ಬೆಂಗಳೂರು : 77.31 ಒತ್ತುವರಿ ತೆರವು !
- Updated: October 26, 2014
ಬೆಂಗಳೂರು: ಬೆಂಗಳೂರು ನಗರ ಜಿಲ್ಲಾಡಳಿತ ವಿವಿಧ ಕಡೆಗಳಲ್ಲಿ ಅ.25ರಂದು ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ 77.31 ಎಕರೆ ಒತ್ತುವರಿ ತೆರವು ಮಾಡಿದ್ದು, ವಶಪಡಿಸಿಕೊಂಡಿರುವ ಭೂಮಿಯ ಮಾರುಕಟ್ಟೆ ಮೌಲ್ಯ 350 ಕೋಟಿ ರು. ಎಂದು
ಅಂದಾಜಿಸಲಾಗಿದೆ.
ಬೆಂಗಳೂರು ಉತ್ತರ (ಹೆಚ್ಚುವರಿ) ತಾಲ್ಲೂಕಿನ ಯಲಹಂಕ ಹೋಬಳಿಯ ಬೆಳ್ಳಹಳ್ಳಿ ಗ್ರಾಮದ ಸರ್ಕಾರಿ ಬಂಡೆ. ಈ ಜಾಗದ ವಿಸ್ತೀರ್ಣ 32 ಎಕರೆ. ಇಲ್ಲಿ ಮುತ್ತುರಾಜ್ ಮತ್ತಿತರರು ಕಳೆದ 20 ವರ್ಷಗಳಿಂದ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರು. ಇತ್ತೀಚೆಗೆ ಈ ಗಣಿಗಳ ಪರವಾನಗಿಯನ್ನು ಜಿಲ್ಲಾಡಳಿತ ರದ್ದುಪಡಿಸಿತ್ತು. ಸ್ಥಳೀಯ ನಿವಾಸಿಗಳು ಕೂಡಾ ಈ ಗಣಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇಲ್ಲಿ 16 ಕಲ್ಲು ಗಣಿಗಳಿವೆ.
ಪರವಾನಗಿ ರದ್ದುಪಡಿಸಿದ ಬಳಿಕವೂ ಗಣಿಗಾರಿಕೆ ಅವ್ಯವಾಹತವಾಗಿ ಸಾಗಿತ್ತು. ಅಲ್ಲದೆ ಇಲ್ಲಿ 16 ಗುಡಿಸಲು ಸೇರಿದಂತೆ ಸುಮಾರು 50 ಮನೆಗಳನ್ನು ನಿರ್ಮಿಸಲಾಗಿತ್ತು. ಜಿಲ್ಲಾಡಳಿತ ನೋಟಿಸ್ ನೀಡಿದ್ದರೂ ಗಣಿಗಾರಿಕೆ ನಿಂತಿರಲಿಲ್ಲ. ಈ ಕಾರಣದಿಂದ ಜಿಲ್ಲಾಧಿಕಾರಿ ವಿ.ಶಂಕರ್ ನೇತೃತ್ವದಲ್ಲಿ ಅ.25ರಂದು ಕಾರ್ಯಾಚರಣೆ ನಡೆಸಿ ಈ ಗುಡಿಸಲುಗಳನ್ನು ನೆಲಸಮ ಮಾಡಲಾಯಿತು. ಇಲ್ಲಿದ್ದ ದೇವಸ್ಥಾನವನ್ನು ಹಾಗೆಯೇ ಬಿಡಲಾಗಿದೆ. ವಶಪಡಿಸಿಕೊಂಡ ಜಾಗದ ಮೌಲ್ಯ 100 ಕೋಟಿ ರು.
‘ಜಮೀನನ್ನು ಕಸ ವಿಲೇವಾರಿಗಾಗಿ ಬಿಬಿಎಂಪಿಯ ಯಲಹಂಕ ವಲಯದ ಅಧಿಕಾರಿಗಳು ಕೋರಿದ್ದು, ರಾಜ್ಯ ಸರ್ಕಾರದ ಅನುಮತಿ ಪಡೆದು ಜಮೀನನ್ನು ಹಸ್ತಾಂತರ ಮಾಡಲಾಗುವುದು’ ಎಂದು ತಹಶೀಲ್ದಾರ್ ಬಾಳಪ್ಪ ಹಂದಿಹುಂದ್ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಹೆಸರಘಟ್ಟ ಹೋಬಳಿಯ ಕೊಂಡಶೆಟ್ಟಿಹಳ್ಳಿ ಗ್ರಾಮದಲ್ಲಿನ 10 ಎಕರೆ 3 ಗುಂಟೆ ಜಮೀನಿನ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಇದು ಸರ್ಕಾರಿ ಗೋಮಾಳ ಜಮೀನು. ಹಿಂದೆ ಈ ಜಾಗವನ್ನು ಉಮ್ರಾ ಡೆವಲಪರ್ಸ್ ಸಂಸ್ಥೆಗೆ ಹರಾಜು ಮೂಲಕ ನೀಡಲಾಗಿತ್ತು. ಈಗ ಇಲ್ಲಿನ ಕೃಷಿ ಒತ್ತುವರಿಯನ್ನು ತೆರವು ಮಾಡಿ ಬಿಡ್ದಾರರಿಗೆ ಹಸ್ತಾಂತರಿಸಲಾಗಿದೆ.
ಇದೇ ಹೋಬಳಿಯ ಮಧುಗಿರಿಹಳ್ಳಿ ಗ್ರಾಮದಲ್ಲಿ 3 ಎಕರೆ 17 ಗುಂಟೆ ಖರಾಬು ಜಮೀನು ಕೆರೆ ಮುಳುಗಡೆ ಪ್ರದೇಶ. ಇದನ್ನು ಒತ್ತುವರಿದಾರರಿಂದ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಅದ್ದೆ ವಿಶ್ವನಾಥಪುರ ಗ್ರಾಮದಲ್ಲಿ 2 ಎಕರೆ 13 ಗುಂಟೆ ಜಮೀನು ಸರ್ಕಾರಿ ಗುಂಡು ತೋಪು ಆಗಿದ್ದು, ಇದರ ಒತ್ತುವರಿಯನ್ನೂ ತೆರವುಗೊಳಿಸಲಾಗಿದೆ
ಮಾದಪ್ಪನಹಳ್ಳಿ ಗ್ರಾಮದಲ್ಲಿ 4 ಎಕರೆ 23 ಗುಂಟೆ ಜಾಗದ ಒತ್ತುವರಿ ತೆರವು ಮಾಡಲಾಗಿದೆ. ಮಾವಳ್ಳಿಪುರ ಗ್ರಾಮದಲ್ಲಿ 19 ಗುಂಟೆ ಸರಕಾರಿ ಗುಂಡು ತೋಪು ಜಾಗದ ಒತ್ತುವರಿ ತೆರವು ಮಾಡಲಾಗಿದೆ. ಈ ಮೂಲಕ ಉತ್ತರ (ಹೆಚ್ಚುವರಿ) ತಾಲ್ಲೂಕಿನಲ್ಲಿ 52 ಎಕರೆ 35 ಗುಂಟೆ ಜಾಗದ ಒತ್ತುವರಿ ತೆರವುಗೊಳಿಸಲಾಗಿದೆ. ಇದರ ಮಾರುಕಟ್ಟೆ ಮೌಲ್ಯ 120 ಕೋಟಿ ರು. ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ಅಗರ ಗ್ರಾಮದಲ್ಲಿ 10 ಎಕರೆ ಗೋಮಾಳ ಜಾಗವನ್ನು ಕೋಣನಕುಂಟೆ ಎಜುಕೇಷನ್ ಟ್ರಸ್ಟ್ನವರಿಗೆ ಈ ಹಿಂದೆ ಲೀಸ್ಗೆ ನೀಡಲಾಗಿತ್ತು. ಕಳೆದ ವರ್ಷ ಲೀಸ್ ರದ್ದು ಮಾಡಲಾಗಿತ್ತು. ಈ ಜಾಗದಲ್ಲಿ ಶೆಡ್ ನಿರ್ಮಿಸಲಾಗಿತ್ತು. ಇದನ್ನು ಈಗ ತೆರವು ಮಾಡಲಾಗಿದೆ. ಬೇಗೂರು ಹೋಬಳಿಯ ಕಮ್ಮನಹಳ್ಳಿ ಗ್ರಾಮದಲ್ಲಿ ಕೆರೆಯ 1- ಎಕರೆ 25 ಗಂಟೆ ಜಾಗವನ್ನು ನಾಲ್ವರು ಒತ್ತುವರಿ ಮಾಡಿಕೊಂಡು ಕೃಷಿ ಚಟುವಟಿಕೆ ನಡೆಸುತ್ತಿದ್ದರು. ಈ ಜಾಗಗಳ ಒತ್ತುವರಿ ತೆರವು ಮಾಡಿ 38 ಕೋಟಿ ರು. ಮೌಲ್ಯದ ಜಾಗವನ್ನು ಜಿಲ್ಲಾಡಳಿತದ ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು ಉತ್ತರ ತಾಲ್ಲೂಕು ದಾಸನಪುರ ಹೋಬಳಿ ವಡೇರಹಳ್ಳಿ ಗ್ರಾಮದಲ್ಲಿ 1-ಎಕರೆ 17 ಗುಂಟೆ ವಿಸ್ತೀರ್ಣದ ಗೋಮಾಳದ ಒತ್ತುವರಿ ತೆರವುಗೊಳಿಸಿ 2 ಕೋಟಿ ರು. ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ.
ಸೊಣ್ಣೇನಹಳ್ಳಿ ಗ್ರಾಮದಲ್ಲಿ 10 ಗುಂಟೆ ಜಮೀನು ಒತ್ತುವರಿ ಮಾಡಿಕೊಂಡು ಕೃಷಿ ಮಾಡಲಾಗುತ್ತಿತ್ತು. ಈ ಒತ್ತುವರಿಯನ್ನು ತಹಶೀಲ್ದಾರ್ ಡಾ.ಬಿ.ಆರ್.ಹರೀಶ್ ನಾಯ್ಕ್ ನೇತೃತ್ವದಲ್ಲಿ ತೆರವು ಮಾಡಿ 10 ಕೋಟಿ ರು. ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆಯಲಾಗಿದೆ.
ತೆರವುಗೊಳಿಸಿದ ಜಾಗವೇ ಮತ್ತೆ ಒತ್ತುವರಿ!
ಆನೇಕಲ್ ತಾಲ್ಲೂಕಿನ ಸರ್ಜಾಪುರ ಹೋಬಳಿಯ ಕೊಮ್ಮಸಂದ್ರ ಗ್ರಾಮದಲ್ಲಿ 1 ಎಕರೆ 5 ಗುಂಟೆ ಮತ್ತು 9 ಎಕರೆ 35 ಗುಂಟೆ ಗುಂಡುತೋಪು ಜಮೀನಿನ ಒತ್ತುವರಿ ತೆರವು ಮಾಡಲಾಯಿತು. ಈ ಜಾಗದಲ್ಲಿ ಕೇರಳ ಮೂಲದ ರಾಜೇಂದ್ರ ಎಂಬವರು ಒತ್ತುವರಿ ಮಾಡಿಕೊಂಡು 116 ಸೈಟ್ಗಳನ್ನು ನಿರ್ಮಿಸಿದ್ದರು. ಪಕ್ಕದ ಸರ್ವೆ ಸಂಖ್ಯೆಯ ಹೆಸರಿನಲ್ಲಿ ಈ ಸೈಟ್ಗಳನ್ನು ಮಾರಾಟ ಮಾಡುತ್ತಿದ್ದರು. ಕೆಲವು ಸೈಟ್ಗಳನ್ನು ಈಗಾಗಲೇ ಮಾರಾಟ ಆಗಿವೆ. ಪ್ರತಿ ಚದರ ಅಡಿಗೆ 1600 ರು.ಗಳಿಂದ 1800 ರು.ಗಳವರೆಗೆ ದರ ನಿಗದಿ ಮಾಡಿದ್ದರು. ಒತ್ತುವರಿ ತೆರವು ಮಾಡುವಂತೆ ತಹಶೀಲ್ದಾರ್ ನೋಟಿಸ್ ನೀಡಿದ್ದರು. ಆದರೆ, ಒತ್ತುವರಿ ತೆರವು ಮಾಡಿರಲಿಲ್ಲ. ಈಗ ವಶಪಡಿಸಿಕೊಂಡಿರುವ ಜಾಗದ ಮಾರುಕಟ್ಟೆ ಮೌಲ್ಯ 25 ಕೋಟಿ ರು.
‘ಕೆಲವು ವರ್ಷಗಳ ಹಿಂದೆಯೂ ಇಲ್ಲಿನ ಒತ್ತುವರಿ ತೆರವು ಮಾಡಲಾಗಿತ್ತು. ಅಧಿಕಾರಿಗಳು ಬದಲಾದ ಬಳಿಕ ರಾಜೇಂದ್ರ ಅವರು ಮತ್ತೆ ಒತ್ತುವರಿ ಮಾಡಿಕೊಂಡು ತಡೆಗೋಡೆ
ನಿರ್ಮಿಸಿದ್ದರು. ಹೀಗಾಗಿ ಕೆಲವು ಸಮಯ ಒತ್ತುವರಿ ಬಹಿರಂಗ ಆಗಿರಲಿಲ್ಲ. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು’ ಎಂದು ತಹಶೀಲ್ದಾರ್ ಅನಿಲ್ ಕುಮಾರ್ ತಿಳಿಸಿದ್ದಾರೆ.
450 ಎಕರೆ ತೆರವು
ಕಳೆದ ನಾಲ್ಕು ತಿಂಗಳಲ್ಲಿ ನಗರ ಜಿಲ್ಲಾಡಳಿತ 450 ಎಕರೆ ಒತ್ತುವರಿ ತೆರವು ಮಾಡಿದೆ. ‘ಜುಲೈನಲ್ಲಿ 25 ಎಕರೆ, ಆಗಸ್ಟ್ನಲ್ಲಿ 34 ಎಕರೆ, ಸೆಪ್ಟೆಂಬರ್ನಲ್ಲಿ 109 ಎಕರೆ ಒತ್ತುವರಿ ತೆರವು ಮಾಡಲಾಗಿದೆ. ಅಕ್ಟೋಬರ್ ತಿಂಗಳಿನಲ್ಲೇ 260 ಎಕರೆ ಒತ್ತುವರಿ ತೆರವು ಮಾಡಲಾಗಿದೆ. ಮುಂದಿನ ವಾರ ಒತ್ತುವರಿ ತೆರವು ಕಾರ್ಯಾಚರಣೆಯನ್ನು ವ್ಯಾಪಕ ಪ್ರಮಾಣದಲ್ಲಿ ನಡೆಸಲಾಗುವುದು’ ಎಂದು ಜಿಲ್ಲಾಧಿಕಾರಿ ವಿ.ಶಂಕರ್
ಸ್ಪಷ್ಟಪಡಿಸಿದ್ದಾರೆ.