Realtime blog statisticsweb statistics
udupibits.in
Breaking News
ಉಡುಪಿ: ಕನಿಷ್ಠ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ನಗರಸಭೆ, ಜಿಲ್ಲಾಡಳಿತ, ರಾಜ್ಯ-ಕೇಂದ್ರ ಸರಕಾರ ಸಂಪೂರ್ಣ ವಿಫಲ !

ಕಾಂಗ್ರೆಸ್ ಸೋಲಿಸಿ, ಬಿಜೆಪಿ ತಿರಸ್ಕರಿಸಲು ಎಡಪ ಕ್ಷಗಳ ಕರೆ

ಉಡುಪಿ: ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಓಟಿಗಾಗಿ ಆಹಾರ ಭದ್ರತಾ ಮಸೂದೆ ಮಂಡಿಸಿದೆ. ಮಸೂದೆ ಪ್ರಕಾರ ದೇಶದ 67 ಶೇಕಡಾ ಜನರಿಗೆ ಕೆ.ಜಿ.ಗೆ 3 ರು. ದರದಲ್ಲಿ ಕೇವಲ 25 ಕೆ.ಜಿ. ಅಕ್ಕಿ ವಿತರಿಸಲಾಗುತ್ತದೆ. ವಾಸ್ತವವಾಗಿ ಒಬ್ಬ ವ್ಯಕ್ತಿಗೆ ತಿಂಗಳೊಂದಕ್ಕೆ ಕನಿಷ್ಟ 7 ಕೆ.ಜಿ. ಅಕ್ಕಿ ಬೇಕು. ಕುಟುಂಬಕ್ಕೆ 35 ಕೆ.ಜಿ. ಬೇಕು. ಎಪಿಎಲ್ ಕಾರ್ಡ್ ದಾರರಿಗೆ ಇದು ಲಭ್ಯವಿಲ್ಲ. ಎಪಿಎಲ್ ಕಾರ್ಡ್ ದಾರರಲ್ಲಿ ಕಡು ಬಡವರು ಇದ್ದಾರೆ. ಹಲವಾರು ಮಂದಿ ಕಡು ಬಡವರಿಗೆ ಇನ್ನೂ ಸಹ ಪಡಿತರ ಚೀಟಿಯೇ ಸಿಕ್ಕಿಲ್ಲ. ಇವರಿಗೆಲ್ಲ ಆಹಾರ ಭದ್ರತೆ ಇಲ್ಲ ಎಂದು ಸಿಪಿಐಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಬಿ.ಮಾಧವ ಹೇಳಿದರು.
ಜನವಿರೋಧಿ ನೀತಿಗಳ ವಿರುದ್ಧ ಜನಪರ ಪರ್ಯಾಯ ಧೋರಣೆಗಳಿಗಾಗಿ ಮತ್ತು ಪರ್ಯಾಯ ಆರ್ಥಿಕ ನೀತಿಗಳಿಗಾಗಿ ಸಿಪಿಐ ಮತ್ತು ಸಿಪಿಐಎಂ ಪಕ್ಷಗಳು ಜಂಟಿಯಾಗಿ ಜಂಟಿಯಾಗಿ ಬನ್ನಂಜೆಯ ನಾರಾಯಣ ಗುರು ಸಬಾಂಗಣದಲ್ಲಿ ಸೆ.4 ರಂದು ನಡೆಸಿದ ರಾಜಕೀಯ ಸಮಾವೇಶದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡುತ್ತಿದ್ದರು.
ಸರಕಾರಗಳ ಜನ ವಿರೋಧಿ ನೀತಿಗಳಿಂದಾಗಿ ಜನರು ಆಡಳಿತದ ವಿರುದ್ಧ ಆಕ್ರೋಶ
ವ್ಯಕ್ತಪಡಿಸುವಂಥ ಪರಿಸ್ಥಿತಿ ಸೃಷ್ಟಿಯಾದಾಗ ಸರಕಾರಗಳು ಜನರ ಆಕ್ರೋಶವನ್ನು ತಣ್ಣಗೆ ಮಾಡಲು, ತೇಪೆ ಹಚ್ಚಲು ಇಂಥ ಹುಸಿ ಕಾರ್ಯಕ್ರಮಗಳನ್ನು ಜ್ಯಾರಿಗೊಳಿಸುತ್ತದೆ. ಈ ಹಿಂದೆ ಕಾಂಗ್ರೆಸ್ ಸರಕಾರ ಕಲ್ಯಾಣ ರಾಜ್ಯದ ಹೆಸರಲ್ಲಿ ಉಚಿತ ಆಸ್ಪತ್ರೆ, ಉಚಿತ ಶಿಕ್ಷಣ, ಸಬ್ಸಿಡಿ, ಎಲ್ಲರಿಗೂ ಪಡಿತರ ಇತ್ಯಾದಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿತು. ಬಳಿಕ ನಿಧಾನವಾಗಿ ಒಂದೊಂದನ್ನೇ ಕಡಿತ ಮಾಡುತ್ತಾ ಬಂತು. ಅದೇ ರೀತಿಯಾಗಿ ಈಗ ಆಹಾರ ಭದ್ರತೆ ಮಸೂದೆ ಮಂಡಿಸಿದೆ ಎಂದು ಮಾಧವ ಕೇಂದ್ರ ಸರಕಾರದ ಕ್ರಮವನ್ನು ವ್ಯಾಖ್ಯಾನಿಸಿದರು. ಇದುವರೆಗೆ ದೇಶವನ್ನಾಳಿದ ಕಾಂಗ್ರೆಸ್, ಯುಪಿಎ, ಎನ್ ಡಿ ಎ, ಬಿಜೆಪಿ ಪಕ್ಷಗಳ ಜನ ವಿರೋಧಿ ನೀತಿಗಳಿಂದಾಗಿ ದೇಶದ ಆಡಳಿತ ಹಳಿ ತಪ್ಪಿದೆ. ಇವೆರಡೂ ಪಕ್ಷಗಳೂ ಒಂದೇ. ಹೆಚ್ಚಿನ ವ್ಯತ್ಯಾಸವೇನೂ ಇವುಗಳ ನಡುವೆ ಇಲ್ಲ. ಬಸ್ ದರ ಏರಿಕೆ ಮಾಡಿದಾಗ ಈ ಪಕ್ಷಗಳೆರಡೂ ಮಾತಾಡದೆ ಮೌನ ವಹಿಸಿದವು. ಒಂದೆಡೆ ಕೋಮುವಾದಿ ಬಿಜೆಪಿ ಇದ್ದರೆ, ಇನ್ನೊಂದೆಡೆ ಭ್ರಷ್ಟಾಚಾರದಲ್ಲಿ ಹೊಸ ಹೊಸ ದಾಖಲೆ ಮಾಡಿದ ಸರಣಿ ಹಗರಣಗಳ ಕಾಂಗ್ರೆಸ್ ಇದೆ. 1.76 ಸಾವಿರ ಕೋಟಿ ರು. ಗಳ 2ಜಿ ಹಗರಣ, 1.86 ಸಾವಿರ ಕೋಟಿ ರು. ಗಳ ಕಲ್ಲಿದ್ದಲು ಹಗರಣ, ಆದರ್ಶ ಹೌಸಿಂಗ್ ಹಗರಣ, ಕಾಮನ್ವೆಲ್ತ್ ಹಗರಣ ಹೀಗೆ ಹಗರಣಗಳ ಪಟ್ಟಿ ಬೆಳೆಯುತ್ತದೆ. ಪ್ರಧಾನಿ ಕಾರ್ಯಾಲಯದಿಂದ ಕಲ್ಲಿದ್ದಲು ಹಗರಣದ ಕಡತ ಕಾಣೆಯಾಗಿದೆ. ಇದಕ್ಕೆ ಪ್ರಧಾನಿಯೇ ಹೊಣೆ ಹೊರಬೇಕು ಎಂದು ಬಿ. ಮಾಧವ ಹೇಳಿದರು. ಡಾಲರ್ ಎದುರು ರೂಪಾಯಿ ಮೌಲ್ಯ ಅತೀ ಕೆಳಮಟ್ಟಕ್ಕೆ ಕುಸಿದಿರುವಾಗ ಎರಡೂ ಬಂಡವಾಳಶಾಹಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಪ್ರಧಾನಿ ಯಾರಾಗಬೇಕು ಎಂಬ ಬಗ್ಗೆ ಅಸಂಬದ್ಧವಾಗಿ ಚರ್ಚೆ ನಡೆಸಲಾಗುತ್ತಿದೆ. ಪರ್ಯಾಯ ಆರ್ಥಿಕ ನೀತಿಗಳ ಬಗ್ಗೆ ಚರ್ಚೆಯಾಗುತ್ತಿಲ್ಲ. ಇವೆರಡೂ ಪಕ್ಷಗಳೂ ಈ ದೇಶದ ಸಮಸ್ಯೆಗಳೇ ಆಗಿದೆ. ಸಮಸ್ಯೆಗೆ ಪರಿಹಾರ ಎಡಪಕ್ಷಗಳೇ ಹೊರತು ಬೇರೆ ಯಾವ ಪಕ್ಷಗಳೂ ಅಲ್ಲ. ಯಾವ ಮುಲಾಜೂ ಇಲ್ಲದೆ ಕಾಂಗ್ರೆಸ್ನ್ನು ಸೀಲಿಸಿ, ಬಿಜೆಪಿಯನ್ನು ತಿರಸ್ಕರಿಸಬೇಕು ಎಂದು ಬಿ.ಮಾಧವ ಕರೆ ಕೊಟ್ಟರು.
ಎಡಪಕ್ಷಗಳ ಮುಖಂಡರಾದ ಕೆ.ಶಂಕರ್, ಪಿ.ವಿಶ್ವನಾಥ ರೈ, ಮಹಾಬಲ ವಡೇರಹೋಬಳಿ, ಕೆ.ವಿ.ಭಟ್, ವಾಸುದೇವ ಕುಕ್ಯಾನ್ ಹಾಗೂ ಬಾಲಕೃಷ್ಣ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *