Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಭೂಗತ ದೊರೆ ಬನ್ನಂಜೆ ರಾಜಾ ಸಹಚರನ ಕೊಲೆ ಶಂಕೆ

ಉಡುಪಿ: ರಾಷ್ಟ್ರೀಯ ಹೆದ್ದಾರಿ-66 ರ ಪಡುಬಿದ್ರಿ ಸಮೀಪದ ಕಲ್ಸಂಕ ಸೇತುವೆ ಬಳಿ ಛಿದ್ರ ಛಿದ್ರವಾಗಿ ಪತ್ತೆಯಾದ ಉಡುಪಿ ಸಮೀಪದ ಕಡೆಕಾರು ನಿವಾಸಿ ಸಂಜಿವ ಎಂಬವರ ಪುತ್ರ ಗುರು ಯಾನೆ ಗುರುಪ್ರಸಾದ್ (32) ಎಂಬವರ ಸಾವು ಅಪಘಾತದಿಂದ ಸಂಭವಿಸಿದ್ದಲ್ಲ, ಇದೊಂದು ಪೂರ್ವ ನಿಯೋಜಿತ ಕೊಲೆ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.
ದಶಕದ ಹಿಂದೆ ನಡೆದ ಮಂಗಳೂರಿನ ಸೋಜಾ ಇಲೆಕ್ಟ್ರಾನಿಕ್ಸ್ ಗೆ ಗುಂಡು ಹಾರಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ಗುರು, ಭೂಗತ ದೊರೆ ಬನ್ನಂಜೆ ರಾಜಾನ ಸಹಚರ ಎಂದು ಗುರುತಿಸಲ್ಪಟ್ಟಿದ್ದ ಗುರು, ಪ್ರಸ್ತುತ ಎಲ್ಲಾ ಕ್ರಿಮಿನಲ್ ಚಟುವಟಿಕೆಗಳನ್ನೂ ತೊರೆದು ಮಲ್ಪೆ ಬಂದರಿನಲ್ಲಿ ಮೀನು ಲೋಡ್ ಮಾಡುವ ಕಾಯಕದಲ್ಲಿ ನಿರತನಾಗಿದ್ದವನು. ಲಾರಿಗೆ ಮೀನಿನ ಬಾಕ್ಸ್ ತುಂಬಿಸುವುದನ್ನು ಬಿಟ್ಟರೆ ಒಂದೇ ಒಂದು ದಿನವೂ ಲಾರಿಯಲ್ಲಿ ಕುಳಿತು ಕೇರಳಕ್ಕೆ ಪ್ರಯಾಣಿಸಿದವನಲ್ಲ. ಮೊದಲ ಬಾರಿಗೆ ಕೇರಳಕ್ಕೆ ಹೋಗಿ ಊರಿಗೆ ಹಿಂತಿರುಗುವಾಗ ದಾರಿ ಮಧ್ಯೆ ಗುರು ನಿಗೂಢ ರೀತಿಯ ಅಪಘಾತದಲ್ಲಿ ಸಾವನ್ನಪ್ಪಿದ್ದೇ ಹಲವಾರು ಸಂಶಯಗಳಿಗೆ ಕಾರಣವಾಗಿದೆ.
ರಾಷ್ಟ್ರೀಯ ಹೆದ್ದಾರಿಯ ಮಧ್ಯದಲ್ಲಿ ನಾಯಿ, ಬೆಕ್ಕು ಸತ್ತು ಬಿದ್ದಿದ್ದರೆ ಹೇಗೋ, ಹಾಗೆಯೇ ಗುರುಪ್ರಸಾದ್ ಶವ ಹೆದ್ದಾರಿಯಲ್ಲಿ ಬಿದ್ದಿತ್ತು. ದೇಹದಿಂದ ಕರುಳು, ಮಿದುಳು ಇತ್ಯಾದಿ ಅಂಗಾಂಗಳು ಹೊರಬಂದು ಛಿದ್ರ ಛಿದ್ರವಾಗಿತ್ತು. ಆ ಮೃತದೇಹದ ಮೇಲೆಯೇ ಹಲವಾರು ವಾಹನಗಳು ಹಾದು ಹೋಗಿದೆ. ಮನುಷ್ಯನ ಮೃತದೇಹ ಎಂದು ಗಮನಿಸಿದ ವಾಹನ ಚಾಲಕರು ಶವದ ಮೇಲೆ ವಾಹನ ಹಾಯಿಸದೆ ಬದಿಯಿಂದ ಹಾದು ಹೋಗಿದ್ದಾರೆ. ಆದರೆ ಯಾರೊಬ್ಬರೂ ಹೆದ್ದಾರಿಯ ಮಧ್ಯದಲ್ಲಿ ಮೃತದೇಹ ಬಿದ್ದಿದೆ ಎಂಬ ಕನಿಷ್ಟ ಮಾಹಿತಿಯನ್ನೂ ಪೊಲೀಸರಿಗೆ ರವಾನೆ ಮಾಡಿಲ್ಲ.
ಗುರುಗೆ ಡಿಕ್ಕಿ ಹೊಡೆದ ವಾಹನ ಯಾವುದು ? ಯಾವ ವಾಹನ ಡಿಕ್ಕಿ ಹೊಡೆದು ಆತ ಮೃತಪಟ್ಟ ? ಉಚ್ಚಿಲ ಬಳಿ ಯಾವ ಉದ್ಧೇಶದಿಂದ ಲಾರಿಯಿಂದ ಇಳಿದ ? ಹಾಗೆ ಲಾರಿ ಇಳಿದವನು ಅಲ್ಲಿಂದ 2-3 ಕಿ.ಮೀ ದೂರದ ಕಲ್ಸಂಕ ಸೇತುವೆವರೆಗೆ ಯಾಕಾಗಿ ರಸ್ತೆಯಲ್ಲಿಯೇ ನಡೆದುಕೊಂಡು ಬಂದ ಎಂಬಿತ್ಯಾದಿ ಪ್ರಶ್ನೆಗಳಿಗೆ ಪೊಲೀಸ್ ತನಿಖೆಯಲ್ಲಿ ಇದುವರೆಗೆ ಸಮರ್ಪಕವಾದ ಉತ್ತರಗಳು ಲಭಿಸಿಲ್ಲ.
ಲಾರಿಗೆ ಮೀನಿನ ಬಾಕ್ಸ್ ತುಂಬಿಸುವುದನ್ನು ಬಿಟ್ಟರೆ, ಎಂದಿಗೂ ಗುರು ಲಾರಿಯಲ್ಲಿ ಕೇರಳಕ್ಕೆ ಹೋದವನಲ್ಲ. ಹೀಗಿರುವಾಗ ಜೂನ್ 5 ರಂದು ಮುಂಜಾನೆ ಮಲ್ಪೆ ಬಂದರಿನಿಂದ ಲಾರಿಯಲ್ಲಿ ಕೇರಳಕ್ಕೆ ಹೋಗಿದ್ದು ಯಾಕೆ ? ಗುರುವೇ ಸ್ವತಹಾ ಬಯಸಿ ಕೇರಳಕ್ಕೆ ಹೋಗಿದ್ದೇ, ಅಲ್ಲಾ ಪೂರ್ವ ನಿಯೋಜಿತವಾಗಿ ಗುರುವನ್ನು ಲಾರಿಯಲ್ಲಿ ಕೇರಳಕ್ಕೆ ಕರೆದೊಯ್ಯಲಾಯಿತೇ ? ಬುಧವಾರ (ಜೂನ್ 5) ಮುಂಜಾನೆ ಒಂದು ಲಾರಿಯಲ್ಲಿ ಕೇರಳಕ್ಕೆ ಹೋದವನು, ಮರುದಿನವೇ, ಅಂದರೆ ಗುರುವಾರವೇ (ಜೂನ್ 6) ಆ ಲಾರಿ ಬಿಟ್ಟು ಇನ್ನೊಂದು ಲಾರಿಯಲ್ಲಿ ಕೇರಳದಿಂದ ಊರಿಗೆ ಮರಳಿದ್ದು ಯಾಕೆ ? ಹೀಗೆ ಮರಳುವಾಗ ಉಚ್ಚಿಲ ಬಳಿ ಲಾರಿಯಿಂದ ಇಳಿದಿದ್ದು ಯಾಕೆ ? ಪೂರ್ವ ನಿಯೋಜಿತವಾಗಿ ಗುರುವನ್ನು ಲಾರಿಯಿಂದ ಇಳಿಸಲಾಯಿತೆ ಎಂಬ ಅನೇಕ ಗಂಭೀರ ಪ್ರಶ್ನೆಗಳಿಗೆ ಸಮರ್ಥವಾದ ಉತ್ತರಗಳನ್ನು ಪೊಲೀಸರು ಕಂಡುಕೊಂಡದ್ದೇ ಆದಲ್ಲಿ ಸತ್ಯ ಬಹಿರಂಗಕ್ಕೆ ಬರಲಿದೆ.
ಗುರು ಮನೆ ಇರುವುದು ಉಡುಪಿಯ ಕಡೆಕಾರಿನಲ್ಲಿ. ಲಾರಿಯಿಂದ ಇಳಿಯುವುದಾದರೆ, ಗುರು ಅಂಬಲಪಾಡಿ ಬೈಪಾಸ್ ನಲ್ಲಿ, ಇಲ್ಲವೇ ಕಲ್ಮಾಡಿಯಲ್ಲಿ, ಅಥವಾ ತಾನು ದಿನನಿತ್ಯ ಕೆಲಸ ಮಾಡುವ ಮಲ್ಪೆಯಲ್ಲೇ ಇಳಿಯಬೇಕಾಗಿತ್ತು. ಇದೆಲ್ಲ ಬಿಟ್ಟು ಉಚ್ಚಿಲದಲ್ಲಿಯೇ ಲಾರಿಯಿಂದ ಇಳಿದಿದ್ದು ಯಾಕೆ ? ಲಾರಿ ಚಾಲಕ ಇಳಿಸಿದ್ದು ಯಾಕೆ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸಿದೆ.
ಬುಧವಾರ ಮಧ್ಯಾಹ್ನ ಮಂಗಳೂರು ದಾಟಿ ಪ್ರಯಾಣಿಸುತ್ತಿರುವಾಗ ಗುರುಪ್ರಸಾದ್, ಮನೆಯವರಿಗೆ ಕರೆ ಮಾಡಿ ತಾನು ಕೇರಳಕ್ಕೆ ಹೋಗುತ್ತಿರುವುದಾಗಿ ತಿಳಿಸಿದ್ದಾರೆ. ಯಾವ ಲಾರಿಯಲ್ಲಿ ಗುರು ಕೇರಳಕ್ಕೆ ಪಯಣಿಸಿದ್ದರೋ, ಅದೇ ಲಾರಿಯ ಚಾಲಕ ಮರುದಿನ ಕೇರಳದಿಂದ ಗುರು ಅವರ ಮನೆಯವರಿಗೆ ಕರೆ ಮಾಡಿ, ಗುರುವನ್ನು ಊರಿಗೆ ಹೊರಟಿರುವ ಬೇರೊಂದು ಲಾರಿಯಲ್ಲಿ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿದ್ದಾರೆ.
ಶುಕ್ರವಾರ (ಜೂನ್ 7) ನಸುಕಿನ ಗಂಟೆ 4.05 ಕ್ಕೆ ಪಡುಬಿದ್ರಿ ಠಾಣೆಯ ಪೊಲೀಸರಿಗೆ ಹೆದ್ದಾರಿಯಲ್ಲಿ ಶವ ಬಿದ್ದಿರುವುದು ಗೊತ್ತಾಗಿದೆ. ಸಬ್ ಇನ್ಸ್ ಪೆಕ್ಟರ್ ಮಹಾದೇವ ಶೆಟ್ಟಿ, ಸಿಬ್ಬಂದಿಗಳಾದ ಸಂತೋಷ್, ರಾಘವೇಂದ್ರ ಮೊಗೇರ ಹಾಗೂ ಡಿವೈಎಸ್ಪಿ ಸ್ಕ್ವಾಡ್ನ ಸಿಬ್ಬಂದಿ ಸುರೇಶ್ ಮೃತದೇಹವನ್ನು ನೋಡಿ ಮುಂದಿನ ಕ್ರಮ ಜರುಗಿಸಿದ್ದಾರೆ. ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಕಾಪು ಸರ್ಕಲ್ ಇನ್ಸ್ಪೆಕ್ಟರ್ ಪ್ರಕರಣದ ನಿಷ್ಪಕ್ಷಪಾತ ತನಿಖೆಯಲ್ಲಿ ನಿರಾಸಕ್ತಿ ತೋರಿಸುತ್ತಿದ್ದು, ಅಪಘಾತ ಪ್ರಕರಣವೆಂದು ಕೈತೊಳೆದುಕೊಳ್ಳಲು ಬೇಕಾದ ಎಲ್ಲಾ ಸಿದ್ದತೆಗಳನ್ನೂ
ಮಾಡಿಕೊಂಡಿದ್ದಾರೆ.
ತನಿಖೆಗೆ ಒತ್ತಾಯ: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಜಯನ್ ಮಲ್ಪೆ ಗುರುಪ್ರಸಾದ್ ನಿಗೂಢ ಸಾವಿನ ಪ್ರಕರಣದ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದ್ದಾರೆ. ಇಡೀ ಪ್ರಕರಣವನ್ನು ಅವಲೋಕಿಸಿದಾಗ, ಇದು ಸಹಜವಾದ ಅಪಘಾತವಲ್ಲ, ಪೂರ್ವ ನಿಯೋಜಿತ ಅಪಘಾತ. ಸಂಚು ರೂಪಿಸಿ ಅಪಘಾತವೆಂದು ಬಿಂಬಿಸಲ್ಪಟ್ಟ ಕೊಲೆಯಾಗಿರುವ ಸಾಧ್ಯತೆಯೂ ಇದೆ ಎಂಬ ಸಂಶಯ ಬಲವಾಗುತ್ತದೆ. ಕೊಲೆ ಮಾಡಿದ ಬಳಿಕ ಹಂತಕರು ನಿರ್ಜನ ಪ್ರದೇಶದಲ್ಲಿ ರಸ್ತೆಯಲ್ಲಿ ಶವವನ್ನು ಎಸೆದು ಹೋಗಿದ್ದಾರೆ, ಈ ಮೂಲಕ ಸಾಕ್ಷ್ಯವನ್ನೂ ನಾಶಪಡಿಸಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿರುವ ಜಯನ್, ಪೊಲೀಸ್ ಅಧಿಕಾರಿಗಳು ಅಪಘಾತವೆಂದು ತಿಪ್ಪೆ ಸಾರಿಸಿ ಪ್ರಕರಣವನ್ನು ಮುಚ್ಚಿ ಹಾಕದೆ ದಕ್ಷತೆಯಿಂದ ತನಿಖೆ ನಡೆಸುವ ಮೂಲಕ ಗುರುವಿನ ಬಡ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು
ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *