Realtime blog statisticsweb statistics
udupibits.in
Breaking News
# ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಮಲಾದೇವಿ ಚಟ್ಟೋಪಾಧ್ಯಾಯ ಹೆಸರಿಡಲು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿವೃತ್ತ ಪತ್ರಕರ್ತ ಅಮ್ಮೆಂಬಳ ಆನಂದರಿಂದ ಸಿಎಂ ಕುಮಾರಸ್ವಾಮೀಗೆ ಮನವಿ.

ಡಾ.ಶರತ್ ಅಮಾನತು ಪ್ರಕರಣ ಮತ್ತು ಬಹುಕೋಟಿ ರಾಸಾಯನಿಕ ಹಗರಣ

# ಶ್ರೀರಾಮ ದಿವಾಣ.

* ‘ರಾಸಾಯನಿಕ ಮತ್ತು ರಕ್ತ ಶೇಖರಣಾ ಟ್ಯೂಬ್ ಗಳ ಖರೀದಿ 2012-13’ ಬಗ್ಗೆ ಆರೋಗ್ಯ ಇಲಾಖೆಯ ಜಾಗೃತಕೋಶದ ಮುಖ್ಯ ಜಾಗೃತಾಧಿಕಾರಿಯಾಗಿದ್ದ ಡಾ.ಕೆ.ಎಚ್.ನರಸಿಂಹಮೂರ್ತಿ ಅವರು 17.05.2013ರಂದು ಸಲ್ಲಿಸಿದ ತನಿಖಾ ವರದಿಯನ್ನು, ಹಗರಣದ ಆರೋಪಿಗಳನ್ನು ರಕ್ಷಿಸುವ ಸಲುವಾಗಿ ರಾಜ್ಯ ಸರಕಾರ ಮುಚ್ಚಿಟ್ಟಿದೆ.

* ರಾಸಾಯನಿಕ ಹಗರಣದ ಬಗ್ಗೆ ಡಾ.ಕೆ.ಎಚ್.ನರಸಿಂಹಮೂರ್ತಿ ಅವರು ಸಲ್ಲಿಸಿದ ತನಿಖಾ ವರದಿಯ ಆಧಾರದಲ್ಲಿ ಸರಕಾರ ಹಗರಣದ ಆರೋಪಿಗಳ ವಿರುದ್ಧ ಕೂಡಲೇ ಕಠಿಣ ಕಾನೂನು ಕ್ರಮ ಜರುಗಿಸಬೇಕು.

* ರಾಸಾಯನಿಕ ಹಗರಣ ರಾಜ್ಯದಲ್ಲಿ 2009ರಿಂದಲೇ ನಡೆದುಕೊಂಡು ಬಂದಿರುವುದರಿಂದ ಮತ್ತು ಈ ಬಹುಕೋಟಿ ಹಗರಣದಲ್ಲಿ ಸರಕಾರದ ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಹಾಲಿ ಮತ್ತು ಮಾಜಿ ಸಚಿವರುಗಳು, ಜನಪ್ರತಿನಿಧಿಗಳು, ಗುತ್ತಿಗೆದಾರರು ಶಾಮೀಲಾಗಿರುವ ಹಿನ್ನೆಲೆಯಲ್ಲಿ, ಪ್ರಕರಣವನ್ನು ತಕ್ಷಣವೇ ಸಿಬಿಐ ತನಿಖೆಗೆ ಒಪ್ಪಿಸಬೇಕು.

* ಈ ಬಹುಕೋಟಿ ಭ್ರಷ್ಟಾಚಾರ ಪ್ರಕರಣದ ಬಗ್ಗೆ ದಿನಾಂಕ 23.03.2013ರಂದು ಅಂದಿನ ಆರೋಗ್ಯ ಇಲಾಖಾ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಅವರಿಗೆ ಪತ್ರ ಬರೆದು ಗಮನ ಸೆಳೆದ ‘ತಪ್ಪಿಗೆ’, ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ಪ್ರಾಮಾಣಿಕ ವೈದ್ಯಾಧಿಕಾರಿ ಡಾ.ಶರತ್ ಕುಮಾರ್ ರಾವ್ ಜೆ. ಅವರ ವಿರುದ್ಧ, ನಕಲಿ ಜೆರಾಕ್ಸ್ ಅಗ್ರಿಮೆಂಟ್ ಒಂದನ್ನು ಮುಂದಿರಿಸಿಕೊಂಡು ಹಗರಣದ ಭಾಗಿದಾರರು ಹಾಗೂ ಸ್ಥಾಪಿತ ಹಿತಾಸಕ್ತಿಯ ಜನರು ಸಂಚು ರೂಪಿಸಿ, ಮಹಿಳೆಯೊಬ್ಬರಿಂದ ಸುಳ್ಳು ದೂರು ಕೊಡಿಸಿದ್ದಾರೆ. ಬಳಿಕ ಹಗರಣದ ಆರೋಪಿಗಳೇ ಸೇರಿಕೊಂಡು ಅಸಮರ್ಪಕ, ಪಕ್ಷಪಾತದಿಂದ ಕೂಡಿದ ತನಿಖೆ ಎಂಬ ನಾಟಕ ನಡೆಸಿ, ಅನ್ಯಾಯವಾಗಿ ಡಾ.ಶರತ್ ಕುಮಾರ್ ರಾವ್ ಅವರನ್ನು ಅಮಾನತಿಗೆ ಒಳಪಡಿಸಿದ್ದಾರೆ.

* ಅಮಾನತುಗೊಂಡು ಒಂದು ವರ್ಷವೇ ಕಳೆದರೂ, ಡಾ.ಶರತ್ ಕುಮಾರ್ ರಾವ್ ಅವರ ಅಮಾನತನ್ನು ಹಿಂತೆಗೆದುಕೊಳ್ಳದೆ, ಇಲಾಖಾ ವಿಚಾರಣೆಯನ್ನೂ ಆರಂಭಿಸದೆ, ಕರ್ನಾಟಕ ನಾಗರಿಕ ಸೇವಾ ಅಧಿನಿಯಮದ ನಿಯಮ 98ರಂತೆ ಜೀವನಾಂಶವನ್ನೂ ಸರಿಯಾಗಿ ನೀಡದೆ ಸರಕಾರ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ. ಡಾ.ಶರತ್ ಅವರ ಮಾನವ ಹಕ್ಕುಗಳನ್ನೂ ಸರಕಾರ ಕಸಿದುಕೊಂಡಿದೆ. ಆದುದರಿಂದ, ಕೂಡಲೇ ಸರಕಾರ ಡಾ.ಶರತ್ ಕುಮಾರ್ ಅವರ ಅಮಾನತು ಆದೇಶವನ್ನು
ಹಿಂತೆಗೆದುಕೊಂಡು ಕ್ಷಮೆಯಾಚಿಸಬೇಕು.

* ಡಾ.ಶರತ್ ಕುಮಾರ್ ರಾವ್ ಅವರ ಮೇಲೆ ನಡೆದ ನಕಲಿ ತನಿಖೆ ಮತ್ತು ಬಳಿಕ ಅವರ ವಿರುದ್ಧ ನಡೆಸಿದ ವಿವಿಧ ರೀತಿಯ ಹಿಂಸೆ, ಮಾನಹಾನಿ, ದೌರ್ಜನ್ಯ ಇತ್ಯಾದಿಗಳ ಬಗ್ಗೆ
ಪ್ರತ್ಯೇಕವಾಗಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು.

* ರಾಸಾಯನಿಕ ಹಗರಣದ ಬಗ್ಗೆ ನಕಲಿ ತನಿಖೆ ನಡೆಸಿದ ಮತ್ತು ನಕಲಿ ತನಿಖೆ ನಡೆಸಲು ಕಾರಣಕರ್ತರಾದ ಆರೋಗ್ಯ ಇಲಾಖಾಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.

* ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಆಸ್ಪತ್ರೆಗಳಿಗೆ ಮೂಲ ಬೆಲೆಗೆ ರಾಸಾಯನಿಕ ಮತ್ತು ಇತರ ವೈದ್ಯಕೀಯ ಪರಿಕರಗಳನ್ನು ಖರೀದಿಸಬೇಕು ಹಾಗೂ ಈ ನಿಜವಾದ ದರದ ಆಧಾರದಲ್ಲಿ ಆಸ್ಪತ್ರೆಗಳಲ್ಲಿ ಸರಕಾರ ಎಲ್ಲರಿಗೂ ಆರೋಗ್ಯ ಸೇವೆ ಒದಗಿಸಬೇಕು. ‘ಆರೋಗ್ಯ ಸೇವೆ’ ಆಗಬೇಕೇ ಹೊರತು ‘ಆರೋಗ್ಯ ಉದ್ಯಮ’ ಆಗಬಾರದು.

ಕರ್ನಾಟಕ ರಾಜ್ಯದ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಶರತ್ ಕುಮಾರ್ ರಾವ್ ಜೆ. ಇವರು ಒಬ್ಬ ದಕ್ಷ ಮತ್ತು ಪ್ರಾಮಾಣಿಕ ವೈದ್ಯಾಧಿಕಾರಿಯಾಗಿರುತ್ತಾರೆ. ಸರಕಾರಿ ಆಸ್ಪತ್ರೆ ಮತ್ತು ಬಡವರ ಮೇಲೆ ಇವರಿಗಿರುವ ಅಪಾರವಾದ ಕಳಕಳಿ ಮತ್ತು ಕಾಳಜಿಯ ಪರಿಣಾಮವಾಗಿ, ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ವಿಭಾಗಕ್ಕೆ ರಾಜ್ಯದಲ್ಲಿಯೇ ವಿಶೇಷವಾದ ಸ್ಥಾನ ಲಭಿಸಿದೆ. ದಿನಾಂಕ 07.09.2013ರಿಂದ ಇಂದಿನವರೆಗೂ ಇವರು ಅನ್ಯಾಯವಾಗಿ ಅಮಾನತಿನಲ್ಲಿದ್ದಾರೆ.

dr.sharath kumar rao j. copy

* ಡಾ.ಶರತ್ ಕುಮಾರ್ ರಾವ್

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯದಲ್ಲಿದ್ದ ಡಾ.ಶರತ್ ಕುಮಾರ್ ರಾವ್ ಅವರು, ದಿನಾಂಕ 05.03.2013ರಂದು ಅಂದಿನ ಉಡುಪಿ
ಜಿಲ್ಲಾಧಿಕಾರಿಗಳಾಗಿದ್ದ ಡಾ.ಎಂ.ಟಿ.ರೇಜು ಐಎಎಸ್ ಅವರನ್ನು ಖುದ್ದಾಗಿ ಭೇಟಿ ಮಾಡಿ, ರಾಜ್ಯದ 19 ಜಿಲ್ಲೆಗಳಲ್ಲಿ (ಉಡುಪಿ, ಉತ್ತರ ಕನ್ನಡ, ಚಿಕ್ಕ ಮಗಳೂರು, ಶಿವಮೊಗ್ಗ, ಕೊಡಗು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿತ್ರದುರ್ಗ, ಕೋಲಾರ, ಚಾಮರಾಜನಗರ, ಧಾರವಾಡ, ಹಾವೇರಿ, ಗುಲ್ಬರ್ಗ, ಕೊಪ್ಪಳ, ಬೀದರ್, ರಾಯಚೂರು, ಮಂಡ್ಯ, ಚಿಕ್ಕಬಳ್ಳಾಪುರ, ಗದಗ)ನ ಸರಕಾರಿ ಆಸ್ಪತ್ರೆಗಳಲ್ಲಿ ರಾಸಾಯನಿಕ ಮತ್ತು ರಕ್ತ ಶೇಖರಣಾ ಟ್ಯೂಬ್ ಗಳ ಖರೀದಿ ಪ್ರಕ್ರಿಯೆಯಲ್ಲಿ 2012-13ರಲ್ಲಿ ನಡೆದ ಭಾರೀ ಅವ್ಯವಹಾರದ ಬಗ್ಗೆ ಮೌಖಿಕವಾಗಿ ಮತ್ತು ಈ ಮೇಲ್ ಮೂಲಕ ವಿವರವಾದ ಮಾಹಿತಿ ನೀಡಿದ್ದಾರೆ.

ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು ಅವರು ಈ ಬೃಹತ್ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಕನಿಷ್ಟ ಸ್ಪಂದನೆಯನ್ನೂ ನೀಡದ ಕಾರಣ, ಡಾ.ಶರತ್ ಕುಮಾರ್ ರಾವ್ ಅವರು ಅನಿವಾರ್ಯವಾಗಿ ದಿನಾಂಕ 23.03.2013ರಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಮದನ್ ಗೋಪಾಲ್ ಐಎಎಸ್ ಅವರಿಗೆ (ಇವರು ಪ್ರಸ್ತುತ ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುತ್ತಾರೆ), ಅವರ ಈ ಮೇಲ್ ಐಡಿ madan17@gmail.com ಈ ಮೇಲ್ ಮೂಲಕ ನಾಲ್ಕು ಪುಟಗಳಲ್ಲಿ ವಿಷಯವನ್ನು ತಿಳಿಸುವ ಮೂಲಕ ಹಗರಣದ ಬಗ್ಗೆ ಗಮನ ಸೆಳೆದಿದ್ದಾರೆ.

madan gopal ias

* ಮದನ್ ಗೋಪಾಲ್, ಐ ಎ ಎಸ್

ಮದನ್ ಗೋಪಾಲ್ ಐಎಎಸ್ ಅವರು ಈ ವಿಷಯವನ್ನು ಇಲಾಖಾ ಆಯುಕ್ತ ಶ್ರೀ ವಿ.ಬಿ.ಪಾಟೀಲ್ (ಇವರು ಇದೀಗ ವರ್ಗಾವಣೆ ಆಗಿರುತ್ತಾರೆ) ಅವರಿಗೆ ತಿಳಿಸಿದ್ದಾರೆ. ಆಯುಕ್ತರು ದಿನಾಂಕ 25.03.2013 ರಂದು ರಾಸಾಯನಿಕ ಖರೀದಿಯಲ್ಲಿನ ಅವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಜಾಗೃತಕೋಶದ ಮುಖ್ಯ ಜಾಗೃತಾಧಿಕಾರಿ ಡಾ.ಕೆ.ಎಚ್.ನರಸಿಂಹಮೂರ್ತಿ ಅವರಿಗೆ ಆದೇಶಿಸಿದ್ದಾರೆ. ಡಾ.ನರಸಿಂಹ ಮೂರ್ತಿ ಅವರು ದಿನಾಂಕ 29.03.2013ರಂದು ಡಾ.ಶರತ್ ಕುಮಾರ್ ರಾವ್ ಅವರನ್ನು ತಮ್ಮ ಕಚೇರಿಗೆ ಕರೆಸಿಕೊಂಡು, ರಾಸಾಯನಿಕ ಖರೀದಿಯಲ್ಲಿನ ಅವ್ಯವಹಾರದ ಬಗ್ಗೆ ಖುದ್ದಾಗಿ ಮಾಹಿತಿ ಪಡೆದುಕೊಳ್ಳುವ ಮೂಲಕ ತನಿಖೆ ಆರಂಭಿಸಿದ್ದಾರೆ. ದಿನಾಂಕ 05.04.2013ರಿಂದ ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡತೊಡಗಿದ್ದಾರೆ. ‘ರಾಸಾಯನಿಕ ಮತ್ತು ರಕ್ತ ಶೇಖರಣಾ ಟ್ಯೂಬ್ ಗಳ ಖರೀದಿ 2012-13’ರ ಬಗೆಗಿನ ತನಿಖಾ ವರದಿಯನ್ನು ದಿನಾಂಕ 17.05.2013ರಂದು ತಮ್ಮ ಮೇಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.

dr.k.h.narasimhamurthy

* ಡಾ.ಕೆ.ಎಚ್.ನರಸಿಂಹಮೂರ್ತಿ

ಜಾಗೃತಕೋಶದ ಮುಖ್ಯ ಜಾಗೃತಾಧಿಕಾರಿ ಡಾ.ಕೆ.ಎಚ್.ನರಸಿಂಹಮೂರ್ತಿ ಅವರು ಸರಕಾರಕ್ಕೆ ಸಲ್ಲಿಸಿದ ತನಿಖಾ ವರದಿಯ ಪ್ರತಿಯನ್ನು ಮಾಹಿತಿ ಹಕ್ಕು ಕಾಯ್ದೆ 2005ರಂತೆ ಕೋರಿದಾಗ, ಅದನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಯವರು, ಅರ್ಜಿದಾರನಾದ ನನಗೆ (ಶ್ರೀರಾಮ ದಿವಾಣ) ಕೊಡಲು ನಿರಾಕರಿಸಿದ್ದಾರೆ. ನಿರಾಕರಣೆಗೆ ನೀಡಿದ ಕಾರಣ : ‘ತನಿಖಾ ಕ್ರಮಕ್ಕೆ ಅಥವಾ ಅಪರಾಧಿಗಳ ದಸ್ಥಗಿರಿಗೆ ಅಥವಾ ಪ್ರಾಸಿಕ್ಯೂಷನ್ ಕಾರ್ಯಕ್ಕೆ ಅಡಚಣೆಯನ್ನುಂಟು ಮಾಡುವಂಥ ಮಾಹಿತಿ’.

rti-1

ರಾಸಾಯನಿಕ ಮತ್ತು ರಕ್ತ ಶೇಖರಣಾ ಟ್ಯೂಬ್ಗಳ ಖರೀದಿಯಲ್ಲಿನ ಅವ್ಯವಹಾರದ ಬಗ್ಗೆ, ಉಡುಪಿ ಜಿಲ್ಲಾಧಿಕಾರಿಗಳಾಗಿದ್ದ ಡಾ.ಎಂ.ಟಿ.ರೇಜು ಐಎಎಸ್ ಹಾಗೂ ಆರೋಗ್ಯ ಇಲಾಖಾ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಮದನ್ ಗೋಪಾಲ್ ಐಎಎಸ್ ಇವರುಗಳಿಗೆ, ಡಾ.ಶರತ್ ಕುಮಾರ್ ರಾವ್ ಅವರು ದೂರು ನೀಡಿದ ಬಳಿಕ, ಆಯುಕ್ತರಾಗಿದ್ದ ವಿ.ಬಿ.ಪಾಟೀಲ್ ಅವರು ಜಾಗೃತಾಧಿಕಾರಿ ಡಾ.ಕೆ.ಎಚ್.ನರಸಿಂಹಮೂರ್ತಿ ಅವರಿಗೆ ತನಿಖೆಗೆ ಆದೇಶಿಸಿ, ಅವರು ತನಿಖೆ ಆರಂಭಿಸಿದ ನಂತರ, ಅಂದರೆ ದಿನಾಂಕ 12.04.2013ರಂದು ಆರೋಗ್ಯ ಇಲಾಖಾ ಪ್ರಧಾನ ಕಾರ್ಯದರ್ಶಿ ಹಾಗೂ ಮುಖ್ಯ ಜಾಗೃತಾಧಿಕಾರಿಯವರಿಗೆ ಡಾ.ಶರತ್ ಕುಮಾರ್ ರಾವ್ ಅವರ ವಿರುದ್ಧ ಉಡುಪಿಯ ಶ್ರೀಮತಿ ವೀಣಾ ಶೆಟ್ಟಿ ಎಂಬವರು ಸುಳ್ಳು ದೂರು ನೀಡುತ್ತಾರೆ.

rti-2

ಇದೇ, ಉಡುಪಿಯ ಶ್ರೀಮತಿ ವೀಣಾ ಶೆಟ್ಟಿಯವರು, ದಿನಾಂಕ 05.04.2013ರಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಡುಪಿ ಜಿಲ್ಲಾ ಶಾಖೆಯ ಸಭಾಪತಿಯವರಾದ ಬಸ್ರೂರು ರಾಜೀವ್ ಶೆಟ್ಟಿ ಅವರಿಗೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪ ಸಭಾಪತಿಯಾಗಿದ್ದ ಡಾ.ಶರತ್ ಕುಮಾರ್ ರಾವ್ ಇವರ ವಿರುದ್ಧ ಅದೇ ಸುಳ್ಳು ದೂರನ್ನು ಸಲ್ಲಿಸುತ್ತಾರೆ. ಈ ಸುಳ್ಳು ದೂರಿನ ಮೇಲೆ ಕನಿಷ್ಟ ತನಿಖೆಯನ್ನೂ ನಡೆಸದೆ, ಚುನಾವಣಾ ನೀತಿ ಸಂಹಿತೆ ಜ್ಯಾರಿಯಲ್ಲಿದ್ದ ಸಮಯದಲ್ಲಿ, ಅಂದರೆ ದಿನಾಂಕ 22.04.2013ರಂದು, ತುರ್ತಾಗಿ ಸಂಸ್ಥೆಯ ವಾರ್ಷಿಕ ಮಹಾಸಭೆಯನ್ನು ಕರೆದು, ಸಭೆಯಲ್ಲಿ ಏಕಪಕ್ಷೀಯವಾಗಿ ಸಂಸ್ಥೆಯ ಉಪ ಸಭಾಪತಿ ಸ್ಥಾನದಿಂದ ಮತ್ತು ಆಡಳಿತ ಮಂಡಳಿ ಸದಸ್ಯ ಸ್ಥಾನದಿಂದ ಡಾ.ಶರತ್ ಕುಮಾರ್ ರಾವ್ ಅವರನ್ನು ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಅವರು ಉಚ್ಛಾಟಿಸುತ್ತಾರೆ. ಮಾತ್ರವಲ್ಲ, ಡಾ.ಶರತ್ ಕುಮಾರ್ ರಾವ್ ಅವರ ಬದಲಿಗೆ, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿರುವ ಡಾ.ರಾಮಚಂದ್ರ ಬಾಯರಿ ಅವರನ್ನು ಆಡಳಿತ ಮಂಡಳಿ ಸದಸ್ಯರನ್ನಾಗಿ ನೇಮಕ ಮಾಡಲಾಗುತ್ತದೆ. ಜಿಲ್ಲಾಧಿಕಾರಿಗಳು ಈ ಸಂಸ್ಥೆಯ ಅಧ್ಯಕ್ಷರಾಗಿರುವ ಹಿನ್ನೆಲೆಯಲ್ಲಿ ತನಗೆ ನೈಸರ್ಗಿಕ ನ್ಯಾಯವನ್ನು ನಿರಾಕರಿಸಲಾದ ಬಗ್ಗೆ ಡಾ.ಶರತ್ ಕುಮಾರ್ ರಾವ್ ಅವರು ಜಿಲ್ಲಾಧಿಕಾರಿಗಳಿಗೆ ತಿಳಿಸುತ್ತಾರೆಯಾದರೂ, ಯಾವುದೇ ಪ್ರಯೋಜನ ಆಗುವುದಿಲ್ಲ.

basrur rajeev shetty

* ಬಸ್ರೂರು ರಾಜೀವ್ ಶೆಟ್ಟಿ

ಶ್ರೀಮತಿ ವೀಣಾ ಶೆಟ್ಟಿ ಅವರು, ಡಾ.ಶರತ್ ಕುಮಾರ್ ರಾವ್ ಅವರ ವಿರುದ್ಧ ಆರೋಗ್ಯ ಇಲಾಖಾ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಅವರಿಗೆ ನೀಡಿದ ಸುಳ್ಳು ದೂರಿನ ಆಧಾರದ ಮೇಲೆ ಮತ್ತು ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯ ಯೋಜನಾ ನಿರ್ದೇಶಕರಾದ ಮನೋಜ್ ಕುಮಾರ್ ತ್ರಿಪಾಠಿ ಐಎಫ್ಎಸ್ ಇವರ ಸೂಚನೆಯ ಮೇರೆಗೆ, ಪ್ರಧಾನ ಕಾರ್ಯದರ್ಶಿಗಳು ದಿನಾಂಕ 28.04.2013ರಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಚಂದ್ರ ಬಾಯರಿ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಕ ಮಾಡಿ ತನಿಖೆಗೆ ಆದೇಶ ಹೊರಡಿಸುತ್ತಾರೆ.

veena shetty copy

* ವೀಣಾ ಶೆಟ್ಟಿ

ಶ್ರೀಮತಿ ವೀಣಾ ಶೆಟ್ಟಿ ಅವರ ದೂರಿನ ಹಿನ್ನೆಲೆಯಲ್ಲಿ ಕನಿಷ್ಟ ತನಿಖೆಯನ್ನೂ ನಡೆಸದೆ ರೆಡ್ ಕ್ರಾಸ್ ಸಂಸ್ಥೆಯ ಉಪ ಸಭಾಪತಿ ಮತ್ತು ಆಡಳಿತ ಮಂಡಳಿ ಸದಸ್ಯತ್ವದಿಂದ ತನ್ನನ್ನು (ಡಾ.ಶರತ್ ಕುಮಾರ್ ರಾವ್) ಉಚ್ಛಾಟನೆ ಮಾಡಿರುವುದು ಮತ್ತು ಆಡಳಿತ ಮಂಡಳಿಯ ಸದಸ್ಯತ್ವಕ್ಕೆ ತನ್ನ ಬದಲಾಗಿ ಡಾ.ರಾಮಚಂದ್ರ ಬಾಯರಿಯವರನ್ನು ನೇಮಕ ಮಾಡಿರುವುದು ನಡೆದಿರುವ ಹಿನ್ನೆಲೆಯಲ್ಲಿ, ಇದೀಗ ಮತ್ತೆ ವೀಣಾ ಶೆಟ್ಟಿಯವರ ದೂರಿನ ಮೇಲೆ, ಡಾ.ರಾಮಚಂದ್ರ ಬಾಯರಿ ಅವರನ್ನೇ ತನಿಖಾಧಿಕಾರಿಯನ್ನಾಗಿ ನೇಮಕ ಮಾಡಿದಲ್ಲಿ, ತನಿಖೆ ನಿಷ್ಪಕ್ಷಪಾತವಾಗಿ ನಡೆಯಲು ಸಾಧ್ಯವಿಲ್ಲ ಹಾಗೂ ಈ ಕಾರಣಕ್ಕೆ ತನಿಖಾಧಿಕಾರಿಯನ್ನು ಬದಲಾವಣೆ ಮಾಡಬೇಕು ಎಂದು ಗಜೆಟೆಡ್ ಅಧಿಕಾರಿಯೂ ಆಗಿರುವ ಡಾ.ಶರತ್ ಕುಮಾರ್ ರಾವ್ ಅವರು, ದಿನಾಂಕ 02.05.2013ರಂದು ಪ್ರಧಾನ ಕಾರ್ಯದರ್ಶಿಯವರಲ್ಲಿ ಲಿಖಿತವಾಗಿ ಕೋರುತ್ತಾರೆ. ಆದರೆ, ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಅವರು ಡಾ.ಶರತ್ ಕುಮಾರ್ ರಾವ್ ಅವರ ಈ ಕೋರಿಕೆಯನ್ನು ಮಾನ್ಯ ಮಾಡದೆ ಕಡೆಗಣಿಸುತ್ತಾರೆ. ಡಾ.ರಾಮಚಂದ್ರ ಬಾಯರಿ ಅವರು ದಿನಾಂಕ 04.05.2013ರಿಂದಲೇ ತನಿಖೆ ಮುಂದುವರಿಸುತ್ತಾರೆ.

dr.bairy

* ಡಾ.ರಾಮಚಂದ್ರ ಬಾಯರಿ

ದಿನಾಂಕ 28.06.2013ರಂದು ಡಾ.ಶರತ್ ಕುಮಾರ್ ರಾವ್ ಅವರು, ತನ್ನ ಮೇಲೆ ವೀಣಾ ಶೆಟ್ಟಿಯವರು ಸಲ್ಲಿಸಿದ ದೂರಿಗೆ ಸಂಬಂಧಿಸಿದಂತೆ, ದಾಖಲಾತಿಗಳ ಸಹಿತ 100 ಕ್ಕೂ ಅಧಿಕ ಪುಟಗಳ ವಿವರವಾದ ವಿವರಣೆಯನ್ನು ದೂರಿನ ಮೇಲಿನ ತನಿಖಾಧಿಕಾರಿ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಅಧಿಕಾರಿಯವರಾದ ಡಾ.ರಾಮಚಂದ್ರ ಬಾಯರಿ ಅವರಿಗೆ ನೀಡಿರುತ್ತಾರೆ. ಆದರೆ ಡಾ.ರಾಮಚಂದ್ರ ಬಾಯರಿ ಅವರು, ಡಾ.ಶರತ್ ಕುಮಾರ್ ರಾವ್ ಅವರು ನೀಡಿದ ದಾಖಲಾತಿಗಳನ್ನು ತನಿಖಾ ಪ್ರಕ್ರಿಯೆಯಲ್ಲಿ ಪರಿಗಣಿಸದೆ, ಉಪೇಕ್ಷಿಸಿ ತನಿಖಾ ವರದಿಯೊಂದಿಗೆ ಲಗ್ತೀಕರಿಸದೆ, ಕೇವಲ 7 ಪುಟಗಳ ವಿವರಣೆಯನ್ನು ಮಾತ್ರ ತನಿಖಾ ವರದಿಯೊಂದಿಗೆ ಲಗ್ತೀಕರಿಸಿ, ಉಳಿದವುಗಳನ್ನು ಪರಿಗಣೆಗೆ ತೆಗೆದುಕೊಳ್ಳದೆ ಡಾ.ಶರತ್ ಕುಮಾರ್ ರಾವ್ ಅವರ ವಿರುದ್ಧ ವರದಿ ಸಲ್ಲಿಸುತ್ತಾರೆ. ಈ ತನಿಖಾ ವರದಿಯ ಆಧಾರದಲ್ಲಿ, ನಕಲಿ ದಾಖಲೆಗಳ ಜೆರಾಕ್ಸ್ ಪ್ರತಿಯ ಆಧಾರದಲ್ಲಿ ಗಜೆಟೆಡ್ ಅಧಿಕಾರಿಯೂ ಆಗಿರುವ ಡಾ.ಶರತ್ ಕುಮಾರ್ ರಾವ್ ಅವರನ್ನು ರಾಜ್ಯ ಸರಕಾರ ಅಮಾನತು ಮಾಡುತ್ತದೆ. (ಅಮಾನತು ಆದೇಶ ಸಂಖ್ಯೆ : ಆಕುಕ 166 ಎಂಎಸ್ಎ 2013, ದಿನಾಂಕ 07.09.2013) ನಕಲಿ ದಾಖಲೆಗಳ ಜೆರಾಕ್ಸ್ ಪ್ರತಿಯ ಆಧಾರದಲ್ಲಿ ಮಾಡಲಾಗುತ್ತಿರುವ ಅಮಾನತು ಆದೇಶಕ್ಕೆ ಆರೋಗ್ಯ ಸಚಿವರಾದ ಯು.ಟಿ.ಖಾದರ್ ಅವರು ಒಪ್ಪಿಗೆ ಸೂಚಿಸಿ ಸಹಿ ಹಾಕುತ್ತಾರೆ.

ಡಾ.ಶರತ್ ಕುಮಾರ್ ರಾವ್ ಅವರು ದಿನಾಂಕ 23.03.2013ರಂದು ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಅವರ ಈ ಮೇಲ್ ಐಡಿಗೆ ಈ ಮೇಲ್ ಮೂಲಕ ಕಳುಹಿಸಿದ ದೂರಿನ ಆಧಾರದಲ್ಲಿ, ಪ್ರಧಾನ ಕಾರ್ಯದರ್ಶಿಯವರ ಸೂಚನೆ ಮತ್ತು ಆಯುಕ್ತರಾದ ವಿ.ಬಿ.ಪಾಟೀಲ್ (ಪ್ರಸ್ತುತ ಇವರು ಆರೋಗ್ಯ ಇಲಾಖೆಯಿಂದ ವರ್ಗಾವಣೆಗೊಂಡಿದ್ದಾರೆ) ಅವರ ದಿನಾಂಕ 25.03.2013ರ ಆದೇಶದಂತೆ ಜಾಗೃತಕೋಶದ ಮುಖ್ಯ ಜಾಗೃತಾಧಿಕಾರಿ ಡಾ.ಕೆ.ಎಚ್.ನರಸಿಂಹಮೂರ್ತಿ ಅವರು ತಕ್ಷಣದಿಂದಲೇ ರಾಸಾಯನಿಕ ಹಗರಣದ ತನಿಖೆಯನ್ನು ಆರಂಭಿಸಿರುತ್ತಾರೆ.

ಜಾಗೃತಕೋಶದ ಮುಖ್ಯ ಜಾಗೃತಾಧಿಕಾರಿ ಡಾ.ಕೆ.ಎಚ್.ನರಸಿಂಹಮೂರ್ತಿ ಅವರು ಅಧಿಕೃತವಾಗಿ ರಾಸಾಯನಿಕ ಹಗರಣದ ತನಿಖೆ ಆರಂಭಿಸಿದ ಬಳಿಕ, ಡಾ.ಶರತ್ ಕುಮಾರ್ ರಾವ್ ಅವರು ಮದನ್ ಗೋಪಾಲ್ ಅವರ ಈ ಮೇಲ್ ಐಡಿ madan17@gmail.com ಕಳುಹಿಸಿದ ದೂರಿನ ಪ್ರಿಂಟ್ ಔಟ್ ನ ಪ್ರತಿಯನ್ನು (ನಾಲ್ಕು ಪುಟಗಳ ದೂರಿನ ಪ್ರತಿಯಲ್ಲಿ ಎರಡು ಪುಟಗಳನ್ನು ಮಾತ್ರ ) ಅನಧಿಕೃತವಾಗಿ, ಅಡ್ಡದಾರಿಯಲ್ಲಿ ಇಲಾಖಾ ನಿರ್ದೇಶಕರಾದ ಡಾ.ಧನ್ಯ ಕುಮಾರ್ (ಇವರು ಪ್ರಸ್ತುತ ನಿವೃತ್ತರು) ಅವರು ಪಡೆದುಕೊಳ್ಳುತ್ತಾರೆ. ಈ ಪತ್ರದ ಪ್ರತಿಯ ಮೇಲೆ ನಿರ್ದೇಶಕರಾದ ಡಾ.ಧನ್ಯ ಕುಮಾರ್ ಅವರು ದಿನಾಂಕ 05.04.2013ರಂದು ಬರೆದ ಟಿಪ್ಪಣಿಯ ಆಧಾರದ ಮೇಲೆ ವೈದ್ಯಕೀಯ ಉಪ ನಿರ್ದೇಶಕರಾದ ಡಾ.ಕೆ.ಬಿ.ಈಶ್ವರಪ್ಪ ಅವರು ಪ್ರತ್ಯೇಕವಾಗಿ ರಾಸಾಯನಿಕ ಅವ್ಯವಹಾರದ ತನಿಖೆಯನ್ನು ಕೈಗೆತ್ತಿಕೊಳ್ಳುತ್ತಾರೆ.

ಉಡುಪಿ ಜಿಲ್ಲಾಸ್ಪತ್ರೆಗೆ ಮಾತ್ರ ಭೇಟಿ ನೀಡಿ ಅಸಮರ್ಪಕ ಮತ್ತು ನಾಟಕೀಯ ರೀತಿಯಲ್ಲಿ, ಪಕ್ಷಪಾತ ಮತ್ತು ಪೂರ್ವಾಗ್ರಹದಿಂದ ಕೂಡಿದ ಏಕಪಕ್ಷೀಯ ತನಿಖೆ ನಡೆಸಿ ಬಹುಕೋಟಿ ಮೊತ್ತದ ಭ್ರಷ್ಟಚಾರ ಹಗರಣವನ್ನೇ ನಡೆದೇ ಇಲ್ಲ ಎನ್ನುವಂತೆ ಮುಚ್ಚಿ ಹಾಕುತ್ತಾರೆ. ಈ ತನಿಖಾ ವರದಿಯನ್ನು ಪ್ರಧಾನ ಕಾರ್ಯದರ್ಶಿಗಳು ಮಾನ್ಯ ಮಾಡುತ್ತಾರೆ. ರಾಸಾಯನಿಕ ಹಗರಣದ ಬಗ್ಗೆ ಮುಂದೆ ಯಾವುದೇ ರೀತಿಯ ಕ್ರಮ ಕೈ ತೆಗೆದುಕೊಳ್ಳುವ ಅಗತ್ಯ ಇರುವುದಿಲ್ಲ ಎಂದು ಆಯುಕ್ತರಿಗೆ ಸೂಚಿಸುತ್ತಾರೆ. ಈ ಮೂಲಕ ಸರಕಾರದ ಖಜಾನೆಗೆ ಕೋಟ್ಯಂತರ ರುಪಾಯಿಗಳ ನಷ್ಟವನ್ನು ಉಂಟುಮಾಡಿದ ಭ್ರಷ್ಟರನ್ನು ರಕ್ಷಿಸುತ್ತಾರೆ. ಭ್ರಷ್ಟರನ್ನು ರಕ್ಷಿಸುವುದು ಸಹ ಭ್ರಷ್ಟಚಾರವೇ ಆಗುತ್ತದೆ. ಅಪರಾಧಿಗಳನ್ನು ರಕ್ಷಣೆ ಮಾಡಲು ಅಪರಾಧಿಗಳೇ ಪೂರ್ವನಿಯೋಜಿತವಾಗಿ ಸಂಚು ರೂಪಿಸಿ ನಾಟಕೀಯ ತನಿಖೆ ನಡೆಸಿದಂತಾಗಿದೆ ಈ ತನಿಖೆ.

dr,dhanya kumar

* ಡಾ.ಧನ್ಯ ಕುಮಾರ್

ನಾನು, ಮಾಹಿತಿ ಹಕ್ಕು ಕಾಯಿದೆ 2005ರ ಪ್ರಕಾರ ಪಡೆದುಕೊಂಡ ಮಾಹಿತಿಯ ಪ್ರಕಾರ, ಪ್ರಧಾನ ಕಾರ್ಯದರ್ಶಿಗಳ ಕಚೇರಿಯು ಡಾ.ಶರತ್ ಕುಮಾರ್ ರಾವ್ ಅವರ ದೂರಿನ ಪ್ರತಿಯನ್ನು ಇಲಾಖಾ ನಿರ್ದೇಶಕರಿಗಾಗಲೀ, ವೈದ್ಯಕೀಯ ಉಪ ನಿರ್ದೇಶಕರಿಗಾಗಲೀ ನೀಡಿಲ್ಲ ಎಂಬುದು ಸ್ಪಷ್ಟ. ಡಾ.ಶರತ್ ಕುಮಾರ್ ರಾವ್ ಅವರು ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಹೊರತುಪಡಿಸಿ, ರಾಜ್ಯ ಮಟ್ಟದ ಇತರ ಯಾವ ಅಧಿಕಾರಿಗಳಿಗೂ ಈ ಬಗ್ಗೆ ಪತ್ರ ಬರೆದಿಲ್ಲ ಎಂಬುದು ದಾಖಲೆಗಳ ಆಧಾರದಲ್ಲಿ ಸ್ಪಷ್ಟವಾಗುತ್ತದೆ. ಆದುದರಿಂದ, ಡಾ.ಶರತ್ ಕುಮಾರ್ ರಾವ್ ಅವರು ಪ್ರಧಾನ ಕಾರ್ಯದರ್ಶಿಯವರ ಈ ಮೇಲ್ ಐಡಿಗೆ ಕಳುಹಿಸಿದ ದೂರಿನ ಪ್ರತಿಯನ್ನು ನಿರ್ದೇಶಕರಾದ ಡಾ.ಧನ್ಯ ಕುಮಾರ್ ಅವರು ಮದನ್ ಗೋಪಾಲ್ ಅವರ ಈ ಮೇಲ್ ಐಡಿಯಿಂದ ಕಳವು ಮಾಡಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಪತ್ರದ ಪ್ರತಿಯನ್ನು ಕಳವು ಮಾಡಿದ ಕಾರಣದಿಂದಲೇ, ಡಾ.ಕೆ.ಬಿ.ಈಶ್ವರಪ್ಪನವರು ನಕಲಿ ತನಿಖಾ ವರದಿಯನ್ನು ನಿರ್ದೇಶಕರಿಗೆ ಸಲ್ಲಿಸುವ ತಮ್ಮ ಪತ್ರದ (ಪತ್ರದ ದಿನಾಂಕ: 05.06.2013) ಉಲ್ಲೇಖ 1ರಲ್ಲಿ ‘ದಿನಾಂಕ ಇಲ್ಲ’ ಎಂದು ಬರೆಯುತ್ತಾರೆ. (‘ಡಾ.ಶರತ್ ಕುಮಾರ್.ಜೆ ಅವರ ದೂರಿನ ಅರ್ಜಿ (ದಿನಾಂಕ ಇಲ್ಲ)’.

ಪ್ರಧಾನ ಕಾರ್ಯದರ್ಶಿಗಳ ಸೂಚನೆ ಮತ್ತು ಆಯುಕ್ತರ ಆದೇಶದಂತೆ, ರಾಸಾಯನಿಕ ಹಗರಣದ ತನಿಖೆ ಕೈಗೆತ್ತಿಕೊಂಡಿದ್ದ ಡಾ.ಕೆ.ಎಚ್.ನರಸಿಂಹಮೂರ್ತಿ ಅವರು, ದಿನಾಂಕ 16.05.2013ರಂದು ಉಡುಪಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ರಕ್ತ ಶೇಕರಣಾ ಟ್ಯೂಬ್ ಗಳ ಬಗ್ಗೆ ಜಿಲ್ಲಾ ಸರ್ಜನ್ ಡಾ.ಆನಂದ ನಾಯ್ಕ್ ಅವರನ್ನು ಕೂಲಂಕಷ ವಿಚಾರಣೆ ನಡೆಸಿದ್ದಾರೆ. ಇದಾದ ನಾಲ್ಕೇ ದಿನಗಳಲ್ಲಿ ಶ್ರೀಮತಿ ವೀಣಾ ಶೆಟ್ಟಿ ಅವರು ಡಾ.ಶರತ್ ಕುಮಾರ್ ರಾವ್ ಅವರು ಜೀವ ಬೆದರಿಕೆ ಹಾಕಿದ್ದಾರೆ ಎಂದು ದಿನಾಂಕ 20.05.2013ರಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡುತ್ತಾರೆ. ಈ ಬಗ್ಗೆ ತನಿಖೆ ನಡೆಸಿದ ಜಿಲ್ಲಾ ಪೊಲೀಸ್ ಉಪ ಅಧೀಕ್ಷಕರು ವೀಣಾ ಶೆಟ್ಟಿಯವರ ದೂರು ಅರ್ಜಿಯಲ್ಲಿ ನಮೂದಿಸಿದ ವಿಷಯಗಳು ಸುಳ್ಳು ಎಂದು ಹಿಂಬರಹ ನೀಡಿರುತ್ತಾರೆ.

ಶ್ರೀಮತಿ ವೀಣಾ ಶೆಟ್ಟಿ ಅವರು ಡಾ.ಶರತ್ ಕುಮಾರ್ ರಾವ್ ವಿರುದ್ಧ ಜಾಗೃತಕೋಶಕ್ಕೆ ನೀಡಿದ ದೂರಿನ ಮೇಲೆ, ಮುಖ್ಯ ಜಾಗೃತಾಧಿಕಾರಿ ಡಾ.ಕೆ.ಎಚ್.ನರಸಿಂಹಮೂರ್ತಿ ಅವರು, ದಿನಾಂಕ 20.06.2013, ದಿನಾಂಕ 23.07.2013, ದಿನಾಂಕ 07.08.2013 ಮತ್ತು ದಿನಾಂಕ 03.09.2013ರಂದು ಶ್ರೀಮತಿ ವೀಣಾ ಶೆಟ್ಟಿ ಅವರಿಗೆ ತನಿಖೆಗೆ ಹಾಜರಾಗಲು ಕರೆದು ನೋಟೀಸ್ ಮಾಡಿದ್ದಾರೆ. ಆದರೆ ಈ ನಿಗದಿತ ನಾಲ್ಕೂ ದಿನಾಂಕಗಳಂದೂ, ಶ್ರೀಮತಿ ವೀಣಾ ಶೆಟ್ಟಿ ಅವರು ತನಿಖಾಧಿಕಾರಿ ಮುಂದೆ ಹಾಜರಾಗದೆ ಉದ್ಧೇಶಪೂರ್ವಕ ತಪ್ಪಿಸಿಕೊಂಡಿರುತ್ತಾರೆ. ಕೊನೆಯ ಎರಡು ನೋಟೀಸಿನಲ್ಲಿ ‘ಹಾಜರಾಗಿ ಸಾಕ್ಷಿ ನುಡಿಯಲು ಅಂತಿಮವಾಗಿ ಸೂಚಿಸಿದೆ. ತಪ್ಪಿದ್ದಲ್ಲಿ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂಬುದಾಗಿಯೂ ತನಿಖಾಧಿಕಾರಿಯವರು ದೂರುದಾರರಾದ ಶ್ರೀಮತಿ ವೀಣಾ ಶೆಟ್ಟಿಯವರಿಗೆ ಸ್ಪಷ್ಟವಾಗಿ ತಿಳಿಸಿರುತ್ತಾರೆ. ಆದರೂ ಶ್ರೀಮತಿ ವೀಣಾ ಶೆಟ್ಟಿ ಅವರು ತನಿಖಾ ಸಮಯ ಹಾಜರಾಗದೆ ತಪ್ಪಿಸಿಕೊಂಡಿರುವುದು ಉದ್ಧೇಶಪೂರ್ವಕವೇ ಆಗಿದೆ.

ಡಾ.ಶರತ್ ಕುಮಾರ್ ರಾವ್ ಅವರ ವಿರುದ್ಧ ಶ್ರೀಮತಿ ವೀಣಾ ಶೆಟ್ಟಿ ಅವರು ನೀಡಿದ ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಡಾ.ಕೆ.ಎಚ್.ನರಸಿಂಹಮೂರ್ತಿ ಅವರು ತಮ್ಮ ಮೇಲಾಧಿಕಾರಿಗಳಿಗೆ ಅಂತಿಮ ತನಿಖಾ ವರದಿ ಸಲ್ಲಿಸುವ ಕೆಲವೇ ದಿನಗಳ ಮುಂಚಿತವಾಗಿ ಡಾ.ಕೆ.ಎಚ್.ನರಸಿಂಹಮೂರ್ತಿ ಅವರನ್ನು ಸರಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸುತ್ತದೆ. ಡಾ.ಶರತ್ ಕುಮಾರ್ ರಾವ್ ಅವರನ್ನು ಶಿಕ್ಷಿಸುವ ಮತ್ತು ಶ್ರೀಮತಿ ವೀಣಾ ಶೆಟ್ಟಿ ಹಾಗೂ ಬಹುಕೋಟಿ ರಾಸಾಯನಿಕ ಹಗರಣದಲ್ಲಿ ಶಾಮೀಲಾಗಿರುವ ಅಧಿಕಾರಿಗಳನ್ನು ರಕ್ಷಿಸುವ ದುರುದ್ಧೇಶದಿಂದ ಕರ್ನಾಟಕ ಸರಕಾರವು ಡಾ.ನರಸಿಂಹಮೂರ್ತಿ ಅವರನ್ನು ವರ್ಗಾವಣೆ ಮಾಡಿದೆ.

ಈ ಬಗ್ಗೆ ಮಾಹಿತಿ ಹಕ್ಕು ಅಧಿನಿಯಮದಂತೆ, ಡಾ.ನರಸಿಂಹಮೂರ್ತಿಯವರ ವರ್ಗಾವಣೆ ಆದೇಶದ ಪ್ರತಿ, ವರ್ಗಾವಣೆಗೆ ಸಂಬಂಧಟಪಟ್ಟಂತೆ ನಡೆದ ಲಿಖಿತ ಪತ್ರ ವ್ಯವಹಾರಗಳ/ ಟಿಪ್ಪಣಿ ಇತ್ಯಾದಿಗಳ ಬಗ್ಗೆ ಮಾಹಿತಿ ಮತ್ತು ಯಥಾ ಪ್ರತಿಗಳನ್ನು ಕೋರಿದಾಗ, ವರ್ಗಾವಣೆ ಆದೇಶದ ಪ್ರತಿಯನ್ನು ಮಾತ್ರ ನೀಡಿ, ಉಳಿದಂತೆ ಯಾವುದೇ ಮಾಹಿತಿ/ಯಥಾ ಪ್ರತಿಗಳನ್ನೂ ನೀಡದೆ ಸತ್ಯವನ್ನು ಮುಚ್ಚಿಡಲಾಯಿತು. ಮೇಲ್ಮನವಿ ಹಾಕಿದ ಬಳಿಕ ನಡೆದ ಮೇಲ್ಮನವಿಯ ವಿಚಾರಣೆಯ ಸಮಯದಲ್ಲಿಯೂ, ನನ್ನ ಲಿಖಿತ ಪತ್ರವನ್ನು ಗಣನೆಗೇ ತೆಗೆದುಕೊಳ್ಳದೆ ಮೇಲ್ಮನವಿಯನ್ನು ವಜಾಗೊಳಿಸಲಾಯಿತು.

ಡಾ.ಶರತ್ ಕುಮಾರ್ ರಾವ್ ಅವರ ವಿರುದ್ಧ, ಶ್ರೀಮತಿ ವೀಣಾ ಶೆಟ್ಟಿ ಅವರು ನೀಡಿದ ಸುಳ್ಳು ದೂರಿನ ಮೇಲೆ, ಮುಖ್ಯ ಜಾಗೃತಾಧಿಕಾರಿಯವರ ತನಿಖೆ ಪೂರ್ಣಗೊಂಡು ಆ ಬಗ್ಗೆ ವರದಿ ಸಲ್ಲಿಸುವ ಹಂತದಲ್ಲಿಯೇ, ಡಾ.ರಾಮಚಂದ್ರ ಬಾಯರಿ ಅವರ ವಿಚಾರಣಾ ವರದಿ ಮತ್ತು ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿಯ ಯೋಜನಾ ನಿರ್ದೇಶಕರಾದ ಮನೋಜ್ ಕುಮಾರ್ ತ್ರಿಪಾಠಿ ಐಎಫ್ಎಸ್ (ಇವರು ಈಗ ವರ್ಗಾವಣೆಗೊಂಡಿದ್ದಾರೆ) ಅವರ ಅಭಿಪ್ರಾಯ/ವರದಿಯ ಆಧಾರದಲ್ಲಿ, ದಿನಾಂಕ 07.09.2013ರಂದು ಸರಕಾರ ಡಾ.ಶರತ್ ಕುಮಾರ್ ರಾವ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸುತ್ತದೆ. ಈ ಅಮಾನತು ಆದೇಶದ ಪ್ರತಿಯು, ಅಮಾನತು ಆದೇಶ ಹೊರಡಿಸಿದ ದಿನದಂದೇ ಸೋರಿಕೆಯಾಗಿ ಶ್ರೀಮತಿ ವೀಣಾ ಶೆಟ್ಟಿ ಅವರಿಗೆ ಲಭಿಸುತ್ತದೆ. ಅವರು ಇದನ್ನು ಮಾಧ್ಯಮಗಳಿಗೆ ವಿತರಿಸುತ್ತಾರೆ. ಆ ಮೂಲಕ ಡಾ.ಶರತ್ ಕುಮಾರ್ ರಾವ್ ಅವರ ಮಾನಹಾನಿ ಮಾಡುವ ಯತ್ನವೂ ಅತ್ಯಂತ ವ್ಯವಸ್ಥಿತವಾಗಿ ನಡೆದು ಬಿಡುತ್ತದೆ.

ಅಮಾನತು ಆದೇಶವನ್ನು ಶ್ರೀಮತಿ ವೀಣಾ ಶೆಟ್ಟಿ ಅವರು ಮಾಧ್ಯಮಗಳಿಗೆ ವಿತರಿಸುವಾಗ, ಅದರ ಜೊತೆಗೆ ಒಂದು ಅಗ್ರಿಮೆಂಟ್ನ್ನು ವಿತರಿಸಿದ್ದು, ಇದರ ಆಧಾರದಲ್ಲಿಯೇ ಅಮಾನತು ಆಗಿರುವುದಾಗಿ ತಿಳಿಸುತ್ತಾರೆ. ಆದರೆ ಈ ಅಗ್ರಿಮೆಂಟ್ ನಕಲಿಯಾಗಿದ್ದು, ಕೇವಲ ಜೆರಾಕ್ಸ್ ಪ್ರತಿಯಾಗಿದೆ. ಮಾತ್ರವಲ್ಲ, ಇದನ್ನು ಶ್ರೀಮತಿ ವೀಣಾ ಶೆಟ್ಟಿ ಅವರು ಇಲಾಖಾಧಿಕಾರಿಗಳಿಗೆ ದೂರು ನೀಡುವಾಗ ನೀಡದೆ, ಡಾ.ರಾಮಚಂದ್ರ ಬಾಯರಿಯವರು ತನಿಖಾ ವರದಿ ಸಲ್ಲಿಸುವ ಅಂತಿಮ ಹಂತದಲ್ಲಿ ಹೊಸದಾಗಿ ಸೇರ್ಪಡೆಗಳಿಸಿದ್ದಾಗಿರುತ್ತದೆ ಎಂಬುದು, ಈ ಇಡೀ ಪ್ರಕರಣದಲ್ಲಿ ಡಾ.ಶರತ್ ಕುಮಾರ್ ರಾವ್ ವಿರುದ್ಧ ವ್ಯವಸ್ಥಿತವಾದ ಒಂದು ಷಡ್ಯಂತ್ರ ನಡೆದಿದೆ ಎನ್ನುವುದನ್ನು ತೋರಿಸಿಕೊಡುತ್ತದೆ.

ಶ್ರೀಮತಿ ವೀಣಾ ಶೆಟ್ಟಿ ಅವರು ತನಿಖಾಧಿಕಾರಿ ಡಾ.ರಾಮಚಂದ್ರ ಬಾಯರಿ ಅವರಿಗೆ ಯಾವ ದಾಖಲೆಯನ್ನು ನೀಡಿದ್ದರೋ, ಆ ದಾಖಲೆಯ ಆಧಾರದಲ್ಲಿ ಸರಕಾರ ಡಾ.ಶರತ್ ಕುಮಾರ್ ರಾವ್ ಅವರನ್ನು ಅಮಾನತು ಮಾಡಿತ್ತು. ಆ ದಾಖಲೆ ನಕಲಿಯಾಗಿತ್ತು ಮತ್ತು ಕೇವಲ ಒಂದು ಜೆರಾಕ್ಸ್ ಪ್ರತಿಯಷ್ಟೇ ಆಗಿತ್ತು. ಇದರ ವಿರುದ್ಧ ಡಾ.ಶರತ್ ಕುಮಾರ್ ರಾವ್ ಅವರು ಉಡುಪಿಯ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ಶ್ರೀಮತಿ ವೀಣಾ ಶೆಟ್ಟಿ, ಬಸ್ರೂರು ರಾಜೀವ್ ಶೆಟ್ಟಿ ಹಾಗೂ ಡಾ.ರಾಮಚಂದ್ರ ಬಾಯರಿ ವಿರುದ್ಧ ಖಾಸಗಿ ಪಿರ್ಯಾದಿ ಸಲ್ಲಿಸುತ್ತಾರೆ. ಘನ ನ್ಯಾಯಾಲಯದ ಆದೇಶದಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮ ಸಂಖ್ಯೆ 0409/2013ರ ಪ್ರಕಾರ ಕಲಂ 120 ಬಿ, 327, 330, 355, 468, 500 ಮತ್ತು 501 ಕಲಂಗಳ ಪ್ರಕಾರ ಮೊಕದ್ದಮೆ ದಾಖಲಾಗುತ್ತದೆ. ತನಿಖೆ ಆರಂಭಗೊಳ್ಳುತ್ತದೆ.

ಶ್ರೀಮತಿ ವೀಣಾ ಶೆಟ್ಟಿ ಅವರು ನೀಡಿದ ಯಾವ ಜೆರಾಕ್ಸ್ ದಾಖಲೆಯ ಆಧಾರದಲ್ಲಿ ಡಾ.ಶರತ್ ಕುಮಾರ್ ರಾವ್ ಅವರನ್ನು ಅಮಾನತು ಮಾಡಲಾಗಿತ್ತೋ, ಆ ದಾಖಲೆ, ಡಾ.ಶರತ್ ಕುಮಾರ್ ರಾವ್ ಅವರು ದಾಖಲಿಸಿದ ಖಾಸಗಿ ಪಿರ್ಯಾದಿಯ ಮೇಲಿನ ಪೊಲೀಸ್ ತನಿಖೆಗೆ ಅತೀ ಅಗತ್ಯವಾಗಿದೆ. ಪೋರ್ಜರಿ ದಾಖಲೆ ಎಂದು ಡಾ.ಶರತ್ ಕುಮಾರ್ ಅವರು ಹೇಳುತ್ತಿರುವ ದಾಖಲೆಯ ಮೂಲ ಪ್ರತಿಯನ್ನು ಹಾರುಪಡಿಸುವಂತೆ ಉಡುಪಿ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಬ್ ಇನ್ಸ್ ಪೆಕ್ಟರ್ ಮತ್ತು ಪ್ರಕರಣದ ತನಿಖಾಧಿಕಾರಿ ರಾಜಗೋಪಾಲ್ ಅವರು ಶ್ರೀಮತಿ ವೀಣಾ ಶೆಟ್ಟಿ ಅವರಿಗೆ ನೋಟೀಸ್ ಮಾಡಿ ವಿಚಾರಣೆಗೆ ಕರೆಯುತ್ತಾರೆ. ವಿಚಾರಣೆಯ ಸಮಯದಲ್ಲಿ, ‘ದಾಖಲೆಯ ಮೂಲ ಪ್ರತಿ ತನ್ನಲ್ಲಿ ಇಲ್ಲ. ಅದು, ವಕೀಲರಾದ ಶಶಿಕಾಂತ ಶೆಟ್ಟಿ ಅವರಲ್ಲಿ ಇದೆ’ ಎಂದು ಹೇಳಿಕೆ ನೀಡುತ್ತಾರೆ.

ಬಳಿಕ ತನಿಖಾಧಿಕಾರಿಗಳು, ದಾಖಲೆಯ ಮೂಲ ಪ್ರತಿಯನ್ನು ಹಾಜರುಪಡಿಸುವಂತೆ ಸೂಚಿಸಿ ವಕೀಲರಾದ ಶಶಿಕಾಂತ ಶೆಟ್ಟಿ ಅವರಿಗೆ ನೋಟೀಸ್ ಮಾಡುತ್ತಾರೆ. ವಕೀಲ ಶಶಿಕಾಂತ ಶೆಟ್ಟಿ ಅವರು, ಶ್ರೀಮತಿ ವೀಣಾ ಶೆಟ್ಟಿ ತನ್ನಲ್ಲಿ ಅಂಥ ಯಾವುದೇ ದಾಖಲೆಯನ್ನೂ ನೀಡಿಲ್ಲ, ಹಾಗಾಗಿ ತನ್ನಲ್ಲಿ ಅಂಥ ದಾಖಲೆ ಇಲ್ಲ’ ಎಂದು ಉತ್ತರ ನೀಡುತ್ತಾರೆ. ನಂತರ ತನಿಖಾಧಿಕಾರಿಗಳು, ಮೂಲ ದಾಖಲೆಯನ್ನು ಪತ್ತೆ ಮಾಡುವ ಸಲುವಾಗಿ, ಘನ ನ್ಯಾಯಾಲಯದ ಮೂಲಕ, ಶ್ರೀಮತಿ ವೀಣಾ ಶೆಟ್ಟಿ ಹಾಗೂ ಇವರ ಸಹೋದರ ಎಂ.ಬಾಲಗಂಗಾಧರ ಶೆಟ್ಟಿ ಎಂಬವರ ಮನೆಗಳಲ್ಲಿ ತಪಾಸಣೆ ಮಾಡುವ ನಿಟ್ಟಿನಲ್ಲಿ ಸರ್ಚ್ ವಾರೆಂಟ್ ಕೋರುತ್ತಾರೆ. ಸರ್ಚ್ ವಾರೆಂಟ್ ಪಡೆದು ತಪಾಸಣೆ ನಡೆಸುತ್ತಾರೆ. ಆದರೂ ಆ ದಾಖಲೆಗಳ ಮೂಲ ಪ್ರತಿ ಪತ್ತೆಯಾಗುವುದಿಲ್ಲ. ಇದೀಗ ಪೊಲೀಸ್ ತನಿಖಾಧಿಕಾರಿಗಳು, ನಕಲಿ ದಾಖಲೆಯ ಮೂಲ ಪ್ರತಿ ಲಭ್ಯವಾಗದ ಕಾರಣ ನೀಡಿ, ಪ್ರಕರಣಕ್ಕೆ ‘ಬಿ’ ವರದಿ ಸಲ್ಲಿಸುವ ಮೂಲಕ, ಡಾ.ಶರತ್ ಕುಮಾರ್ ರಾವ್ ಅವರಿಗೆ ನ್ಯಾಯ ನಿರಾಕರಿಸಲಾಗಿದೆ.

ಈ ಮಧ್ಯೆ, ಬಹುಕೋಟಿ ರಾಸಾಯನಿಕ ಹಗರಣದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಯ ಆಧಾರದಲ್ಲಿ ಕರ್ನಾಟಕ ಲೋಕಾಯುಕ್ತದ ಉಡುಪಿ ಜಿಲ್ಲಾ ಪೊಲೀಸ್ ವಿಭಾಗದ ಅಧಿಕಾರಿಗಳು, ಉಡುಪಿ ಜಿಲ್ಲಾಸ್ಪತ್ರೆಗೆ ಸೀಮಿತವಾಗಿ ಸುಮೊಟೋ ಆಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸುತ್ತಾರೆ. (ಪ್ರಕರಣ ಸಂಖ್ಯೆ 02/2014, ಕಲಂ 7, 8, 13 (1) (ಸಿ) ಭ್ರಷ್ಟಚಾರ ನಿಯಂತ್ರಣ ಕಾಯಿದೆ 1988). ಈ ನಡುವೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಆನಂದ ನಾಯ್ಕ್, ಮೋಹನದಾಸ ಕಿಣಿ ಹಾಗೂ ಕುಮಾರಸ್ವಾಮಿ ಇವರನ್ನು ಅಮಾನತು ಮಾಡುವಂತೆ ಆರೋಗ್ಯ ಇಲಾಖಾ ಪ್ರಧಾನ ಕಾರ್ಯದರ್ಶಿಯವರಿಗೆ ಪತ್ರ ಬರೆಯುತ್ತಾರೆ. ಆರೋಪಿಗಳನ್ನು ರಕ್ಷಿಸುವ ಸಲುವಾಗಿಯೇ ಪ್ರಧಾನ ಕಾರ್ಯದರ್ಶಿಗಳು ಜಿಲ್ಲಾ ಸರ್ಜನ್ ಡಾ.ಆನಂದ ನಾಯಕ್ ಅವರನ್ನು ಇದುವರೆಗೂ ಅಮಾನತು ಮಾಡಿರುವುದಿಲ್ಲ. ಇತರ ಇಬ್ಬರು ಆರೋಪಿಗಳಾದ ಮೋಹನದಾಸ ಕಿಣಿ (ಕಚೇರಿ ಅಧೀಕ್ಷಕ) ಹಾಗೂ ಕುಮಾರ ಸ್ವಾಮಿ (ಸಹಾಯಕ ಆಡಳಿತಾಧಿಕಾರಿ) ಇವರಿಗೆ ಅನುಕೂಲ ಮಾಡಿಕೊಡುವ ಉದ್ಧೇಶದಿಂದಲೇ ಈ ಇಬ್ಬರನ್ನು ಅಮಾನತು ಮಾಡುವಂತೆ ಇಲಾಖೆಯ ಪ್ರಭಾರ ಆಯುಕ್ತರಿಗೆ ಸೂಚಿಸುತ್ತಾರೆ. ಪ್ರಭಾರ ಆಯುಕ್ತರು ಮೋಹನದಾಸ ಕಿಣಿ ಹಾಗೂ ಕುಮಾರ ಸ್ವಾಮಿ ಇವರನ್ನು ಅಮಾನತು ಮಾಡುತ್ತಾರೆ. ಸರಕಾರ ಅಮಾನತು ಮಾಡಿದರೂ, ಇವರಿಬ್ಬರೂ ಜಿಲ್ಲಾಸ್ಪತ್ರೆಯಲ್ಲಿ ಕರ್ತವ್ಯದಲ್ಲಿ ಮುಂದುವರಿದಿದ್ದರು. ಬಳಿಕ, ಪೂರ್ವ ನಿಯೋಜಿತ ಹುನ್ನಾರದಂತೆ, ಪ್ರಭಾರ ಆಯುಕ್ತರಿಗೆ ಅಮಾನತು ಮಾಡುವ ಅಧಿಕಾರ ಇಲ್ಲ ಎಂಬ ನಿಯಮದ ಆಧಾರದ ಮೇಲೆ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಗೆ ಹೋಗಿ ಅಮಾನತು ಆದೇಶಕ್ಕೆ ತಾತ್ಕಾಲಿಕ ತಡೆಯಾಜ್ಞೆ ತರಲು ಯಶಸ್ವಿಯಾಗಿದ್ದಾರೆ.

ಈ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸ್ ತನಿಖೆಗೆ ಪೂರಕವಾಗಿ ಹೇಳಿಕೆ ನೀಡಿದ ಮಹಿಳಾ ಸರಕಾರಿ ಉದ್ಯೋಗಸ್ಥೆಯೊಬ್ಬರಿಗೆ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಆನಂದ ನಾಯ್ಕ್, ಕಚೇರಿ ಅಧೀಕ್ಷಕರಾದ ಶ್ರೀ ಮೋಹನದಾಸ್ ಕಿಣಿ ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಮೋದ್ ಮಧ್ವರಾಜ್ ಅವರು ನಿರಂತರವಾಗಿ ಕಿರುಕುಳ ನೀಡುತ್ತಿರುವ ಘಟನೆಗಳೂ ನಡೆಯುತ್ತಿವೆ. ಕಿರುಕುಳ ನೀಡಿದ ಬಗ್ಗೆ ಸಂತ್ರಸ್ತೆ ಉಡುಪಿ ಜಿಲ್ಲಾಧಿಕಾರಿಗಳಾಗಿದ್ದ ಡಾ.ಎಂ.ಟಿ.ರೇಜು ಐಎಎಸ್ ಅವರಿಗೆ ಎರಡು ಬಾರಿ ಮತ್ತು ಡಾ.ಮುದ್ದುಮೋಹನ್ ಐಎಎಸ್ ಅವರಿಗೆ ಒಂದು ಬಾರಿ, ಹೀಗೆ ಒಟ್ಟು ಮೂರು ಬಾರಿ ಪ್ರತ್ಯೇಕವಾಗಿ ಲಿಖಿತವಾಗಿಯೇ ದೂರು ನೀಡಿದರೂ, ಜಿಲ್ಲಾಧಿಕಾರಿಗಳು ಮಹಿಳಾ ಸರಕಾರಿ ನೌಕರಳೊಬ್ಬರ ದೂರಿನ ಮೇಲೆ ಇದುವರೆಗೂ ಕನಿಷ್ಟ ತನಿಖೆಯನ್ನೂ ನಡೆಸಲು ಕ್ರಮ ಜರುಗಿಸಲು ಮುಂದಾಗದಿರುವುದು ವಿಪರ್ಯಾಸವೇ ಸರಿ. ಇದೊಂದು ಮಹಿಳಾ ದೌರ್ಜನ್ಯದ ಪ್ರಕರಣವಾಗಿದ್ದು, ಸಂತ್ರಸ್ತೆಯ ದೂರಿನ ಮೇಲೆ ಕ್ರಮ ತೆಗೆದುಕೊಳ್ಳದಿರುವುದು ಮಹಿಳಾ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ.

ಈ ನಡುವೆ, ಅಮಾನತು ಆದೇಶದ ವಿರುದ್ಧ ಡಾ.ಶರತ್ ಕುಮಾರ್ ರಾವ್ ಅವರು ದಿನಾಂಕ 16.09.2013ರಂದು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ)ಯ ಮೊರೆ ಹೋಗಿದ್ದಾರೆ. ಪ್ರಕರಣ ದಾಖಲಾಗಿ ಈಗಾಗಲೇ ಒಂದು ವರ್ಷವೇ ಕಳೆದಿದೆಯಾದರೂ, ಇಲ್ಲೂ ಸಹ ಇದುವರೆಗೂ ಇವರ ಪ್ರಕರಣ ವಿಚಾರಣೆಗೆ ಬಂದಿಲ್ಲ ಎಂದು ತಿಳಿಸಲು ವಿಷಾಧವಾಗುತ್ತದೆ.

ಡಾ.ಶರತ್ ಕುಮಾರ್ ರಾವ್ ಅವರನ್ನು ವೈದ್ಯಾಧಿಕಾರಿ ಸೇವೆಯಿಂದ ಅಮಾನತುಗೊಳಿಸಿ, ದಿನಾಂಕ 07.10.2014ಕ್ಕೆ ಒಂದು ವರ್ಷ ಒಂದು ತಿಂಗಳು ಪೂರ್ಣಗೊಂಡಿದೆ. ಆದರೆ, ಇನ್ನೂ ಸಹ ಸರಕಾರ ಅಮಾನತು ಹಿಂತೆಗೆದುಕೊಂಡಿಲ್ಲ. ಇಲಾಖಾ ವಿಚಾರಣೆಯನ್ನೂ ಆರಂಭಿಸಿಲ್ಲ. ಬಹಳ ಬೇಸರದ ವಿಷಯವೆಂದರೆ, ಅಮಾನತು ಅವಧಿಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಗಳ ನಿಯಮ 98ರಂತೆ, ನೀಡಬೇಕಾದ ಜೀವನಾಂಶವನ್ನೂ ಸರಕಾರ ಡಾ.ಶರತ್ ಕುಮಾರ್ ರಾವ್ ಅವರಿಗೆ ಸರಿಯಾಗಿ ನೀಡದೆ ಅಮಾನವೀಯತೆಯನ್ನು ಪ್ರದರ್ಶಿಸುತ್ತಿದೆ.

ಈ ಎಲ್ಲಾ ವಿಷಯಗಳ ಬಗ್ಗೆ ನಾವು ಈಗಾಗಲೇ ಹಲವು ಬಾರಿ ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳು, ಆರೋಗ್ಯ ಸಚಿವ ಯು.ಟಿ.ಖಾದರ್, ಸರಕಾರದ ಪ್ರಧಾನ ಕಾರ್ಯದರ್ಶಿಗಳು, ಆರೋಗ್ಯ ಇಲಾಖಾ ಪ್ರಧಾನ ಕಾರ್ಯದರ್ಶಿಗಳು, ಹಾಗೂ ಇತರ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ, ಇದುವರೆಗೂ ಯಾರೊಬ್ಬರೂ ಸ್ಪಂದಿಸಿಲ್ಲ.

u.t.khader-1

* ಯು.ಟಿ.ಖಾದರ್, ಆರೋಗ್ಯ ಸಚಿವರು

ಮೇಲಿನ ಈ ಎಲ್ಲಾ ವಿಚಾರಗಳನ್ನು ಗಮನಿಸಿದಾಗ, ಕರ್ನಾಟಕ ಸರಕಾರವು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿ 2009ರಿಂದ ನಡೆಯುತ್ತಿರುವ, ಬಹುಕೋಟಿ ಭ್ರಷ್ಟಾಚಾರ ಪ್ರಕರಣವಾದ ರಾಸಾಯನಿಕ ಖರೀದಿ ಮತ್ತು ರಕ್ತ ಶೇಖರಣಾ ಟ್ಯೂಬ್ ಗಳ ಖರೀದಿ ಹಗರಣವನ್ನು ಮುಚ್ಚಿ ಹಾಕಲು ಯತ್ನಿಸಿರುವುದು ಕಂಡುಬರುತ್ತದೆ. ಬಹುಕೋಟಿ ಭ್ರಷ್ಟಾಚಾರದ ಬಗ್ಗೆ ಇಲಾಖಾಧಿಕಾರಿಗೆ (ಸರಕಾರಕ್ಕೆ) ಪತ್ರ ಬರೆದ ಡಾ.ಶರತ್ ಕುಮಾರ್ ರಾವ್ ಅವರನ್ನು ಶಿಕ್ಷಿಸಲು ಸುಳ್ಳು ದೂರು ಮತ್ತು ನಕಲಿ ದಾಖಲೆ ಸೃಷ್ಟಿಸಿರುವುದು, ನಿರಂತರವಾಗಿ ಮತ್ತು ವಿವಿಧ ರೀತಿಯಲ್ಲಿ ಮಾನಸಿಕ ಹಿಂಸೆ ನೀಡುತ್ತಿರುವುದು, ಹಗರಣದ ಆರೋಪಕ್ಕೆ ಪೂರಕವಾಗಿ ಲೋಕಾಯುಕ್ತಕ್ಕೆ ಹೇಳಿಕೆ ನೀಡಿದ ಮಹಿಳಾ ಸರಕಾರಿ ಉದ್ಯೋಗಸ್ಥೆಗೆ ಕಿರುಕುಳ ನೀಡುವುದು ಮುಂದುವರಿದಿದೆ.

ಗಮನಿಸಿ : ಇನ್ನಷ್ಟೂ ಮಾಹಿತಿಗಳಿವೆ. ಮುಂದಕ್ಕೆ ಬಹಿರಂಗಪಡಿಸಲಾಗುವುದು.

Leave a Reply

Your email address will not be published. Required fields are marked *