Realtime blog statisticsweb statistics
udupibits.in
Breaking News
# ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಮಲಾದೇವಿ ಚಟ್ಟೋಪಾಧ್ಯಾಯ ಹೆಸರಿಡಲು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿವೃತ್ತ ಪತ್ರಕರ್ತ ಅಮ್ಮೆಂಬಳ ಆನಂದರಿಂದ ಸಿಎಂ ಕುಮಾರಸ್ವಾಮೀಗೆ ಮನವಿ.

ಹಾಸ್ಟೆಲ್ ಹೆಸರಲ್ಲಿ ಅಧಿಕಾರಿಗಳಿಂದ ಬಾಡಿಗೆ ದಂಧೆ !

# ಶ್ರೀರಾಮ ದಿವಾಣ.

ಉಡುಪಿ: ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶೇಷಪ್ಪ ಹಾಗೂ ಉಡುಪಿ ತಾಲೂಕು ವಿಸ್ತರಣಾಧಿಕಾರಿ ಗಾಣಿಗ ಮೊದಲಾದವರು ಹಾಸ್ಟೆಲ್ ಹೆಸರಿನಲ್ಲಿ ಭಾರೀ ಬಾಡಿಗೆ ದಂಧೆ ನಡೆಸುತ್ತಿದ್ದು, ಅಧಿಕಾರಿಗಳ ಈ ಬಾಡಿಗೆ ದಂಧೆಯಿಂದಾಗಿ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುವಂಥ ಶೋಚನೀಯ ಪರಿಸ್ಥಿತಿ ಸೃಷ್ಟಿಯಾಗಿದೆ.

ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯ, ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯ, ಶ್ರೀಮತಿ ಇಂದಿರಾ ಗಾಂಧಿ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಮಹಿಳಾ ನರ್ಸಿಂಗ್ ವಿದ್ಯಾರ್ಥಿ ನಿಲಯ ಸಹಿತ ಒಟ್ಟು 13 ವಿದ್ಯಾರ್ಥಿ ನಿಲಯಗಳಿಗೆ ಮತ್ತು 3 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಉಡುಪಿ ಜಿಲ್ಲೆಯಲ್ಲಿ ಸ್ವಂತ ಕಟ್ಟಡವಿಲ್ಲದೆ ಖಾಸಗಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿವೆ.

25 ವಿದ್ಯಾರ್ಥಿ ನಿಲಯಗಳು ಮತ್ತು 2 ವಸತಿ ಶಾಲೆಗಳು ಮಾತ್ರ ಸ್ವಂತ ಕಟ್ಟಡದಲ್ಲಿದೆ. ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉಳಿದ ಅಷ್ಟೂ ವಿದ್ಯಾರ್ಥಿ ನಿಲಯಗಳು ಮತ್ತು ವಸತಿ ಶಾಲೆಗಳು ಒಂದಲ್ಲ ಒಂದು ಗಂಭೀರ ಕೊರತೆಯಿಂದ ನಲುಗುತ್ತಿದೆ. ವಿದ್ಯಾರ್ಥಿ ನಿಲಯಗಳ ಪೈಕಿ 2 ವಿದ್ಯಾರ್ಥಿ ನಿಲಯಗಳು ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆಯಾದರೂ, ಇವುಗಳಿಗೆ ಇಲಾಖೆ ಬಾಡಿಗೆ ಪಾವತಿಸುತ್ತಿಲ್ಲ. ಉಚಿತವಾಗಿ ಲಭ್ಯವಾಗಿರುವುದೇ ಇದಕ್ಕೆ ಕಾರಣವೆನ್ನಲಾಗುತ್ತಿದೆ.

ವಿದ್ಯಾರ್ಥಿ ನಿಲಯಗಳು ಮತ್ತು ವಸತಿ ಶಾಲೆಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಇಲಾಖಾಧಿಕಾರಿಗಳಿಗೆ ಬಹುದೊಡ್ಡ ವರದಾನವಾಗಿ ಪರಿಣಮಿಸಿದೆ. ಒಂದೊಂದು ಹಾಸ್ಟೆಲ್ ಕಟ್ಟಡಕ್ಕೂ 25ರಿಂದ 50 ಸಾವಿರ ರು. ವರೆಗೂ ಇಲಾಖೆ ಬಾಡಿಗೆ ನಿಗದಿ ಮಾಡಿದೆ. ದೊಡ್ಡ ಮೊತ್ತದ ಬಾಡಿಗೆ ದರವನ್ನು ಕೇವಲ ಕಡತಗಳಿಗಾಗಿ ಇಲಾಖಾಧಿಕಾರಿಗಳು ನಿಗದಿಪಡಿಸುತ್ತಾರೆ. ಬಾಡಿಗೆ ದರ ನಿಗದಿಪಡಿಸಿದ ಬಳಿಕ ಬಾಡಿಗೆ ದರವನ್ನು ಬಾಡಿಗೆ ಕಟ್ಟಡದ ಮಾಲೀಕರಿಗೆ ಪಾವತಿಸದೆ ಕಡಿಮೆ ಮೊತ್ತ ಪಾವತಿಸಿ, ಉಳಿದ ಮೊತ್ತವನ್ನು ತಮ್ಮ ಸ್ವಂತಕ್ಕಾಗಿ ತಮ್ಮಲ್ಲೇ ಉಳಿಸಿಕೊಳ್ಳುತ್ತಾರೆ.

ಅಂದರೆ, ಇದೊಂದು ಕಮಿಷನ್ ದಂಧೆಯಾಗಿ ಹೋಗಿದೆ ಎನ್ನಲಾಗುತ್ತಿದೆ. ಇಲ್ಲಿ ಬಾಡಿಗೆ ಕಟ್ಟಡದ ಮಾಲೀಕರೂ ಸಹ ಇಲಾಖಾಧಿಕಾರಿಗಳ ಜೊತೆ ಮೊದಲೇ ಹೊಂದಾಣಿಕೆ ಮಾಡಿಕೊಂಡಿರುತ್ತಾರೆ. ಅವರಿಗೂ ಇದೊಂದು ಸಹಜವಾದ ವ್ಯವಹಾರವೇ ಆಗಿರುವುದೇ ಇಲಾಖಾಧಿಕಾರಿಗಳ ಇಂಥ ಬಾಡಿಗೆ ದಂಧೆ ಯಾವುದೇ ಅಡೆತಡೆಯೂ ಇಲ್ಲದೆ ಮುಂದುವರಿದುಕೊಂಡು ಬರಲು ಕಾರಣವೆನ್ನಲಾಗಿದೆ.

ಇಲ್ಲಿ ಇನ್ನೊಂದು ಒಳ ವ್ಯವಹಾರ ಮತ್ತು ರಾಜಕೀಯವೂ ಇದೆ. ಅದು ಕೊಡು ಕೊಳುವಿಕೆ. ಇಲಾಖಾಧಿಕಾರಿಗಳು ಇತರ ಇಲಾಖೆಗಳ ಅಧಿಕಾರಿಗೊಂದಿಗೆ ಮತ್ತು ರಾಜಕಾರಣಿಗಳೊಂದಿಗೆ ನಡೆಸುವ ವ್ಯವಹಾರವಿದು. ಇದರಿಂದ ಇಬ್ಬರಿಗೂ ಪ್ರತ್ಯಕ್ಷ ಮತ್ತು ಪರೋಕ್ಷವಾದ ಕೆಲವೊಂದು ಲಾಭಗಳಿವೆ.

ಉದಾಹರಣೆಗೆ ಹೇಳುವುದಾದರೆ, ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯ ಮತ್ತು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಮಹಿಳಾ ನರ್ಸಿಂಗ್ ವಿದ್ಯಾರ್ಥಿ ನಿಲಯಗಳಿರುವುದು ಉಡುಪಿ ನಗರದ ಬಲಾಯಿಪಾದೆಯಲ್ಲಿರುವ ಬಾಡಿಗೆ ಕಟ್ಟಡದಲ್ಲಿ. ಈ ಬಾಡಿಗೆ ಕಟ್ಟಡ ಸರಕಾರಿ ಅಧಿಕಾರಿಯೊಬ್ಬರಿಗೆ ಸೇರಿದ್ದು.

ಇತ್ತೀಚೆಗಿನವರೆಗೂ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯ ಇದ್ದುದು ಉಡುಪಿ ವಿದಾನಸಭಾ ಕ್ಷೇತ್ರ ವ್ಯಾಪ್ತಿಯ ತೊಟ್ಟಂ ಎಂಬಲ್ಲಿನ ಬಾಡಿಗೆ ಕಟ್ಟಡದಲ್ಲಿ. ಈ ಬಾಡಿಗೆ ಕಟ್ಟಡವನ್ನು ಉದ್ಘಾಟಿಸಿದವರು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಮೋದ್ ಮಧ್ವರಾಜ್ ಅವರು. ಅಂದರೆ ಈ ಕಟ್ಟಡದ ಮಾಲೀಕರು ಪ್ರಮೋದ್ ಮಧ್ವರಾಜ್ ಅವರಿಗೆ ಬೇಕಾದವರು.

ಬಾಡಿಗೆ ಕಟ್ಟದ ಮಾಲೀಕರಿಗೂ, ರಾಜಕಾರಣಿಗಳಿಗೂ, ಸರಕಾರಿ ಅಧಿಕಾರಿಗಳಿಗೂ ನಡುವೆ ಕೊಡು ಕೊಳ್ಳುವಿಕೆ ಇರುವುದರ ಪರಿಣಾಮವೇ, ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದಿದ್ದರೂ ಹಾಸ್ಟೆಲ್ಗಳನ್ನು ಇಂಥ ನಿರ್ಧಿಷ್ಟ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲಾಗಿರುತ್ತದೆ. ಈ ಒಳ ಒಪ್ಪಂದದಿಂದಾಗಿ ಇವುಗಳ ಫಲಾನುಭವಿಗಳಿಗೆ ಪರಸ್ಪರ ಲಾಭ ಮಾಡಿಕೊಳ್ಳುತ್ತಾರೆ.

3 ವರ್ಷದಿಂದ ಶೇಷಪ್ಪರೇ ಪ್ರಭಾರ..!

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯಾದ ಶೇಷಪ್ಪನವರೇ, ಕಳೆದ ಮೂರು ವರ್ಷಗಳಿಂದ ಜಿಲ್ಲಾ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಭಾರ ಅಧಿಕಾರಿಯಾಗಿದ್ದಾರೆ. ಶೇಷಪ್ಪನವರು, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಮಾರ್ ಸೊರಕೆಯವರ ಜಾತಿಗೆ ಸೇರಿದವರಾದ ಕಾರಣ ಹಾಗೂ ಸೊರಕೆಯವರ ಖಾಸಗಿ ಆಪ್ತ ಸಹಾಯಕನಂತೆ ನಡೆದುಕೊಳ್ಳುತ್ತಿರುವುದರಿಂದಲೇ ಶೇಷಪ್ಪ ಅವರು ಎರಡೂ ಇಲಾಖೆಗಳ ಅಧಿಕಾರಿಯಾಗು ಮುಮದುವರಿಯಲು ಕಾರಣವೆನ್ನಲಾಗಿದೆ.

ಎರಡು ಇಲಾಖೆಗಳೂ ಸಾಮಾನ್ಯ ಇಲಾಖೆಗಳೇನೂ ಅಲ್ಲ. ಅನೇಕ ಬಹುದೊಡ್ಡ ಜವಾಬ್ದಾರಿಗಳಿರುವ ಎರಡೂ ಇಲಾಖೆಗಳನ್ನು ಒಬ್ಬರೇ ವ್ಯಕ್ತಿ ನಿರ್ವಹಿಸುವುದು ಕಷ್ಟಸಾಧ್ಯವಾಗಿದೆಯಾದರೂ, ಕಳೆದ ಮೂರು ವರ್ಷಗಳಿಂದಲೂ ಒಬ್ಬರೇ ವ್ಯಕ್ತಿಯನ್ನು ಎರಡೂ ಇಲಾಖೆಗಳ ಅಧಿಕಾರಿಯನ್ನಾಗಿ ಮುಂದುವರಿಸಿರುವುದು ಜಾತಿ, ಹಣ ಮತ್ತು ರಾಜಕೀಯ ಲಾಬಿಯಲ್ಲದೇ ಬೇರೇನೂ ಅಲ್ಲ.

ಇವರೆಲ್ಲ ಏನೂ ಬೇಕಾದರೂ ಮಾಡಿಕೊಳ್ಳಲಿ, ಆದರೆ ಇವರ ಸ್ವಹಿತಾಸಕ್ತಿಯ ಕಾರ್ಯಕ್ಕಾಗಿ ವಿದ್ಯಾರ್ಥಿ – ವಿದ್ಯಾರ್ಥಿನಿಯರ ದಿನಚರಿಯನ್ನು ಯಾಕಾಗಿ ಇವರು ನರಕವನ್ನಾಗಿ ಮಾಡಬೇಕು ?

Leave a Reply

Your email address will not be published. Required fields are marked *