Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ರಾಕ್ಷಸೀ ಪ್ರವೃತ್ತಿಗಳ ದೌರ್ಜನ್ಯ ತಡೆಗೆ ಜಾನಪದ ಕಲೆ, ಸಂಸ್ಕೃತಿಗಳು ಹೆಚ್ಚು ಪರಿಣಾಮಕಾರಿ: ವಿಧಾನ ಪರಿಷತ್ ಸಭಾಪತಿ ಪುಟ್ಟಣ್ಣ

ಕುಂಬಳೆ(ಕಾಸರಗೋಡು): ಸಮಾಜದಲ್ಲಿ ಅಶಾಂತಿ, ಅನ್ಯಾಯಗಳಿಗೆ ಅನಕ್ಷರಸ್ಥರಿಗಿಂತ ಹೆಚ್ಚು ಅಕ್ಷರಸ್ಥರೇ ಕಾರಣವಾಗುತ್ತಿರುವುದು ಆತಂಕಕಾರಿ.ನಮ್ಮ ಸಂಸ್ಕೃತಿ ಸಂವರ್ಧನೆಗೆ ಜನಪದ ಜನರ ಕೊಡುಗೆ ಅಪಾರವಾಗಿದ್ದು, ಸಾಮಾಜಿಕ ಸ್ವಾಸ್ಥ್ಯ, ಶಾಂತಿ, ನೆಮ್ಮದಿಗೆ, ತಾರತಮ್ಯ ರಹಿತ ಸಮಾಜ ನಿರ್ಮಾಣಕ್ಕೆ ಜಾನಪದ ಕಲೆಗಳ ಕೊಡುಗೆ ಮಹತ್ತರವಾದುದು ಎಂದು ಕರ್ನಾಟಕ ಸರಕಾರದ ವಿಧಾನ ಪರಿಷತ್ತಿನ ಉಪ ಸಭಾಪತಿಗಳಾದ ಪುಟ್ಟಣ್ಣ ಅಭಿಪ್ರಾಯಪಟ್ಟರು.

ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕವು ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಸಹಯೋಗದೊಂದಿಗೆ ನಾಡೋಜ ಕೆ.ಎಲ್ ನಾಗೇಗೌಡರ ಜನ್ಮ ಶತಾಬ್ದಿ ವರ್ಷಾಚರಣೆಯ ಅಂಗವಾಗಿ ಹಮ್ಮಿಕೊಂಡಿರುವ “ಜಾನಪದ ಸಂಚಾರ” ಕಾರ್ಯಕ್ರಮದ ಎರಡನೇ ಪ್ರದರ್ಶನವನ್ನು ಇಂದು ಬೆಳಿಗ್ಗೆ ಕುಬಣೂರಿನ ಶ್ರೀರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೀಪ ಜ್ವಾಲನೆಯ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

puttanna bhashana

ಕನ್ನಡ ಸಹಿತ ಅದರೊಡನೆ ಹಾಸುಹೊಕ್ಕಾದ ಭಾಷೆ, ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವಲ್ಲಿ ಗಡಿನಾಡು ಕಾಸರಗೋಡಿನ ಕೊಡುಗೆ ಮಹತ್ವಪೂರ್ಣವಾದುದು. ಗಡಿನಾಡಿನ ಜನರ ಭಾಷಾಭಿಮಾನ ಆಶ್ಚರ್ಯ ಹುಟ್ಟಿಸುವಂತದ್ದೆಂದು ಪುಟ್ಟಣ್ಣ ಶ್ಲಾಘಿಸಿದರು.

ನಮ್ಮ ಭವಿಷ್ಯದ ಪ್ರಜೆಗಳಾದ ಮಕ್ಕಳ ಮನೋಭೂಮಿಕೆಗೆ ಹೊಸ ಬೆಳಕನ್ನು ಕೊಡುವ ನಿಟ್ಟಿನಲ್ಲಿ ಜಾನಪದ ಪರಿಷತ್ತಿನ ಗಡಿನಾಡ ಘಟಕ ಹಮ್ಮಿಕೊಂಡ ಕಾರ್ಯಕ್ರಮಗಳು ಹೆಚ್ಚು ಪರಿಣಾಮಕಾರಿಯಾಗಿದೆ. ಮಕ್ಕಳು ದೇವರ ಸಮಾನವೆಂಬುದು ನಮ್ಮ ನಂಬಿಕೆ. ಈ ನಿಟ್ಟಿನಲ್ಲಿ ರಾಕ್ಷಸೀ ಪ್ರವೃತ್ತಿಯಿಂದ ಅವರ ಮೇಲಾಗುತ್ತಿರುವ ದೌರ್ಜನ್ಯಗಳಿಗೆ ಕಡಿವಾಣ ಹಾಕಬೇಕು. ಜಾನಪದ ಕಲೆ, ಸಾಂಸ್ಕೃತಿಕ ಚಟುವಟಿಕೆಗಳು ನಮ್ಮ ತಾಮಸೀ ಪ್ರವೃತ್ತಿಯನ್ನು ಅಳಿಸಿ ಶುದ್ದ ಚಾರಿತ್ರ್ಯ ನಿರ್ಮಾಣದಲ್ಲಿ ಮುಖ್ಯ ಪಾತ್ರವಹಿಸುತ್ತದೆಯೆಂದು ಅವರು ತಿಳಿಸಿದರು. ಗಡಿನಾಡ ಕನ್ನಡಿಗರ ಬಗ್ಗೆ, ಅವರ ಸಮಸ್ಯೆ, ಸವಾಲುಗಳ ಬಗ್ಗೆ ಕರ್ನಾಟಕ ಸರಕಾರ ಹೆಚ್ಚಿನ ಗಮನ ನೀಡಿ ಮುಂದಿನ ತಲೆ ಮಾರಿನ ಯುವ ಜನತೆಗೆ ಹೆಚ್ಚು ಫಲ ನೀಡುವ ಸಹಕಾರ ನೀಡುವ ಯೋಜನೆಗಳನ್ನು ರೂಪಿಸುವ ಬಗ್ಗೆ ಸೂಚನೆ ನೀಡಲಾಗುವುದೆಂದು ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಕೇಶವ ಪ್ರಸಾದ ನಾಣಿತ್ತಿಲು, ಗಡಿನಾಡಿನಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೆ ಕರ್ನಾಟಕದಲ್ಲಿ ಮಾನ್ಯತೆ ನೀಡಬೇಕು. ಹರಿದು ಹಂಚಿ ಹೋಗಿರುವವರ ಸಾಮಥ್ರ್ಯವನ್ನು ಮತ್ತೆ ಒಗ್ಗೂಡಿಸಿ ಸಂಸ್ಕೃತಿ ಸಂವರ್ಧನೆಗೆ ಜಾನಪದ ಪರಿಷತ್ತಿನ ಗಡಿನಾಡ ಘಟಕ ಮುಂದಡಿಯಿರಿಸಿದೆ. ಜಾನಪದ ಉಳಿದರೆ ನಮ್ಮ ಬದುಕು, ಭವಿಷ್ಯ ಉತ್ತುಂಗಕ್ಕೇರುವುದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕುಬಣೂರು ಶ್ರೀರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಅಶೋಕ ಕುಮಾರ್ ಹೊಳ್ಳ, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯ ಗೋಲ್ಡನ್ ಅಬ್ದುಲ್ ರಹಿಮಾನ್, ಮಂಗಲ್ಪಾಡಿ ಗ್ರಾಮ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಅಸೀಸ್, ಸದಸ್ಯ ಎಂ.ಬಾಬು, ಶಾಲಾ ಪ್ರಬಂಧಕಿ ಮೋಕ್ಷದಾ ಕೆ, ಕ.ಸಾ.ಪ. ತಾಲೂಕು ಘಟಕದ ಅಧ್ಯಕ್ಷ ಸಿ.ರಾಘವ ಬಲ್ಲಾಳ್, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ದಾಮೋದರ ಉಬರಳೆ, ಮಾತೃ ಮಂಡಳಿ ಅಧ್ಯಕ್ಷೆ ತನುಜಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

josef

ಕಾರ್ಯಕ್ರಮದಲ್ಲಿ ಪಾವೂರು ಮಾನಸಿಕ ಅಸ್ವಸ್ಥರ ಪುನಶ್ಚೇತನ ಕೇಂದ್ರ ‘ಸ್ನೇಹಾಲಯ’ದ ಸಂಸ್ಥಾಪಕ ಜೋಸೆಫ್ ಕ್ರಾಸ್ತಾ, ದ.ಕ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಬಾಲ ಪ್ರತಿಭೆ ಕು.ಸನ್ನಿಧಿ ಟಿ.ರೈ ಹಾಗೂ ಕಣ್ಣೂರು ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ಸಾಲಿನಲ್ಲಿ ಅರ್ಥಶಾಸ್ತ್ರ ಎಂ.ಎ ಪದವಿಯ ರ್ಯಾಂಕ್ ವಿಜೇತೆ ಖೈರುನ್ನೀಸಾ ಕುಬಣೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

sannidhi rai

ಜಾನಪದ ಪರಿಷತ್ತು ಗಡಿನಾಡ ಘಟಕದ ಸಂಚಾಲಕ ಸಿ.ಕೆ ವಸಂತಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ, ಪ್ರೋ.ಎ.ಶ್ರೀನಾಥ್ ವಂದಿಸಿದರು. ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಜಾನಪದ ಪರಿಷತ್ತು ಗಡಿನಾಡ ಘಟಕದ ಜಾನಪದ ಕಲಾತಂಡದಿಂದ ಶಂಕರ ಸ್ವಾಮಿಕೃಪಾ ಹಾಗೂ ಜಯ ಮಣಿಯಂಪಾರೆಯ ನಿರ್ದೇಶನದಲ್ಲಿ ವಿವಿಧ ಜಾನಪದ ಕಲೆಗಳ ಪ್ರಾತ್ಯಕ್ಷಿಕೆ ಪ್ರದರ್ಶಿಸಲ್ಪಟ್ಟಿತು. ಕಾರ್ಯಕ್ರಮದಲ್ಲಿ ಜಾನಪದ ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದು ಸಹಕರಿಸಿದರು.

khairunnisa

ಚಿತ್ರದಲ್ಲಿ: ಕಾರ್ಯಕ್ರಮ ಉದ್ಘಾಟಿಸುತ್ತಿರುವ ಪುಟ್ಟಣ್ಣ, ಜೋಸೆಫ್ ಕ್ರಾಸ್ತಾ, ಸನ್ನಿಧಿ ಟಿ ರೈ ಹಾಗೂ ಖೈರುನ್ನಿಸಾ ಅವರನ್ನು ಅಭಿನಂದಿಸುತ್ತಿರುವುದು ಮತ್ತು ಜಾನಪಕ ಕಲಾ ಪ್ರದರ್ಶನ.

janapada kala pradarshana

Leave a Reply

Your email address will not be published. Required fields are marked *