Realtime blog statisticsweb statistics
udupibits.in
Breaking News
ಉಡುಪಿ: ಕನಿಷ್ಠ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ನಗರಸಭೆ, ಜಿಲ್ಲಾಡಳಿತ, ರಾಜ್ಯ-ಕೇಂದ್ರ ಸರಕಾರ ಸಂಪೂರ್ಣ ವಿಫಲ !

ಭ್ರಷ್ಟಾತೀಭ್ರಷ್ಟ ಎಲ್ಲಾ ರಾಜಕೀಯ ಪಕ್ಷಗಳಿಗೂ ಕ ೃತಜ್ಞತೆಗಳು !

ಮಾಹಿತಿ ಹಕ್ಕು ಕಾಯಿದೆ-2005 (ರೈಟ್ ಟು ಇನ್ಫರ್ಮೇಶನ್ ಆಕ್ಟ್/ಆರ್ ಟಿ ಐ) ಕ್ಕೆ ತಿದ್ದುಪಡಿ ಮಾಡಲು ನಿರ್ಧರಿಸಿರುವ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ, ಈ ಸಂಬಂಧದ ಮಸೂದೆಯನ್ನು ಬಹಳ ಆಸಕ್ತಿ ಮತ್ತು ಕಾಳಜಿಯಿಂದ ಸಂಸತ್ ನಲ್ಲಿ ಮಂಡಿಸಿದೆ. ದೇಶದ ಪ್ರಧಾನ ವಿರೋಧ ಪಕ್ಷ ಬಿಜೆಪಿ ಸಹಿತ ಇತರೆಲ್ಲಾ ಪಕ್ಷಗಳೂ ಯಾವುದೇ
ಭಿನ್ನಾಭಿಪ್ರಾಯವನ್ನೂ ವ್ಯಕ್ತಪಡಿಸದೆ ಈ ಮಸೂದೆಯನ್ನು ಈಗಾಗಲೇ ಬೆಂಬಲಿಸಿವೆ. ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಕಾಯಿದೆ ವ್ಯಾಪ್ತಿಯಿಂದ ಹೊರಗಿಡುವುದೇ ಈ ತಿದ್ದಪಡಿ ಮಸೂದೆಯ ಮುಖ್ಯ ಉದ್ಧೇಶ ಎನ್ನುವುದೇ ಇಲ್ಲಿ ವಿಷಯ. ಹಾಗಾಗಿ ನಮ್ಮ ದೇಶದ ಯಾವೊಂದು ಪಕ್ಷಗಳಿಗೂ ಈ ವಿಷಾರದಲ್ಲಿ ಭಿನ್ನಾಭಿಪ್ರಾಯವಿಲ್ಲ.
ಕೇವಲ ಮೂರು ತಿಂಗಳ ಹಿಂದೆಯಷ್ಟೇ ಕೇಂದ್ರ ಮಾಹಿತಿ ಹಕ್ಕು ಆಯೋಗದ ಪೂರ್ಣಪೀಠ ಕಾಂಗ್ರೆಸ್, ಬಿಜೆಪಿ, ಬಿ ಎಸ್ ಪಿ, ಎನ್ ಸಿ ಪಿ, ಸಿಪಿಐಎಂ ಮತ್ತು ಸಿಪಿಐ ಈ 6 ರಾಜಕೀಯ ಪಕ್ಷಗಳನ್ನು ಮಾಹಿತಿಹಕ್ಕು ಕಾಯಿದೆ ವ್ಯಾಪ್ತಿಗೆ ಒಳಪಡಿಸಿ ತೀರ್ಪು ನೀಡಿತ್ತು. ಮಾಹಿತಿ ಹಕ್ಕು ಕಾರ್ಯಕರ್ತರು, ಭ್ರಷ್ಟಚಾರ ವಿರೋಧಿ ಹೋರಾಟಗಾರರು ಹಾಗೂ ಈ ದೇಶದ ಪ್ರಜ್ಞಾವಂತ ಜನರು ಕೇವಲ 6 ರಾಜಕೀಯ ಪಕ್ಷಗಳನ್ನಷ್ಟೇ ಮಾಹಿತಿ ಹಕ್ಕು ವ್ಯಾಪ್ತಿಗೆ ಒಳಪಡಿಸಿದರೆ ಸಾಲದು, ಎಲ್ಲಾ ರಾಜಕೀಯ ಪಕ್ಷಗಳನ್ನೂ ಕಾಯಿದೆ ವ್ಯಾಪ್ತಿಗೆ ಒಳಪಡಿಸಬೇಕು ಎಂಬ ಆಶಯ ವ್ಯಕ್ತಪಡಿಸಿದ್ದರು.
ಆದರೆ, ಇದೇ ಸಮಯದಲ್ಲಿ ನಮ್ಮ ರಾಜಕೀಯ ಪಕ್ಷಗಳು ಮಾತ್ರ ಇದಕ್ಕೆ ವ್ಯತಿರಿಕ್ತವಾಗಿ ವರ್ತಿಸಲು ಆರಂಭಿಸಿದ್ದವು. ಆಯೋಗದ ತೀರ್ಪು ಹೊರಬಿದ್ದ ಬೆನ್ನಿಗೆ ಸಿಪಿಐಎಂ ಇದನ್ನು ವಿರೋಧಿಸಿತು. ಕೇಂದ್ರ ಸರಕಾರ ತೀರ್ಪಿಗೆ ವಿರುದ್ಧವಾಗಿ ಕಾಂಗ್ರೆಸ್ ಸಹಿತ ಎಲ್ಲಾ ರಾಜಕೀಯ ಪಕ್ಷಗಳನ್ನೂ ರಕ್ಷಿಸುವ ಯತ್ನವಾಗಿ ಕಾಯಿದೆಗೆ ತಿದ್ದುಪಡಿ ತರಲು ನಿರ್ಧರಿಸಿ ಮಸೂದೆ ತಯಾರಿಸಲು ಸಿದ್ಧತೆ ಆರಂಭಿಸಿಬಿಟ್ಟಿತ್ತು. ಇದ್ದುದರಲ್ಲಿ ಸಿಪಿಐ ಪಕ್ಷ ಒಂದು ಸ್ವಲ್ಪ ಮಟ್ಟಿನ ಪ್ರಾಮಾಣಿಕತೆಯನ್ನು ಮರೆದಿದೆ. ತನ್ನ ತೀರ್ಪಿನಲ್ಲಿ ಆಯೋಗವು, ಮುಂದಿನ 6 ವಾರಗಳ ಒಳಗಾಗಿ ಪಕ್ಷ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಮೇಲ್ಮನವಿ ಪ್ರಾಧಿಕಾರಿಯನ್ನು ನೇಮಿಸಬೇಕು ಹಾಗೂ ಇವರು ಯಾರು ಎನ್ನುವ ಬಗ್ಗೆ ಪಕ್ಷದ ಕೇಂದ್ರ ಕಚೇರಿಗಳಲ್ಲಿ ಫಲಕಗಳನ್ನು ಅಳವಡಿಸಬೇಕು ಎಂದು ಆದೇಶಿಸಿತ್ತು. ಸಿಪಿಐ ಪಕ್ಷ ಮಾತ್ರವೇ ಆಯೋಗದ ಈ ಆದೇಶವನ್ನು ಪಾಲಿಸಿದೆ. ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವ
ಪ್ರಕ್ರಿಯೆಯಲ್ಲಿ ಕನಿಷ್ಟ ಒಂದು ಹೆಜ್ಜೆಯನ್ನಾದರೂ ಪಾಲಿಸಿದ್ದಕ್ಕಾಗಿ ಸಿಪಿಐ ಪಕ್ಷವನ್ನು ಅಭಿನಂದಿಸಬೇಕು. ಈ ಪಕ್ಷವಾದರೂ ಪಾರ್ಲಿಮೆಂಟ್ ನಲ್ಲಿ ಕಾಂಗ್ರೆಸ್ ಸರಕಾರ ಮಂಡಿಸುವ ಮಸೂದೆಯನ್ನು ವಿರೋಧಿಸಿದರೆ ಅದೊಂದು ಸ್ವಾಗತಾರ್ಹ ಬೆಳವಣಿಗೆಯಾಗಿ ದಾಖಲಾದೀತು.
ರಾಜಕೀಯ ಪಕ್ಷಗಳು, ಇವುಗಳನ್ನು ಪ್ರತಿನಿಧಿಸುವ ನಾಯಕರು, ಜನಪ್ರತಿನಿಧಿಗಳು ಭ್ರಷ್ಟರಲ್ಲದೇ ಇರುತ್ತಿದ್ದರೆ, ನಮ್ಮ ದೇಶಕ್ಕೆ ಭ್ರಷ್ಟಾಚಾರವೆಂಬ ಕ್ಯಾನ್ಸರ್ ರೋಗ ಬಾಧಿಸುತ್ತಲೇ ಇರಲಿಲ್ಲ. ಯಾವಾಗ ರಾಜಕಾರಣಿಗಳು ಭ್ರಷ್ಟರಾದರೋ, ಆಗ ಸಹಜವಾಗಿಯೇ ಪಕ್ಷಗಳೂ ಭ್ರಷ್ಟವಾಗಿ ಹೋದುವು. ಇವರೊಂದಿಗೇ ಕಾರ್ಯಾಂಗವೂ ಭ್ರಷ್ಟವಾಗಿಹೋಯಿತು. ಇಂದು ನಮ್ಮ ದೇಶದಲ್ಲಿ ಅತೀ ಹೆಚ್ಚು ಭ್ರಷ್ಟವಾಗಿರೋದು ಎಂದರೆ, ಅದು ರಾಜಕೀಯ ಪಕ್ಷಗಳೇ ಹೊರತು ಬೇರೆ ಯಾವುದೂ ಅಲ್ಲ.
ಎಡಪಂಥೀಯ ಪಕ್ಷಗಳನ್ನು ಹೊರತುಪಡಿಸಿ, ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳೂ
ಕೋಟ್ಯಧಿಪತಿಗಳನ್ನೇ ಚುನಾವಣೆ ಸಮಯದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡುತ್ತದೆ. ಇದರಲ್ಲಿ ಸಂಸತ್ ಚುನಾವಣೆ, ರಾಜ್ಯ ಸಭಾ ಚುನಾವಣೆ, ವಿಧಾನ ಸಭೆ, ವಿಧಾನ ಪರಿಷತ್ ಚುನಾವಣೆ ಎಂದೇನೂ ಇಲ್ಲ. ಪಕ್ಷದ ಪದಾಧಿಕಾರಿಗಳ ಆಯ್ಕೆಯಲ್ಲೂ ಆತನ ಆರ್ಥಿಕ ಸಾಮಥ್ರ್ಯ ಪರಿಗಣನೆಗೆ ಬಂದೇ ಬರುತ್ತದೆ. ಸ್ವತಹಾ ಸಾಮಥ್ರ್ಯ ಕಡಿಮೆ ಎಂದೂ ಕಂಡು ಬಂದರೂ, ಇತರರಿಂದ ವಸೂಲಿ ಮಾಡಿ ಚುನಾವಣೆ ಎದುರಿಸುವ ತಾಕತ್ತು ಅಂತೂ ಆತನಿಗೆ ಬೇಕೇ ಬೇಕು. ಇದೆಲ್ಲಾ ಆಗದಿದ್ದ ಪಕ್ಷದಲ್ಲಿ ಅಂಥ ವ್ಯಕ್ತಿಗಳನ್ನು ಯಾವ ಪಕ್ಷಗಳೂ ತಮ್ಮ ಪಕ್ಷಗಳ ಪ್ರಧಾನ ಹುದ್ದೆಗೆ ನೇಮಕ ಮಾಡಲಾರದು.
ಚುನಾವಣೆ ಇರಲಿ, ಇಲ್ಲದಿರಲಿ, ಅಧಿಕಾರದಲ್ಲಿರಲಿ, ಇಲ್ಲದಿರಲಿ ಆಗಾಗ ಅಲ್ಲಲ್ಲಿ ಬೃಹತ್ ಸಾರ್ವಜನಿಕ ಸಮಾವೇಶಗಳು, ಪಾದಯಾತ್ರೆಗಳು, ರಥಯಾತ್ರೆಗಳು, ಮೆರವಣಿಗೆಗಳು
ನಡೆಯುತ್ತಿರಬೇಕು, ವರ್ಷವಿಡೀ ರಸ್ತೆಯುದ್ದಕ್ಕೂ, ಹಾದಿ ಬೀದಿಗಳಲ್ಲಿ ಕಟೌಟ್ ನಿಂತಿರಬೇಕು, ದೇಶದಾದ್ಯಂತ ಎಲ್ಲಾ ಭಾಷೆಗಳ ಮುದ್ರಣ ಮತ್ತು ದೃಶ್ಯ ಮಾದ್ಯಮಗಳಲ್ಲೂ ಪಕ್ಷಗಳ ಪರ ಜಾಹೀರಾತು ಪ್ರಕಟವಾಗುತ್ತಿರಬೇಕು. ಪಕ್ಷಕ್ಕಾಗಿ ಕೆಲಸ ಮಾಡುವ (ಉದ್ಯೋಗ) ಪೂರ್ಣಾವಧಿ ಕಾರ್ಯಕರ್ತರು, ನಾಯಕರುಗಳಿಗೆ ವೇತನ ಪಾವತಿಸಬೇಕು. ಚುನಾವಣೆಗೆ ಕೋಟಿ ಕೋಟಿಗಳ ಲೆಕ್ಕದಲ್ಲಿ ವೆಚ್ಚ ಮಾಡಬೇಕು. ಇದಕ್ಕೆಲ್ಲ ರಾಜಕೀಯ ಪಕ್ಷಗಳಿಗೆ ಹಣವಾದರೂ ಎಲ್ಲಿಂದ ಬರಬೇಕು ?
ಕಪ್ಪು ಹಣದ ಬಗ್ಗೆ ಎಲ್ಲರೂ ಮಾತನಾಡುವವರೇ. ಈ ಕಪ್ಪು ಹಣ ಅತ್ಯಧಿಕ ಇರುವುದು ಇದೇ ರಾಜಕೀಯ ಪಕ್ಷಗಳಲ್ಲಿ ಕೆಲವು ರಾಜಕಾರಣಿಗಳ ಅಕ್ರಮ ಹಣ ಸ್ವಿಸ್ ಬ್ಯಾಂಕ್
ಗಳಲ್ಲಿದ್ದರೆ, ಇನ್ನುಳಿದ ರಾಜಕಾರಣಿಗಳ ಅನಧಿಕೃತ ಹಣ ಮಠಗಳಲ್ಲಿ ಭದ್ರವಾಗಿರುತ್ತವೆ. ಮಠ, ಮಂದಿರ, ಮಸೀದಿ, ಚರ್ಚ್, ಆಶ್ರಮಗಳಿಗೆಲ್ಲ ದಾಳಿ ಇಲ್ಲದಿರುವುದನ್ನು
ಗಮನಿಸಬಹುದು. ಇಲ್ಲೆಲ್ಲಾ ರಾಜಕಾರಣಿಗಳ, ರಾಜಕೀಯ ಪಕ್ಷಗಳ ಹಣ ಇರುವ ಕಾರಣಕ್ಕೇ ಇಲ್ಲಿಗೆಲ್ಲಾ ಪೊಲೀಸ್, ತೆರಿಗೆ, ಇತ್ಯಾದಿ ಯಾವೊಂದೂ ಇಲಾಖೆಗಳ ದಾಳಿ ಇಲ್ಲ. ನಮ್ಮ ದೇಶದಲ್ಲಿ, ರಾಜ್ಯಗಳಲ್ಲಿ ಜನ ವಿರೋಧಿ ಯೋಜನೆಗಳೇ ಹೆಚ್ಚಾಗಿ
ಜ್ಯಾರಿಯಾಗುತ್ತವೆ. ಯಾಕೆ ಹೀಗೆಂದು ಯೋಚಿಸಿದರೆ ಉತ್ತರ ಸ್ಪಷ್ಟವಾಗುತ್ತದೆ. ವಿದೇಶಿ ಬಹು ರಾಷ್ಟ್ರೀಯ ಕಂಪೆನಿಗಳು, ಕಪ್ಪು ಪಟ್ಟಿಯಲ್ಲಿರುವ ಕಂಪೆನಿಗಳು, ಭ್ರಷ್ಟ ಕಂಪೆನಿಗಳು, ಸಂಸ್ಥೆಗಳು, ಬಹುಕೋಟಿ ಉದ್ಯಮಪತಿಗಳು ತಮಗೆ ಬೇಕಾದ ಕಾರ್ಯಕ್ರಮಗಳನ್ನು ಇದೇ ರಾಜಕೀಯ ಪಕ್ಷಗಳ ಮೂಲಕ ದೇಶದಲ್ಲಿ ಜ್ಯಾರಿಗೊಳಿಸುತ್ತವೆ. ಇವುಗಳನ್ನು ಅನುಷ್ಟಾನಗೊಳಿಸುವ ಪ್ರಕ್ರಿಯೆಯಲ್ಲಿ ಭ್ರಷ್ಟ ಕಂಪೆನಿ, ಸಂಸ್ಥೆಗಳು ಹಾಗೂ ಉದ್ಯಮಿಗಳು ಪಾರ್ಟಿ ಫಂಡಿಗೆ ಕೊಟ್ಯಂತರ ಕೊಡುಗೆ ಕೊಟ್ಟಿರುತ್ತದೆ. ಚುನಾವಣಾ ವೆಚ್ಚವನ್ನೂ ಭರಿಸುತ್ತವೆ.
ಯಾವ ಪಕ್ಷಗಳೇ ಆಡಳಿತಕ್ಕೆ ಬರಲಿ, ಅಂಥ ರಾಜಕೀಯ ಪಕ್ಷಗಳು ಕೈ ಬಿಡುವ ಕಾರ್ಯಕ್ರಮಗಳ ಹಿಂದೆ ಮತ್ತು ಜ್ಯಾರಿಗೊಳಿಸುವ ಕಾರ್ಯಕ್ರಮಗಳ ಹಿಂದೆಯೂ ಬಹುಕೋಟಿ ಮೊತ್ತ ಪಾರ್ಟಿ ಫಂಡಿಗೆ ಬಹುಕೋಟಿ ಹಣ ಹರಿದುಬಂದಿರುವ ಸಾಧ್ಯತೆಗಳಿರುತ್ತವೆ. ಅನೇಕಾನೇಕ ವಿವದಿತ ಕಡತಗಳಿಗೆ ಮಂತ್ರಿ ಮಹೋದಯರು ಸಹಿ ಹಾಕುವ ಪ್ರಕ್ರಿಯೆಗಳೂ ಇದ್ದೇ ಇರುತ್ತವೆ. ಪಾರ್ಟಿ ಫಂಡ್ ಗೆ ಹಣ ಪಡೆದುದಕ್ಕೆ ಪ್ರತಿಫಲವಾಗಿಯೇ ಈ ಕಡತಗಳಿಗೆ ಸರಕಾರದ ಪ್ರತಿನಿಧಿಗಳಾಗಿ ಸರಕಾರದ ಮುಖ್ಯಸ್ಥರು ಸಹಿ ಹಾಕಿ ವಿಲೇವಾರಿ ಮಾಡಿರುವ ಅಪಾಯಕಾರಿ ಬೆಳವಣಿಗೆಗಳು ಗುಪ್ತವಾಗಿಯೇ ನಡೆದಿರುತ್ತವೆ.
ಇಂಥ ರಾಜಕೀಯ ಪಕ್ಷಗಳೇ ಪಾರದರ್ಶಕವಾಗಿಲ್ಲ ಎಂದ ಮೇಲೆ ಇದೇ ಪಕ್ಷಗಳು ನಡೆಸುವ ಸರಕಾರಗಳು ಪಾರದರ್ಶಕವಾಗಿರಲು ಸಾಧ್ಯವೇ ? ಖಂಡಿತಾ ಸಾಧ್ಯವಿಲ್ಲ. ಚುನಾವಣಾ ಪ್ರಣಾಳಿಕೆಗಳಲ್ಲಿ ಪಾರದರ್ಶಕ, ದಕ್ಷ ಆಡಳಿತ ನೀಡುವುದಾಗಿ ಭರವಸೆ ನೀಡುವ ಪಕ್ಷಗಳು ತಾವ್ಯಾಕೆ ಪಾರದರ್ಶಕವಾಗಿರಲು ಬಯಸುವುದಿಲ್ಲ ? ತಮ್ಮ ಆರ್ಥಿಕ ವ್ಯವಹಾರ ಬಯಲಾಗುವುದು ಮತ್ತು ಬೆತ್ತಲಾಗುವುದು ಎರಡೂ ಒಂದೇ ಎನ್ನುವುದು ರಾಜಕಾರಣಿಗಳಿಗೆ, ಮಂತ್ರಿಗಳಿಗೆ ಸರಿಯಾಗಿಯೇ ಗೊತ್ತಿರುವ ಕಾರಣಕ್ಕೆ ಹಾಗೆ ಮಾಡಲು, ಆಗಲು ಪ್ರಜ್ಞಾಪೂರ್ವಕವಾಗಿಯೇ ಇವರು ಅವಕಾಶ ಒದಗಿಸಿಕೊಡುತ್ತಿಲ್ಲ ಎಂಬುದಕ್ಕೆ ಬೇರೆ ಸಾಕ್ಷಿಯೇನೂ ಬೇಕಾಗಿಲ್ಲ. ಮಾಹಿತಿಹಕ್ಕು ಕಾಯಿದೆಯನ್ನು ಜ್ಯಾರಿಗೊಳಿಸಿದ್ದು ತಮ್ಮ ಸರಕಾರ ಎಂದು ಇದುವರೆಗೆ ಕಾಂಗ್ರೆಸ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಿತ್ತು. ಇದೀಗ ಈ ಕಾಯಿದೆಯಿಂದ ರಾಜಕೀಯ ಪಕ್ಷಗಳನ್ನು ಹೊಗಿಡುವ ನಿಟ್ಟಿನಲ್ಲಿ ಪಾರ್ಲಿಮೆಂಟ್ ನಲ್ಲಿ ಮಸೂದೆ ಮಂಡಿಸುವ ಮೂಲಕ ಕಾಂಗ್ರೆಸ್ ತನ್ನ ಹೆಮ್ಮೆಯನ್ನು ಕಳೆದುಕೊಳ್ಳುತ್ತದೆ. ಮಾತ್ರವಲ್ಲ, ಇದರ ಜೊತೆಜೊತೆಗೆ ತಾನೊಂದು ಮಹಾಭ್ರಷ್ಟ ಪಕ್ಷ ಎನ್ನುವುದನ್ನೂ ಸ್ವತಹಾ ಕಾಂಗ್ರೆಸ್ ಪಕ್ಷವೇ ದೇಶದ ಮಹಾ ಜನತೆಗೆ ತಾನಾಗಿಯೇ ಸಾರಿ ಹೇಳಿದಂತಾಗುತ್ತದೆ. ತಮ್ಮನ್ನು ರಕ್ಷಿಸುವ ಪ್ರಯತ್ನದಲ್ಲಿ ಒಂದು ಬಹುದೊಡ್ಡ ಸತ್ಯವನ್ನು ನಮ್ಮ ರಾಜಕೀಯ ಪಕ್ಷಗಳು ನಾಚಿಕೆ ಬಿಟ್ಟು
ಒಪ್ಪಿಕೊಳ್ಳುತ್ತಿರುವುದಕ್ಕಾಗಿ ಈ ಪಕ್ಷಗಳಿಗೆ ನಾವು ಕೃತಜ್ಞತೆ ಸಲ್ಲಿಸಬೇಕಾಗಿದೆ. ನಮ್ಮ ನಡುವಿನ ರಾಜಕೀಯ ಪಕ್ಷಗಳ ಬಗ್ಗೆ, ಕೇಂದ್ರ-ರಾಜ್ಯ ಸರಕಾರಗಳ ಬಗ್ಗೆ ಇನ್ನು ನಮಗೆ ಗೊತ್ತಾಗಬೇಕಾದುದೇನೂ ಇಲ್ಲ. ಮಾಹಿತಿಹಕ್ಕು ಕಾಯಿದೆಗೆ ತಿದ್ದುಪಡಿ ಮಸೂದೆ ಮಂಡಿಸಿ ತಮ್ಮನ್ನು ಈ ಕಾಯಿದೆಯಿಂದ ಹೊರಗಿಡುತ್ತಿರುವುದೇ ಎಲ್ಲವನ್ನೂ
ಜಗಜ್ಜಾಹೀರುಪಡಿಸುತ್ತದೆ. ಇಂಥ ಮಹಾ ಭ್ರಷ್ಟಾತೀಭ್ರಷ್ಟ, ದುಷ್ಟಾತೀದುಷ್ಟ ರಾಜಕೀಯ ಪಕ್ಷಗಳನ್ನು ದೇಶದ ಜನ ಇನ್ನಾದರೂ ಯಾವ ಮುಲಾಜೂ ಇಲ್ಲದೆ, ಸಾರಾ ಸಗಟು ತಿರಸ್ಕರಿಸುವ ಪ್ರಜ್ಞಾವಂತಿಕೆ, ದಿಟ್ಟತನ ಪ್ರದರ್ಶಿಸಬೇಕಾಗಿದೆ. ಇಲ್ಲದೆ ಹೋದರೆ ಈ ತಿಮಿಂಗಿಲಗಳು ದೇಶವನ್ನು ತಿಂದು ನೀರು ಕುಡಿಯುವುದರಲ್ಲಿ ಯಾವುದೇ ಅನುಮಾನವೂ ಇಲ್ಲ. – ಶ್ರೀರಾಮ ದಿವಾಣ.

Leave a Reply

Your email address will not be published. Required fields are marked *