Realtime blog statisticsweb statistics
udupibits.in
Breaking News
ಉಡುಪಿ: ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ಬೆಂಬಲಿಸಿ ವರದಿ ಪ್ರಕಟಿಸಿದ ಉದಯವಾಣಿ ವಿರುದ್ಧ ಶ್ರೀರಾಮ ದಿವಾಣರಿಂದ ಚುನಾವಣಾ ಆಯೋಗಕ್ಕೆ ದೂರು

ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಕೈ ಕಳೆದುಕೊಂಡ ಬಾಲೆ: ಪ್ರಕರಣ ದಾಖಲಿಸಿದ ಮಹಿಳಾ ಆಯೋಗ

ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆಯ ಭಾಗವಾದ ಉಡುಪಿ ಕವಿ ಮುದ್ದಣ ಮಾರ್ಗದಲ್ಲಿರುವ ಹೆಂಗಸರ ಆಸ್ಪತ್ರೆಯಲ್ಲಿನ ವೈದ್ಯರ ನಿರ್ಲಕ್ಷ್ಯದಿಂದಾಗಿ ಹೆಣ್ಮಗುವೊಂದು ತನ್ನ ಬಲಗೈಯನ್ನು ಕಳೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಜನಪರ ವೇದಿಕೆಯ ಅಧ್ಯಕ್ಷ ಶ್ರೀರಾಮ ದಿವಾಣ ನೀಡಿದ ದೂರನ್ನು ಕರ್ನಾಟಕ ಮಹಿಳಾ ಆಯೋಗವು ದಾಖಲಿಸಿಕೊಂಡಿದೆ.

ಉಡುಪಿ ತಾಲೂಕು ಎಳ್ಳಂಪಳ್ಳಿ ಗ್ರಾಮದ ನೀಲಾವರ ನಿವಾಸಿ ಶ್ರೀಮತಿ ಮುಕಾಂಬಿಕ ಎಂಬಾಕೆಯ ಹೆಣ್ಮಗಳು ಅನ್ಮಿತಾ ಕೈ ಕಳೆದುಕೊಂಡ ನತದೃಷ್ಠೆ. ಈಕೆಗೀಗ ಮೂರು ತಿಂಗಳು. ಮೂಕಾಂಬಿಕಾ ಅವರ ಎರಡನೇ ಹೆರಿಗೆ ಮಾಡಿಸುವ ಸಂದರ್ಭದಲ್ಲಿ ವೈದ್ಯರು ತೋರಿಸಿದ ಬೇಜವಾಬ್ದಾರಿಯಿಂದಾಗಿ ಈ ಹೆಣ್ಮಗು ತನ್ನ ಸಹಜ ಶಕ್ತಿಯನ್ನು ಕಳೆದುಕೊಳ್ಳುವಂತಾಗಿತ್ತು.

ಹೆರಿಗೆಗಾಗಿ ಮುಕಾಂಬಿಕ ಜೂನ್ 17ರಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಸೂಚಿಸಿದ ನಿರೀಕ್ಷಿತ ಹೆರಿಗೆ ದಿನಾಂಕ ಜೂನ್ 16 ಆಗಿತ್ತು. ಜೂನ್ 17ರಂದು ನೋವು ಆರಂಭವಾಗಿತ್ತು. ವಿಪರೀತ ನೋವನ್ನು ಅನುಭವಿಸುತ್ತಿದ್ದ ಮುಕಾಂಬಿಕ, ಶಸ್ತ್ರಚಿಕಿತ್ಸೆ ನಡೆಸಿ ಮಗವನ್ನು ಹೊರ ತೆಗೆಯುವಂತೆ ಪರಿಪರಿಯಾಗಿ ವೈದ್ಯರಲ್ಲಿ ವಿನಂತಿಸಿಕೊಂಡಿದ್ದಾಲೆ. ಕೊನೆಗೆ ನೋವನ್ನು ಸಹಿಸಿಕೊಳ್ಳಲೂ ಸಾಧ್ಯವಾಗದೆ ಅರೆ ಪ್ರಜ್ಞಾವಸ್ಥೆ ತಲುಪಿದ್ದಳು.

ಇಷ್ಟಾದರೂ ಸಹ, ಹೆಂಗಸರ ಆಸ್ಪತ್ರೆಯ ವೈದ್ಯರು ಮುಕಾಂಬಿಕಳ ಹೆರಿಗೆ ಮಾಡಿಸಲಿಲ್ಲ. ನೋವು ಕಾಣಿಸಿಕೊಂಡ ಎರಡು ದಿನಗಳ ಜೂನ್ 19ರಂದು ಸಂಜೆ ಹೆರಿಗೆಯಾಗಿದೆ. ಹೆರಿಗೆ ಮಾಡಿಸುವ ಸಂದರ್ಭದಲ್ಲಿ ಮಗುವನ್ನು ಹೊರಗೆ ತೆಗೆಯಲು ವೈದ್ಯರು ಬಹಳ ಕಷ್ಟಪಟ್ಟಿದ್ದಾರೆ. ಕೊನೆಗೆ ಬಲವಂತವಾಗಿಯೇ ಹೊರಗೆಳೆದು ಹಾಕಿದ್ದಾರೆ. ಈ ಸಂದರ್ಭದಲ್ಲಿನ ವೈದ್ಯರ ಅಸಡ್ಡೆಯಿಂದಾಗಿ ಮಗುವಿನ ಕುತ್ತಿಗೆ ಮತ್ತು ಬಲಭುಜ ಭಾಗದ ನರಗಳಿಗೆ ಗಂಭೀರವಾದ ಏಟು ಬಿದ್ದ ಪರಿಣಾಮವಾಗಿ ಮಗುವಿನ ಬಲಕೈ ಸಂಪೂರ್ಣವಾಗಿ ತನ್ನ ಶಕ್ತಿ ಕಳೆದುಕೊಂಡು ನಿಸ್ತೇಜವಾಗಿತ್ತು.

ಹೆರಿಗೆಯಾದ ಬಳಿಕ ವೈದ್ಯರು ಮಗುವಿನ ಕೈಗೆ ಬ್ಯಾಂಡೇಜ್ ಮಾಡಿ ನಾಲ್ಕೈದು ದಿನಗಳ ಕಾಲ ತುರ್ತು ನಿಗಾ ಘಟಕದಲ್ಲಿ ಇರಿಸಿದ್ದಾರೆ. ಈ ನಡುವೆ ಒಂದು ಬಾರಿ ಮಾತ್ರ ಮಗುವನ್ನು ತಾಯಿಗೆ ತೋರಿಸಿದ್ದಾರೆ ಮತ್ತು ಬ್ಯಾಂಡೇಜ್ ಯಾಕೆಂದು ಕೇಳಿದಾಗ, ಹೆರಿಗೆ ಮಾಡಿಸುವಾಗ ಕೈಗೆ ಗಾಯವಾಗಿದೆ, ವಾರದೊಳಗೆ ವಾಸಿಯಾಗಲಿದೆ ಎಂದು ಸಮಜಾಯಿಷಿಕೆ ನೀಡಿದ್ದಾರೆ. ಜೂನ್ 30ಕ್ಕೆ ನಿಸ್ತೇಜ ಕೈಯನ್ನು ಸರಿಪಡಿಸಲಾಗದ ಸ್ಥಿತಿಯಲ್ಲಿಯೇ ತಾಯಿ ಹಾಗೂ ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದ್ದಾರೆ.

ಬಡ ಕುಟುಂಬಕ್ಕೆ ಸೇರಿದ ಮುಕಾಂಬಿಕೆ ಬೇರೆ ದಾರಿ ಕಾಣದೆ ಮತ್ತೆ ಜಿಲ್ಲಾಸ್ಪತ್ರೆಗೆ, ಹೆಂಗಸರ ಆಸ್ಪತ್ರೆಗೆ ಮಕ್ಕಳ ಆಸ್ಪತ್ರೆಗೆ ಕರೆದೊಯ್ದು ತೋರಿಸಿದ್ದಾರೆ. ವೈದ್ಯರ ಸೂಚನೆಯಂತೆ ಕೊನೆಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಕರೆದೊಯ್ದು ತಜ್ಞ ವೈದ್ಯರಿಗೆ ತೋರಿಸಿದ್ದಾರೆ. ಹೆರಿಗೆ ಮಾಡಿಸುವಾಗ ಆದ ಘಟನೆಯಿಂದಾಗಿ ಮಗುವಿನ ಕೈಗೆ ಪೆಟ್ಟಾಗಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದು, ಆದಷ್ಟು ಬೇಗ ಶಸ್ತ್ರ ಚಿಕಿತ್ಸೆ ಮತ್ತು ಮುಂದಿನ ಎರಡು ವರ್ಷಗಳ ಕಾಲ ನಿರಂತರವಾಗಿ ಚಿಕಿತ್ಸೆ ಓದಗಿಸಿದಲ್ಲಿ 40 ಶೇಕಡಾದಷ್ಟು ಕೈಗೆ ಶಕ್ತಿ ತುಂಬಬಹುದು ಎಂಬ ಭರವಸೆಯ ಮಾತುಗಳನ್ನಾಡಿದ ಹಿನ್ನೆಲೆಯಲ್ಲಿ, ಮುಕಾಂಬಿಕ ಇದೀಗ ಮಗುವಿನ ಚಿಕಿತ್ಸೆಗಾಗಿ ದಾನಿಗಳಿಗೆ ಮೊರೆ ಹೋಗಿದ್ದಾಳೆ.

ಹೃದಯ ಸಂಪನ್ನ ದಾನಿಗಳು ಶ್ರೀಮತಿ ಮುಕಾಂಬಿಕಾಳ ಕಾರ್ಪೋರೇಷನ್ ಬ್ಯಾಂಕ್ ನ ಕುಂಜಾಲ್ ಬ್ರಾಂಚ್ನಲ್ಲಿರುವ ಉಳಿತಾಯ ಖಾತೆ ಸಂಖ್ಯೆ 297600101001254 (ಪಿ.ಕೋಡ್: 001325)ಗೆ ಗರಿಷ್ಟ ಮೊತ್ತದ ಆರ್ಥಿಕ ಸಹಾಯ ಮಾಡುವ ಮೂಲಕ ಬಡ ಕುಟುಂಬದ ಹೆಣ್ಮಗಳ ಭವಿಷ್ಯವನ್ನು ರೂಪಿಸುವಲ್ಲಿ ತಮ್ಮ ಕೊಡುಗೆಯನ್ನು ಸಲ್ಲಿಸಬಹುದಾಗಿದೆ.

Leave a Reply

Your email address will not be published. Required fields are marked *