Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಮನೋಮಿತ್ರ ಡಾ| ಪಿ. ವಿ. ಭಂಡಾರಿ

  • ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ

# ಚುನಾವಣಾ ಆಯೋಗದ ಅಧಿಕಾರ ಏನೆಂಬುದನ್ನು ರಾಷ್ಟ್ರಕ್ಕೇ ತೋರಿಸಿಕೊಟ್ಟ ಟಿ.ಎನ್.ಶೇಷನ್‌ರಿಂದ ಪ್ರಭಾವಿತರಾಗಿ ಶೇಷನ್ ಮಾದರಿಯಲ್ಲಿ ಜಗತ್ತನ್ನೇ ತಿರುಗಿಸುತ್ತೇನೆ ಎಂಬ ಹಂಬಲ ಹೊಂದಿದ್ದ ಹುಡುಗ, ರಾಮಕೃಷ್ಣ ಹೆಗಡೆಯವರನ್ನು ಕಂಡು ಜನಪರ ಕಾಳಜಿಯನ್ನು ಮೊಳಕೆ ಬರಿಸಿಕೊಂಡಿದ್ದಾತನ ಬದುಕಿನ ಮಗ್ಗುಲು ಬದಲಾಗಿ, ಅದೆಷ್ಟೋ ಜನರ ಬದುಕು ಬದಲಿಸಿದೆ. ಉಡುಪಿ ಜಿಲ್ಲೆಯಲ್ಲಿ ಮಾನಸಿಕ ಆರೋಗ್ಯದ ಅಭಿಯಾನವೇ ಆರಂಭವಾಗಿದೆ, ವ್ಯಸನ ಮುಕ್ತಿಯ ಆಂದೋಲನವೇ ಸಾಕಾರಗೊಳ್ಳುತ್ತಿದೆ. ಶೇಷನ್ ಮಾದರಿಯಲ್ಲಿ ಭೂಮಿ ತಿರುಗಿಸುವ ಕನಸು ಇಂದು ಘಾಸಿಯಾದ ಮನಸುಗಳನ್ನು ಆದರಿಸುವ ಶಕ್ತಿಯಾಗಿದೆ, ಅಶಕ್ತರ ಚೈತನ್ಯವಾಗಿದೆ. ಇವರೇ ರಾಷ್ಟ್ರಖ್ಯಾತಿಯ ಮನೋಮಿತ್ರ, ಉಡುಪಿ ದೊಡ್ಡಣಗುಡ್ಡೆಯ ಡಾ| ಎ.ವಿ. ಬಾಳಿಗಾ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ| ಪಣಂಬೂರು ವೆಂಕಟರಾಯ ಭಂಡಾರಿ (ಡಾ| ಪಿ.ವಿ. ಭಂಡಾರಿ).

ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆ ಸಹಿತ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಕ್ರಾಂತಿಯನ್ನೇ ಮಾಡುತ್ತಿರುವ ಡಾ| ಪಿ.ವಿ. ಭಂಡಾರಿ, 370ಕ್ಕೂ ಹೆಚ್ಚು ನಿರಂತರ ಮಾಸಿಕ ಶಿಬಿರಗಳು, ಆಸ್ಪತ್ರೆ, ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ 300ಕ್ಕೂ ಹೆಚ್ಚು ಮದ್ಯ ವರ್ಜನ ಶಿಬಿರಗಳು, ಲೆಕ್ಕವಿಲ್ಲದಷ್ಟು ವಿದ್ಯಾರ್ಥಿಗಳಿಗೆ, ಯುವಕರಿಗೆ ಮಾರ್ಗದರ್ಶಿ ತರಗತಿಗಳು, ಉಪನ್ಯಾಸಗಳು, ತರಬೇತಿ ಕಾರ್‍ಯಾಗಾರಗಳನ್ನು ನಡೆಸಿದ್ದಾರೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ, ಆಡಳಿತ ನಿರ್ವಹಣೆಯ ಬಿಡುವಿಲ್ಲದ ಕಾರ್‍ಯಬಾಹುಳ್ಯದಲ್ಲೂ ಬಡವರು, ಶೋಷಿತರೆಡೆಗೆ ಅಪಾರ ಕಾಳಜಿಯ ಸ್ಪಂದನೆ, ಸಾಮಾಜಿಕ ಚಟುವಟಿಕೆಗಳು, ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮೌನಕ್ರಾಂತಿಯ ಈ ಸಾಧಕ ಅದೆಷ್ಟೂ ವ್ಯಸನ ಮುಕ್ತ ವ್ಯಕ್ತಿಗಳ, ಅವರ ಕುಟುಂಬದವರ ಮನಸ್ಸಿನಲ್ಲಿ ನಿತ್ಯ ಆರಾಧಿಸಲ್ಪಡುತ್ತಾರೆ.

ರಾಜ್ಯದಲ್ಲೇ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಜಿಲ್ಲೆಗೆ ಹೆಸರು ಬರುವಂತೆ ಮಾಡಿದವರೇ ಡಾ| ಭಂಡಾರಿಯವರು. ಉಡುಪಿಯ ಸರಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಮನೋವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಡಾ| ಭಂಡಾರಿಯವರ ಅವಿರತ ಶ್ರಮ ಮತ್ತು ಇಚ್ಛಾಶಕ್ತಿಯಿಂದ ಅವರ ತಾಯಿ ವಿಶಾಲಾಕ್ಷೀ ಭಂಡಾರಿ ಮತ್ತು ಆಭರಣ ಸಂಸ್ಥೆಯ ದೇಣಿಗೆಯಿಂದ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ರಾಜ್ಯದಲ್ಲೇ ಮೊದಲ ಮನೋರೋಗಿಗಳ ಪ್ರತ್ಯೇಕ ವಾರ್ಡ್ 2004ರಲ್ಲಿ ಆರಂಭವಾಯಿತು. ಇದರಿಂದ ಜಿಲ್ಲೆಯೇ ರಾಜ್ಯಮಟ್ಟದಲ್ಲಿ ಗುರುತಿಸುವಂತಾಯಿತು. ಮುಂದೆ ಮದ್ಯ ವ್ಯಸನಿಗಳ ಆರೈಕೆಯ ವಿಭಾಗವೂ ಸರಕಾರಿ ಆಸ್ಪತ್ರೆಯಲ್ಲಿ ಚೊಚ್ಚಲ ಪ್ರಯತ್ನವಾಗಿ ಆರಂಭವಾಯಿತು. ಈ ವಿಭಾಗಗಳ ಯಶಸ್ವಿ ಕಾರ್‍ಯನಿರ್ವಹಣೆಯಲ್ಲಿ ಡಾ| ಭಂಡಾರಿ ಅವರ ಪಾತ್ರ ಸದಾ ಸ್ತುತ್ಯರ್ಹ.

ಧನಿಕರಲ್ಲದವರೂ ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ನೆಲೆಯಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಿದ್ದ ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ)ಯ ರೂಪುರೇಷೆಗಳನ್ನು ಸಿದ್ಧಪಡಿಸುವುದರಲ್ಲಿ ಮತ್ತು ಅನುಷ್ಠಾನಿಸುವುದರಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದ ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿದ್ದ, ನಿವೃತ್ತಿ ಬಳಿಕ ಮಣಿಪಾಲದ ಎಂಐಟಿ ಪ್ರಾಚಾರ್‍ಯರಾಗಿ, ಮಾಹೆ ಸಹ ಉಪ ಕುಲಪತಿಯಾಗಿ ಕಾರ್‍ಯ ನಿರ್ವಹಿಸಿದ್ದ ಮಹಾನ್ ಮಾನವತಾವಾದಿ ಪ್ರೊ| ಪಣಂಬೂರು ವರದರಾಯ ಭಂಡಾರಿ ಅವರ ಏಕೈಕ ಪುತ್ರ ಡಾ| ಪಿ.ವಿ. ಭಂಡಾರಿ ಅವರು ತಂದೆಯವರಂತೆಯೇ ಸಮಾಜಮುಖಿ ನೆಲೆಗಟ್ಟನ್ನು ಗಟ್ಟಿಗೊಳಿಸುತ್ತ ಮುಂದುವರಿಯುತ್ತಿದ್ದಾರೆ. ತಾಯಿ, ಕೆನರಾ ಬ್ಯಾಂಕಿನ ನಿವೃತ್ತ ಅಧಿಕಾರಿ, ಜತೆಗೆ ಸಂಬಂಧಿ ಡಾ| ಮೀರಾ ಕಾಮತ್, ಗುರುಗಳಾದ ಡಾ| ಎಸ್‌.ಎಂ.ಎಲಿ, ಡಾ| ಪಿ.ಎಸ್‌.ವಿ.ಎನ್ ರಾವ್, ಡಾ| ಸತೀಶ್ ರಾವ್, ಡಾ| ನಾಗೇಶ್ ಪೈ, ಡಾ| ಶ್ರೀಪತಿ ಭಟ್, ಡಾ| ಗೋಪಿನಾಥ್, ವೃತ್ತಿ ಮಾರ್ಗದರ್ಶಕರಾದ ಡಾ| ಯು.ಎಂ ವೈದ್ಯ, ಡಾ| ಆರ್‌.ಎನ್ ಭಟ್, ಆದರ್ಶಪ್ರಾಯರಾದ ಡಾ| ಅಶೋಕ್ ಪೈ ಅವರ ಪ್ರಭಾವ ಡಾ| ಭಂಡಾರಿ ಅವರು ಈ ಮಟ್ಟಕ್ಕೆ ತಲುಪಲು ಕಾರಣ ಮತ್ತು ಪ್ರೇರಣೆ.

ಡಾ| ಪಿ. ವಿ. ಭಂಡಾರಿಯವರು ಎಪ್ರಿಲ್ 24, 1972ರಂದು ದಾವಣಗೆರೆಯಲ್ಲಿ ಜನಿಸಿದರು. ಆ ಸಂದರ್ಭ ಅವರ ತಂದೆ ಪ್ರೊ| ವರದರಾಯ ಭಂಡಾರಿಯವರು ದಾವಣಗೆರೆಯ ಬಿಡಿಟಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ತಾಯಿ ಮೀನಾಕ್ಷೀ ವಿ. ಭಂಡಾರಿಯವರು ಕೆನರಾ ಬ್ಯಾಂಕ್ ಅಧಿಕಾರಿ. ಪಿ.ವಿ. ಭಂಡಾರಿಯವರು ಪೂರ್ವ ಪ್ರಾಥಮಿಕದಿಂದ 2ನೇ ತರಗತಿ ವರೆಗಿನ ಶಿಕ್ಷಣವನ್ನು ದಾವಣಗೆರೆಯ ಲೂರ್ಡ್ಸ್ ಬಾಯ್ಸ್ ಸ್ಕೂಲ್‌ನಲ್ಲಿ, 3ನೇ ತರಿಗತಿಯಿಂದ 4ನೇ ತರಗತಿ ವರೆಗೆ ಫಾತಿಮಾ ಕಾನ್ವೆಂಟ್ ಕುಶಾಲನಗರ, 5ನೇ ತರಗತಿ ಭಾರತ ಮಾತಾ ಇಂಗ್ಲಿಷ್ ಮಾಧ್ಯಮ ಶಾಲೆ, ಕೊಪ್ಪ, 6ರಿಂದ 8ನೇ ತರಗತಿ ಕೆನರಾ ಹೈಸ್ಕೂಲ್ ಡೊಂಗರಕೇರಿ, 9ರಿಂದ 10ನೇ ತರಗತಿ ವಿದ್ಯಾಭ್ಯಾಸ ಡಿಆರ್‌ಆರ್ ಸ್ಕೂಲ್, ದಾವಣಗೆರೆಯಲ್ಲಿ ಪಡೆದರು. ಉದ್ಯೋಗ ನಿಮಿತ್ತ ತಾಯಿಯವರು ವರ್ಗಾವಣೆ ಹೊಂದುತ್ತಿದ್ದರು. ಇದರಿಂದ ಬೇರೆ ಬೇರೆ ಸಂಸ್ಥೆಗಳಲ್ಲಿ ಅವರು ಶಿಕ್ಷಣ ಪಡೆಯುವಂತಾಯಿತು. ಇದರಿಂದ ಬೇರೆ ಬೇರೆ ಊರುಗಳ ಪರಿಚಯವೂ ಅವರಿಗೆ ಆಯಿತು.

ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ (1990-92), ದಾವಣಗೆರೆ ಜೆಜೆ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ (1992-96), ಕೆಎಂಸಿ ಮಣಿಪಾಲದಲ್ಲಿ ಡಿಪ್ಲೊಮಾ ಇನ್ ಸೈಕಿಯಾರ್ಟಿಕ್ ಮೆಡಿಸಿನ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾದಲ್ಲಿ ಚಿನ್ನದ ಪದಕದೊಂದಿಗೆ ತೇರ್ಗಡೆ (1996-98), ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಡಿಎನ್‌ಬಿ ವ್ಯಾಸಂಗ (1998-99) ಪೂರೈಸಿದ ಡಾ| ಪಿ. ವಿ. ಭಂಡಾರಿಯವರು ಮನೋವೈದ್ಯರಾಗಿ ತಮ್ಮ ಚೊಚ್ಚಲ ಸೇವೆಯನ್ನು ಆರಂಭಿಸಿದ್ದು ಸೇವೆಯನ್ನೇ ಧ್ಯೇಯವನ್ನಾಗಿಸಿದ್ದ, ಬಡವರ ಭರವಸೆಯಾಗಿದ್ದ ಉಡುಪಿಯ ಮಿಶನ್ ಆಸ್ಪತ್ರೆಯಲ್ಲಿ (ಅಕ್ಟೋಬರ್ 16, 1999).

ರಾಮಕೃಷ್ಣ ಹೆಗಡೆಯವರನ್ನು ಕಂಡು ಅವರಂತೆ ರಾಜಕಾರಣಿಯಾಗಬೇಕು ಎಂಬ ಆಸೆ ಪಿ.ವಿ. ಭಂಡಾರಿಯವರಲ್ಲಿ ಚಿಗುರಿತ್ತು. ಜತೆಗೆ ಸಂಬಂಧಿ ಡಾ| ಮೀರಾ ಕಾಮತ್,  ಡಾ| ಎಂ.ಎಸ್ ಎಲಿ ಅವರು ವೈದ್ಯಕೀಯ ಸೇವೆಯಿಂದ ಜನರ ಪ್ರೀತ್ಯಾದರ ಗಳಿಸಿದ್ದನ್ನು, ಅವರ ಮನೆ ರೋಗಿಗಳು ಸಾಲುಗಟ್ಟಿ ನಿಲ್ಲುತ್ತಿದ್ದುದನ್ನು ಎಳವೆಯಿಂದಲೇ ಗಮನಿಸಿದ್ದ ಪಿ.ವಿ. ಭಂಡಾರಿಯವರಿಗೆ ಅವರಂತೆಯೇ ಆಗಬೇಕೆಂಬ ಬಯಕೆಯೂ ಇತ್ತು. ತಂದೆ ಪ್ರೊ| ವರದರಾಯರಿಗೆ ಮಗ ವಕೀಲನಾಗಬೇಕು ಎಂಬ ಆಸೆ ಇತ್ತು. ಚೆನ್ನೈಗೆ ತೆರಳಿ ಕಾನೂನು ಪದವಿ ಪಡೆಯಬೇಕೆಂಬುದು ಅವರ ಇಚ್ಛೆಯಾಗಿತ್ತು. ತಾಯಿ ಮೀನಾಕ್ಷೀಯವರಿಗೆ ಮಗ ವೈದ್ಯನಾಗಬೇಕೆಂಬ ಆಸೆ ಇತ್ತು.

ಖ್ಯಾತ ಮನೋವೈದ್ಯರಾಗಿದ್ದ ಮಂಗಳೂರಿನ ಡಾ| ಅಶೋಕ್ ಪೈ ಎಳವೆಯಿಂದಲೇ ಪಿವಿ ಭಂಡಾರಿಯವರನ್ನು ಪ್ರಭಾವಿಸಿದ್ದರು. ಭಂಡಾರಿಯವರ ತಂದೆಯವರು ಮನೋ ರೋಗಿಗಳನ್ನು ಡಾ| ಅಶೋಕ್ ಪೈ ಅವರಲ್ಲಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದರು. ಈ ನಡುವೆ ಡಾ| ಅಶೋಕ್ ಪೈ ಅವರು ದಾವಣಗೆರೆಗೆ ಬಂದಿದ್ದರು. ಕಾಲೇಜಿನಲ್ಲಿ ಹದಿಹರೆಯದ ಮಾನಸಿಕ ಸಮಸ್ಯೆಗಳ ಬಗ್ಗೆ ಭಾಷಣ ನೀಡಿದ್ದರು. ಈ ಭಾಷಣದಿಂದ ಭಂಡಾರಿಯವರಿಗೆ ಡಾ| ಅಶೋಕ್ ಪೈ ಅವರ ಬಗ್ಗೆ ಇನ್ನಷ್ಟು ಆಸಕ್ತಿ ಬೆಳೆಯುವಂತೆ ಮಾಡಿತು. ಒಮ್ಮೆ ಭಂಡಾರಿಯವರು ಬೆಂಗಳೂರಿನಿಂದ ಬಸ್ಸಿನಲ್ಲಿ ದಾವಣಗೆರೆಗೆ ಬರುತ್ತಿದ್ದಾಗ ಮಾನಸಿಕ ಸಮಸ್ಯೆಗಳ ಬಗ್ಗೆ ಡಾ| ಅಶೋಕ್ ಪೈ ಅವರು ಬರೆದ ‘ಉಷಾ ಕಿರಣ’ ಕೃತಿಯನ್ನು ಓದಲು ಆರಂಭಿಸಿದರು. ಕೃತಿ ಎಷ್ಟು ಆಕರ್ಷಕವಾಗಿತ್ತೆಂದರೆ ಬಸ್ಸಿನಲ್ಲಿಯೇ ಇಡೀ ಕೃತಿಯನ್ನು ಅವರು ಓದಿ ಮುಗಿಸಿದ್ದರು.  ಇದರಿಂದಾಗಿ ಅವರಿಗೆ ಮಾನಸಿಕ ಆರೋಗ್ಯದ ಬಗ್ಗೆ ಕುತೂಹಲ ಹೆಚ್ಚಾಗಿದ್ದು ಮಾತ್ರವಲ್ಲದೆ, ತಾನೂ ಮನೋವೈದ್ಯನಾಗಿ ಮಾನಸಿಕ ವೇದನೆಯನ್ನು ಅನುಭವಿಸುವವರಿಗೆ ಉಪಶಮನ ನೀಡಬೇಕೆಂಬ ದೃಢ ನಿಲುವು ತಳೆಯಲು ಕಾರಣವಾಯಿತು. ಮುಂದೆ ಇದೇ ದಾರಿಯಲ್ಲಿ ಅವರು ಮುನ್ನಡೆದರು.

ಜೀವನದಲ್ಲಿ ಎದುರಾಗುವ ಸಂಕಷ್ಟಗಳು ಮತ್ತು ಅವುಗಳನ್ನು ಸವಾಲಿನಂತೆ ಎದುರಿಸಿ ಜಯಿಸುವ ಪರಿಯನ್ನು ಪಿ.ವಿ ಭಂಡಾರಿಯವರು ತಂದೆಯಿಂದ ಕಲಿತರು. ರಜಾ ದಿನಗಳಲ್ಲಿ ತಂದೆ ತನ್ನನ್ನು ನಡೆಸಿಕೊಂಡು ಕರೆದೊಯ್ಯುತ್ತಿದ್ದುದು, ದಾರಿಯುದ್ದಕ್ಕೂ ಜೀವನಾನುಭವ, ನೀತಿ ಪಾಠಗಳನ್ನು ಹೇಳಿಕೊಡುತ್ತಿದ್ದುದು, ಸಮಾಜಕ್ಕಾಗಿ ಏನಾದರೂ ಮಾಡಲೇಬೇಕು ಎಂಬುದನ್ನು ಒತ್ತಿ ಹೇಳುತ್ತಿದ್ದುದು, ಕೊನೆಗೆ ತಿಂಡಿ ಕೊಡಿಸಿ ಮನೆಗೆ ವಾಪಸಾಗುತ್ತಿದ್ದ ನೆನಪು ಭಂಡಾರಿಯವರಲ್ಲಿ ಇಂದಿಗೂ ಹಸಿರಾಗಿಯೇ ಇದೆ.

ದಾವಣಗೆರೆಯಲ್ಲಿ ಎಂಬಿಬಿಎಸ್ ಶಿಕ್ಷಣ ಪಡೆಯುತ್ತಿದ್ದ ಸಮಯ. ಸ್ಟೂಡೆಂಟ್ ಯೂನಿಯನ್ ರಾಜಕೀಯದಲ್ಲಿ ತೊಡಗಬಾರದು, ದುಶ್ಚಟಗಳಿಗೆ ಒಳಗಾಗಬಾರದು ಎಂದು ತಂದೆಯವರು ಹೇಳಿದ್ದರು. ಈ ಕಾರಣದಿಂದ ಯಾವುದೇ ಸ್ಟೂಡೆಂಟ್ ಯೂನಿಯನ್‌ನಲ್ಲಿ ಭಂಡಾರಿಯವರು ತೊಡಗಿಸಿಕೊಂಡಿರಲಿಲ್ಲ. ಇದಾದ ಬಳಿಕ ಜೂನಿಯರ್ ಡಾಕ್ಟರ್ಸ್ ಅಸೋಸಿಯೇಶನ್‌ಗೆ ಚುನಾವಣೆ ಇತ್ತು. ವಿಶೇಷವೆಂದರೆ ಆ ವರೆಗೆ ಅಧ್ಯಕ್ಷರ ಹುದ್ದೆಗೆ ಸರ್ವಾನುಮತದಿಂದಲೇ ಆಯ್ಕೆಯಾಗುತ್ತಿದ್ದರು. ಎಲ್ಲಡೆ ಭಂಡಾರಿಯವರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿತ್ತು. ಆ ಹೊತ್ತಿಗೇ ಭಂಡಾರಿಯವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರಯ ಎಂಬುದಕ್ಕೆ ಇದು ಉದಾಹರಣೆ.

ಆ ಸಂದರ್ಭ ವ್ಯಕ್ತಿಯೊಬ್ಬರ ಪರವಾಗಿ ವೈದ್ಯರೊಬ್ಬರು ಭಂಡಾರಿಯವರಿಗೆ ಚುನಾವಣೆಗೆ ಸ್ಪರ್ಧಿಸದಂತೆ ಒತ್ತಡ ಹೇರಿದರು. ಭಂಡಾರಿಯವರಿಗೆ ಹುದ್ದೆಯಲ್ಲಿ ವಿಶೇಷ ಆಸೆ/ಆಸಕ್ತಿ ಇರಲಿಲ್ಲವಾದರೂ, ಒತ್ತಡ ಹೇರುವುದನ್ನು, ವ್ಯಕ್ತಿ ಗೌರವಕ್ಕೆ ಧಕ್ಕೆ ಉಂಟಾಗುವುದನ್ನು ಅವರು ಸಹಿಸಲಿಲ್ಲ. ಇಂದಿಗೂ ಅವರು ಯಾವುದೇ ಒತ್ತಡಕ್ಕೆ, ಆಮಿಷಕ್ಕೆ ಬಲಿಯಾಗುವವರಲ್ಲ. ತಂದೆಯವರ ಅನುಮತಿ ಪಡೆದು ಚುನಾವಣೆಗೆ ನಿಂತೇ ಬಿಟ್ಟರು. ಅದೇ ಮೊದಲ ಬಾರಿಗೆ ಸಂಘ ಏನೇನು ಮಾಡುತ್ತದೆ ಎಂಬ ಬಗ್ಗೆ ಪ್ರಣಾಳಿಕೆ ಬಿಡುಗಡೆ ಮಾಡಿದರು. ಭಾಷಣಗಳ ಮೂಲಕ ತಮ್ಮ ಯೋಜನೆಗಳನ್ನು ಹೇಳಿದರು. ಪ್ರಭಾವಿಗಳ ಮುಂದೆಯೇ ಭಾರೀ ಮತಗಳ ಅಂತರದಿಂದ ಜಯಗಳಿಸಿದರು (160 ಮತಗಳಲ್ಲಿ 100ಕ್ಕೂ ಹೆಚ್ಚು ಮತಗಳು).  ನೀಡಿದ ಭರವಸೆಯಂತೆ ಪ್ರತಿ ತಿಂಗಳು ವಿವಿಧ ಕಾರ್‍ಯಕ್ರಮಗಳನ್ನು ನಡೆಸಿದರು. ಸಪ್ತಾಹಗಳನ್ನು ಹಮ್ಮಿಕೊಂಡರು. ಡಾ| ಬಿ.ಎಂ ಹೆಗ್ಡೆ, ಡಾ| ದುಗಾನಿ, ಡಾ| ಪ್ರಸನ್ನ ಕುಮಾರ್ ಅವರಂಥ ಖ್ಯಾತನಾಮರನ್ನು ಕರೆಯಿಸಿ ಸಂವಾದ ಕಾರ್‍ಯಕ್ರಮಗಳನ್ನು ಹಮ್ಮಿಕೊಂಡರು. ಹೀಗೆ ಮಾದರಿ ಅಧ್ಯಕ್ಷನಾಗಿ ಕಾರ್‍ಯ ನಿರ್ವಹಿಸಿ ಅಂದು ಒತ್ತಡ ಹೇರಿದ್ದ ವ್ಯಕ್ತಿಯಿಂದಲೇ ಭೇಷ್ ಎನಿಸಿಕೊಂಡರು. ಭಂಡಾರಿಯವರು ಚುನಾವಣಾ ಆಯುಕ್ತ, ಬೆಂಕಿಯ ಚೆಂಡು ಎಂದೇ ಹೆಸರಾಗಿದ್ದ ಟಿ.ಎನ್ ಶೇಷನ್ ಅವರ ಕಟ್ಟಾ ಅಭಿಮಾನಿಯಾಗಿದ್ದರು. ‘ಶೇಷನ್ ಮಾದರಿಯಲ್ಲಿ ಭೂಮಿ ತಿರುಗಿಸುತ್ತೇನೆ’ ಎಂಬ ಕನಸು ಹೊಂದಿದ್ದರು. ಕಾರ್‍ಯಕ್ರಮವೊಂದಕ್ಕೆ ದಾವಣಗೆರೆಗೆ ಆಗಮಿಸಿದ್ದ ಶೇಷನ್ ಅವರೊಂದಿಗೆ ಹಸ್ತಲಾಘವ ಮಾಡಿದ್ದ ಸಂಭ್ರಮವನ್ನು ಇಂದಿಗೂ ಅದನ್ನು ನೆನಪಿಸಿಕೊಳ್ಳುವಾಗ ಡಾ| ಭಂಡಾರಿಯರ ಮುಖದಲ್ಲಿ ಮೂಡುವುದನ್ನು ಕಾಣಬಹುದು. ಅಣಕು ಪತ್ರಿಕಾಗೋಷ್ಠಿ ಸ್ಪರ್ಧೆಗಳಲ್ಲಿ ಶೇಷನ್ ಪಾತ್ರವನ್ನು ಡಾ| ಭಂಡಾರಿಯವರು ನಿರ್ವಹಿಸುತ್ತಿದ್ದರು. ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಅವರಿಗೆ ವಿಶೇಷ ಆಸಕ್ತಿ ಇತ್ತು.

ಡಿಎನ್‌ಬಿ ಫೈನಲ್ ಪರೀಕ್ಷೆ ಜೈಪುರದಲ್ಲಿತ್ತು. ಅಲ್ಲಿ ಟ್ಯೂಬರಸ್ ಕ್ಲಿರೋಸಿಸ್ ಎಂಬ ವಿಷಯದ ಬಗ್ಗೆ ಪ್ರಶ್ನೆ ಇತ್ತು. ನಮ್ಮ ಊರಿನಲ್ಲಿ ಆ ಕಾಯಿಲೆ ಇರಲಿಲ್ಲ. ಹಾಗಾಗಿ ಡಾ| ಭಂಡಾರಿಯವರಿಗೆ ಅದರ ಬಗ್ಗೆ ಸೂಕ್ಷ್ಮ ತಿಳಿವಳಿಕೆ ಇರಲಿಲ್ಲ. ಹಾಗಾಗಿ ಅವರು ಪರೀಕ್ಷೆಯಲ್ಲಿ ಅನುತ್ತೀರ್ಣರಾದರು. ಅಪ್ರಾಮಾಣಿಕರಾಗಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಎಲ್ಲ ಅವಕಾಶಗಳೂ ಅವರಿಗಿದ್ದವು. ಆದರೆ ಅವರು ಅದನ್ನು ಅರಿಸಲಿಲ್ಲ. ಅನುತ್ತೀರ್ಣರಾದುದರಲ್ಲಿ ಅವರಲ್ಲಿ ಕಿಂಚಿತ್ ಬೇಸರೂ ಇರಲಿಲ್ಲ. ಯಾಕೆಂದರೆ ಅವರು ಪ್ರಾಮಾಣಿಕರಾಗಿದ್ದರು. ಮುಂದೆ ದಿಲ್ಲಿಯಲ್ಲಿ ನಡೆದ ಪರೀಕ್ಷೆಯಲ್ಲಿ ಅವರು ಉತ್ತೀರ್ಣರಾದರು.

ಬಳಿಕ ಉಡುಪಿ ಜಿಲ್ಲೆಯಲ್ಲಿ ತಮ್ಮ ಸೇವಾ ವೃತ್ತಿಯನ್ನು ಆರಂಭಿಸಿದ ಅವರು ಉಡುಪಿ ಸಹಿತ ಅವಿಭಜಿತ ದಕ್ಷಿಣ ಕನ್ನಡದಲ್ಲೇ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಆಂದೋಲನವನ್ನೇ ಸೃಷ್ಟಿಸಿದ ನಿಸ್ವಾರ್ಥ ಹಾಗೂ ಜನಪರ ಕಾಳಜಿಯ ವೈದ್ಯರಾಗಿದ್ದಾರೆ. ಪ್ರಸ್ತುತ ಉಡುಪಿ ಜಿಲ್ಲೆಯ ಡಾ. ಬಾಳಿಗಾ ಆಸ್ಪತ್ರೆಯ ಮುಖ್ಯಸ್ಥರಾಗಿದ್ದು ಅಲ್ಲಿ ಅವರು ಮಾನಸಿಕ ಚಿಕಿತ್ಸೆಯ ಅಗತ್ಯವುಳ್ಳ ರೋಗಿಗಳ ಹಾಗೂ ಬಡ ರೋಗಿಗಳ ಪಾಲಿನ ದೇವರೇ ಆಗಿ ಕಾರ್‍ಯ ನಿರ್ವಹಿಸುತ್ತಿದ್ದಾರೆ. ಅವರ ಈ ದಶಕಗಳ ಸೇವೆಗೆ ರಾಜ್ಯ ರಾಷ್ಟ್ರ ಮಟ್ಟದಲ್ಲೇ ಮನ್ನಣೆ ನೀಡಬೇಕಾದ ಅಗತ್ಯವಿದೆ. ಡಾ. ಭಂಡಾರಿಯವರ ಸೇವೆಗೆ ಸೇವೆಗೆ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ರಾಜ್ಯ ಸಂಯಮ ಪ್ರಶಸ್ತಿ ದೊರೆತಿದೆ.  ಇವರು ವ್ಯಸನಮುಕ್ತ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಹಲವಾರು ಕೃತಿಗಳನ್ನೂ ರಚಿಸಿದ್ದಾರೆ.

Leave a Reply

Your email address will not be published. Required fields are marked *