ ತಿಳಿದುಬರುವುದಿಲ್ಲ. ಅವರಲ್ಲಿ ಮಡಿ ಮೈಲಿಗೆ ಆಚರಣೆ ತುಂಬಾ ಇದೆ. ಅವರಲ್ಲಿ ಕೆಲವರು ಈಗಲೂ ಶೃಂಗೇರಿ ಮಠವು ವೈಷ್ಣವ ಮತವನ್ನು ಒಳಗೊಂಡ ಶಣ್ಮತ (ಶೈವ, ವೈಷ್ಣವ, ಶಾಕ್ತೆಯ, ಗಾಣಪತ್ಯ, ಸೌರ ಮತ್ತು ಸ್ಕಾಂದ) ಸ್ಥಾಪನಾಚಾರ್ಯ ತತ್ವ ಪ್ರಕಾರ ವೈಷ್ಣವ ಮತದ ಸ್ಥಾಪನೆ ಕೂಡ ಆದಿ ಶಂಕರರಿಂದಲೇ ಸ್ಥಾಪಿಸಲ್ಪಟ್ಟಿದೆ ಎಂಬ ಭಾವನೆಯಿಂದ ಭೇದ ಭಾವನೆ ಇಟ್ಟುಕೊಳ್ಳದೆ ಶೃಂಗೇರಿ ಮಠವನ್ನು ತಮ್ಮ ಗುರು ಮಠವೆಂದು ಒಪ್ಪಿಕೊಳ್ಳುತ್ತಾರೆ.

ವಿಜಯನಗರ ಸಾಮ್ರಾಜ್ಯವು ಅಳಿದುಹೋದುದು ಕ್ರಿ. ಶ. 1644ರಲ್ಲಿ. ಅದರ ಹೆಚ್ಚಿನ ಬಲವು 1582ರಲ್ಲಿಯೇ ಕುಂದಿ ಹೋದುದರಿಂದ ವಿಜಯನಗರದ ಮಾಂಡಲೀಕರಾಗಿ ನೇಮಕ ಹೊಂದಿದ ಕೆಳದಿ ನಾಯಕರು 1582ರಲ್ಲೇ ಸ್ವತಂತ್ರರಾದರು. ಅದೇ ಸಮಯದಲ್ಲಿ ಪೋರ್ತುಗೀಸರು ಬಲವಾಗಿ ನೆಲೆಗೊಂಡರು. ಕನ್ನಡ ಜಿಲ್ಲೆಯ ಸಣ್ಣ ಸಣ್ಣ ಪಾಳೇಯಗಾರರಾದ ಬಂಗರು, ಚೌಟರು, ಅಜಿಲರು, ಬಲ್ಲಾಳರು, ಸ್ವತಂತ್ರತೆಯನ್ನು ಸ್ಥಾಪಿಸಿಕೊಂಡು ಅರೊಳಗೆ ಜಗಳಾಡಿಕೊಳ್ಳುತ್ತಿದ್ದರು. ಈ ಅರಾಜಕತ್ವದ ಸಂದರ್ಭದಲ್ಲಿ ಶ್ರೀ ಶಂಕರರನ್ನೂ, ಅದ್ವೈತವನ್ನೂ ವಿರೋಧಿಸುವ ಉಡುಪಿಯ ಸೋದೆ ಮಠದ ಶ್ರೀ ವಾದಿರಾಜ ಸ್ವಾಮಿಗಳು ಕೆಲವು ಪಾಳೆಗಾರರ ಸಹಾಯದಿಂದ ಪ್ರಬಲರಾಗಿ ಜಿಲ್ಲೆಯ ಹೆಚ್ಚು ಉತ್ಪತ್ತಿ ಇರುವ ಕೆಲವು ಶಿವಾಲಯಗಳನ್ನು ಆಕ್ರಮಿಸಿ ಶೃಂಗೇರಿ ಮಠದ ಶಿಷ್ಯರಾದ ಆ ದೇವಾಲಯಗಳ ಅರ್ಚಕ ಮತ್ತು ಆಡಳಿತೆದಾರರಾದ ಸ್ಥಳದ ಸ್ಮಾರ್ತ ಬ್ರಾಹ್ಮಣರನ್ನು ಹೊರಹಾಕುವುದರಲ್ಲಿ ಮತ್ತು ಆ ಶಿವಾಲಯಗಳನ್ನು ಮಾಧ್ವ ಮತದ ಕ್ರಮಗಳಿಗೆ ಪರಿವರ್ತಿಸುವುದರಲ್ಲಿ ಜಯಶೀಲರಾದರು.

ಮುಂದುವರಿಯುವುದು

Leave a Reply

Your email address will not be published. Required fields are marked *