Realtime blog statisticsweb statistics
udupibits.in
Breaking News
ಉಡುಪಿ: ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ಬೆಂಬಲಿಸಿ ವರದಿ ಪ್ರಕಟಿಸಿದ ಉದಯವಾಣಿ ವಿರುದ್ಧ ಶ್ರೀರಾಮ ದಿವಾಣರಿಂದ ಚುನಾವಣಾ ಆಯೋಗಕ್ಕೆ ದೂರು

ಮಠದಲ್ಲಿರುವ ಕೊಳಕನ್ನು ಪೇಜಾವರ ಸ್ವಾಮೀಜಿ ಮೊದಲು ಸರ್ಫ್ ಹಾಕಿ ತೊಳೆಯಲಿ: ಅತ್ರಾಡಿ ಅಮೃತಾ ಶೆಟ್ಟಿ

ಉಡುಪಿ: ಊಟಕ್ಕೆ ಕುಳಿತಿದ್ದವರನ್ನು ಪಂಕ್ತಿಯಿಂದ ಎಬ್ಬಿಸುವ ಕೆಲಸವನ್ನು ಮನುಷ್ಯರಾದವರು ಮಾಡಲು ಸಾಧ್ಯವಿಲ್ಲ ಅದು ಸಂಸ್ಕೃತಿಯೂ ಅಲ್ಲ. ಪಂಕ್ತಿಯಿಂದ ಎಬ್ಬಿಸುವ ಮೂಲಕ ಉಡುಪಿಯ ಮಠ ಸಂಸ್ಕೃತಿ ಜನರು ಶೂದ್ರರು ಕೀಳು ಜನರು ಎಂಬುದನ್ನು ನೇರವಾಗಿ ಹೇಳಿದ್ದಾರೆ. ಇದನ್ನು ಶೂದ್ರರು ಇನ್ನಾದರೂ ಅರ್ಥಮಾಡಿಕೊಳ್ಳಬೇಕು, ನಮ್ಮದು ಮಠ ಸಂಸ್ಕೃತಿ ಅಲ್ಲ. ದೈವಗಳ, ಗರೋಡಿಗಳ ಸಂಸ್ಕೃತಿ ನಮ್ಮದು. ಬ್ರಾಹ್ಮಣರ ಸಂಸ್ಕಾರ ನಮಗೆ ಬೇಕಾಗಿಲ್ಲ. ನಮ್ಮ ಸಂಸ್ಕಾರ ಬ್ರಾಹ್ಮಣರಿಗಿಲ್ಲ. ಎಲ್ಲದಕ್ಕೂ ಮೊದಲು ಶೂದ್ರರು ಮಾನಸಿಕ ಗುಲಾಮಗಿರಿಯಿಂದ ಹೊರಗೆ ಬರಬೇಕು, ಹೊರಗೆ ಬಾರದ ಹೊರತು ಉದ್ಧಾರವಾಗಲು ಸಾಧ್ಯವಿಲ್ಲ ಎಂದು ಸಾಮಾಜಿಕ ಹೋರಾಟಗಾರ್ತಿ, ಸಾಹಿತಿ ಅತ್ರಾಡಿ ಅಮೃತಾ ಶೆಟ್ಟಿ ಹೇಳಿದರು.

ಪಂಕ್ತಿಭೇದ ಮತ್ತು ಮಡ ಮಡೆಸ್ನಾನಗಳನ್ನು ನಿಷೇಧಿಸಬೇಕೆಂದು ರಾಜ್ಯ ಸರಕಾರವನ್ನು ಆಗ್ರಹಿಸಿ ಸಿಪಿಐಎಂ ಪಕ್ಷವು ಉಡುಪಿ ಸರ್ವಿಸ್ ಬಸ್ ನಿಲ್ದಾಣ ಪರಿಸರದಲ್ಲಿ ಮೇ.5ರಿಂದ ಆರಂಭಿಸಿದ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹದ ಮೂರನೇ ದಿನವಾದ ಮೇ.7ರಂದು ಅವರು ಮಾತನಾಡುತ್ತಿದ್ದರು.

ಜಾತಿಯನ್ನು ಸೃಷ್ಟಿಸಿದವರು ಬ್ರಾಹ್ಮಣರು. ಹಿಂದೂ ಎನ್ನುವುದು ಇಂದು ಒಂದು ರಾಜಕೀಯ ನಾಣ್ಯವಾಗಿ ಬಳಕೆಯಾಗುತ್ತಿದೆ. ಇಲ್ಲದೇ ಇದ್ದಲ್ಲಿ ವನಿತಾ ಶೆಟ್ಟಿಯವರನ್ನು ಊಟದ ಪಂಕ್ತಿಯಿಂದ ಎಬ್ಬಿಸಿದ ಬಗ್ಗೆ ಹಿಂದೂ ಸಂಘಟನೆಗಳು ಯಾಕೆ ಧ್ವನಿ ಎತ್ತಿಲ್ಲ ಎಂದು ಪ್ರಶ್ನಿಸಿದ ಅಮೃತಾ ಶೆಟ್ಟಿ, ಗುಡಿ ನಿರ್ಮಿಸುವುದರಿಂದ ಹಿಡಿದು ದೇವಸ್ಥಾನದ ಸ್ವಚ್ಛತೆ ಸಹಿತ ಪ್ರತಿಯೊಂದು ಕೆಲಸಗಳನ್ನೂ ಮಾಡುವುದು ಅಕ್ಕಿ, ಮಟ್ಟು ಗುಳ್ಳ ಬೆಳೆಸುವುದು ಶೂದ್ರ ರೈತರು. ಶೂದ್ರ ಸಮುದಾಯದ ಜನರ ಶ್ರಮ ಇಲ್ಲದಿರುತ್ತಿದ್ದಲ್ಲಿ ದೇವಸ್ಥಾನಗಳೇ ಇರುತ್ತಿರಲಿಲ್ಲ. ಆದರೆ ಇಂದು ಮಠದವರಿಗೆ ಈ ಶೂದ್ರರು ಊಟಕ್ಕೆ ಮಾತ್ರ ಬೇಕಾಗಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ದಲಿತರ ಕಾಲನಿಗಳಿಗೆ ಭೇಟಿ ಕೊಡಲು ಬಂದಾಗ ದಲಿತರು, ನಿಮ್ಮ ದೈವ ಯಾವುದು, ನಿಮ್ಮ ಕುಲ ದೇವರು ಯಾರು ಎಂದೇನಾದರೂ ಕೇಳಿದರಾ ಎಂದು ಪೇಜಾವರ ಸ್ವಾಮೀಜಿಗಳಿಗೆ ಬಹಿರಂಗವಾಗಿಯೇ ಪ್ರಶ್ನಿಸಿದ ಅತ್ರಾಡಿ ಅಮೃತಾ ಶೆಟ್ಟಿ, ಪೇಜಾವರ ಸ್ವಾಮೀಜಿಗಳು ಮೊತ್ತ ಮೊದಲು ತಮ್ಮದೇ ಮಠದಲ್ಲಿ ತುಂಬಿಕೊಂಡಿರುವ ಕೊಳಕುಗಳನ್ನು ಸರ್ಫ್ ಹಾಕಿ ತೊಳೆಯಬೇಕೆಂದು ವ್ಯಂಗ್ಯವಾಡಿದರು.

ಧರಣಿಯನ್ನುದ್ಧೇಶಿಸಿ ಮಾತನಾಡಿದ ಬೆಳ್ತಂಗಡಿಯ ನ್ಯಾಯವಾದಿ ಬಿ.ಎಂ.ಭಟ್ ಅವರು, ಉಡುಪಿ ಮಠದಲ್ಲಿ ವನಿತಾ ಶೆಟ್ಟಿಯವರನ್ನು ಊಟದ ಪಂಕ್ತಿಯಿಂದ ಎಬ್ಬಿಸಿದ್ದು ಹಿಂದೂ ವಿರೋಧಿ ಕ್ರಮ. ಹಾಗಾದರೆ ಇಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯೂ ಊಟಕ್ಕೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದಾಯಿತು. ಬಾಂಗ್ಲಾ ವಲಸಿಗರನ್ನು ಓಡಿಸಬೇಕು ಎನ್ನುವ ಸಂಘ ಪರಿವಾರ ಪಂಕ್ತಿಯಿಂದ ಎಬ್ಬಿಸಿದವರನ್ನು ಎಲ್ಲಿಗೆ ಓಡಿಸುತ್ತಾರೆಯೇ ಎಂದು ಸವಾಲೆಸೆದರು.

ಹಿಂದುತ್ವವಾದಿಗಳಲ್ಲಿ ಮನುಷ್ಯತ್ವವಿಲ್ಲ: ಬಿ.ಎಂ.ಭಟ್

ಜಾತಿ ನಾಶವಾಗದ ವಿನಹಾ ದೇಶ ಉದ್ಧಾರವಾಗದು ಎಂದು ಹೇಳಿದ ಸಿಪಿಐಎಂ ಮುಖಂಡರೂ ಆದ ಬಿ.ಎಂ.ಭಟ್, ಸೌಜನ್ಯಾ ಅತ್ಯಾಚಾರಕ್ಕೀಡಾಗಿ ಕೊಲೆಯಾದಾಗ, ವನಿತಾರನ್ನು ಊಟದ ಪಂಕ್ತಿಯಿಂದ ಎಬ್ಬಿಸಿದಾಗ ಹಿಂದುತ್ವವಾದಿಗಳಿಗೆ ನೋವಾಗಿಲ್ಲವೆಂದದಾರೆ, ಇವರಲ್ಲಿ ನಯಾಪೈಸೆಯ ಮನುಷ್ಯತ್ವವೇ ಇಲ್ಲವೆಂದರ್ಥ ಎಂದು ತಿಳಿಸಿದರು.

ಕವಯತ್ರಿ ಸುಕನ್ಯಾ ಕಳಸ, ಕುಂದಾಪುರದ ಸಿಐಟಿಯು ನಾಯಕ ಸುರೇಶ್ ಕಲಾಗಾರ್, ಸಿಪಿಐಎಂ ಮುಖಂಡರುಗಳಾದ ಕೆ.ಶಂಕರ್, ಪಿ.ವಿಶ್ವನಾಥ ರೈ, ಬಾಲಕೃಷ್ಣ ಶೆಟ್ಟಿ, ಈಶ್ವರಿ ಬೆಳ್ತಂಗಡಿ ಮುಂತಾದವರು ಧರಣಿಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *