Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಸನಾತನ ಧರ್ಮಕ್ಕಿದೆ ಸ್ವಯಂ ಶುದ್ಧೀಕರಣದ ಸಾಮರ್ಥ್ಯ !

* ಸಿಡಿಲು         * ಶ್ರೀಕಾಂತ್  ಶೆಟ್ಟಿ

shrikanth shetty-2 copy

# ಬ್ರಾಹ್ಮಣರ ಎಂಜಲಿನಲ್ಲಿ ಔಷಧೀಯ ಅಂಶವಿದೆಯೇ..? ಇಲ್ಲದಿದ್ದರೆ ಅವರ ಎಂಜಲಿನಲ್ಲಿ ಉರುಳಾಡಿದ ಮಾತ್ರಕ್ಕೆ ಚರ್ಮರೋಗ ಗುಣವಾಗುವುದೆಂತು..? ಹುಟ್ಟುತ್ತಲೇ ಸೋಶಿಯಲ್ ಮೀಡಿಯಾಗಳಿಗೆ ಜಾರುತ್ತಿರುವ ಇಂದಿನ ಪೀಳಿಗೆ ಈ ಅನಿಷ್ಟ ಆಚರಣೆಗಳನ್ನು ಒಪ್ಪುತ್ತದೆಯೇ..? ಭಾರತೀಯ ಸನಾತನ ಧರ್ಮ ಸ್ವಯಂ ಶುದ್ಧೀಕರಣದ ಸಾಮರ್ಥ್ಯ ಹೊಂದಿದೆ ಎನ್ನುತ್ತಾರೆ ಕೆಲವರು. ಕಾಲಗತಿಯಲ್ಲಿ ತನ್ನೊಳಗೆ ಸೇರಿಕೊಂಡಿದ್ದ ನೂರಾರು ಅನಿಷ್ಟ ಆಚರಣೆಗಳನ್ನು ಅದು ಯಾವುದೇ ಮುಲಾಜಿಲ್ಲದೆ ಕಿತ್ತು ಹಾಕಿದೆ. ಪ್ರಾರಂಭದಲ್ಲಿ ಒಂದಷ್ಟು ಜನರು ಸಣ್ಣ ಪ್ರತಿರೋಧ ವ್ಯಕ್ತವಾದರೂ ಕಾಲಾಂತರದಲ್ಲಿ ನಾವು ಎಲ್ಲವನ್ನೂ ಸ್ವೀಕರಿಸಿಕೊಂಡು ನಡೆದಿದ್ದೇವೆ. ಧರ್ಮದ ಈ ನಿರಂತರತೆಗೆ ಮಡೆಸ್ನಾನ ಯಾಕೆ ಹೊರತಾಗಿದೆ..?

made made snaana

ಚಂದ್ರಗುತ್ತಿಯಲ್ಲಿ ಎಲ್ಲಮ್ಮನ ಜಾತ್ರೆಯ ಸಂದರ್ಭದಲ್ಲಿ ಬೆತ್ತಲೆ ಸೇವೆಗಳು ನಡೆಯುತ್ತಿದ್ದವು. ತಮ್ಮ ಮನೆ ಮಕ್ಕಳ ಮೈಯನ್ನು ಬಣ್ಣ ಬಣ್ಣದ ಬಟ್ಟೆಯಿಂದ ಮುಚ್ಚಿದ ಕೆಲವು ಉಳ್ಳವರು, ಅಮಾಯಕ ಮುಗ್ದ ಹೆಣ್ಣು ಮಕ್ಕಳನ್ನು ದೇವರ ಹೆಸರಲ್ಲಿ ಬೆತ್ತಲೆ ಮಾಡಿ ಮಜಾ ನೋಡುತ್ತಿದ್ದರು. ಸಾರ್ವಜನಿಕವಾಗಿ ಈ ಹೆಣ್ಣು ಮಕ್ಕಳು ಮೈಗೆ ಅರೆಬರೆ ಬೇವಿನ ಸೊಪ್ಪು ಸುತ್ತಿಕೊಂಡು ಮೆರವಣಿಗೆ ಹೊರಡುತ್ತಿದ್ದರು. ಈ ಹೆಣ್ಣು ಮಕ್ಕಳನ್ನು ಬೆತ್ತಲೆ ನೋಡಿ ಆ ಎಲ್ಲಮ್ಮನಿಗೆ ಏನು ದಕ್ಕಿತೋ ಗೊತ್ತಿಲ್ಲ. ಆದರೆ ಈ ಬಡ ಮಕ್ಕಳ ಮಾನವನ್ನು ಮೂರಾಬಟ್ಟೆ ಮಾಡಿ ಕೆಲವು ಜರಿಪಂಚೆ ತೊಟ್ಟವರು ಕಿರಾತಕ ಖುಷಿ ಪಡೆಯುತ್ತಿದ್ದರು ಎನ್ನುವುದು ಮಾತ್ರ ಸತ್ಯ. ನಮ್ಮ ಸರಕಾರ ಈ ಅನಿಷ್ಟ ಪದ್ದತಿಯನ್ನು ಸಂಪೂರ್ಣವಾಗಿ ನಿಲ್ಲಿಸಿ ಬಿಟ್ಟಿತು.

chandragutti bettale seve

ಹಿಂದೆಲ್ಲಾ ಚಂದ್ರಗುತ್ತಿ ರೇಣುಕಾಂಬಾ ಜಾತ್ರೆಗೆ ತಮ್ಮ ಮನೆ ಹುಡುಗರನ್ನು ಕಳುಹಿಸಲು ತಾಯಂದಿರು ಸಂಕೋಚ ಪಡುತ್ತಿದ್ದರು. ಈಗ ಪರಿಸ್ಥಿತಿ ತಿಳಿಯಾಗಿದೆ. ರೇಣುಕಾಂಬೆ ಭವ್ಯವಾದ ಪಲ್ಲಕಿಯಲ್ಲಿ ಮೆರವಣಿಗೆ ಹೊರಡುತ್ತಾಳೆ. ಆಕೆಯ ವೈಭವ ಕಾಣಲು ಎರಡು ಕಣ್ಣು ಸಾಲದು. ತನ್ನ ಅಂಗಳದಲ್ಲಿ ನಡೆಯುತ್ತಿದ್ದ ಅನಾಗರೀಕ ಆಚರಣೆಯೊಂದು ನಿಂತು ಹೋಗಿ ನಾನು ಕಳಂಕ ಮುಕ್ತಳಾದೆ ಎಂಬ ನಿರಾಳತೆ ಆಕೆಯ ಮುಖದಲ್ಲಿದೆ.

ಕೆಳದಿಯ ಚರಿತ್ರೆಯನ್ನು ಓದುತ್ತಿದ್ದಾಗ ವೀರಮ್ಮಾಜಿಯ ಆಳ್ವಿಕೆಯಲ್ಲಿ ದೇವದಾಸಿ ಪದ್ದತಿಯನ್ನು ನಿಲ್ಲಿಸುವ ನಿಟ್ಟಿನಲ್ಲಿ ಕ್ರಾಂತಿಕಾರಿ ಹೆಜ್ಜೆಯನ್ನು ಇಡಲಾಗಿತ್ತು. ಆದರೆ ಅಂದಿನ ಕಾಲ ಅದಕ್ಕೆ ಪರಿಪಕ್ವವಾಗಿರಲಿಲ್ಲ. ಹಿಂದೆಲ್ಲಾ ಬಡವರ ಮನೆಯ ಬಾಲಕಿಯೊಬ್ಬಳನ್ನು ಗೊತ್ತು ಮಾಡಿ ಆಕೆಯನ್ನು ಊರಿನ ಹಿರಿಯರೆಲ್ಲಾ ಸೇರಿ ದೇವದಾಸಿ ಮಾಡಿಬಿಡುತ್ತಿದ್ದರು. ಹೆಸರಿಗೆ ಮಾತ್ರ ಅವಳು ದೇವದಾಸಿ. ಆದರೆ ಆಕೆ ತನ್ನ ಯೌವನದ ಪ್ರತಿ ಕ್ಷಣವನ್ನೂ ಊರಿನ ಚಟ ಪುರುಷರ ಸುಖಕ್ಕಾಗಿ ಮೀಸಲಿರಿಸಬೇಕಿತ್ತು.

keladi chennamma

ಹಿಂದೆ ಹೆಣ್ಣೊಬ್ಬಳನ್ನು ಮೈ ನೆರೆಯುವ ಮುನ್ನವೇ ಮದುವೆ ಮಾಡಿಕೊಡಬೇಕೆಂಬ ಪದ್ದತಿಯಿತ್ತು. ಹೆಣ್ಣು ತಾರುಣ್ಯಕ್ಕೆ ಬಂದ ಬಳಿಕವೂ ಆಕೆ ಮನೆಯಲ್ಲಿದ್ದರೆ ಆಕೆಯನ್ನು ಅತ್ಯಂತ ನಿರ್ದಯವಾಗಿ ಈ ಧಾರ್ಮೀಕ ವೇಶ್ಯಾವೃತ್ತಿಗೆ ತಳ್ಳಲಾಗುತ್ತಿತ್ತು. ಉತ್ತರ ಕನ್ನಡ ಸೇರಿದಂತೆ ಮಲೆನಾಡಿನ ಬಹುತೇಕ ಭಾಗಗಳಲ್ಲಿ ಈ ಆಚರಣೆ ಜಾರಿಯಲ್ಲಿತ್ತು. ಹರಕೆಯ ಕುರಿಯನ್ನು ಬಲಿಕೊಡುವ ಮೊದಲು ಹೇಗೆ ಸಿಂಗರಿಸುತ್ತಾರೋ ಅದೇ ರೀತಿ ಹೆಣ್ಣನ್ನು ಸಿಂಗರಿಸಿ ಅದ್ದೂರಿ ಮೆರವಣಿಗೆ ಮಾಡಲಾಗುತ್ತಿತ್ತು. ನಂತರ ಊರಿನ ದೇವಾಲಯದ ಹೊರಗಿರುವ ವೇದಿಕೆಗೆ ಕರೆತರಲಾಗುತ್ತಿತ್ತು. ಅಲ್ಲಿ ಊರಿನ ಎಲ್ಲರೂ ಬಂದು ಜಮಾಯಿಸಿ ಹೆಣ್ಣೊಬ್ಬಳ ಬಹಿರಂಗ ಮಾನಭಂಗದ ಮಜಾ ಸವಿಯುತ್ತಿದ್ದರು. ಆ ವೇದಿಕೆಯ ಮಧ್ಯ ಭಾಗದಲ್ಲಿ ಒಂದು ಚೂಪುಗಲ್ಲು ದೇವದಾಸಿಯಾಗಲಿರುವ ನತದೃಷ್ಟ ಬಾಲಕಿಯನ್ನು ಆ ಚೂಪು ಕಲ್ಲಿನ ಮೇಲೆ ಕೂರಿಸಲಾಗುತ್ತಿತ್ತು. ಸುತ್ತಲೂ ಬಿಳಿ ಬಟ್ಟೆಯನ್ನು ಹಿಡಿಯುತ್ತಿದ್ದರು. ಹೆಣ್ಣಿನ ಕನ್ಯಾ ಪೊರೆ ಹರಿದು ಕಲ್ಲಿಗೆ ರಕ್ತ ಸಿಂಚನವಾಗುತ್ತಿದ್ದಂತೆ, ಆಕೆ ದೇವದಾಸಿಯಾಗಿ ಬಿಡುತ್ತಿದ್ದಳು.

ನಮ್ಮ ಕಡೆ ದೇವರಿಗೆ ಬಸವನನ್ನು ಬಿಟ್ಟಂತೆ ಹಿಂದೆ ಕೆಲವು ದೇವಸ್ಥಾನಗಳಿಗೆ ಹೆಣ್ಣು ಮಕ್ಕಳನ್ನು ಬಿಡುತ್ತಿದ್ದರು. ದೇವಾಲಯದ ಜಗಲಿಯ ಮೇಲೆ ಅವಳ ವಾಸ. ಮನೆ ಮನೆಗೆ ಹೋಗಿ ಭಿಕ್ಷೆ ಬೇಡಿ ಜೀವನ. ಸಂಜೆಯಾಗುತ್ತಿದ್ದಂತೆ ಊರಿನ ಜಮೀನ್ದಾರರು ಬಂದು ಈ ಹೆಣ್ಣು ಮಗಳನ್ನು ಹೇಗೆ ಬೇಕೋ ಹಾಗೆ ಬಳಸುತ್ತಿದ್ದರು. ಬಸುರಿಯಾದರೆ ಅದು ದೇವರ ಸಂತಾನ ಎನಿಸಿಕೊಳ್ಳುತ್ತಿತ್ತು. ಈ ಅಮಾನವೀಯ ಪದ್ದತಿಯನ್ನು ಕೂಡ ಅಂದಿನ ಕಾಲದಲ್ಲಿ ಸಮರ್ಥಿಸಿಕೊಳ್ಳುವವರಿದ್ದರು. ಈ ಎಲ್ಲಾ ಆಚರಣೆಗಳು ನಿಜಕ್ಕೂ ಸಮಾಜಕ್ಕೆ ಯಾವ ಸಂದೇಶವನ್ನು ರವಾನಿಸುತ್ತಿದೆ..?

ಹಿಂದೂ ಧರ್ಮದ ಅಗಾಧ ಜ್ಞಾನ ಭಂಡಾರಕ್ಕೆ ಮನಸೋತು, ಇಲ್ಲಿನ ಸಂಸ್ಕೃತಿಯ ಅಧ್ಯಯನಕ್ಕಾಗಿ ಸಾವಿರಾರು ವಿದೇಶಿಗರು ಭಾರತಕ್ಕೆ ಬರುತ್ತಾರೆ. ಸುಬ್ರಮಣ್ಯದಲ್ಲಿ ಮಡೆಸ್ನಾನವನ್ನು ನೋಡಿದ ವಿದೇಶಿ ಯಾತ್ರಿಕನೊಬ್ಬನ ಮನಸ್ಸಿಗೆ ಏನನ್ನಿಸಬಹುದು ? ಆತ ತನ್ನ ಸ್ಮಾರ್ಟ್ ಫೋನ್ ತೆಗೆದು ಎಂಜಲು ಎಲೆಯ ಮೇಲೆ ಹೊರಳಾಡುತ್ತಿರುವ ಈ ಅವಿವೇಕಿಗಳ ಚಿತ್ರವನ್ನು ಕ್ಲಿಕ್ಕಿಸಿ ತನ್ನ ಗೆಳೆಯರಿಗೆ ತೋರಿಸುತ್ತಾನೆ. ನೋಡಿ, ಇದು ಭಾರತದ ನಿಜವಾದ ಸಂಸ್ಕೃತಿ ಎಂದು ಕಮೆಂಟು ಮಾಡುತ್ತಾನೆ. ನಾವು ಜಗತ್ತಿಗೆ ತೆರೆದುಕೊಳ್ಳುತ್ತಿರುವ ಈ ಸಮಯದಲ್ಲಿ ಇಂತ ಆಚರಣೆಯೊಂದರ ಅಗತ್ಯವಿದೆಯೇ ಎನ್ನುವುದೇ ನನ್ನ ಮುಖ್ಯ ಪ್ರಶ್ನೆಯಾಗಿದೆ.

ಸ್ವತಃ ಪೇಜಾವರ ಸ್ವಾಮಿಗಳು ಮಡೆಸ್ನಾನದ ಬದಲಿಗೆ ಎಡೆ ಸ್ನಾನ ನಡೆಯಲಿ, ದೇವರ ನೈವೇದ್ಯದ ಮೇಲೆ ಉರುಳು ಸೇವೆ ಮಾಡಿ ಎಂದಿದ್ದರು. ಅವರ ಒಳಗೂ ಒಂದು ಅಪರಾಧಿ ಪ್ರಜ್ಞೆ ಇದೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಕೆಲವು ಬ್ರಾಹ್ಮಣವಾದಿಗಳು ನಾವು ಇತರರನ್ನು ಬಲವಂತ ಮಾಡುವುದಿಲ್ಲ. ನಾವು ಕೂಡ ಮಡೆಸ್ನಾನ ಮಾಡುತ್ತೇವೆ ಎಂಬ ಸಮಜಾಯಿಷಿ ನೀಡುತ್ತಾರೆ.

pejavara vishwesha theertha swameeji

ವ್ಯಕ್ತಿಯೊಬ್ಬ ಜ್ಯೋತಿಷ್ಯರ ಬಳಿ ಹೋದಾಗ ನಿನಗೆ ನಾಗದೋಷವಿದೆ ಸುಬ್ರಮಣ್ಯದಲ್ಲಿ ಮಡೆಸ್ನಾನ ಮಾಡು ಎಂದು ಪರಿಹಾರ ಹೇಳುತ್ತಾರೆ. ಆ ಜ್ಯೋತಿಷಿ ಯಾರು..? ಚರ್ಮ ರೋಗಕ್ಕೆ ಸುಬ್ರಮಣ್ಯದಲ್ಲಿ ಮಡೆಸ್ನಾನ ಮಾಡಿದರೆ ವಾಸಿಯಾಗುತ್ತದೆ ಎಂದು ಟೀವಿ ಚಾನೇಲುಗಳಲ್ಲಿ ಪುಕ್ಕಟೆ ಸಲಹೆ ನೀಡುವ ಕಬಿಯಾಡಿ ಜಯರಾಮ ಆಚಾರ್ಯ ಯಾರು..? ಬ್ರಾಹ್ಮಣನಲ್ಲವೇ..? ನಿಸ್ಸಂಶಯವಾಗಿ ಒಂದು ವರ್ಗ ಈ ಆಚರಣೆಯನ್ನು ಪ್ರಮೋಟ್ ಮಾಡುತ್ತಿದೆ.

kabiyadi jayaram acharya

ಕರಾವಳಿ ಭಾಗದ ಮಾರಿ ಗುಡಿಗಳಲ್ಲಿ ಕೋಣನ ಬಲಿಯನ್ನು ನಿಲ್ಲಿಸಿದಾಗ ಯಾವ ಬ್ರಾಹ್ಮಣನೂ ದ್ವನಿ ಎತ್ತಲಿಲ್ಲ. ಯಾಕೆಂದರೆ ಅದು ಇಲ್ಲಿನ ಪ್ರಾಚೀನ ದ್ರಾವಿಡರ ಆಚರಣೆ ಎಂಬ ಕಾರಣಕ್ಕಾಗಿ. ಆಗ ಇದು ಜನರ ಧಾರ್ಮಿಕ ನಂಬಿಕೆ ಎಂದು ಇವರು ವಾದ ಮಾಡಲಿಲ್ಲ. ಆದರೆ ಮಡೆಸ್ನಾನ ನಿಷೇಧಕ್ಕೆ ಮುಂದಾದಾಗ ಮಾತ್ರ ಇದು ಜನರ ಧಾರ್ಮಿಕ ನಂಬಿಕೆ, ಜನರ ಭಾವನೆಗಳನ್ನು ಹತ್ತಿಕ್ಕುವುದು ತಪ್ಪು ಎಂದು ಹೇಳಿಕೆ ನೀಡುತ್ತಿದ್ದಾರೆ. ಜನರ ಭಾವನೆಗಿಂತಲೂ ಇವರಿಗೆ ತಮ್ಮ ಎಂಜಲಿನ ಮೇಲೆ ಇತರರು ಉರುಳಾಡಿಸಿ ತಾವು ಶ್ರೇಷ್ಠರು ಎನಿಸಿಕೊಳ್ಳುವ ಅವಕಾಶ ಕೈತಪ್ಪುತ್ತದೆ ಎಂಬ ಭಯಕಾಡುತ್ತಿದೆ.

ದಲಿತರನ್ನು ಮೇಲೆತ್ತಬೇಕು, ಅಸ್ಪೃಶ್ಯತೆಯನ್ನು ಅಳಿಸಬೇಕು ಎಂದು ದಲಿತರ ಕೇರಿಗಳಿಗೆ ಹೋಗಿ ಪಿಕ್ನಿಕ್ ಆಚರಿಸಿ ನಂತರ ಉಡುಪಿಗೆ ಬಂದು ಪ್ರಾಯಶ್ಚಿತ್ತ ಹೋಮ ಮಾಡಿಸುವ ಡೋಂಗಿ ಸಮಾಜ ಸುಧಾರಕರಿಂದ ಈ ಸಮಸ್ಯೆ ಬಗೆ ಹರಿಯಲಾರದು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಎರಡನೇ ಸರಸಂಘ ಚಾಲಕರಾದ ಸದಾಶಿವ ಮಾಧವ ರಾವ್ ಗೋಳ್ವಳ್ಕರ್ ಯಾವತ್ತೂ ಕೂಡ ಒಂದು ಮಾತು ಹೇಳುತ್ತಿದ್ದರು. ”ಅಸ್ಪೃಶ್ಯತೆ ಅಡಗಿರುವುದು ದಲಿತರ ಕೇರಿಗಳಲ್ಲಿ ಅಲ್ಲ, ಅದು ಇರುವುದು ಮೇಲ್ಜಾತಿಗಳ ಮನಸ್ಸಿನಲ್ಲಿ…, ಮೊದಲು ನಾವು ಬದಲಾಯಿಸಬೇಕಿರುವುದು ಈ ಮನಸ್ಸುಗಳನ್ನು” ಎಂದಿದ್ದರು. ಈ ಮಾತು ಎಷ್ಟು ಅರ್ಥಪೂರ್ಣ…

ನಿಜಕ್ಕೂ ದಲಿತರ ಮನೆಯ ನೀರು ಕುಡಿದು ಕ್ಯಾಮೆರಾಗಳಿಗೆ ಪೋಸು ಕೊಡುವ ಬದಲು ತನ್ನ ಜಾತಿ ಶ್ರೇಷ್ಟವೆಂದು ತೋರಿಸಿ ಇತರರಿಗೆ ಮುಜುಗರ ಮೂಡಿಸುತ್ತಿರುವ ಈ ಅರ್ಥಹೀನ ಆಚರಣೆಗಳನ್ನು ಮೊದಲು ನಿಲ್ಲಿಸುವ ಪ್ರಯತ್ನ ಮಾಡಬೇಕು. ಪುರೋಹಿತಶಾಹಿಗಳನ್ನು ಹೊರತು ಪಡಿಸಿ ಭಾರತೀಯ ಸನಾತನ ಪರಂಪರೆಗೆ ಯಾವುದೇ ಅಸ್ತಿತ್ವವಿಲ್ಲ ಎಂಬ ಮೊಂಡುವಾದವನ್ನು ಬಿಡಬೇಕು. ಹಿಂದೂ ಸಂಘಟನೆಯ ಕಾರ್ಯಕರ್ತರು ನಿಜಕ್ಕೂ ಹೋರಾಟ ಮಾಡಬೇಕಿರುವುದು ಈ ಮಣ್ಣಿನ ಮಕ್ಕಳ ಸಮಾನತೆಗಾಗಿ. ಆ ಹೋರಾಟದಲ್ಲಿ ರಾಷ್ಟ್ರೀಯ ಅಸ್ತಿತ್ವದ ಅಳಿವು ಉಳಿವು ಅಡಗಿದೆ. ಈ ಪುರೋಹಿತಶಾಹಿಗಳ ಡಂಬಾಚಾರವನ್ನು ಮೆರೆಸಲು ತಮ್ಮ ಶಕ್ತಿ, ಸಮಯಗಳನ್ನು ವ್ಯರ್ಥಮಾಡುವುದನ್ನು ಅವರು ಕೂಡಲೆ ನಿಲ್ಲಿಸಬೇಕು. ಯಾರು ಸಮಸ್ತ ಹಿಂದೂ ಸಮಾಜವನ್ನು ಸಮಾನವಾಗಿ ಕಾಣಲು ಬಯಸುವುದಿಲ್ಲವೋ, ಅಂತಹ ಪಕ್ಷಪಾತಿಗಳ ಕೈಗೆ ಸಮುದಾಯದ ಮುಖಂಡತ್ವವನ್ನು ಕೊಡುವುದಾದರೂ ಯಾವ ನಿರೀಕ್ಷೆ ಇಟ್ಟು ?

ಆನೋ ಭದ್ರಾ ಕೃತವೋ ಯಂತು ವಿಶ್ವತಃ” ಜಗತ್ತಿನ ಎಲ್ಲೆಡೆಯಿಂದ ಜ್ಞಾನ ನಮ್ಮ ಕಡೆಗೆ ಹರಿದು ಬರಲಿ ಎಂದಿದ್ದರು ನಮ್ಮ ಪೂರ್ವಜರು. ಹಾಗಾದರೆ ಇತರರಲ್ಲೂ ಜ್ಞಾನವಿದೆ, ಅದು ನಮ್ಮ ಸ್ವೀಕಾರಕ್ಕೆ ಅರ್ಹವಾದುದು ಎಂಬ ಚಿಂತನೆ ಅವರಲ್ಲಿತ್ತು. ಅದು ಹೌದೆಂದಾದರೆ ನಾವೆ ಶ್ರೇಷ್ಟರು, ನಮ್ಮ ಜಾತಿಯೇ ಮಿಗಿಲಾದುದು ಎಂಬವರೆಲ್ಲಾ ವೇದ ವಿರೋಧಿಗಳಾಗಲಿಲ್ಲವೇ.. ? ತಮ್ಮನ್ನು ತಾವು ವೈದಿಕರು, ಸಾರಸ್ವತರು ಎಂದೆಲ್ಲಾ ಬೆನ್ನು ಚಪ್ಪರಿಸಿಕೊಳ್ಳವವರು ವೇದಗಳಲ್ಲಿ ಎಲ್ಲಿ ಎಂಜಲು ಎಲೆಯ ಮೇಲೆ ಹೊರಳಾಡಬೇಕು ಎಂದು ಬರೆದಿದೆ ತೆಗೆದು ತೋರಿಸಿ..?

ಮೊನ್ನೆ ಉಡುಪಿಯ ಜೋತಿಷ್ಯರೊಬ್ಬರು ಮಡೆಸ್ನಾನಕ್ಕೆ ಸ್ಕಂದ ಪುರಾಣದಲ್ಲಿ ಪುರಾವೆ ಇದೆ ಎನ್ನುತ್ತಾ ಒಂದೆರಡು ಕಾಮಿಕ್ಸ್ ಕತೆಗಳನ್ನು ಹೇಳಿದರು. ಪುಕ್ಕಟೆ ಮನೋರಂಜನೆ ನೀಡಿದ ಆ ಕತೆಗಳು ಸತ್ಯ ದೂರವಿದ್ದವು ಎನ್ನುವುದು ಮೇಲ್ನೋಟಕ್ಕೆ ಕಂಡುಬಂತು. ಶ್ರೀ ಕೃಷ್ಣನ ಮೊಮ್ಮಗನಾದ ಸಾಂಬ ಎನ್ನುವವನು ಕುಕ್ಕೆಗೆ ಬಂದು ಮಡೆಸ್ನಾನ ಮಾಡಿದ್ದನಂತೆ. ಆತ ಯಾವ ಬಸ್ಸು ಹತ್ತಿ ಕುಕ್ಕೆಗೆ ಬಂದನೋ ಗೊತ್ತಿಲ್ಲ. ಎಲ್ಲಿಯ ಇಂದ್ರಪ್ರಸ್ಥ, ಎಲ್ಲಿಯ ಕುಕ್ಕೆ.. ?

kukke subrahmanya temple

ಪರೀಕ್ಷಿತನ ನಂತರ ಪಟ್ಟಕ್ಕೆ ಬಂದ ಎಲ್ಲಾ ರಾಜರ ವಿವರ ಪದ್ಮ ಪುರಾಣದಲ್ಲಿದೆ. ಆದರೆ ಇದರಲ್ಲಿ ಸಾಂಬ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಎಂಜಲೆಲೆಯಲ್ಲಿ ಉರುಳಾಡಿ ಪ್ರಾಯಶ್ಚಿತ್ತ ಮಾಡಿದ ಉಲ್ಲೇಖ ಮಾತ್ರ ಇಲ್ಲ. ಸಾಂಬ, ಉದ್ಭವನ ಮೂಲಕ ಬದರಿಗೆ ಹೋಗಿ ಅಲ್ಲಿ ಪ್ರಾಯಶ್ಚಿತ್ತ ಮಾಡಿಕೊಂಡ ಉಲ್ಲೇಖವಷ್ಟೇ ಇದೆ. ಇನ್ನು, ಸ್ಕಂದ ಪುರಾಣವನ್ನು ಇಲ್ಲಿನ ಮಾದ್ವರು ತಮ್ಮ ಮೂಗಿನ ನೇರಕ್ಕೆ ತಿದ್ದಿ ಕೆಲವು ಕ್ಷೇತ್ರಗಳ ಅತಿರಂಜಿತ ಸುಳ್ಳು ಕತೆಗಳನ್ನು ಸೇರಿಸಿದ್ದಾರೆ ಎಂದು ಡಾ|| ಪಾದೂರು ಗುರುರಾಜ ಭಟ್ಟರೇ ಅಭಿಪ್ರಾಯಪಟ್ಟಿದ್ದಾರೆ. ಸ್ಕಂದ ಪುರಾಣದ ಸಹ್ಯಾದ್ರಿ ಖಂಡ ನಂಬಲರ್ಹವಲ್ಲ ಎನ್ನುವುದು ಅವರ ಅಭಿಪ್ರಾಯವಾಗಿದೆ.

dr.padur gururaj bhat

ಮಡೆಸ್ನಾನವನ್ನು ನಾಗ ಸಂಪ್ರೀತಿಗಾಗಿ ಪ್ರಾರಂಭಿಸಿದವರು ಮಾದ್ವರು. ವಿಪರ್ಯಾಸವೆಂದರೆ ಮಾದ್ವ ಬ್ರಾಹ್ಮಣರು ಕುಕ್ಕೆಯನ್ನು ಅತಿಕ್ರಮಿಸುವ ತನಕ ಕುಕ್ಕೆ ದೇವಾಲಯದಲ್ಲಿ ಕುಕ್ಕೆ ಲಿಂಗೇಶ್ವರ ದೇವರೇ ಪ್ರಧಾನವಾಗಿದ್ದರು. ಈಶ್ವರನೆಂಬ ಕಾರಣಕ್ಕೆ ಈಗ ಅವರಿಗೆ ಗೇಟ್ ಪಾಸ್ ನೀಡಲಾಗಿದೆ. ಸುಬ್ರಮಣ್ಯನಿಗೆ ಪ್ರಧಾನ ದೇವರ ಪಟ್ಟ ದೊರೆತಿದೆ. ಅಲ್ಲಿನ ಮಾದ್ವ ಸ್ವಾಮೀಜಿಗಳ ಪಟ್ಟದ ದೇವರಾದ ಸಂಪುಟ ನರಸಿಂಹನ ಗುಡಿಗೆ ಹೆಚ್ಚಿನ ಒತ್ತು ಸಿಗುತ್ತಿದೆ. ಇಲ್ಲಿ ಮೂಲತಃ ಪೂಜೆ ಮಾಡುತ್ತಿದ್ದವರು ಮೋರೋಜಿ ವಂಶದ ಸ್ಥಾನಿಕ ಬ್ರಾಹ್ಮಣರು. ಕ್ರಮೇಣ ಈ ದೇವಾಲಯ ಮಾಧ್ವ ಶಿವಳ್ಳಿ ಬ್ರಾಹ್ಮಣರ ಹಿಡಿತಕ್ಕೆ ಬಂದಿತು. ಆ ನಂತರವೇ ಸ್ಥಳಿಯ ಮಲೆಕುಡಿಯರನ್ನು ಎಂಜಲು ಎಲೆಯ ಮೇಲೆ ಹೊರಳಾಡಿಸುವ ಸಂಪ್ರದಾಯ ಪ್ರಾರಂಭವಾಗಿರುವುದು.

ಇತಿಹಾಸವನ್ನು ಕೆದಕುತ್ತಾ ಸಾಗಿದಂತೆ ಮತಾಂಧತೆಯ ಘಾಟು ಕುಕ್ಕೆಯ ಕ್ಷೇತ್ರದಲ್ಲಿ ನಿಮ್ಮ ಮೂಗಿಗೆ ಗಮ್ಮನೆ ಬಡಿಯುತ್ತದೆ. ಇಷ್ಟೆಲ್ಲಾ ಒಡಕುಗಳನ್ನು ಒಡಲಲ್ಲಿ ಇರಿಸಿಕೊಂಡು ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು ಎಂದರೆ ಅದು ಹಾಸ್ಯಾಸ್ಪದವಲ್ಲದೇ ಮತ್ತೇನು..? ಮೊದಲು ನಾವು ವೇದಗಳ ಆಶಯವನ್ನು ಅರಿತು ನಡೆಯಬೇಕು. ಆಗ ಮಾತ್ರ ಸ್ಪಷ್ಟವಾದ ದಾರಿ ಹಿಂದೂ ಸಮಾಜಕ್ಕೆ ಕಾಣಲು ಸಾಧ್ಯ. ವೇದದ ಆಶಯಗಳಿಗೆ ವಿರುದ್ಧವಾದ ಎಲ್ಲಾ ಆಚರಣೆಗಳನ್ನು ಮುಲಾಜಿಲ್ಲದೆ ಕೈಬಿಡಲು ನಾವು ಮಾನಸಿಕವಾಗಿ ಸಿದ್ದರಾಗಬೇಕು. ಎಲ್ಲಾ ಮತ ಪಂಥ ಜಾತಿಗಳನ್ನು ಮೀರಿದ ಕೇವಲ ಭಾರತೀಯತೆಯ ಅಡಿಪಾಯದಲ್ಲಿ ವೈಜ್ಞಾನಿಕ ದೃಷ್ಟಿಕೋನವನ್ನು ಆಧಾರವಾಗಿಟ್ಟುಕೊಂಡು ಕಟ್ಟಿದ ಭವ್ಯ ಹಿಂದೂ ಸಮಾಜದ ಕಲ್ಪನೆ ನಮ್ಮಲ್ಲಿ ಮೂಡಬೇಕು. ಆಗ ಮಾತ್ರ ಈ ಎಲ್ಲಾ ಸಣ್ಣತನಗಳು ದೂರವಾಗಲು ಸಾಧ್ಯ.

ಸ್ವಾಮಿ ವಿವೇಕಾನಂದ, ವೀರ ಸಾವರ್ಕರ್, ರಾಜಾರಾಮ್ ಮೋಹನ್ ರಾಯ್, ದಯಾನಂದ ಸರಸ್ವತಿ, ಮೊದಲಾದವರು ಬಯಸಿದ್ದು ಇದೇ ಸಮಾಜವನ್ನು. ಅದನ್ನು ಬಿಟ್ಟು ಎಂಜಲು ಎಲೆಯಲ್ಲಿ ಹೊರಳಾಡಿ ಅದನ್ನೇ ಧರ್ಮವೆಂದು ತಿಳಿದು ಪುರೋಹಿತಶಾಹಿಗಳ ಹಿಡಿತದಲ್ಲಿ ಸಿಲುಕಿ ತಿಣುಕಾಡುವ ಹುಚ್ಚರ ಸಂತೆಯನ್ನಲ್ಲ.

swamy dayananda saraswathi

ಸತ್ತ ಗಂಡನ ಚಿತೆಗೆ ಹಾರುವ ಸತಿ ಪದ್ದತಿಯಿಂದ ಪ್ರಾರಂಭಿಸಿ, ಇಂದಿನ ದೇವಾಲಯಗಳಲ್ಲಿ ಜಾತಿಯ ಆಧಾರದಲ್ಲಿ ಹಾಕುವ ಪ್ರತ್ಯೇಕ ಅನ್ನದವರೆಗೆ ಎಲ್ಲವೂ ಒಂದೊಂದು ಕಾಲಘಟ್ಟದಲ್ಲಿ ವಕ್ಕರಿಸಿರುವ ಅಮಾನವೀಯ ಆಚರಣೆಗಳೇ ಹೊರತು ಇವುಗಳಿಗೆ ಶಾಸ್ತ್ರ ಗ್ರಂಥಗಳಲ್ಲಿ ಯಾವುದೇ ಆಧಾರವಿಲ್ಲ. ವೇದದ ಅಡಿಪಾಯದಲ್ಲಿ ನಿಂತಿರುವ ನಾವು ಜಗತ್ತಿಗೆ ವಿಜ್ಞಾನದ ಬಾಗಿಲು ತೆರೆದ ಪುಣ್ಯಾಶಾಲಿ ಪೂರ್ವಜರನ್ನು ಹೊಂದಿದ್ದೇವೆ. ಆದರೆ ಕೆಲವೇ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕಾರಣದಿಂದ ಸಮಸ್ತ ಸನಾತನ ಸಂಸ್ಕೃತಿಯ ದೂಷಣೆಯಾಗುತ್ತಿರುವುದನ್ನು ಹೇಗೆ ತಾನೆ ಸಹಿಸಿಕೊಳ್ಳಲು ಸಾಧ್ಯ…?

ಮಡೆ ಮಡೆಸ್ನಾನ, ಅಸ್ಪೃಶ್ಯತೆ, ಪಂಕ್ತಿಭೇದ ಮೊದಲಾದ ಅನಿಷ್ಟಗಳನ್ನು ನಾವೇ ಮುಂದೆ ನಿಂತು ನಿರ್ಮೂಲನೆ ಮಾಡಿದರೆ ಅದರೊಂದಿಗೆ ನಿಡುಮಾಮಿಡಿ, ಬರಗೂರು, ಗೌರಿ ಲಂಕೇಶ್ , ಬಸವರಾಜ ದೇವರು, ದೇವನೂರು ಮಹಾದೇವ ಮೊದಲಾದ ವಿತಂಡವಾದಿಗಳ ಹೋರಾಟಗಳೂ ನಿಂತು ಹೋಗುತ್ತವೆ. ಹಿಂದೂ ಬಲಪಂಥೀಯ ಚಿಂತಕರೇ ಈ ಕಾರ್ಯಕ್ಕೆ ಮುಂದಾದರೆ ಇತರ ಧರ್ಮಗಳನ್ನ ಖುಷಿ ಪಡಿಸುವುದಕ್ಕಾಗಿ ಹಿಂದೂ ಸಮಾಜದ ಅವಹೇಳನದಲ್ಲಿ ನಿರತರಾಗಿರುವ ಎಲ್ಲಾ ಎಡಬಿಡಂಗಿಗಳೂ ಕೆಲಸವಿಲ್ಲದೆ ಮನೆ ಸೇರುವುದರಲ್ಲಿ ಯಾವುದೇ ಸಂಶಯವಿಲ್ಲ.

ಆಚಾರ್ಯ ಶಂಕರರು ಮನಿಷಾ ಪಂಚಕದಲ್ಲಿ ಹೇಳಿರುವ ಅದ್ಭುತ ಮಾತಿನೊಂದಿಗೆ ಈ ಲೇಖನವನ್ನು ಮುಗಿಸುತ್ತಿದ್ದೇನೆ.

ಜಾಗ್ರತ್ ಸ್ವಪ್ನ ಸುಷುಪ್ತಿಷು ಸ್ಪುಟತರಾ ಯಾ ಸಂವಿದುಜ್ಜೃಂಭತೇ
ಯಾ ಬ್ರಹ್ಮಾದಿಪಿಪೀಲಿಕಾಂತತನುಷು ಪ್ರೋತಾಜಗತ್ಸಾಕ್ಷಿಣೀ
ನೈವಾಹಂ ನಚ ದೃಶ್ಯವಸ್ತ್ವಿತಿ ದೃಡಪ್ರಜ್ಞಾಪಿ ಯಸ್ಯಾಸ್ತಿ ಚೇತ್
ಚಾಂಡಾಲೋಸ್ತು ಸ ತು ದ್ವಿಜೋಸ್ತು ಗುರುರಿತ್ಯೇಷಾ ಮನಿಷಾ ಮಮ

(ಎಚ್ಚರ ಕನಸು ನಿದ್ರೆ ಈ ಮೂರರಲ್ಲೂ ಏಕ ಸೂತ್ರವನ್ನು ಯಾವ ಚೇತನ ಸಾಧಿಸುತ್ತದೆಯೋ.. ಯಾವ ಚೈತನ್ಯವು ಬ್ರಹ್ಮನಿಂದ ಆರಂಭಿಸಿ ಇರುವೆಯವರೆಗೂ ಎಲ್ಲಾ ಜೀವ ಸಂಕುಲಗಳಲ್ಲೂ ಅವಿರ್ಭವಿಸಿ ಆ ಜೀವಿಗಳನ್ನು ನಡೆಸುತ್ತಿದೆಯೋ, ಆ ಚೈತನ್ಯ ಸ್ವರೂಪವೇ ನಾನು. ನೋಟಕ್ಕೆ ಕಾಣುತ್ತಿರುವುದು ನಾನಲ್ಲ. ಈ ಬ್ರಹ್ಮ ಜ್ಞಾನವನ್ನು ಯಾವ ಮನುಷ್ಯ ಅರಿತಿರುವನೋ ಆತನು ಜಾತಿಯಲ್ಲಿ ಚಾಂಡಾಲನಿರಲಿ ಅಥವಾ ಬ್ರಾಹ್ಮಣನಿರಲಿ ನಾನು ಆತನನ್ನು ನನ್ನ ಗುರುವೆಂದು ಸ್ವೀಕರಿಸುತ್ತೇನೆ.)

Leave a Reply

Your email address will not be published. Required fields are marked *