Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕಲಾ ತಪಸ್ವಿ ಸದಾಶಿವ ಅನಂತಪುರ

* ಪುರುಷೋತ್ತಮ ಭಟ್.

# ಶ್ರಮ ಮತ್ತು ಸಾಧನೆಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಬದಲಾಯಿಸುವುದಲ್ಲದೆ, ಒಟ್ಟು ಪರಿಸರದ ಬದಲಾವಣೆಗೂ ಕಾರಣವಾಗುತ್ತದೆ. ಜೊತೆಗೆ ತಾವು ಮಾಡಿದ ಶ್ರಮದ ಪರಿಣಾಮ ಜೀವನದ ಅಭೂತಪೂರ್ವ ಸಾರ್ಥಕ್ಯದ ಸನ್ಮನಸಿನೊ0ದಿಗೆ ಆರೋಗ್ಯ ಪೂರ್ಣ ಮಾನಸಿಕ ತೃಪ್ತಿ ಕೊನೆಯ ತನಕವೂ ಮಂದಹಾಸ ಬೀರುತ್ತಿರುತ್ತದೆ.

ಸಂಗೀತ, ನೃತ್ಯ, ಸಾಹಿತ್ಯ ಮೊದಲಾದ ಕಲೆಗಳ ಶ್ರಮಿಕ ಕಲಾ ತಪಸ್ವಿಗೆ ಬದುಕಿನಲ್ಲಿ ಕೊನೆಗೆ ಸಿಗುವುದು ತೃಪ್ತಿಯಷ್ಟೇ ಹೊರತು ಅದಕ್ಕಿಂತ ಮಿಕ್ಕಿದುದು ಬೇರೊಂದಿಲ್ಲ. ಕಲೆ, ಸಾಹಿತ್ಯಗಳನ್ನು ಸಿದ್ದಸಿದ ಮಹಾ ಸಿದ್ದಿ ಪುರುಷರು ರಾಷ್ಟ್ರದ ಉದ್ದಗಲಗಳಲ್ಲೂ ತಲೆ-ತಲಾಂತರದಿಂದ ಪಡೆದುಕೊಂಡು ಬಂದಿರುವುದು ಈ ಒಂದು ಅಂತಃ ತೃಪ್ತಿಯನ್ನೇ ಹೊರತು ಬೇರೇನನ್ನೂ ಅಲ್ಲ. ಅದಕ್ಕೇ ಕವಿಯೊಬ್ಬನ ಭಾವ ಕುರುಡು ಕಾಜಾಣದ ಹುಟ್ಟಿಗೆ ಮುನ್ನುಡಿ.

ಕರಾವಳಿ ಕರ್ನಾಟಕದ ಕಲೆ, ಸಾಂಸ್ಕೃತಿಕ ಭೂಪಟದಲ್ಲಿ ಪ್ರಾಚೀನ ಕಾಲದಿಂದಲೂ ಕಾಸರಗೋಡಿನದು ವಿಶಿಷ್ಟ ಕೊಡುಗೆ. ಒಂದೆಡೆ ಭೋರ್ಗರೆಯುವ ಅರಬ್ಬೀ ಕಡಲಿನ ಮೊರೆತಕ್ಕೋ, ಮತ್ತೊಂದೆಡೆ ತಲೆಯೆತ್ತಿ ಮುಗಿಲೆತ್ತರಕ್ಕೆ ಚಾಚಿರುವ ಬೆಟ್ಟ-ಗುಡ್ಡಗಳ ತಂಗಾಳಿಯು ಅಪ್ಪುವ ಮಿಳಿತಕ್ಕೋ ಪ್ರತಿಯೊಂದು ಕ್ಷೇತ್ರದಲ್ಲೂ ಅಧಮ್ಯ ಸಾಧನಾಶೀಲ ಸಂತರು ಕೀರ್ತಿಯ ಉತ್ತುಂಗಕ್ಕೆ ಬೆಳೆದು ನಿಂತವರು.

ಕುಂಬಳೆ ಸಮೀಪದ ಒಂದು ಕಾಲ ಘಟ್ಟದ ಕನ್ನಡ ಮಂಟಪವೆಂಬ ಖ್ಯಾತಿಯ ಎಡನಾಡು ಗ್ರಾಮದ ಸೂರಂಬೈಲು, ಅದರ ಸುತ್ತಮುತ್ತಲಿನ ಹಲವು ಚಿಕ್ಕ ಹಳ್ಳಿಗಳು ಕೋವಿದರ ಕಲಾ ಗ್ರಾಮ. ಇಂತಹ ಹಳೆಯ ತಲೆಮಾರಿನ ಸಾಧನಾಶೀಲ ವ್ಯಕ್ತಿಗಳಲ್ಲಿ ಇಂದು ನಮ್ಮೆದುರು ಬೆರಗುಗೊಳಿಸುವ ಕಲಾ ತಪಸ್ವಿ ಸದಾಶಿವ ಅನಂತಪುರ.

sadashiva ananthapura

ಸದಾಶಿವ ಅನಂತಪುರ ಅವರ ಬೆರಳುಗಳು ಸರಸ್ವತಿಯ ವರಪ್ರಸಾದದಿಂದ ಧ್ವನಿ ತರಂಗಗಳನ್ನು ಸೃಷ್ಟಿಸಿ ನಾದ ಪ್ರಪಂಚವನ್ನು ಸೃಷ್ಟಿಸಿದವರು. ಮೃದಂಗ, ತಬಲಾ ಹಾಗೂ ಮೋರ್ಸಿಂಗ್ ನಲ್ಲಿ ಒಂದು ಕಾಲದಲ್ಲಿ ಕಾಸರಗೋಡು ಜಿಲ್ಲೆಯಾದ್ಯಂತ ಹಲವು ದಿಗ್ಗಜರಿಗೆ ಸಾಥ್ ನೀಡಿದವರು. ಇಂದವರಿಗೆ 74 ರ ಮುಸ್ಸಂಜೆಯಲ್ಲೂ ಶೇಣಿ, ಸಾಮಗರಿಗೆ ಕಥಾ ಕೀರ್ತನದಲ್ಲಿ ಬಹುಕಾಲ ತಾಂ..ತಾಂ…ದಿದ್ದಿದ್ದೋಂ ನಲ್ಲಿ ಬೆರೆತ ಅವಿಸ್ಮರಣೀಯತೆಯ ಮೆಲುಕು ಪುಳಕಗೊಳಿಸುತ್ತಿದೆ. ಅನಂತಪುರದ ಶಂಕರ ನಾರಾಯಣಯ್ಯ-ಪಾರ್ವತಿ ದಂಪತಿಗಳ ಐದು ಮಕ್ಕಳಲ್ಲಿ ನಾಲ್ಕನೆಯವರಾದ ಸದಾಶಿವರಿಗೆ (ಎರಡನೇ ಹಿರಿಯ ಅಣ್ಣ ಕವಿ ಸುಬ್ರಾಯ ಅನಂತಪುರ, ಹಿರಿಯ ಅಣ್ಣ ಕೃಷ್ಣ ರಾವ್, ಮತ್ತೊಬ್ಬರು ಸಂಜೀವ ರಾವ್, ಸಹೋದರಿ ರಾಜೀವಿ).

ಪಕ್ಕವಾದ್ಯಗಳ ಸಿದ್ದಿ ತೋರಿ ಬಂದದ್ದು ಒಂದು ವಿಶಿಷ್ಟ ಸನ್ನಿವೇಶದಲ್ಲಿ. ಆಗೆಲ್ಲ ಯಕ್ಷಗಾನದ ಮೇಳಗಳು ಒಂದೊಂದು ಗ್ರಾಮಗಳಲ್ಲಿ ವಾಸ್ತವ್ಯ ಹೂಡಿ ಪ್ರದರ್ಶನ ನೀಡುತ್ತಿದ್ದ ಕಾಲ. ನಾಯ್ಕಾಪು, ಸೀತಾಂಗೋಳಿ, ಎಡನಾಡು ಪ್ರದೇಶಗಳಿಗೆ ಪ್ರದರ್ಶನ ನೀಡಲು ಬಂದಾಗ ತಮ್ಮ ಹಿಮ್ಮೇಳ ಪರಿಕರಗಳನ್ನು ಸಂರಕ್ಷಿಸಿಡುತ್ತಿದ್ದುದು ಸದಾಶಿವರ ಮನೆಯಲ್ಲಿ. ತಡೆಯಲಾರದ ಸೆಳೆತದಿಂದ ಹಿಂದಿನ ದಿನ ಕಂಡ ಯಕ್ಷಗಾನದಲ್ಲಿ ಮೃದಂಗದವರು ಬಾರಿಸಿದ ಧಾಟಿಯನ್ನೇ ಅನುಕರಿಸಲು ಹೊರಟ ಬಾಲಕ ಸದಾಶಿವನ ಬೆರಳುಗಳು ಮುಂದಿನ ಯಾವ ಸೂಚನೆಯನ್ನು ಗುರುತಿಸಿದವೋ…..ಧ್ವನಿಗಳು ಇಂಪುಗೊಂಡವು.

ಇದನ್ನು ಗಮನಿಸಿದ ಸದಾಶಿವರ ತಂದೆ ಹಾಗೂ ಅಣ್ಣಂದಿರು ತಮ್ಮನ ಒಳಗಿದ್ದ ಕಲಾ ತಪಸ್ವಿಯನ್ನು ಹೊರಗೆಳೆಯಲು ಆಕಾಲದ ದಿಗ್ಗಜ ಮಾದೇವ ಸರಳಾಯರ ಶಿಷ್ಯತ್ವಕ್ಕೆ ಕಳುಹಿಸಿದರು. ಆಗಿನ್ನೂ ಸದಾಶಿವ 14-15ರ ತರುಣ. ಸರಳಾಯರಿಂದ ಒಂದೊಂದೇ ಮಟ್ಟುಗಳನ್ನು,ಪೆಟ್ಟುಗಳನ್ನು ಬೆರಳ ಮೂಲಕ ಆತ್ಮದೊಳಗೆ ಸಮ್ಮೋಹಿಸಿ ಹಿಂತಿರುಗಿ ನೋಡಲೇ ಇಲ್ಲ.

ಆಕಾಲದ ಸಂಗೀತ ದಿಗ್ಗಜರಾದ ಚೆಂಬೈ, ಜಯ-ವಿಜಯ ಜೋಡಿ, ಬಾಲಮುರಳಿ, ಕಮಲಾ ಕೈಲಾಸನಾಥ್, ಎನ್.ರಮಣಿ ಮೊದಲಾದವರ ಕಚೇರಿಗಳಿಗೆ ಎಡತಾಕಿ ಆಸ್ವಾದನೆಯ ಜೊತೆಗೆ ತನ್ನ ತಪಸ್ಸಿನ ಮಾರ್ಗವನ್ನು ನಿಚ್ಚಳಗೊಳಿಸಿದರು. ಮುಂದೆ ಕಾಸರಗೋಡಿನ ಸಾವಿರಾರು ಕಚೇರಿಗಳಿಗೆ ಸದಾಶಿವಣ್ಣನಿಲ್ಲದೆ ಇಲ್ಲ ಎಂಬಂತಾದುದು ಅಚ್ಚರಿ.

ಮಿತ ಭಾಷಿಯೂ, ಸರಳ ಸಜ್ಜನ ಸದಾಶಿವರು ಹಿನ್ನೆಲೆ ಪಕ್ಕ ವಾದ್ಯಗಳಲ್ಲಿ ಇಟ್ಟ ಹೆಜ್ಜೆಗಳು ದೈತ್ಯವಾಗಿದ್ದರೂ, ಬದುಕಿನ ಸೀಮಿತ ವ್ಯಾಪ್ತಿ ಹಾಗೂ ಕುಟುಂಬ ಪೋಷಣೆಯ ಅನಿವಾರ್ಯತೆಯಲ್ಲಿ ಕಡಲಿನಿಂದಾಚೆಗೆ, ಬೆಟ್ಟದ ತುದಿಯೇರಿಯೂ ಅದರ ಮತ್ತೊಂದು ಪಾಶ್ರ್ವಕ್ಕೆ ಮುಖ ಮಾಡಲೇ ಇಲ್ಲ. ಕಾಸರಗೋಡಿನ ವಿದ್ವಾನ್ ಬಾಬು ರೈ ಸದಾಶಿವರ ಸಾಂಗತ್ಯ ಇಂದಿಗೂ ಅಚ್ಚರಿಯೆಂದೇ ಹೇಳುತ್ತಾರೆ.

ಸದಾಶಿವರ ಕಲಾ ಸಾಮಥ್ರ್ಯವನ್ನು ಗುರುತಿಸಿ ಅದೆಷ್ಟೋ ಸಂಘ-ಸಂಸ್ಥೆಗಳು, ಆಸಕ್ತ ಕಲಾ ಪ್ರೇಮಿಗಳು ಹಲವು ಬಾರಿ ಮಾನ-ಸನ್ಮಾನಕ್ಕೆ ಪ್ರಯತ್ನಿಸಿದ್ದರು. ಆದರೆ ತಾನಿನ್ನೂ ಸಾಧಕನಲ್ಲವೆಂದು ಸರಳವಾಗಿ ನಿರಾಕರಿಸಿ,ಯಾವುದೇ ಸನ್ಮಾನಗಳನ್ನು ಪಡೆಯಲು ಸಮ್ಮತಿಸದ ಸದಾಶಿವರ ಹೃದಯ ಶ್ರೀಮಂತಿಕೆ, ತಾನಿನ್ನೂ ಸಣ್ಣವನೆಂಬ ಭಾವ ನಮ್ಮನ್ನು ನಿಬ್ಬೆರಗಾಗಿಸುವುದರ ಜೊತೆಗೆ ಯುವ ಜನಾಂಗಕ್ಕೆ ಪಾಠವಾಗಿ ಕಾಣಿಸುತ್ತದೆ.

ಪತ್ನಿ ಜಯಂತಿ, ಮಕ್ಕಳಾದ ಸುಜಾತಾ, ಜ್ಯೋತಿ ಹಾಗೂ ಓರ್ವ ಪುತ್ರ ಸತ್ಯಶಂಕರರೊಡನೆ ಸಂತೃಪ್ತ ಜೀವನ ಸಾಗಿಸುತ್ತಿರುವ ಸದಾಶಿವ ಅನಂತಪುರ, ಈ ಇಳಿ ವಯಸ್ಸಿನಲ್ಲೂ ಕರೆದಲ್ಲಿಗೆ ಇಲ್ಲವೆನ್ನದೆ ಹೋಗಿ ಕಲಾಸೇವೆಯನ್ನು ಅರ್ಪಿಸುತ್ತಾರೆ. ಈಗಿನ ಆಧುನಿಕ ಪ್ರಪಂಚದ ಆತುತರ ಬದುಕಿನ ಯುವ ಜನಾಂಗಕ್ಕೆ ಆಸಕ್ತಿ ಕುಂಠಿತಗೊಂಡ ಬಗ್ಗೆ ಸದಾಶಿವರು ಆತಂಕವನ್ನೂ ವ್ಯಕ್ತಪಡಿಸುತ್ತಾರೆ.

ಕಾಸರಗೋಡಿನ ಮತ್ತೊಂದು ಕೌತುಕ ದಿವಾಣ ಕುಟುಂಬ. ಬಹುಷಃ ಆ ಕುಟುಂಬದ ವಿಶೇಷತೆಯೇ ಇರಬೇಕು. ಎಡನಾಡಿನ ಸ್ವಸ್ತಿಶ್ರೀ ಕಲಾ ಪ್ರತಿಷ್ಠಾನದ ಅಧ್ವೈರು, ತೆಂಕುತಿಟ್ಟು ಯಕ್ಷಗಾನದ ಹಿರಿಯ ಕಲಾವಿದ ಗುರು ದಿವಾಣ ಶೀವಶಂಕರ ಭಟ್ ಸಂಯೋಜಿಸುವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಲು ಸದಾಶಿವ ಅನಂತಪುರ ಒಪ್ಪಿಕೊಂಡಿದ್ದಾರೆ. ಸನ್ಮಾನ ಸ್ವೀಕರಿಸಲು ಸದಾಶಿವರು ಒಪ್ಪಿಕೊಂಡಿರುವರೆಂದು ಶಿವಶಂಕರ ಭಟ್ ನನ್ನಲ್ಲಿ ಪೋನ್ ಮೂಲಕ ತಿಳಿಸುವಾಗ ಶಿವಶಂಕರ ಭಟ್ರವರ ಧ್ವನಿಯಲ್ಲಿ ಗಂಗೆಯನ್ನು ಧರೆಗಿಳಿಸಿದ ಜಹ್ನು ಮುನಿಯ ತೃಪ್ತಿ ಧ್ವನಿಯಲ್ಲಿತ್ತು.

ಎಡನಾಡು ಸ್ವಸ್ತಿಶ್ರೀ ಕಲಾ ಪ್ರತಿಷ್ಠಾನ ನ.16 ರ ಭಾನುವಾರ ಅಪರಾಹ್ನ 2 ಗಂಟೆಗೆ ಮುಜುಂಗಾವು ಪಾರ್ಥಸಾರಥಿ ಕ್ಷೇತ್ರ ಪರಿಸರದಲ್ಲಿ ಖ್ಯಾತ ಯಕ್ಷಗಾನ ಅರ್ಥದಾರಿಗಳೂ, ಕಲಾ ವಿಮರ್ಶಕರೂ ಆಗಿದ್ದ ದಿ.ಕೃಷ್ಣ ಕಾರಂತರ ಜನ್ಮ ಶತಮಾನೋತ್ಸವದ ಅಂಗವಾಗಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದೊಂದಿಗೆ ಯಕ್ಷಗಾನ ತಾಳಮದ್ದಳೆ, ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿತ್ತು.

Leave a Reply

Your email address will not be published. Required fields are marked *