Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಪ್ರೀತಿ, ದಾಂಪತ್ಯವನ್ನೂ ಕೊಲ್ಲುತ್ತಿರುವ ಮತಾಂ ತರವೆಂಬ ಭ್ರಮೆ..

ಮತದ ಅಮಲು ಪ್ರೀತಿಯನ್ನು ಚಿವುಟಿ ಹಾಕಿತು..
ಉಡುಪಿ ತಾಲೂಕು ತೋನ್ಸೆ ಗ್ರಾಮದ ಕಂಬಳತೋಟ ಎಂಬಲ್ಲಿ ವಾಸವಾಗಿರುವ ಸದಾನಂದ (35) ತೆಂಗಿನ ತೋಟದ ಕಾರ್ಮಿಕ. ಈತನ ಮನೆ ಬಳಿಯೇ ವಾಸವಾಗಿರುವ ಹಾಜಿರಾ (32) ಮೇಸ್ತ್ರಿ ಕೆಲಸದವರ ಜೊತೆಗೆ ಹೆಲ್ಪರ್ ಆಗಿ ಕೆಲಸಕ್ಕೆ ಹೋಗುತ್ತಿದ್ದ ಕಾರ್ಮಿಕೆ. ಇಬ್ಬರದೂ ಒಕ್ಕಲು ಕುಟುಂಬ. ಇಷ್ಟು ಬರೆದ ಮೇಲೆ ಇವರದು ಬಡ ಕುಟುಂಬ ಎನ್ನುವುದಕ್ಕೆ ಬೇರೆ ಸಾಕ್ಷಿಯ ಅಗತ್ಯವಿಲ್ಲ.
ಹಾಜಿರಾ ಹೆತ್ತವರು ಅನಾರೋಗ್ಯ ಬಾಧಿತರು. ಸಹೋದರರು ಮನೆ ಕಡೆ ಗಮನ ಕೊಟ್ಟವರಲ್ಲ. ಇದರಿಂದಾಗಿ ಹಾಜಿರಾ ಹಾಗೂ ಅನಾರೋಗ್ಯ ಬಾಧಿತ ಹೆತ್ತವರಿಗೆ ಸದಾನಂದ ಸಹಜವಾಗಿಯೇ ಹತ್ತಿರದವನಾದ. ಪರಿಣಾಮವಾಗಿ ಹಾಜಿರಾ-ಸದಾನಂದರು ಪ್ರೇಮಿಗಳಾದರು. ಇವರ ಪ್ರೇಮ ಪ್ರಕರಣಕ್ಕೆ ಅರ್ಧ ದಶಕದ ಇತಿಹಾಸ.
ಇತ್ತೀಚೆಗೆ, ಅಂದರೆ ಐದು ತಿಂಗಳ ಹಿಂದೆ ಹಾಜಿರಾ ಗರ್ಭಿಣಿಯಾದಳು. ನಾಲ್ಕು ತಿಂಗಳ ಕಾಲ ಇಬ್ಬರೂ ಸುಮ್ಮಗಿದ್ದರು. ಗರ್ಭಪಾತ ಮಾಡಿಸಲು ಇವರಿಗೆ ಮನಸ್ಸಿರಲಿಲ್ಲ. ಮದುವೆಯಾಗಲು, ಇವರಿಗೆ ಇವರ ನಡುವಿನ ಮತದ ಭಯ. ಇಬ್ಬರೂ ಬೇರೆ ಬೇರೆ ಮತ (ಧರ್ಮ ಅಲ್ಲ) ಗಳಿಗೆ ಸೇರಿದವರು. ಕೊನೆಗೆ, ಅಂದರೆ ಒಂದು ತಿಂಗಳ ಹಿಂದೆ ಇಬ್ಬರೂ ಗಟ್ಟಿ ಮನಸ್ಸು ಮಾಡಿ ಮದುವೆಯಾಗಲು ನಿರ್ಧರಿಸಿದರು.
ನಮ್ಮನ್ನು ಒಂದು ಮಾಡಿ ಎಂದು ಸದಾನಂದ ದಲಿತ ನಾಯಕರಿಗೆ ಮೊರೆ ಇಟ್ಟಿದ್ದಾನೆ. ಅಂತರ್ಮತೀಯ ಪ್ರೇಮಿಗಳ ಊರು ಕೋಮು ಸೂಕ್ಷ್ಮ ಪ್ರದೇಶ ಎಂಬ ಭಯ ಮತ್ತು ಊರಿನ ಶಾಂತಿ- ನೆಮ್ಮದಿಯ ನೆಪದಲ್ಲಿ ದಲಿತ ನಾಯಕರು ಹಾಜಿರಾಳ ಮತಕ್ಕೆ ಸೇರಿದ ಸಂಘಟನೆಗಳ ನಾಯಕರನ್ನು ಸಂಪರ್ಕಿಸಿ ಸಮಸ್ಯೆಯನ್ನು ಪರಿಹರಿಸುವಂತೆ ಕೋರಿಕೊಂಡಿದ್ದಾರೆ.
ಹಾಜಿರಾ ಹಾಗೂ ಸದಾನಂದ ಇವರ ನಡುವಿನ ಪ್ರೀತಿ, ಪ್ರೇಮ, ಐದು ವರ್ಷಗಳ ದೈಹಿಕ, ಮಾನಸಿಕ ಸಂಬಂಧ, ಹಾಜಿರಾಳ ಗರ್ಭದಲ್ಲಿ ಬೆಳೆಯುತ್ತಿರುವ ಸದಾನಂದ ಮಗುವನ್ನು ಪರಿಗಣಿಸಿ ಇಬ್ಬರನ್ನೂ ಒಂದುಗೂಡಿಸಬೇಕಾದ ಮುಸ್ಲೀಮ್ ಸಂಘಟನೆಗಳ ನಾಯಕರು, ಇವುಗಳೆಲ್ಲವನ್ನೂ ಸಂಪೂರ್ಣವಾಗಿ ಕಡೆಗಣಿಸಿ, ನಿರ್ಲಕ್ಷಿಸಿ, ಕಾಲಕಸದಂತೆ ಕಂಡು ಜೋಡಿಯನ್ನು ಬೇರ್ಪಡಿಸಿದರು.
ಸದಾನಂದ ಮುಸ್ಲೀಮ್ ಮತಕ್ಕೆ ಮತಾಂತರ ಆಗಲು ಒಪ್ಪಿಕೊಂಡಲ್ಲಿ ಹಾಜಿರಾ ಜೊತೆ ಮದುವೆಯಾಗಲು ನಮ್ಮ ಅಭ್ಯಂತರವಿಲ್ಲ, ನಾವೇ ಮುಂದೆ ನಿಂತು ಮದುವೆ ಮಾಡಿಸುತ್ತೇವೆ ಎಂಬುದು ಮುಸ್ಲೀಮ್ ನಾಯಕರ ಸ್ಪಷ್ಟನೆಯಾಗಿತ್ತು. ಮುಸ್ಲೀಮ್ ಆಗಲು ಸದಾನಂದ ಸಿದ್ಧನಿರಲಿಲ್ಲ. ಸದಾನಂದ ಮುಸ್ಲೀಮ್ ಆಗಲು ನಿರಾಕರಿಸಿದ ಕಾರಣಕ್ಕೆ ಮುಸ್ಲೀಮ್ ನಾಯಕತ್ವ ಪ್ರೀತಿಯನ್ನು ಚಿವುಟಿ ಹಾಕುವಲ್ಲಿ ಯಶಸ್ವಿಯಾಯಿತು.
ಈಗ ಗರ್ಭಿಣಿ ಹಾಜಿರಾ ತನ್ನ ಮನೆಯಲ್ಲಿಲ್ಲ. ಮುಸ್ಲೀಮ್ ನಾಯಕರು ಹಾಜಿರಾಳನ್ನು ಅದೆಲ್ಲಿಗೋ ಸಾಗಿಸಿ ಗುಪ್ತ ಸ್ಥಳದಲ್ಲಿ ಇರಿಸಿದ್ದಾರೆ. ಹಾಜಿರಾಳನ್ನು ಓರ್ವ ಮುಸ್ಲೀಮನಿಗೇ ಮದುವೆ ಮಾಡಿ ಕೊಡುವ ನಿರ್ಧಾರ ಮಾಡಿರಬಹುದಾದ ಮುಸ್ಲೀಮ್ ನಾಯಕರಿಗೆ, ಸದಾನಂದನಿಂದಾಗಿ ಹಾಜಿರಾಳ ಗರ್ಭದಿಂದ ಜನಿಸುವ ಒಂದು ಮಗುವನ್ನು ಮುಸ್ಲೀಮ್ ಮತಕ್ಕೆ ಬಳುವಳಿಯಾಗಿ ನೀಡಿದ ಹೆಮ್ಮೆ…
* * *
ಮತದ ಅಮಲು ದಂಪತಿಗಳನ್ನೂ ಬೇರ್ಪಡಿಸಿತು..
ಭರತ್ ರಾಜ್ ಹಾಗೂ ಫರ್ಹಾ ಇಬ್ಬರೂ ಉಡುಪಿ ತಾಲೂಕು ಹಂದಾಡಿ ಗ್ರಾಮದ ಅಕ್ಕ ಪಕ್ಕದ ಮನೆಯವರು. ಫರ್ಹಾಳದು ಬಡ ಕುಟುಂಬ. ತಾಯಿಗೆ ಅಸೌಖ್ಯ. ಅಸೌಖ್ಯದಲ್ಲಿದ್ದ ತಾಯಿ ಯಾಸ್ಮೀನ್ ರನ್ನು ತಿಂಗಳಿಗೊಂದೆರಡು ಬಾರಿಯಂತೆ ಆಸ್ಪತ್ರೆಯೆಗೆ ಕೊಂಡೊಯ್ಯಲು ಫಿರಾಳ ಮನೆಗೆ ಬರುತ್ತಿದ್ದವನು ಪಕ್ಕದ ಮನೆಯ ರಿಕ್ಷಾ ಚಾಲಕ ಭರತ್. ಫರ್ಹಾಳ ತಾಯಿಗೆ ನಡೆದಾಡಲೂ ಆಗುತ್ತಿರಲಿಲ್ಲ. ಆಗ ಫರ್ಹಾಳ ತಾಯಿಯನ್ನು ಕೈ ಹೆಗಲು ಕೊಟ್ಟು ರಿಕ್ಷಾದಲ್ಲಿ ಕುಳಿತುಕೊಳ್ಳಿಸಿ, ಮತ್ತೆ ರಿಕ್ಷಾದಿಂದಿಳಿಸಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದವನು ಇದೇ ಭರತ್.
ಸಹಜವಾಗಿ ಭರತ್ ಹಾಗೂ ಫರ್ಹಾ ನಡುವೆ ಪ್ರೀತಿ ಅಂಕುರಿಸಿದೆ. ಇಬ್ಬರೂ 2012 ರ ಮಾರ್ಚ್ 19 ರಂದು ಮಂಗಳೂರಿನ ಆರ್ಯ ಸಮಾಜದಲ್ಲಿ ವಿವಾಹವಾಗಿದ್ದಾರೆ. ಅದೇ ದಿನ ವಿವಾಹ ನೋಂದಣಿ ಕಚೇರಿಯಲ್ಲಿ ತಮ್ಮ ವಿವಾಹವನ್ನು ನೋಂದಣಿ ಮಾಡಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಫರ್ಹಾಳ ಮನೆಯವರು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿಕೊಂಡಿದ್ದರು. ಹಾಗಾಗಿ ಮದುವೆಯಾಗಿ ಸತಿ ಪತಿಗಳಾದ ಭರತ್ ಹಾಗೂ ಫರ್ಹಾ ಖುದ್ದಾಗಿ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ‘ನಾನು ನನ್ನ ಸ್ವ ಇಚ್ಛೆಯಿಂದ ಭರತ್ನನ್ನು ವಿವಾಹವಾಗಿದ್ದೇನೆ, ನಾನು ಗಂಡನೊಂದಿಗೆ ಇರುತ್ತೇನೆ, ನನಗೆ ಹೆತ್ತವರ ಆಸ್ತಿ-ಪಾಸ್ತಗಳು ಬೇಡ’ ಎಂದು ಆಗ ಫರ್ಹಾ ಹೇಳಿಕೆ ನೀಡಿದ್ದಳು. ಅಂದಿನಿಂದ ಫರ್ಹಾಳನ್ನು ಹೆತ್ತವರು ತಮ್ಮ ಲೆಕ್ಕದಿಂದ ಬಿಟ್ಟು ಬಿಟ್ಟಿದ್ದರು. ದಂಪತಿಗಳು ಸುಖ-ಸಂತೋಷದಿಂದ ದಾಂಪತ್ಯ ಜೀವನ ನಡೆಸುತ್ತಿದ್ದರು.
2012 ರ ಡಿಸೆಂಬರ್ 12 ರಂದು ಫರ್ಹಾ ಉಡುಪಿಯ ಸರಕಾರಿ ಹೆಂಗಸರ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದಳು. ಫರ್ಹಾ ಮಗುವಿಗೆ ಜನ್ಮ ನೀಡಿದ ಬೆನ್ನಿಗೆ ಆಸ್ಪತ್ರೆಗೆ ಭೇಟಿ ನೀಡಿದ ಫರ್ಹಾಳ ಹೆತ್ತವರು ಮತ್ತು ನೆಂಟರು ಕೇವಲ ಎರಡೇ ತಿಂಗಳ ಅಂತರದಲ್ಲಿ ಅದೇನು ಆಕೆಯ ತಲೆಯಲ್ಲಿ ಮತೀಯ ಮೂಲಭೂತವಾದ ತುರುಕಿಸಿದರೋ ಗೊತ್ತಿಲ್ಲ. 2013 ರ ಫೆಬ್ರವರಿ 6 ರಂದು ಭರತ್ನಿಂದ ಫರ್ಹಾಳನ್ನು ಬೇರ್ಪಡಿಸಲು ಆಕೆಯ ಮನೆಯವರು ಹಾಗೂ ಸಂಬಂಧಿಕರು ಪೂರ್ಣ ಯಶಸ್ವಿಯಾದರು. ಎರಡು ತಿಂಗಳ ಮಗುವಿನೊಂದಿಗೆ ಈಗ ಫರ್ಹಾ ಭೂಗತ.
* * *
ಮಾನವಧರ್ಮದಿಂದ ಆದರ್ಶ ದಂಪತಿಗಳಾದರು..
ಕುಂದಾಪುರ ತಾಲೂಕಿನ ಗಂಗೊಳ್ಳಿ ನಿವಾಸಿಗಳಾದ ಸದಾಶಿವ ಹಾಗೂ ಫಿಲೋಮಿನಾ ಫೆರ್ನಾಂಡಿಸ್ ಪರಸ್ಪರ ಪ್ರೀತಿಸಿ ಮದುವೆಯಾದವರು. ಇದೇ ವರ್ಷದ ಎಪ್ರಿಲ್ 17 ಕ್ಕೆ ಇವರ ಸುಂದರ ದಾಂಪತ್ಯಕ್ಕೆ ಇಪ್ಪತ್ತು ವರ್ಷ. ಇವರಿಗೆ ಸುಶ್ಮಿತ ಹಾಗೂ ರಶ್ಮಿತ ಎಂಬಿಬ್ಬರು ಹೆಣ್ಮಕ್ಕಳು. ಸದಾಶಿವರು ಇದುವರೆಗೂ ಕ್ರಿಶ್ಚಿಯನ್ ಮತಕ್ಕೆ ಮತಾಂತರವಾಗಿಲ್ಲ. ಫಿಲೋಮಿನಾ ಈತನಕ ಹಿಂದೂ ಮತಕ್ಕೆ ಮತಾಂತರವಾಗಿಲ್ಲ. ಇಬ್ಬರೂ ತಮ್ಮ ಮನೆಯಲ್ಲಿ ಎರಡೂ ಮತಕ್ಕೆ ಸೇರಿದ ಹಬ್ಬಗಳನ್ನು ಪರಸ್ಪರ ಗೌರವದಿಂದ ಆಚರಿಸಿಕೊಳ್ಳುತ್ತಾರೆ. ಎರಡೂ ಕಡೆಯ ಕುಟುಂಬಸ್ಥರು ಇವರ ಮನೆಗೆ ಬಂದು ಹಬ್ಬದೂಟ ಉಂಡು ಹರಸಿ ಹೋಗುತ್ತಾರೆ.
ಕಟಪಾಡಿಯ ಎಡ್ವಿನ್ ಕೋಟ್ಯಾನ್ ಹಾಗೂ ಮಲ್ಪೆ ತೊಟ್ಟಂನ ಲಲಿತಾ ಎಂಬವರು ಹತ್ತು ವರ್ಷದ ಹಿಂದೆ ಪ್ರೀತಿಸಿ ಮದುವೆಯಾದವರು. ಇಂದಿಗೂ ಪರಸ್ಪರ ಮತಾಂತವಾಗದೆ ದಂಪತಿಗಳಾಗಿ ನೆಮ್ಮದಿಯಿಂದಿದ್ದಾರೆ. ಇವರಿಗೆ ಇಬ್ಬರು ಮಕ್ಕಳು.
ಬೆಂಗಳೂರು ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದ ನಿವೃತ್ತ ಪ್ರೊಫೆಸರ್, ಹಿರಿಯ ಮಾನವಹಕ್ಕು ಹೋರಾಟಗಾರರಾದ ನಗರಿ ಬಾಬಯ್ಯನವರು ಮುಸ್ಲೀಮ್ ಯುವತಿಯನ್ನು ಪ್ರೀತಿಸಿ ಮದುವೆಯಾದವರು. ಬಾಬಯ್ಯನವರು ಮುಸ್ಲೀಮ್ ಆಗಿಲ್ಲ. ಬಾಬಯ್ಯನವರೂ ತಮ್ಮ ಪತ್ನಿಯನ್ನು ಹಿಂದೂ ಆಗಿ ಮತಾಂತರ ಮಾಡಿಲ್ಲ. ಇವರ ಮಕ್ಕಳೂ ಇಂದು ಪತ್ರಕರ್ತರಾಗಿ ಪ್ರಸಿದ್ಧರು.
* * *
ಜಾತಿ, ಮತಗಳು ಮಾನವನ ಸೃಷ್ಟಿ. ತನ್ನ ಮತವೇ ಶ್ರೇಷ್ಟವೆಂಬ ಭ್ರಮೆಯಲ್ಲಿ ಈ ಮೂಲಭೂತವಾದಿಗಳು ಪ್ರೀತಿಯನ್ನು ಹೊಸಕಿ ಹಾಕುತ್ತಾರೆ. ಮತದ ಆಧಾರದಲ್ಲಿಯೇ ದಂಪತಿಗಳನ್ನು ಬೇರ್ಪಡಿಸುತ್ತಾರೆ. ಮತವೆಂಬ ಅಮಲನ್ನು ಕುಡಿದವರು, ಮತವೆಂಬ ಮಾದಕ ದ್ರವ್ಯವನ್ನು ಸೇವಿಸಿದವರು ಮಾತ್ರ ಮನುಷ್ಯತ್ವ, ಮಾನವೀಯತೆ, ಕರುಣೆ, ಒಲವು, ಮಮತೆ, ಪ್ರೀತಿ, ಪ್ರೇಮ, ನಂಬಿಕೆ, ವಿಶ್ವಾಸ ಇತ್ಯಾದಿಗಳನ್ನು ಕಾಲಕಸದಂತೆ ತುಳಿದುಬಿಡಲು ಸಾಧ್ಯ. ಇಂಥವರಿಗೆ ತಮ್ಮ ದೇಶದ ಸಂವಿಧಾನ ಮತ್ತು ಕಾನೂನು ಮುಖ್ಯವಾಗುವುದಿಲ್ಲ. ಮತೀಯ ಆಚರಣೆಗಳೇ ಎಲ್ಲವೂ ಆಗಿಬಿಡುವ ಅಪಾಯವಿರುವುದು.
ಅಂತರ್ಮತೀಯ ಜೋಡಿಗಳು ಪರಸ್ಪರ ಮತಾಂತರವಾಗದೆ ದಂಪತಿಗಳಾಗಿರಲು ಸಾಧ್ಯವಿಲ್ಲವೇ ? ಖಂಡಿತಾ ಸಾಧ್ಯವಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಹಲವು ಆದರ್ಶ ಜೋಡಿಗಳು ನಮ್ಮ ಕಣ್ಣ ಮುಂದಿವೆ. ಆದರೆ ಮತೀಯವಾದವನ್ನೇ, ಮತೀಯ ಶ್ರೇಷ್ಟತೆಯನ್ನೇ ಉಸಿರಾಡುವವರಿಗೆ ಯುವಕನಾಗಲಿ, ಯುವತಿ ಇರಲಿ ತಮ್ಮ ಮತಕ್ಕೆ ಮತಾಂತರವಾದರೆ ಮಾತ್ರ ಅವರನ್ನು ಮನುಷ್ಯರನ್ನಾಗಿ ನೋಡಲು ಸಾಧ್ಯವಾಗುತ್ತದೆ ಎನ್ನುವುದು ದುರಂತವೆನ್ನದೇ ನಿರ್ವಾಹವೇ ವಿಲ್ಲ.
ಜಾತಿ ಬಿಡಿ, ಮತ ಬಿಡಿ, ಮಾನವತೆಗೆ ಜೀವ ಕೊಡಿ ಎಂಬ ಘೋಷಣೆಯಡಿಯಲ್ಲಿ ನಡೆಯುವ ಜಾಥಾ, ಸಭೆ-ಸಮಾರಂಭಗಳಲ್ಲಿ ಭಾಗವಹಿಸುವ ಜನರಿಗೆ ಅಂತರ್ಮತೀಯ ಜೋಡಿಗಳನ್ನು ಅವರು ಮನುಷ್ಯರು ಎಂದು ಪರಿಗಣಿಸಲು ಯಾಕೆ ಸಾಧ್ಯವಾಗುತ್ತಿಲ್ಲ ?
ಬ್ರಾಹ್ಮಣರಲ್ಲಿ ತಮ್ಮ ಜಾತಿಯೇ ಶ್ರೇಷ್ಟವೆಂಬ ಭ್ರಮೆಯಿದೆ. ಇದೊಂದು ಮಾನಸಿಕ ರೋಗವೂ ಹೌದು. ಈ ಭ್ರಮೆ ಎಂಬ ರೋಗ ಮುಸ್ಲೀಮರಲ್ಲೂ ಇದೆ. ಇದನ್ನು ಹೋಗಲಾಡಿಸುವುದು ಹೇಗೆ ? ಈ ರೋಗ ಮಾಯವಾದಾಗ ಮಾತ್ರ ಮನುಷ್ಯನನ್ನು ಮನುಷ್ಯನೆಂದು ನೋಡಿ ಒಪ್ಪಿಕೊಂಡು, ಅಪ್ಪಿಕೊಳ್ಳಲು ಸಾಧ್ಯ. ಇಲ್ಲವಾದರೆ, ಇದೇ ರೋಗ ತಮ್ಮನ್ನು ಸುಡುವುದರೊಂದಿಗೆ ಇತರರನ್ನು ಸುಟ್ಟುಬಿಡುತ್ತದೆ.
ಎಲ್ಲಾ ಮತಗಳ ಮೂಲಭೂತವಾದಿಗಳೂ ಅಮಾನುಷವಾದ, ಅಮಾನವೀಯವಾದ ಭ್ರಮೆಗಳಿಂದ ಆದಷ್ಟು ಬೇಗನೆ ಹೊರಗಡೆ ಬರುವ ಪ್ರಾಮಾಣಿಕ ಪ್ರಯತ್ನ ನಡೆಸಬೇಕಾಗಿದೆ. ಮೂಲಭೂತವಾದ ತಮ್ಮನ್ನು ತಾವೇ ಬಂಧನದಲ್ಲಿರಿಸಿದಂತೆ. ಇನ್ನಾದರೂ ಬ್ರಮೆಗಳಲ್ಲಿ ಬದುಕುವ ಜನರು ಮತೀಯವಾದವನ್ನೇ ಉಸಿರಾಡುವುದನ್ನು ನಿಲ್ಲಿಸಬೇಕು. ನಿಲ್ಲಿಸಿದರೆ ಮಾತ್ರ ಮನುಕುಲಕ್ಕೆ ಒಳಿತು. ಇಲ್ಲವಾದರೆ ಅದು ಹಾಗೆ ಹೇಳುತ್ತೆ, ಇದು ಹೀಗೆ ಹೇಳುತ್ತೆ, ಅದರಲ್ಲಿ ಹಾಗೆ ಇದೆ, ಇದರಲ್ಲಿ ಹೀಗೆ ಇದೆ ಎಂದು ಹೇಳಿಕೊಳ್ಳುತ್ತಾ ಇರಬೇಕೇ ಹೊರತು ನಾವೇನು ಮಾಡುತ್ತಿದ್ದೇವೆ ಎಂದು ನಮ್ಮನ್ನು ನಾವು ನೋಡಿಕೊಳ್ಳಲು, ತಿಳಿದುಕೊಳ್ಳಲು ಅಸಾಧ್ಯ. (ಕೃಪೆ: ಜಯಕಿರಣ, ವಾರದ ಖಾರ, 07.03.2013)

Leave a Reply

Your email address will not be published. Required fields are marked *