Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಬ್ರಿಟೀಷ್ ಕಾನೂನುಗಳು ಮತ್ತು ಕ್ರಿಮಿನಲ್ ಗಳನ್ನು ತಯಾರು ಮಾಡುವ ಜೈಲುಗಳು !

# ವಾರದ ಖಾರ * ಶ್ರೀರಾಮ ದಿವಾಣ.

@ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ, ಬ್ರಿಟೀಷರ ಆಡಳಿತ ಅಂತ್ಯಗೊಂಡು 66 ವರ್ಷಗಳೇ ಕಳೆದುವು. ಇಂದು ದೇಶದಲ್ಲಿ, ದೇಶವಾಸಿಗಳೇ ಮತ ನೀಡಿ ಚುನಾಯಿಸಿದ ಸಂಸದರಿದ್ದಾರೆ. ಇವರೇ ಪ್ರಧಾನಿಯಾಗಿದ್ದಾರೆ, ಮಂತ್ರಿಗಳಾಗಿದ್ದಾರೆ. ದೇಶವಾಸಿಗಳೇ ಐಎಎಸ್, ಐಪಿಎಸ್ ಅಧಿಕಾರಿಗಳಾಗಿದ್ದಾರೆ. ಆದರೂ ಈಗಲೂ ಸಹ ಬ್ರಿಟೀಷರು ರಚಿಸಿದ ಪೊಲೀಸ್ ಕಾನೂನುಗಳು, ನೀತಿಗಳು ಸ್ವತಂತ್ರ ಭಾರತದಲ್ಲಿ ಜ್ಯಾರಿಯಲ್ಲಿದೆ. ಇವುಗಳನ್ನು ಸಕಾರಾತ್ಮಕವಾಗಿ ಬದಲಾವಣೆ ಮಾಡಲು ನಮ್ಮನ್ನಾಳಿದ ಯಾವ ಸರಕಾರಗಳಿಗೂ ಇದುವರೆಗೂ ಸಾಧ್ಯವಾಗಿಲ್ಲ, ಆಸಕ್ತಿ ತೋರಿಸಿಲ್ಲ.

ಸ್ವತಂತ್ರ ಭಾರತದ ಪೊಲೀಸ್ ಇಲಾಖೆ ಇನ್ನೂ ಕೂಡಾ ಬ್ರಿಟೀಷ್ ಕಾಲದ ಪೊಲೀಸ್ ಇಲಾಖೆಯಾಗಿಯೇ ಉಳಿದಿದೆ, ಮುಂದುವರಿದಿದೆ. ಸರ್ವಾಧಿಕಾರಿ ಬ್ರಿಟೀಷ್
ಆಡಳಿತಾವಧಿಯಲ್ಲಿ ಬ್ರಿಟೀಷ್ ಆಡಳಿತವನ್ನು ಪ್ರಶ್ನಿಸಿದವರನ್ನು ಜೈಲಿಗಟ್ಟಲು, ಅವರಿಗೆ ಶಿಕ್ಷೆ ನೀಡಲು ಉಪಯೋಗಿಸಿದ ಅದೇ ಕಾನೂನುಗಳನ್ನು ಉಳಿಸಿಕೊಂಡಿರುವ ಸ್ವತಂತ್ರ ಭಾರತದ ಅಡಳಿತ ವ್ಯವಸ್ಥೆ, ಪ್ರಸ್ತುತ ಅದೇ ಕಾನೂನುಗಳನ್ನು ಉಪಯೋಗಿಸಿಕೊಂಡು ಅಮಾಯಕ ದೇಶವಾಸಿಗಳನ್ನು ಜೈಲಿಗೆ ತಳ್ಳುತ್ತಿದೆ. ಶಿಕ್ಷೆಗೆ ಗುರಿಪಡಿಸುತ್ತಿದೆ. ಇಂಥ ಅಮಾನವೀಯ ನೀತಿ- ನಿಯಮಾವಳಿಗಳನ್ನು ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳೇ ಆಡಳಿತ ನಡೆಸುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮುನ್ನಡೆಸಿದವರು ಬದಲಾವಣೆ ಮಾಡಬೇಕಿತ್ತು. ಮಾಡಿಲ್ಲ ಎನ್ನುವುದೇ ವ್ಯವಸ್ಥೆಯ ದುರಂತ, ಭಾರತದ ಮಹಾನ್ ಪ್ರಜೆಗಳ ದುರದೃಷ್ಟ.

ಭಾರತದ ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳು ಯಥಾಸ್ಥಿತಿವಾದಿಗಳು, ಬಂಡವಾಳಶಾಹಿಗಳು, ಭೂಮಾಲೀಕರು, ಸರ್ವಾಧಿಕಾರಿಗಳು, ಮಹಾ ಭ್ರಷ್ಟಾಚಾರಿಗಳೂ ಆಗಿದ್ದಾರೆ. ಬ್ರಿಟೀಷರು ಯಾವ ಕಾನೂನಿನ ಮೂಲಕ ಸ್ವಾತಂತ್ರ್ಯ ಹೋರಾಟಗಾರರನ್ನು ಬಗ್ಗು ಬಡಿದು ತಮ್ಮನ್ನು, ತಮ್ಮ ಆಡಳಿತವನ್ನು ರಕ್ಷಿಸಿಕೊಳ್ಳುತ್ತಿದ್ದರೋ, ಅದೇ ಕಾನೂನಿನಿಂದ ಭಾರತದ ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳು ಭಾರತದ ಸ್ವಾಭಿಮಾನಿ ಪ್ರಜೆಗಳನ್ನು ಬಗ್ಗು ಬಡಿಯುತ್ತಾ ತಮ್ಮದೇ ಆದ ಆಡಳಿತವನ್ನು ಉಳಿಸಿಕೊಂಡಿದ್ದಾರೆ. ಇಲ್ಲದಿದ್ದರೆ ಬ್ರಿಟೀಷರು ರಚಿಸಿ ಉಪಯೋಗಿಸಿದ ಕಾನೂನನ್ನು ಈ 66 ವರ್ಷಗಳ ಆಡಳಿತಾವಧಿಯಲ್ಲಿ ಸ್ವತಂತ್ರ ಭಾರತದ ಪ್ರಭುತ್ವ ಅಮೂಲಾಗ್ರವಾಗಿ ಅಧ್ಯಯನಕ್ಕೆ ಒಳಪಡಿಸಿ ಪುನರಚಿಸುತ್ತಿತ್ತು.

ಪ್ರಜಾಪ್ರಭುತ್ವ ವ್ಯವಸ್ಥೆಯ ನಿಜವಾದ ಫಲಾನುಭವಿಗಳು ಪ್ರಜೆಗಳನ್ನು ಮರೆತ ಪ್ರಭುತ್ವ ಆಗಿರುವುದರಿಂದ ಅವರಿಗೆ ಬ್ರಿಟೀಷರ ಕಾಲದ ಕಾನೂನನ್ನು ಬದಲಾಯಿಸಬೇಕೆಂಬ ಕನಿಷ್ಟ ಪ್ರಜ್ಞೆಯೂ ಇದುವರೆಗೂ ಮೂಡಿದ್ದಿಲ್ಲ. ಮೂಡಿದ್ದಿದ್ದರೆ, ಪೊಲೀಸ್ ಇಲಾಖೆ ಪ್ರಯೋಗಿಸುವ ಅನೇಕಾನೇಕ ಕಲಂ (ಸೆಕ್ಷನ್) ಗಳನ್ನು ಅದಾವಾಗಲೇ ರದ್ದು ಮಾಡುತ್ತಿತ್ತು. ತನಿಖಾ ಮಾದರಿಯನ್ನು ಸಹ ಯಾವತ್ತೋ ಬದಲಾವಣೆ ಮಾಡುತ್ತಿತ್ತು. ಪೊಲೀಸ್ ತನಿಖಾಧಿಕಾರಿಗಳು ಇಂದಿಗೂ ಪ್ರಜ್ಞಾಪೂರ್ವಕವಾಗಿ ಉಳಿಸಿಕೊಂಡು ಬಂದಿರುವ ಅನೇಕಾನೇಕ ಕಲಂ (ಸೆಕ್ಷನ್) ಗಳು ಸ್ವತಂತ್ರ ಭಾರತದ ಪ್ರಭುತ್ವ ಧಮನ, ದಬ್ಬಾಳಿಕೆ, ದೌರ್ಜನ್ಯದ ಸಂಕೇತ ಎನ್ನುವುದಕ್ಕೆ ಸಾಕ್ಷಿಯಾಗಿ ನಮ್ಮ ಕಣ್ಣ ಮುಂದೆಯೇ ಇದೆ.

ಯಾವುದೇ ಪ್ರಕರಣ ಇರಬಹುದು, ಪೊಲೀಸ್ ತನಿಖಾಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಲ್ಲಿಸುವ ದೋಷಾರೋಪಣಾಪಟ್ಟಿ ಅಥವಾ ಆರೋಪಪಟ್ಟಿ ಅಥವಾ ಚಾರ್ಜ್ ಶೀಟ್ ನ್ನೊಮ್ಮೆ ನೋಡಬೇಕು. ಇದರಲ್ಲೂ ಮುಖ್ಯವಾಗಿ ಈ ಚಾರ್ಜ್ ಶೀಟಲ್ಲಿರುವ ಆರೋಪಿಗಳ ತಪ್ಪೊಪ್ಪಿಗೆ ಹೇಳಿಕೆ, ಸಾಕ್ಷಿದಾರರ ಹೇಳಿಕೆಯನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಬೇಕು, ಓದಬೇಕು. ಆಗ ಪೊಲೀಸ್ ತನಿಖೆ ಎಂಬ ತನಿಖಾ ಪ್ರಕ್ರಿಯೆಯೇ ಇಡಿಯಾಗಿ ಬೆತ್ತಲಾಗಿಬಿಡುತ್ತದೆ.

ಇಂಡಿಯನ್ ಪಿನಲ್ ಕೋಡ್ (ಐಪಿಸಿ) -1986 ರಲ್ಲಿ 511 ಸೆಕ್ಷನ್ ಗಳು, ಕರ್ನಾಟಕ ಪೊಲೀಸ್ ಆಕ್ಟ್ (ಕೆಪಿಎ)- 1963 ರಲ್ಲಿ 179 ಸೆಕ್ಷನ್ ಗಳು, ಇಂಡಿಯನ್ ಎವಿಡೆನ್ಸ್ ಆಕ್ಟ್ (ಐಇಎ) – 1872 ರಲ್ಲಿ 187, ಕ್ರಿಮಿನಲ್ ಪ್ರೊಸಿಜರ್ ಕೋಡ್ (ಸಿಆರ್ ಪಿಸಿ) – 1973 (ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ) ರಲ್ಲಿ 484 ಸೆಕ್ಷನ್ ಗಳು, ಹೀಗೆ ಸಾವಿರಾರು ಸೆಕ್ಷನ್ ಗಳು ಇವೆ. ಇವುಗಳಲ್ಲಿ ಹಲವಾರು ಸೆಕ್ಷನ್ ಗಳು ಇಂದು ಮುಗ್ದ ಅಮಾಯಕರನ್ನು ಕ್ರಿಮಿನಲ್ ಗಳನ್ನಾಗಿ ಪರಿವರ್ತಿಸಲು ಪೊಲೀಸರಿಂದ ಅಧಿಕಾರಿಗಳಿಂದ
ದುರ್ಬಳಕೆಯಾಗುತ್ತಿದೆ.

ಸಾಕ್ಷಿದಾರರ ಹೇಳಿಕೆಗೆ ಸಾಕ್ಷಿದಾರರ ಸಹಿಯನ್ನು ಹಾಕುವ ಅಗತ್ಯವೇ ಇಲ್ಲ. ಇಂಥ ವ್ಯವಸ್ಥೆಯಿಂದಾಗಿ ಸಾಕ್ಷಿದಾರರ ಹೇಳಿಕೆ ಎಂದು ಸ್ವತಹಾ ಪೊಲೀಸ್ ತನಿಖಾಧಿಕಾರಿಗಳೇ ಪೊಲೀಸ್ ಠಾಣೆಯೊಳಗೆ ಕುಳಿತು ತಮಗೆ ಹೇಗೆ ಬೇಕೋ ಹಾಗೆ ತಮಗೆ ತೋಚಿದಂತೆ ಸಾಕ್ಷಿದಾರರ ಹೇಳಿಕೆಯನ್ನು ದಾಖಲಿಸಿ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಕೈತೊಳೆದುಕೊಂಡು ಬಿಡುತ್ತಾರೆ.

ಪೊಲೀಸರನ್ನು ಕಂಡರೆ ಅಡಗಿ ಕುಳಿತುಕೊಳ್ಳುವ, ಹೆದರಿ ಓಡುವ ಒಂದು ಜನವರ್ಗ ಇಂದಿಗೂ ನಮ್ಮ ನಡುವೆಯೇ ಇದ್ದಾರೆ. ಇವರಲ್ಲಿ ಬಹುತೇಕ ಮಂದಿ ಯಾವ ಅಪರಾಧವನ್ನೂ
ಮಾಡಿರುವುದಿಲ್ಲ. ಆದರೂ ಪೊಲೀಸ್ ಅಧಿಕಾರಿಗಳು ಕೇವಲ ಸಂಶಯದ ಮೇಲೆ 96 ಕೆಪಿ ಆಕ್ಟ್ ನಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಾರೆ. ನಿಜಕ್ಕೂ ಕ್ರಿಮಿನಲ್ ಗಳಲ್ಲದ ಈ ಅಮಾಯಕ ಯುವಕರು ನ್ಯಾಯಾಂಗ ಬಂಧನದಲ್ಲಿದ್ದ ಅವಧಿಯಲ್ಲಿ ಕಳ್ಳರು, ದರೋಡೆಕೋರರು, ಕೊಲೆಗಡುಕರು, ವಂಚಕರು ಮೊದಲಾದವರ ಸಂಪರ್ಕಕ್ಕೆ ಬಂದು ಅಂತವರ ಸಹಾಯ, ಪ್ರೇರಣೆಯಿಂದ ಅಂತಿಮವಾಗಿ ಕ್ರಿಮಿನಲ್ ಗಳೇ ಆಗಿಬಿಡುತ್ತಾರೆ. ಇದರರ್ಥವೇನು ? ಜೈಲ್ ಎನ್ನುವುದು ಕ್ರಿಮಿನಲ್ ಗಳನ್ನು ತಯಾರು ಮಾಡುವ ಕಾರ್ಖಾನೆ ಎಂದೇ ಅಲ್ಲವೇ ?

ಭಾರತದ ಪ್ರಜೆಗಳನ್ನೇ ಹಿಂಸೆಗೆ ಗುರಿಪಡಿಸುವಂಥ, ಕ್ರಿಮಿನಲ್ ಗಳನ್ನು ತಯಾರು ಮಾಡುವಂಥ ಸೆಕ್ಷನ್ ಗಳು ಇನ್ನೂ ಹಾಗೆಯೇ ಉಳಿದು ಮುಂದುವರಿಯಬೇಕೇ ? ಇಂಥ ಅನೇಕಾನೇಕ ಕಾನೂನುಗಳನ್ನು ಸ್ವತಂತ್ರ ಭಾರತದ ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ಬದಲಾವಣೆ ಮಾಡಬೇಡವೇ ? ಪ್ರಜೆಗಳಿಂದ ಮತ ಪಡೆದು ಪ್ರಭುತ್ವವನ್ನು ಅಲಂಕರಿಸುವ ಜನಪ್ರತಿನಿಧಿಗಳು ಇಂಥ ಗಂಭೀರ ವಿಚಾರಗಳ ಕಡೆಗೆ ಗಮನಹರಿಸುವುದು ಯಾವಾಗ ?

Leave a Reply

Your email address will not be published. Required fields are marked *