Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ.

WhatsAppನಿಂದ ಹಾಳಾಗುತ್ತಿರುವ ಸಂಸಾರಗಳು !

* ಮನೋವಿಶ್ವಾಸ     * ಡಾ.ಪಿ.ವಿ.ಭಂಡಾರಿ

manovishwaasa clinic-2 copy
# ರಮೀಳಾ  ಒಬ್ಬಳೆ  ಡಾ.ಶ್ರೀಗಣೇಶರ ಕ್ಲಿನಿಕ್ ಗೆ ಬರುತ್ತಾಳೆ , ಬಂದವಳೇ ಶ್ರೀಗಣೇಶರನ್ನೇ ಭೇಟಿಯಾಗಬೇಕೆಂದು  ಹಠ  ಹಿಡಿದು, ರಿಸೆಪ್ಶನ್ ನಲ್ಲಿ  ಕುಳಿತುಕೊಳ್ಳುತಾಳೆ. ಇದನ್ನು ಸಿ.ಸಿ. ಟಿವಿಯಲ್ಲಿ ನೊಡಿದ ಡಾಕ್ಟರ್,  ಅವಳನ್ನು ಸರದಿ ತಪ್ಪಿಸಿ ಒಳಗೆ ಬಿಡಲು ಸೂಚಿಸುತ್ತಾರೆ.

ಒಳಗೆ ಬಂದವಳೇ,  ಜೋರಾಗಿ ಅಳಲು ಪ್ರಾರಂಭಿಸಿದ ರಮೀಳಾ, ಹೇಗಾದರು ಮಾಡಿ ತನ್ನ  ಸಂಸಾರವನ್ನು ಉಳಿಸಿಕೊಡಿ ಎಂದು ಒಂದೇ ಸಮನೇ ಗೋಗರೆಯುತ್ತಾಳೆ.
ರಮೀಳಾಲದ್ದು ಲವ್  ಮ್ಯಾರೇಜು. ಇವಳು ಪ್ರೊಟೆಸ್ಟಂಟ್  ಕ್ರಿಶ್ಚನ್, ಗಂಡ ರೋಮನ್ ಕ್ಯಾಥೋಲಿಕ್  ಕ್ರಿಶ್ಚನ್. ಇಬ್ಬರೂ ಬೆಂಗಳೂರಿನ  ಪ್ರಸಿದ್ದ ಹೃದಯರೋಗ  ಆಸ್ಪತ್ರೆಯೊಂದರಲ್ಲಿ  ಕೆಲಸ  ಮಾಡುತ್ತಿದ್ದರು. ಇವಳು ನರ್ಸ್, ಆತ ವಾರ್ಡ್ ಬಾಯ್. ಆತನ ಹೆಸರು ರಾಜೇಶ್ ಡೆಸಾ. ಡೆಸಾನ  ಹುದ್ದೆ ವಾರ್ಡ್ ಬಾಯ್ ನದ್ದಾಗಿದ್ದರೂ, ಆತ ನೋಡಲು ಸುಂದರನಾಗಿದ್ದ. ಆಸ್ಪತ್ರೆಯಲ್ಲಿ  ಹೆಸರುವಾಸಿಯಾಗಿದ್ದ. ಎಲ್ಲರಿಗೂ ಸಹಾಯವನ್ನೂ ಮಾಡುತ್ತಿದ್ದ.

ಆ ಕಾರಣ, ಅವನ ಬಳಿ ಬಹಳಷ್ಟು ಹೆಣ್ಣು ಮಕ್ಕಳು ಮಾತನಾಡುತ್ತಿದ್ದರು. ತಮ್ಮ ಸುಖ ದುಃಖ ಹೇಳಿಕೊಳ್ಳುತ್ತಿದ್ದರು. ಹೀಗೆಯೇ ಹೆಣ್ಣು ಮಕ್ಕಳೊಂದಿಗೆ ಆತ ಬಹಳ ಬೇಗನೇ ಸ್ನೇಹಿತನಾಗಿ ಬಿಡುತ್ತಿದ್ದ. ಹಲವು ಮಂದಿ ನರ್ಸ್ ಗಳು, ಕೆಲವು ಮಂದಿ ಆಗ ತಾನೇ M.B.B.S. ಮುಗಿಸಿ ಬಂದವರು. ಆಸ್ಪತ್ರೆಯ ರೋಗಿಗಳ, ‘ಟೀನ್ ಏಜ್’ ನಲ್ಲಿರುವ ಹಲವು ಜನ ಸಂಬಂಧಿ ಹೆಣ್ಣು ಮಕ್ಕಳು ಈತನೊಂದಿಗೆ ನೋಡು ನೋಡುತ್ತಿದ ಹಾಗೆಯೇ ಸ್ನೇಹಿತರಾಗಿ ಬಿಡುತ್ತಿದ್ದರು.

ಡೆಸಾ ತನ್ನ ಕೈಲಾದಷ್ಟು ಅವರಿಗೆಲ್ಲಾ ಸಹಾಯ ಮಾಡುತ್ತಿದ್ದ. ಹಲವು ಮಂದಿ ಹೆಣ್ಮಕ್ಕಳು ಈತನನ್ನು ಇಷ್ಟ ಪಟ್ಟು ಆತನೊಂದಿಗೆ ಅಸಹಜವಾಗಿ ವರ್ತಿಸಲು ಪ್ರಯತ್ನಿಸಿದರೂ, ಈತ ಮಾತ್ರ ಎಂದೂ ತನ್ನ ಮಿತಿ ಮೀರುತ್ತಿರಲಿಲ್ಲ.

ಆ ಸಮಯದಲ್ಲೇ ಚಿಕ್ಕ ಮಂಗಳೂರಿನ ರಮೀಳಾ ಈ ಆಸ್ಪತ್ರೆಗೆ ತನ್ನ ಪ್ರಥಮ ಹುದ್ದೆಗಾಗಿ ಸೇರಿದಳು. ಕೆಲಸದಲ್ಲಿ ಚುರುಕು, ಹಸನ್ಮುಖಿಯಾಗಿದ್ದ ರಮೀಳಾ, ಆಸ್ಪತ್ರೆಯ ನರ್ಸಿಂಗ್ ಮುಖ್ಯಸ್ಥರ ಗಮನ ಸೆಳೆದು, ಬಂದ ಒಂದೇ ತಿಂಗಳಲ್ಲಿ ಆಸ್ಪತ್ರೆಯ ICU ನಲ್ಲಿ ದಾದಿಯಾಗಿ ಬಡ್ತಿ ಹೊಂದಿದಳು. ಅಲ್ಲೇ ವಾರ್ಡ್ ಬಾಯ್ ಆಗಿದ್ದ ರಾಜೇಶನ ಪರಿಚಯವೂ ಆಯಿತು. ಹಾಗೇ ರಾತ್ರಿ ಡ್ಯೂಟಿಯೊಮದರಲ್ಲಿ ರಮೀಳಾಳಿಗೆ ಇದ್ದಕ್ಕಿದ್ದಂತೆ ‘ಸಿಡಿಲು’ ಬಡಿದಂತೆ ಒಂದು ಘಟನೆ ನಡೆದು ಹೋಯಿತು.

ಸುಮಾರು ರಾತ್ರ 12 ಗಂಟೆಗೆ ಅವಳ ತಂಗಿ ಚಿಕ್ಕ ಮಗಳೂರಿನಿಂದ phone ಮಾಡಿ ತಿಳಿಸಿದ್ದೇನೆಂದರೆ, ಅವಳ ತಂದೆ ಜೋಸೆಫ್ ತನ್ನ ಪೊಲೀಸ್ ಪೇದೆಯ DUTY ಮುಗಿಸಿ ಮನೆಗೆ ಬರುವಾಗ, ಇದ್ದಕ್ಕಿದ್ದಂತೆಯೇ ತಲೆ ತಿರುಗಿ ಬಿದ್ದು ಬಿಟ್ಟಿದ್ದಾರೆ. ಆವರನ್ನು ಚಿಕ್ಕಮಗಳೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಈ ಕೂಡಲೇ ಮಣಿಪಾಲ ಅಥವಾ ಬೆಂಗಳೂರಿಗೆ ಕರೆದುಕೊಂಡು ಹೋಗಬೇಕೆಂದು ವೈದ್ಯರು ತಿಳಿಸಿದ್ದರು.

ಅವಳ ತಂದೆಗೆ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದ ಬಗ್ಗೆ ವೈದ್ಯರುಗಳಿಗೆ ಶಂಕೆಯಿತ್ತು ಎಂದು ತಿಳಿದು ರಮೀಳಾ ಅಧೀರಳಾದಳು. ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಇದನ್ನು ಗಮನಿಸಿದ ರಾಜೇಶ್ ವಿಷಯ ತಿಳಿದು ರಮೀಳಾಳಿಗೆ ಧೈರ್ಯ ಹೇಳಿದ ಹಾಗೂ ತನ್ನ ಗೆಳೆಯರ ಮುಖಾಂತರ ರಮೀಳಾಲ ತಂದೆ ಜೋಸೆಫ್ ರನ್ನು ಬೆಂಗಳೂರಿಗೆ ಕರೆದುಕೊಂಡು ಬರುವ ವ್ಯವಸ್ಥೆ ಮಾಡಿದ. ತನಗೆ ಪರಿಚಯವಿದ್ದ ಕೆಲವು ವೈದ್ಯ ವಿದ್ಯಾರ್ಥಿಗಳ ಮುಖಾಂತರ ಬೆಂಗಳೂರಿನ ಸರಕಾರಿ ಆಸ್ಪತ್ರೆಯೊಂದರಲ್ಲಿ ಜೋಸೆಫ್ ಮರುದಿನವೇ ಆತನ ತಲೆಯ ಸ್ಕ್ಯಾನ್ ಮಾಡುವಂತೆಯೂ, ನುರಿತ ವೈದ್ಯರಿಂದ ಚಿಕಿತ್ಸೆ ಸಿಗುವಂತೆಯೂ ಮಾಡಿದ. ರಾಜೇಶನ ಚಾಕಚಾಕ್ಯತೆ, ವೈದ್ಯರ ಚಿಕಿತ್ಸೆಯಿಂದ ನಾಲ್ಕೈದು ದಿನಗಳಲ್ಲಿಯೇ ಜೋಸೆಫ್ ಗುಣಮುಖರಾದರು.

ರಮೀಳಾ ಕೂಡಾ ರಾಜೇಶನ ದೊಡ್ಡ ಅಭಿಮಾನಿಯಾದ್ಧಳು. ರಾಜೇಶ್ ಕೂಡಾ ರಮೀಳಾಳನ್ನು ತನ್ನ ಇತರ ಸ್ನೇಹಿತರಿಗಿಂತ ಭಿನ್ನವಾಗಿಯೇ ಗುರುತಿಸಿದ್ದ. ಇವರಿಬ್ಬರ ನಡುವೆ ಒಂದು ಹೊಸ ಸಂಬಂಧ ಚಿಗುರಿತು. ಇದಾದ ಆರು ತಿಂಗಳಲ್ಲೇ ಇಬ್ಬರೂ ಮದುವೆಯದರು. ಮದುವೆಯಾಗಿ ಒಂದು ವರ್ಷದಲ್ಲಿ ಒಂದು ಗಂಡು ಮಗುವಿಗೂ ರಮೀಳಾ ಜನ್ಮವಿತ್ತಳು. ಆ ಮಗುವಿನ ಹೆಸರು ವಿಕಾಸ್.

whatsapp-3

ಈಗ ಮಗು ವಿಕಾಸನಿಗೆ ಆರು ವರ್ಷ. ಮದುವೆಯಾಗಿ ಐದು ವರ್ಷ ಚೆನ್ನಾಗಿ ನಡೆದುಕೊಂಡು ಬಂದ ಸಂಸಾರದಲ್ಲಿ ಈಗ ”ಬಿರುಗಾಳಿ”ಯಂತೆ ಒಂದು ಘಟನೆ ನಡೆಯಿತು.ಸುಖ ಸಂಸಾರದ ನೌಕೆ ”whatsapp” ಎಂಬ ಕಲ್ಲಿಗೆ ಅಪ್ಪಳಿಸಿ ಅಪಘಾತಕ್ಕೆ ಒಳಗಾಗಿಬಿಟ್ಟಿತು.

ರಾಜೇಶನ ಬಗ್ಗೆ ತಿಳಿಸಿದಂತೆ, ಆತನನ್ನು ಬಹಳಷ್ಟು ಹೆಣ್ಮಕ್ಕಳು ಮೆಚ್ಚುತ್ತಿದ್ದರು. ಅದರಂತೆ ಆತನ ಅಭಿಮಾನಿಗಳ ಹಿಂಡೇ ಆಸ್ಪತ್ರೆಯಲ್ಲಿತ್ತು. ಆದರೆ, ಎಂದು ಕೂಡಾ ರಮೀಳಾ ರಾಜೇಶನ ಬಗ್ಗೆ ಯಾವುದೇ ಸಂಶಯವನ್ನೂ ಪಡುತ್ತಿರಲಿಲ್ಲ. ಹಲವು ಬಾರಿ ಆತನಿಗೆ ಆಸ್ಪತ್ರೆಯ ಕೃಷ್ಣನೆಂದು ತಾನೇ ಚುಡಾಯಿಸುತ್ತಿದ್ದಳು. ರಾಜೇಶ್ ಕೂಡಾ ನಗುನಗುತ್ತಲೇ ಹಲವು ಹೆಣ್ಮಕ್ಕಳು ತನ್ನನ್ನು ಅವರತ್ತ ಸೆಳೆಯಲು ಮಾಡಿದ ಪ್ರಯತ್ನಗಳ ಬಗ್ಗೆ ಹೇಳುತ್ತಾ ನಗುತ್ತಿದ್ದನು.

ಇಂಥ ಸಂದರ್ಭದಲ್ಲಿಯೇ ಅಲ್ಲಿಗೆ ರಾಜೇಶನ ಊರಿನವಳೂ, ಬಾಲ್ಯ ಸ್ನೇಹಿತಳೂ ಆಗಿದ್ದ ರೀನಾ ಬಂದು ನರ್ಸ್ ಆಗಿ ಆಸ್ಪತ್ರೆ ಸೇರಿದ್ದಳು. ರಾಜೇಶನ ಊರಿನವಳೇ ಆಗಿದ್ದ ರೀನಾ ರಾಜೇಶನ ಸಹಪಾಠಿಯೂ ಆಗಿದ್ದಳು. ಮುಂದೆ ”ನನ್” ಆಗಿ ಧೀಕ್ಷೆ ಪಡೆದು ದುರದ ಮಣಿಪುರ ರಾಜ್ಯದಲ್ಲಿ ”ದೇವಕನ್ಯೆ”ಯಾಗಿ ಸೇವೆ ಮಾಡಲು ಹೋಗಿದ್ದಳು. ಅಲ್ಲಿಯೇ ಚಚರ್್ನ ಮುಖಾಂತರ ಈಗ ನರ್ಸಿಂಗ್ ಶಿಕ್ಷಣ ಪಡೆದು, ಹೆಚ್ಚಿನ ಒಂದು ಪರಿಣತಿ ಪಡೆಯಲು ‘ಹೃದಯಾಲಯ’ ಆಸ್ಪತ್ರೆಗೆ ಮೂರು ತಿಂಗಳ ಅವಧಿಗಾಗಿ ಬಂದಿದ್ದಳು.

ರಾಜೇಶನನ್ನು ನೋಡಿದೊಡನೇ ಆತನನ್ನು ಗುರುತುಹಿಡಿದಿದ್ದಳು ರೀನಾ. ಬಳಿಕ ರಾಜೇಶನ ಮನೆಗೂ ಬಂದಳು. ರಾಜೇಶನೊಂದಿಗೆ ಬಹಳ ಅನ್ಯೋನ್ಯವಾಗಿಯೇ ಇದ್ದಳು.
ರೀನಾ ತನ್ನ ಮನೆಗೆ ಬಂದು ಹೋದ ದಿನದ ರಾತ್ರಿ ರಾಜೇಶ್ ರಮೀಳಾಳೊಂದಿಗೆ ಮಾತನಾಡುತ್ತಾ, ತನ್ನ ಹಾಗೂ ರೀನಾಳ ಬಾಲ್ಯದ ಒಡನಾಟದ ಬಗ್ಗೆ ಹೇಳುತ್ತಾ, ತಾವಿಬ್ಬರೂ ಒಬ್ಬರನ್ನೊಬ್ಬರು ಇಷ್ಟಪಡುತ್ತಿದ್ದುದು, ಆದರೆ ಮುಂದೆ ಅವಳು ತನ್ನ ತಂದೆಯ ಆಸೆಯಂತೆ ”ದೇವ ಕನ್ಯೆ” (NUN) ಆಗಲು ಮಣಿಪುರಕ್ಕೆ ಹೋದ ಬಗ್ಗೆ ರಾಜೇಶ್ ತಿಳಿಸಿದ್ದನು.

ಇದಾಗಿ 2-3 ದಿನಗಳಲ್ಲೇ ರಮೀಳಾ-ರಾಜೇಶ್ ನಡುವಿನ ಸಂಬಂಧದಲ್ಲಿ ಬಿರುಕು ಬಿಡಲು ಶುರುವಾಯಿತು. ರಾಜೇಶ್ ರಾತ್ರಿ ಬಹಳ ಹೊತ್ತಿನ ವರೆಗೂ ಮೊಬೈಲ್ ನಲ್ಲಿ ”WHATSAPP” ಮೆಸೆಜ್ ಮಾಡುತ್ತಿದ್ದನು. ಹಿಂದೆ ರಮೀಳಾಳಿಗೆ, ಅವಳ ಇತರ ಸ್ನೇಹಿತರಿಗೆ ಮೊಬೈಲ್ ನ ಸಮಸ್ಯೆಗಳು, ವಾಟ್ಸಾಪ್, ಫೇಸ್ ಬುಕ್ ಬಳಕೆಯಿಂದಾಗುವ ಸಮಸ್ಯೆಗಳ ಬಗ್ಗೆ ಭಾಷಣ ಬಿಗಿಯುತ್ತಿದ್ದ ರಾಜೇಶ್, ಈಗ ಮುಂಚೆಗಿಂತ ಹೆಚ್ಚು ಮೊಬೈಲ್ ನಲ್ಲಿ ತನ್ಮಯನಾಗಿದ್ದನು. ತನ್ನ ಮೊಬೈಲ್ ಗೆ ಪಾಸ್ ವರ್ಡ್ ಒಂದನ್ನು ಹಾಕಿದ್ದನು. ತನ್ನ ಎಟಿಎಂ ಕಾರ್ಡ್ ನ ಪಾಸ್ ವರ್ಡ್ ನ್ನು ಕೂಡಾ ಹೆಂಡತಿಗೆ ತಿಳಿಸುತ್ತಿದ್ದ ರಾಜೇಶ್, ಈಗ ಮೊಬೈಲ್ ನ ಪಾಸ್ ವರ್ಡ್ ನ್ನು ಮಾತ್ರ ಅವಳಿಗೆ ಹೇಳದೆ ಮುಚ್ಚಿಟ್ಟಿದ್ದನು.
ಒಂದು ದಿನ ಬೆಳಗ್ಗಿನ ಜಾವ 3 ಗಂಟೆಗೆ ಡ್ಯೂಟಿಯಲ್ಲಿದ್ದ ರಮೀಳಾ, ತನ್ನ ವಾಟ್ಸಾಪ್ ನಿಂದ ಗಮನಿಸಿದಾಗ, ರಾಜೇಶ್ ”ಆನ್ ಲೈನ್” ಇದ್ದನು. ರಮೀಳಾ ಕೂಡಲೇ ರಾಜೇಶನಿಗೆ ಮೊಬೈಲ್ ಕರೆ ಮಾಡಿದಳು. ರಾಜೇಶ್ ಅಂದು ಅವಳ ಮೊಬೈಲ್ ಕರೆಯನ್ನು ಸ್ವೀಕರಿಸಲೇ ಇಲ್ಲ.

whatsapp-1

ಮರುದಿನ ಬೆಳಗ್ಗೆ ರಮೀಳಾ ವಿಚಾರಿಸಿದರೆ, ರಾಜೇಶ್ ಏನೋ ಸೋಗು ಹೇಳಿ ತಪ್ಪಿಸಿಕೊಂಡನು. ರಮೀಳಾಲ ಸಿಟ್ಟು ತಾರಕಕ್ಕೇರಿತು. ರಾಜೇಶ್ ತನ್ನ ಮೊಬೈಲ್ ಪಾಸ್ ವರ್ಡ್ ತೆಗೆದು ತನ್ನ ಕೈಗೆ ಕೊಡಬೇಕೆಂದು ಹಠ ಹಿಡಿದಳು. ರಾಜೇಶ್ ಇದರಿಂದ ಕುಪಿತಗೊಂಡನು. ಇಬ್ಬರ ನಡುವೆ ಜಗಳ ಆರಂಭವಾಯಿತು. ಈ ಜಗಳ ಹೀಗೆ ದಿನವೂ ಮುಂದುವರಿಯಿತು. ವಿಕಾಸ್, ತಂದೆ-ತಾಯಿಯರ ಜಗಳವನ್ನು ಅಸಹಾಯಕನಾಗಿ ನೋಡುತ್ತಿದ್ದನು.

ರಮೀಳಾ ನೋಡ ನೋಡುತ್ತಿದ್ದಂತೆಯೇ ರಾಜೇಶನನ್ನು ಥಳಿಸಿದ ಘಟನೆಯೂ ನಡೆದುಬಿಟ್ಟಿತ್ತು. ಥಳಿಸಿದ ಘಟನೆಯಿಂದ ಜಿಗುಪ್ಸೆಗೊಂಡು ಬಳಿಕ ಬೇಸರದಿಂದ ಮನೆಯಿಂದ ಹೊರಗೆ ನಡೆದುಬಿಟ್ಟಿದ್ದಳು. ಅಲ್ಲಿಂದ ನೇರವಾಗಿ ಡಾ.ಶ್ರೀಗಣೇಶ್ ಅವರ ಆಸ್ಪತ್ರೆಗೆ ಬಂದಿದ್ದಳು ರಮೀಳಾ.

ಶ್ರೀಗಣೇಶ್ ರವರು ವಿಕಾಸ್ ಕಲಿಯುತ್ತಿದ್ದ ಶಾಲೆಗೆ ರಕ್ಷಕ-ಶಿಕ್ಷಕ ಸಂಘದ ಸಭೆಗೆ ಅತಿಥಿಯಾಗಿ ಬಂದು ಅಲ್ಲಿ ತಮ್ಮ ಭಾಷಣದಲ್ಲಿ ಹೇಳಿದ್ದ ”ಸಂಸಾರಗಳನ್ನು ಹಾಳು ಮಾಡುವ ಮೂರು ”M” ಗಳಾದ MONEY, MEDIA, MOBILE ಗಳ ಬಗೆಗಿನ ವಿಷಯಗಳನ್ನು ನೆನಪಿಸಿಕೊಂಡಳು. ಮೊಬೈಲ್ ಎಂಬ ”M” ತನ್ನ ಸಂಸಾರವನ್ನು ಹಾಳು ಮಾಡಿತ್ತು ಎಂಬುದು ಅವಳ ದೃಢ ತೀರ್ಮಾನವಾಗಿತ್ತು.

ರಮೀಳಾ, ಡಾ.ಶ್ರೀಗಣೇಶರಲ್ಲಿ ಹೇಳಿದ ವಿಚಾರಗಳು ಇನ್ನೂ ರೋಚಕವಾಗಿತ್ತು. ಅವಳು ರಾಜೇಶನ ಮೊಬೈಲ್ ನ್ನು ಒಂದು ದಿನ ಅವನು ಡ್ಯೂಟಿಯಲ್ಲಿರುವಾಗ ಆತನ ಸಹೋದ್ಯೋಗಿಯೊಬ್ಬನ ಸಹಾಯದಿಂದ ಪಿಕ್ ಪಾಕೆಟ್ ಮಾಡಿಸಿದ್ದಳು. ಅದೇ ಸಹೋದ್ಯೋಗಿಯ ಸಹಾಯದಿಂದ ಮೊಬೈಲ್ ಪಾಸ್ ವರ್ಡ್ ನ ಹೊರತಾಗಿಯೂ ಅದನ್ನು ಭೇದಿಸಿದ್ದಳು. ರೀನಾ ಮತ್ತು ರಾಜೇಶ್ ರವರ ನಡುವೆ ನಡೆದ ಚಾಟ್ ಸಂಭಾಷಣೆಗಳನ್ನು ಪೂರ್ತಿಯಾಗಿ ತನ್ನ ಈಮೇಲ್ ಗೆ ವರ್ಗಾಯಿಸಿಕೊಂಡಿದ್ದಳು ಮತ್ತು ಬಳಿಕ ಆ ಮೊಬೈಲ್ ಮತ್ತೆ ರಾಜೇಶನ ಕೈ ಸೇರಿತ್ತು.

ಕಳೆದ ಒಂದು ತಿಂಗಳಿಂದ ರಾಜೇಶ್ ಮತ್ತು ರೀನಾ ದಿನಕ್ಕೆ ನೂರಾರು ಮೆಸೆಜ್ ಗಳನ್ನು ಬದಲಿಸುತ್ತಿದ್ದರು. GOOD MORNING ಮೆಸೆಜ್ ನಿಂದ ಪ್ರಾರಂಭವಾಗಿ ತಮ್ಮ ತಮ್ಮ ವಯುಕ್ತಿಕ ಸಮಸ್ಯೆಗಳು, ತನ್ನ ಮತ್ತು ರಮೀಳಾಲ ದಾಂಪತ್ಯದ ಸಮಸ್ಯೆಗಳು, ಆಸ್ಪತ್ರೆಯ ಸಮಸ್ಯೆಗಳು, FORWORD ಮೆಸೆಜ್ ಗಳು, ಸರಸ ಸಲ್ಲಾಪಗಳು ಹೀಗೆ ಹಲವಾರು ಬಗೆಯ ಮೆಸೆಜ್ ಗಳಿದ್ದವು. ರಮೀಳಾಳನ್ನು ದೂರಿ, ಅವಳ ಲೈಂಗಿಕ ನಿರಾಸಕ್ತಿ, ತಾಯಿಯಾದ ಮೇಲೆ ಅವಳು ತನ್ನ ದೇಹ ಸೌಂದರ್ಯದ ಬಗ್ಗೆ ಕಳೆದುಕೊಂಡಿರುವ ಆಸಕ್ತಿ, ಅವಳ ಸಿಡುಕು ಸ್ವಭಾವ, ತನ್ನ ಆರೋಗ್ಯದ ಬಗ್ಗೆ ಅವಳು ತೋರಿಸುವ ನಿರ್ಲಕ್ಷ್ಯ, ಆಸ್ಪತ್ರೆಯಲ್ಲಿ ತನ್ನ ಜನಪ್ರಿಯತೆಯ ಬಗ್ಗೆ ಅವಳಲ್ಲಿರುವ ಹೊಟ್ಟೆಕಿಚ್ಚು ಹೀಗೆ ಅನೇಕ ಮೆಸೆಜ್ ಗಳು ಅವರಿಬ್ಬರ ನಡುವೆ ಬದಲಾಗಿತ್ತು. ರೀನಾ ತಮ್ಮಿಬ್ಬರ ನಡುವಿನ ಬಾಲ್ಯದ ಸರಸ ಸಲ್ಲಾಪಗಳ ಬಗ್ಗೆಯೂ ಪ್ರಸ್ತಾಪಿಸಿದ್ದಳು. ಆ ಹಿಂದಿನ ಸಂತೋಷದ ಕ್ಷಣಗಳನ್ನು ಅನುಭವಿಸುವ ಹಂಬಲವನ್ನೂ ವ್ಯಕ್ತಪಡಿಸಿದ್ದಳು.

whatsapp-2

ಇವೆಲ್ಲವನ್ನೂ ಓದಿದ ರಮೀಳಾ ಹುಚ್ಚಿಯಂತಾಗಿದ್ದಳು. ಆಕಾಶವೇ ಕಳಚಿ ತಲೆಯ ಮೇಲೆ ಬೀಳುವಂತಾಗಿತ್ತು ಆಕೆಗೆ. ಅವಳ ಕಿವಿಗೆ ಅವಳ ಇಷ್ಟದ ಸಿನೆಮಾ ”ಮಾನಸ ಸರೋವರ” ದ ”ನಾನೇ ಸಾಕಿದ ಗಿಣಿ…” ಹಾಡು ಪುನಃ ಪುನಃ ಕೇಳಿಸುತ್ತಿತ್ತು. ಡಾ.ಶ್ರೀಗಣೇಶ್ ರವರ ಮುಂದೆ ತನ್ನ ಮನಸ್ಸಿನ ಎಲ್ಲಾ ನೋವುಗಳನ್ನೂ ತೋಡಿಕೊಂಡಿದ್ದಳು ರಮೀಳಾ.

ಡಾ.ಶ್ರೀಗಣೇಶ್ ಮನಸ್ಸಿನಲ್ಲೇ ಯೋಚಿಸುತ್ತಿದ್ದರು. ತನ್ನ ”ಮನೋವಿಶ್ವಾಸ” ಕ್ಲಿನಿಕ್ ನ ನಾಲ್ಕು ಗೋಡೆಗಳ ನಡುವೆ ಮೋಬೈಲ್ ಫೋನ್ ಗಳ ಅನೇಕ ದುರಂತ ಕಥೆಯನ್ನು ಅವರು ದಿನಾ ಕೇಳುತ್ತಿದ್ದರು.

ತಾವೇ ಇಷ್ಟಪಟ್ಟು ಮದುವೆಯಾದ ಈ ದಂಪತಿಗಳ ಕಥೆ ಹೀಗಾಗಿದ್ದರೆ, ಎಷ್ಟೋ ಶಾಸ್ತ್ರೋಕ್ತವಾಗಿ, ಹಿರಿಯರು ಮುತುವರ್ಜಿ ವಹಿಸಿ ಮಾಡಿಸಿದಂಥ ವರದಕ್ಷಿಣೆ, ರಾಜಕೀಯ ಪ್ರಭಾವ ಮುಂತಾದ ಕಾರಣಗಳಿಂದಾಗಿ ಅರೆಂಜ್ ಡ್ ಮ್ಯಾರೇಜ್ ಗಳಲ್ಲಿ ಇಂಥ ಎಷ್ಟು ಸಮಸ್ಯೆಗಳು ಇರಬಹುದು ಎಂದು ಯೋಚಿಸುತ್ತಿರುವಾಗ, ಬಂದವರೇ ಶ್ರೀಗಣೇಶರ ಮಡದಿ ಲತಾ.

ತನ್ನ ಮದುವೆಯೂ ಹಿರಿಯರೇ ಮಾಡಿಸಿದ ಮದುವೆ. ನಾವೆಲ್ಲಾ ಸುಖವಾಗಿಲ್ಲವೇ ಎಂಬ ಯೋಚನೆ ಶ್ರೀಗಣೇಶರನ್ನು ನಸುನಗುವಂತೆ ಮಾಡಿತು.
(ಮುಂದಿನ ಭಾಗ, ಮುಂದಿನ ವಾರ ಮುಂದುವರಿಯಲಿದೆ)

ಚಿತ್ರ ಕೃಪೆ: ಅಂತರ್ಜಾಲದಿಂದ.

 

Leave a Reply

Your email address will not be published. Required fields are marked *